Home ಅಂಕಣ ಹಿಂದುತ್ವ ರಾಜಕಾರಣದ ಕಥೆ – 6 : ಸ್ವಾತಂತ್ರ್ಯ ಹೋರಾಟದ ದುರಭಿಮಾನಿ ಕೊ*ಲೆಗಳು

ಹಿಂದುತ್ವ ರಾಜಕಾರಣದ ಕಥೆ – 6 : ಸ್ವಾತಂತ್ರ್ಯ ಹೋರಾಟದ ದುರಭಿಮಾನಿ ಕೊ*ಲೆಗಳು

0

ರಾನ್ಡ್ ಮತ್ತು ಅಯೆರ್ಸ್ಟ್‌ನ ಕೊಲೆಗಳನ್ನು ಸಾಮಾನ್ಯವಾಗಿ ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿಯೇ ಪರಿಗಣಿಸಲಾಗುತ್ತದೆ. ಅದು ಬ್ರಿಟಿಷ್‌ ವಿರೋಧದ ಕ್ರಿಯೆ ಆಗಿದ್ದರೂ, ಅದಕ್ಕಿಂತ ಮಿಗಿಲಾಗಿ ಬ್ರಾಹ್ಮಣ ಅಭಿಮಾನವನ್ನು ಸಂರಕ್ಷಿಸುವ ಶ್ರಮವೂ ಆಗಿತ್ತೆಂಬುದನ್ನು ಈ ಹೇಳಿಕೆ ನಿಸ್ಸಂಶಯವಾಗಿ ಸಾಬೀತು ಪಡಿಸುತ್ತದೆ. ಪ್ಲೇಗ್‌ ವೈರಸ್‌ ಜೊತೆಗಿನ ಹೋರಾಟವನ್ನು ಅವರು ಯಾವ ರೀತಿಯಲ್ಲೂ ಯಥಾವತ್ತಾಗಿ ಕಾಣಲೇ ಇಲ್ಲ. ಬದಲಿಗೆ ಬ್ರಾಹ್ಮಣರ ಜೀವನ ಪದ್ದತಿಯ ಮೇಲೆ ಮ್ಲೇಚ್ಛರ ಆಕ್ರಮಣವಾಗಿಯೇ ಅವರು ಅದನ್ನು ಕಂಡರು. ಆದ್ದರಿಂದಲೇ ರಾನ್ಡ್‌ ಮತ್ತು ಅಯೆರ್ಸ್ಟ್‌ನ ಹತ್ಯೆಗಳು ದುರಭಿಮಾನದ ಕೊಲೆಗಳಾಗಿದ್ದವು. ಇದನ್ನು ಇನ್ನಷ್ಟು ಅರ್ಥಮಾಡಿಕೊಳ್ಳಬೇಕೆಂದರೆ ಚಾಪೇಕರ್‌ ಸಹೋದರರ ಕುರಿತು ಇನ್ನೂ ಕೆಲವು ಮಾಹಿತಿಗಳನ್ನು ನಾವು ತಿಳಿದುಕೊಳ್ಳಬೇಕು.

ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ (೧೮೯೬) ಬ್ಯುಬೋನಿಕ್‌ ಪ್ಲೇಗಿನ ಕಗ್ಗತ್ತಲ ಕಾಲ ಬಾಂಬೆ ಪ್ರೆಸಿಡೆನ್ಸಿಯಲ್ಲಿ ತಾಂಡವಾಡಿದ ಇತಿಹಾಸವನ್ನು ನಾವು ಈಗಾಗಲೇ ಚರ್ಚಿಸಿದೆವು. ಬ್ರಿಟಿಷರ ಮಟ್ಟಿಗೆ ಅವರ ವ್ಯಾಪಾರ ಸಾಮ್ರಾಜ್ಯದಲ್ಲಿ ಬಾಂಬೆ ಅದಾಗಲೇ ಪ್ರಧಾನ ಸ್ಥಾನವನ್ನು ಅಲಂಕರಿಸಿಕೊಂಡಾಗಿತ್ತು. ಆದ್ದರಿಂದಲೇ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಪ್ಲೇಗ್‌ ಮಹಾಮಾರಿಯನ್ನು ತಡೆಗಟ್ಟುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯ ಜೊತೆಗೆ ಅವರ ಆರ್ಥಿಕತೆಯ ದೃಷ್ಟಿಯಿಂದಲೂ ಅತ್ಯಗತ್ಯವಾದ ಸಂಗತಿಯಾಗಿತ್ತು. ಸಾಮಾನ್ಯವಾಗಿ ತಿಲಕರ ತೀವ್ರವಾದಿ ಬ್ರಾಹ್ಮಣಿಸಂ ಎಂದು ಕರೆಯಲ್ಪಡುವ ಸಂಪ್ರದಾಯವಾದಿ ಬ್ರಾಹ್ಮಣರ ಭೂಕಂಪನ ಕೇಂದ್ರವೆಂದು ಗುರುತಿಸಲ್ಪಟ್ಟಿದ್ದ ಪುಣೆಯಲ್ಲೂ ಪ್ಲೇಗ್‌ ಅತ್ಯಂತ ವೇಗವಾಗಿ ಹರಡಿದ್ದನ್ನು ಮತ್ತು ಅದನ್ನು ನಿಯಂತ್ರಿಸಲು ಚಾರ್ಲ್ಸ್‌ ರಾನ್ಡ್‌ ಎಂಬ ಅಧಿಕಾರಿಯನ್ನು ನೇಮಿಸಿದ್ದನ್ನು ನಾವು ಈಗಾಗಲೆ ನೋಡಿದೆವು. ಪ್ಲೇಗ್‌ ತಡೆಗಟ್ಟಲು ೧೮೯೭ರಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಕಾನೂನು ಜಾರಿಗೆ ಬಂದಿತು. (ಇದೇ ಕಾನೂನನ್ನು ಬಳಸಿಕೊಂಡು ಕೋವಿಡ್‌ ಆರಂಭದ ದಿನಗಳಲ್ಲಿ ಲಾಕ್‌ಡೌನ್‌ ಸಹಿತ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿತ್ತು.)

ಪುಣೆಯ ಬ್ರಾಹ್ಮಣ ಸಮುದಾಯ, ಅದರಲ್ಲೂ ಸಂಪ್ರದಾಯವಾದಿ ಚಿತ್ಪಾವನ ಬ್ರಾಹ್ಮಣರು ರಾನ್ಡ್‌ನ ನೇಮಕ ಮತ್ತು ಆತನ ಕ್ವಾರೆಂಟೈನ್‌ ಪದ್ಧತಿಗಳನ್ನು ಶತೃತ್ವ ಮನೋಭಾವದಿಂದಲೇ ಕಂಡರು. ಬ್ರಿಟಿಷ್‌ ಸಾಮ್ರಾಜ್ಯಶಾಹಿ ಸ್ವದೇಶಿಯರ ಮೇಲೆ ನಡೆಸುತ್ತಿದ್ದ ಅಧಿಕಾರ ದರ್ಪ ಮತ್ತು ರಾಜಕೀಯ ಮೇಲುಗೈಯ ಮುಂದುವರಿಕೆಯಾಗಿಯೇ ಅವರು ರೋಗ ತಡೆಗಟ್ಟುವ ಕ್ರಮಗಳನ್ನೂ ಲೆಕ್ಕಿಸಿದರು. ಆದ್ದರಿಂದಲೇ ಪ್ಲೇಗ್‌ ಬಾಧಿತರ ಮಾಹಿತಿಯನ್ನು ಸ್ಪೆಷಲ್‌ ಪ್ಲೇಗ್‌ ಕಮಿಟಿ (ಎಸ್.ಪಿ.ಸಿ)ಗೆ ನೀಡಲಾಗಲೀ ರೋಗಿಗಳನ್ನು ಆರೋಗ್ಯ ಕೇಂದ್ರಗಳಿಗೆ ತಲುಪಿಸಲಾಗಲೀ ಅವರು ಮುಂದಾಗಲಿಲ್ಲ. ಬದಲಿಗೆ ಗೌಪ್ಯವಾಗಿ ಮನೆಗಳಲ್ಲಿಯೇ ಇರಿಸಿಕೊಂಡು ನಾಟಿ ಚಿಕಿತ್ಸಾ ಪದ್ದತಿಗಳ ಮೂಲಕ ಗುಣಪಡಿಸಲು ಪ್ರಯತ್ನಿಸಿದರು.

ಇದನ್ನರಿತ ರಾನ್ಡ್‌ ಮತ್ತು ತಂಡ ಮನೆ ಮನೆಗಳಿಗೆ ಹತ್ತಿಳಿದು ಪರೀಶೋಧನೆ ನಡೆಸಲಾರಂಭಿಸಿದರು. ರೋಗಿಗಳನ್ನು ಕಂಡರೆ ಅವರ ವಿರೋಧವನ್ನು ಲೆಕ್ಕಿಸದೆ ಆರೋಗ್ಯ ಕೇಂದ್ರಗಳಿಗೆ ಸ್ಥಳಾಂತರಿಸಿದರು. ಪ್ಲೇಗ್‌ ಹರಡುವಿಕೆ ತಡೆಗಟ್ಟಲು ಅತ್ಯಗತ್ಯ ಕ್ರಮವಾಗಿದ್ದ ಕ್ರಿಮಿನಾಶದ ಭಾಗವಾಗಿ ರೋಗಿಗಳ ಬಟ್ಟೆಗಳು, ಹಾಸಿಗೆ ಮತ್ತು ಬಳಸುತ್ತಿದ್ದ ವಸ್ತುಗಳಿಗೆ ಬೆಂಕಿಯಿಟ್ಟು ಸುಟ್ಟರು. ಆ ವಸ್ತುಗಳಲ್ಲಿ ಸಹಜವಾಗಿಯೇ ಧಾರ್ಮಿಕ ಗ್ರಂಥಗಳೂ ಇದ್ದವು.

ರಾನ್ಡ್‌ನ ಚಟುವಟಿಕೆಗಳನ್ನು ಎಂದಿನಂತೆ ಧರ್ಮದ ಮೇಲಿನ, ಬ್ರಾಹ್ಮಣರ ಆಚಾರ ವಿಚಾರ ಮತ್ತು ಜೀವನಶೈಲಿಯ ಮೇಲಿನ ದಾಳಿಯಾಗಿ ಚಿತ್ರೀಕರಿಸಲು ತಿಲಕರ ನೇತೃತ್ವದ ನವ-ಸಂಪ್ರದಾಯವಾದಿ ಬ್ರಾಹ್ಮಣಿಸ್ಟರು ತೊಡಗಿದರು. ಮನೆಯೊಳಗಿನ ದೇವರ ಕೋಣೆಗಳಿಗೆ ಮತ್ತು ಮಹಿಳೆಯರ ಕೋಣೆಗಳಿಗೆ ʼಮ್ಲೇಚ್ಛರುʼ ಹತ್ತಿಳಿಯುವುದನ್ನು ಇನ್ನಿಲ್ಲದಂತೆ ಪ್ರಚಾರ ಮಾಡಲಾಯಿತು. ಕೇಸರಿಯ ಮೂಲಕ ತಿಲಕ್‌ ರಾನ್ಡ್‌ನ ಮೇಲೆ ತೀವ್ರ ದಾಳಿ ಮಾಡಿದರು. ಪುಣಾವೈಭವ್ ತರಹದ ತಿಲಕರ ಪ್ರಭಾವದಲ್ಲಿದ್ದ ಪತ್ರಿಕೆಗಳು ರಾನ್ಡ್‌ ಮತ್ತು ಬ್ರಿಟಿಷ್‌ ಸರಕಾರದ ವಿರುದ್ಧ ಆಕ್ರಮಣಕಾರಿಯಾಗಿ ಬರೆಯಲು ಶುರು ಮಾಡಿದವು. ʼರಾನ್ಡ್‌ನಂತಹ ಸಂಶಯಾಸ್ಪದ, ಕಪ್ಪು ಮನಸ್ಸಿನ, ದಮನ ಮನೋಭಾವದ ವ್ಯಕ್ತಿಯನ್ನು ಈ ನಿಯಮ (೧೮೯೭ರ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ನಿಯಮ) ಜಾರಿಗೊಳಿಸಲು ನಿಯೋಜಿಸಬಾರದಾಗಿತ್ತು.ʼ ಎಂದು ತಿಲಕರು ಬರೆದರು.

ಹೀಗೆ ತಿಲಕರ ನೇತೃತ್ವದ ನವ-ಸಂಪ್ರದಾಯವಾದಿ ಬ್ರಾಹ್ಮಣಿಸ್ಟುಗಳು ರಾನ್ಡ್‌ ವಿರುದ್ಧವಾಗಿ ಜನರ ಭಾವನೆಯನ್ನು ಎತ್ತಿಕಟ್ಟುತ್ತಿದ್ದ ಹೊತ್ತಲ್ಲೇ, ೧೮೯೭ರ ಜೂನ್ ೨೨ರಂದು ವಿಕ್ಟೋರಿಯಾ ರಾಣಿಯ ಕೀರೀಟಧಾರಣೆಯ ಡೈಮಂಡ್‌ ಜ್ಯುಬಿಲಿ ಪುಣೆಯ ಗಣೇಶ್‌ ಕಿಂಡಿಯಲ್ಲಿರುವ ಗವರ್ನ್‌ಮೆಂಟ್‌ ಹೌಸಿನಲ್ಲಿ ನಡೆಯುತ್ತದೆ. ಬ್ರಿಟಿಷ್‌ ಇಂಡಿಯಾದ ಪರಮಾಧಿಕಾರಿಯೂ ಆಗಿದ್ದ ರಾಣಿಯ ಕುರಿತು ನಡೆಯುವ ಕಾರ್ಯಕ್ರಮದಲ್ಲಿ ಸಿಡಿಮದ್ದು ಪ್ರದರ್ಶನವನ್ನೆಲ್ಲ ಆಯೋಜಿಸಲಾಗಿತ್ತು. ಕಣ್ಣು ಕೋರೈಸುವ ಆ ಉತ್ಸವವನ್ನು ಕಣ್ತುಂಬಿಕೊಳ್ಳಲು ಊರ ಜನರೂ ನೆರೆದಿದ್ದರು. ಕಾರ್ಯಕ್ರಮಗಳ ನಂತರ ಮರಳಿ ಬರುತ್ತಿದ್ದ ರಾನ್ಡ್‌ನ ಕುದುರೆ ಗಾಡಿಯ ಮೇಲೆ ಕತ್ತಲ ಮರೆಯಿಂದ ಒಬ್ಬ ವ್ಯಕ್ತಿ ದಾಳಿ ಮಾಡುತ್ತಾನೆ. ರಾನ್ಡ್‌ನ ಗಾಡಿ ಬರುವುದನ್ನು ಕಂಡ ಒಬ್ಬಾತ ʼಗೋಂಡಿಯಾ ಆಲಾ ರೇ ಆಲಾʼ (ನಮ್ಮ ಗುರಿ ಇದೋ ಬಂದು ಬಿಟ್ಟಿತು) ಎಂಬ ಸೂಚನೆಯನ್ನು ಕೂಗಿದ ನಂತರ ಆ ವ್ಯಕ್ತಿ ಓಡಿ ಬಂದು ಗಾಡಿಯೊಳಗೆ ಹತ್ತಿಕೊಂಡಿದ್ದ. ಅದರ ಜೊತೆಗೆ ರಾನ್ಡ್‌ನ ಅಂಗ ರಕ್ಷಕನಾಗಿದ್ದ ಅಯೆರ್ಸ್ಟ್‌ನ ಗಾಡಿಯ ಮೇಲೂ ಇನ್ನೊಬ್ಬ ಹತ್ತಿಕೊಂಡಿದ್ದ. ಅವರು ರಾನ್ಡ್‌ ಮತ್ತು ಅಯೆರ್ಸ್ಟ್‌ನ ಮೇಲೆ ಗುಂಡಿನ ದಾಳಿ ಮಾಡಿದರು. ಅಯೆರ್ಸ್ಟ್‌ ಸ್ಥಳದಲ್ಲೇ ಸಾವನ್ನಪ್ಪಿದ. ರಾನ್ಡ್‌ನನ್ನು ಸಸೂನ್‌ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಲು ಪ್ರಯತ್ನಿಸಿದರಾದರೂ ೧೮೯೭ರ ಜುಲೈ ೩ರಂದು ಆತನೂ ಮರಣವನ್ನಪ್ಪಿದ.

ಬಾಂಬೆ ಸರಕಾರ ಸ್ಟೇಟ್‌ ಸೆಕ್ರೆಟರಿಗೆ ಕಳುಹಿಸಿದ ವರದಿಯಲ್ಲಿ ಈ ಕೊಲೆಗಳಿಗೆ ಸಾಕ್ಷಿಯಾಗಿದ್ದ ಅಯೆರ್ಸ್ಟ್‌ನ ಪತ್ನಿಯ ಹೇಳಿಕೆಯನ್ನು ಈ ರೀತಿಯಾಗಿ ದಾಖಲಿಸಲಾಗಿದೆ:

‌ʼ(ಗವರ್ನ್‌ಮೆಂಟ್ ಹೌಸಿನ) ಗೇಟಿನಿಂದ ಸುಮಾರು ಆರುನೂರು ಗಜ ದಾಟಿದ ನಂತರ ನಮ್ಮ ಗಾಡಿಯ ಮುಂದಿನಿಂದ ಹೋಗುತ್ತಿದ್ದ ಗಾಡಿಯ ಹಿಂದೆ ಒಬ್ಬ ಸ್ವದೇಶಿ ಕುಳಿತಿರುವುದಾಗಿ ಮಿಸೆಸ್‌ ಅಯೆರ್ಸ್ಟ್‌ ಗಮನಿಸುತ್ತಾರೆ. ಮಿಂಚಿನಂತ ಬೆಳಕು ಮತ್ತು ದೊಡ್ಡ ಸದ್ದು ಅವರ ಗಮನಕ್ಕೆ ಬರುತ್ತದೆ. ಸ್ವದೇಶಿ ಗಾಡಿಯಿಂದ ಇಳಿದು ರಸ್ತೆಯ ಮೂಲಕ ಬಲಭಾಗದ ಬಯಲಿನ ಕಡೆಗೆ ಓಡಿ ಹೋಗುವುದನ್ನೂ ಅವರು ಕಂಡರು. ಆತ ಪಟಾಕಿ ಸಿಡಿಸಿ ತಮಾಶೆ ಮಾಡುತ್ತಿದ್ದಾನೆಂದು ಅವರು ಮೊದಲಿಗೆ ಭಾವಿಸಿದರು. ಆ ಸಂಗತಿಯನ್ನು ತನ್ನ ಪತಿಯೊಂದಿಗೆ ಕೂಡ ಹೇಳಿಕೊಂಡರು. ಮಿಂಚು ಮತ್ತು ಸದ್ದು ರಾನ್ಡ್‌ನ (ಮುಂದಿನ ಗಾಡಿಯ) ಕುದುರೆಯನ್ನು ಭಯಗೊಳಿಸಿದ ಕಾರಣ ಅದು ಬಲಭಾಗಕ್ಕೆ ತಿರುಗಿಕೊಂಡಿತು. ಅವರು ತಮ್ಮ ಗಾಡಿಯ ಹಿಂದಿನಿಂದಲೂ ಅಂತಹದ್ದೇ ದೊಡ್ಡ ಸದ್ದನ್ನು ಕೇಳಿಸಿಕೊಂಡರು. ಆಕೆಯ ಪತಿ ʼಓ ಭಗವಂತಾ ನನ್ನನ್ನು ಕೊಲ್ಲುತ್ತಿದ್ದಾರೆʼ ಎಂದು ಹೇಳುತ್ತಾ ಉರುಳಿ ಬಿದ್ದರು.ʼ

ಕೊಲೆಗಾರರ ಬಗ್ಗೆ ಮಾಹಿತಿ ಸಿಗದಿದ್ದರೂ ಈ ವರದಿಯಲ್ಲಿ ಸಾರ್ವಜನಿಕರನ್ನು ರಾನ್ಡ್‌ ವಿರುದ್ಧವಾಗಿ ಎತ್ತಿಕಟ್ಟಲು ತಿಲಕರ ಕೇಸರಿ ಮತ್ತು ಪೂಣಾ ವೈಭವ್‌ ತರಹದ ಪತ್ರಿಕೆಗಳು ಪ್ರಯತ್ನಿಸುತ್ತಿದ್ದನ್ನು ಎತ್ತಿ ತೋರಿಸಿತು. ʼಪೂನಾ ಬ್ರಾಹ್ಮಣರುʼ ಇದರ ಹಿಂದೆ ಇರಬಹುದೆಂಬದನ್ನೂ ಆ ವರದಿ ಸೂಚಿಸಿತ್ತು. ಜೊತೆಗೆ ಕೊಲೆಗಾರರ ಬಗ್ಗೆ ಮಾಹಿತಿ ನೀಡುವವರಿಗೆ ಆ ಕಾಲದ ದೊಡ್ಡ ಮೊತ್ತವಾದ ೨೦೦೦೦ ರೂಪಾಯಿಗಳನ್ನು ಇನಾಂ ಆಗಿ ಘೋಷಿಸಬೇಕೆಂದು ಸ್ಟೇಟ್‌ ಸೆಕ್ರೆಟರಿ ಬಳಿ ಕೋರಿಕೊಳ್ಳಲಾಗಿತ್ತು. ಆ ಪ್ರಕಾರ ಇನಾಂ ಕೊಡುವುದಾಗಿ ಸರಕಾರ ವಾಗ್ದಾನ ನೀಡುತ್ತದೆ.

ಈ ಕೇಸನ್ನು ಎತ್ತಿಕೊಂಡದ್ದು ಬಾಂಬೆ ಪೊಲೀಸ್ ಸೂಪರಿಡೆಂಟ್ ಆಗಿದ್ದ ಬ್ರೆವಿನ್‌ ಎಂಬ ಅಧಿಕಾರಿ. ಆ ಕಾಲದಲ್ಲಿ ದುರ್ಗುಣ ಪರಿಹಾರ ಕೇಂದ್ರದಲ್ಲಿದ್ದ ಗಣೇಶ್‌ ಶಂಕರ್‌ ದ್ರಾವಿಡ್‌ ಎಂಬ ಪೂಣಾ ಬ್ರಾಹ್ಮಣ ಯುವಕನಿಂದ ಈ ಕೊಲೆಯ ಕುರಿತು ಮಾಹಿತಿ ಪಡೆಯಲು ಸಾಧ್ಯವೆಂದು ಬ್ರೆವಿನ್‌ ಭಾವಿಸಿ ಆತನನ್ನು ಭೇಟಿಯಾಗುತ್ತಾನೆ. ೧೮೯೮ ಏಪ್ರಿಲ್‌ ೨೨ ರಂದು ಬಾಂಬೆ ಪೊಲೀಸ್‌ ಕಮೀಷನರ್‌ ಆಗಿದ್ದ ಆರ್.‌ಎಚ್. ವಿನ್ಸಂಟ್‌ಗೆ ಬ್ರೆವಿನ್‌ ನೀಡಿದ ವರದಿಯಲ್ಲಿ ಈ ಘಟನೆಗಳನ್ನು ಈ ರೀತಿಯಾಗಿ ವಿವರಿಸಲಾಗಿದೆ.

ʼಆತ (ಗಣೇಶ್‌ ಶಂಕರ್‌ ದ್ರಾವಿಡ್)‌ ನನ್ನ ತನಿಖೆಯಲ್ಲಿ ಆಶ್ಚರ್ಯ ಪಟ್ಟುಕೊಂಡು ಕೊಲೆ ನಡೆದ ರಾತ್ರಿಗಿಂತ ಎರಡು ವರ್ಷಗಳ ಹಿಂದಿನಿಂದ ಜೈಲಿನಲ್ಲಿ ಕಳೆಯುತ್ತಿರುವ ತಾನು ಈ ವಿಷಯದ ಕುರಿತು ಅರಿತಿರಲು ಹೇಗೆ ಸಾಧ್ಯ ಎಂದು ಮರುಪ್ರಶ್ನಿಸಿದ. ಆಗ ಆತನಿಂದ ನಾನು ಯಾವ ರೀತಿಯ ಸಹಾಯ ನಿರೀಕ್ಷಿಸುತ್ತಿದ್ದೇನೆಂದೂ ಆತ ನೀಡುವ ಮಾಹಿತಿಯಿಂದ ಏನಾದರು ಸುಳಿವು ನನಗೆ ಸಿಗುವುದೇ ಆಗಿದ್ದರೆ, ಪುಣೆಯ ಪೊಲೀಸ್‌ ಸೂಪರಿಡೆಂಟ್‌ ಮತ್ತು ಬಾಂಬೆಯ ಪೊಲೀಸ್‌ ಕಮೀಷನರ್‌ಗಳ ಮೂಲಕ ಸರಕಾರದಿಂದ ಆತನ ಶಿಕ್ಷೆಯನ್ನು ಪೂರ್ತಿಯಾಗಿ ರದ್ದುಗೊಳಿಸಲು ಕೇಳಿಕೊಳ್ಳುವುದಾಗಿಯೂ ಹೇಳಿದೆ. ಸರಕಾರ ಘೋಷಸಿದ ೨೦೦೦೦ ರೂಪಾಯಿಗಳ ಇನಾಂ ಕುರಿತು ಆತನಿಗೆ ತಿಳಿಸಿ, ಆತ ನೀಡುವ ಮಾಹಿತಿಯಿಂದ ಕೊಲೆಗಾರರ ಅರೆಸ್ಟ್‌ ಆಗುವುದಾಗಿದ್ದರೆ ಆ ಹಣವನ್ನು ಆತನಿಗೆ ನೀಡಲು ಬೇಕಾದ ಕ್ರಮಗಳನ್ನು ಕೈಗೊಳ್ಳುವುದಾಗಿಯೂ ತಿಳಿಸಿದೆ. ಇದೆಲ್ಲವನ್ನು ಕೇಳಿಸಿಕೊಂಡ ದ್ರಾವಿಡ್‌ ನನ್ನ ಮನವಿಯ ಕುರಿತು ಯೋಚಿಸಲು ಸ್ವಲ್ಪ ಸಮಯ ಬೇಕೆಂದೂ ಕೆಲದಿನಗಳ ಒಳಗೆ ನನಗೆ ಉತ್ತರ ನೀಡುವುದಾಗಿಯೂ ಹೇಳಿದ. ಈ ಭೇಟಿಯ ನಂತರ ನಾನು ಪುಣೆಗೆ ಮರಳಿ ಬಂದು ಪುಣೆಯ ಪೊಲೀಸ್ ಸೂಪರಿಡೆಂಟ್‌ ಬಳಿ ದ್ರಾವಿಡ್‌ನನ್ನು ಯರವಾಡ ಜೈಲಿಗೆ ಸ್ಥಳಾಂತರಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕಾಗಿ ಕೇಳಿಕೊಂಡೆ. ಅದೆಲ್ಲ ಮುಗಿದ ನಂತರ ನಾನು ದ್ರಾವಿಡ್‌ನನ್ನು ಯರವಾಡ ಜೈಲಿನಲ್ಲಿ ಹೋಗಿ ಭೇಟಿಯಾದೆ.ʼ

ಬ್ರೆವಿನ್‌ ನಿರೀಕ್ಷಿಸಿದಂತೆ ದ್ರಾವಿಡ್‌ ಈಗ ಅನುಕೂಲಕರ ಮನಸ್ಥಿತಿಯಲ್ಲಿದ್ದ. ಹೆಣ್ಣುಮಕ್ಕಳ ಮದುವೆ ಪ್ರಾಯವನ್ನು ಹೆಚ್ಚಿಸಿದ ಕಾನೂನಿಗೆ ವಿರುದ್ಧವಾಗಿ ನಡೆದ ಪ್ರತಿಭಟನೆಯ ಸಮಯದಲ್ಲಿ ಇನ್ಸ್‌ಪೆಕ್ಟರ್‌ ಸ್ಮಿತ್‌ನ ಮೇಲೆ ದಾಳಿ ಮಾಡಿದವರು ಹಾಗೂ ಕಾಂಗ್ರೆಸ್‌ ಚಪ್ಪರಕ್ಕೆ ಬೆಂಕಿಯಿಟ್ಟು ಸುಟ್ಟು ಹಾಕಲು ಪ್ರಯತ್ನಿಸಿದವರ ಹೆಸರು ಮತ್ತು ವಿವರಗಳನ್ನು ದ್ರಾವಿಡ್‌ ಬಳಿಯಿಂದ ಬ್ರೆವಿನ್‌ ಸಂಗ್ರಹಿಸಿಕೊಳ್ಳುತ್ತಾನೆ. ಪುಣೆಯಲ್ಲಿ ತಿಲಕರಿಂದ ಪ್ರಭಾವಿತರಾಗಿದ್ದ ನವ-ಸಂಪ್ರದಾಯವಾದಿ ಬ್ರಾಹ್ಮಣ ಯುವಕರಲ್ಲಿ ಒಬ್ಬನಾಗಿದ್ದ ದ್ರಾವಿಡ್‌ ಆ ಆಕ್ರಮಣಕಾರಿ ಘಟನೆಗಳಲ್ಲಿ ಭಾಗವಹಿಸಿದ್ದವರ ಹೆಸರು ಮತ್ತು ಇತರ ಮಾಹಿತಿಗಳನ್ನು ಬ್ರೆವಿನ್‌ಗೆ ನೀಡುತ್ತಾನೆ. ಗೋಪಾಲ್‌ ಕೃಷ್ಣ ಸಾಠೇ, ಪುಣೆ ಮುನಿಸಿಪಾಲಿಟಿ ಸೆಕ್ರೆಟರಿಯ ಸಹೋದರ ಕುಂಠೇಕರ್‌, ದಾಮೋದರ್‌ ಹರಿ ಚಾಪೇಕರ್‌ ಮೊದಲಾದವರ ಹೆಸರುಗಳು ಆ ಪಟ್ಟಿಯಲ್ಲಿ ಇದ್ದವು. ಅದರ ಜೊತೆಗೆ ದಾಮೋದರ್‌ ಹರಿ ಚಾಪೇಕರ್‌ ಸಂಘವೊಂದನ್ನು ಕಟ್ಟಿಕೊಂಡಿದ್ದಾನೆ ಮತ್ತು ತನ್ನ ಸಹೋದರ ನೀಲಕಂಠ್‌ ಅದರ ಸದಸ್ಯನಾಗಿದ್ದಾನೆ ಎಂಬ ಅಮೂಲ್ಯ ಮಾಹಿತಿಯನ್ನೂ ಬ್ರೆವಿನ್‌ಗೆ ನೀಡುತ್ತಾನೆ. ನೀಲಕಂಠನ ಜೊತೆಗಿನ ಭೇಟಿಯನ್ನು ಬ್ರೆವಿನ್‌ ಈ ರೀತಿಯಾಗಿ ವಿವರಿಸುತ್ತಾನೆ.

ʼನಾನು ನೀಲಕಂಠನ ಬಳಿ ಹೋದೆನಾದರೂ ಆತ ಯಾವ ಮಾಹಿತಿಯನ್ನೂ ಬಿಟ್ಟು ಕೊಡಲು ತಯಾರಿರಲಿಲ್ಲ. ಅದರ ನಂತರ ಆತನನ್ನು ನಾನು ಗಣೇಶ್‌ ದ್ರಾವಿಡನ ಬಳಿ ಕರೆದುಕೊಂಡು ಹೋಗಿ ಆತನಿಗೆ ತಿಳಿದಿರುವುದನ್ನೆಲ್ಲ ಹೇಳಬೇಕೆಂದು ಒತ್ತಾಯಿಸಿದೆ. ೧೨೦ ಯುವಕರನ್ನು ಸಂಘಟಿಸಿ ದೈಹಿಕ ತಾಲೀಮು ನಡೆಸುತ್ತಿರುವ ಚಾಪೇಕರ್‌ ಸಹೋದರರ ಚಟುವಟಿಕೆಗಳ ಕುರಿತು ನೀಲಕಂಠ್ ಆಗ ನನಗೆ ಮಾಹಿತಿ ನೀಡಿದ. ಈ ಅರೆಸೇನಾ ಸಂಘ ನಂತರ ಚದುರಿ ಹೋದ ಕಾರಣಗಳನ್ನೂ, ಅದರ ನಂತರ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಯುವಕರಲ್ಲಿ ಕೆಲವರನ್ನು ಆಯ್ದುಕೊಂಡು ಒಂದು ಸಂಘ ಕಟ್ಟಿಕೊಂಡಿರುವ ಬಗ್ಗೆಯೂ ಆತ ವಿವರಿಸಿದ. ಚಾಪೇಕರ್‌ ಸಹೋದರರು ಹೇಗೆ ಆಯುಧ ಸಂಗ್ರಹಕ್ಕೆ ಮಾರ್ಗದರ್ಶನಗಳನ್ನು ನೀಡುತ್ತಿದ್ದರು, ಆ ಸಂಘ ಹೇಗೆ ಒಡೆಯಿತು, ದಾಮೋದರನಿಗಾಗಿ ಸಂಘ ಸಂಗ್ರಹಿಸಿದ ಆಯುಧಗಳನ್ನು ತಾನು ಹೇಗೆ ಕಂಡೆ ಮೊದಲಾದ ಎಲ್ಲ ಮಾಹಿತಿಗಳನ್ನೂ ಆತ ವಿವರವಾಗಿ ಹೇಳಿದ. ದಾಮೋದರ್‌ ಮತ್ತು ಗೋಪಾಲ್‌ ಕೃಷ್ಣ ಸಾಠೇ ಪಾರ್ಬತಿ ಪಕ್ಕದಲ್ಲಿ ಹಂದಿಗಳನ್ನು ಬೇಟೆಯಾಡಲು ಹೋಗುತ್ತಿದ್ದರೆಂದೂ ಆ ಮೂಲಕ ಅವರು ತುಪಾಕಿಗಳನ್ನು ಬಳಸಲು ತರಬೇತಿ ಪಡೆದರೆಂದೂ ನೀಲಕಂಠ ಹೇಳಿದ.ʼ

ಬ್ರೆವಿನ್‌ ಈ ಮಾಹಿತಿಗಳ ಆಧಾರದಲ್ಲಿ ದಾಮೋದರ್‌ ಹರಿ ಚಾಪೇಕರ್‌ನನ್ನು ಅರೆಸ್ಟ್‌ ಮಾಡುತ್ತಾನೆ. ಚಾಪೇಕರ್‌ ರಾನ್ಡ್‌ನ ಕೊಲೆಯನ್ನು ಒಪ್ಪಿಕೊಳ್ಳುತ್ತಾನೆ. ಪ್ಲೇಗ್‌ ಮಹಾಮಾರಿಯನ್ನು ತಡೆಯುವ ನೆಪದಲ್ಲಿ ಬ್ರಾಹ್ಮಣ ಕುಲವನ್ನು ಅಪಮಾನಿಸುವ ರೀತಿಯಲ್ಲಿ ರಾನ್ಡ್‌ ನಡೆದುಕೊಂಡಿದ್ದ ಕಾರಣ ಆತನನ್ನು ಕೊಂದಿರುವುದಾಗಿ ದಾಮೋದರ್‌ ಹರಿ ಚಾಪೇಕರ್‌ ತನ್ನ ತಪ್ಪೊಪ್ಪಿಗೆಯಲ್ಲಿ ಹೇಳಿಕೊಳ್ಳುತ್ತಾನೆ.

ʼನಾನು ಪುಣೆಗೆ ಹೋದೆ. ಪ್ಲೇಗನ್ನು ತಡೆಗಟ್ಟಲು ಬೇಕಾದ ಕ್ರಮಗಳನ್ನು ಶುರು ಮಾಡಲಾಗಿತ್ತು. ಮನೆ ಮನೆ ಸಂದರ್ಶನ ಎಂಬ ನೆಪದಲ್ಲಿ ಸೈನಿಕರು ಹಲವು ತೊಂದರೆಗಳನ್ನು ತಂದಿಟ್ಟಿದ್ದರು. ಅವರು ದೇವಸ್ಥಾನಗಳ ಒಳಗೆ ಹೋಗುತ್ತಿದ್ದರು, ಮಹಿಳೆಯರನ್ನು ಅವರ ಮನೆಯಿಂದಲೇ ಹೊರ ಹಾಕುತ್ತಿದ್ದರು, ವಿಗ್ರಹಗಳನ್ನು ಒಡೆದು ಹಾಕುತ್ತಿದ್ದರು, ಪವಿತ್ರ ಗ್ರಂಥಗಳಿಗೆ ಬೆಂಕಿ ಹಚ್ಚುತ್ತಿದ್ದರು. ಈ ಹೀನಕೃತ್ಯಕ್ಕೆ ನಾವು ಪ್ರತೀಕಾರ ತೀರಿಸಲು ತೀರ್ಮಾನಿಸಿದೆವು. ಆದರೆ, ಸಾಮಾನ್ಯ ಜನರನ್ನು ಕೊಲ್ಲುವುದರಲ್ಲಿ ಅರ್ಥವಿಲ್ಲವೆಂದು ನಮಗೆ ತಿಳಿದಿತ್ತು. ನಾಯಕನನ್ನೇ ಕೊಲ್ಲಬೇಕಾಗಿತ್ತು. ಆದ್ದರಿಂದಲೇ ರಾನ್ಡ್‌ನನ್ನು, ನಾಯಕನನ್ನು, ಕೊಲ್ಲಲು ನಾವು ತೀರ್ಮಾನಿಸಿದೆವು.ʼ

ರಾನ್ಡ್ ಮತ್ತು ಅಯೆರ್ಸ್ಟ್‌ನ ಕೊಲೆಗಳನ್ನು ಸಾಮಾನ್ಯವಾಗಿ ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿಯೇ ಪರಿಗಣಿಸಲಾಗುತ್ತದೆ. ಅದು ಬ್ರಿಟಿಷ್‌ ವಿರೋಧದ ಕ್ರಿಯೆ ಆಗಿದ್ದರೂ, ಅದಕ್ಕಿಂತ ಮಿಗಿಲಾಗಿ ಬ್ರಾಹ್ಮಣ ಅಭಿಮಾನವನ್ನು ಸಂರಕ್ಷಿಸುವ ಶ್ರಮವೂ ಆಗಿತ್ತೆಂಬುದನ್ನು ಈ ಹೇಳಿಕೆ ನಿಸ್ಸಂಶಯವಾಗಿ ಸಾಬೀತು ಪಡಿಸುತ್ತದೆ. ಪ್ಲೇಗ್‌ ವೈರಸ್‌ ಜೊತೆಗಿನ ಹೋರಾಟವನ್ನು ಅವರು ಯಾವ ರೀತಿಯಲ್ಲೂ ಯಥಾವತ್ತಾಗಿ ಕಾಣಲೇ ಇಲ್ಲ. ಬದಲಿಗೆ ಬ್ರಾಹ್ಮಣರ ಜೀವನ ಪದ್ದತಿಯ ಮೇಲೆ ಮ್ಲೇಚ್ಛರ ಆಕ್ರಮಣವಾಗಿಯೇ ಅವರು ಅದನ್ನು ಕಂಡರು. ಆದ್ದರಿಂದಲೇ ರಾನ್ಡ್‌ ಮತ್ತು ಅಯೆರ್ಸ್ಟ್‌ನ ಹತ್ಯೆಗಳು ದುರಭಿಮಾನ ಕೊಲೆಗಳಾಗಿದ್ದವು. ಇದನ್ನು ಇನ್ನಷ್ಟು ಅರ್ಥಮಾಡಿಕೊಳ್ಳಬೇಕೆಂದರೆ ಚಾಪೇಕರ್‌ ಸಹೋದರರ ಕುರಿತು ಇನ್ನೂ ಕೆಲವು ಮಾಹಿತಿಗಳನ್ನು ನಾವು ತಿಳಿದುಕೊಳ್ಳಬೇಕು.

ಚಾಪೇಕರ್‌ ಸಹೋದರರು ಎಂದು ಗುರುತಿಸಲ್ಪಡುವ ದಾಮೋದರ್‌ ಹರಿ ಚಾಪೇಕರ್‌ (೧೮೭೦-೧೮೯೮), ಬಾಲಕೃಷ್ಣ ಹರಿ ಚಾಪೇಕರ್‌ (೧೮೭೩-೧೮೯೯), ವಾಸುದೇವ ಹರಿ ಚಾಪೇಕರ್‌ (೧೮೭೯-೧೮೯೯) ಎಂಬ ಮೂವರು ಹರಿಪಂತ್‌ ಮತ್ತು ದ್ವಾರಕಾ ದಂಪತಿಗಳ ಮಕ್ಕಳಾಗಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರು. ಚಿಂಚವಾಡಾದ ಸಮೀಪದ ಚಪ್ಪ ಎಂಬ ಗ್ರಾಮದಲ್ಲಿ ಆ ಕುಟುಂಬದ ಬೇರುಗಳು ಇದ್ದವು. ಆದರೆ, ಹರಿಪಂತ್‌ ಪುಣೆಗೆ ವಲಸೆ ಬಂದು ವಾಸಿಸಿದ. ಬ್ರಾಹ್ಮಣರ ಮನೆಗಳಲ್ಲಿ ಕೀರ್ತನೆಗಳನ್ನು ಹಾಡಿಕೊಂಡು ಹರಿಪಂತ್‌ ಕಾಲಯಾಪನೆ ಮಾಡುತ್ತಿದ್ದ. ನಂತರದ ಕಾಲದಲ್ಲಿ ಮೂವರು ಸಹೋದರರೂ ಆ ಕಲೆಯಲ್ಲಿ ನೈಪುಣ್ಯತೆ ಗಳಿಸಿ ತಂದೆಗೆ ಸಹಾಯ ಮಾಡತೊಡಗಿದರು.

ಆ ಕಾಲದ ಪುಣೆ ನಗರ, ಅದರಲ್ಲೂ ವಿಶೇಷವಾಗಿ ಬ್ರಾಹ್ಮಣ ಸಮುದಾಯ ಹಾದು ಹೋಗುತ್ತಿದ್ದ ಸಾಮಾಜಿಕ ಸಂದರ್ಭವನ್ನು ನಾವು ಈಗಾಗಲೇ ಪರಾಮರ್ಶಿಸಿದ್ದೇವೆ. ರಾಣಡೆ ಮತ್ತು ಅಗರ್ಕರ್‌ ತರಹದ ಪ್ರಗತಿಪರರು ಬ್ರಾಹ್ಮಣರನ್ನು ನವೋತ್ಥಾನ ಪಥಕ್ಕೆ ಮುನ್ನಡೆಸಲು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದರು. ಗಣೇಶ್‌ ಅಗರ್ಕರ್‌ ನೇತೃತ್ವದಲ್ಲಿ ಪ್ರಕಟವಾಗುತ್ತಿದ್ದ ಸುಧಾರಕ್‌ ಪತ್ರಿಕೆ ಅವರ ಮಾಧ್ಯಮ ಮುಖವಾಗಿತ್ತು. ಆದರೆ, ತಿಲಕರ ನೇತೃತ್ವದ ನವಸಂಪ್ರದಾಯವಾದಿಗಳು ತಮ್ಮ ಸಮುದಾಯಕ್ಕೆ ಹಿಂದೂ ಜಾತಿಶ್ರೇಣಿಯಲ್ಲಿ ಮತ್ತು ಸಮಾಜದಲ್ಲಿ ಇರುವ ಪ್ರಾಬಲ್ಯವನ್ನು ಹೊಸಕಾಲದಲ್ಲೂ ನೆಲೆನಿಲ್ಲಿಸುವ ತಂತ್ರಗಳನ್ನು ರೂಪಿಸುವುದರಲ್ಲಿ ನಿರತರಾಗಿದ್ದರು. ಕೇಸರಿ ಮತ್ತು ಮರಾಠ ಅವರ ಮಾಧ್ಯಮ ಮುಖಗಳಾಗಿದ್ದವು. ಬ್ರಾಹ್ಮಣ ಪ್ರಾಬಲ್ಯವನ್ನು ಬುಡಮೇಲುಗೊಳಿಸಲು ಮಹಾತ್ಮ ಫುಲೆ ಮತ್ತು ಪತ್ನಿ ಸಾವಿತ್ರಿಬಾಯಿ ಫುಲೆ ಮೊದಲಾದವರು ಸತ್ಯಶೋಧಕ್‌ ಸಮಾಜ್‌ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದರು. ಈ ಕೆಳಜಾತಿ ಚಳುವಳಿಯಲ್ಲಿ ಪಂಡಿತ ರಮಾಬಾಯಿಯವರಂತಹ ಚಿತ್ಪಾವನ ಬ್ರಾಹ್ಮಣ ಕುಲದಲ್ಲಿ ಜನಿಸಿದವರು ಕೂಡ ಕೈ ಜೋಡಿಸಿದ್ದರು ಎಂಬುದನ್ನು ನಾವು ಗಮನಿಸಿದೆವು.

ರಮಾಡೋಂಗ್ರೆ ಎಂಬ ಹೆಸರಿನ ಮಹಿಳೆ ನಂತರದ ಕಾಲದಲ್ಲಿ ಕೆಳಜಾತಿ ಚಳುವಳಿಯ ಮತ್ತು ಸ್ತ್ರೀವಾದದ ಇತಿಹಾಸಗಳೆರಡರಲ್ಲಿಯೂ ಉಜ್ವಲ ವ್ಯಕ್ತಿತ್ವವಾಗಿ ಮೂಡಿದ ರಮಾಬಾಯಿ ಆಗಿ ಬದಲಾದರು. ಅವರು ಸ್ವಾಮಿ ವಿವೇಕಾನಂದರ ಜೊತೆಗೆ ಚಿಕಾಗೋದ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ನಂತರ ಕ್ರೈಸ್ತ ಧರ್ಮ ಸ್ವೀಕರಿಸಿ ಆ ಧರ್ಮದ ಒಳಗಿನ ಕೆಡುಕಗಳ ವಿರುದ್ಧವೂ ಹೋರಾಡಿದರು. ವಿಧವೆಗಳಿಗೋಸ್ಕರ ಶಾರದಾ ಸದನ್‌ ಸ್ಥಾಪಿಸಿ ಪುಣೆ ನಗರದಲ್ಲಿ ಅವರೂ ತಮ್ಮ ಚಟುವಿಕೆಗಳನ್ನು ಆ ಕಾಲದಲ್ಲಿ ಆರಂಭಿಸಿದ್ದರು.

ಆ ಕಾಲದಲ್ಲೇ ಬ್ರಾಹ್ಮಣರನ್ನು ಇಬ್ಬಾಗವಾಗಿಸಿದ ಹೆಣ್ಣುಮಕ್ಕಳ ವಿವಾಹ ಪ್ರಾಯ ಹೆಚ್ಚಿಸುವ ಏಜ್‌ ಆಫ್‌ ಕನ್ಸೆಂಟ್‌ ಬಿಲ್‌ ಕಾನೂನಾಗಿ ಜಾರಿಗೆ ಬರುವುದು. ತಿಲಕರ ನೇತೃತ್ವದ ನವ ಸಂಪ್ರದಾಯವಾದಿ ಬ್ರಾಹ್ಮಣಿಸಂ ಇದನ್ನು ವಿರೋಧಿಸಿಕೊಂಡು ಜನಪ್ರಿಯವಾಗತೊಡಗಿತ್ತು ಎಂಬುದನ್ನೂ ನಾವು ನೋಡಿದೆವು. ತಿಲಕ್‌ವಾದಿಗಳು ಎಂದು ಗುರುತಿಸುತ್ತಿದ್ದ ಯುವಕರು ಈ ನವ ಸಂಪ್ರದಾಯವಾದಿ ಸಂಘವನ್ನು ತೀವ್ರವಾದಿ ಸಂಘವಾಗಿ ಬದಲಾಯಿಸಿದರು. ಇವರು ಒಂದೇ ಹೊತ್ತಿಗೆ ಪ್ರಗತಿಪರ ವಿರೋಧಿಯೂ ಬ್ರಿಟಿಷ್‌ ವಿರೋಧಿಯೂ ಮುಸ್ಲಿಂ ಮತ್ತು ಅಲ್ಪಸಂಖ್ಯಾತ ವಿರೋಧಿಯೂ ಆಗಿದ್ದರು. ತಿಲಕರ ನೇತೃತ್ವದಲ್ಲಿ ಸ್ಥಾಪಿಸಿದ್ದ ಜಿಮ್ನಾಸ್ಟಿಕ್‌ ಕ್ಲಬ್‌ಗಳಲ್ಲಿ ದೈಹಿಕ ತರಬೇತಿ ಪಡೆದವರಾಗಿದ್ದರು. ತಿಲಕ್‌ ರೂಪಿಸಿದ ಗಣೇಶೋತ್ಸವ ಮತ್ತು ಶಿವಾಜಿ ಉತ್ಸವಗಳಿಗೆ ಜೀವತುಂಬಿದವರು ಕೂಡ ಅವರೇ ಆಗಿದ್ದರು.

ಅವರು ತಮ್ಮ ತ್ರಿಮುಖ ಗುರಿಯನ್ನು ಮುಂದಿಟ್ಟುಕೊಂಡು ಕಾರ್ಯಪ್ರವೃತ್ತರಾಗಿದ್ದರು. ಮಸ್ಲಿಮರ, ಬ್ರಿಟಿಷರ ಮತ್ತು ಪ್ರಗತಿಪರರ ವಿರೋಧಿ. ಈ ತ್ರಿಮುಖ ಚಟುವಟಿಕೆಯ ಅತ್ಯಂತ ಪ್ರಖರ ಮುಖ ದಾಮೋದರ್‌ ಹರಿ ಚಾಪೇಕರ್‌ ಆಗಿದ್ದ. ತಿಲಕರ ಸೈದ್ಧಾಂತಿಕತೆಗೆ ಪ್ರಾಯೋಗಿಕ ರೂಪ ನೀಡಬೇಕಾದ ಅಗತ್ಯವಿದೆಯೆಂದು ಆತ ಭಾವಿಸಿದ್ದ. ಅದಕ್ಕಾಗಿ ಕಟ್ಟಿದ ಸಂಘಟನೆಯೇ ಹಿಂದೂಧರ್ಮ ಅಡೆತಡೆ ನಿವಾರಣಾ ಸಂಘ. ನಂತರ ಹಿಂದೂಧರ್ಮ ಎಂಬುದರ ಬದಲಿಗೆ ಆರ್ಯಧರ್ಮವನ್ನು ಸೇರಿಸಿ ಆರ್ಯಧರ್ಮ ಪ್ರತಿಬಂಧ್‌ ನಿವಾರಕ್‌ ಮಂಡಲಿ ಎಂದು ಬದಲಾಯಿತು. ಪ್ರಗತಿಪರರ ಮೇಲೆ ಕಬ್ಬಿಣದ ಬಡಿಗೆಗಳ ಮೂಲಕ ದಾಳಿ ನಡೆಸುವುದರೊಂದಿಗೆ ಅವರು ತಮ್ಮ ಇರುವಿಕೆಯನ್ನು ತೋರಿಸಿದ್ದರು. ಸುಧಾರಕ್‌ ಪತ್ರಿಕೆಯ ಸಂಪಾದಕರಾಗಿದ್ದ ಪಟವರ್ಧನ್‌ ಮೇಲೆ ಅವರು ಮೊದಲ ದಾಳಿ ಮಾಡಿದ್ದರು. ಪ್ರಗತಿಪರರಾಗಿದ್ದ ಕುಲಕರ್ಣಿ, ಥೊರಾಟ್‌ ಮೊದಲಾದವರನ್ನೂ ಅವರು ಆಕ್ರಮಿಸಿದ್ದರು. ಕ್ರೈಸ್ತಧರ್ಮ ಸ್ವೀಕರಿಸಿದ್ದ ವೆಲಿಂಕರನ್ನೂ. ಹೀಗೆ ಬ್ರಾಹ್ಮಣ ಶುದ್ದೀಕರಣದ ಮುಂಚೂಣಿ ಹೋರಾಟಗಾರರಾಗಿ ಅವರು ತಮ್ಮನ್ನು ತಾವೇ ಘೋಷಿಸಿಕೊಂಡರು.

ಬಾಂಬೆಯ ವಿಕ್ಟೋರಿಯಾ ಪ್ರತಿಮೆಗೆ ಟಾರ್‌ ಬಳಿಯುವ ಮೂಲಕ ಈ ಬ್ರಾಹ್ಮಣ ಶುದ್ಧಿವಾದ ತನ್ನ ಬ್ರಿಟಿಷ್‌ ವಿರೋಧವನ್ನು ಮೊದಲ ಬಾರಿಗೆ ಹೊರಗೆಡಹಿತ್ತು. ಬಾಂಬೆ ಚೀಫ್‌ ಮ್ಯಾಜಿಸ್ಟ್ರೇಟ್‌ ಆಗಿದ್ದ ಡಬ್ಲ್ಯೂ.ಆರ್.‌ ಹ್ಯಾಮಿಲ್ಟನ್‌ ದಾಖಲಿಸಿದ ತಪ್ಪೊಪ್ಪಿಗೆಯಲ್ಲಿ ಆ ಘಟನೆಯನ್ನು ದಾಖಲಿಸಲಾಗಿದೆ. ವರ್ಷದಲ್ಲಿ ನಾಲ್ಕು ತಿಂಗಳುಗಳ ಕಾಲವಾದರೂ ಬಾಂಬೆಯಲ್ಲಿ ಕಳೆಯುತ್ತಾರೆಂದೂ ಆ ಸಮಯದಲ್ಲಿಯೇ ಇದನ್ನು ಮಾಡಲಾಗಿತ್ತು ಎಂದೂ ದಾಮೋದರ್‌ ಹೇಳುತ್ತಾನೆ. ಮುಂಜಾನೆ ನಾಲ್ಕು ಗಂಟೆಗೆ ತಾನು ಮತ್ತು ತಮ್ಮ ಬಾಲಕೃಷ್ಣ ಸೇರಿಕೊಂಡು ವಿಕ್ಟೋರಿಯಾ ಪ್ರತಿಮೆಯ ಬಳಿ ಹೋದೆವೆಂದೂ ಬಜಾರಿನಿಂದ ಆರಾಣೆಗೆ ಕೊಂಡು ತಂದಿದ್ದ ಟಾರನ್ನು ಬಾಲಕೃಷ್ಣ ಪ್ರತಿಮೆಗೆ ಬಳಿದನೆಂದೂ ತಾನು ಕಾವಲಿಗೆ ನಿಂತೆನೆಂದೂ ಹೇಳಿಕೆಯಲ್ಲಿ ದಾಖಲಿಸಲಾಗಿದೆ. ಖಂಡೇವಾಡಿಯಿಂದ ಬಾಲ್‌ ಮಂಕೇಷ್‌ ವಾಗ್ಲೆಯ ಮೆಟ್ಟಿಲುಗಳ ಅಡಿಯಲ್ಲಿ ಇಟ್ಟಿದ್ದ ಹಳೆಯ ಚಪ್ಪಲಿಗಳಿಂದ ಹಾರ ತಯಾರಿಸಿ ಪ್ರತಿಮೆಗೆ ಹಾಕಿದ್ದರು. ಉಳಿದ ದಾಳಿಗಳಲ್ಲಿ ಜೊತೆಗಾರನಾಗಿದ್ದ ಬುಸ್‌ಕುಟ್ಟೆ ಪ್ಲೇಗ್‌ ಬಾಧಿತನಾಗಿ ಮರಣ ಹೊಂದಿದ್ದರಿಂದ ಈ ಕೃತ್ಯದಲ್ಲಿ ಜೊತೆಗಿರಲಿಲ್ಲ.

ರಾನ್ಡ್‌ ಮತ್ತು ಅಯರ್ಸ್ಟ್‌ನನ್ನು ಕೊಂದದ್ದು ಎಂದಿನಂತೆ ತಾನು ಮತ್ತು ಸಹೋದರ ಬಾಲಕೃಷ್ಣ ಸೇರಿಕೊಂಡು ಎಂದು ತನ್ನ ತಪ್ಪೊಪ್ಪಿಗೆಯಲ್ಲಿ ದಾಮೋದರ್‌ ಹೇಳಿಕೊಳ್ಳುತ್ತಾನೆ. ಆದರೆ, ಬಾಲಕೃಷ್ಣ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ದಾಮೋದರನ ಕುರಿತ ಮಾಹಿತಿ ಒದಗಿಸಿದ್ದಕ್ಕಾಗಿ ಗಣೇಶ್‌ ಶಂಕರ್‌ ದ್ರಾವಿಡ್‌ಗೆ ಇನಾಂ ಮೊತ್ತವಾದ ೨೦೦೦೦ ರೂಪಾಯಿಯ ಅರ್ಧ ಹಣ ೧೦೦೦೦ ರೂಪಾಯಿ ನೀಡಲಾಯಿತು. ಬಾಲಕೃಷ್ಣ ಪೊಲೀಸರಿಗೆ ಸಿಗದ ಕಾರಣ ಇನಾಂ ಹಣವನ್ನು ಅರ್ಧಕ್ಕೆ ಇಳಿಸಲಾಗಿತ್ತು.

You cannot copy content of this page

Exit mobile version