ಮೈಸೂರು: ಕುರ್‌ಕುರೆ ತಿಂಡಿಯ ಪ್ಯಾಕೆಟ್‌ನಲ್ಲಿದ್ದ ಸಣ್ಣ ಪ್ಲಾಸ್ಟಿಕ್ ಆಟದ ಚೆಂಡನ್ನು ನುಂಗಿ ಐದು ವರ್ಷದ ಮಗುವೊಂದು ಪ್ರಾಣ ಕಳೆದುಕೊಂಡಿರುವ ದುರಂತ ಘಟನೆ ನಡೆದಿದೆ.
ಮೃತ ಮಗುವನ್ನು ಮುಕುಂದ್ ಮಯೂರ್ ಎಂದು ಗುರುತಿಸಲಾಗಿದೆ. ಈತ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷೆ ಗೌರಮ್ಮ ಹಾಗೂ ಶಂಕರ್ ನಾಯಕ್ ಅವರ ಮೊಮ್ಮಗ, ಸಂತೋಷ್ ಮತ್ತು ಐಶ್ವರ್ಯ ದಂಪತಿಯ ಏಕೈಕ ಮಗ.
ಶನಿವಾರ ಮಗು ಅಳುತ್ತಿದ್ದಾಗ ಸಂಬಂಧಿಕರ ಮಕ್ಕಳು ಗೌರಿಪುರದ ಅಂಗಡಿಯಿಂದ ಕುರ್‌ಕುರೆ ಪ್ಯಾಕೆಟ್ ಕೊಡಿಸಿದ್ದರು. ಮಕ್ಕಳನ್ನು ಆಕರ್ಷಿಸಲು ಕಂಪನಿಯು ಈ ಪ್ಯಾಕೆಟ್‌ನೊಳಗೆ ನೀಡಿದ್ದ ಸಣ್ಣ ಉಚಿತ ಆಟದ ಚೆಂಡನ್ನು, ತಿಂಡಿ ತಿಂದ ಬಳಿಕ ಮಗು ಬಾಯಿಗೆ ಹಾಕಿಕೊಂಡಿತ್ತು. ಈ ವೇಳೆ ಆಕಸ್ಮಿಕವಾಗಿ ಚೆಂಡು ಗಂಟಲಿನಲ್ಲಿ ಸಿಲುಕಿ ಉಸಿರುಗಟ್ಟಿದೆ.
ಇದನ್ನು ಗಮನಿಸಿದ ಮನೆಯವರು ತಕ್ಷಣವೇ ಮಗುವನ್ನು ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ, ಅಷ್ಟರಲ್ಲೇ ಮಗು ಕೊನೆಯುಸಿರೆಳೆದಿತ್ತು.
ಈ ಘಟನೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಕಾವಲುಪಡೆ ಹೆಚ್ಚಿನ ತನಿಖೆ ನಡೆಸುತ್ತಿದೆ.
