ಬೆಂಗಳೂರು – ಆಗಸ್ಟ್ 25 – ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಹೋರಾಟ ಸಮಿತಿ ಆಯೋಜಿಸಿದ್ದ “ಒಳ ಮೀಸಲಾತಿ ಕುರಿತ ವಿಚಾರ ಸಂಕಿರಣ”ವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನೀಗ ಸರ್ಕಾರದ ಮುಖ್ಯಸ್ಥನಲ್ಲ, ನನ್ನ ಬಳಿ ಅಧಿಕಾರವಿಲ್ಲ. ಆದರೆ ಒಳ ಮೀಸಲಾತಿಯ ಪರವಿರುವವನು, ಮೀಸಲಾತಿ ವ್ಯವಸ್ಥೆಯ ಪರ, ಸಾಮಾಜಿಕ ನ್ಯಾಯದ ಪರ ಇರುವವನು. ಈ ವಿಚಾರದಲ್ಲಿ ಹಿಂದೆಯೂ ರಾಜಿಯಾಗಿಲ್ಲ, ಮುಂದೆಯೂ ರಾಜಿಯಾಗಲ್ಲ. ಜಾತಿ ವ್ಯವಸ್ಥೆ ಪರಿಣಾಮವಾಗಿ ಶೋಷಣೆಗೆ ಒಳಗಾದವರಿಗೆ, ಅವಕಾಶ ವಂಚಿತರಿಗೆ ಮೀಸಲಾತಿ ಸಿಗಲೇಬೇಕು. ನಾವ್ಯಾರು ದಡ್ಡರಲ್ಲ, ಅವಕಾಶ ವಂಚಿತರು. ನಮ್ಮ ಬುದ್ಧಿವಂತಿಕೆ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರಲಿಲ್ಲ. ಈ ಅವಕಾಶವನ್ನು ಮೀಸಲಾತಿ ವ್ಯವಸ್ಥೆ ನೀಡುತ್ತಿದೆ.
ಎಲ್ಲಿಯವರೆಗೆ ಸಮಾನ ಅವಕಾಶಗಳು ಸಿಗುವುದಿಲ್ಲ, ಅಲ್ಲಿಯವರೆಗೆ ಅಸಮಾನತೆ ಹೋಗುವುದಿಲ್ಲ. ಈ ಅಸಮಾನತೆ ಹೋಗಬೇಕಾದರೆ ಎಲ್ಲರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ಶಕ್ತಿ ಬರಬೇಕು ಎಂದು ಬಾಬಾ ಸಾಹೇಬರು ಹೇಳಿದ್ದರು. ಬುದ್ಧನ ಕಾಲದಿಂದಲೂ ಇಲ್ಲಿ ಜಾತಿ ವ್ಯವಸ್ಥೆ ಇದೆ, ಅದರ ವಿರುದ್ಧ ಸುಧಾರಣಾ ಚಳವಳಿಗಳು ನಡೆಯುತ್ತಿದೆ, ಇದು ಹೋಗಬೇಕು ಎಂದು ಎಲ್ಲರೂ ಹೇಳುತ್ತಾರೆ, ಆದರೂ ಇನ್ನೂ ಜಾತಿ ಜೀವಂತವಿದೆ ಎನ್ನುವುದು ವಿಪರ್ಯಾಸ ಎಂದು ಜಾತಿ ವ್ಯವಸ್ಥೆಯೆಡೆಗಿನ ತಮ್ಮ ಬೇಸರ ಹೊರಹಾಕಿದರು.
25 ನವೆಂಬರ್ 1949ರಲ್ಲಿ ಸಂವಿಧಾನ ಅಂಗೀಕಾರವಾಗುವ ಹಿಂದಿನ ದಿನ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದ “ನಮಗೆ ಸ್ವಾತಂತ್ರ್ಯ ಸಿಕ್ಕಿದೆ, ಸಮಾನತೆ ಎನ್ನುವುದು ಸಂವಿಧಾನದ ಆಶಯವಾಗಿದೆ. ಸಮಸಮಾಜ ನಿರ್ಮಾಣ ಆಗಲೇಬೇಕು. ನಮಗೆ ಮತದಾನದ ಹಕ್ಕು ಕೊಟ್ಟಿದ್ದಾರೆ, ರಾಷ್ಟ್ರಪತಿಯಿಂದ ಹಿಡಿದು ಸಾಮಾನ್ಯ ಪ್ರಜೆಯ ವರೆಗೆ ಪ್ರತಿಯೊಬ್ಬರ ಮತಕ್ಕೂ ಒಂದೇ ಮೌಲ್ಯ ಇದೆ, ಆದರೆ ಇದೇ ಮಾದರಿಯ ಸಮಾನತೆ ಸಾಮಾಜಿಕವಾಗಿ, ಆರ್ಥಿಕವಾಗಿ ಸಾದ್ಯವಾಗಿಲ್ಲ. ಇದನ್ನು ಸರಿಪಡಿಸದೇ ಹೋದರೆ ಅಸಮಾನತೆ ಮುಂದುವರೆಯುತ್ತದೆ, ಸಮಾನತೆ ಸಾದ್ಯವಾಗದೆ ಹೋದರೆ ಮುಂದೊಂದು ದಿನ ಶೋಷಣೆಗೆ ಒಳಗಾದ ಜನರೇ ಪ್ರಭುತ್ವದ ಸೌಧವನ್ನು ದ್ವಂಸ ಮಾಡುತ್ತಾರೆ” ಎನ್ನುವ ಮಾತನ್ನು ಸ್ಮರಿಸಿದರು.
“ಇವನಾರವ, ಇವನಾರವ, ಇವನಾರವ ಎಂದೆನಿಸದಿರಯ್ಯ,
ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ,
ಎನ್ನ ಮನೆ ಮಗನೆಂದೆನಿಸಯ್ಯ ಕೂಡಲಸಂಗಮದೇವ”
ಎಂದು 850 ವರ್ಷಗಳ ಹಿಂದೆ ಬಸವಣ್ಣನವರು ಹೇಳಿದ್ದರು, ಇಂದಿಗೂ ಇದು ಸಾಧ್ಯವಾಗಿಲ್ಲ. ಇದು ಸಮಾಜದ ನೈಜ ಚಿತ್ರಣ ಎಂದು ಬೇಸರ ವ್ಯಕ್ತಪಡಿಸಿದರು.
ನನಗೆ ಸಮಾಜ ಅರ್ಥಮಾಡಿಕೊಳ್ಳುವ ವಯಸ್ಸು ಆದಾಗಿನಿಂದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಲೇ ಇದ್ದೇನೆ. ಮುಂದೆಯೂ ಹೋರಾಟ ಮಾಡುತ್ತೇನೆ. ನಾನು ಬಿ.ಎಸ್.ಸಿ ಓದುವಾಗ ಕಾಲೇಜಿಗೆ ರಜೆ ಸಿಕ್ಕರೆ ಊರಿಗೆ ಹೋಗುತ್ತಿದ್ದೆ. ಮಧ್ಯಾಹ್ನದ ಹೊತ್ತಿಗೆ ನಮ್ಮ ತಂದೆ ನನಗೆ ಮನೇಲಿರುವ ದನ-ಕರುಗಳಿಗೆ ನೀರು ಹಾಕುವ ಕೆಲಸ ಕೊಡುತ್ತಿದ್ದರು. ಆಗ ಬಾವಿಯಿಂದ ನೀರನ್ನು ಮೇಲೆತ್ತಿ ಹಾಕಬೇಕಿತ್ತು, ಬಾವಿಯೊಳಗೆ ಗೂಡುಕಟ್ಟುತ್ತಿದ್ದ ಪಕ್ಷಿಗಳಿಂದಾಗಿ ನೀರಿನಲ್ಲಿ ಸಾಕಷ್ಟು ಕಸ ತುಂಬಿರುತ್ತಿತ್ತು, ನಾನು ಕೊಡವನ್ನು ಮೇಲೆ ಕೆಳಗೆ ಮಾಡಿ ಕಸವನ್ನು ಬದಿಗೆ ಸರಿಸಿ ನೀರು ಸೇದಿಕೊಂಡು ಹೋಗುತ್ತಿದ್ದೆ. ನಾನು ಮನೆಗೆ ಹೋಗಿ ಕೆಲ ಸಮಯ ಬಿಟ್ಟು ವಾಪಾಸು ಬರುವ ಹೊತ್ತಿಗೆ ಕಸ ಮತ್ತೆ ಬಾವಿಯ ಮಧ್ಯದಲ್ಲಿ ಬಂದಿರುತ್ತಿತ್ತು. ಇದೇ ರೀತಿ ಎಷ್ಟೇ ಸುಧಾರಣೆಗಳಾದರೂ ಜಾತಿ ವ್ಯವಸ್ಥೆ ಗಟ್ಟಿಯಾಗಿ ಉಳಿದುಕೊಂಡಿದೆ. ಹೀಗೆ ಸಿದ್ದರಾಮಯ್ಯ ಅವರು ತಮ್ಮ ಬಾಲ್ಯದ ನೆನಪನ್ನು ಜಾತಿ ವ್ಯವಸ್ಥೆಯ ಜಡತ್ವಕ್ಕೆ ಹೋಲಿಸಿ ವಿವರಿಸಿದರು.
ಪಟ್ಟಭದ್ರರು ಬಹಳಾ ಮುಂದಾಲೋಚನೆ ಮಾಡಿ ಈ ಜಾತಿ ವ್ಯವಸ್ಥೆಯನ್ನು ಮಾಡಿದ್ದಾರೆ. ವರ್ಣ ವ್ಯವಸ್ಥೆ ನಾಶವಾಗಬೇಕು. ಇದಕ್ಕೆ ಎಲ್ಲಾ ಶೋಷಿತ ಜಾತಿಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಶಕ್ತಿಯನ್ನು ತುಂಬುವುದೇ ಪರಿಹಾರವಾಗಿದೆ. ಭಾರತೀಯ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ ಎಂದು ಲೋಹಿಯಾ ಅವರು ಹೇಳಿದ್ದರು. ಈ ಚಲನೆ ಬರಬೇಕಾದರೆ ತಳಸಮುದಾಯಗಳ ಜನರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಶಕ್ತಿ ಬರಬೇಕು ಎಂದು ವಾದಿಸಿದರು.
ಮಂಡಲ್ ಕಮಿಷನ್ ವರದಿ ಜಾರಿಗೆ ಬಂದಾಗ ಮೀಸಲಾತಿ ವಿರೋಧಿಗಳು ಅಮಾಯಕ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ, ಅವರು ಬೆಂಕಿಹಚ್ಚಿಕೊಂಡು ಪ್ರಾಣ ಕಳೆದುಕೊಳ್ಳುವಂತೆ ಮಾಡಿದರು. ಒಂದು ವೇಳೆ ವಿ.ಪಿ.ಸಿಂಗ್ ಅವರು ಪ್ರಧಾನಿಯಾಗಿರದೇ ಹೋಗಿದ್ದರೆ ಮಂಡಲ್ ಕಮಿಷನ್ ವರದಿ ಜಾರಿ ಆಗುವುದು ಅನುಮಾನವಿತ್ತು. ಪಿ.ವಿ.ನರಸಿಂಹ್ ರಾವ್ ಅವರ ಕಾಲದಲ್ಲಿ ವರದಿ ಜಾರಿಗೆ ಬಂತು, ಇದಕ್ಕಾಗಿ ಕಾನ್ಷಿರಾಮ್ ಅವರು ಸೇರಿದಂತೆ ಅನೇಕರು ಹೋರಾಟ ಮಾಡಿದ್ದರು ಎನ್ನುವುದನ್ನು ಅವರು ಸ್ಮರಿಸಿದರು.
1992ರಲ್ಲಿ ಇಂದಿರಾ ಸಹಾನಿ ಕೇಸ್‌ನಲ್ಲಿ ಯಾವುದೇ ಕಾರಣಕ್ಕೂ ಮೀಸಲಾತಿಯ ಒಟ್ಟು ಮಿತಿಯು ಶೇ. 50ನ್ನು ಮೀರುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ನ 9 ನ್ಯಾಯಾಧೀಶರ ಪೀಠವು ತೀರ್ಪು ನೀಡಿತು. ಮುಂದುವರಿದ ಜಾತಿಗಳಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವರಿಗೆ 10% ಮೀಸಲಾತಿಯನ್ನು ಕೊಟ್ಟರು. ಅಲ್ಲಿಗೆ 60% ಆಯ್ತು. ಆದರೆ ಮೀಸಲಾತಿ 50% ಕ್ಕಿಂತ ಜಾಸ್ತಿ ಆಗಬಾರದು ಎಂಬ ನಿಯಮವಿದೆ. ಅದಕ್ಕೆ ಮೀಸಲಾತಿ ಸುಪ್ರೀಂ ಕೋರ್ಟ್‌ನಲ್ಲೂ, ಹೈಕೋರ್ಟ್‌ನಲ್ಲೂ, ನ್ಯಾಯಾಲಯಗಳಲ್ಲೂ ಬರಬೇಕು ಎಂದು ಆಗ್ರಹಿಸಿದರು.
ಮುಂದುವರೆದು, ಮೀಸಲಾತಿಗಾಗಿ ನಾವು ಹೋರಾಟವನ್ನೇ ಮಾಡಿಲ್ಲ.ನಮ್ಮ ಮೀಸಲಾತಿ ಹೋರಾಟ ನಿರಂತರವಾಗಿ ನಡೆಯುತ್ತಲೇ ಇರಬೇಕು. ಸುಪ್ರೀಂ ಕೋರ್ಟ್ ಕೂಡ ಒಳಮೀಸಲಾತಿ ಬಗ್ಗೆ ಒಪ್ಪಿಕೊಂಡಿದೆ. ಕಾಂಗ್ರೆಸ್ ಪಕ್ಷ, ನಮ್ಮ ಸರ್ಕಾರ ಯಾವಾಗಲೂ ಒಳ ಮೀಸಲಾತಿ ಪರವಾಗಿದೆ. ಮೀಸಲಾತಿಗೆ ಯಾವತ್ತೂ ಕೂಡ ಭಿನ್ನಾಭಿಪ್ರಾಯಗಳು ಬರಬಾರದು ಎಂದರು. ಕೆಲವರು ಸ್ವಾರ್ಥಕ್ಕಾಗಿ ಮೀಸಲಾತಿ ವಿರುದ್ಧವಾಗಿರುವ ಜನರ ಜೊತೆಗೆ ಸೇರಿಕೊಳ್ಳುತ್ತಾರೆ. ಅದು ಆಗಬಾರದು. ಯಾವ ಪಕ್ಷ ಮೀಸಲಾತಿಗೆ ವಿರೋಧ ಇದೆಯೋ ಅವರ ಪರವಾಗಿ ನಿಲ್ಲುವುದು, ಆ ಪಕ್ಷದ ಸಿದ್ಧಾಂತಕ್ಕೆ ಜೈ ಅನ್ನುವುದು. ಇದು ಸ್ವಾರ್ಥ ಅಲ್ಲವೇ? ಎಂದು ಪ್ರಶ್ನಿಸಿದರು.
ಯಾವುದೇ ಕಾರಣಕ್ಕೂ ಮೀಸಲಾತಿ ಹೋರಾಟಗಾರರಲ್ಲಿ ಭಿನ್ನಾಭಿಪ್ರಾಯಗಳು ಬರಬಾರದು. ಒಳ ಮೀಸಲಾತಿಗಾಗಿ 3 ದಶಕಗಳಿಂದ ಹೋರಾಟ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ನಿರ್ಧಾರ ಬಂದ ಮೇಲೆ ಎಲ್ಲಾ ಕಡೆಯೂ ಇದಕ್ಕೆ ಚಾಲನೆ ಸಿಕ್ಕಿತು. ನಮ್ಮ ಸರ್ಕಾರ ಒಳಮೀಸಲಾತಿಯನ್ನು ಜಾರಿ ಮಾಡುತ್ತದೆ ಎಂದು ಅವತ್ತೇ ಹೇಳಿದ್ದೆ. ಅದರಂತೆ, ನಾಗಮೋಹನ್‌ದಾಸ್ ಕಮಿಟಿ ಮಾಡಿದೆವು. ಅವರು ಹಳ್ಳಿಗಳಿಗೆ ಭೇಟಿ ನೀಡಿ, ಜನರ ಜೊತೆಗೆ ಮಾತನಾಡಿ ಒಂದು ವರದಿಯನ್ನು ಕೊಟ್ಟರು. ಅದರ ಪ್ರಕಾರ, 5 ಗುಂಪುಗಳನ್ನು ಮಾಡಿ ಒಳ ಮೀಸಲಾತಿ ಹಂಚಿಕೆ ಮಾಡಿದೆವು ಎಂದು ವಿವರಿಸಿದರು.
ಮುಂದುವರೆದು, ಆ 5 ಗುಂಪುಗಳನ್ನು ಮತ್ತೆ 3 ಮಾಡಿದೆವು. 6:6:5 ಸೂತ್ರದಡಿ ವಿಭಜಿಸಿದೆವು. ಅಲೆಮಾರಿಗಳನ್ನು ಭೋವಿ, ಬಂಜಾರ ಸಮುದಾಯಗಳ ಜೊತೆ ಸೇರಿಸಿದೆವು. ಅದು ಸರಿ ಇಲ್ಲ ಎಂದಾಯಿತು. ಈ ಮರು-ವರ್ಗೀಕರಣದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿಗಳು ದಾಖಲಾದವು. ಆಮೇಲೆ ತಾತ್ಕಾಲಿಕವಾಗಿ 15% ಮಾಡೋಣ ಎಂದಾಯಿತು. ಚರ್ಚೆಗಳು ನಡೆದು ಐದು ಕಾಲು, ಐದು ಕಾಲು, ನಾಲ್ಕೂವರೆ ನೀಡಲು ಸಚಿವ ಸಂಪುಟವೂ ಒಪ್ಪಿಕೊಂಡಿತು. ಇಷ್ಟೆಲ್ಲಾ ಆದರೂ ಕೂಡ ಇನ್ನೂ ಗೊಂದಲಗಳಿವೆ. ಏನೇ ಆದರೂ ಒಳ ಮೀಸಲಾತಿ ಜಾರಿ ಆಗಲೇಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯನವರು ಹೇಳಿದ್ದನ್ನು ಕೇಳುತ್ತೇನೆ ಅಂತಾರೆ. ಒಳಮೀಸಲಾತಿಯಲ್ಲಿ ಇರುವ ಎಲ್ಲಾ ಗೊಂದಲಗಳನ್ನು ನಿವಾರಣೆ ಮಾಡಿ ಜಾರಿ ಮಾಡುವಂತೆ ನಾನು ಅವರ ಬಳಿ ಮಾತನಾಡುತ್ತೇನೆ. ಅಂತಿಮವಾಗಿ ಸಚಿವ ಸಂಪುಟ ತೀರ್ಮಾನ ತೆಗೆದುಕೊಳ್ಳುತ್ತದೆ. ನನ್ನ ಮಾತು ಕೇಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ದೇಶದಲ್ಲಿರುವ ಅಸಮಾನತೆ ಹೋಗುವವರೆಗೂ ಮೀಸಲಾತಿ ಇರಲೇಬೇಕು. ಎಲ್ಲರಿಗೂ ಸಮಾನ ಅವಕಾಶಗಳು ಸಿಗಲೇಬೇಕು. ಓದಿದವರೆ ಜಾತಿ ವ್ಯವಸ್ಥೆಯನ್ನು ಹೆಚ್ಚು ಪಾಲಿಸುವುದು. ಅಂಬೇಡ್ಕರ್ ಅವರು ಒಂದು ಮಾತು ಹೇಳಿದ್ದಾರೆ, ನಾನು ಇಲ್ಲಿಯವರೆಗೂ ಸಾಮಾಜಿಕ ನ್ಯಾಯದ ರಥವನ್ನು ಎಳೆದುಕೊಂಡು ಬಂದಿದ್ದೇನೆ. ಸಾಧ್ಯವಾದರೆ ಅದನ್ನು ಮುಂದಕ್ಕೆ ಕೊಂಡೊಯ್ಯಿರಿ, ಹಿಂದಕ್ಕೆ ಮಾತ್ರ ತಳ್ಳಬೇಡಿ ಎಂದಿದ್ದಾರೆ. ಅದರಂತೆ ನಾವು ನಡೆದುಕೊಳ್ಳಬೇಕು ಎಂದರು.
ಈ ಹಿಂದೆ ಮೌಢ್ಯ ನಿವಾರಣಾ ಕಾಯ್ದೆ ಜಾರಿ ತಂದಿದ್ದೆವು. ಆದರೆ, ಯಾರು ಅದನ್ನು ಪಾಲಿಸುತ್ತಿಲ್ಲ. ಮೌಢ್ಯಗಳನ್ನು ನಂಬಬೇಡಿ ಎಂದು ಬಸವಣ್ಣನವರೇ ಹೇಳಿದ್ದರು. 2013ರಲ್ಲಿ ನಾನು ಮುಖ್ಯಮಂತ್ರಿಯಾದೆ. ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿಎಸ್‌ಪಿ / ಟಿಎಸ್‌ಪಿ ಕಾಯ್ದೆ ಜಾರಿಗೆ ತಂದೆ. ಅದಕ್ಕೂ ಮೊದಲು ಅಧಿಕಾರಿದಲ್ಲಿದ್ದ ಬಿಜೆಪಿ, ಜೆಡಿಎಸ್ ಪಕ್ಷದ ಯಾರೂ ಕೂಡ ಈ ಕಾಯ್ದೆಯನ್ನು ಜಾರಿ ಮಾಡಿಲ್ಲ ಎನ್ನುವ ವಿಚಾರವನ್ನು ಸಭೆಯ ಗಮನಕ್ಕೆ ತಂದರು.
ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಅನುದಾನ ಬಳಕೆ ಮಾಡಬೇಕು ಎಂಬ ಕಾನೂನನ್ನು ಮಾಡಿದ್ದು ನಮ್ಮ ಸರ್ಕಾರ. 2013ಕ್ಕಿಂತ ಮೊದಲು ಈ ವರ್ಗಗಳ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆಯಾಗುವ ಅನುದಾನ ಸರಿಸುಮಾರು 8,000 ಕೋಟಿ ರೂಪಾಯಿ ಇತ್ತು, ನಾನು ಈ ಕಾನೂನು ಜಾರಿ ಮಾಡಿದ ಮೇಲೆ ರೂ.15,000 ಕೋಟಿಯನ್ನು ಮೀರಿತು. ಈ ವರ್ಷ ಎಸ್.ಸಿ.ಪಿ/ಟಿ.ಎಸ್.ಪಿ ಗೆ ರೂ.44,636 ಕೋಟಿ ಇದೆ. ಇದೇ ಕೆಲಸವನ್ನು ಬೇರೆ ಸರ್ಕಾರಗಳು ಯಾಕೆ ಮಾಡಿಲ್ಲ? ಎನ್ನುವ ಪ್ರಶ್ನೆಯನ್ನು ಅವರು ಸಭಿಕರ ಮುಂದಿಟ್ಟರು.
ಈ ಕಾಯ್ದೆಯ ಭಾಗವಾಗಿದ್ದ 7ಡಿ ಅನ್ನು ರದ್ದು ಮಾಡಿದ್ದು ನಾನು. 4% ಬಡ್ಡಿಗೆ ಕೆಎಸ್‌ಎಫ್‌ಸಿ ಯಲ್ಲಿ 10 ಕೋಟಿ ರೂಪಾಯಿ ವರೆಗೆ ಸಾಲ ಸೌಲಭ್ಯ ಸಿಗುವಂತೆ ಮಾಡಿದ್ದು ನಮ್ಮ ಸರ್ಕಾರ. ಬದ್ಧತೆ ಇದ್ದಾಗ ಮಾತ್ರ ಇಂಥ ಕೆಲಸ ಮಾಡಲು ಸಾಧ್ಯ ಎನ್ನುವುದಕ್ಕೆ ಇದು ಉದಾಹರಣೆ. 2011ರ ಜನಗಣತಿ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರು 24.1% ಇದ್ದಾರೆ. 6.95% ಎಸ್.ಟಿ ಹಾಗೂ 17.15% ಎಸ್.ಸಿ ಸಮುದಾಯದ ಜನರಿದ್ದಾರೆ. ಈಗಿನ ಸರ್ಕಾರದಲ್ಲಿ ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದು ಯಾರು ಗೊತ್ತಾ? ನಾಲ್ಕೈದು ಜನರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದರು, ಒಬ್ಬರಿಗೆ ಅವಕಾಶ ಕೊಡಬೇಕು ಎಂದು ಹೇಳಿದ್ದು ಯಾರು ಗೊತ್ತ? ಬಡ್ತಿಯಲ್ಲಿ ಮೀಸಲಾತಿ ಬೇರೆ ಯಾವುದಾದರೂ ರಾಜ್ಯದಲ್ಲಿ ಇದೆಯಾ? ರತ್ನಪ್ರಭಾ ಅವರು ಮುಖ್ಯಕಾರ್ಯದರ್ಶಿಯಾಗಿರುವಾಗ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ, ವರದಿ ತರಿಸಿಕೊಂಡು, ವರದಿಯನ್ನು ಕಾನೂನಿನ ರೂಪದಲ್ಲಿ ಜಾರಿ ಮಾಡಿದ್ದು ನಮ್ಮ ಸರ್ಕಾರ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ರು, ಆದರೆ ತೀರ್ಪು ನಮ್ಮ ಪರವಾಗಿ ಬಂತು. ಕರ್ನಾಟಕದಲ್ಲಿ ಮಾತ್ರ ಬಡ್ತಿಯಲ್ಲಿ ಮೀಸಲಾತಿ ಇದೆ. ಇದೆಲ್ಲಾ ಸಾದ್ಯವಾಗಿದ್ದು ಹೇಗೆ? ಎನ್ನುವ ಪ್ರಶ್ನೆಯನ್ನು ಸಭೆಯ ಮುಂದಿಟ್ಟರು.
ನಾನು ಇಷ್ಟೆಲ್ಲಾ ಮಾಡಿದ್ರೂ ಒಳಮೀಸಲಾತಿ ಜಾರಿಗೆ ತರುವ ಮೊದಲು ಇಲ್ಲಿ ಸಭೆಯಲ್ಲೇ ಇರುವ ಹಲವರು ನನ್ನ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಅದಕ್ಕಾಗಿಯೇ ನಾನು ಅನೇಕ ಬಾರಿ “ಯಾರು ನಿಮ್ಮ ಪರ ಇರುವವರು, ಯಾರು ವಿರೋಧಿಗಳು ಎನ್ನುವುದನ್ನು ಗುರುತಿಸುವ ಕೆಲಸ ಮಾಡಬೇಕು” ಎಂದು ಹೇಳಿದ್ದೇನೆ. ನಾನು ಮಾಡಿರುವ ಕೆಲಸವನ್ನು ನರೇಂದ್ರ ಮೋದಿ ಅವರು ಯಾಕೆ ಮಾಡಿಲ್ಲ? ಸಾಮಾಜಿಕ ಪರಿಸ್ಥಿತಿ ಹೀಗೆ ಮುಂದುವರೆದರೆ ಜನರನ್ನು ಶೋಷಣೆ ಮಾಡಲು ಅವಕಾಶ ಇರುತ್ತದೆ ಎಂದು ಅವರು ಬದಲಾವಣೆ ಮಾಡಲ್ಲ. ಸಂವಿಧಾನ ಅಂಗೀಕಾರ ಮಾಡಿದ ಮೇಲೆ ಅದನ್ನು ವಿರೋಧ ಮಾಡಿದವರು ಯಾರು? ಇದೇ ಮನುವಾದಿಗಳಲ್ಲವೇ? ಆರ್.ಎಸ್.ಎಸ್ ಮುಖವಾಣಿ ಆರ್ಗನೈಸರ್ ನಲ್ಲಿ ಸಂವಿಧಾನವನ್ನು ವಿರೋಧ ಮಾಡಿಲ್ಲವೇ? ಎಂದು ಇತಿಹಾಸವನ್ನು ಸ್ಮರಿಸಿದರು.
ನಾನು ಎಂದಿಗೂ ನಿಮ್ಮ ಜೊತೆ ಇರುತ್ತೇನೆ. ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾದರೂ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎನ್ನುವ ತಮ್ಮ ನಿರ್ಧಾರವನ್ನು ಪುನರುಚ್ಛರಿಸಿದ ಸಿದ್ದರಾಮಯ್ಯ ಅವರು, ತಮ್ಮ ಈ ನಿರ್ಧಾರಕ್ಕೆ ವಯಸ್ಸಿನ ಕಾರಣವನ್ನು ನೀಡಿದರು.
ಒಳ ಮೀಸಲಾತಿ ಹೋರಾಟ ಮುಂದುವರೆಯಬೇಕು, ಗುರಿ ತಲುಪುವ ವರೆಗೆ ನಿಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮರೆತು ಜೊತೆಯಾಗಿ ಹೋರಾಟ ನಡೆಸಬೇಕು. ನಿಮ್ಮ ಸುತ್ತ ನಿಮ್ಮ ನಿಮ್ಮೊಳಗೆ ಬೆಂಕಿ ಹಚ್ಚುವ ಜನರಿದ್ದಾರೆ, ಜಾಗೃತೆಯಾಗಿರಿ ಎನ್ನುವ ಕಿವಿಮಾತನ್ನು ಅವರು ಹೋರಾಟಗಾರರಿಗೆ ಹೇಳಿದರು. ಒಳಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಮಂತ್ರಿಗಳ ಜೊತೆ ಮಾತನಾಡುವುದಾಗಿಯೂ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
