ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಒಂದೇ ಕುಟುಂಬದ ಮೂವರು (ತಾಯಿ, ತಂದೆ ಮತ್ತು ಮಗ) ಮೃತಪಟ್ಟ ಪ್ರಕರಣ ಆಘಾತಕಾರಿ ತಿರುವು ಪಡೆದುಕೊಂಡಿದೆ. ಐಫೋನ್ ಕಂತು (ಇಎಂಐ) ಕಟ್ಟಲಾಗದೆ ನಡೆದ ಜಗಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ 18 ವರ್ಷದ ಕುನಾಲ್ ಚಂದಗುಡೆ ಅವರ ಚಿಕ್ಕಮ್ಮ (ತಾಯಿಯ ತಂಗಿ) ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಐಫೋನ್ ವಿಚಾರ ಕೇವಲ ಸುಳ್ಳು ವದಂತಿ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಕುಟುಂಬ ಪ್ರಸ್ತುತ ತೀವ್ರ ಆಘಾತದಲ್ಲಿದೆ; ದಯವಿಟ್ಟು ಇಂತಹ ಸುಳ್ಳು ಪ್ರತಿಪಾದನೆಗಳ ವಿಡಿಯೋಗಳನ್ನು ಹರಡುವುದನ್ನು ನಿಲ್ಲಿಸಿ ಎಂದು ಅವರು ಜನರಲ್ಲಿ ಮನವಿ ಮಾಡಿದ್ದಾರೆ.
ಕುನಾಲ್‌ನ ತಾಯಿ ಸಂಗೀತಾ ಅವರ ಸಹೋದರಿ ಪಲ್ಲವಿ ಪಾಟೀಲ್ ವಿಡಿಯೋದಲ್ಲಿ ಮಾತನಾಡಿ, “ಸಂಗೀತಾ ನನ್ನ ಅಕ್ಕ, ಕುನಾಲ್ ನನ್ನ ಅಕ್ಕನ ಮಗ ಮತ್ತು ಮುರಳೀಧರ್ ನನ್ನ ಭಾವ. ಈ ಮೂವರನ್ನೂ ಕಳೆದುಕೊಂಡ ನಮ್ಮ ಕುಟುಂಬದ ಮೇಲೆ ಎಂತಹ ದೊಡ್ಡ ಆಘಾತ ಎದುರಾಗಿದೆ ಎಂಬುದು ನಮಗೆ ಮಾತ್ರ ಗೊತ್ತು. ನಾವಿನ್ನೂ ಅವರ ಅಸ್ಥಿ ವಿಸರ್ಜನೆ ಮುಗಿಸಿ ಮರಳುತ್ತಿದ್ದೇವೆ. ಅಷ್ಟರಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಐಫೋನ್ ಕಾರಣವೆಂದು ವೈರಲ್ ಆಗುತ್ತಿರುವ ವಿಡಿಯೋಗಳನ್ನು ನೋಡಿ ನಮ್ಮ ಹೃದಯವೇ ನುಚ್ಚುನೂರಾಗಿದೆ. ಸತ್ಯಾಸತ್ಯತೆ ತಿಳಿಯದೆ ಇಂತಹ ಸುಳ್ಳು ವಿಡಿಯೋಗಳನ್ನು ಹರಡುವುದನ್ನು ನಿಲ್ಲಿಸಿ ಎಂದು ನಾನು ಎಲ್ಲರಲ್ಲೂ ಕೈಮುಗಿದು ಕೇಳಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
https://www.instagram.com/reel/DcYEQHvtHJy/?utm_source=ig_web_copy_link&igsi=NTc4MTIwNjQ2YQ==
ಪಲ್ಲವಿ ಪಾಟೀಲ್ ಅವರ ಪ್ರಕಾರ, ಐಫೋನ್ ವಿಚಾರಕ್ಕಾಗಿ ಕುನಾಲ್, ಸಂಗೀತಾ ಮತ್ತು ಮುರಳೀಧರ್ ಮೃತಪಟ್ಟಿಲ್ಲ; ಬದಲಿಗೆ ಐಫೋನ್ ಸುದ್ದಿ ಕೇವಲ ವದಂತಿಯಷ್ಟೇ ಆಗಿದೆ. ಇಂತಹ ವಿಡಿಯೋಗಳನ್ನು ಹರಡುವವರಿಗೆ ಘಟನೆಯ ಸತ್ಯಾಸತ್ಯತೆ ತಿಳಿದಿಲ್ಲ ಎಂದಿರುವ ಅವರು, “ಸತ್ಯ ತಿಳಿಯದೆ ಸುಳ್ಳು ಕಥೆಗಳನ್ನು ಕಟ್ಟಿ ಹಂಚಿಕೊಳ್ಳುತ್ತಿದ್ದೀರಿ. ಈ ವಿಡಿಯೋಗಳು ನಮ್ಮ ವೃದ್ಧ ಪೋಷಕರಿಗೆ ಎಷ್ಟು ನೋವುಂಟುಮಾಡುತ್ತಿವೆ ಎಂಬುದು ನಿಮಗೆ ಅರಿವಿದೆಯೇ?” ಎಂದು ಪ್ರಶ್ನಿಸಿದ್ದಾರೆ. ಆದರೆ, ಐಫೋನ್ ವಿಚಾರವನ್ನು ನಿರಾಕರಿಸಿದ ಅವರು ಸಾವಿಗೆ ನಿಜವಾದ ನಿಖರ ಕಾರಣವೇನೆಂಬುದನ್ನು ವಿಡಿಯೋದಲ್ಲಿ ಬಹಿರಂಗಪಡಿಸಿಲ್ಲ.
ಛತ್ರಪತಿ ಸಂಭಾಜಿನಗರದಲ್ಲಿ 18 ವರ್ಷದ ಯುವಕನೊಬ್ಬ ಬೆಟ್ಟದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ರಕ್ಷಿಸಲು ಹೋದ ತಂದೆ ಕಾಲು ಜಾರಿ ಬಿದ್ದಿದ್ದಾರೆ ಮತ್ತು ನಂತರ ತಾಯಿಯೂ ಜಿಗಿದಿದ್ದರಿಂದ ಒಂದೇ ಕುಟುಂಬದ ಮೂವರೂ ಸಾವನ್ನಪ್ಪಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಈ ದುರ್ಘಟನೆಗೂ ಮುನ್ನ ಸುಮಾರು 3 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ಮತ್ತು ಹೈಡ್ರಾಮಾ ನಡೆದಿತ್ತು.
