Tuesday, July 22, 2025

ಸತ್ಯ | ನ್ಯಾಯ |ಧರ್ಮ

ತೆರಿಗೆ ಕಳ್ಳತನ ಅಕ್ಷಮ್ಯ ; ತೆರಿಗೆದಾರರು ಸರ್ಕಾರಕ್ಕೆ ಪ್ರಾಮಾಣಿಕರಾಗಿರಬೇಕು : ಸಚಿವ ಕೃಷ್ಣಭೈರೇಗೌಡ

ತೆರಿಗೆ ಕಳ್ಳತನ ಮಾಡದೆ, ಜನರಿಗೆ ಮತ್ತು ಸರ್ಕಾರಕ್ಕೆ ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿ ಎಂದು ತೆರಿಗೆ ಸಲಹೆಗಾರರಿಗೆ ಸಚಿವ ಕೃಷ್ಣ ಬೈರೇಗೌಡ ಕಿವಿಮಾತು ಹೇಳಿದರು. ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘವು ಸುವರ್ಣ ಮಹೋತ್ಸವ ಆಚರಣೆಯ ಅಂಗವಾಗಿ ಆಗಸ್ಟ್ 4, 5 ಮತ್ತು 6 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಷ್ಟ್ರೀಯ ತೆರಿಗೆ ಸಮ್ಮೇಳನ ಮತ್ತು ತೆರಿಗೆ ವೃತ್ತಿಪರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಜನರು ತಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು? ಮತ್ತು ತೆರಿಗೆಯನ್ನು ಎಲ್ಲೆಲ್ಲಿ ಉಳಿಸಬೇಕು ಎಂದು ಸಲಹೆ ನೀಡುವುದು ಉತ್ತಮ ಕೆಲಸವೇ. ಆದರೆ, ತೆರಿಗೆ ಕಳ್ಳತನ ಅಕ್ಷಮ್ಯ” ಎಂದು ಕಿವಿಮಾತು ಹೇಳಿದರು.

“ಯಾವುದೇ ಸರ್ಕಾರ ನಡೆಯಲು ತೆರಿಗೆ ಅತೀ ಅವಶ್ಯಕ. ತೆರಿಗೆ ಇಲ್ಲದೆ ಜನರಿಗೆ ಉತ್ತಮ ಆಡಳಿತ ನೀಡುವುದೂ ಸಾಧ್ಯವಿಲ್ಲ. ಆದರೆ, ಜನರಿಗೆ ತೆರಿಗೆ ಉಳಿಸುತ್ತೇವೆ ಎಂದು ಹಲವು ತೆರಿಗೆ ಸಲಹೆಗಾರರು ತೆರಿಗೆ ಕಳ್ಳತನ ನಡೆಸುತ್ತಿದ್ದಾರೆ. ಕಾನೂನು ರೀತಿಯೂ ಈ ಕೃತ್ಯ ಅಪರಾಧವಾಗಿದ್ದು, ತೆರಿಗೆ ಕಳ್ಳತನ ನಿಲ್ಲಬೇಕು. ಜನರಿಗೆ ಹಾಗೂ ಸರ್ಕಾರಕ್ಕೆ ಪ್ರಮಾಣಿಕರಾಗಿರಬೇಕು” ಎಂದು ರಾಷ್ಟ್ರೀಯ ತೆರಿಗೆ ಸಮ್ಮೇಳನದಲ್ಲಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಸಮ್ಮೇಳನದಲ್ಲಿ ಅಖಿಲ ಭಾರತ ತೆರಿಗೆ ಸಲಹೆಗಾರ ಒಕ್ಕೂಟದ ರಾಷ್ಟ್ರಾಧ್ಯಕ್ಷ ಪಂಕಜ್ ಗಯಾ, ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಎಸ್. ನಂಜುಂಡ ಪ್ರಸಾದ್, ಗೋಲ್ಡನ್ ಜ್ಯುಬಿಲಿ ಈವೆಂಟ್ ಮುಖ್ಯಸ್ಥ ಹಾಗೂ ಕಾರ್ಯಕ್ರಮದ ಆಯೋಜಕರರಾದ ಡಿ.ಎಮ್. ಭಟ್ಟದ್ ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page