ಮನುಸ್ಮೃತಿ ಮತ್ತು ಇತರ ಸ್ಮೃತಿಗಳ ಆಧಾರದಲ್ಲಿ ಬ್ರಾಹ್ಮಣ ಪಾರಮ್ಯದ ಆಧುನಿಕ ಶೈಲಿಯನ್ನು ಕಟ್ಟಿಕೊಳ್ಳುವುದು ತಿಲಕ್ ಉದ್ದೇಶವಾಗಿತ್ತು. ಪುಣೆ ಮತ್ತು ಮರಾಠ ಪ್ರಾಂತ್ಯಗಳಲ್ಲಿ ಬ್ರಾಹ್ಮಣರನ್ನು ಬಡಿದೆಬ್ಬಿಸಲು ತಿಲಕ್ ಅತ್ಯಂತ ಸಮರ್ಥವಾದ ತಂತ್ರವನ್ನು ಕಂಡುಕೊಂಡಿದ್ದರು.
ಇಲ್ಲಿಯವರೆಗೆ : ಚಿತ್ಪಾವನ ಬ್ರಾಹ್ಮನಿಸಮ್ಮಿನ ಆರಂಭಿಕ ರಾಜಕೀಯ ಚಟುವಟಿಕೆಗಳು
ವಿಷ್ಣುಶಾಸ್ತ್ರಿ ಚಿಪ್ಲುಂಕರ್ ಜನಪ್ರಿಯಗೊಳಿಸಿದ ಅವೈಚಾರಿಕ ಬ್ರಾಹ್ಮಣಿಸಂ ಅನ್ನು ಮರಾಠ ಪ್ರಾಂತ್ಯ ಮಾತ್ರವಲ್ಲದೆ, ಅದರಾಚೆಗೂ ವ್ಯಾಪಿಸಿದ ವ್ಯಕ್ತಿ ಬಾಲಗಂಗಾಧರ್ ತಿಲಕ್. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅತ್ಯಂತ ಮುಖ್ಯ ವ್ಯಕ್ತಿಗಳಲ್ಲೊಬ್ಬರು ತಿಲಕ್ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಗಾಂಧಿಪೂರ್ವ ಸ್ವಾತಂತ್ರ್ಯ ಹೋರಾಟದ ಪ್ರಮುಖ ಕಾಲ ಲಾಲ್-ಬಾಲ್-ಪಾಲ್ ಯುಗ. ಲಾಲಾ ಲಜಪತ್ ರಾಯ್, ಬಿಪಿನ್ ಚಂದ್ರ ಪಾಲ್, ಬಾಲಗಂಗಾಧರ್ ತಿಲಕ್ ಎಂಬ ಮೂರು ವ್ಯಕ್ತಿಗಳು ಬ್ರಿಟಿಷ್ ಇಂಡಿಯಾದ ಮೂರು ಸ್ಥಳಗಳಲ್ಲಿ ಬ್ರಿಟಿಷರ ವಿರುದ್ಧ ಜನಾಭಿಪ್ರಾಯ ಮತ್ತು ಹೋರಾಟ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ತಮ್ಮ ಶೋಷಣೆಯ ಅಡಿಪಾಯದ ಆಡಳಿತಕ್ಕೆ ಇವರುಗಳು, ಅದರಲ್ಲೂ ಮುಖ್ಯವಾಗಿ ತಿಲಕ್, ಮಾರಕವಾಗುತ್ತಾರೆ ಎಂದು ಬ್ರಿಟಿಷ್ ಅಧಿಕಾರಿಗಳು ಮನಗಂಡಿದ್ದರು.
ಪ್ರಜಾಪ್ರಭುತ್ವವಾದಿ ಇತಿಹಾಸದ ಕಣ್ಣೋಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಎಲ್ಲರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಕಾಣಲಾಗಿತ್ತು. ಆ ಅರ್ಥದಲ್ಲಿ ತಿಲಕ್ ಕಾಲಮಾನದಲ್ಲಿ ಅವರಷ್ಟು ದೊಡ್ಡ ಇನ್ನೊಬ್ಬ ಸ್ವಾತಂತ್ರ್ಯ ಹೋರಾಟಗಾರನನ್ನು ಗುರುತಿಸುವುದು ಕಷ್ಟಸಾಧ್ಯ. ಆದರೆ, ಭೂತ ಕಾಲಕ್ಕೆ ಬೇರೆ ಯಾವ ಕಾಲಕ್ಕಿಂತಲೂ ಅತಿಯಾದ ಮಹತ್ವವಿರುವ ಹಿಂದುತ್ವದ ಈ ಕಾಲದಲ್ಲಿ, ಬ್ರಿಟಿಷ್ ವಿರೋಧಿ ಎಂಬ ಒಂದೇ ಒಂದು ಅಂಶದೊಳಗಿಟ್ಟು ಆ ಕಾಲದ ಭಾರತದ ರಾಜಕೀಯ ಇತಿಹಾಸವನ್ನು ಗಣನೆಗೆ ತೆಗೆದುಕೊಳ್ಳುವುದು ಸರಿಯಾದ ನಡೆಯಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಪಳಸಿರಾಜನಿಂದ ಹಿಡಿದು ಸಾವರ್ಕರ್‌ತನಕದವರು ಬ್ರಿಟಿಷರನ್ನು ಎದುರಿಸಿದಲ್ಲಿ ಒಂದೇ ಒಂದು ಅಂಶ ಸಮಾನವಾಗಿರುವುದು. ಅದು ಅವರೆಲ್ಲ ಬ್ರಿಟಿಷ್ ವಿರೋಧಿಗಳಾಗಿದ್ದರು ಎಂಬುದು ಮಾತ್ರ. ಅದಕ್ಕೆ ಕಾರಣ, ಒಂದು ಸಾಮಾಜಿಕ ಮೌಲ್ಯದೊಂದಿಗಿನ ಅತಿಯಾದ ನಿಷ್ಠೆಯೋ, ಸಾಮ್ರಾಜ್ಯವಾದದ ವಿರುದ್ಧದ ರಾಜಕೀಯ ವಿರೋಧವೋ ಆಗಬೇಕೆಂದಿಲ್ಲ. ಬದಲಗಿ ತಮ್ಮ ಪ್ರಾಬಲ್ಯದ ಮೇಲೆ ಇನ್ನೊಂದು ಬಾಹ್ಯ ಶಕ್ತಿಯ ಪ್ರವೇಶ ಉಂಟು ಮಾಡಿದ ಅಸ್ವಸ್ಥತೆಗಳ ಕಾರಣದಿಂದಲೂ ಆಗಿರಬಹುದು.
ಒಂದರ್ಥದಲ್ಲಿ ಬ್ರಿಟಿಷರ ಪ್ರವೇಶದಿಂದ ಭಾರತದಲ್ಲಿ ಒಂದು ಅವಳಿ ಹುಟ್ಟುಪಡೆಯುತ್ತದೆ. ಹತ್ತೊಂಬತ್ತನೇ ಶತಮಾನದ ಹೊತ್ತಿಗಾಗುವಾಗ ಭಾರತದ ಜಾತಿಪದ್ಧತಿಯು ಭಾರತದ ಬಹುತ್ವದ ಮೇಲೆ ಸ್ಥಾಪಿಸಿದ್ದ ಅಧಿಕಾರಶ್ರೇಣಿಯೊಳಗೆ ನಿರಂತರವಾದ ಸಂಘರ್ಷಗಳು ಶುರುವಾಗಿದ್ದವು. ವರ್ಣವ್ಯವಸ್ಥೆಯ ನೈತಿಕ ಮೌಲ್ಯಗಳೆಲ್ಲ ಪ್ರಶ್ನಿಸಲ್ಪಟ್ಟಿದ್ದವು. ಈ ಪ್ರಶ್ನೆಗಳೆಲ್ಲ ಬಹುತೇಕ ಸಾಮಾನ್ಯವಾದ ಮೌಲ್ಯವೊಂದರ ವಿಭಿನ್ನ ವ್ಯಾಖ್ಯಾನಗಳ ಮೂಲಕವೇ ನಡೆದಿತ್ತು. ಉದಾಹರಣೆಗೆ, ಕೇರಳದಲ್ಲಿ ಶ್ರೀನಾರಾಯಣ ಗುರು ಅದ್ವೈತವನ್ನು ನಿಷೇಧಿಸಿಕೊಂಡು ತನ್ನ ಹೋರಾಟವನ್ನು ಕಟ್ಟಲಿಲ್ಲ. ಬದಲಿಗೆ ಕೆಳಜಾತಿಯೆಂಬ ನೆಲೆಯಲ್ಲಿ ತನ್ನ ಆತ್ಮನಿಷ್ಠೆ ಬಳಸಿಕೊಂಡು ಅದ್ವೈತವನ್ನು ವ್ಯಾಖ್ಯಾನಿಸಲು ಸಾಧ್ಯವಾದ ಕಾರಣದಿಂದ ಜಾತಿಲಕ್ಷಣ ಮತ್ತು ಜಾತಿನಿರ್ಣಯದಂತ ಕವಿತೆಗಳೂ, ಪರಮೇಶಪವಿತ್ರ ಪುತ್ರನೋ, ಕರುಣಾಳು ನೆಬಿ ಮುತ್ತುರತ್ನವೋ? ಮೊದಲಾದ ಸಾಲುಗಳ ಮೂಲಕ ಅನ್ಯ ಧರ್ಮಗಳನ್ನೂ ಗೌರವಿಸುವ ಹಂತಕ್ಕೆ ಗುರುವಿಗೆ ತಲುಪಲು ಸಾಧ್ಯವಾಯಿತು. ಆದರೆ, ಆ ಕಾಲದ ಹಿಂದೂ ಸಂಸ್ಥಾನವಾಗಿದ್ದ ತಿರುವಾಂಕೂರಲ್ಲಿ ಅಲ್ಲಿನ ಪ್ರಭುತ್ವ ಅದೇ ಮೌಲ್ಯವನ್ನು ಬಳಸಿಕೊಂಡು ಜಾತಿಪದ್ಧತಿಯನ್ನು ಇನ್ನಷ್ಟು ಬಲಪಡಿಸಿತ್ತು ಎಂಬುದನ್ನೂ ಕಾಣಬಹುದು.
ಇದನ್ನೂ ಓದಿ : ಅಧ್ಯಾಯ 1 – ಯಾಕಾಗಿ ಈ ಕಥನ?
ಫಾಡ್ಕೆಯ ಹಾಗೆ ಚಿತ್ಪಾವನ ಪೇಶ್ವಾ ಸಾಮ್ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಕಟ್ಟಿಕೊಳ್ಳುವ ಮೂಲಕ ತಿಲಕ್ ತನ್ನ ಬ್ರಿಟಿಷ್ ವಿರೋಧವನ್ನು ಎತ್ತಿ ಹಿಡಿಯಲಿಲ್ಲ. ಫಾಡ್ಕೆ ಮತ್ತು ತಿಲಕರ ಚಟುವಟಿಕೆಗಳನ್ನು ಗಮನಿಸಿದರೆ ಸುಲಭದಲ್ಲಿ ಗುರುತಿಸಬಹುದಾದ ಒಂದು ಧನಾತ್ಮಕ ವ್ಯತ್ಯಾಸ ಕಾಣಿಸುತ್ತದೆ. ಫಾಡ್ಕೆ ಪೇಶ್ವಾ ಪ್ರಧಾನ್ ಎಂಬ ಬಿರುದನ್ನು ತನಗೆ ತಾನೇ ಕೊಟ್ಟುಕೊಳ್ಳುವಾಗ ಹಿಂದೂ ಧರ್ಮದ ಅವತಾರ ಕಲ್ಪನೆಯೊಳಗೆ ತನ್ನನ್ನು ತಾನು ಗುರುತಿಸಿಕೊಂಡಿದ್ದ. ಅವತಾರಗಳಿಗೆ ಒಂದು ಅಡಿಪಾಯ ಇದೆ. ಶ್ರೀರಾಮ, ಶ್ರೀಕೃಷ್ಣ, ನರಸಿಂಹ ಎಲ್ಲ ಬಾಹ್ಯಕ್ಕೆ ಬೇರೆ ಬೇರೆಯಾಗಿದ್ದರೂ ಅದು ವಿಷ್ಣು ಎಂಬ ಮೂಲತತ್ವದಿಂದ ಹುಟ್ಟಿಕೊಂಡವು. ವಿದೂರಭೂತವೊಂದು ಅವತಾರಗಳನ್ನು ಪರಸ್ಪರ ಬಂಧಿಸುತ್ತದೆ. ಪೇಶ್ವಾ ಎಂಬ ವಿದೂರಭೂತದೊಂದಿಗೆ ಫಾಡ್ಕೆ ತನ್ನನ್ನು ತಾನು ಲೀನಗೊಳಿಸಿದ್ದ. ಆದ್ದರಿಂದ ಫಾಡ್ಕೆಯ ಹೋರಾಟದ ಉದ್ಧೇಶ ಶನಿವಾರವಾಡ ಯುದ್ಧದ ಪರಿಣಾಮವನ್ನು, ಬ್ರಿಟಿಷರಿಗೆ ಪೇಶ್ವೆಗಳು ಶರಣಾಗಬೇಕಾಗಿ ಬಂದ ಗಳಿಗೆಯನ್ನು ತಿರುಗಾ ಮಾಡುವುದೇ ಆಗಿತ್ತು. ಇತಿಹಾಸ ಫಾಡ್ಕೆಯನ್ನು ಆ ಗಳಿಗೆಯಲ್ಲಿ ಬಂಧಿಸಿತು. ತನ್ನ ಸೋಲಿನಲ್ಲಿ ಆತ ಒಬ್ಬ ಪೇಶ್ವೆಯೇ ಆಗಿದ್ದ. ಸೋತು ಹೋದ ಸ್ವಾಭಿಮಾನಿ ಮೇಲ್ಜಾತಿ ರಾಜನಂತೆ ಮ್ಲೇಚ್ಛರ ಕೈಯಿಂದ ತನ್ನನ್ನು ತಾನು ಪಾರಾಗಿಸಲು ಸಾವಿಗೆ ಶರಣಾಗುವುದಲ್ಲದೆ ಆತನಿಗೆ ಬೇರೆ ದಾರಿಯಿರಲಿಲ್ಲ. ಆತ ಬ್ರಿಟಿಷ್ ವಿರೋಧಿಯಾಗಿದ್ದ. ಆದರೆ, ಚಿತ್ಪಾವನ ಬ್ರಾಹ್ಮಣ ಅಂಗಳದಲ್ಲಿ ನಿಂತುಕೊಂಡಿರುವ ವಿರೋಧ ಮಾತ್ರವೇ ಆತನಿಗಿದ್ದದ್ದು.
ತಿಲಕರ ಪೂರ್ತಿ ರಾಜಕೀಯ ಬದುಕನ್ನು ತೆಗೆದು ನೋಡಿದರೆ ತಿಲಕ್ ಫಾಡ್ಕೆಗಿಂತ ಆಧುನಿಕವಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಪೇಶ್ವಾ ಸಾಮ್ರಾಜ್ಯದ ಅಂಗಳದಲ್ಲಿ ನಿಂತುಕೊಂಡು ಮಾತ್ರವೇ ತಿಲಕ್ ಬ್ರಿಟಿಷ್ ವಿರೋಧಿಯಾಗಲಿಲ್ಲ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂಬ ಮತ್ತಷ್ಟು ವಿಶಾಲವಾದ ಅಂಗಳದಲ್ಲಿ ತಿಲಕ್ ನಿಂತಿದ್ದರು. ರಾಜಕೀಯದಲ್ಲಿ ಬಹಳ ಎತ್ತರಕ್ಕೇರಿದರು. ಆಧುನಿಕ ವಿದ್ಯಾಭ್ಯಾಸ ಹೊಂದಿದ ಚಿತ್ಪಾವನ ಬ್ರಾಹ್ಮಣರ ಮೊದಲ ತಲೆಮಾರಿಗೆ ಸೇರಿದ ವ್ಯಕ್ತಿಯಾಗಿದ್ದರು ಆತ. ಆದರೆ, ಶುರುವಿನಲ್ಲಿ ಫಾಡ್ಕೆ ಎತ್ತಿ ಹಿಡಿದಿದ್ದ ಚಿತ್ಪಾವನ ಸಂಪ್ರದಾಯವಾದಿಗಳ ಅದೇ ದಾರಿಯಲ್ಲಿ ಬಹಳ ದೂರ ನಡೆದಿದ್ದರು. ಸಾಮಾಜಿಕವಾಗಿ ತಿಲಕ್ ಬ್ರಾಹ್ಮಣವಾದಿಯಾಗಿದ್ದರು. ರಾಣಡೆಯನ್ನು ನಿರಾಕರಿಸಿದರು. ಚಿಪ್ಲುಂಕರನ್ನು ಅಪ್ಪಿಕೊಂಡರು. ೧೮೮೦ರಲ್ಲಿ ಪುಣೆಯಲ್ಲಿ ಚಿಪ್ಲುಂಕರ್ ಸ್ಥಾಪಿಸಿದ ಇಂಗ್ಲಿಷ್ ಶಾಲೆಯ ಚಟುವಟಿಕೆಗಳಲ್ಲಿ ಆಕರ್ಷಿತರಾಗಿ ಸಾಮಾಜಿಕ ಕ್ಷೇತ್ರಕ್ಕೆ ಧುಮುಕಿದ ತಿಲಕ್ ಮುಂದೆ ಆ ಶಾಲೆಯ ಚಟುವಟಿಕೆಗಳಿಗೆ ನೇತೃತ್ವ ನೀಡಿದರು. ಗಣೇಶ್ ಅಗರ್ಕರ್ ಎಂಬ ಇನ್ನೊಬ್ಬ ಉತ್ಸಾಹಿ ತರುಣ ಕೂಡ ಆಗ ಜೊತೆಯಾಗಿದ್ದರು. ಅವರಿಬ್ಬರು ಸೇರಿಕೊಂಡು ಎರಡು ಪತ್ರಿಕೆಗಳನ್ನು ಶುರು ಮಾಡಿದರು. ಮರಾಠ ಮತ್ತು ಕೇಸರಿ. ಆ ಮೂಲಕ ಸಾಕ್ಷರತೆ ಹೊಂದಿದ ಮರಾಠ ಸಮಾಜವನ್ನು (ಅದರಲ್ಲಿ ಬಹುತೇಕರು ಬ್ರಾಹ್ಮಣರು) ಒಂದು ಮಾಧ್ಯಮ ಸಮಾಜವನ್ನಾಗಿ ಪರಿವರ್ತಿಸಲು ಅವರು ಶ್ರಮಿಸಿದರು.
ಆ ಕಾಲದಲ್ಲಿ ಪುಣೆಯ ಸಾಂಸ್ಕೃತಿಕ ಬದುಕನ್ನು ಅತಿಯಾಗಿ ಪ್ರಭಾವಿಸಿದ್ದ ಎರಡು ಸಂಘಟನೆಗಳು, ಸಾರ್ವಜನಿಕ್ ಸಭಾ ಮತ್ತು ಎಜುಕೇಷನ್ ಸೊಸೈಟಿ ಆಗಿದ್ದವು. ಮೇಲ್ನೋಟಕ್ಕೆ ಮುಸ್ಲಿಮರು ಮತ್ತು ಬ್ರಾಹ್ಮಣೇತರರು ಅದರಲ್ಲಿ ಇದ್ದರಾದರೂ ನಿಜದಲ್ಲಿ ಅವೆರಡೂ ಬ್ರಾಹ್ಮಣ ಸಂಘಟನೆಗಳಾಗಿದ್ದವು. ಆದ್ದರಿಂದಲೇ, ಬ್ರಾಹ್ಮಣರೊಳಗಿನ ಭಿನ್ನಾಭಿಪ್ರಾಯಗಳು ಇವರೆಡರ ಒಳಗೂ ಪ್ರತಿಫಲಿಸುತ್ತಿದ್ದವು. ಅದರ ಭಾಗವಾಗಿಯೇ ತಿಲಕ್ ಮತ್ತು ಅಗರ್ಕರ್ ನಡುವೆಯೂ ಭಿನ್ನಾಭಿಪ್ರಾಯಗಳು ಎದ್ದವು. ಸಾಮಾಜಿಕ ದೃಷ್ಟಿಕೋನದಲ್ಲಿರುವ ವ್ಯತ್ಯಾಸಗಳೇ ಇದರ ಹಿನ್ನೆಲೆಯಲ್ಲಿ ಕೆಲಸ ಮಾಡಿತ್ತು. ಹಿಂದೂ ಸಮಾಜದ ನಿಯಂತ್ರಣವನ್ನು ಸರಕಾರಿ ಕಾನೂನುಗಳ ಮೂಲಕವೇ ಮಾಡಬೇಕು ಎಂದು ಅಗರ್ಕರ್ ವಾದಿಸುವಾಗ ತಿಲಕ್ ಹಿಂದೂ ಸಮಾಜದ ನಿಯಂತ್ರಣ ಸಮಾಜದ ಕೈಯಲ್ಲೇ ಇರಬೇಕು ಎಂದು ವಾದಿಸಿದರು. ಕೊನೆಗೆ ಸಂಪ್ರದಾಯವಾದಿ ಬಣ ಸೇರಿದ ತಿಲಕರಿಗೆ ಸಾರ್ವಜನಿಕ್ ಸಭಾದಿಂದ ಹೊರನಡೆಯಬೇಕಾಯಿತು. ಇದರ ನಡುವೆ ಇಂಗ್ಲೀಷ್ ಶಾಲೆಯ ಆಡಳಿತ ಸಂಘ ಡೆಕ್ಕನ್ ಎಜುಕೇಷನ್ ಸೊಸೈಟಿಯಾಗಿ ವಿಸ್ತರಿಸಿಕೊಂಡಿತ್ತು. ಅದರಡಿಯಲ್ಲಿ ಪುಣೆಯ ಪ್ರತಿಷ್ಠಿತ ಫೆರ್ಗುಸನ್ ಕಾಲೇಜು ಕೂಡ ಆರಂಭವಾಗಿತ್ತು. ತಿಲಕ್-ಅಗರ್ಕರ್ ಸಂಘರ್ಷದ ಮುಂದುವರಿಕೆಯೆಂಬಂತೆ ತಿಲಕ್ ಈ ಸೊಸೈಟಿಯಿಂದಲೂ ಉಚ್ಛಾಟಿಸಲ್ಪಟ್ಟರು. ಆದರೆ, ಮರಾಠ ಮತ್ತು ಕೇಸರಿ ತಿಲಕ್ ಕೈಯಲ್ಲೇ ಉಳಿದವು. ಈ ಪತ್ರಿಕೆಗಳ ಮೂಲಕ ಅತಿಯಾದ ರಾಷ್ಟ್ರೀಯತೆ ಮತ್ತು ಹಿಂದುತ್ವ ಪ್ರಜ್ಞೆಯನ್ನು ಪೋಣಿಸಿಕೊಂಡ ರಾಜಕಾರಣವನ್ನು ತಿಲಕ್ ಶುರು ಮಾಡಿದರು. ೧೮೮೮ರಲ್ಲಿ ಅಗರ್ಕರ್ ಕೇಸರಿ ಮತ್ತು ಮರಾಠವನ್ನು ಬಿಟ್ಟು ಸುಧಾರಕ್ ಎಂಬ ಮರಾಠಿ ಇಂಗ್ಲೀಷ್ ಪತ್ರಿಕೆಯನ್ನು ಶುರು ಮಾಡಿದರು. ಕೇಸರಿ ಮತ್ತು ಮರಾಠ ಪ್ರತಿಪಾದಿಸುತ್ತಿದ್ದ ಸಂಪ್ರದಾಯವಾದಿ ವಿಚಾರಧಾರೆಯನ್ನು ಎದುರಿಸಲು ಸುಧಾರಣಾವಾದಿ ಎಂಬ ಅರ್ಥ ಬರುವ ಸುಧಾರಕ್ ಹೆಸರಿನಲ್ಲಿ ಅಗರ್ಕರ್ ಪತ್ರಿಕೆ ಆರಂಭಿಸಿದ್ದರು.
ಅಧ್ಯಾಯ 2 : ಚಿತ್ಪಾವನ ಬ್ರಾಹ್ಮಣರ ಸಾಮ್ರಾಜ್ಯ ಮತ್ತು ಸಾಮ್ರಾಜ್ಯ ನಷ್ಟ
ಮನುಸ್ಮೃತಿ ಮತ್ತು ಇತರ ಸ್ಮೃತಿಗಳ ಆಧಾರದಲ್ಲಿ ಬ್ರಾಹ್ಮಣ ಪಾರಮ್ಯದ ಆಧುನಿಕ ಶೈಲಿಯನ್ನು ಕಟ್ಟಿಕೊಳ್ಳುವುದು ತಿಲಕ್ ಉದ್ದೇಶವಾಗಿತ್ತು. ಪುಣೆ ಮತ್ತು ಮರಾಠ ಪ್ರಾಂತ್ಯಗಳಲ್ಲಿ ಬ್ರಾಹ್ಮಣರನ್ನು ಬಡಿದೆಬ್ಬಿಸಲು ತಿಲಕ್ ಅತ್ಯಂತ ಸಮರ್ಥವಾದ ತಂತ್ರವನ್ನು ಕಂಡುಕೊಂಡಿದ್ದರು. ಭೂತಕಾಲವನ್ನು ವೈಭವೀಕರಿಸುವುದೇ ಆ ತಂತ್ರವಾಗಿತ್ತು. ಬ್ರಿಟಿಷರ ಆಡಳಿತದಲ್ಲಿ ಬ್ರಾಹ್ಮಣ ಬದುಕನ್ನು, ಅವರ ನಷ್ಟ ಪ್ರಜ್ಞೆಯನ್ನು ಅತ್ಯಂತ ದಾರುಣತೆಯಾಗಿ ಇದರ ಮುಂದೆ ಪ್ರತಿಷ್ಠಾಪನೆ ಮಾಡಿದರು. ಪೇಶ್ವಾ ಸಾಮ್ರಾಜ್ಯದ ಹಾಗೆ ಒಂದು ಪ್ರದೇಶಕ್ಕೆ ಸೀಮಿತವಾದ ರಾಜಕಾರಣ ಅದಾಗಿರಲಿಲ್ಲ. ಮರಾಠ ಸಾಮ್ರಾಜ್ಯದ ಪುನರುಜ್ಜೀವನದಂತಹಾ ಪ್ರಾದೇಶಿಕ ಮಿತಿಯ ಭಾವನೆಗಳು ಮತ್ತು ಮನುಸ್ಮೃತಿಯಂತಾ ಪುರಾತನ ಗ್ರಂಥಗಳಿಗೆ ಬದಲಾಗಿ ರಾಷ್ಟ್ರೀಯತೆ ಎಂಬ ಸಿದ್ಧಾಂತವನ್ನು ಬ್ರಾಹ್ಮನಿಸಮ್ಮಿನ ಅಡಿಪಾಯವಾಗಿ ಮಾಡಿದರು. ಅದೇ ಹೊತ್ತು ಅಗರ್ಕರ್ ಮತ್ತು ಅವರ ಸಿದ್ಧಾಂತದ ಜೊತೆಯಾದ ಗೋಖಲೆ ಮತ್ತು ಅವರ ಸುತ್ತ ಇದ್ದ ಇತರ ಪ್ರಗತಿಪರ ಚಿತ್ಪಾವನ ಬ್ರಾಹ್ಮಣರು ಪೇಶ್ವಾಸಾಮ್ರಾಜ್ಯ ಮತ್ತು ಮನುಸ್ಮೃತಿಯ ಗೋಡೆಗಳನ್ನು ಒಡೆದು ಹೊಸ ಲೋಕಕ್ಕೆ ವ್ಯಾಪಿಸುತ್ತಿದ್ದರು. ಅವರ ಸೈದ್ಧಾಂತಿಕತೆ ಚಿತ್ಪಾವನ ಬ್ರಾಹ್ಮಣ ವಂಶದ ನಷ್ಟದ ಪ್ರಜ್ಞೆಯಲ್ಲಿ ಮುಳುಗಿರಲಿಲ್ಲ. ಒಂದು ಸಮುದಾಯದ ಪ್ರಾಬಲ್ಯಕ್ಕಿಂತ ರಾಷ್ಟ್ರ ನಿಯಮದ ಬ್ರಾಬಲ್ಯವನ್ನು ಅವರು ಬಯಸಿದ್ದರು.
ಈ ವ್ಯತ್ಯಾಸವನ್ನು ಸರಿಯಾಗಿ ಗುರುತಿಸಬೇಕೆಂದರೆ ೧೮೯೧ರ ಏಜ್ ಆಫ್ ಕನ್ಸೆಂಟ್ ಆಕ್ಟ್ ಎಂಬ ಹಿಂದೂ ಹೆಣ್ಣುಮಕ್ಕಳ ವಿವಾಹ ಪ್ರಾಯಕ್ಕೆ ಸಂಬಂಧಿಸಿದ ಕಾನೂನಿನ ಬಗ್ಗೆ ಎರಡು ಪಂಗಡಗಳು ತೆಗೆದುಕೊಂಡ ನಿರ್ಣಯಗಳನ್ನು ನೋಡಬೇಕು. ಬ್ರಿಟಿಷ್ ಸರಕಾರ ಈ ಕಾನೂನಿನ ಮೂಲಕ ಹತ್ತು ವರ್ಷದ ಕೆಳಗಿನ ಹಿಂದು ಹೆಣ್ಣುಮಕ್ಕಳ ಮತ್ತು ಹದಿನಾರು ವರ್ಷದ ಕೆಳಗಿನ ಗಂಡುಮಕ್ಕಳ ವಿವಾಹವನ್ನು ಶಿಕ್ಷಾರ್ಹಗೊಳಿಸಿತ್ತು. ರಾಣಡೆ, ಅಗರ್ಕರ್ ಮತ್ತು ಗೋಖಲೆಯವರ ಸಂಘಟನೆ ಬಹಳ ಕಾಲದಿಂದ ಒತ್ತಾಯಿಸುತ್ತಾ ಬಂದಿದ್ದ ಕಾನೂನಾಗಿತ್ತು ಇದು. ಅದೇ ಹೊತ್ತು ಹಿಂದೂ ಸಮಾಜದ ಮೇಲೆ ಬ್ರಿಟಿಷರು ನಡೆಸುತ್ತಿರುವ ಅತಿಕ್ರಮಣವಾಗಿ ತಿಲಕ್ ಇದನ್ನು ಚಿತ್ರಿಸಿದರು. ಇದರಿಂದಾಗಿ ಸಂಪ್ರದಾಯವಾದಿ ಹಿಂದೂಗಳ ಬೆಂಬಲ ತಿಲಕರಿಗೆ ಲಭಿಸುವಂತಾಯಿತು. ಪೂರ್ಣವಾಗಿ ಅವರ ನಾಯಕ ಸ್ಥಾನಕ್ಕೆ ತಿಲಕ್ ಏರುವುದು ಈ ಮೂಲಕವಾಗಿತ್ತು. ವಿಧವಾ ವಿವಾಹದ ವಿಷಯದಲ್ಲೂ ಈ ಭಿನ್ನಾಭಿಪ್ರಾಯ ಸ್ಪಷ್ಟವಾಗಿತ್ತು. ಕೆಳಜಾತಿ ಸಂಘಟನೆಯಾಗಿದ್ದ ಮಹಾತ್ಮ ಫುಲೆಯ ಸತ್ಯಶೋಧಕ ಸಮಾಜ ವಿಧವಾ ವಿವಾಹಕ್ಕೋಸ್ಕರ ನಿರಂತರವಾಗಿ ಆಗ್ರಹಿಸುತ್ತಿದ್ದ ಸಂಘಟನೆಯಾಗಿತ್ತು. ಅದರ ಬೆಂಬಲಕ್ಕೆ ನಿಂತುಕೊಂಡು ಅಗರ್ಕರ್ ಹಲವು ಪತ್ರಗಳನ್ನು ಬರೆದರು. ಅಗರ್ಕರ್ ಅನುಯಾಯಿಯಾಗಿದ್ದ ಭಂಡಾರ್ಕರ್ ತನ್ನ ವಿಧವೆ ಮಗಳನ್ನು ಪುನಹ ಮದುವೆ ಮಾಡಿಸಿದರು. ಅದೇ ಹೊತ್ತು ತಿಲಕ್ ಮತ್ತು ಅನುಯಾಯಿಗಳು ವಿಧವಾ ವಿವಾಹವನ್ನು ನಖಶಿಖಾಂತ ವಿರೋಧಿಸಿದರು.
ಮಹಾತ್ಮ ಫುಲೆಯ ಜೊತೆ ಕೆಲಸ ಮಾಡುತ್ತಿದ್ದ ಮತ್ತು ವಿವೇಕಾನಂದರು ಭಾಗವಹಿಸಿದ ಚಿಕಾಗೊದ ಸರ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿದ್ದ ಪಂಡಿತ ರಮಾಬಾಯಿ ವಿಧವೆಯರ ವಿದ್ಯಾಭ್ಯಾಸಕ್ಕಾಗಿ ಶಾರದಾ ಸದನ್ ಆರಂಭಿಸಿದಾಗ ಅದನ್ನು ವಿರೋಧಿಸಲು ತಿಲಕ್ ತನ್ನ ಕೇಸರಿಯ ಪುಟಗಳನ್ನು ಬಳಸಿಕೊಂಡರು. ಮಹಿಳೆಯರಿಗೆ ವಿದ್ಯಾಭ್ಯಾಸವೆಂಬುದು ಅವರ ಸಾಮಾಜಿಕ ಸ್ಥಾನಮಾನವನ್ನು ಮೇಲಕ್ಕೇರಿಸಲು ನಡೆಸುವ ಹೂಡಿಕೆ ಎಂಬ ತತ್ವವನ್ನು ತಿಲಕ್ ವಿರೋಧಿಸಿದರು. ಬದಲಿಗೆ, ಗೃಹಿಣಿ ಎಂಬ ತನ್ನ ಕರ್ತವ್ಯವನ್ನು ನಿಭಾಯಿಸಲು ಬೇಕಾದ ಒಂದು ಸಾಧನವಾಗಿ ಮಾತ್ರ ತಿಲಕ್ ಮಹಿಳಾ ವಿದ್ಯಾಭ್ಯಾಸವನ್ನು ಕಂಡರು. ತಿಲಕ್ ಪ್ರಕಾರ ಒಂದು ಹೆಣ್ಣಿನ ಅತ್ಯಂತ ವಿಶಾಲ ಪ್ರಯೋಗಶಾಲೆ ಆಕೆಯ ವೈವಾಹಿಕ ಜೀವನವೇ ಆಗಿತ್ತು. ಅಸ್ಪೃಶ್ಯರಿಗೆ ವಿಧಾನಸಭೆಯಲ್ಲಿ ಮೀಸಲಾತಿ ತಂದಾಗ ಅದರ ಕುರಿತು ತಿಲಕ್ ಅಭಿಪ್ರಾಯ ಹೀಗಿತ್ತು, ʼವಿಧಾನಸಭೆಯಲ್ಲಿ ರೈತರು ಬಂದು ಏನು ಮಾಡುತ್ತಾರೆ? ದರ್ಜಿಗಳು ಅಲ್ಲಿ ಬಂದು ಹೊಲಿಗೆ ಕೆಲಸ ಮಾಡುತ್ತಾರೆಯೇ? ವ್ಯಾಪಾರಿಗಳು ಅಲ್ಲಿ ತಮ್ಮ ತಕ್ಕಡಿ ತೂಗುತ್ತಾರೆಯೇ?ʼ ಎಂದು. ತಿಲಕ್‌ಪರರ ನಿರಂತರವಾದ ದಾಳಿಗಳ ಫಲವಾಗಿ ರಾಣಡೆ ಮೌನವಾದರು. ಆದರೂ, ಡಾ. ಭಂಡಾರ್ಕರ್, ಜಸ್ಟಿಸ್ ತಿಲಾಂಗ್, ಸರ್ ಎನ್.ಜಿ. ಚಂದವರ್ಕರ್ ಮತ್ತು ಗೋಪಾಲ ಕೃಷ್ಣ ಗೋಖಲೆ ಸಹಿತ ಹಲವರು ಪ್ರಗತಿಪರ ವಲಯದಲ್ಲಿ ಗಟ್ಟಿಯಾಗಿ ನಿಂತರು.
೧೮೧೮ರ ಪೇಶ್ವಾ ಸಾಮ್ರಾಜ್ಯ ಪತನದ ನಂತರ ಹಿಂದೂ ಉತ್ಸವಗಳ ಬಣ್ಣ ಮಾಸತೊಡಗಿತ್ತು. ಅವೆಲ್ಲ ಮನೆಗಳ ಒಳಗೆ ಸ್ಥಳಾಂತರಗೊಂಡಿದ್ದವು. ಹಿಂದೂ ಧರ್ಮದ ಜಾತಿಪದ್ಧತಿಯನ್ನು ಸಾಮಾಜಿಕವಾಗಿ ಕಾಯ್ದುಕೊಳ್ಳುವಲ್ಲಿ ಉತ್ಸವಗಳಿಗೆ ದೊಡ್ಡ ಪಾಲಿತ್ತು. ಬ್ರಾಹ್ಮಣ್ಯಕ್ಕೆ ಹಿಂದೂ ಜನಸಮುದಾಯದ ಬುಡದ ತನಕ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಉತ್ಸವಗಳ ಮಧ್ಯಸ್ಥಿಕೆ ಮಹತ್ವದ್ದಾಗಿತ್ತು. ೧೮೯೦ರ ತನಕವೂ ಈ ಉತ್ಸವಗಳು ಸೊರಗಿದವು. ಸಾರ್ವಜನಿಕವಾಗಿ ಅವು ಮಾಯವಾದವು.
೧೮೯೨ರಲ್ಲಿ ಉತ್ಸವಗಳನ್ನು ಸಾರ್ವಜನಿಕ ವಲಯಕ್ಕೆ ಪುನಹ ತರುವ ಪ್ರಜ್ಞಾಪೂರ್ವಕ ಪ್ರಯತ್ನಗಳು ನಡೆಯುತ್ತವೆ. ಸಹಜವಾಗಿಯೇ ಚಿತ್ಪಾವನ ಬ್ರಾಹ್ಮಣರ ರಾಜಕೀಯ ಶಕ್ತಿ ಸಂಚಯಗೊಂಡಿದ್ದ ಪುಣೆ ಇದಕ್ಕೂ ಕೇಂದ್ರವಾಯಿತು. ಪುಣೆಯಲ್ಲಿ ಆಯುರ್ವೇದ ವೈದ್ಯರಾಗಿದ್ದ ಭಾವುಸಾಹೇಬ್ ಲಕ್ಷ್ಮಣ್ ಜಾವ್ಲೆ ಮತ್ತು ಅವರ ಗೆಳೆಯರಾದ ದಗ್ದು ಶೇಟ್ ಹಲ್ವಾಯಿ, ನಾನಾಸಾಹೇಬ್ ಖಸ್ಗಿವಾಲೇ, ಮಹಾಋಷಿ ಅಣ್ಣಾಸಾಹೇಬ್ ಪಟವರ್ಧನ್, ಬಾಳಾಸಾಹೇಬ್ ನಟ್ಟು, ಗಣಪತ್ ರಾವ್ ಗೋರವಾಡೇಕರ್, ಲಕ್ಕು ಶೇಟ್ ದಂಡಾಲೇ ಮೊದಲಾದವರು ಸೇರಿಕೊಂಡು ಒಂದು ಚಪ್ಪರ ಕಟ್ಟಿ ಗಣೇಶೋತ್ಸವವನ್ನು ಸಾರ್ವಜನಿಕ ವಲಯಕ್ಕೆ ಮತ್ತೆ ಬರಮಾಡಿಕೊಂಡರು. ಇದನ್ನು ಭಾವು ರಣಗರಿ ಗಣಪತಿ ಮಂಡಲ್ ಎಂದು ಕರೆದರು. ಹೆಣ್ಣುಮಕ್ಕಳ ವಿವಾಹ ಪ್ರಾಯವನ್ನು ಹೆಚ್ಚಿಸಿದ ಬಿಲ್ಲನ್ನು ನಖಶಿಖಾಂತ ವಿರೋಧಿಸುವ ಮೂಲಕ ಸಂಪ್ರದಾಯವಾದಿ ಬ್ರಾಹ್ಮಣರ ನಡುವೆ ಜನಪ್ರಿಯರಾಗಿದ್ದ ತಿಲಕರ ಗಮನ ಇದರ ಮೇಲೆ ಬಿತ್ತು. ಕೇಸರಿ ಮತ್ತು ಮರಾಠ ಇದಕ್ಕೆ ತಮ್ಮಿಂದಾದಷ್ಟು ಪ್ರಚಾರ ನೀಡಿದವು. ೧೮೯೪ರಲ್ಲಿ ತಿಲಕ್ ಸ್ವತಃ ತಾನೇ ನೇತೃತ್ವ ವಹಿಸಿಕೊಂಡು ವಿನ್ಚುರ್ಕ್‌ವಾಡಾದ ಕೇಸರಿ ಕಛೇರಿಯ ಎದುರಿನಲ್ಲಿ ದೊಡ್ಡದೊಂದು ಚಪ್ಪರ ಕಟ್ಟಿಕೊಂಡು ಗಣಪತಿ ವಿಗ್ರಹ ಇಟ್ಟರು. ರಾಜಕೀಯ ಸಭೆಗಳ ಮೇಲಿದ್ದ ಬ್ರಿಟಿಷ್ ಸರಕಾರದ ನಿಷೇಧವನ್ನು ಧರ್ಮದ ಮರೆಯಲ್ಲಿ ನಿಂತುಕೊಂಡು ಮುರಿಯಲು ತಿಲಕ್ ಈ ಉತ್ಸವವನ್ನು ಬಳಸಿಕೊಂಡರು. ತಿಲಕ್ ಸ್ಥಾಪಿಸಿದ ವಿಗ್ರಹಗಳು ಸಾಮಾನ್ಯ ಗಣಪತಿ ವಿಗ್ರಹಗಳಾಗಿರಲಿಲ್ಲ. ಅವು ಅಸುರನಿಗ್ರಹ ಮಾಡುತ್ತಿರುವ ಗಣಪತಿ ವಿಗ್ರಹಗಳಾಗಿದ್ದವು. ಗಣಪತಿ ವಿಗ್ರಹಗಳು ಚಿತ್ಪಾವನ ಪ್ರಜ್ಞೆಯಾಗಿಯೂ ಅಸುರ ವಿಗ್ರಹಗಳು ಬ್ರಿಟಿಷ್ ಸರಕಾರವಾಗಿಯೂ ಕಾಣುವ ಹೊಸತೊಂದು ಸಂಜ್ಞಾಭಾಷೆಗೆ ಈ ಮೂಲಕ ತಿಲಕ್ ರೂಪು ನೀಡಿದರು. ವಿಘ್ನೇಶ್ವರನಾದ ಗಣಪತಿ ಬ್ರಾಹ್ಮಣರ ಯುದ್ಧದಲ್ಲಿ ಎದುರು ಬರುವ ಅಡೆತಡೆಗಳನ್ನು ನಿವಾರಿಸಿಕೊಡುತ್ತಾನೆಂಬ ಅಭಯವನ್ನೂ ಈ ಮೂಲಕ ಪಸರಿಸಲಾಯಿತು.
ಬ್ರಾಹ್ಮಣಿಸಮ್ಮಿನ ಪ್ರಚಾರಕ್ಕೆ ಸಾಂಸ್ಕೃತಿಕ ರಾಜಕಾರಣ ಒಂದು ಮುಖ್ಯವಾದ ದಾರಿ ಎಂದು ತಿಲಕ್ ಕಂಡುಕೊಳ್ಳುವುದು ಈ ವಿಜಯದ ಮೂಲಕ. ತಾನು ನಿರೂಪಿಸಿದ್ದ ನವಬ್ರಾಹ್ಮನಿಸಂ ಬರಿಯ ಬ್ರಾಹ್ಮಣರಿಗಲ್ಲದೆ ಒಂದು ಜನಪ್ರಿಯ ಅಗತ್ಯತೆಯಾಗಿತ್ತು ಎಂದು ತಿಲಕ್ ಮನಗಾಣುವುದು ಕೂಡ ಈ ಹೊತ್ತಲ್ಲಿ. ಉತ್ಸವಗಳ ಜನಪ್ರಿಯತೆಯನ್ನು ಬ್ರಾಹ್ಮಣಿಸಂ ಸುಲಭದಲ್ಲಿ ಆಪೋಶನ ತೆಗೆದುಕೊಳ್ಳಬಹುದು ಎಂದು ಮನಗಂಡ ತಿಲಕರನ್ನು ನಾವು ಇಲ್ಲಿ ಗುರುತಿಸಬಹುದು.
ಆ ಕಾಲದ ತಿಲಕರ ಚಟುವಟಿಕೆಗಳನ್ನು ಗಮನಿಸಿದರೆ ಅದು ಬ್ರಿಟಿಷ್ ವಿರೋಧಿ ಎಂಬ ಹಾಗೆಯೇ ಮುಸ್ಲಿಂ ವಿರೋಧಿಯೂ ಆಗಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಲು ಕಷ್ಟವೇನಲ್ಲ. ಗಣೋಶೋತ್ಸವದ ಆರಂಭ ಈ ಹಿನ್ನೆಲೆಯನ್ನೂ ಒಳಗೊಂಡಿತ್ತು. ಅದು ಬ್ರಿಟಿಷ್ ಇಂಡಿಯಾದ ಹಲವು ಭಾಗಗಳಲ್ಲಿ ಹಿಂದೂ-ಮುಸ್ಲಿಂ ಸಂಘರ್ಷ ನಡೆಯುತ್ತಿದ್ದ ಕಾಲವಾಗಿತ್ತು. ಗೋವಧೆ, ʼವರಾಹʼವಧೆಗಳ ಜೊತೆಗೆ ಶತ್ರುತ್ವ ಹೆಚ್ಚಿಸಲು ವಾದ್ಯಘೋಷಾದಿಗಳ ಬಳಕೆಯೂ ಆ ಸಂಘರ್ಷದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಉದಾಹರಣಗೆ, ೧೮೯೪ ಫೆಬ್ರವರಿ ೬ ರಂದು ನಾಸಿಕ್ ಬಳಿ ನಡೆದ ಒಂದು ಘಟನೆ ನೋಡೋಣ. ಸ್ಥಳೀಯ ಮಸೀದಿಯೊಂದರಲ್ಲಿ ಹಂದಿಯ ತಲೆ ಕಡಿದು ಹಾಕಿದ್ದಾರೆಂಬ ಸುದ್ದಿ ಕೇಳಿ ಇಸ್ಲಾಂ ಧರ್ಮಾನುಯಾಯಿಗಳು ಸಿಡಿದೆದ್ದರು. ಮಮ್ಲತ್ ದಾರ್ (ಕಲೆಕ್ಟರ್) ಪರಿಶೀಲನೆಯಲ್ಲಿ ಮಸೀದಿಯೊಳಗೆ ಹಂದಿಯ ದೇಹಭಾಗಗಳು ಸಿಕ್ಕವು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ದೇವಸ್ಥಾನದಲ್ಲಿ ಹಸುವಿನ ದೇಹದ ಭಾಗಗಳು ಕಾಣಿಸಿಕೊಂಡವು. ಇದರೊಂದಿಗೆ ಸಂಘರ್ಷವು ಮಸೀದಿ ಮತ್ತು ದೇವಸ್ಥಾನದಿಂದ ಹೊರ ಬಂದು ಬೀದಿಗೆ ಇಳಿಯಿತು. ಮುರಳೀಧರ ದೇವಸ್ಥಾನಕ್ಕೆ ಮುಸ್ಲಿಮರು ಬೆಂಕಿ ಹಚ್ಚಿದ್ದಾರೆಂಬ ವದಂತಿಗಳು ಹರಡಿದವು. ಇದರ ಬೆನ್ನಿಗೆ ಹಲವಾರು ಮಸೀದಿಗಳ ಮೇಲೆ ದಾಳಿ ನಡೆಯಿತು. ದೇವಸ್ಥಾನಗಳ ಮೇಲೂ ದಾಳಿಗಳಾದವು. ಅಂತಿಮವಾಗಿ ನಾಲ್ಕು ಜನರ ಸಾವಿನೊಂದಿಗೆ ಇದು ಕೊನೆಯಾಯಿತು. ಭೀಷ್ಮ ಸಾಹನಿಯವರ ತಮಸ್ ತರದ ಕಾದಂಬರಿಗಳಲ್ಲಿ ಇಂತಹಾ ವಿದ್ವಂಸಕಾರಿ ಸಾಮಾಜಿಕ ಘಟನೆಗಳ ವಿವರವಾದ ಪ್ರಸ್ತಾಪಗಳಿವೆ.
ಹಿಂದೂ ಸಂಘಟನೆಗಳ ರೂಪೀಕರಣದೊಂದಿಗೆ ಇಂತಹ ಸಂಘರ್ಷಗಳು ಆಕಸ್ಮಿಕವೋ, ಒಂದರ್ಥದಲ್ಲಿ ಅನೈಚ್ಛಿಕವೋ ಅಲ್ಲದಾದವು. ದಯಾನಂದ ಸರಸ್ವತಿಯವರ ನೇತೃತ್ವದ ಆರ್ಯಸಮಾಜ ಉತ್ತರಭಾರತದಾದ್ಯಂತ ಗೋಸಂರಕ್ಷಣಸಭಾಗಳನ್ನು ವ್ಯಾಪಕವಾಗಿ ಹಬ್ಬಿಸಿದವು. ೧೮೯೦ರ ಹೊತ್ತಿಗೆ ಡೆಕ್ಕನ್ ಪ್ರದೇಶದಲ್ಲಿ ಗೋಸಂರಕ್ಷಣಸಭಾಗಳ ಚಟುವಟಿಕೆ ವ್ಯಾಪಿಸಿದವು. ಅಹಮದ್ ನಗರ, ಬೆಳಗಾವಿ, ಧಾರವಾಡ, ಪುಣೆ, ಸತಾರ, ನಾಸಿಕ್ ಮೊದಲಾದ ನಗರಗಳಲ್ಲೆಲ್ಲ ಈ ಸಭೆಗಳು ತಮ್ಮ ಚಟುವಟಿಕೆ ಶುರು ಮಾಡಿದಾಗ ಸಂಘರ್ಷಗಳ ವ್ಯಾಪ್ತಿಯೂ ಹೆಚ್ಚಿತು. ಮಸೀದಿಗಳ ಮುಂದೆ ವಾದ್ಯಘೋಷಾದಿಗಳೊಂದಿಗೆ ನಡೆಯುವ ಹಿಂದೂ ಮೆರವಣಿಗೆಗಳನ್ನು ೧೮೫೯ ರಲ್ಲಿ ಬಾಂಬೆ ಸದರಿನ ಫೌಜುದಾರಿ ಅದಾಲತ್ (ಕೋರ್ಟ್) ನಿಷೇಧಿಸಿತ್ತು.
ಇಂತಹಾ ಪರಿಸ್ಥಿತಿಯಲ್ಲಿ ಡೆಕ್ಕನ್ ಪ್ರದೇಶದ ಜನಜೀವನವನ್ನು ಸಮತೋಲನಗೊಳಿಸುವ ಪ್ರಯತ್ನವನ್ನು ತಿಲಕ್ ಮತ್ತು ಕೇಸರಿ ಮಾಡುವುದಿಲ್ಲ. ಬದಲಿಗೆ ಕೇಸರಿಯ ಮೂಲಕ ಮುಸ್ಲಿಂ ವಿರೋಧಿ ಲೇಖನಗಳನ್ನು ಬೆನ್ನು ಬೆನ್ನಿಗೆ ಬರೆದರು. ಬ್ರಿಟಿಷ್ ಸರಕಾರ ಮುಸ್ಲಿಮರ ಓಲೈಕೆ ಮಾಡುತ್ತಿದೆ ಎಂದು ತಿಲಕ್ ಆರೋಪಿಸಿದರು. ನಿಜದಲ್ಲಿ ಒಡೆದು ಆಳುವುದೇ ಬ್ರಿಟಿಷರ ತಂತ್ರವಾಗಿತ್ತು. ಅಂತಹ ಯಾವ ಅವಕಾಶವನ್ನು ಬ್ರಿಟಿಷರು ಕೈಚೆಲ್ಲುತ್ತಿರಲಿಲ್ಲ. ಹೀಗಿರುವಾಗ, ರಾಜ್ಯನಷ್ಟ ಹೊಂದಿದ ಒಂದು ಸಮುದಾಯದ ಪ್ರತಿನಿಧಿ ಎಂಬ ನೆಲೆಯಲ್ಲಿ ತಿಲಕ್ ಒಂದರ್ಥದಲ್ಲಿ ಬ್ರಿಟಿಷರಿಗೆ ಅವಕಾಶಗಳನ್ನು ಸೃಷ್ಟಿಸಿ ಕೊಡುತ್ತಿದ್ದರು ಎಂದು ಬೇಕಿದ್ದರೆ ವಾದಿಸಬಹುದು. ಆದರೆ, ಅದಕ್ಕೂ ಮಿಗಿಲಾಗಿ ಬ್ರಾಹ್ಮಣ ಪ್ರಾಬಲ್ಯದ ದೀರ್ಘಾಧಿಪತ್ಯವನ್ನು ಗುರಿಯಾಗಿಟ್ಟುಕೊಂಡು ತಿಲಕ್ ತನ್ನ ಪ್ರತಿಯೊಂದು ಹೆಜ್ಜೆಗಳನ್ನೂ ಇಡುತ್ತಿದ್ದರು ಎಂಬುದನ್ನು ತಿಲಕರ ರಾಜಕೀಯ ಚಿತ್ರಣ ನಮಗೆ ತಿಳಿಸುತ್ತದೆ.
ಹಿಂದೂ ಘೋಷಯಾತ್ರೆಗಳಲ್ಲಿ ವಾದ್ಯಘೋಷಾದಿಗಳ ಬಳಕೆಗೆ ಇದ್ದ ನಿಷೇಧವನ್ನು ಗಣೇಶೋತ್ಸವದ ಮೂಲಕ ತಿಲಕ್ ದಾಟಿದರು. ಗಣೇಶೋತ್ಸವದ ಅತಿ ಮುಖ್ಯ ಘಟ್ಟ ಗಣಪತಿ ವಿಗ್ರಹಗಳನ್ನು ಎತ್ತಿ ಹಿಡಿದುಕೊಂಡು ಸಾಗುವ ಮೆರವಣಿಗೆಗಳೇ ಆಗಿದ್ದವು. ಈ ಮೆರವಣಿಗೆಗಳು ಶಾಂತವಾಗಿಯೋ ಭಕ್ತಿ ನಿರ್ಭರವಾಗಿಯೋ ಇರಲೇ ಇಲ್ಲ. ಹಿಂದೂಗಳು ಆಯುಧ ಕೈಗೆತ್ತಿಕೊಂಡು ಬಾಹ್ಯ ಶಕ್ತಿಗಳನ್ನು ಹೊಡೆದೋಡಿಸಲು ಶಿವಾಜಿಯ ಹಾಗೆ ಹೋರಾಡಬೇಕೆಂಬ ಆಹ್ವಾನಗಳೇ ಈ ಮೆರವಣಿಗೆಯ ಮುಖ್ಯ ಘೋಷಣೆಯಾಗಿತ್ತು. ವಿಕೇಂದ್ರಿತವಾದ ವ್ಯವಸ್ಥೆಗಳನ್ನು ತಿಲಕ್ ಇದಕ್ಕಾಗಿ ಮಾಡಿಕೊಂಡಿದ್ದರು. ಯುವಕರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡ ಮೇಳ ಎಂದು ಕರೆಯಲ್ಪಡುತ್ತಿದ್ದ ಸಂಘಗಳು ಎಲ್ಲ ಕಡೆಯೂ ಗಣೇಶೋತ್ಸವಗಳನ್ನು ಆಯೋಜಿಸುತ್ತಿದ್ದವು. ಮೇಳದ ಸದಸ್ಯರು ಕಪ್ಪು ಬಟ್ಟೆಗಳನ್ನು ಧರಿಸುತ್ತಿದ್ದರು. ಮುಸ್ಸೊಲಿನಿಯ ಕಪ್ಪು ಸಮವಸ್ತ್ರಧಾರಿಗಳ ಹಾಗೆ. ಉತ್ಸವದ ಕಾಲಾವಧಿ ಹತ್ತು ದಿನಗಳು ಎಂದು ನಿಶ್ಚಯಿಸಲಾಯಿತು. ಈ ಹತ್ತು ದಿನಗಳಲ್ಲೂ ಗಣಪತಿ ವಿಗ್ರಹಗಳನ್ನು ಹೊತ್ತುಕೊಂಡು ನಗರ ಪ್ರದಕ್ಷಿಣೆ ಹಾಕಬೇಕು. ಸಮಕಾಲೀನ ರಾಜಕೀಯ ಚಟುವಟಿಕೆಗಳನ್ನು ಜನಪ್ರಿಯ ಹಾಡುಗಳ ಒಳಗೆ ತೂರಿಸಲು ಇವರು ಮರೆಯಲಿಲ್ಲ. ಇದರೊಂದಿಗೆ ಧರ್ಮದ ಪರದೆಯಿಂದ ರಾಜಕಾರಣದ ಪರದೆಯ ಕಡೆಗೆ ಚಲಿಸುವ ಗುಣವೊಂದು ಈ ಉತ್ಸವಗಳಿಗೆ ಲಭಿಸಿತು. ಧಾರ್ಮಿಕವಾಗಿಯೂ ರಾಜಕೀಯವಾಗಿಯೂ ಬ್ರಾಹ್ಮಣಿಸಮ್ಮಿನ ಪ್ರಾಬಲ್ಯವನ್ನು ಗಟ್ಟಿಗೊಳಿಸಲು ಈ ಮೂಲಕ ಒಂದೇಟಿಗೆ ಸಾಧ್ಯವಾಯಿತು. ರಾಜಕೀಯ ಬ್ರಾಹ್ಮಣಿಸಮ್ಮಿನ ಕಣ್ಣು ಕೋರೈಸುವ ವೈಭವ, ಅದರ ಚಿತ್ಪಾವನ ಪ್ರೇಮವನ್ನು ಗಟ್ಟಿಗೊಳಿಸುವ ಜೊತೆಗೆ ಬ್ರಾಹ್ಮಣೇತರವಾದ ಒಂದು ಬಾಹ್ಯ ವಾತಾವರಣವನ್ನೂ ಸೃಷ್ಟಿಸಿತು.
ಗಣೇಶೋತ್ಸವದ ವಿಜಯದ ಮೂಲಕ ಕಂಡುಕೊಂಡ ಸಾಂಸ್ಕೃತಿಕ ರಾಜಕಾರಣದ ಎರಡನೇ ಹೆಜ್ಜೆಯನ್ನು ತಿಲಕ್ ಇಡುವುದು ಶಿವಾಜಿ ಉತ್ಸವದ ಯೋಜನೆಯ ಮೂಲಕ. ೧೯೧೦ ರಲ್ಲಿ ಪ್ರಕಟಗೊಂಡ, ಬ್ರಿಟಿಷ್ ಪತ್ರಕರ್ತ ವ್ಯಾಲೆಂಟೈನ್ ಚಿರೋಲ್ ಬರೆದ ಇಂಡಿಯನ್ ಅನ್‌ರೆಸ್ಟ್ ಎಂಬ ಪುಸ್ತಕದಲ್ಲಿ ಶಿವಾಜಿ ಉತ್ಸವದ ಆರಂಭದ ಬಗ್ಗೆ ವಿವರಿಸುತ್ತಾರೆ. (ಇದೇ ಪುಸ್ತಕದಲ್ಲಿ ತಿಲಕರನ್ನು ಭಾರತದ ಅಶಾಂತಿಯ ಪಿತಾಮಹ ಎಂದು ಲೇಖಕರು ಕರೆಯುತ್ತಾರೆ. ತಿಲಕ್ ಬ್ರಿಟಿಷ್ ಕೋರ್ಟಲ್ಲಿ ಚಿರೋಲ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿ ಅದರಲ್ಲಿ ಸೋತದ್ದು ಇನ್ನೊಂದು ಇತಿಹಾಸ). ಜೀವಿತಕಾಲದಲ್ಲಿ ಕೊಂಡಾಡಲ್ಪಟ್ಟಿದ್ದರೂ ಮರಣದ ನಂತರದ ಶಿವಾಜಿಯ ನೆನಪು, ಅದರಲ್ಲೂ ಪೇಶ್ವ ಸಾಮ್ರಾಜ್ಯದ ಪತನದ ನಂತರ, ಬಹಳ ಕಾಲ ವಿಸ್ಮೃತಿಯಲ್ಲೇ ಉಳಿಯಿತು. 1896ರಲ್ಲಿ ತಿಲಕ್ ಶಿವಾಜಿ ಉತ್ಸವ ಆರಂಭಿಸುವ ಮೊದಲು ಒಬ್ಬ ಬ್ರಿಟಿಷ್ ಅಧಿಕಾರಿ ಶಿವಾಜಿಯ ಸಮಾಧಿಗೆ ಭೇಟಿ ನೀಡಿದ್ದರು. ಯಾರೂ ಗಮನಿಸದೆ ಪಾಳುಬಿದ್ದಿದ್ದ ಅವರ ಅವಸ್ಥೆ ಕಂಡು ಬೇಸರಗೊಂಡ ಅವರು ಸ್ಥಳೀಯ ಪತ್ರಿಕೆಯೊಂದರಲ್ಲಿ ಅದರ ಕುರಿತು ಬರೆದಿದ್ದಾರೆ. ಮಹಾರಾಷ್ಟ್ರೀಯರು ತಮ್ಮ ರಾಷ್ಟ್ರೀಯ ನಾಯಕನ ಸಮಾಧಿಗೆ ನೀಡಿರುವ ಶೋಚನೀಯ ಸ್ಥಿತಿಯನ್ನು ಎತ್ತಿ ತೋರಿಸಿದ ಆ ಲೇಖನ ತಿಲಕರನ್ನು ಶಿವಾಜಿ ಉತ್ಸವದ ಕಲ್ಪನೆಗೆ ಹಚ್ಚಿತ್ತು. ಶಿವಾಜಿ ನೆನಪುಗಳನ್ನು ಪುನಃ ತರುವ ಮೂಲಕ ತಿಲಕದಲ್ಲಿ ಹಲವಾರು ಸಂಗತಿಗಳ ಸಂಗಮವನ್ನು ಮನದಲ್ಲಿ ಕಂಡಿರಬಹುದು.
ಪೇಶ್ವಾಸಾಮ್ರಾಜ್ಯ ಎಂದು ಹೆಸರುವಾಸಿಯಾಗಿದ್ದ ಚಿತ್ಪಾವನ ಬ್ರಾಹ್ಮಣರು ಅಧಿಕಾರ ನಡೆಸಿದ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿಕೊಟ್ಟದ್ದು ಚಿತ್ಪಾವನ ಬ್ರಾಹ್ಮಣನಲ್ಲದ ಶಿವಾಜಿಯಾಗಿದ್ದ. ಬ್ರಾಹ್ಮನಿಸಂ ಗಟ್ಟಿಯಾಗಬೇಕಿದ್ದರೆ ಅದರ ಸುತ್ತ ಬ್ರಾಹ್ಮಣೇತರ ಸಮುದಾಯಗಳ ಸಾನಿಧ್ಯವನ್ನು ಗಟ್ಟಿಗೊಳಿಸಬೇಕಿತ್ತು. ಅದಕ್ಕೆ ಬಳಸಬಹುದಾದ ಅತ್ಯುತ್ತಮ ಬಿಂಬವೇ ಮರಾಠ ಸಮುದಾಯದ ಶಿವಾಜಿ. ಶಿವಾಜಿ ಮತ್ತು ಆತನ ಬ್ರಾಹ್ಮಣ ಗುರುವಾಗಿದ್ದ ರಾಮದಾಸರ ನಡುವಿನ ಸಂಬಂಧವು ತಿಲಕ್ ಕಟ್ಟುತ್ತಿದ್ದ ನವಬ್ರಾಹ್ಮಣಿಸಮ್ಮಿಗೆ ಸುಲಭದಲ್ಲಿ ಉಪಯೋಗಿಸಬಹುದಾದ ಸಾಂಸ್ಕೃತಿಕ ದ್ವಂದ್ವವಾಗಿತ್ತು. ಡೆಕ್ಕನ್ ಸುಲ್ತಾನ್ ಆದಿಲ್ ಷಾ ಮತ್ತು ಮೊಘಲ್ ದೊರೆ ಔರಂಗಜೇಬ್ ಜೊತೆಗಿನ ಶಿವಾಜಿಯ ಯುದ್ಧಗಳನ್ನು ಮ್ಲೇಚ್ಛರಾದ ಮುಸ್ಲಿಮರು ಮತ್ತು ಬ್ರಿಟಿಷರ ವಿರುದ್ಧದ ಬ್ರಾಹ್ಮಣರ ಹೋರಾಟದೊಂದಿಗೆ ಸಮೀಕರಿಸಲು ಕೂಡ ಸಾಧ್ಯವಾಗಿತ್ತು.
ತಿಲಕರ ಆಸ್ಥಾನಕೇಂದ್ರವಾಗಿದ್ದ ರಾಯಗಡದಲ್ಲಿಯೇ ಶಿವಾಜಿಯ ಪಚ್ಟಾಭಿಷೇಕ ನಡೆದಿತ್ತು ಎಂಬುದು ಕೂಡ ದೊಡ್ಡದೊಂದು ಸಾಧ್ಯತೆಯಾಗಿತ್ತು. ೧೮೯೬ ಮಾರ್ಚ್ ೩ ರ ಕೇಸರಿಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ತಿಲಕ್ ಶಿವಾಜಿ ಉತ್ಸವದ ವಿವರಗಳನ್ನು ಬರೆದಿದ್ದರು. ಶಿವಾಜಿ ಮತ್ತು ರಾಮದಾಸರ ಕುರಿತ ಹಾಡುಗಳು ಅಥವಾ ಪವ್ಡಾಗಳನ್ನು ಹೊಸದಾಗಿ ರಚಿಸಿ ಹಾಡುವುದು, ಕ್ರೀಡಾಸ್ಪರ್ಧೆಗಳು, ಭಜನೆಗಳು ಮತ್ತು ನಾಟಕಗಳ ಪ್ರದರ್ಶನ, ಮರಾಠಾ ಇತಿಹಾಸದ ಕುರಿತ ಭಾಷಣಗಳು ಮೊದಲಾದ ಕಾರ್ಯಕ್ರಮಗಳ ಮೂಲಕ ಬೃಹತ್ತಾದ ಸಾಂಸ್ಕೃತಿಕ ಉತ್ಸವವಾಗಿ ೧೮೯೫ ಏಪ್ರಿಲ್ ೧೫ ರಂದು ರಾಯಘಡದಲ್ಲಿ ಶಿವಾಜಿ ಉತ್ಸವವನ್ನು ಆರಂಭಿಸಲಾಗಿತ್ತು. ಇದರ ಜೊತೆಗೆ, ಉತ್ಸವದ ಸಡಗರದ ವಾತಾವರಣವನ್ನು ಬ್ರಾಹ್ಮಣ ರಾಜಕಾರಣದೊಂದಿಗೆ ಜೋಡಿಸುವ ಪ್ರಜ್ಞಾಪೂರ್ವಕ ಹಸ್ತಕ್ಷೇಪಗಳನ್ನು ನಡೆಸಲು ತಿಲಕ್ ವಿಶೇಷ ಗಮನ ಹರಿಸಿದರು.
ʼಉತ್ಸವದ ಕೇಂದ್ರ ಬಿಂದು ಶಿವಾಜಿ ಮತ್ತು ರಾಮದಾಸರು ಆಗಿರಬೇಕು. ಮೂರು ದಿನಗಳ ಕಾಲ ಇದು ನಡೆಯಬೇಕು. ಅಧ್ಯಯನ ಶಿಬಿರಗಳು, ಭಾಷಣಗಳು, ನಾಟಕಗಳು (ಲೈಂಗಿಕ ಆಕರ್ಷಣೆ ಮತ್ತು ಅಶ್ಲೀಲಗಳಿಲ್ಲದ), ಐತಿಹಾಸಿಕ ಗೀತೆಗಳ ಗಾಯನ… ಮೊದಲಾದವು ಈ ಕಾರ್ಯಕ್ರಮದ ಮುಖ್ಯ ಚಟುವಟಿಕೆಗಳು. ವಿದೇಶಿ ನಿರ್ಮಿತವೋ ಉತ್ಪಾದಿತವೋ ಆದ ಪೆಟ್ರೋಲಿಯಂ, ಮೇಣದ ಬತ್ತಿಗಳು, ಪಿಂಗಾಣಿ ಪಾತ್ರೆಗಳು ಯಾವ ಕಾರಣಕ್ಕೂ ಉತ್ಸವದಲ್ಲಿ ಬಳಸಬಾರದು. ಸ್ವದೇಶಿ ಉತ್ಪನ್ನಗಳನ್ನೇ ಬಳಸಬೇಕು. ಇದರಿಂದ ಉತ್ಸವದ ವೈಭವಕ್ಕೆ ಧಕ್ಕೆಯಾದರೂ ಪರವಾಗಿಲ್ಲ. ಈ ಮೂರೂ ದಿನಗಳಲ್ಲಿ ದಾಸಬೋಧೆ ಮತ್ತು ಶಿವವಿಜಯದ ಭಾಗಗಳನ್ನು ಓದಬೇಕು. ಕೊನೆಯ ದಿನ ಶಿವಾಜಿಯನ್ನು ಹೊಗಳುವ, ವಿಶೇಷವಾಗಿ ರಚಿಸಿದ ಗೀತೆಯನ್ನು ಶಿವಾಜಿಯಷ್ಟು ಎತ್ತರದ ಪಟವನ್ನು ತಲೆಮೇಲೆ ಹೊತ್ತುಕೊಂಡು ಹಾಡಬೇಕು. ಆಯೋಜಕರು ಮತ್ತು ಸ್ವಯಂಸೇವಕರು ಗೀತೆಯನ್ನು ಹಾಡುವಾಗ ಎದ್ದು ನಿಲ್ಲಬೇಕು ಮತ್ತು ಹಾಡು ಮುಗಿಯುವಾಗ ಹರ ಹರ ಮಹಾದೇವ್ ಎಂದು ಜೋರಾಗಿ ಕೂಗಬೇಕು. ಪೂರ್ತಿ ಕಾರ್ಯಕ್ರಮದಲ್ಲಿ ಅತ್ಯಂತ ಪ್ರಮುಖ ಹಂತ ಈ ಗೀತೆ ಹಾಡುವುದೇ ಆಗಿದೆ.ʼ
ತಿಲಕ್ ಪ್ರತಿಪಾದಿಸಿದ ಈ ಗೀತೆಯ ಭಾಷಾಂತರವನ್ನು ವ್ಯಾಲೆಂಟೈನ್ ಚಿರೋಲ್ ಈ ರೀತಿಯಾಗಿ ಮಾಡಿದ್ದ:
ʼಕೆಟ್ಟ ಕಾಲದಲ್ಲಿ ನಾವು ಶೀವಾಜಿಯ ಹಾಗೆ ನುಡಿಯೋಣ. ನಿಮ್ಮ ಖಡ್ಗ ಗುರಾಣಿಗಳನ್ನು ಎತ್ತಿಕೊಳ್ಳಿರಿ. ಶತ್ರುಗಳ ಅಸಂಖ್ಯ ತಲೆಗಳನ್ನು ಚೆಲ್ಲಾಡೋಣ. ಕೇಳಿರಿ! ಪ್ರಾಣವೇ ಕಳೆದುಕೊಳ್ಳಬೇಕಾಗಿ ಬರಬಹುದಾದ ರಾಷ್ಟ್ರಸಮರದಲ್ಲಿ, ನಮ್ಮ ಶತ್ರುಗಳ ಜೀವರಕ್ತ ಹರಿಸಲು ನಾವು ಸನ್ನದ್ಧರಾಗೋಣ.ʼ
ಸ್ವತಹ ತಿಲಕ್ ಅಧ್ಯಕ್ಷತೆ ವಹಿಸಿದ್ದ ಶಿವಾಜಿ ಉತ್ಸವವೊಂದರ ಭಾಷಣದಲ್ಲಿ ಒಬ್ಬ ಬ್ರಾಹ್ಮಣ ಪ್ರೊಫೆಸರ್ ಮಾಡಿದ ಭಾಷಣ ಹೀಗಿತ್ತು:
ʼಒಬ್ಬ ಮಹಮ್ಮದೀಯ ಚಕ್ರವರ್ತಿಯ ಎದುರಲ್ಲಿ ತಲೆಬಾಗಲಾರೆ ಎಂದು ಒಂಭತ್ತನೇ ವಯಸ್ಸಿನಲ್ಲಿ ದೈವೀಕ ಪ್ರಚೋದನೆ ಲಭಿಸಿದ ವ್ಯಕ್ತಿಯನ್ನು ಯಾರು ತಾನೇ ಕೊಲೆಗಾರ ಎಂದು ಕರೆಯಲು ಧೈರ್ಯ ಮಾಡುತ್ತಾರೆ? ದೊಡ್ಡದೊಂದು ಜವಾಬ್ದಾರಿ ನಿರ್ವಹಿಸುವಾಗ ಕೇವಲವಾದ ಏನೋ ಒಂದು ಸಂಗತಿ ಪಾಲಿಸಲಿಲ್ಲ ಎಂಬುದರಲ್ಲಿ ಶಿವಾಜಿಯನ್ನು ದೂರಲು ಯಾರಿಗೆ ಧೈರ್ಯವಿದೆ? ಇದಕ್ಕಿಂತಲೂ ಐದೋ ಐವತ್ತೋ ಪಟ್ಟು ದೊಡ್ಡದಾದ ತಪ್ಪು ಶಿವಾಜಿ ಮಾಡಿದ್ದರೂ ಕೂಡ ನಮ್ಮ ಪ್ರಭುವಾದ ಶಿವಾಜಿ ಪ್ರತಿಮೆಯ ಕಾಲಡಿಯಲ್ಲಿ ನೂರು ಸಲ ನಮಸ್ಕಾರ ಮಾಡಲು ನಾನು ತಯಾರಿದ್ದೇನೆ. ಪ್ರತಿಯೊಬ್ಬ ಹಿಂದುವೂ ಪ್ರತಿಯೊಬ್ಬ ಮರಾಠನೂ ಈ ಉತ್ಸವದಲ್ಲಿ ಸಂತೋಷದಿಂದ ಪಾಲ್ಗೊಳ್ಳಬೇಕು. ಯಾಕೆಂದರೆ, ನಾವು ಕೂಡ ಕಳೆದುಕೊಂಡ ಸ್ವಾತಂತ್ರ್ಯವನ್ನು ಮರಳಿ ಪಡೆಯುವ ಹೋರಾಟದಲ್ಲಿದ್ದೇವೆ. ಆ ಯೋಜನೆಯ ಮೂಲಕ ಮಾತ್ರವೆ ಈ ನೊಗವನ್ನು ಕಿತ್ತೆಸೆಯಲು ನಮ್ಮಿಂದ ಸಾಧ್ಯ.ʼ
ಪೇಶ್ವಾ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ ಶಿವಾಜಿಯ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಗುರುತಿಸಲ್ಪಡುವ ಒಂದು ಅಧ್ಯಾಯ ಅಫ್ಸಲ್ ಖಾನನ ಕೊಲೆ. ಆ ಘಟನೆಯನ್ನೇ ಬ್ರಾಹ್ಮಣ ಪ್ರೊಫೆಸರ್ ಇಲ್ಲಿ ನೆನೆಯುತ್ತಿರುವುದು. ಶಿವಾಜಿಯ ತಂದೆ ಬಿಜಾಪುರದ ಸುಲ್ತಾನರ ಸಾಮಂತನಾಗಿದ್ದ. ಆದರೆ, ತಂದೆಯ ಸಾವಿನ ನಂತರ ಶಿವಾಜಿ ಆಡಳಿತವನ್ನು ಬುಡಮೇಲುಗೊಳಿಸಲು ಪ್ರಯತ್ನಿಸುತ್ತಿದ್ದಾನೆ ಎಂಬ ಗುಮಾನಿ ಆದಿಲ್ ಷಾಗೆ ಶುರುವಾಗುತ್ತದೆ. ವಾಸ್ತವದಲ್ಲಿ ಆದಿಲ್ ಷಾ ಸುಲ್ತಾನ ಆಗಿದ್ದರೂ ಪ್ರಾಯ ಪೂರ್ತಿಯಾಗದ ಕಾರಣ ತಾಯಿ ಆಡಳಿತ ಕಾರ್ಯವನ್ನೆಲ್ಲ ನೋಡಿಕೊಳ್ಳುತ್ತಿದ್ದಳು. ಆಕೆಯ ಅಣತಿಯಂತೆ ಶೀವಾಜಿಯ ತಂದೆಯ ಗೆಳೆಯನೂ ಆಗಿದ್ದ ಅಫ್ಸಲ್ ಖಾನ್ ಶಿವಾಜಿಯೊಂದಿಗೆ ಮಾತುಕತೆ ನಡೆಸಿ ಒಪ್ಪಂದಕ್ಕೆ ಬರಲು ಆದಿಲ್ ಷಾನ ಪ್ರತಿನಿಧಿಯಾಗಿ ಬಂದಿದ್ದ. ಪ್ರತಾಪಗಡದ ಕೋಟೆಯಲ್ಲಿ ಈ ಮಾತುಕತೆ ಆಯೋಜಿಸಲಾಗಿತ್ತು. ೧೬೫೯ ನವೆಂಬರ್ ೧೦ ರ ಈ ಭೇಟಿಯಲ್ಲಿ, ಆ ಕಾಲದ ರಾಜನೀತಿಗೆ ವಿರುದ್ಧವಾಗಿ ಶಿವಾಜಿ ಅಫ್ಸಲ್ ಖಾನ್‌ನನ್ನು ವಂಚನೆಯಿಂದ ಕೊಂದ ಎಂದು ಜೇಮ್ಸ್ ಡಫ್ ತರಹದ ಆರಂಭಿಕ ಇತಿಹಾಸಕಾರರು ದಾಖಲಿಸಿದ್ದಾರೆ. ಆದರೆ, ಮರಾಠ ಬ್ರಾಹ್ಮಣರ ಪುನರುಜ್ಜೀವನದ ಭಾಗವಾಗಿ ನಡೆದ ಪ್ರತಿಚರಿತ್ರೆಯಲ್ಲಿ ಶಿವಾಜಿಯನ್ನು ನ್ಯಾಯೀಕರಿಸುವ ಪ್ರಯತ್ನಗಳು ನಡೆದವು. ಅಫ್ಸಲ್ ಖಾನನ ವಂಚನೆ ತಿಳಿದ ಕಾರಣ ಶಿವಾಜಿ ಆತನನ್ನು ಕೊಂದ ಎಂಬ ರೀತಿಯಲ್ಲಿ ಬರೆಯಲಾಯಿತು.
ಅಫ್ಜಲ್ ಖಾನ್
ತಿಲಕ್ ಕೇಸರಿಯಲ್ಲಿ ಈ ಐತಿಹಾಸಿಕ ಘಟನೆಯನ್ನು ಚರ್ಚಿಸುವುದು ಹೀಗೆ:
ʼಶಿವಾಜಿ ಪೂರ್ವಯೋಜಿತವಾಗಿ ಅಫ್ಸಲ್ ಖಾನನ ಕೊಲೆಯನ್ನು ಮಾಡಿದರೆಂದೇ ಇಟ್ಟುಕೊಳ್ಳೋಣ. ಮಹಾರಾಜರ ಈ ಕೃತ್ಯ ಸರಿಯೋ ತಪ್ಪೋ? ಈ ಪ್ರಶ್ನೆಯನ್ನು ಎದುರಿಸಬೇಕಾಗಿರುವುದು ಕಾನೂನಿನ ವಿಷಯ ಬಿಡಿ, ಮನುವಿನ ಅಥವಾ ಯಾಜ್ಞವಲ್ಕ್ಯನ ಸ್ಮೃತಿಗಳದ್ದೋ, ಪಾಶ್ಚಾತ್ಯ ಮೌರಸ್ತ್ಯ ಸಂಹಿತೆಗಳದ್ದೋ ನೈತಿಕ ಮೌಲ್ಯಗಳ ಮೇಲೆಯೂ ಕೂಡ ನಿಂತುಕೊಂಡಲ್ಲ. ಸಮಾಜದ ನಿಯಮಗಳೆಲ್ಲ ನನ್ನ ಮತ್ತು ನಿಮ್ಮಂತಹ ಸಾಮಾನ್ಯ ಮನುಷ್ಯರಿಗೆ ಮಾತ್ರ. ಯಾರು ಕೂಡ ಒಬ್ಬ ಋಷಿಯ ಮೂಲ ಹುಡುಕುವುದಿಲ್ಲ ಮತ್ತು ರಾಜರ ಮೇಲೆ ಆರೋಪಗಳನ್ನು ಮಾಡುವುದಿಲ್ಲ. ಮಹಾತ್ಮರು ನೈತಿಕ ನಿಯಮಗಳಾಚೆಗೆ ನಿಲ್ಲುವವರು. ಇಂತಹ ತತ್ವಗಳೆಲ್ಲ ಮಹಾತ್ಮರಾದ ಮನುಷ್ಯರ ಪದವಿಗೆ ತಲುಪುವ ಶಕ್ತಿಯನ್ನೇ ಹೊಂದಿಲ್ಲ. ಅಫ್ಸಲ್ ಖಾನನ್ನು ಕೊಲ್ಲುವ ಮೂಲಕ ಪಾಪವೆಸಗಿದರೇ? ಈ ಪ್ರಶ್ನೆಗೆ ಉತ್ತರವನ್ನು ಮಹಾಭಾರತದಿಂದಲೇ ಎತ್ತಿಕೊಳ್ಳೋಣ. ಗೀತೆಯಲ್ಲಿ ಶ್ರೀಕೃಷ್ಣನ ಉಪದೇಶ ನಮ್ಮ ಗುರುಗಳನ್ನೂ ಬಂಧುಗಳನ್ನೂ ಕೊಲ್ಲಬಹುದೆಂದು. ಫಲ ಅಪೇಕ್ಷಿಸದೆ ಕರ್ಮದಲ್ಲಿ ಮುಳುಗುವವರಿಗೆ ಯಾವ ಪಾಪವೂ ಅಂಟಿಕೊಳ್ಳುವುದಿಲ್ಲ. ಶ್ರೀ ಶಿವಾಜಿ ಮಹಾರಾಜರು ತಮ್ಮ ಹೊಟ್ಟೆಯ ಖಾಲಿ ಜಾಗ ತುಂಬಿಕೊಳ್ಳಲೆಂದು ಏನನ್ನೂ ಮಾಡಿದವರಲ್ಲ. ಉದಾತ್ತವಾದ ಉದ್ದೇಶದೊಂದಿಗೆ, ಉಳಿದವರ ಒಳಿತಿಗಾಗಿ ಅವರು ಅಫ್ಸಲ್ ಖಾನನ್ನು ಕೊಂದರು. ಬಾವಿಯೊಳಗಿನ ಕಪ್ಪೆಯಂತೆ ನಿಮ್ಮ ನೋಟವನ್ನು ಪರಿಮಿತಗೊಳಿಸದಿರಿ. ಶಿಕ್ಷಾ ನಿಯಮಗಳಿಂದ ಹೊರಬಂದು ಶ್ರೀಮದ್ ಭಗವತ್ ಗೀತೆಯ ಉನ್ನತ ವಾತಾವರಣದಲ್ಲಿ ನಿಂತುಕೊಂಡು ಮಾತ್ರವೇ ನೀವು ಮಹಾತ್ಮರೆನಿಸಿಕೊಂಡ ವ್ಯಕ್ತಿಗಳ ಕೃತ್ಯಗಳನ್ನು ಕಾಣಿರಿ.ʼ
ಇತರ ಬ್ರಾಹ್ಮಣವಾದಿಗಳ ಹಾಗೆ ಶಿವಾಜಿ ಅಫ್ಸಲ್ ಖಾನನ್ನು ವಂಚನೆಯ ಮೂಲಕ ಕೊಂದಿಲ್ಲವೆಂದು ತಿಲಕ್ ಪ್ರತಿಚರಿತ್ರೆ ನಿರ್ಮಿಸುವುದಿಲ್ಲ. ಬದಲಿಗೆ ವಂಚನೆ ಎಂದು ಸಾಮಾನ್ಯ ಬುದ್ದಿಗೆ ಕಾಣುವ ಒಂದು ಕೆಲಸವನ್ನು ಹಾಗಲ್ಲವೆಂದೂ ಅದರ ಉದಾತ್ತತೆಯನ್ನೂ ತೋರಿಸುವ ಪ್ರಯತ್ನವನ್ನು ತಿಲಕ್ ಮಾಡುತ್ತಾರೆ. ಅದಕ್ಕೆ ಸಹಾಯಕ್ಕೆ ಬರುವುದು ಭಗವತ್ ಗೀತೆ. ವಾಸ್ತವದಲ್ಲಿ ಚಿತ್ಪಾವನ ಬ್ರಾಹ್ಮಣ ವಂಶದ ಸಂಪ್ರದಾಯವಾದಿಗಳ ಶಿವಾಜಿ ಪ್ರೇಮವನ್ನು ಸಮಾಕಾಲೀನಗೊಳಿಸಿ, ಈಗಿನ ಅವರ ಶತ್ರುಗಳಾದ ಬ್ರಿಟಿಷರನ್ನು ಅಫ್ಸಲ್ ಖಾನ್‌ನೊಂದಿಗೆ ಸಮೀಕರಿಸುವ ಕೆಲಸವನ್ನಷ್ಟೇ ತಿಲಕ್ ಮಾಡಿರಲಿಲ್ಲ. ʼಉದಾತ್ತವಾದ ಕರ್ಮಗಳನ್ನುʼ ಮಾಡಲು ಬ್ರಿಟಿಷ್ ಕಾನೂನುಗಳು ಹೇಳುವ ಸನ್ಮಾರ್ಗವನ್ನು ಪಾಲಿಸಬೇಕಾಗಿಲ್ಲ ಎಂದು ಪರೋಕ್ಷವಾಗಿ ಹೇಳಿಮುಗಿಸಿದ್ದಾರೆ ತಿಲಕ್.
ಒಂದು ಚಾರಿತ್ರಿಕ ಘಟನೆಯನ್ನು ಸಮಕಾಲೀನಗೊಳಿಸುವ ಕೆಲಸ ಮಾತ್ರವಲ್ಲ ಇಲ್ಲಿ ನಡೆಯುವುದು. ಯುದ್ಧದಷ್ಟೇ ಶಕ್ತಿಯುತವಾದ ಆಕ್ರಮಣೋತ್ಸಾಹದಿಂದ ಮಾತ್ರವೇ ಬ್ರಿಟಿಷರನ್ನು ಇಲ್ಲಿಂದ ಓಡಿಸಬಹುದು ಎಂದೂ ಹೇಳುತ್ತಿದ್ದಾರೆ. ಆಧುನಿಕ ವಿದ್ಯೆ ಪಡೆದಿದ್ದ ತಿಲಕ್ ಮತ್ತು ಸಂಗಡಿಗರು, ಸ್ವಾತಂತ್ರ್ಯ ನಿಷೇಧದ ಆಧುನಿಕ ಪಾಠಗಳನ್ನು ಎತ್ತಿ ತೋರಿಸಲೇ ಇಲ್ಲ. ಅವರು ತಮ್ಮ ಶಕ್ತಿ ಸಂಚಯ ಮಾಡುತ್ತಿದ್ದದ್ದು ಕೂಡ ಹೊಸ ಲೋಕಾನುಭವದಿಂದ ಆಗಿರಲಿಲ್ಲ. ಬದಲಿಗೆ ರಾಜಾಡಳಿತ ಕಾಲದ ವೀರಕಾರ್ಯಗಳಿಂದಲೇ ಆಗಿತ್ತು. ಆ ವೀರ ಕಾರ್ಯಗಳನ್ನು ಹೊಸತೋ ಹಳತೋ ಆದ ನೈತಿಕ ಪ್ರಜ್ಞೆಗಳು ನಿರ್ಣಯಿಸುತ್ತಿರಲಿಲ್ಲ. ಅವರೇ ಅದನ್ನು ತೀರ್ಮಾನಿಸುತ್ತಿದ್ದರು. ಆಕ್ರಮಣಕಾರಿ ದಾಳಿಕೋರ ತತ್ವಶಾಸ್ತ್ರವೇ ಅವರನ್ನು ಮುನ್ನಡೆಸಿತ್ತು. ಹೀಗೆ ಭೂತಕಾಲದ ಯಾವುದೋ ಸ್ಮರಣೆಗೆ ಒಂದು ಜನಸಮುದಾಯವನ್ನು ನಡೆಸುವುದರ ಮೂಲಕ ವೀರತ್ವದ ಬ್ರಾಬಲ್ಯ ಅವರಿಗೆ ತಾನಾಗಿಯೇ ಲಭಿಸುತ್ತದೆ. ಈ ಹಂತದಲ್ಲಿ ಆ ವೀರತ್ವದ ಉತ್ತರದಾಯಿತ್ವನ್ನು ಎತ್ತಿಕೊಳ್ಳಲು ಚಿತ್ಪಾವನ ಬ್ರಾಹ್ಮಣರು ಮುಂದೆ ಬಂದರು ಎಂಬುದು ಕೂಡ ವಾಸ್ತವ. ಪರದೆಯ ಹಿಂದೆ ನಿಂತು ರಂಗವನ್ನು ನಿಯಂತ್ರಿಸಲು ಅವರು ತಯಾರಿರಲಿಲ್ಲ. ರಂಗದಲ್ಲಿ ನಿಂತು ಆಡಲೆಂದೇ ಅವರು ಸಜ್ಜಾಗಿದ್ದರು.
ಟಿಪ್ಪಣಿಗಳು:
೧. ಶ್ರೀನಾರಾಯಣ ಗುರು, ಅನುಕಂಪಾದಶಕಂ, ೧೯೪೧, ಶ್ಲೋಕ ೭
೨. ವಿಕ್ರಂ ಸಂಪತ್, ಸಾವರ್ಕರ್: ಎಕೋಸ್ ಫ್ರಂ ಎ ಫಾರ್ಗೋಟನ್ ಪಾಸ್ಟ್, ೧೮೮೩ – ೧೯೨೪, ಪೆಂಗ್ವಿನ್ ಬುಕ್ಸ್, ೨೦೧೯, ಪುಟ ೪೧
೩. ಅದೇ ಪುಸ್ತಕ, ಪುಟ ೪೧
೪. ಅದೇ ಪುಸ್ತಕ, ಪುಟ ೪೨
೫. ಅಶೋಕ್ ಕುಮಾರ್ ಪಾಂಡೆ, ವೈ ದೇ ಕಿಲ್ಡ್ ಗಾಂಧಿ: ಅನ್‌ಮಾಸ್ಕಿಂಗ್ ದಿ ಐಡಿಯಾಲಜಿ ಆಂಡ್ ದಿ ಕಾನ್ಸ್ಪಿರಸಿ, ೨೦೨೨, ಪುಟ ೪೦
೬. ಗಣಾಚಾರಿ, ಗೋಪಾಲ್ ಗಣೇಶ್ ಅಗರ್ಕರ್, ಪುಟ ೧೯
೭. ಅಶೋಕ್ ಕುಮಾರ್ ಪಾಂಡೆ, ವೈ ದೇ ಕಿಲ್ಡ್ ಗಾಂಧಿ: ಅನ್‌ಮಾಸ್ಕಿಂಗ್ ದಿ ಐಡಿಯಾಲಜಿ ಆಂಡ್ ದಿ ಕಾನ್ಸ್ಪಿರಸಿ, ೨೦೨೨, ಪುಟ ೪೦
೮. ವಿಕ್ರಂ ಸಂಪತ್, ಸಾವರ್ಕರ್: ಎಕೋಸ್ ಫ್ರಂ ಎ ಫಾರ್ಗೋಟನ್ ಪಾಸ್ಟ್, ೧೮೮೩ – ೧೯೨೪, ಪೆಂಗ್ವಿನ್ ಬುಕ್ಸ್, ೨೦೧೯, ಪುಟ ೪೨
೯. ಅದೇ ಪುಸ್ತಕ, ಪುಟ ೪೨
೧೦. ಶಬ್ನಂ ತೇಜಾನಿ, ಮ್ಯೂಸಿಕ್, ಮೋಸ್ಕ್ ಆಂಡ್ ಕಸ್ಟಮ್: ಲೋಕಲ್ ಕಾನ್ಫ್ಲಿಕ್ಟ್ ಆಂಡ್ ಕಮ್ಯನಲಿಸಂ ಇನ್ ಎ ಮಹಾರಾಷ್ಟ್ರೀಯನ್ ವೀವಿಂಗ್ ಟೌನ್, ೧೮೯೩-೯೪, ಜರ್ನಲ್ ಆಫ್ ಸೌತ್ ಏಷಿಯನ್ ಸ್ಟಡೀಸ್, ೩೦:೨, ಪುಟ ೨೨೩-೨೪೦
೧೧. ವಿಕ್ರಂ ಸಂಪತ್, ಸಾವರ್ಕರ್: ಎಕೋಸ್ ಫ್ರಂ ಎ ಫಾರ್ಗೋಟನ್ ಪಾಸ್ಟ್, ೧೮೮೩ – ೧೯೨೪, ಪೆಂಗ್ವಿನ್ ಬುಕ್ಸ್, ೨೦೧೯, ಪುಟ ೫೪
೧೨. ಕಾಪಿ ಆಫ್ ರೂಲಿಂಗ್ ಇನ್ ಲೆಟರ್ ಫ್ರಂ ಗವರ್ನ್‌ಮೆಂಟ್ ಪ್ಲೀಡರ್, ಹೈಕೋರ್ಟ್ (೨೪ ನವೆಂವರ್ ೧೮೯೩), ಜಿ.ಸಿ. ವಿಟ್‌ವರ್ಥನ ಡಿಪಾರ್ಟ್‌ಮೆಂಟಲ್ ಲೆಟರ್ (೧೮೯೪ ಮಾರ್ಚ್ ೧೫), ಬಿ.ಎ.ಜೆ.ಡಿ. ವೋಲ್ಯೂಂ ೨೮೪, ನಂಬರ್ ೫೪೫, ಪಾರ್ಟ್ ೩ (೧೮೯೪)
೧೩. ವಿಕ್ರಂ ಸಂಪತ್, ಸಾವರ್ಕರ್: ಎಕೋಸ್ ಫ್ರಂ ಎ ಫಾರ್ಗೋಟನ್ ಪಾಸ್ಟ್, ೧೮೮೩ – ೧೯೨೪, ಪೆಂಗ್ವಿನ್ ಬುಕ್ಸ್, ೨೦೧೯, ಪುಟ ೫೭
೧೪. ವ್ಯಾಲೆಂಟೈನ್ ಚಿರೋಲ್, ಇಂಡಿಯನ್ ಅನ್‌ರೆಸ್ಟ್, ೧೯೧೦, ಮ್ಯಾಕ್‌ಮಿಲ್ಲರ್ ಆಂಡ್ ಕಂಪೆನಿ ಲಿಮಿಟೆಡ್, ಲಂಡನ್
೧೫. ವಿಕ್ರಂ ಸಂಪತ್, ಸಾವರ್ಕರ್: ಎಕೋಸ್ ಫ್ರಂ ಎ ಫಾರ್ಗೋಟನ್ ಪಾಸ್ಟ್, ೧೮೮೩ – ೧೯೨೪, ಪೆಂಗ್ವಿನ್ ಬುಕ್ಸ್, ೨೦೧೯, ಪುಟ ೫೭
೧೬. ಪ್ರಾಚಿ ದೇಶ್‌ಪಾಂಡೆ, ನರೇಟಿವ್ಸ್ ಆಫ್ ಪ್ರೈಡ್: ಹಿಸ್ಟರಿ ಆಂಡ್ ರೀಜನಲ್ ಐಡೆಂಟಿಟಿ ಇನ್ ಮಹಾರಾಷ್ಟ್ರ, ಇಂಡಿಯಾ ೧೮೭೦-೧೯೬೦. ಟಫ್ಟಸ್ ಯುನಿವರ್ಸಿಟಿ, ೨೦೦೨
೧೭. ವ್ಯಾಲೆಂಟೈನ್ ಚಿರೋಲ್, ಇಂಡಿಯನ್ ಅನ್‌ರೆಸ್ಟ್, ೧೯೧೦, ಮ್ಯಾಕ್‌ಮಿಲ್ಲರ್ ಆಂಡ್ ಕಂಪೆನಿ ಲಿಮಿಟೆಡ್, ಲಂಡನ್, ಪುಟ ೪೬
೧೮. ಅದೇ ಪುಸ್ತಕ, ಪುಟ ೪೬
೧೯. ಅದೇ ಪುಸ್ತಕ, ಪುಟ ೪೬-೪೭