Friday, April 26, 2024

ಸತ್ಯ | ನ್ಯಾಯ |ಧರ್ಮ

ಮಹಿಷ ದಸರ ವಿರೋಧಿಸಿದ ಸಂಸದ ಪ್ರತಾಪ್ ಸಿಮ್ಮ ಅವರಿಗೆ ಧನ್ಯವಾದಗಳು…!!!?

ಳೆದ ಒಂದು ತಿಂಗಳಿಂದಲೂ ಸತತವಾಗಿ ಬಹಳ ಹಠಕ್ಕೆ ಬಿದ್ದಂತೆ ಮಹಿಷ ದಸರವನ್ನು ವಿರೋಧಿಸುತ್ತಲೇ ಬಂದಿರುವ ಮೈಸೂರು ಸಂಸದರಾದಂತಹ ಸನ್ಮಾನ್ಯ ಪ್ರತಾಪ್ ಸಿಂಹ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.

ಸನ್ಮಾನ್ಯರು ನಿನ್ನೆ ಅಂದರೆ ದಿನಾಂಕ 9-10-23ರಂದು ಮಹಿಷೂರಿನಲ್ಲಿ ಮತ್ತೊಮ್ಮೆ ಪತ್ರಿಕಾಗೋಷ್ಟಿ ಕರೆದು ವಿಪರೀತ ಟೆನ್ಶನ್ ಗೊಳಗಾದವರಂತೆ ಒಂದೇ ಉಸಿರಿನಲ್ಲಿ ಮತ್ತೊಮ್ಮೆ ತಮ್ಮ ವಿರೋಧವನ್ನು ಬಹಳ ಉಗ್ರವಾಗಿಯೇ ಪ್ರಕಟಿಸಿದ್ದಾರೆ!

ಹಿಂದಿನ ಅವರ ಪತ್ರಿಕಾಗೋಷ್ಟಿಗಳಲ್ಲಿ ತಾಳ್ಮೆಯಿರುತ್ತಿತ್ತು. ಆದರೆ ಇಂದಿನ ಪತ್ರಿಕಾಗೋಷ್ಟಿಯಲ್ಲಿ ಅವರು ಉಗ್ರನರಸಿಂಹನಂತಾಗಿದ್ದರು! ಹಾಗಾಗಿ ಅಸುರರ ವಿರುದ್ದ ಭಯಂಕರ ವಾಗ್ದಾಳಿಯನ್ನೇ ನಡೆಸಿದರು. ಇದನ್ನು ಕೇಳಿ ನಮ್ಮ ಅನೇಕ ಗೆಳೆಯರೂ ರೊಚ್ಚಿಗೆದ್ದಿದ್ದರು! ನಾನು ಯಾಕೆ ನಿಮಗಿಷ್ಟು ಕೋಪ ಎಂದು ನಮ್ಮ ಗೆಳೆಯರನ್ನು ಕೇಳಿದೆ. ಅದಕ್ಕವರು “ಇನ್ನೇನ್ ಸಾರ್.. ನಮ್ಮನ್ನ ಈ ತರ ಮಟ್ಟಹಾಕಬೇಕು ಅಂತಾವ್ನೆ. ನಾವು ಏನು ಅಂತ ಇವನಿಗೆ ತೋರಿಸದೆ ಬಿಡಕ್ಕಾಗ್ತದಾ ಸಾರ್ ” ಎಂದರು. ಆಗ ನಾನು ಅವರೊಬ್ಬ ಸಂಸದರು ಹಾಗೆಲ್ಲಾ ಏಕವಚನದಲ್ಲಿ ಮಾತಾಡಬಾರದು ಎಂದು ಸಮಾಧಾನ ಮಾಡಿ, ಸನ್ಮಾನ್ಯ ಸಂಸದರು ಉದ್ವೇಗದಲ್ಲಿ  ಮಾತಾಡುವಾಗ ಅವರದೇ ಮೆದುಳಿಂದ, ಅವರದೇ ಬಾಯಿಂದ, ಅವರದೇ ಹೃದಯದಿಂದ ಮತ್ತು ಅವರದೇ ಕರುಳಿನಿಂದ ಹೊರಬಿದ್ದ  ಕೆಲವು ಸತ್ಯಗಳನ್ನು ತಿಳಿಸಿದೆ , ಅನಲೈಸ್ ಮಾಡಿ ತಿಳಿಸಿದೆ. ಆಗ ವ್ಯಗ್ರಗೊಂಡಿದ್ದ ನಮ್ಮ ಅಸುರ ಗೆಳೆಯರು ಕೂಲಾದರು!

ಹಾಗೆ ನಾನು ಸನ್ಮಾನ್ಯ ಸಂಸದರ ಮಾತಿನಲ್ಲಿ ಕಂಡಂತಹ ಸತ್ಯಗಳೇನೆಂದರೆ; ಅವು ಈ ಕೆಳಗಿನಂತಿವೆ!

  1. ಸನ್ಮಾನ್ಯ ಸಂಸದರು ಮಹಿಷ ದಸರ ಮಾಡುವವರನ್ನು ಈಗಲೇ ಹೊಸಕಿಹಾಕಬೇಕು. ಮಟ್ಟಹಾಕಬೇಕು ಅಂದರು. ಹೌದಲ್ವಾ? ಯಾರಿಗಂದರು? ಭಾರತದ ಮೂಲನಿವಾಸಿ ಬಹುಜನರಿಗಂದರು. ಅಲ್ಲಿಗೆ ಅವರು ತಮಗೆ ದೇಶಾದ್ಯಂತ, ಕರ್ನಾಟಕ ರಾಜ್ಯಾದ್ಯಂತ ಬಿಜೆಪಿಗೆ ಓಟು ಹಾಕಿದ ದಲಿತ, ಪ್ರಗತಿಪರ, ಹಿಂದುಳಿದ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರೆಲ್ಲರನ್ನೂ  ಮಟ್ಟಹಾಕಬೇಕು ಬೆಳೆಯಲು ಬಿಡಬಾರದು ಎಂದರಲ್ಲವೇ!?

ಜೊತೆಗೆ ಬಿಜೆಪಿಯಲ್ಲಿರುವ ಅಸುರ ವಂಶದ ನಮ್ಮ ಮಹೇಶಣ್ಣ, ಶಿವರಾಮಣ್ಣ, ನಾರಾಯಣ ಸ್ವಾಮ್ಗಳು,   ಕಾರಜೋಳರು ಎಲ್ಲರ ಮುಖಕ್ಕೂ ಮಂಗಳಾರತಿ ಎತ್ತಿದ್ದಾರೆ. ಅವರೇ ಕೋಪ ರೋಷ ಪಡದೆ ಅಮಿಕಂಡಿರುವಾಗ ನಿಮಗ್ಯಾಕೆ ಕೋಪ?  ಅಂದೆ. ನಿಮಗಿಂತ್ಲೂ ಕೋಪ ಮಾಡ್ಕಬೇಕಾಗಿರೋರು ಅವರು “ಅರರೇ ನಮಗಿಂತ್ಲೂ ಚಿಕ್ಕಹುಡುಗ ನಮ್ ಜನನಾ ಈತರ ಮಟ್ಟ ಹಾಕಬೇಕು ಅಂತಾನಲ್ಲ ಅಂತ ಅಣ್ಣೋರಿಗೆ ತಾನೇ ಹಲ್ಲು ಹಸಿಟ್ಟಾಗಬೇಕು? ನೀವು ಸುಮ್ನಿರಪ್ಪ ಅಂದೆ.

2. ಸನ್ಮಾನ್ಯ ಸಿಮ್ಮರು ನಾವು ಈ ತರ ಗಲಭೆಗಳನ್ನು ಸೃಷ್ಟಿಸಿಯೇ ನಮ್ಮ ಪಕ್ಷ ಕಟ್ಟಿರೋದು, ಈತರ ಗಲಭೆ ಸೃಷ್ಟಿಸಿಯೇ ಅಧಿಕಾರಕ್ಕೆ ಬಂದಿರೋದು ಅಂತ ಎಷ್ಟು ಪ್ರಾಮಾಣಿಕವಾಗಿ ಹೇಳಿದ್ರು ಅಲ್ವಾ? ಇದಕ್ಕೆ ಅಭಿನಂದನೆ ಸಲ್ಲಿಸಬೇಕೋ ಬ್ಯಾಡ್ವೋ!?

ನಮ್ಮ ಜನರಿಗೆ ನಾವು ಬಡ್ಕೊಂಡು ಸಾಯ್ತಾ ಇದ್ವಿ. ಬಿಜೆಪಿಯವರು ಗಲಭೆ ಸೃಷ್ಟಿಸಿ ಗೆಲ್ತಾರೆ ಕಣ್ರಪ್ಪ. ಗೆಲ್ಲಕೋಸ್ಕರವೇ ಸುಮ್ ಸುಮ್ನೆ ಗಲಭೆ ಅಂತ ಎಷ್ಟು ಹೇಳಿದ್ರು ನಂಬ್ತಾ ಇರ್ಲಿಲ್ಲ. ನಮ್ಮ ಅಣ್ಣನೂ ಅಷ್ಟೇ ಹೇ ನಾವು ಅಂದುಕೊಂಡಂಗಿಲ್ಲ. ನಾವೆಲ್ಲ ಪೂರ್ವಾಗ್ರಹಕ್ಕೆ ಒಳಗಾಗಿ ಬಿಜೆಪಿಯವರನ್ನ ತಪ್ಪು ತಿಳ್ಕೊಂಡಿದ್ವಿ. ಬಟ್ ಬಿಜೆಪಿ ನಮಗೆ ಸ್ಪೇಸ್ ಕೊಡುತ್ತೆ ಅಂತಿದ್ರು. ಈಗ ಸನ್ಮಾನ್ಯ ಸಿಮ್ಮರೇ ಒಂದು ಸ್ಪಷ್ಟ ಚಿತ್ರಣ ಕೊಟ್ರು. ನಮ್ಮ ಜನ ಇನ್ನಾದರೂ ಅರಿತುಕೊಳ್ಳುತ್ತಾರೆ. ಅದಕ್ಕಾಗಿ ಸಿಮ್ಮರಿಗೆ ಧನ್ಯವಾದ.

3. ಸನ್ಮಾನ್ಯ ಸಿಮ್ಮರು ಮಹಿಷ ಅನ್ನೋ ಅಪದ್ದ, ಅಸಹ್ಯ, ಅಪಚಾರದ ಮಹಿಷ ದಸರ ನಡೆಯಲು ಬಿಡಲ್ಲ ಎಂದರು. ಅಂದರೆ ಅವರು ಭಾರತದ ಸಂವಿಧಾನ ಕೊಡಮಾಡುವ ಉಪಾಸನಾ ಸ್ವಾತಂತ್ರ್ಯವನ್ನೂ ಧಿಕ್ಕರಿಸಿ ತಾನು ಬಾಬಾಸಾಹೇಬರು ಬರೆದಿರುವ ಸಂವಿಧಾನದ ಆಶಯವನ್ನು ಧಿಕ್ಕರಿಸುತ್ತೇನೆ, ಮನುವಾದವನ್ನು ಎತ್ತಿಹಿಡಿಯುತ್ತೇನೆ ಎಂದಂತಾಯಿತಲ್ಲವೇ? ಅಲ್ಲಿಗೆ ನಾವು ಏನು ಪ್ರತಾಪ್ ಸಿಮ್ಮ ಎಂದರೆ ಒಂದು ಇದು ಅನ್ಕೊಂಡಿದ್ವೋ ಅದಲ್ಲ. ಅವರು ಕನಿಷ್ಟ ಸಂವಿಧಾನದ ಉಪಾಸನ ಸ್ವಾತಂತ್ರ್ಯ ವನ್ನೂ ಗೌರವಿಸುವ ಘನತೆ ಹೊಂದಿಲ್ಲ ಎಂಬುದನ್ನು ತಾವೇ ಸಾಬೀತು ಪಡಿಸಿದರು.

“ಯಾರೋ ನಾಲ್ಕು ಜನ ಮಹಿಷನಿಗೆ ಪುಷ್ಪಾರ್ಚನೆ ಮಾಡ್ತಿವಿ ಅಂತ ಬಂದ್ರೆ ಬಿಟ್ ಬಿಡ್ತಿವಾ ಹೊಸಕಿ ಹಾಕ್ತಿವಿ” ಎನ್ನುತ್ತಾ ಸಂವಿಧಾನ ಒಬ್ಬನಿಗಾಗಲಿ, ಒಂದು ಕೋಟಿ ಜನರಿಗಾಗಲಿ ಒಂದೇ ಎಂಬುದನ್ನೇ ತಿಳಿದಿಲ್ಲ ಎಂದು ಜಗತ್ತಿನ ಮುಂದೆ ತಾವೇ ಬೆತ್ತಲಾದರು-ಬೆತ್ತಲೆ ಜಗತ್ತಿನ ಸಿಮ್ಮರು. ಈ ಮೂಲಕ ನಮ್ಮ ಜನ ಅವರನ್ನು ನಾಯಕ ಎಂದು ನಂಬಿದ್ದನ್ನು ಅವರೇ ಒಡೆದು ಚೂರುಮಾಡಿದರು. ಅದಕ್ಕಾಗಿ ಅವರಿಗೆ ಧನ್ಯವಾದಗಳು..!!

4. ತಾಯಿ ಚಾಮುಂಡಿ ಸರ್ವಶಕ್ತೆ, ಕಷ್ಟ ನಷ್ಟಗಳನ್ನು ಪರಿಹರಿಸಬಲ್ಲ ಶಕ್ತಿ ಎಂದು ಜನರು  ದೇವಿಯನ್ನು     ನಂಬಿದ್ದಾರೆ. ಸನ್ಮಾನ್ಯ ಸಿಮ್ಮರಿಗೆ ಮಾತ್ರ ಅಂತಹ ನಂಬಿಕೆ ಇದ್ದಂತ್ತಿಲ್ಲ!..

“ತಾಯಿಯನ್ನು ಭಕ್ತರೆಲ್ಲರೂ ಕೂಡಿ ರಕ್ಷಿಸಬೇಕು” ಎನ್ನುವ ಮೂಲಕ ತಾಯಿ ಚಾಮುಂಡಿ ದೇವಿಯ ಶಕ್ತಿಯನ್ನು ಲೇವಡಿ ಮಾಡಿದ್ಧಾರೆ… ಅಣಕಿಸಿದ್ದಾರೆ…ಅವಮಾನಿಸಿದ್ದಾರೆ. ಅದಕ್ಕಾಗಿ ತಾಯಿ ಚಾಮುಂಡೇಶ್ವರಿಯೇ  ಸಿಮ್ಮರಿಗೆ ಶಾಪ ಹಾಕುತ್ತಾಳೆ! ತನ್ನ ದಡ್ಡತನದಿಂದ ತಾನೇ ತಾಯಿ ಚಾಮುಂಡೇಶ್ವರಿಯ ಶಾಪಕ್ಕೆ ಗುರಿಯಾಗಿಸಿ ನಮ್ಮನ್ನು ಸಂಘರ್ಷದಿಂದ ಪಾರು ಮಾಡಿದ್ದಕ್ಕೆ ಧನ್ಯವಾದಗಳು!!

 5.  ಮಹಿಷ ದಸರವನ್ನು ನಾವು ಲೋಕಲ್ ಆಗಿ ಆಚರಿಸಲು ನಿರ್ಧರಿಸಿದ್ದೆವು. ಅದನ್ನೂ ಜನಗಳಿಗೆಲ್ಲಾ ಸುದ್ದಿ ಮುಟ್ಟಿಸಿ ಕನಿಷ್ಟ ಎರಡು ಸಾವಿರ ಜನರನ್ನಾದರೂ ಸೇರಿಸಲು ಪರದಾಡುತ್ತಿದ್ದೆವು. ಆದರೆ ಸಿಮ್ಮರು ಮಹಿಷ ದಸರಕ್ಕೆ  ಪ್ರಚಾರದ ಮೇಲೆ ಪ್ರಚಾರ ಮಾಡುತ್ತಾ ಮಹಿಷ ದಸರವನ್ನು ಗ್ಲೋಬಲ್ ಲೆವಲ್ ಗೆ ವಿಸ್ತರಿಸಿದರು. ನಾಡಿನ ಎಲ್ಲಾ  ದಲಿತರನ್ನು ಒಗ್ಗೂಡಿಸಿ ಈಗ ಮಹಿಷ ದಸರಕ್ಕೆ ಸುಮಾರು 10 ಸಾವಿರ ಜನ ಬರುವಂತೆ ಮಾಡಿದರು!!!

ಅದಕ್ಕಾಗಿ ಧನ್ಯವಾದಗಳು ಸಿಮ್ಮ ಸಾರ್.

6. ಸಿಮ್ಮ ಸಾಹೇಬರು ಧಮ್ಕಿ ಹಾಕಿದ್ದು ನಮಗೆ ಅಂದ್ಕೊಂಡ್ರಾ? ನೋ ವೇ! ಚಾನ್ಸೇ ಇಲ್ಲ. ಧಮ್ಕಿ ಹಾಕ್ತಾ ಇರೋದು ಸರ್ಕಾಕ್ಕೆ….ಸಿದ್ದರಾಮಯ್ಯನವರ ಸರ್ಕಾರಕ್ಕೆ…ದಲಿತ ಉಸ್ತುವಾರಿ ಸಚಿವ ಎಚ್.ಮಹದೇವಪ್ಪನವರಿಗೆ…ಜಿಲ್ಲಾಡಳಿತಕ್ಕೆ ಮತ್ತು ಕಾನೂನು ಸುವ್ಯವಸ್ಥೆಯ ಪೊಲೀಸ್ ನವರಿಗೆ…

ಹಂಗಾಗಿ ಅವರು ನೋಡ್ಕೋತಾರೆ ಬಿಡಿ. ಪೊಲೀಸ್ ಬಳಿ ಅಲೆದಾಡುವ  ನಮ್ಮ ಕೆಲಸ ಸರಳಗೊಳಿಸಿದ ಸಿಮ್ಮರಿಗೆ ಧನ್ಯವಾದಗಳು.

7.  ಸಂಸದರನ್ನು ನಾವು ಮಾನವರಾಗಿ ಮಾತ್ರ ನೋಡಿದ್ದೆವು. ಬಹಳ ಜನಪ್ರೀತಿ ಇರಬಹುದು ಎಂದು ಭ್ರಮಿಸಿದ್ದೆವು. ಈಗ ಅವರೊಳಗಿರುವ ಮೃಗವನ್ನು ದರ್ಶಿಸಿ ನಮ್ಮ ತಪ್ಪು ಕಲ್ಪನೆಯನ್ನು ಹೋಗಲಾಡಿಸಿದರು. ಅದಕ್ಕಾಗಿ ಅವರಿಗೆ ಧನ್ಯವಾದಗಳು..!!

8. ಮಹಿಷ ದಸರ ಮಾಡುವವರ ತಲೆಯಲ್ಲಿ ಬುದ್ದಿಯಿಲ್ಲ. ನಾಲ್ಕುಜನ ಬಿಟ್ರೆ ಅಲ್ಲಿ ಯಾರೂ ಇಲ್ಲ. ಅವರನ್ನು ಮಟ್ಟಹಾಕದೆ ಬಿಡುವುದಿಲ್ಲ ಎನ್ನುವ ಮೂಲಕ ಸನ್ಮಾನ್ಯ ಸಿಮ್ಮರು ನಮ್ಮ ಬೆಂಬಲಿಗರನ್ನು ಲಕ್ಷಾಂತರಗೊಳಿಸಿದರು.ಮತ್ತು ಮುಂದೆ ಸಿಮ್ಮರನ್ನು ಮಟ್ಟಹಾಕಲೇಬೇಕು ಎಂದು ನಮ್ಮ ಜನ ಗಟ್ಟಿಯಾಗಿ ತೀರ್ಮಾನ ಮಾಡುವಂತೆ ಪ್ರೇರೇಪಿಸಿದರು. ಈ ಕಾರಣಕ್ಕಾದರೂ ನಾವಂತು ಸನ್ಮಾನ್ಯ ಸಿಮ್ಮ ಅವರೇನಿದಾರೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲೇಬೇಕು…!!

9. ನವರಾತ್ರಿಯಂತೆ ಒಂಬತ್ತನೆಯದಾಗಿ ಸಿಮ್ಮರು ಮಹಿಷ ದಸರ ಉದ್ಘಾಟಿಸಲಿರುವ ಮಹಿಳಾ ಚಿಂತಕಿ, ಮಾಜಿ ಸಚಿವರೂ ಹಿರಿಯರೂ ಆದ ಶ್ರೀಮತಿ ಬಿ.ಟಿ.ಲಲಿತಾನಾಯಕ್ ಅವರನ್ನು ವಯಸ್ಸು ಮತ್ತು ಹಿರಿತನ ಯಾವುದನ್ನೂ ಲೆಕ್ಕಿಸದೆ ಲೇವಡಿ ಮಾಡಿದರು. ಅವರು ಸಚಿವರಾಗಿದ್ದಾಗ ಅವರ ಮಗ ಕುಡಿದ ಮತ್ತಿನಲ್ಲಿ ಬಾಬಾಸಾಹೇಬರ ಪ್ರತಿಮೆಗೆ ಆಲ್ಕೋಹಾಲ್ ಸುರಿದಿದ್ದ ಪ್ರಕರಣ ನೆನಪಿಸಿ ಅಂತಹ ಮಗನ ತಾಯಿ ಮಹಿಷ ದಸರ ಉದ್ಘಾಟಿಸುವುದನ್ನು ಅಪಹಾಸ್ಯ ಮಾಡಿದರು. ಮಗ ಮಾಡಿದ ತಪ್ಪಿಗೆ ದಲಿತರು ಅಂದೇ ಹೋರಾಟಮಾಡಿ ಶಿಕ್ಷೆ ಕೊಡಿಸಿದರು. ತಾಯಿಯೂ ನೈತಿಕ ಹೊಣೆಹೊತ್ತು ಮಂತ್ರಿಪದವಿಗೆ ರಾಜೀನಾಮೆ ಕೊಟ್ಟರು ಮತ್ತು ಮಗ ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಿದರು ಅಲ್ಲಿಗೆ ಪ್ರಕರಣ ಮುಗಿಯಿತು.

ಆದರೂ ಅದನ್ನು ಸಿಮ್ಮ ಸಾಹೇಬರು ಈಗ ಉಲ್ಲೇಖಿಸಿ ಲೇವಡಿ ಮಾಡಿದರು!

ಆಗ ನಮಗೆ ಕಂಡಿದ್ದು ಇದೇ ಸಿಮ್ಮರು ತಮ್ಮ ಹೆಂಡತಿಯನ್ನೇ ತಂಗಿ ಎಂದು ಹೇಳಿ ಸರ್ಕಾರದಿಂದ ಫ್ರೀ ಸೈಟು ಹೊಡೆದಿದ್ದರೆಂಬುದು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ರವಿಬೆಳಗೆರೆಯವರು ಬರೆದಿದ್ದರು!

ಕಳೆದ ಚುನಾವಣಾ ಸಂದರ್ಭದಲ್ಲಿ ಇಬ್ಬಿಬ್ಬರು ಯುವತಿಯರ ಜೊತೆ ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಕ್ಕಿಬಿದ್ದಿದ್ದರು. ಅದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು!  ನಮಗೆ ಸನ್ಮಾನ್ಯರು ಲಲಿತಾನಾಯಕ್ ಅವರ 1996 ರ ಘಟನೆ ನೆನಪಿಸಿ, ತಮ್ಮ ಘಟನೆ ನೆನಪಿಗೂ ಅವಕಾಶ ಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು! ಅಂದಹಾಗೆ, ಇದೇ ಸಿಮ್ಮ, ಸಂಘಪರಿವಾರ, ಬಿಜೆಪಿ, ಮೋದಿ ಸಾಹೇಬರು ಎಲ್ಲರನ್ನೂ ಒಂದಲ್ಲ ಎರಡಲ್ಲ ಮೂರಲ್ಲ ಮೂವತ್ತು ವರ್ಷಗಳ ಕಾಲ ವಾಚಾಮಗೋಚರವಾಗಿ ಉಗಿದು ಉಪ್ಪುಹಾಕುತ್ತಿದ್ದ ನಮ್ಮ ಹುಲಿ ಮಹೇಶಣ್ಣ, ಪ್ರಸಾದಣ್ಣ, ನಾರಾಯಣ ಸ್ವಾಮಣ್ಣ, ಶಿವರಾಮಣ್ಣ ಎಲ್ಲರನ್ನೂ ನೀವು ಪಕ್ಷಕ್ಕೆ ಸೇರಿಸಿಕೊಂಡಾಗ ನಾವೇನು ನಿಮಗೆ ಬರ ಬಂದಿತ್ತಾ? ಉಗ್ತವರನ್ನೆ ಉಣ್ಣೋಕೆ ಸೇರಿಸಿಕೊಂಡಿದ್ದೀರಲ್ಲ ಅಂತ ಕೇಳಲಿಲ್ಲ. ಈಗ ನೆನಪಿಸಿದ್ದಕ್ಕೆ ಧನ್ಯವಾದಗಳು ಸಾಹೇಬ್ರೆ. ಇದೆಲ್ಲಾ ವಿತ್ ಡ್ಯೂ ರೆಸ್ಪೆಕ್ಟ್ ಸಾರ್…!!

ಹೀಗೆ ಒಂದೊಂದು ಪಾಸಿಟಿವ್ ಅಂತಕ್ಕಂತದ್ದೇನಿದೆ ಅವುಗಳನ್ನು ಎಳೆಎಳೆಯಾಗಿ ಎಳೆದು ಹೇಳಿದ ಮೇಲೆ ನಮ್ಮ ಹುಡುಗರ ಒಂದು ಇದೇನಿದೆ ಅದು ಅರ್ಥವಾಗಿ ತಣ್ಣಗಾದರು.

ಧನ್ಯವಾದಗಳು ಪ್ರತಾಪ್ ಸಿಮ್ಮಾಜಿ.

ಸಿಮ್ಮಾಜಿ ನಿಮ್ಮದು ಆದ್ರೂ ಸ್ವಲ್ಪ ಎಚ್ಚರ ನಿಮ್ ಪಕ್ಷದಲ್ಲಿ ನಮ್ಮ ಮಹೇಶಣ್ಣನಂತಹ ಮಹಿಷ ಕುಲದ ಹುಲಿಗಳಿವೆ. ಅಷ್ಟೇ ಆಮೇಲೆ!

ವಿತ್ ಡ್ಯೂ ರೆಸ್ಪೆಕ್ಟ್ ಮತ್ತೊಮ್ಮೆ ಧನ್ಯವಾದಗಳು. ಸಿಗೋಣ ಮಹಿಷ ದಸರ ದಿನ! ನೀವೂ ಚಾಮುಂಡಿ ಚಲೋ ಗೆ ಬಂದಿರ್ತೀರಲ್ಲ. ನಮ್ ಅಣ್ಣಂದಿರನ್ನು ಕರೆಯಲು ಹೋದೀರಿ ಜೋಕೆ!

ಡಾ.ಚಮರಂ

ಚಿತ್ರ ನಿರ್ದೇಶಕರು

ಇದನ್ನೂ ಓದಿ-ನೆನಪು | ಸೌಜನ್ಯ ನ್ಯಾಯ

Related Articles

ಇತ್ತೀಚಿನ ಸುದ್ದಿಗಳು