Home ದೇಶ ಜಾತಿ ಗಣತಿ ಪ್ರಕ್ರಿಯೆಯಲ್ಲಿ ಲೋಪ: ಪ್ರಧಾನಿ ಮೋದಿಗೆ ಖರ್ಗೆ-ರಾಹುಲ್ ಗಾಂಧಿ ಜಂಟಿ ಪತ್ರ

ಜಾತಿ ಗಣತಿ ಪ್ರಕ್ರಿಯೆಯಲ್ಲಿ ಲೋಪ: ಪ್ರಧಾನಿ ಮೋದಿಗೆ ಖರ್ಗೆ-ರಾಹುಲ್ ಗಾಂಧಿ ಜಂಟಿ ಪತ್ರ

0

ಕೇಂದ್ರ ಸರ್ಕಾರ ಪ್ರಸ್ತುತ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಜಾತಿ ಗಣತಿಯ ವಿಧಾನದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜಂಟಿ ಪತ್ರ ಬರೆದಿದ್ದಾರೆ.

ಪ್ರಶ್ನಾವಳಿಯಲ್ಲಿ ಮುಕ್ತ ಪ್ರಶ್ನೆಗಳ (open-ended questions) ಮೂಲಕ ಜಾತಿಗಳನ್ನು ನಿಖರವಾಗಿ ಎಣಿಕೆ ಮಾಡಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಭಾರತದಲ್ಲಿ ಒಂದೇ ಜಾತಿಯನ್ನು ವಿವಿಧ ಪ್ರದೇಶಗಳಲ್ಲಿ ವಿಭಿನ್ನ ಹೆಸರುಗಳು, ಉಪಜಾತಿಗಳು ಮತ್ತು ಭಾಷೆಗಳಿಂದ ಕರೆಯಲಾಗುತ್ತದೆ.

ಜನರು ಹೇಳುವ ಪ್ರತಿಯೊಂದು ಹೆಸರನ್ನೂ ಹಾಗೆಯೇ ದಾಖಲಿಸಿಕೊಂಡರೆ, ಒಂದೇ ಜಾತಿಯು ಸಾವಿರಾರು ಹೆಸರುಗಳಾಗಿ ವಿಭಜನೆಯಾಗಿ ದತ್ತಾಂಶವೇ ಅಸ್ತವ್ಯಸ್ತಗೊಳ್ಳುತ್ತದೆ. ಇದರಿಂದ ಲಕ್ಷಾಂತರ ಹೊಸ ಜಾತಿಗಳ ಹೆಸರುಗಳು ಸೃಷ್ಟಿಯಾಗಿ ಒಟ್ಟಾರೆ ಜಾತಿ ಗಣತಿಯ ದತ್ತಾಂಶವೇ ನಿಷ್ಪ್ರಯೋಜಕವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಯಾವುದೇ ಸಮುದಾಯದ ನಿಖರ ಜನಸಂಖ್ಯೆ ದಾಖಲಾಗದಿದ್ದರೆ, ಅವರ ಸಾಮಾಜಿಕ-ಆರ್ಥಿಕ ಸ್ಥಿತಿಗತಿಯ ಮೌಲ್ಯಮಾಪನವೂ ತಪ್ಪಾಗುತ್ತದೆ. ಇದರ ದೊಡ್ಡ ಹೊಡೆತ ಒಬಿಸಿಗಳು (OBC), ಅತ್ಯಂತ ಹಿಂದುಳಿದ ವರ್ಗಗಳು ಮತ್ತು ವಂಚಿತ ಸಮುದಾಯಗಳ ಮೇಲೆ ಬೀಳಲಿದ್ದು, ಶಿಕ್ಷಣ, ಉದ್ಯೋಗ, ಕಲ್ಯಾಣ ಯೋಜನೆಗಳು ಹಾಗೂ ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ನಿರ್ಧಾರಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಗಣತಿಯಲ್ಲಿ ‘ಹಿಂದುಳಿದ ವರ್ಗ’ ಎಂಬ ಪದವನ್ನೇ ಸೇರಿಸದಿರುವುದು ದೇಶದಲ್ಲಿ ಒಬಿಸಿ ಜನಸಂಖ್ಯೆಯನ್ನು ಅಂದಾಜಿಸಲು ಅಡ್ಡಿಯಾಗಲಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಇದಕ್ಕೆ ಪರಿಹಾರವಾಗಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗಣತಿಯ ಮಾದರಿಯಲ್ಲೇ, ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳ ಪಟ್ಟಿ ಹಾಗೂ ಭಾರತೀಯ ಮಾನವಶಾಸ್ತ್ರ ಸಮೀಕ್ಷೆಯ ಆಧಾರದ ಮೇಲೆ ಪೂರ್ವಸಿದ್ಧಪಡಿಸಿದ ಮತ್ತು ಪರಿಶೀಲಿಸಿದ ಜಾತಿಗಳ ‘ಡ್ರಾಪ್-ಡೌನ್ ಪಟ್ಟಿ’ಯನ್ನು (drop-down list) ಸಿದ್ಧಪಡಿಸಬೇಕು ಎಂದು ನಾಯಕರು ಒತ್ತಾಯಿಸಿದ್ದಾರೆ.

ತೆಲಂಗಾಣ ಮತ್ತು ಬಿಹಾರದ ಜಾತಿ ಸಮೀಕ್ಷೆಗಳಲ್ಲಿ ಇದೇ ಮಾದರಿಯನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳಲಾಗಿತ್ತು ಎಂದು ಉಲ್ಲೇಖಿಸಿರುವ ಅವರು, ಪ್ರಸ್ತುತ ಇರುವ ದೋಷಪೂರಿತ ಪ್ರಶ್ನಾವಳಿಯನ್ನು ರದ್ದುಗೊಳಿಸಿ, ರಾಜಕೀಯ ಪಕ್ಷಗಳು, ತಜ್ಞರು ಮತ್ತು ಸಾರ್ವಜನಿಕರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿ ಹೊಸ ಪ್ರಶ್ನಾವಳಿಯನ್ನು ರೂಪಿಸಬೇಕೆಂದು ಆಗ್ರಹಿಸಿದ್ದಾರೆ.

You cannot copy content of this page

Exit mobile version