ಬೆಂಗಳೂರು, ನ. 19: ನಗರದ ಪ್ರಮುಖ ವಾಣಿಜ್ಯ ಸಂಕೀರ್ಣಗಳಲ್ಲಿ ಒಂದಾದ ಮಂತ್ರಿ ಮಾಲ್‌ಗೆ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಅಧಿಕಾರಿಗಳು ಮತ್ತೆ ಬೀಗ ಜಡಿದಿದ್ದಾರೆ. ಮಲ್ಲೇಶ್ವರಂನಲ್ಲಿರುವ ಈ ಮಾಲ್‌ನ ಮಾಲೀಕರು ಬೃಹತ್ ಪ್ರಮಾಣದ ಆಸ್ತಿ ತೆರಿಗೆಯನ್ನು ಪಾವತಿಸುವಲ್ಲಿ ವಿಫಲರಾದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.
ಮಾಲ್‌ನವರು ಸರಿ ಸುಮಾರು ₹31 ಕೋಟಿ (ನಿಖರವಾಗಿ ₹30 ಕೋಟಿ 81 ಲಕ್ಷದ 45 ಸಾವಿರದ 600) ಗಳಷ್ಟು ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ತೆರಿಗೆ ಪಾವತಿಸುವಂತೆ ಹಲವಾರು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಮಾಲ್ ಆಡಳಿತ ಮಂಡಳಿಯು ವಿಫಲವಾದ ಕಾರಣ, ಅನಿವಾರ್ಯವಾಗಿ ಮಾಲ್‌ಗೆ ಬೀಗ ಜಡಿಯಬೇಕಾಯಿತು ಎಂದು ಜಿಬಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಕೂಡ ಹಲವಾರು ಬಾರಿ ಮಂತ್ರಿ ಮಾಲ್‌ಗೆ ಬೀಗ ಜಡಿಯಲಾಗಿತ್ತು. ಮೊದಲ ಹಂತದಲ್ಲಿ, ತೆರಿಗೆ ಪಾವತಿಸುವ ಭರವಸೆ ನೀಡಿ ಸೀಜ್‌ನಿಂದ ತಪ್ಪಿಸಿಕೊಂಡಿದ್ದರು. ಮತ್ತೊಮ್ಮೆ ಸೀಜ್ ಮಾಡಿದಾಗ, ಮಾಲ್ ಮಾಲೀಕರು ನ್ಯಾಯಾಲಯದ ಮೊರೆ ಹೋಗಿ ಕಂತುಗಳ ರೂಪದಲ್ಲಿ ತೆರಿಗೆ ಪಾವತಿಸುವ ಭರವಸೆ ನೀಡಿ ತಾತ್ಕಾಲಿಕವಾಗಿ ಬಚಾವಾಗಿದ್ದರು.
ಆದರೆ, ನ್ಯಾಯಾಲಯದ ಮೊರೆ ಹೋದ ನಂತರವೂ ಮಾಲ್‌ನವರು ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಬಾಕಿ ಮೊತ್ತವು ಸುಮಾರು ₹31 ಕೋಟಿಗಳಿಗೆ ಏರಿಕೆಯಾಗಿದೆ. ಹೀಗಾಗಿ, ಸಾರ್ವಜನಿಕ ಹಣ ವಸೂಲಿ ಮಾಡಲು ಅನಿವಾರ್ಯವಾಗಿ ಬೀಗ ಜಡಿಯುವ ಪರಿಸ್ಥಿತಿ ಎದುರಾಗಿದೆ.
