Home ಬೆಂಗಳೂರು ಉದ್ಯಾನವನ ಸಂರಕ್ಷಣಾ ಕಾಯ್ದೆ ತಿದ್ದುಪಡಿಗೆ ತೇಜಸ್ವಿ ಸೂರ್ಯ ವಿರೋಧ: ಮಸೂದೆಯನ್ನು ಮರುಪರಿಶೀಲನೆಗೆ ಕಳುಹಿಸುವಂತೆ ರಾಜ್ಯಪಾಲರಿಗೆ ಪತ್ರ

ಉದ್ಯಾನವನ ಸಂರಕ್ಷಣಾ ಕಾಯ್ದೆ ತಿದ್ದುಪಡಿಗೆ ತೇಜಸ್ವಿ ಸೂರ್ಯ ವಿರೋಧ: ಮಸೂದೆಯನ್ನು ಮರುಪರಿಶೀಲನೆಗೆ ಕಳುಹಿಸುವಂತೆ ರಾಜ್ಯಪಾಲರಿಗೆ ಪತ್ರ

0

ಬೆಂಗಳೂರು: ರಾಜ್ಯದ ಸಾರ್ವಜನಿಕ ಉದ್ಯಾನವನಗಳ ಶೇ. 5 ರಷ್ಟು ಭೂಮಿಯನ್ನು ಇತರ ಉದ್ದೇಶಗಳಿಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸುವ ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ಕಾಯ್ದೆಯನ್ನು ಪುನರ್ ಪರಿಶೀಲನೆಗಾಗಿ ರಾಜ್ಯ ವಿಧಾನಮಂಡಲಕ್ಕೆ ಮರಳಿ ಕಳುಹಿಸಬೇಕು ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ತಿದ್ದುಪಡಿಯು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಉದ್ಯಾನವನಗಳ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಅವಕಾಶ ನೀಡುವುದು ನಿರಂಕುಶ ನಿರ್ಧಾರವಾಗಿದ್ದು, ಸಂವಿಧಾನದ 21 ನೇ ವಿಧಿಯಡಿ ‘ಜೀವಿಸುವ ಹಕ್ಕಿ’ನ ಭಾಗವಾಗಿರುವ ‘ಪರಿಸರದ ಹಕ್ಕಿ’ಗೆ ಇದು ಗಂಭೀರ ಧಕ್ಕೆ ತರಲಿದೆ ಎಂದು ತೇಜಸ್ವಿ ಸೂರ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಉದ್ಯಾನವನಗಳು ಕೇವಲ ಭೂಮಿಯ ತುಂಡುಗಳಲ್ಲ; ಬದಲಾಗಿ ಜೀವವೈವಿಧ್ಯತೆಯನ್ನು ಕಾಪಾಡುವ, ಶುದ್ಧ ಗಾಳಿ ಒದಗಿಸುವ ಮತ್ತು ಸಾರ್ವಜನಿಕ ಆರೋಗ್ಯವನ್ನು ವೃದ್ಧಿಸುವ ತಾಣಗಳಾಗಿವೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಉದ್ಯಾನವನಗಳು ಜನರಿಗೆ ತಾವೇ ನೀಡಿಕೊಂಡ ಉಡುಗೊರೆಗಳಾಗಿದ್ದು, ಅವುಗಳ ಪಾವಿತ್ರ್ಯತೆಯನ್ನು ಕಾಪಾಡಬೇಕು ಎಂಬ ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪುಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರಿನಲ್ಲಿ ಪ್ರಸ್ತಾಪಿಸಲಾಗಿರುವ ಸುರಂಗ ರಸ್ತೆ ಯೋಜನೆಗೆ (ಟನಲ್ ರೋಡ್ ಪ್ರಾಜೆಕ್ಟ್) ಲಾಲ್‌ಬಾಗ್‌ನ ಸುಮಾರು 5 ಎಕರೆ (1.92 ಹೆಕ್ಟೇರ್) ಹಾಗೂ ಹೆಬ್ಬಾಳ ಶಾರ್ಟ್ ಟನಲ್ ಯೋಜನೆಗಾಗಿ ಹೆಬ್ಬಾಳ ಕೆರೆಯ ಸುಮಾರು 3.45 ಎಕರೆ ಭೂಮಿ ಬಳಕೆಯಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. ಲಾಲ್‌ಬಾಗ್ ಸುಮಾರು 300 ಕೋಟಿ ವರ್ಷಗಳಷ್ಟು ಹಳೆಯದಾದ ‘ಪೆನಿನ್ಸುಲರ್ ನೈಸ್’ ಕಲ್ಲಿನ ರಚನೆಯನ್ನು ಹೊಂದಿರುವ ಭೌಗೋಳಿಕ ಪರಂಪರೆಯ ತಾಣವಾಗಿದೆ ಎಂದು ವಿವರಿಸಲಾಗಿದೆ.

ಬೆಂಗಳೂರಿನಲ್ಲಿ ಒಟ್ಟು 1,308 ಎಕರೆ ವ್ಯಾಪ್ತಿಯಲ್ಲಿರುವ 1,353 ಉದ್ಯಾನವನಗಳಲ್ಲಿ ಹೊಸ ತಿದ್ದುಪಡಿಯ ಅನ್ವಯ ಸುಮಾರು 65.4 ಎಕರೆ ಹಸಿರು ಜಾಗವು ಅಪಾಯಕ್ಕೆ ಸಿಲುಕಲಿದೆ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ. ತೋಟಗಾರಿಕಾ ಇಲಾಖೆಯಡಿ ಸಂರಕ್ಷಿಸಲ್ಪಟ್ಟಿರುವ ಪ್ರಮುಖ ತಾಣಗಳಾದ ಲಾಲ್‌ಬಾಗ್‌ನಿಂದ (240 ಎಕರೆ) 12 ಎಕರೆ ಮತ್ತು ಕಬ್ಬನ್ ಪಾರ್ಕ್‌ನಿಂದ (197 ಎಕರೆ) 9.85 ಎಕರೆ ಸೇರಿದಂತೆ ಕೇವಲ ಈ ಎರಡು ಉದ್ಯಾನವನಗಳಿಂದಲೇ ಬರೋಬ್ಬರಿ 22 ಎಕರೆ ಭೂಮಿಯನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಅವರು ಅಂಕಿಅಂಶಗಳ ಸಮೇತ ವಿವರಿಸಿದ್ದಾರೆ.

ಈ ತಿದ್ದುಪಡಿಯು ಹಿಮ್ಮುಖ ಚಲನೆಯಾಗಿದ್ದು, ರಿಯಲ್ ಎಸ್ಟೇಟ್ ಅಥವಾ ವಾಣಿಜ್ಯ ಯೋಜನೆಗಳಿಗೆ ಹಸಿರು ಜಾಗವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಸಂಸದರು ತಿಳಿಸಿದ್ದಾರೆ. ಆದ್ದರಿಂದ ಯಾವುದೇ ಬದಲಾವಣೆ ಮಾಡುವ ಮುನ್ನ ಕಠಿಣ ನಿಯಮಗಳು, ಪರಿಸರ ಪರಿಣಾಮಗಳ ಮೌಲ್ಯಮಾಪನ ಮತ್ತು ಸಾರ್ವಜನಿಕ ಸಮಾಲೋಚನೆ ಅತ್ಯಗತ್ಯವಾಗಿದ್ದು, ಈ ಮಸೂದೆಯನ್ನು ಮರುಪರಿಶೀಲನೆಗೆ ಕಳುಹಿಸಬೇಕು ಎಂದು ಅವರು ರಾಜ್ಯಪಾಲರನ್ನು ಕೋರಿದ್ದಾರೆ.

You cannot copy content of this page

Exit mobile version