Home ಬೆಂಗಳೂರು ಊರ್ವಶಿ ಚಿತ್ರಮಂದಿರ ನೆಲಸಮಕ್ಕೆ ಹೈಕೋರ್ಟ್ ಬ್ರೇಕ್; ಸಾಮಗ್ರಿ ತೆರವುಗೂ ತಡೆ

ಊರ್ವಶಿ ಚಿತ್ರಮಂದಿರ ನೆಲಸಮಕ್ಕೆ ಹೈಕೋರ್ಟ್ ಬ್ರೇಕ್; ಸಾಮಗ್ರಿ ತೆರವುಗೂ ತಡೆ

0

ಬೆಂಗಳೂರು: ನಗರದ ಜನಪ್ರಿಯ ಹಾಗೂ ಹಲವು ದಶಕಗಳ ಸಿನಿಮಾ ನೆನಪುಗಳನ್ನು ಹೊತ್ತಿರುವ ‘ಊರ್ವಶಿ’ ಚಿತ್ರಮಂದಿರದ ನೆಲಸಮ ಕಾರ್ಯಕ್ಕೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಚಿತ್ರಮಂದಿರದಲ್ಲಿರುವ ಯಾವುದೇ ವಸ್ತುಗಳನ್ನು ತೆರವುಗೊಳಿಸದಂತೆ ಭೂಮಾಲೀಕರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಸೋಮವಾರ ಚಿತ್ರಮಂದಿರವನ್ನು ಕೆಡವುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಇದರಿಂದ ಊರ್ವಶಿ ಚಿತ್ರಮಂದಿರದೊಂದಿಗೆ ಭಾವನಾತ್ಮಕ ನಂಟು ಹೊಂದಿರುವ ಸಿನಿಪ್ರೇಮಿಗಳಲ್ಲಿ ಬೇಸರ ವ್ಯಕ್ತವಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.

ಚಿತ್ರಮಂದಿರದ ಜಾಗವನ್ನು ಖಾಲಿ ಮಾಡುವಂತೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಿದೆ. ಆದರೆ, ಈ ಗಡುವು ಮುಗಿಯುವ ಮೊದಲೇ ಭೂಮಾಲೀಕರು ಸ್ಥಳವನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ ಎಂದು ಊರ್ವಶಿ ಆಡಳಿತ ಮಂಡಳಿ ನ್ಯಾಯಾಲಯದಲ್ಲಿ ಆಕ್ಷೇಪ ವ್ಯಕ್ತಪಡಿಸಿತು.

ಚಿತ್ರಮಂದಿರದ ಪರ ವಾದಿಸಿದ ಹಿರಿಯ ವಕೀಲ ಶ್ಯಾಮ್‌ಸುಂದರ್, ನೆಲಸಮ ಕಾರ್ಯದ ವೇಳೆ ಚಿತ್ರಮಂದಿರದಲ್ಲಿದ್ದ ದುಬಾರಿ ಪ್ರೊಜೆಕ್ಟರ್, ಪರದೆ ಹಾಗೂ ಆಸನಗಳಿಗೆ ಹಾನಿಯಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದಕ್ಕೆ ಭೂಮಾಲೀಕರ ಪರ ವಕೀಲರು ವಿರೋಧ ವ್ಯಕ್ತಪಡಿಸಿ, ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ವಯ ಚಿತ್ರಮಂದಿರದವರು ಅಗತ್ಯ ಪ್ರಮಾಣಪತ್ರ ಸಲ್ಲಿಸಿಲ್ಲ. ಹೀಗಾಗಿ ಮಧ್ಯಂತರ ತಡೆ ನೀಡುವ ಅಗತ್ಯವಿಲ್ಲ ಎಂದು ವಾದಿಸಿದರು.

ಎರಡೂ ಕಡೆಯ ವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅಗತ್ಯ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಊರ್ವಶಿ ಚಿತ್ರಮಂದಿರದ ಆಡಳಿತ ಮಂಡಳಿಗೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 25ಕ್ಕೆ ನಿಗದಿಪಡಿಸಿದೆ.

ಅಲ್ಲಿಯವರೆಗೆ ಚಿತ್ರಮಂದಿರದ ಕಟ್ಟಡವನ್ನು ನೆಲಸಮಗೊಳಿಸಬಾರದು ಹಾಗೂ ಒಳಗಿರುವ ಯಾವುದೇ ಸಾಮಗ್ರಿಗಳನ್ನು ಹೊರಗೆ ಸಾಗಿಸಬಾರದು ಎಂದು ನ್ಯಾಯಾಲಯ ಸ್ಪಷ್ಟ ಆದೇಶ ನೀಡಿದೆ.

ಒಂದು ಕಾಲದಲ್ಲಿ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಊರ್ವಶಿ, ಸಾವಿರಕ್ಕೂ ಅಧಿಕ ಆಸನಗಳ ಸಾಮರ್ಥ್ಯ ಹೊಂದಿತ್ತು. ಇಲ್ಲಿ 5 ಸಾವಿರಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಂಡಿದ್ದು, ಅನೇಕ ಚಿತ್ರಗಳು ಭರ್ಜರಿ ಯಶಸ್ಸು ಕಂಡಿವೆ. ಹೀಗಾಗಿ ಊರ್ವಶಿ ಚಿತ್ರಮಂದಿರ ಬೆಂಗಳೂರಿನ ಸಿನಿಮಾ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿ ಗುರುತಿಸಿಕೊಂಡಿದೆ.

You cannot copy content of this page

Exit mobile version