ನಟ ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿಯ ಮೊಬೈಲ್‌ಗಳು ಹ್ಯಾಕ್ ಆಗಿದ್ದು, ಏನಾದರೂ ಸಂದೇಶ ಬಂದರೆ, ಅದನ್ನು ನಿರ್ಲಕ್ಷಿಸಿ ಎಂದು ಉಪೇಂದ್ರ ಮತ್ತು ಪ್ರಿಯಾಂಕಾ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಹ್ಯಾಕರ್ಸ್ ಸಂಚಿನಿಂದ ಈವರೆಗೆ ಸುಮಾರು ಒಂದೂವರೆಯಿಂದ ಎರಡು ಲಕ್ಷ ರೂಪಾಯಿ ಹಣ ಕಳೆದುಕೊಂಡ ಬಗ್ಗೆ ದಂಪತಿಗಳು ಹೇಳಿಕೊಂಡಿದ್ದಾರೆ.
”ಬೆಳಗ್ಗೆ ಪ್ರಿಯಾಂಕಾಗೆ ಒಂದು ನಂಬರ್‌ನಿಂದ ಫೋನ್ ಬಂತು. ನೀವು ಒಂದು ವಸ್ತುವನ್ನು ಆರ್ಡರ್ ಮಾಡಿದ್ದೀರಿ, ಅದನ್ನು ಡೆಲಿವರಿ ಮಾಡೋದಕ್ಕೆ ಅಡ್ರೆಸ್ ಸಿಕ್ತಾ ಇಲ್ಲ. ನಾವು ಹೇಳುವ ನಂಬರ್ ಅನ್ನು ಡಯಲ್ ಮಾಡಿ, ತಕ್ಷಣವೇ ಆರ್ಡರ್ ನಿಮಗೆ ಸಿಗಲಿದೆ ಎಂದು ಹೇಳಿದರು. ಆಗ ಪ್ರಿಯಾಂಕಾ ತಮ್ಮ ಫೋನ್‌ನಿಂದ ಡಯಲ್ ಮಾಡಿದರು. ಆದರೆ ಆಗಲಿಲ್ಲ. ಬಟ್ ಅಷ್ಟೊತ್ತಿಗೆ ಅವರ ಫೋನ್ ಹ್ಯಾಕ್ ಆಗಿದೆ. ಆನಂತರ ನನ್ನ ಫೋನ್‌ನಿಂದ ಡಯಲ್ ಮಾಡಿದ್ರು. ನನ್ನ ಫೋನ್ ಕೂಡ ಹ್ಯಾಕ್ ಆಯ್ತು” ಎಂದು ಉಪೇಂದ್ರ ಹೇಳಿದ್ದಾರೆ.
“ನನ್ನ ಫೋನ್ ಹ್ಯಾಕ್ ಆಗಿದೆ. ಯಾರಾದರೂ ನನ್ನ ಹೆಸರು ಹಾಕಿ, ದುಡ್ಡು ಕಳಿಸಿ ಎಂದರೆ, ದಯವಿಟ್ಟು ಯಾರೂ ಕೂಡ ದುಡ್ಡು ಕಳಿಸಬೇಡಿ. ನಾವೀಗ ಪೊಲೀಸರಿಗೆ ಈ ಬಗ್ಗೆ ದೂರು ನೀಡಲಿದ್ದೇವೆ” ಎಂದು ಪ್ರಿಯಾಂಕಾ ಉಪೇಂದ್ರ ತಮ್ಮ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.
”ನಮ್ಮ ಫೋನ್‌ಗಳು ಹ್ಯಾಕ್ ಆದಮೇಲೆ ನಮ್ಮ ಫೋನ್‌ನಿಂದ ದುಡ್ಡು ಕೊಡಿ ಎಂದು ಬೇರೆಯವರಿಗೆ ಮೇಸೆಜ್‌ಗಳು ಹೋಗುತ್ತಿವೆ. ಅವರು ಖಚಿತಪಡಿಸಿಕೊಳ್ಳಲು ನಮಗೆ ಫೋನ್ ಮಾಡಿದರೆ, ನಮಗೆ ಫೋನ್ ರೀಚ್ ಆಗ್ತಿಲ್ಲ. ಈಗಾಗಲೇ ನಮಗೆ ಗೊತ್ತಿರುವ ಹಾಗೇ ಮೂರ್ನಾಲ್ಕು ಮಂದಿ ದುಡ್ಡು ಹಾಕಿಬಿಟ್ಟಿದ್ದಾರೆ. ದಯವಿಟ್ಟು ಯಾರೂ ದುಡ್ಡು ಕಳಿಸಬೇಡಿ. ನನ್ನ ಮಗ ಏನೋ ಎಮರ್ಜೆನ್ಸಿ ಇರಬೇಕು ಎಂದು ದುಡ್ಡು ಹಾಕಿದ್ದಾನೆ. ಈವರೆಗೂ ಸುಮಾರು ಒಂದೂವರೆಯಿಂದ ಎರಡು ಲಕ್ಷ ರೂ. ಹಣ ಹೋಗಿದೆ” ಎಂದು ಉಪೇಂದ್ರ ಹೇಳಿದ್ದಾರೆ.