ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ವ್ಯಾಪಕ ಲೋಪದೋಷಗಳು ನಡೆದಿವೆ ಮತ್ತು ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿ, ಖ್ಯಾತ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಅವರು ಸೆಪ್ಟೆಂಬರ್ 1, 2026 ರಂದು ‘ಎಲೆಕ್ಷನ್ ಕಮಿಷನ್ ಚಲೋ’ (Election Commission Chalo) ರಾಜ್ಯವ್ಯಾಪಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ನಾಗರಿಕ ಸಮಾಜದ ಸಂಘಟನೆಗಳೊಂದಿಗೆ ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಕಾಶ್ ರಾಜ್, ಚುನಾವಣಾ ಆಯೋಗವು ಈ ಪ್ರಕ್ರಿಯೆಯನ್ನು ಅತ್ಯಂತ ಆತುರವಾಗಿ ಮತ್ತು ಅವೈಜ್ಞಾನಿಕವಾಗಿ ನಡೆಸುತ್ತಿದೆ ಎಂದು ಆರೋಪಿಸಿದರು. ಮತದಾರರ ಪಟ್ಟಿಯಲ್ಲಿ ಗುರುತಿಸಲಾಗಿರುವ ವಿವಾದಾತ್ಮಕ ‘ASDDO’ (ಸ್ಥಳದಲ್ಲಿ ಇಲ್ಲದವರು, ವಿಳಾಸ ಬದಲಿಸಿದವರು, ಮೃತರು, ನಕಲಿ ಮತ್ತು ಇತರರು) ವರ್ಗೀಕರಣವು ರಾಜ್ಯದ ಸುಮಾರು 1.07 ಕೋಟಿ ಮತದಾರರ ಮೇಲೆ (ಒಟ್ಟು ಮತದಾರರಲ್ಲಿ ಸುಮಾರು ಶೇ. 19.5 ರಷ್ಟು) ಗಂಭೀರ ಪರಿಣಾಮ ಬೀರಿದೆ ಎಂದು ಅವರು ಅಂಕಿಅಂಶಗಳ ಸಮೇತ ಕಳವಳ ವ್ಯಕ್ತಪಡಿಸಿದರು.
ಕೇವಲ ಒಂದು ತಿಂಗಳ ಅವಧಿಯಲ್ಲಿ 5.5 ಕೋಟಿ ಮತದಾರರ ಮನೆ-ಮನೆ ಪರಿಶೀಲನೆ ಪೂರ್ಣಗೊಳಿಸುವಂತೆ ನೀಡಿರುವ ನಿರ್ದೇಶನವು ಸಂಪೂರ್ಣ ಅಸಾಧ್ಯವಾದುದು ಎಂದಿರುವ ಅವರು, ಸಮರ್ಪಕ ತರಬೇತಿ ಪಡೆಯದ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆಗಳಿಗೆ ಮರುಭೇಟಿ ನೀಡದೆ ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಸರಿಯಾಗಿ ಸಂವಾದ ನಡೆಸದೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿದರು.
ಕೆಲಸದ ನಿಮಿತ್ತ ತಾತ್ಕಾಲಿಕವಾಗಿ ಹೊರಗಿರುವವರನ್ನು ಅಥವಾ ರಾಜ್ಯದ ಒಳಗೇ ಮನೆ ಬದಲಾಯಿಸಿದ ನಾಗರಿಕರನ್ನು ‘ಸ್ಥಳದಲ್ಲಿ ಇಲ್ಲದವರು’ ಅಥವಾ ‘ವಿಳಾಸ ಬದಲಿಸಿದವರು’ ಎಂದು ವರ್ಗೀಕರಿಸಿ, ಅವರನ್ನು ಫಾರ್ಮ್ 6 ಮೂಲಕ ಹೊಸ ಮತದಾರರಂತೆ ನೋಂದಾಯಿಸಿಕೊಳ್ಳಲು ಒತ್ತಾಯಿಸುವುದನ್ನು ನಾಗರಿಕ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ. ಬದಲಾಗಿ, ಫಾರ್ಮ್ 8 ರ ಮೂಲಕ ಹಳೆಯ ಮತದಾರರ ಗುರುತನ್ನು ಉಳಿಸಿಕೊಂಡೇ ವಿಳಾಸ ನವೀಕರಿಸಲು ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ‘ವಿಳಾಸ ಬದಲಿಸಿದವರು’ ಎಂಬ ಕಾರಣ ನೀಡಿ ಸ್ವತಃ ತಮ್ಮ ಹೆಸರನ್ನೇ ಡಿಲೀಟ್ ಮಾಡಿರುವುದನ್ನು ಪ್ರಸ್ತಾಪಿಸಿದ ಪ್ರಕಾಶ್ ರಾಜ್, “ಈ ದೇಶದ ಪ್ರಜೆಯೊಬ್ಬ ಮತ್ತೆ ಹೊಸ ಪ್ರಜೆಯಾಗುವುದು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು. ಈ ದೋಷಪೂರಿತ ಪ್ರಕ್ರಿಯೆಯಿಂದಾಗಿ ಸುಮಾರು ಎರಡು ಕೋಟಿಗೂ ಅಧಿಕ ನಾಗರಿಕರು ಮತ್ತೆ ಮತದಾರರಾಗಲು ಕ್ಯೂನಲ್ಲಿ ನಿಲ್ಲುವಂತಹ ಹಾಸ್ಯಾಸ್ಪದ ಹಾಗೂ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು. ಈ ಅನ್ಯಾಯವನ್ನು ನಾಗರಿಕ ಸಮಾಜ ಸಹಿಸುವುದಿಲ್ಲ ಎಂದಿರುವ ಅವರು, ಸೆಪ್ಟೆಂಬರ್ 1 ರಂದು ನೊಂದ ಮತದಾರರೊಂದಿಗೆ ಬೆಂಗಳೂರಿನ ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
