Home ಬೆಂಗಳೂರು ಚಾಮರಾಜನಗರ ಹನೂರು ಶೂಟೌಟ್ ಪ್ರಕರಣ: ಸಿಐಡಿ ತನಿಖೆಗೆ ವಹಿಸಿದ ಸರ್ಕಾರ

ಚಾಮರಾಜನಗರ ಹನೂರು ಶೂಟೌಟ್ ಪ್ರಕರಣ: ಸಿಐಡಿ ತನಿಖೆಗೆ ವಹಿಸಿದ ಸರ್ಕಾರ

0

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ನಡೆದ ವಿವಾದಾತ್ಮಕ ಗುಂಡಿನ ಚಕಮಕಿ (ಶೂಟೌಟ್) ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರವು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವಹಿಸಿ ಆದೇಶಿಸಿದೆ. ವಿರೋಧ ಪಕ್ಷವಾದ ಬಿಜೆಪಿ ಹಾಗೂ ನೆರೆಯ ತಮಿಳುನಾಡಿನ ರಾಜಕೀಯ ನಾಯಕರಿಂದ ಸರ್ಕಾರದ ಮೇಲೆ ವ್ಯಾಪಕ ಒತ್ತಡ ಹೆಚ್ಚಾದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಡತಗಳು ಮತ್ತು ದಾಖಲೆಗಳನ್ನು ತಕ್ಷಣವೇ ಸಿಐಡಿಗೆ ಹಸ್ತಾಂತರಿಸುವಂತೆ ಸೂಚಿಸಲಾಗಿದೆ.

ಹನೂರು ವ್ಯಾಪ್ತಿಯ ಕಾವೇರಿ ವನ್ಯಜೀವಿ ಧಾಮದ ಅರಣ್ಯ ಪ್ರದೇಶದಲ್ಲಿ ಜಿಂಕೆ ಮತ್ತು ಕಾಡುಪ್ರಾಣಿಗಳ ಬೇಟೆಯಾಡಲು ಬಂದಿದ್ದರು ಎನ್ನಲಾದ ತಮಿಳುನಾಡು ಮೂಲದ ವ್ಯಕ್ತಿಗಳು ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ತಮಿಳುನಾಡಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಘಟನೆಯು ಉಭಯ ರಾಜ್ಯಗಳ ಗಡಿ ಭಾಗದಲ್ಲಿ ಭಾರೀ ರಾಜಕೀಯ ಸಂಚಲನಕ್ಕೆ ಕಾರಣವಾಗಿತ್ತು. ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದರೆ, ತಮಿಳುನಾಡು ಮುಖಂಡರು ಇದನ್ನು ಫೇಕ್ ಎನ್‌ಕೌಂಟರ್ ಎಂದು ಆರೋಪಿಸಿದ್ದರು.

ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷಾ (ಪಿಎಂ) ವರದಿಯನ್ನು ಉಲ್ಲೇಖಿಸಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಗುಂಡಿನ ದಾಳಿಯು ಅತ್ಯಂತ ಹತ್ತಿರದ ಅಂತರದಿಂದ ನಡೆದಿದೆ ಎಂದು ಮರಣೋತ್ತರ ವರದಿ ಸೂಚಿಸುತ್ತಿದ್ದು, ಇದು ಪೂರ್ವನಿಯೋಜಿತ ಕೃತ್ಯ ಎಂಬಂತೆ ಕಾಣಿಸುತ್ತಿದೆ ಎಂದು ವಿಪಕ್ಷಗಳು ಶಂಕೆ ವ್ಯಕ್ತಪಡಿಸಿದ್ದವು. ಪ್ರಕರಣದ ಸುತ್ತ ಅನುಮಾನಗಳು ದಟ್ಟವಾದ ಬೆನ್ನಲ್ಲೇ, ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸುವ ಉದ್ದೇಶದಿಂದ ಪ್ರಕರಣವನ್ನು ಸಿಐಡಿ ಹೆಗಲಿಗೆ ವಹಿಸಲಾಗಿದೆ.

You cannot copy content of this page

Exit mobile version