Tuesday, August 20, 2024

ಸತ್ಯ | ನ್ಯಾಯ |ಧರ್ಮ

ರಾಜಭವನ ತಲುಪಿದ ಹೆಚ್ಡಿಕೆ ವಿರುದ್ಧದ ಗಣಿ ಗುತ್ತಿಗೆ ಅಕ್ರಮದ ಆರೋಪ ಪಟ್ಟಿ ; ಕುತೂಹಲ ಮೂಡಿದ ತಾವರೆ ಚಂದ್ ಗೆಹ್ಲೋಟ್ ನಡೆ

ಮುಡಾ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರದ ಮೇಲೆ ನಿರಂತರವಾಗಿ ಮುಗಿ ಬಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಈಗ ಗಣಿ ಗುತ್ತಿಗೆ ಅಕ್ರಮ ಮಂಜೂರು ಆರೋಪದ ಸಂಕಷ್ಟ ಎದುರಾಗಿದೆ. ಇದರ ಜೊತೆಗೆ ರಾಜ್ಯಪಾಲರ ಪಕ್ಷಪಾತಿ ನಿಲುವಿನ ವಿರುದ್ಧ ಆರೋಪ ಮಾಡಿರುವ ಕಾಂಗ್ರೆಸ್ ಗೆ, ಈಗ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡದೇ ಹೋದರೆ ಗವರ್ನರ್ ವಿರುದ್ಧದ ಹೋರಾಟಕ್ಕೆ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ.

ಕುಮಾರಸ್ವಾಮಿ ಅವರು 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಎಸ್‌ಎಸ್‌ವಿಎಂ ಕಂಪನಿಗೆ ಗಣಿ ಮತ್ತು ಖನಿಜ ನಿಯಮಗಳನ್ನು ಉಲ್ಲಂಘಿಸಿ 550 ಎಕರೆ ವಿಸ್ತೀರ್ಣದ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪವಿದೆ. ಆರೋಪದಡಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್‌ಐಟಿ) ರಾಜ್ಯಪಾಲರಿಗೆ ಸೋಮವಾರ ಮತ್ತೆ ಪ್ರಸ್ತಾವ ಸಲ್ಲಿಸಿದೆ.

2011ರಲ್ಲಿ ಲೋಕಾಯುಕ್ತರಾಗಿದ್ದ ಎನ್‌. ಸಂತೋಷ್‌ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಕುರಿತು ಸಲ್ಲಿಸಿದ್ದ ವರದಿಯಲ್ಲಿನ ಉಲ್ಲೇಖ ಆಧರಿಸಿ ಲೋಕಾಯುಕ್ತ ಎಸ್‌ಐಟಿ ತನಿಖೆ ನಡೆಸುತ್ತಿದೆ.

ಕೇಂದ್ರ ಸರ್ಕಾರ 2018 ರಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ಕ್ಕೆ ತರಲಾದ ತಿದ್ದುಪಡಿಯಂತೆ, ಜನಪ್ರತಿನಿಧಿಗಳ ಮೇಲಿನ ಆರೋಪದ ತನಿಖೆಗೆ ತನಿಖಾ ಸಂಸ್ಥೆಗಳು ರಾಜ್ಯಪಾಲರ ಅನುಮತಿ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಈ ಹಿಂದೆ ಹುದ್ದೆಯಿಂದ ನಿರ್ಗಮಿಸಿದ ಚುನಾಯಿತ ಪ್ರತಿನಿಧಿಗಳು ಅಥವಾ ನಿವೃತ್ತ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಆರೋಪಪಟ್ಟಿ ಸಲ್ಲಿಸಲು ಪೂರ್ವಾನುಮತಿ ಅಗತ್ಯವಿರಲಿಲ್ಲ. ಈ ಕಾರಣದಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲಿನ ಮುಡಾ ಪ್ರಕರಣದಲ್ಲಿ ರಾಜ್ಯಪಾಲರ ಪಾತ್ರ ಮಹತ್ವ ಪಡೆದುಕೊಂಡಿತ್ತು.

ಆದರೆ ಈಗ ದೋಸ್ತಿ ಪಕ್ಷ ಜೆಡಿಎಸ್ ನಾಯಕ ಕುಮಾರಸ್ವಾಮಿ ಮೇಲೂ ಕೇಳಿ ಬಂದಿರುವ ಗಣಿ ಗುತ್ತಿಗೆ ಅಕ್ರಮ ಮಂಜೂರು ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವರೇ ಎಂಬ ಪ್ರಶ್ನೆ ಉದ್ಭವವಾಗಿದೆ.

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ 2023ರ ನವೆಂಬರ್‌ 21ರಂದು ಪ್ರಸ್ತಾವ ಸಲ್ಲಿಸಿದ್ದ ಲೋಕಾಯುಕ್ತದ ಎಸ್‌ಐಟಿ ಮುಖ್ಯಸ್ಥರಾಗಿರುವ ಐಜಿಪಿ ಎಂ. ಚಂದ್ರಶೇಖರ್‌, ಕುಮಾರಸ್ವಾಮಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಭಾರತೀಯ ದಂಡ ಸಂಹಿತೆ ಹಾಗೂ ಗಣಿ ಮತ್ತು ಖನಿಜ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಕೋರಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಮೇಲೆ 24 ಗಂಟೆಗಳೊಳಗಾಗಿ ತನಿಖೆಗೆ ಸೂಚಿಸಿದ ರಾಜ್ಯಪಾಲರು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧದ ಆರೋಪಕ್ಕೂ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವರೇ ಎಂದು ಕಾಂಗ್ರೆಸ್ ಎದುರು ನೋಡುತ್ತಿದೆ.

ಕುಮಾರಸ್ವಾಮಿ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿಯ ಮನವಿ ದೀರ್ಘ ಕಾಲದಿಂದ ರಾಜ್ಯಪಾಲರ ಬಳಿಯಲ್ಲೇ ಇದೆ. ಜುಲೈ 29ರ ದಿನಾಂಕ ಉಲ್ಲೇಖಿಸಿ ರಾಜ್ಯಪಾಲರು ಬರೆದಿದ್ದ ಪತ್ರವೊಂದು ಆಗಸ್ಟ್‌ 8ರಂದು ಎಸ್‌ಐಟಿಗೆ ತಲುಪಿತ್ತು. ಕುಮಾರಸ್ವಾಮಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟನೆಗಳನ್ನು ನೀಡುವಂತೆ ಸೂಚಿಸಲಾಗಿತ್ತು. ಎಸ್‌ಐಟಿ ಮುಖ್ಯಸ್ಥರು ರಾಜ್ಯಪಾಲರು ಕೋರಿದ್ದ ಸ್ಪಷ್ಟನೆಗಳಿಗೆ ಉತ್ತರಗಳೊಂದಿಗೆ ಸೋಮವಾರ ಸಂಜೆ ಪತ್ರವೊಂದನ್ನು ರಾಜಭವನಕ್ಕೆ ರವಾನಿಸಿದ್ದಾರೆ. ಆದರೆ ಈ ವರೆಗೂ ರಾಜಭವನದಿಂದ ಯಾವುದೇ ಉತ್ತರ ಬಂದಿಲ್ಲ ಎಂಬುದು ಸ್ಪಷ್ಟ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page