ಮಧ್ಯಪ್ರದೇಶದ ಇಂದೋರ್ ನಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಜನಸಂದಣಿ ಇರುವ ರಸ್ತೆಯಲ್ಲಿ ಟ್ರಕ್ ಒಂದು ವೇಗವಾಗಿ ನುಗ್ಗಿದ ಪರಿಣಾಮ ಸುಮಾರು 15 ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಇಂದೋರ್ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಶಿಕ್ಷಕ್ ನಗರದಲ್ಲಿ ಅಂಕಿತ್ ಹೋಟೆಲ್ ಮತ್ತು ಗೀತಾಂಜಲಿ ಆಸ್ಪತ್ರೆ ನಡುವೆ ಸೋಮವಾರ ಸಂಜೆ ಈ ಭೀಕರ ಅಪಘಾತ ಸಂಭವಿಸಿದೆ.
ಜನಸಂದಣಿ ಜಾಗದಲ್ಲಿ ಏಕಾಏಕಿ ಟ್ರಕ್ ನುಗ್ಗಿದ ಪರಿಣಾಮ ಕ್ಷಣಾರ್ಧದಲ್ಲಿ ಎಲ್ಲಾ ಗಲಿಬಿಲಿ ಆಯಿತು. ಆ ಸಮಯದಲ್ಲಿ ಬೈಕೊಂದು ಟ್ರಕ್ ಅಡಿಯಲ್ಲಿ ಸಿಲುಕಿಕೊಂಡಿತು. ಟ್ರಕ್ ಬೈಕನ್ನ ಬಹಳ ದೂರದವರೆಗೆ ಎಳೆದೊಯ್ದಿತು, ಇದರಿಂದಾಗಿ ಬೈಕಿಗೆ ಬೆಂಕಿ ಹೊತ್ತಿಕೊಂಡಿತು ಮತ್ತು ಸ್ವಲ್ಪ ಸಮಯದಲ್ಲೇ ಟ್ರಕ್ ಕೂಡ ಬೆಂಕಿಗೆ ಆಹುತಿಯಾಯಿತು.
ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ, ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡ ಸ್ಥಳಕ್ಕೆ ತಲುಪಿ ಬೆಂಕಿಯನ್ನ ನಿಯಂತ್ರಿಸುವುದರ ಜೊತೆಗೆ, ಗಾಯಾಳುಗಳನ್ನ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಸ್ತುತ, ಪೊಲೀಸರು ಪ್ರದೇಶವನ್ನ ಸುತ್ತುವರೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ.
ಮಾಹಿತಿಯ ಪ್ರಕಾರ, ವೇಗವಾಗಿ ಬಂದ ಟ್ರಕ್ ನಿಯಂತ್ರಣ ತಪ್ಪಿ ಆಸ್ಪತ್ರೆಯ ಬಳಿ ಜನನಿಬಿಡ ಮಾರ್ಗದಲ್ಲಿ ಇ-ರಿಕ್ಷಾ ಸೇರಿದಂತೆ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ಟ್ರಕ್’ನ ಮುಂಭಾಗದಲ್ಲಿ ಸಿಲುಕಿಕೊಂಡು ಯುವಕನೊಬ್ಬ ಸಾವನ್ನಪ್ಪಿದ್ದಾನೆ ಮತ್ತು ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಾಗ ಆತ ಸುಟ್ಟುಹೋಗಿದ್ದಾನೆ. ನೆರೆದಿದ್ದ ಜನರು ಸುಟ್ಟ ದೇಹವನ್ನ ಟ್ರಕ್’ನಿಂದ ಬೇರ್ಪಡಿಸಿದ್ದಾರೆ. ಸಧ್ಯದ ಮಾಹಿತಿಯಂತೆ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.