ಉತ್ತರ ಪ್ರದೇಶ: ಪೆಟ್ರೋಲ್ ಟ್ಯಾಂಕರ್ ಪಲ್ಟಿಹೊಡೆದು, ಸ್ಥಳೀಯರು ಪೆಟ್ರೋಲ್ ಬಾಚಿಕೊಂಡು ಹೋದ ಘಟನೆ ಉತ್ತರ ಪ್ರದೇಶದ ಅಲಿಗಢ್ ಜಿಲ್ಲೆಯ ಕೊತ್ವಾಲಿ ಇಗ್ಲಾಸ್‌ನ ಗೊಂಡಾ ಬಳಿ ಜರುಗಿದೆ.
ಮಾಹಿತಿ ಪ್ರಕಾರ, 24000 ಲೀಟರ್ ಪೆಟ್ರೋಲ್ ತುಂಬಿಸಿಕೊಂಡು ಬಂದ ಲಾರಿ ಚಾಲಕನೊಬ್ಬ ಹೋಟಲ್ ಬಳಿ ನಿಲ್ಲಿಸಿ ಊಟಕ್ಕೆ ಹೋಗಿದ್ದಾನೆ. ಇದನ್ನು ಗಮನಿಸಿದ ದರೋಡೆಕೋರನೊಬ್ಬ ತಕ್ಷಣವೇ ಓಡಿಹೋಗಿ ಲಾರಿಯನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ.
ಈ ವೇಳೆ ತಪ್ಪಿಸಿಕೊಳ್ಳುವ ಭರದಲ್ಲಿ ವೇಗವಾಗಿ ಲಾರಿ ಚಲಾಯಿಸಿದ್ದರಿಂದ, ದರೋಡೆಕೋರನಿಗೆ ಲಾರಿಯ ಮೇಲೆ ನಿಯಂತ್ರಣ ಸಾಧ್ಯವಾಗದೇ, ಹತ್ತಿರದ ಗುಂಡಿಯೊಳಗೆ ಪಲ್ಟಿ ಹೊಡಿಸಿದ್ದಾನೆ. ತದನಂತರ ಸ್ಥಳದಲ್ಲೇ ಲಾರಿ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಪೆಟ್ರೋಲ್ ಗದ್ದೆಯಂತಿದ್ದ ಗುಂಡಿಯಲ್ಲಿ ಸಾವಿರಾರು ಲೀಟರ್ ಪೆಟ್ರೋಲ್ ನೋಡಿ, ಮನೆಯಲ್ಲಿದ್ದ ಬಾಟಲಿಗಳು ಮತ್ತು ನೀರಿನ ಕ್ಯಾನ್‌ಗಳನ್ನು ತಂದು ಪೆಟ್ರೋಲ್ ತುಂಬಿಸಿಕೊಂಡು ಹೋಗುತ್ತಿರುವುದು ಸುದ್ದಿಯ ಮೂಲಗಳಿಂದ ತಿಳಿದುಬಂದಿದೆ.