ನವದೆಹಲಿ: ರೈತರನ್ನು ಬಂಧಿಸಲು ದೆಹಲಿಯ ಕ್ರೀಡಾಂಗಣವನ್ನು ತಾತ್ಕಾಲಿಕ ಜೈಲಾಗಿ ಪರಿವರ್ತಿಸುವ ಕೇಂದ್ರದ ಪ್ರಸ್ತಾವನೆಯನ್ನು ಎಎಪಿ ಸರ್ಕಾರ ತಿರಸ್ಕರಿಸಿದೆ.
ಬವಾನಾದ ರಾಜೀವ್ ಗಾಂಧಿ ಕ್ರೀಡಾಂಗಣವನ್ನು ತಾತ್ಕಾಲಿಕ ಜೈಲಾಗಿ ಪರಿವರ್ತಿಸುವಂತೆ ಕೇಂದ್ರವು ಎಎಪಿ ಸರ್ಕಾರವನ್ನು ಕೇಳಿದೆ. ರೈತರ ಬೇಡಿಕೆಗಳು ನೈಜವಾಗಿದ್ದು, ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ನೀಡಿದೆ ಎಂದು ಹೇಳಿದೆ ಆಪ್ ಸರ್ಕಾರ ಹೇಳಿದೆ. ರೈತರನ್ನು ಬಂಧಿಸುವುದು ಸೂಕ್ತವಲ್ಲ ಎಂದು ದೆಹಲಿ ಗೃಹ ಸಚಿವ ಕೈಲಾಶ್ ಗೆಹ್ಲೋಟ್ ಕೇಂದ್ರ ಸರ್ಕಾರಕ್ಕೆ ಉತ್ತರಿಸಿದ್ದಾರೆ.
ರೈತರ ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆಗೆ ಆಹ್ವಾನಿಸಬೇಕು ಎಂದು ಗೆಹ್ಲೋಟ್ ಹೇಳಿದರು. ದೇಶದ ಅನ್ನದಾತರಾಗಿರುವ ರೈತರನ್ನು ಕೇಂದ್ರ ಬಂಧಿಸಿದೆ ಎಂದು ಆರೋಪಿಸಿದರು. ನಾವು ಕೇಂದ್ರ ಸರ್ಕಾರದ ಈ ತಪ್ಪು ನಿರ್ಧಾರದ ಭಾಗವಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ರೈತರಿಗೆ ಪಿಂಚಣಿ, ವಿಮಾ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ರೈತರು ದೆಹಲಿ ಚಲೋ ಕಾರ್ಯಕ್ರಮಕ್ಕೆ ಕರೆ ನೀಡಿರುವುದು ಗೊತ್ತಾಗಿದೆ. ರೈತಸಂಘದ ಮುಖಂಡರು ಕೇಂದ್ರದೊಂದಿಗೆ ನಡೆಸಿದ ಹಲವು ಸುತ್ತಿನ ಮಾತುಕತೆ ವಿಫಲವಾಗಿದೆ.