ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಈ ದೇಶದಲ್ಲಿರಲು ಅನರ್ಹರು ಎಂದು ಅವರು ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, “ರಾಹುಲ್ ಗಾಂಧಿಗೆ ಈ ದೇಶದ ಸಂಸ್ಕೃತಿ, ಇತಿಹಾಸವಾಗಲಿ ಅಥವಾ ಕಾನೂನಿನ ಅರಿವಾಗಲಿ ಇಲ್ಲ. 15 ದಿನ ಭಾರತದಲ್ಲಿದ್ದು, ಇನ್ನುಳಿದ 15 ದಿನ ವಿದೇಶದಲ್ಲಿ ಕಳೆಯುವ ವ್ಯಕ್ತಿಗೆ ಭಾರತದ ಕಾನೂನುಗಳ ಬಗ್ಗೆ ಏನು ಗೊತ್ತು? ಅಮಿತ್ ಶಾ ಅವರು ದೇಶದ ಗೃಹ ಸಚಿವರು. ಪೊಲೀಸ್ ಠಾಣೆಯಲ್ಲಿ ಅವರ ಫೋಟೋ ಇಲ್ಲದೆ ಇನ್ನಾರ ಫೋಟೋ ಇರಬೇಕು? ಹಿಂದೆ ಇವರ ಮುತ್ತಜ್ಜ, ಅಜ್ಜಿ ಮತ್ತು ತಂದೆಯ ಫೋಟೋಗಳು ಇರಲಿಲ್ಲವೇ? ದೇಶದಲ್ಲಿ ನಕ್ಸಲಿಸಂ ಅನ್ನು ಮಟ್ಟಹಾಕಿದ ಅಮಿತ್ ಶಾ ಅವರನ್ನು ಟೀಕಿಸುವ ನೈತಿಕತೆ ರಾಹುಲ್ ಗಾಂಧಿಗೆ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ರಾಜ್ಯ ರಾಜಕೀಯದ ಕುರಿತು ಮಾತನಾಡಿದ ಅವರು, “ಕರ್ನಾಟಕವನ್ನು ಸ್ವರ್ಗವನ್ನಾಗಿ ಮಾಡುತ್ತೇನೆ ಎಂದು ಹೇಳುತ್ತಿರುವ ಡಿಕೆ ಶಿವಕುಮಾರ್ ಅವರ ಮಾತಿಗೆ ಇನ್ನೆರಡು ತಿಂಗಳು ಕಾಯಿರಿ, ಎಂತಹ ಜಗತ್ತು ಸೃಷ್ಟಿಯಾಗುತ್ತದೆ ಎಂದು ಎಲ್ಲರಿಗೂ ತಿಳಿಯಲಿದೆ. ಕಾಂಗ್ರೆಸ್‌ನಲ್ಲಿ ಕೆಲಸ ಮಾಡುವ ಬುದ್ಧಿವಂತರಿಗೆ ಜಾಗವಿಲ್ಲ, ಸಿದ್ದರಾಮಯ್ಯನವರನ್ನೇ 15 ನಿಮಿಷಗಳಲ್ಲಿ ಕೆಳಗಿಳಿಸಿದ ಇತಿಹಾಸ ಕಾಂಗ್ರೆಸ್ ಪಕ್ಷದ್ದು. ಕಾಂಗ್ರೆಸ್‌ನವರ ಕಾಲನ್ನು ನಾವು ಎಳೆಯುತ್ತಿಲ್ಲ, ಅವರ ಪಕ್ಷದವರೇ ಪರಸ್ಪರ ಕಾಲೆಳೆದುಕೊಳ್ಳುತ್ತಿದ್ದಾರೆ” ಎಂದು ಲೇವಡಿ ಮಾಡಿದರು.
ಮಂಗಳೂರು ರೈಲ್ವೆ ವಿಭಾಗವನ್ನು ನೈರುತ್ಯ ರೈಲ್ವೆ (SWR) ವಲಯಕ್ಕೆ ಸೇರ್ಪಡೆಗೊಳಿಸಿರುವ ಕುರಿತು ಹರ್ಷ ವ್ಯಕ್ತಪಡಿಸಿದ ಸೋಮಣ್ಣ, ಇದು ಕರ್ನಾಟಕದ 23 ವರ್ಷಗಳ ಸುದೀರ್ಘ ಹೋರಾಟಕ್ಕೆ ಸಂದ ಜಯ ಎಂದು ಬಣ್ಣಿಸಿದರು. ಇದರಿಂದ ಕೇರಳಕ್ಕೆ ಯಾವುದೇ ತೊಂದರೆಯಾಗುವುದಿಲ್ಲ, ಆದರೂ ಅಲ್ಲಿನ ಮುಖ್ಯಮಂತ್ರಿಗಳು ಮತ್ತು ಸಚಿವರು ಏಕೆ ವಿರೋಧಿಸುತ್ತಿದ್ದಾರೋ ತಿಳಿಯುತ್ತಿಲ್ಲ. ಈ ನಿರ್ಧಾರದಿಂದ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗಲಿದ್ದು, ಕೇಂದ್ರ ರೈಲ್ವೆ ರಾಜ್ಯ ಸಚಿವನಾಗಿ ಈ ಕೆಲಸ ನನಗೆ ಅತ್ಯಂತ ತೃಪ್ತಿ ತಂದಿದೆ ಎಂದು ಹೇಳಿದರು.
