ತಾತನಾದ ಸಂಭ್ರಮದಲ್ಲಿ ಡಿಕೆ ಶಿವಕುಮಾರ್: ಶುಭಾಶಯ ಕೋರಿದ ತೇಜಸ್ವಿ ಸೂರ್ಯ ಪೋಸ್ಟ್ ವೈರಲ್

ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾತನಾದ ಸಂತಸದ ಸುದ್ದಿ ರಾಜ್ಯದ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಹರಿದಾಡುತ್ತಿದೆ. ಅವರ ಪುತ್ರಿ ಐಶ್ವರ್ಯಾ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಹಿನ್ನೆಲೆಯಲ್ಲಿ ಶಿವಕುಮಾರ್ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ.

ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಈ ಸಂತಸದ ಘಟನೆ ನಡೆದಿದ್ದು, ತಾತನಾದ ಖುಷಿಯಲ್ಲಿ ಡಿ.ಕೆ. ಶಿವಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೊಮ್ಮಗುವನ್ನು ಮಡಿಲಲ್ಲಿ ಎತ್ತಿಕೊಂಡು ಸಂತೋಷಪಟ್ಟಿರುವುದು ತಿಳಿದುಬಂದಿದೆ.

ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ವಿಶೇಷವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನಾ ಸಂದೇಶ ಹಂಚಿಕೊಂಡಿದ್ದಾರೆ.

ತೇಜಸ್ವಿ ಸೂರ್ಯ ತಮ್ಮ ಪೋಸ್ಟ್‌ನಲ್ಲಿ, ಡಿ.ಕೆ. ಶಿವಕುಮಾರ್ ಅವರೊಂದಿಗೆ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ನಡೆದ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದನ್ನು ಉಲ್ಲೇಖಿಸಿ, ಆ ಸಂದರ್ಭದಲ್ಲೇ ಅವರಿಗೆ ಮನೆಯಿಂದ ಪದೇಪದೇ ಕರೆಗಳು ಬರುತ್ತಿದ್ದವು ಎಂದು ಹೇಳಿದ್ದಾರೆ. ವಿಚಾರಿಸಿದಾಗ, “ಇಂದು ನನ್ನ ಮಗಳ ಡೆಲಿವರಿ, ನಾನು ತಾತ ಆಗುತ್ತಿದ್ದೇನೆ” ಎಂದು ಶಿವಕುಮಾರ್ ತಿಳಿಸಿದ್ದಾರೆ ಎಂದು ಅವರು ಬರೆದಿದ್ದಾರೆ.

ಒಂದು ಕಡೆ ಕುಟುಂಬದ ಸಂತೋಷದ ಕ್ಷಣ ಇದ್ದರೂ, ಮತ್ತೊಂದು ಕಡೆ ಸಾರ್ವಜನಿಕ ಜವಾಬ್ದಾರಿಯನ್ನು ನಿಭಾಯಿಸುವುದರಲ್ಲಿ ಅವರು ತೊಡಗಿಸಿಕೊಂಡಿದ್ದರು ಎಂದು ತೇಜಸ್ವಿ ಸೂರ್ಯ ಪ್ರಶಂಸಿಸಿದ್ದಾರೆ. ಫ್ಲೈಓವರ್ ಉದ್ಘಾಟನೆ ಹಾಗೂ ಸ್ಕೈವಾಕ್ ಶಂಕುಸ್ಥಾಪನೆ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಶಿವಕುಮಾರ್ ಭಾಗವಹಿಸಿದ್ದನ್ನು ಅವರು ಉಲ್ಲೇಖಿಸಿದ್ದಾರೆ.

“ಸಾರ್ವಜನಿಕ ಜೀವನದಲ್ಲಿ ವೈಯಕ್ತಿಕ ಜೀವನವೇ ಮೊದಲ ಬಲಿಯಾಗುತ್ತದೆ ಎಂಬ ಮಾತಿನ ಅರ್ಥ ಇಂತಹ ಸಂದರ್ಭಗಳಲ್ಲಿ ಸ್ಪಷ್ಟವಾಗುತ್ತದೆ” ಎಂದು ಹೇಳಿರುವ ಅವರು, ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ಅವರ ಪುತ್ರಿ ಐಶ್ವರ್ಯಾ, ಮಗು ಹಾಗೂ ಕುಟುಂಬಕ್ಕೆ ಆಯುಷ್ಯ, ಆರೋಗ್ಯ ಮತ್ತು ಸಂತೋಷ ದೊರೆಯಲಿ ಎಂದು ಹಾರೈಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು