ಉದ್ಯೋಗಗಳಿಂದ ದೂರ ಇಡುವುದು ಮತ್ತು ಉದ್ಯೋಗಗಳಲ್ಲಿ ಸಂಖ್ಯೆ ಸೀಮಿತಗೊಳಿಸುವುದು ಎಲ್ಲ ರಾಜ್ಯಾಡಳಿತದಲ್ಲಿ ಸಾಮಾನ್ಯವಾಗಿತ್ತು. ಅದು ಜಾತಿ ಪ್ರಾಬಲ್ಯದ ಸ್ವಭಾವವೂ ಆಗಿತ್ತು. ಉದಾಹರಣೆಗೆ, ತಿರುವಾಂಕೂರು ತರಹದ ಹಿಂದೂ ಸಂಸ್ಥಾನದಲ್ಲಿ ಡಾ. ಪಲ್ಪು ಮತ್ತವರ ಹಿರಿಯ ಸಹೋದರ ವೇಲಾಯುಧನ್ ಅವರುಗಳಿಗೆ ಉದ್ಯೋಗ ನೀಡದೆ ಹೊರಗಿಡಲಾಗಿತ್ತು ಎಂಬುದು ಕೇರಳ ಚರಿತ್ರೆಯ ಭಾಗ. ಅಂದರೆ, ಜಾತಿಯಲ್ಲಿ ಕೆಳಗಿರುವವರನ್ನು ದೂರ ಇಡುವುದಕ್ಕಿಂದ, ಜಾತಿ ಶ್ರೇಣಿಯಲ್ಲಿ ಅತ್ಯಂತ ಮೇಲೆ ಇದ್ದು ಕೂಡ, ತನ್ನ ಚಿತ್ಪಾವನ ಪದವಿಯನ್ನೂ ಕೂಡ ನಿರಾಕರಿಸಲಾಗುವುದೇ ದಾಮೋದರನ ನೋವಿಗೆ ಕಾರಣ.
ದಾಮೋದರ್ ಹರಿ ಚಾಪೇಕರ್‌ಗೆ ಕೋರ್ಟ್ ಗಲ್ಲುಶಿಕ್ಷೆ ವಿಧಿಸಿತು. ಆತ ನೀಡಿದ ಮೆಲ್ಮನವಿಯನ್ನು ತಿರಸ್ಕರಿಸಿದ ಬೆನ್ನಿಗೆ ೧೮೯೮ ಏಪ್ರಿಲ್ ೧೮ರಂದು ಆತನನ್ನು ಗಲ್ಲಿಗೇರಿಸಲಾಯಿತು. ಕೈಯಲ್ಲಿ ಭಗವತ್ ಗೀತೆಯ ಪ್ರತಿ ಹಿಡಿದುಕೊಂಡು ಆತ ಮರಣ ಹೊಂದಿದ್ದ. ಹಿಂದೂ ಜನಜಾಗೃತಿ ಸಮಿತಿ ತರಹದ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಿರುವ ಜಾಲತಾಣಗಳಲ್ಲಿ ಆತನಿಗೆ ಭಗವತ್ ಗೀತೆಯ ಪ್ರತಿಯನ್ನು ತಿಲಕ್ ನೀಡಿದ್ದರು ಎಂದು ಹೇಳಲಾಗಿದೆ. ಆ ವೆಬ್‌ಸೈಟ್‌ನಲ್ಲಿ ಈ ರೀತಿಯಾಗಿ ಬರೆಯಲಾಗಿದೆ.
ʼಯರವಾಡ ಜೈಲಿನಲ್ಲಿ, ಗಲ್ಲು ಶಿಕ್ಷೆಗೆ ಗುರಿಯಾದವರ ಸೆಲ್ಲಿನಲ್ಲಿದ್ದ ಸಮಯದಲ್ಲಿ, ಅದೇ ಜೈಲಿನ ಇನ್ನೊಂದು ವಾರ್ಡಿನಲ್ಲಿ ತಿಲಕರನ್ನೂ ಬಂಧಿಸಿಡಲಾಗಿತ್ತು. ತಿಲಕರನ್ನು ಒಂದೇ ಒಂದು ಬಾರಿ ಭೇಟಿಯಾಗಲು ದಾಮೋದರ್ ಜೈಲ್ ಅಧಿಕಾರಿಗಳೊಂದಿಗೆ ಬೇಡಿಕೊಳ್ಳುತ್ತಿದ್ದು. ಕೊನೆಗೆ ಅನುಮತಿ ದೊರಕಿತು. ತಿಲಕರನ್ನ ಕಂಡ ದಾಮೋದರ್, ತನಗೆ ಒಂದು ಭಗವತ್ ಗೀತೆಯ ಪ್ರತಿ ಬೇಕೆಂದೂ, ತನ್ನ ಸಾವಿನ ನಂತರ ಹಿಂದೂ ಧಾರ್ಮಿಕ ವಿಧಿಗಳ ಪ್ರಕಾರ ತನ್ನ ಅಂತ್ಯಕರ್ಮಗಳನ್ನು ನಡೆಸಬೇಕೆಂದೂ ಕೇಳಿಕೊಂಡರು. ತಿಲಕ್ ಭಗವತ್ ಗೀತೆಯ ಪ್ರತಿಯೊಂದನ್ನು ಆತನಿಗೆ ನೀಡಿದರು ಮತ್ತು ಅದನ್ನು ಕೈಯಲ್ಲಿ ಹಿಡಿದುಕೊಂಡೇ ದಾಮೋದರ್ ಗಲ್ಲಗಂಬಕ್ಕೆ ನಡೆದರು.ʼ
ತಿಲಕ್ ಮತ್ತು ದಾಮೋದರ್ ಹರಿ ಚಾಪೇಕರ್ ನಡುವಿನ ಸಂಬಂಧ ಆಳವಾದದ್ದಾಗಿತ್ತು ಎಂದು ಹೇಳುವ ಹಿಂದುತ್ವ ವೆಬ್‌ಸೈಟುಗಳ ವಾದಕ್ಕೆ ಏನಾದರು ಐತಿಹಾಸಿಕ ಆಧಾರ ಇವೆಯೇ ಎಂಬುದರ ಬಗ್ಗೆ ದಾಖಲೆಗಳಿಲ್ಲ. ಅದೇ ಹೊತ್ತು ತಿಲಕ್ ಕಟ್ಟಿಕೊಟ್ಟ ನವ-ಬ್ರಾಹ್ಮನಿಸಮ್ಮಿನ ತೀವ್ರ ಉತ್ಪನ್ನಗಳಾಗಿ ತಮ್ಮ ಬದುಕನ್ನೇ ದಾಮೋದರ್ ಹರಿ ಚಾಪೇಕರ್ ಮತ್ತು ಸಹೋದರರು ಬದಲಾಯಿಸಿಕೊಂಡರು ಎಂಬುದನ್ನು ಗುರುತಿಸಬಹುದು. ರಾನ್ಡ್ ಪ್ಲೇಗ್ ನಿವಾರಣಾ ಕಾರ್ಯಾಚಣೆಯಲ್ಲಿ ತನ್ನ ಮನೆಯ ಮೇಲೆ ಯಾವ ರೀತಿಯ ಅತಿಕ್ರಮಗಳನ್ನೂ ನಡೆಸಿಲ್ಲವೆಂದು ದಾಮೋದರ್ ತನ್ನ ತಪ್ಪೊಪ್ಪಿಗೆಯಲ್ಲಿ ಹೇಳಿಕೊಳ್ಳುತ್ತಾನೆ. ಬ್ರಾಹ್ಮಣರ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಕೇಸರಿ ಮತ್ತಿತರ ಪತ್ರಿಕೆಗಳು ಮಾಡಿದ ಆರೋಪಗಳನ್ನು ನಂಬಿಕೊಂಡು ರಾನ್ಡ್‌ನನ್ನು ದಾಮೋದರ್ ಕೊಂದಿದ್ದ. ದಾಮೋದರನ ಮಾನಸಿಕ ಸ್ಥಿತಿ ತಿಳಿಯಲು ಆತನ ಆತ್ಮಕತೆಯ ಭಾಗಗಳು ಸಹಾಯ ಮಾಡುತ್ತವೆ.
ʼಇಂಗ್ಲೀಷ್ ವಿದ್ಯಾಭ್ಯಾಸದ ಪ್ರಭಾವ ಆಶ್ಚರ್ಯ ಪಡುವಷ್ಟು ದೊಡ್ಡದಾಗಿದೆ. ಒಬ್ಬ ಅದನ್ನು ಕಲಿಯಲು ಮುಂದಾದರೆ ಅಥವಾ ಒಂದು ಮಗು ಆ ಭಾಷೆಯ ಅಕ್ಷರಮಾಲೆಯ ಎರಡೋ ಮೂರೋ ಅಕ್ಷರಗಳನ್ನು ಬಾಯಿಪಾಠ ಕಲಿತು ಬಿಟ್ಟರೆ ಮರುಕ್ಷಣವೇ ಆತ ಹಿರಿಯರನ್ನು (ಇಂಗ್ಲೀಷ್ ಬಾರದ) ಮೂರ್ಖರಾಗಿ ಕಾಣುತ್ತಾನೆ ಮತ್ತು ತನ್ನ ಉತ್ತಮವೂ ಪ್ರಾಚೀನವೂ ಆದ ಧರ್ಮವನ್ನು ನಿಂದಿಸಲು ಶುರು ಮಾಡುತ್ತಾನೆ. ಇಂಗ್ಲೀಷ್ ವಿದ್ಯಾಭ್ಯಾಸದ ಬರಿಯ ವಾಸನೆ ಮಾತ್ರ ಇಂತಹ ಪ್ರಭಾವ ಬೀರುತ್ತದೆಯಾದರೆ ಅದರ ಪೂರ್ತಿ ರುಚಿ ಉಣ್ಣುವವರು ಆ ಬಾಟಲಿಯ ದಾಸರಾಗಿ ಹೋಗುತ್ತಾರೆ. ಆತ ಅಡಿಯಿಂದ ಮುಡಿವರೆಗೆ ಆಂಗ್ಲನಾಗಿ ಬದಲಾಗುತ್ತಾನೆ.ʼ
ತಿಲಕರನ್ನು ದಾಟಿ ಮುಂದೆ ಹೋಗುವ ನವ-ಸಂಪ್ರದಾಯವಾದಿಯಾಗಿ ದಾಮೋದರ್ ತನ್ನನ್ನು ತಾನು ಪರಿಚಯಿಸಿಕೊಂಡಿದ್ದ. ಇಂಗ್ಲೀಷ್ ಭಾಷೆ ಮತ್ತು ಇಂಗ್ಲೀಷ್ ವಿದ್ಯಾಭ್ಯಾಸವನ್ನು ತಮ್ಮ ಧರ್ಮವನ್ನು ನಾಶಗೊಳಿಸುವ ಮಂತ್ರವಾದಿಯಂತೆ ದಾಮೋದರ್ ಕಂಡಿದ್ದ. ತಮ್ಮ ಬ್ರಾಹ್ಮಣ ಪ್ರಜ್ಞೆಯನ್ನು ಸಂಪೂರ್ಣವಾಗಿ ನಾಶಪಡಿಸುವ ಮಂತ್ರವಾದವದು. ಆತ ಒಂದೇ ಸಮಯಕ್ಕೆ ಇಂಗ್ಲೀಷ್ ಬಗ್ಗೆ ಭಯ ಮತ್ತು ದ್ವೇಷವನ್ನು ತೋರ್ಪಡಿಸುತ್ತಾನೆ.

ಸೈನ್ಯದಲ್ಲಿ ಚಿತ್ಪಾವನರನ್ನು ಸೇರಿಸಿಕೊಳ್ಳುವುದಿಲ್ಲ ಎಂಬುದು ಸರಕಾರದ ತೀರ್ಮಾನವೆಂದು ಭಾವಿಸಿ ತಾನು ಸೈನ್ಯಕ್ಕೆ ಸೇರಲು ಅರ್ಜಿ ಹಾಕಿ ಅದನ್ನು ಸರಕಾರ ತಿರಸ್ಕರಿಸಿದ ವಿಷಯವನ್ನು ದಾಮೋದರ್ ತನ್ನ ಆತ್ಮಕತೆಯಲ್ಲಿ ಬರೆಯುತ್ತಾನೆ.
ʼಪ್ರಪಂಚದ ಯಾವ ಮೂಲೆಯಲ್ಲೂ, ಎಲ್ಲೇ ಹುಡುಕಿದರೂ, ಆಂಗ್ಲರಷ್ಟು ಕ್ರೂರವಾದ ಆಡಳಿತ ಪದ್ಧತಿ ಇಲ್ಲವೇ ಇಲ್ಲವೆಂಬುದು ಸ್ಪಷ್ಟವಾಗುತ್ತದೆ. ಕೈಯಲ್ಲಿ ಖಡ್ಗ ಹಿಡಿದು ಕುರಿಗಳಂತೆ ಮನುಷ್ಯರ ಕೊರಳನ್ನು ಕತ್ತರಿಸುತ್ತಿದ್ದ ಯವನ ರಾಜರುಗಳು ಇವರಿಗಿಂತ ಅದೆಷ್ಟೋ ಉತ್ತಮರಿದ್ದರು. ಆಂಗ್ಲರು ವಂಚಕರು. ಅವರ ತರಹದ ಇನ್ನೊಬ್ಬ ಶತ್ರು ಈ ಭೂಮಿಯ ಮೇಲೆ ಇಲ್ಲವೆಂದು ನಾನು ಸಂಶಯಾತೀತವಾಗಿ ಹೇಳಬಲ್ಲೆ. ಉಳಿದ ಜನರನ್ನು ಲವಲೇಶವೂ ಕರುಣೆಯಿಲ್ಲದೆ ನಾಶಗೊಳಿಸುವವರು. ಇಲ್ಲಿಯ ತನಕ ಭಾರತದಲ್ಲಿ ಹಲವು ಕ್ರೂರಿ ಯವನ ರಾಜರುಗಳು ಬಂದು ಹೋದರಾದರೂ ಹಿಂದೂಗಳನ್ನು ಕೆಲ ಉದ್ಯೋಗಗಳಿಂದ ಹೊರಗಿಡುವುದು ಮತ್ತು ಕೆಲ ಉದ್ಯೋಗಗಳಲ್ಲಿ ಅವರ ಸಂಖ್ಯೆಯನ್ನು ಸೀಮಿತಗೊಳಿಸುವುದು ಮೊದಲಾದ ನಿಯಮಗಳನ್ನು ತರಲು ಅವರು ಮುಂದಾಗಿರಲಿಲ್ಲ.ʼ
ದಾಮೋದರ್‌ಗೆ ಆಂಗ್ಲರೊಂದಿಗಿನ ಕಠಿಣ ವಿರೋಧಕ್ಕೆ ಕಾರಣ, ಅವರು ʼಭಾರತೀಯʼರ ಮೇಲೆ ನಡೆಸುತ್ತಿರುವ ಕ್ರೌರ್ಯ ಮತ್ತು ಅನೀತಿಗಳಲ್ಲ. ಬದಲಿಗೆ ಹಿಂದೂಗಳ ಮೇಲೆ ಅವರು ನಡೆಸುತ್ತಿರುವ ಕ್ರೌರ್ಯವೇ ಕಾರಣ. ಉದ್ಯೋಗಗಳಿಂದ ದೂರ ಇಡುವುದು ಮತ್ತು ಉದ್ಯೋಗಗಳಲ್ಲಿ ಸಂಖ್ಯೆ ಸೀಮಿತಗೊಳಿಸುವುದು ಎಲ್ಲ ರಾಜ್ಯಾಡಳಿತದಲ್ಲಿ ಸಾಮಾನ್ಯವಾಗಿತ್ತು. ಅದು ಜಾತಿ ಪ್ರಾಬಲ್ಯದ ಸ್ವಭಾವವೂ ಆಗಿತ್ತು. ಉದಾಹರಣೆಗೆ, ತಿರುವಾಂಕೂರು ತರಹದ ಹಿಂದೂ ಸಂಸ್ಥಾನದಲ್ಲಿ ಡಾ. ಪಲ್ಪು ಮತ್ತವರ ಹಿರಿಯ ಸಹೋದರ ವೇಲಾಯುಧನ್ ಅವರುಗಳಿಗೆ ಉದ್ಯೋಗ ನೀಡದೆ ಹೊರಗಿಡಲಾಗಿತ್ತು ಎಂಬುದು ಕೇರಳ ಚರಿತ್ರೆಯ ಭಾಗ. ಅಂದರೆ, ಜಾತಿಯಲ್ಲಿ ಕೆಳಗಿರುವವರನ್ನು ದೂರ ಇಡುವುದಕ್ಕಿಂದ, ಜಾತಿ ಶ್ರೇಣಿಯಲ್ಲಿ ಅತ್ಯಂತ ಮೇಲೆ ಇದ್ದು ಕೂಡ, ತನ್ನ ಚಿತ್ಪಾವನ ಪದವಿಯನ್ನೂ ಕೂಡ ನಿರಾಕರಿಸಲಾಗುವುದೇ ದಾಮೋದರನ ನೋವಿಗೆ ಕಾರಣ.
ದಾಮೋದರ್ ಹೇಳುವ ಘಟನೆ ಇಂತಿದೆ. ಭೂಸೇನೆಯಲ್ಲಿ ಸೇರಲು ದಾಮೋದರ್ ಆಗ್ರಹಿಸಿದನಾದರೂ ಬ್ರಾಹ್ಮಣನೆಂಬ ಕಾರಣಕ್ಕೆ ಸೇರಲಾಗಲಿಲ್ಲ. ಅದಕ್ಕೆ ಬ್ರಿಟಿಷ್ ಸೇನಾಧಿಕಾರಿಗಳು ಕೊಟ್ಟ ಕಾರಣ ಒಂದು ಬ್ರಾಹ್ಮಣ ರೆಜಿಮೆಂಟ್ ರಚಿಸಲು ಬೇಕಾದಷ್ಟು ಬ್ರಾಹ್ಮಣರು ಇಲ್ಲವೆಂದು. ಇದನ್ನು ಪ್ರತಿಭಟಿಸಿ ಶಿಮ್ಲಾದ ಕಮ್ಯಾಂಡರ್ ಇನ್ ಚೀಫ್‌ಗೆ ದಾಮೋದರ್ ಪತ್ರ ಬರೆದನಾದರೂ ಅದಕ್ಕೆ ಅನುಕೂಲಕರ ಪ್ರತಿಕ್ರಿಯೆ ಸಿಗಲಿಲ್ಲ. ನಂತರ ಒಂದು ರೆಜಿಮೆಂಟ್‌ಗೆ ಬೇಕಾದ ೪೦೦ ಜನ ಬ್ರಾಹ್ಮಣರನ್ನು ತಾನೇ ಸಂಘಟಿಸಿ ತರುತ್ತೇನೆಂದು ದಾಮೋದರ್ ಹರಿ ಚಾಪೇಕರ್ ತಿಳಿಸಿದನಾದರೂ ಅದನ್ನೂ ಅವರು ಸ್ವೀಕರಿಸಲಿಲ್ಲ.
ಅದರ ಮುಂದುವರಿಕೆಯಾಗಿ ಆರ್ಯಧರ್ಮ ಪ್ರತಿಬಂಧ್ ಮಂಡಳಿ ತರಹದ ಸಂಘವನ್ನು ದಾಮೋದರ್ ಕಟ್ಟಿಕೊಳ್ಳುವುದು. ತಮ್ಮ ಬಾಲಕೃಷ್ಣ, ಭುಸ್ಕುಟ್ಟೆ ಮತ್ತು ತಾನು ಸೇರಿಕೊಂಡು ಇದರ ಮುಂದಾಳುತ್ವ ವಹಿಸಿಕೊಂಡಿದ್ದೆವು ಎಂದು ದಾಮೋದರ್ ತನ್ನ ವಿಚಾರಣೆಯಲ್ಲಿ ಹೇಳಿಕೊಂಡಿದ್ದಾನೆ. ಸಂಘದ ಕಾರ್ಯಾಚರಣೆಯ ಕುರಿತು ದಾಮೋದರ್ ತನ್ನ ಆತ್ಮಕಥೆಯಲ್ಲಿ ಹೀಗೆ ವಿವರಿಸಿದ್ದಾನೆ.
ʼಕೆಳಗೆ ಹೇಳಿದ ದೈಹಿಕ ಚಟುವಟಿಕೆಗಳನ್ನು ನಾವು ಸಾಮಾನ್ಯವಾಗಿ ಅಭ್ಯಾಸ ಮಾಡುತ್ತಿದ್ದೆವು. ಕುಸ್ತಿ, ಖಡ್ಗಯುದ್ದ, ಕತ್ತಿವರಸೆ, ಲಾಠಿ ಬಳಸಿಕೊಂಡು ಮಾಡುವ ತಾಲೀಮು, ಎತ್ತರ ಜಿಗಿತ, ಉದ್ದ ಜಿಗಿತ, ಬಾಕ್ಸಿಂಗ್. ಸಮಯ ಸಂಜೆ ೪ ರಿಂದ ೬ ಗಂಟೆಯ ತನಕ. ಯೋಧರ ಧೀರ ಕೃತ್ಯಗಳನ್ನು ಒಳಗೊಂಡ ಚರಿತ್ರೆ ಪುಸ್ತಕಗಳನ್ನು ಒಟ್ಟುಗೂಡಿಸಿ ನಾವು ಒಂದು ಕಡೆ ಗ್ರಂಥಾಲಯ ಮಾಡಿಕೊಂಡೆವು. ಸಂಜೆ ಸಮಯದಲ್ಲಿ ನಾವು ಇಬ್ಬರಲ್ಲಿ ಒಬ್ಬರು ಆ ಪುಸ್ತಕಗಳ ಪಾರಾಯಣ ಮಾಡುತ್ತಿದ್ದೆವು. ಪುರಾತನ ಇತಿಹಾಸದ ಯಾವುದಾದರೂ ಭಾಗದಿಂದ ಗಂಡುಮಕ್ಕಳ ಮನಸ್ಸಲ್ಲಿ ಸ್ವಾಭಿಮಾನ ಮತ್ತು ಸ್ವಂತ ಧರ್ಮದ ಮೇಲೆ ಪ್ರೀತಿ ಮೂಡುವ ರೀತಿಯಲ್ಲಿ ನಾವು ಅದನ್ನು ಓದುತ್ತಿದ್ದೆವು. ಪಾರಾಯಣದ ನಡುವೆ ಯುದ್ಧದ ವಿವರಣೆಗಳು ಬರುವುದಾದರೆ; ಮೋರ್ಚೇ ಬಂಧಿ, ಖಾಂಡಕ್, ಗನಿಮೀಕವ, ಚಾಪ್ಪ ಮೊದಲಾದವು ಮತ್ತು ಆಯುಧಗಳ ಹೆಸರುಗಳು; ಅವುಗಳಿಗೆ ನಾವು ವಿವರಣೆಗಳನ್ನೂ ನೀಡುತ್ತಿದ್ದೆವು.ʼ
ದಾಮೋದರ್ ವಿಕ್ಟೋರಿಯಾ ಪ್ರತಿಮೆಯನ್ನು ವಿರೂಪಗೊಳಿಸಿದ ನಂತರ, ದಂಡಪಾಣಿ ಎಂಬ ಸುಳ್ಳು ಹೆಸರಿನಲ್ಲಿ ಥಾಣೆಯ ಪ್ರಾದೇಶಿಕ ಪತ್ರಿಕೆಯಾದ ಸೂರ್ಯೋದಯದಲ್ಲಿ ಒಂದು ಪತ್ರ ಪ್ರಕಟಿಸಿದ್ದ.
ʼನಾವು ದಂಡಪಾಣಿ ಎಂಬ ಹೆಸರಿನಲ್ಲಿ ಒಂದು ಸಂಘಟನೆ ಕಟ್ಟಿಕೊಂಡಿದ್ದೇವೆ. ನಮ್ಮ ಧರ್ಮಕ್ಕಾಗಿ ಸಾಯುವುದು ಮತ್ತು ಇತರರನ್ನು ಕೊಲ್ಲುವುದೇ ನಮ್ಮ ಪರಮ ಗುರಿ. ಸ್ವದೇಶಿಗಳು ಮತ್ತು ಯುರೋಪಿಯನ್ನರ ನಡುವೆ ತಾರತಮ್ಯ ತಂದ ಇಂಗ್ಲೆಂಡಿನ ವಿಕ್ಟೋರಿಯಾ ರಾಣಿಯ ಪ್ರತಿಮೆಯ ಮುಖಕ್ಕೆ ಮಸಿ ಬಳಿದಿರುವುದು ನಮ್ಮ ಮೊದಲ ಗೆಲುವು. ನಮ್ಮ ದಂಡಪಾಣಿ ಸಂಘಟನೆಯನ್ನು ಯಾರೂ ಕಡೆಗಣಿಸುವಂತಿಲ್ಲ. ಅಧಾರ್ಮಿಕತೆಯನ್ನು ಪ್ರೋತ್ಸಾಹಿಸುವ ಎಲ್ಲರೂ, ಅದು ರಾಣಿಯಾದರೂ ಸರಿ ಅದಕ್ಕಿಂತ ಮೇಲನವರಾದರೂ ಸರಿ, ಅವರು ನಮ್ಮ ಶತ್ರುಗಳು.ʼ
ದಾಮೋದರನ ಸಂಘಟನೆ ಅದೆಷ್ಟು ಕೋಮುವಾದಿಯಾಗಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ತಾವು ಆಯುಧ ಕೈಗೆತ್ತಿಕೊಂಡಿರುವುದು ಧರ್ಮವೆಂದು ಕರೆಯಬಹುದಾದ ಬ್ರಾಹ್ಮಣಿಸಮ್ಮನ್ನು ರಕ್ಷಿಸಲು ಎಂಬ ಸ್ಪಷ್ಟವಾದ ತಿಳುವಳಿಕೆ ಅವರಿಗಿತ್ತು. ಅದರ ಭಾಗವಾಗಿಯೇ ಜಾತ್ಯಾತೀತ ಪ್ರಗತಿಪರತೆಯ ಬೀಜಗಳನ್ನು ಬಿತ್ತುತ್ತಿದ್ದ ಸುಧಾರಕ್ ಪತ್ರಿಕೆಯ ಸಂಪಾದಕ ಪಟವರ್ಧನ್‌ರ ಮೇಲೆ ದಾಳಿ ಮಾಡುವುದು, ವಿಕ್ಟೋರಿಯಾ ಪ್ರತಿಮೆಯನ್ನು ಕುರೂಪಗೊಳಿಸುವುದು ಮತ್ತು ರಾನ್ಡ್‌ನನ್ನು ಕೊಲ್ಲುವುದು. ನಂತರದ ಕಾಲದಲ್ಲಿ ಭಗತ್ ಸಿಂಗ್ ಮತ್ತು ಸಂಗಾತಿಗಳು ನಡೆಸಿದ ಸ್ಯಾಂಡರ್ಸ್‌ನ ಹತ್ಯೆ ಮತ್ತು ಉದ್ಧಮ್ ಸಿಂಗ್ ನಡೆಸಿದ ಜನರಲ್ ಡಯರ್‌ನ ಹತ್ಯೆಗಳು ಈ ಪ್ರಕರಣಗಳಿಗಿಂತ ಬಹಳ ಭಿನ್ನವಾದವು ಎಂಬುದನ್ನು ನಾವಿಲ್ಲಿ ಅರ್ಥ ಮಾಡಿಕೊಳ್ಳಬೇಕು. ಸ್ವದೇಶಿಯರ ಮೇಲೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಂತಹ ಕ್ರೂರತೆಯನ್ನು ಮೆರೆದ ವ್ಯಕ್ತಿಯಾಗಿರಲಿಲ್ಲ ರಾನ್ಡ್. ಬ್ಯುಬೋನಿಕ್ ಪ್ಲೇಗ್ ತಡೆಗಟ್ಟಲು ಕ್ವಾರೆಂಟೈನ್ ನಿಯಮವನ್ನು ಕಟ್ಟುನಿಟ್ಟಾಗಿ ತಂದದ್ದು ಮಾತ್ರವೇ ರಾನ್ಡ್ ಮಾಡಿದ ಕೆಲಸ. ಜೊತೆಗೆ ಮನೆಯೊಳಗೆ ಚಿಕಿತ್ಸೆಯಿಲ್ಲದೆ ಸಾವಿನ ದಾರಿ ನೋಡುತ್ತಾ ಮಲಗಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ.
ರಾನ್ಡ್‌ನ ಕೊಲೆಯ ನಂತರ ೧೮೯೭ ಜೂನ್ ೨೪ ರಂದು ದಾಮೋದರ್ ಮತ್ತು ಬಾಲಕೃಷ್ಣ ಪುಣೆಗೆ ಬರುತ್ತಾರೆ. ಅವರ ಹಳೆಯ ಸಂಘಟನೆಯ ಸದಸ್ಯರಾಗಿದ್ದ ದ್ರಾವಿಡ್ ಸಹೋದರರು ನೀಡಿದ ಸುಳಿವಿನ ಆಧಾರದಲ್ಲಿ ದಾಮೋದರ್ ಬಂಧಿತನಾಗುವುದು ಇಲ್ಲಿಯೇ. ಬಾಲಕೃಷ್ಣ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ.
ಅಂದು ನಿಜಾಮನ ಆಡಳಿತದಲ್ಲಿದ್ದ ಹೈದರಾಬಾದ್ ಸಂಸ್ಥಾನದ ಇನ್ಸ್‌ಪೆಕ್ಟರ್ ಜನರಲ್ ಆಗಿದ್ದ ಸ್ಟೀಫನ್‌ಸನ್ ಬಾಲಕೃಷ್ಣನನ್ನು ಬಂಧಿಸಿದ ಕುರಿತು ನೀಡಿದ ವರದಿಯಲ್ಲಿ ಆ ಬಂಧನ ಹೇಗೆ ಸಾಧ್ಯವಾಯಿತು ಎಂಬುದರ ವಿವರಣೆಯಿದೆ. ಬಾಲಕೃಷ್ಣ ಸಾತ್ಪುರ ಬೆಟ್ಟದ ಸಾಲಿನಲ್ಲಿ ಯೇರ್ಕಳ ದರೋಡೆಕೋರರೊಂದಿಗೆ ಇದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ದೊರಕುತ್ತದೆ. ಸ್ಟೀಫನ್‌ಸನ್ ಬಹಳ ಕಷ್ಟಪಟ್ಟು ಸಾತ್ಪುರ ಬೆಟ್ಟ ಸಾಲಿನಲ್ಲಿ ಬಾಲಕೃಷ್ಣ ಇದ್ದ ಜಾಗವನ್ನು ಕಂಡುಹಿಡಿಯುತ್ತಾನೆ. ಆದರೆ, ಅಲ್ಲಿನ ಭೌಗೋಳಿಕ ಪರಿಸ್ಥಿತಿಯಲ್ಲಿ ಪೊಲೀಸರನ್ನು ಬಳಸಿಕೊಂಡು ಆತನನ್ನು ಬಂಧಿಸುವುದು ಅಸಾಧ್ಯವಾಗಿತ್ತು. ಯೇರ್ಕಳ ತಂಡದಿಂದ ಯಾರನ್ನಾದರು ಬುಟ್ಟಿಗೆ ಹಾಕಿಕೊಂಡರೆ ಮಾತ್ರವೇ ಬಾಲಕೃಷ್ಣನನ್ನು ಹಿಡಿಯಬಹುದು ಎಂಬುದು ಆತನಿಗೆ ಮನದಟ್ಟಾಗುತ್ತದೆ. ನಂತರ ಸ್ಟೀಫನ್‌ಸನ್ ಮಾಡಿದ ಮೊದಲ ಕೆಲಸವೆಂದರೆ ಆ ತಂಡದೊಂದಿಗೆ ಸಂಬಂಧವಿರುವ ಜನರನ್ನು ಕಂಡು ಹಿಡಿಯುವುದು. ಅವರನ್ನು ಬಳಸಿಕೊಂಡು ಸಂಘವನ್ನು ಇಕ್ಕಟ್ಟಿಗೆ ಸಿಲುಕಿಸಿ ಆ ಮೂಲಕ ಬಾಲಕೃಷ್ಣನನ್ನು ಹಿಡಿಯುವ ಒಂದು ಯೋಜನೆಯನ್ನು ಸಿದ್ಧಗೊಳಿಸಿದ. ತನ್ನ ಯೋಜನೆ ಫಲ ಕಂಡರೆ ೬೦೦ ರೂಪಾಯಿ ಇನಾಂ ಕೊಡುವುದಾಗಿಯೂ ಸ್ಟೀಫನ್‌ಸನ್ ವಾಗ್ದಾನ ಮಾಡಿದ.
ಆ ಯೋಜನೆಯಂತೆ, ಪೊಲೀಸರಿಗೆ ಬಾಲಕೃಷ್ಣ ಇರುವ ಜಾಗ ತಿಳಿದಿದೆಯೆಂದು ಯೇರ್ಕಳ ತಂಡದ ನಾಯಕ ಬಾಲಕೃಷ್ಣನಿಗೆ ತಿಳಿಸುತ್ತಾನೆ. ರಾತ್ರಿ ಹೊತ್ತು ದಕ್ಷಿಣ ಮರಾಠ ರೈಲ್ವೇಯ ಗೋಡಕ್ ಸ್ಟೇಷನ್ ಮೂಲಕ ಗೋವಾಗೆ ಪರಾರಿಯಾಗುವುದು ಒಳಿತೆಂದೂ ಹೇಳುತ್ತಾನೆ. ಮೂವರು ದರೋಡೆಕೋರರ ಕಾವಲಿನಲ್ಲಿ ಬಾಲಕೃಷ್ಣ ಆ ರಾತ್ರಿ ರೈಲ್ವೇ ಸ್ಟೇಷನ್ನಿಗೆ ಹೊರಡುತ್ತಾನೆ. ದಾರಿಯಲ್ಲಿ ಮಫ್ತಿಯಲ್ಲಿದ್ದ ಪೊಲೀಸರಿಗೆ ಕಾವಲಿಗೆ ಬಂದಿದ್ದ ದರೋಡೆಕೋರರು ಬಾಲಕೃಷ್ಣನ ಯಾತ್ರೆಯ ಮಾಹಿತಿಯನ್ನು ನೀಡುತ್ತಾರೆ. ಯಾತ್ರೆಯ ನಡುವೆ ಸಿಗುವ ಪ್ಲೇಗ್ ಕ್ಯಾಂಪಿನಿಂದ ಮುಂದಕ್ಕೆ ಹೋಗಬೇಕಾದರೆ ಪಾಸ್ ಬೇಕಾಗಿತ್ತು. ಅಲ್ಲಿ ಡಾಕ್ಟರ್ ವೇಷದಲ್ಲಿ ಸ್ಟೀಫನ್‌ಸನ್ ಕಾಯುತ್ತಿದ್ದ. ಪಾಸಿಗಾಗಿ ಬಂದ ಬಾಲಕೃಷ್ಣನನ್ನು ಆ ಕೂಡಲೆ ಬಂಧಿಸಿದ. ಬಾಲಕೃಷ್ಣನ ಬಗ್ಗೆ ಮಾಹಿತಿ ನೀಡಿದ ಮತ್ತು ಬಂಧನಕ್ಕೆ ಸಹಕರಿಸಿದ ಯಾರ ಬಗ್ಗೆಯೂ ವರದಿಯಲ್ಲಿ ದಾಖಲಾಗದ ಹಾಗೆ ಸ್ಟೀಫನ್‌ಸನ್ ನೋಡಿಕೊಂಡ. ದಾಮೋದರ್‌ನನ್ನು ಬಂಧಿಸಲು ಸಹಕರಿಸಿದ ದ್ರಾವಿಡ್ ಸಹೋದರರಿಗೆ ಆದ ದುರ್ಗತಿ ಅದಕ್ಕೆ ಕಾರಣವಾಗಿತ್ತು.
ಏನಾಗಿತ್ತು ಆ ದುರ್ಗತಿ? ಪುಣೆಯ ಮ್ಯಾಜಿಸ್ಟ್ರೇಟ್ ಆಗಿದ್ದ ಡಬ್ಯೂ.ಬಿ. ಶೆಪರ್ಡ್ ಬಾಂಬೆ ಕೌನ್ಸಿಲ್ ಮೆಂಬರಾಗಿದ್ದ ಒಲಿವೆಂಟಿಗೆ ೧೮೯೯ ಫೆಬ್ರವರಿ ೧೦ ರಂದು ಬರೆದ ಪತ್ರದ ಸಾರಾಂಶ ಅದನ್ನು ವಿವರಿಸುತ್ತದೆ. ೧೮೯೯ ಫೆಬ್ರವರಿ ೯ ರಂದು ದ್ರಾವಿಡ್ ಸಹೋದರರು ವಾಸವಿದ್ದ ಮನೆಗೆ ಕೆಲವು ಆಗಂತುಕರು ಬ್ರೆವಿನ್ ಕೆಳಗೆ ಕೆಲಸ ಮಾಡುವ ಅಧಿಕಾರಿಗಳು ಎಂದು ಹೇಳಿಕೊಂಡು ಬರುತ್ತಾರೆ. ಗಣೇಶ್ ಶಂಕರ್ ದ್ರಾವಿಡ್ ಮತ್ತು ಸಹೋದರ ರಾಮಚಂದ್ರ ಶಂಕರ್ ದ್ರಾವಿಡ್ ಇಬ್ಬರನ್ನೂ ಮನೆಯಿಂದ ಹೊರಗೆ ಕರೆತರುತ್ತಾರೆ. ಹೊರಗೆ ಕಾಯುತ್ತಿದ್ದ ಮೂವರಲ್ಲಿ ಮುಖ ಮರೆಸಿಕೊಂಡಿದ್ದ ಇಬ್ಬರು ಅವರ ಮೇಲೆ ಗುಂಡಿನ ದಾಳಿ ನಡೆಸುತ್ತಾರೆ. ಆಸ್ಪತ್ರೆಗೆ ದಾಖಲಿಸಿದರಾದರೂ ಅವರಿಬ್ಬರೂ ಬದುಕುಳಿಯಲಿಲ್ಲ. ಅದರ ಹಿಂದೆ ಇದ್ದವರು ದಾಮೋದರ್ ಹರಿ ಚಾಪೇಕರ್ ಮತ್ತು ಬಾಲಕೃಷ್ಣ ಹರಿ ಚಾಪೇಕರರ ತಮ್ಮ ವಾಸುದೇವ್ ಹರಿ ಚಾಪೇಕರ್ ಮತ್ತು ಆತನ ಗೆಳೆಯರಾದ ಮಹಾದೇವ್ ರಾಣಡೆ ಮತ್ತು ವಿಷ್ಣು ಸಾಠೆ ಅವರುಗಳಾಗಿದ್ದರು ಎಂದು ಸಾಬೀತಾಗಿತ್ತು.
ಬಾಲಕೃಷ್ಣ ಹರಿ ಚಾಪೇಕರ್ ಮತ್ತು ವಾಸುದೇವ್ ಹರಿ ಚಾಪೇಕರ್ ಇಬ್ಬರ ವಿಚಾರಣೆಗಳೂ ಸರಿಸುಮಾರು ಒಂದೇ ಸಮಯದಲ್ಲಿ ನಡೆದಿತ್ತು. ವಾಸುದೇವ್ ಹರಿ ಚಾಪೇಕರ್ ಮತ್ತು ಮಹಾದೇವ್ ರಾಣಡೆ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದರಿಂದ ಸೆಷನ್ಸ್ ಕೋರ್ಟ್ ಅವರಿಗೆ ಗಲ್ಲುಶಿಕ್ಷೆ ವಿಧಿಸಿತು. ಆದರೆ ಪ್ರಾಯದ ಆಧಾರದಲ್ಲಿ ವಿಷ್ಣು ಸಾಠೆಗೆ ಐದು ವರ್ಷಗಳ ಕಠಿಣ ಸಜೆ ವಿಧಿಸಿತು.
ಆದರೆ ೧೮೯೯ ಫೆಬ್ರವರಿ ೧೦ ರಂದು ಅವರು ನೀಡಿದ ತಪ್ಪೊಪ್ಪಿಗೆಯಲ್ಲಿ ರಾನ್ಡ್ ಮತ್ತು ಅಯರ್ಸ್ಟ್ ಅವರುಗಳ ಕೊಲೆಯ ಹೊಣೆಯನ್ನು ವಾಸುದೇವ್ ಹರಿ ಚಾಪೇಕರ್ ಮತ್ತು ಮಹಾದೇವ್ ರಾಣಡೆ ಒಟ್ಟಿಗೆ ಒಪ್ಪಿಕೊಳ್ಳುತ್ತಾರೆ. ಬಾಲಕೃಷ್ಣ ಹರಿ ಚಾಪೇಕರ್ ಗೂಢಾಲೋಚನೆಯಲ್ಲಿ ಪಾಲ್ಗೊಂಡಿದ್ದರೂ ಕೊಲೆಯನ್ನು ಮಾಡಿದವರು ನಾವಿಬ್ಬರು ಎಂದು ಅವರು ತಮ್ಮ ತಪ್ಪೊಪ್ಪಿಗೆಯಲ್ಲಿ ದಾಖಲಿಸುತ್ತಾರೆ. ಅದಕ್ಕೂ ಮೊದಲು ೧೮೯೯ ಜನವರಿ ೨೮ ರಂದು ಬಾಲಕೃಷ್ಣ ನೀಡಿದ ತಪ್ಪೊಪ್ಪಿಗೆಯಲ್ಲಿ ಅಯರ್ಸ್ಟ್‌ನ ಕೊಲೆಯನ್ನು ಆತನೇ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಎಲ್ಲ ಸಾಕ್ಷಿಗಳನ್ನು ಪರಿಗಣಿಸಿ ೧೮೯೯ ಮಾರ್ಚ್ ೮ ರಂದು ರಾನ್ಡ್ ಮತ್ತು ಅಯರ್ಸ್ಟ್ ಕೊಲೆಯ ತೀರ್ಪನ್ನು ಕೋರ್ಟ್ ಒಮ್ಮತದಿಂದ ಘೋಷಿಸಿತು. ವಾಸುದೇವ್ ಹರಿ ಚಾಪೇಕರ್, ಮಹಾದೇವ್ ವಿನಾಯಕ್ ರಾಣಡೆ ಮತ್ತು ಬಾಲಕೃಷ್ಣ ಹರಿ ಚಾಪೇಕರ್ ಅವರುಗಳನ್ನು ಸರ್ ವಾಲ್ಟರ್ ರಾನ್ಡ್ ಮತ್ತು ಲೆಫ್ಟಿನೆಂಟ್ ಚಾರ್ಲ್ಸ್ ಎಗರ್ಟನ್ ಅಯರ್ಸ್ಟ್ ಅವರುಗಳ ಕೊಲೆಯ ಅಪರಾಧಿಗಳಾಗಿ ಘೋಷಿಸಿ, ಅವರಿಗೆ ಶಿಕ್ಷೆಯಾಗಿ ʼಮರಣದ ತನಕ ಗಲ್ಲುಶಿಕ್ಷೆʼ ವಿಧಿಸುತ್ತದೆ. ಮುಂದುವರಿದು ೧೮೯೯ ಮಾರ್ಚ್ ೮ ರಂದು ವಾಸುದೇವ್ ಹರಿ ಚಾಪೇಕರ್‌ನನ್ನು, ೧೦ ರಂದು ಮಹಾದೇವ್ ರಾಣಡೆಯನ್ನು ಮತ್ತು ೧೨ ರಂದು ಬಾಲಕೃಷ್ಣ ಹರಿ ಚಾಪೇಕರ್‌ನನ್ನು ಗಲ್ಲಿಗೇರಿಸಲಾಗುತ್ತದೆ.
ಗಲ್ಲಿಗೇರುವಾಗ ದಾಮೋದರನಿಗೆ ೨೭ ವರ್ಷ, ಬಾಲಕೃಷ್ಣನಿಗೆ ೨೪ ವರ್ಷ, ವಾಸುದೇವನಿಗೆ ೧೯ ವರ್ಷ ಮತ್ತು ಮಹಾದೇವ್ ರಾಣಡೆಗೆ ೨೦ ವರ್ಷ ಪ್ರಾಯ. ಈ ನಾಲ್ಕು ಚಿತ್ಪಾವನ ಬ್ರಾಹ್ಮಣರ ಗಲ್ಲು ಶಿಕ್ಷೆ ಬಾಂಬೆ ಪ್ರೆಸಿಡೆನ್ಸಿಯಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿತು. ಅವರ ಧೀರತನ ಮತ್ತು ಭಗವತ್ ಗೀತೆಯನ್ನು ಕೈಯಲ್ಲಿ ಹಿಡಿದುಕೊಂಡು ಗಲ್ಲಗಂಬಕ್ಕೆ ನಡೆದ ಅವರ ಯಾತ್ರೆ ನವ-ಸಂಪ್ರದಾಯವಾದಿ ಬ್ರಾಹ್ಮಣರಿಗೆ ರೋಮಾಂಚನ ನೀಡಿತು. ಬಾಲಕೃಷ್ಣನಿಗೆ ಅಡಗುದಾಣದ ವ್ಯವಸ್ಥೆ ಮಾಡಿಕೊಟ್ಟದ್ದು ತಿಲಕ್ ಎಂಬ ವದಂತಿಗಳೂ ಎಲ್ಲೆಡೆ ಹಬ್ಬಿದವು. ಅದೇ ಸಮಯದಲ್ಲಿ ತಿಲಕ್ ಕೂಡ ರಾನ್ಡ್ ಕೊಲೆಯಾಗುವ ಮೊದಲು ಕೇಸರಿಯಲ್ಲಿ ಪ್ರಕಟಿಸಿದ್ದ ಒಂದು ಲೇಖನದ ಹಿನ್ನೆಲೆಯಲ್ಲಿ ಬಂಧಿತರಾಗಿದ್ದರು. ಅದಕ್ಕಾಗಿ ಕೆಲವು ಕಾಲ ಜೈಲುಶಿಕ್ಷೆಯನ್ನೂ ಅನುಭವಿಸಿದರು. ಅದರ ನಂತರ ತಿಲಕ್ ಕೇಸರಿಗೆ ಮರಳಿ ಬಂದಾಗ ಅದು ಅವರು ಪ್ರತಿನಿಧಿಸುತ್ತಿದ್ದ ನವ-ಬ್ರಾಹ್ಮಣಿಸಮ್ಮಿಗೆ ದೊಡ್ಡ ಮಟ್ಟದ ಜಾಗೃತಿ ನೀಡಿತು. ಅಷ್ಟೇ ಅಲ್ಲ, ರಾಷ್ಟ್ರೀಯತೆ ಮತ್ತು ನವ-ಬ್ರಾಹ್ಮಣಿಸಂ ನಡುವಿನ ಗಟ್ಟಿಯಾದ ಒಂದು ಹೊಸ ಸಮೀಕರಣ ಹುಟ್ಟುವ ಮುಹೂರ್ತವಾಗಿಯೂ ಅದು ಬದಲಾಯಿತು.
ಮೂಲ ಮಲಯಾಳಂ: ಪಿ. ಎನ್. ಗೋಪಿಕೃಷ್ಣನ್
ಕನ್ನಡಕ್ಕೆ: ಸುನೈಫ್