ಕೊಯಮತ್ತೂರು: ಮುಟ್ಟಿನ ನೆಪ ಹೇಳಿ 8ನೇ ತರಗತಿಯ ಬಾಲಕಿಯನ್ನು ತರಗತಿ ಕೋಣೆಯ ಹೊರಗಿನ ಮೆಟ್ಟಿಲುಗಳ ಮೇಲೆ ಕೂರಿಸಿ ಪರೀಕ್ಷೆ ಬರೆಯುವಂತೆ ಮಾಡಿದ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆ ಇತ್ತೀಚೆಗೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಬಳಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ನಂತರ ಅಧಿಕಾರಿಗಳು ತನಿಖೆ ಈ ಕುರಿತು ನಡೆಸುತ್ತಿದ್ದಾರೆ.
ಪೊಲ್ಲಾಚಿ ಎಎಸ್ಪಿ ಸೃಷ್ಟಿ ಸಿಂಗ್ ಅವರ ಪ್ರಕಾರ, ಸಂತ್ರಸ್ತೆ ಸೆಂಗುಟ್ಟೈಪಾಳಯಂನಲ್ಲಿರುವ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ಓದುತ್ತಿದ್ದಾಳೆ. ಇತ್ತೀಚೆಗೆ ಶಾಲೆಯಲ್ಲಿ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿವೆ.
ಋತುಮತಿಯಾದ ತನ್ನ ಮಗಳಿಗೆ ಇನ್‌ಫೆಕ್ಷನ್ ಏನಾದರೂ ತಗುಲದ ಹಾಗೆ ತರಗತಿಯಲ್ಲಿ ಪ್ರತ್ಯೇಕ ಮೇಜು ಕುರ್ಚಿಯ ವ್ಯವಸ್ಥೆ ಮಾಡಿಕೊಡುವಂತೆ ಬಾಲಕಿಯ ತಾಯಿ ತರಗತಿ ಶಿಕ್ಷಕಿಯ ಬಳಿ ವಿನಂತಿಸಿದ್ದರು. ಅವರು ಈ ವಿಷಯದ ಬಗ್ಗೆ ಪ್ರಾಂಶುಪಾಲರೊಂದಿಗೆ ಮಾತನಾಡಲು ಶಿಕ್ಷಕರಿಗೆ ಸೂಚಿಸಿದರು. ಈ ತಿಂಗಳ 7 ರಂದು ತನ್ನ ಮಗಳನ್ನು ಶಾಲೆಗೆ ಬಿಟ್ಟ ತಾಯಿ, ಪ್ರಾಂಶುಪಾಲರನ್ನು ಭೇಟಿ ಮಾಡಿ ತನ್ನ ಮನವಿಯನ್ನು ಸಲ್ಲಿಸಿದರು. ಆದರೆ ಅವರು ಮನೆಗೆ ತೆರಳಿದ ನಂತರ ಬಾಲಕಿಯನ್ನು ಹೊರಗೆ ಕೂರಿಸಿ ಪರೀಕ್ಷೆ ಬರೆಯಿಸಲಾಗಿದೆ.
ಮನೆಗೆ ಹಿಂದಿರುಗಿದ ನಂತರ, ಹುಡುಗಿ ಕಾಲು ನೋವಿನಿಂದ ಬಳಲುತ್ತಿದ್ದಳು. ಬುಧವಾರ ಮತ್ತೊಂದು ಪರೀಕ್ಷೆಗೆ ಹಾಜರಾಗುತ್ತಿದ್ದ ಬಾಲಕಿಯನ್ನು ತರಗತಿಯ ಹೊರಗಿನ ಮೆಟ್ಟಿಲುಗಳ ಮೇಲೆ ಕೂರಿಸಲಾಯಿತು. ಇದನ್ನು ನೋಡಿದ ಹುಡುಗಿಯ ಸಂಬಂಧಿಕರು ಆಕೆಯ ತಾಯಿಗೆ ಮಾಹಿತಿ ನೀಡಿದ್ದಾರೆ.
ತಾಯಿ ತಕ್ಷಣ ಶಾಲೆಗೆ ಬಂದು ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡರು. ಈ ವಿಷಯದ ಕುರಿತು ಮಾತನಾಡಿದ ಮೆಟ್ರಿಕ್ಯುಲೇಷನ್ ಶಾಲೆಗಳ ನಿರ್ದೇಶಕ ಎ. ಪಳನಿಸಾಮಿ, ಶಾಲಾ ಆಡಳಿತ ಮಂಡಳಿಯಿಂದ ವಿವರಣೆ ಕೇಳಿದ್ದೇನೆ ಎಂದು ಹೇಳಿದರು.
ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ, 2009 ರ ಸೆಕ್ಷನ್ 17 (ಮಕ್ಕಳ ಮೇಲಿನ ಮಾನಸಿಕ ಮತ್ತು ದೈಹಿಕ ಕಿರುಕುಳ ನಿಷೇಧ) ಅಡಿಯಲ್ಲಿ ಶಾಲಾ ಪ್ರಾಂಶುಪಾಲರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ವರದಿಗಳು ಹೇಳಿವೆ.