ಹೈದರಾಬಾದ್: ಇಲ್ಲಿನ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ಘರ್ಷಣೆ ಉಂಟಾಗಿದ್ದು ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ಘರ್ಷಣೆಯಾಗಿದ್ದು, ಆ ನಂತರ ವಿಶ್ವವಿದ್ಯಾಲಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆ ಈಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.ಇಲ್ಲಿ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿದ್ದ ವೇಳೆ ವಿದ್ಯಾರ್ಥಿಗಳ ಜೊತೆ ಪೊಲೀಸರು ನಡೆದುಕೊಂಡ ರೀತಿ ಆಕ್ರೋಶಕ್ಕೆ ಕಾರಣವಾಗಿದೆ.
ಹೈದರಾಬಾದ್ ವಿವಿ ಕ್ಯಾಂಪಸ್ ಗೆ ಹೊಂದಿಕೊಂಡಂತೆ ಇರುವ ಸುಮಾರು 400 ಎಕರೆ ಭೂಮಿಯನ್ನು ತೆಲಂಗಾಣ ಸರ್ಕಾರದ ಐಟಿ ಪಾರ್ಕ್ ಆಗಿ ಅಭಿವೃದ್ಧಿ ಮಾಡಲು ಮುಂದಾಗಿದ್ದು,ಇದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದರು. ಆದ್ರೆ ಇಂದು ಸ್ಥಳಕ್ಕೆ ಜೆಸಿಬಿ ಗಳು ಬರುವುದನ್ನು ಕಂಡ ವಿದ್ಯಾರ್ಥಿಗಳು ಅದನ್ನು ತಡೆದು ಪ್ರತಿಭಟಿಸಲು ಮುಂದಾಗಿದ್ದರು.ಪೊಲೀಸರು ವಿದ್ಯಾರ್ಥಿಗಳ ಕೂದಲನ್ನು ಹಿಡಿದು ಎಳೆದು ಥಳಿಸಿ ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂದು ಬಿಆರ್‌ಎಸ್ ಆರೋಪಿಸಿದೆ. ಕೆಲವು ವಿದ್ಯಾರ್ಥಿಗಳನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ.