Home ರಾಜಕೀಯ ಕ್ಷೇತ್ರ ಮರುವಿಂಗಡಣೆ ವಿರುದ್ಧ ತಮಿಳುನಾಡು ಆಕ್ರೋಶ; ಮಸೂದೆಯ ಪ್ರತಿ ಸುಟ್ಟ ಮುಖ್ಯಮಂತ್ರಿ ಸ್ಟಾಲಿನ್

ಕ್ಷೇತ್ರ ಮರುವಿಂಗಡಣೆ ವಿರುದ್ಧ ತಮಿಳುನಾಡು ಆಕ್ರೋಶ; ಮಸೂದೆಯ ಪ್ರತಿ ಸುಟ್ಟ ಮುಖ್ಯಮಂತ್ರಿ ಸ್ಟಾಲಿನ್

0

ಚೆನ್ನೈ: ಮಹಿಳಾ ಮೀಸಲಾತಿಯೊಂದಿಗೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ (Delimitation) ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿರುವುದನ್ನು ವಿರೋಧಿಸಿ ತಮಿಳುನಾಡಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗುರುವಾರ ರಾಜ್ಯಾದ್ಯಂತ ‘ಕಪ್ಪು ದಿನ’ (Black Day) ಆಚರಿಸಲಾಗಿದ್ದು, ಸ್ವತಃ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮಸೂದೆಯ ಪ್ರತಿಗಳನ್ನು ಸುಟ್ಟುಹಾಕುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ನಮಕ್ಕಲ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸ್ಟಾಲಿನ್, ಕ್ಷೇತ್ರ ಮರುವಿಂಗಡಣೆಯು ದಕ್ಷಿಣ ಭಾರತದ ರಾಜ್ಯಗಳ ವಿರುದ್ಧದ ದೊಡ್ಡ ಸಂಚು ಎಂದು ಕಿಡಿಕಾರಿದರು. “ಇದು ಕಪ್ಪು ಕಾನೂನು. ಉತ್ತರ ಮತ್ತು ದಕ್ಷಿಣದ ರಾಜ್ಯಗಳ ನಡುವೆ ತಾರತಮ್ಯ ಮಾಡುವ ಕೇಂದ್ರದ ಪ್ರಯತ್ನವನ್ನು ನಾವು ಸಹಿಸುವುದಿಲ್ಲ. ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನ ಯಶಸ್ವಿಯಾಗಲು ಬಿಡುವುದಿಲ್ಲ,” ಎಂದು ಅವರು ಎಚ್ಚರಿಸಿದರು.

ಕೇಂದ್ರದ ನಿರ್ಧಾರವನ್ನು ವಿರೋಧಿಸಿ ರಾಜ್ಯದ ಪ್ರತಿಯೊಂದು ಮನೆಯ ಮೇಲೂ ಕಪ್ಪು ಬಾವುಟಗಳನ್ನು ಹಾರಿಸುವ ಮೂಲಕ ಜನರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಸಿಪಿಐ(ಎಂ) ಸೇರಿದಂತೆ ವಿವಿಧ ವಾಮಪಕ್ಷಗಳು ರಾಜ್ಯಾದ್ಯಂತ ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದವು. ಸಿಪಿಐ(ಎಂ) ರಾಜ್ಯ ಕಚೇರಿಯ ಮುಂದೆ ಪಕ್ಷದ ಕಾರ್ಯದರ್ಶಿ ಸಂಪತ್ ಕಪ್ಪು ಬಾವುಟ ಹಾರಿಸಿದರು.

ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಡಿಎಂಕೆ ಮತ್ತು ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಹಾಗೂ ನಾಯಕರು ಗುರುವಾರ ಕಪ್ಪು ಉಡುಪು ಧರಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು. ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುವ ಮೊದಲು ಎಲ್ಲಾ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಒಮ್ಮತಕ್ಕೆ ಬರಬೇಕು ಎಂದು ಸ್ಟಾಲಿನ್ ಇದೇ ವೇಳೆ ಒತ್ತಾಯಿಸಿದರು.

You cannot copy content of this page

Exit mobile version