“..ಫಿಡೆಲ್ ಮತ್ತು ಮೆರೆಡೋನಾರ ನಡುವಿನ ಅಗಾಧವಾದ ಪ್ರೀತಿ ವಾತ್ಸಲ್ಯಕ್ಕೆ ಕಾಕತಾಳೀಯ ಎಂಬಂತೆ ಫಿಡೆಲ್ ಕ್ಯಾಸ್ಟ್ರೋ ನಿಧನದ ನಾಲ್ಕು ವರ್ಷಗಳ ತರುವಾಯ ಡೀಗೋ ಮೆರೆಡೋನಾ ಅದೇ ನವೆಂಬರ್ 25 2020ರಂದು ನಿಧನರಾಗಿದ್ದರು..” ಬಿ ಕೆ ಇಮ್ತಿಯಾಜ್ ಅವರ ಬರಹದಲ್ಲಿ
ಫುಟ್ಬಾಲ್ ದಂತಕಥೆ,ಫುಟ್ಬಾಲ್ ಅಭಿಮಾನಿಗಳ ದೇವರು, ಫುಟ್ಬಾಲ್ ಕ್ಷೇತ್ರದಲ್ಲಿ ಅನೇಕ ದಾಖಲೆಗಳ ಸರದಾರ ತನ್ನ ಎಡಗಾಲಿನಲ್ಲಿ ಚಮತ್ಕಾರಗಳನ್ನೇ ಸೃಷ್ಟಿಸಿದ್ದ ಅರ್ಜೆಂಟಿನಾದ ಡೀಗೋ ಮೆರೆಡೋನಾ ತನ್ನ ಅದೇ ಎಡಗಾಲಿನಲ್ಲಿ ಅಮೇರಿಕಾ ಸಾಮ್ರಾಜ್ಯ ಶಾಹಿಗಳ ವಿರುದ್ಧದ ಕ್ರಾಂತಿಕಾರಿ ಹೋರಾಟಗಾರ ಕ್ಯೂಬಾದ ಮಾಜಿ ಅಧ್ಯಕ್ಷ, ಕಾಮ್ರೆಡ್ ಫಿಡೆಲ್ ಕ್ಯಾಸ್ಟ್ರೋ ಅವರ ಚಿತ್ರವನ್ನು ಟಾಟೂ ಹಾಕಿಸಿಕೊಂಡಿದ್ದರು ಬಲಗೈಯಲ್ಲಿ ಮತ್ತೊರ್ವ ಕ್ರಾಂತಿಕಾರಿ ಚೆಗುವಾರರ ಟಾಟೂ ಹಾಕಿಸಿ ಕೊಂಡಿದ್ದರು. ಚೆ ಮತ್ತು ಕ್ಯಾಸ್ಟ್ರೋ ಅವರ ಟ್ಯಾಟೂವನ್ನು ಮೆರೆಡೋನ ಬೂಟಾಟಿಕೆಗೋ, ಫ್ಯಾಷನಿಗಾಗಿಯೋ ಹಾಕಿಸಿಕೊಂಡಿರಲಿಲ್ಲ. ತನ್ನ ಸಾಮ್ರಾಜ್ಯಶಾಹಿ ವಿರೋಧಿ ರಾಜಕೀಯ ಸಿದ್ದಾಂತದಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಲು ಇಬ್ಬರು ಹೋರಾಟಗಾರರ ಟಾಟೂವನ್ನು ಹಾಕಿಸಿಕೊಂಡಿದ್ದರು ಎಂಬುದು ಜಗಜ್ಜಾಹೀರಾಗಿದ್ದ ಸಂಗತಿ.
ಮೆರಡೋನಾ ಫಿಡೆಲ್ ಅವರನ್ನು ಮೊದಲ ಬಾರಿ ಭೇಟಿ ಆಗುವುದು, 1987ರಲ್ಲಿ ಅರ್ಜೆಂಟಿನ ಫುಟ್ಬಾಲ್ ವಿಶ್ವಕಪ್ ಗೆದ್ದ ಸಂಧರ್ಭದಲ್ಲಿ ! ಆ ನಂತರ ಅವರಿಬ್ಬರು ಸ್ನೇಹಿತರಾಗಿದ್ದರು.
ಆದರೆ ಅವರಿಬ್ಬರೂ ಅತ್ಯಂತ ಆಪ್ತ ಸ್ನೇಹಿತರಾಗುವುದು 2000 ಇಸವಿಯಲ್ಲಿ. ಮೆರೆಡೋನಾ ಅತಿಯಾದ ಕೊಕೇನ್ ಅಮಲು ಪದಾರ್ಥ ಸೇವಿಸಿ ಸಾವಿನ ಅಂಚಿಗೆ ತಳ್ಳಲ್ಪಟ್ಟಾಗ ಅರ್ಜೆಂಟಿನಾದ ಆಸ್ಪತ್ರೆಗಳಲ್ಲಿ ಮೆರೆಡೋನಾರ ರೋಗಕ್ಕೆ ಚಿಕಿತ್ಸೆ ಲಭ್ಯವಿಲ್ಲ ಎಂದು ಮೆರೆಡೋನಾರನ್ನು ಆಸ್ಪತ್ರೆಯಿಂದ ಆಚೆ ಕಳುಹಿಸಿದರು. ಚಿಕಿತ್ಸಾ ವೈಫಲ್ಯದಿಂದ ಮೆರೆಡೋನಾ ಅರ್ಜೆಂಟಿನದಲ್ಲಿ ಸಾಯುವುದು ಕೂಡ ಅರ್ಜೆಂಟಿನ ಆಡಳಿತಕ್ಕೂ ಇಷ್ಟ ಇರಲಿಲ್ಲ ಅದಕ್ಕಾಗಿ ವಿದೇಶಕ್ಕೆ ತೆರಳಲು ಅರ್ಜೆಂಟಿನ ಉಚಿತ ಸಲಹೆ ಕೊಡುತ್ತಿತ್ತು ಮತ್ತು ವಿಪರೀತ ಕೊಕೇನ್ ಸೇವಿಸುತ್ತಿದ್ದ ಕಾರಣಕ್ಕೆ ಅರ್ಜೆಂಟಿನ ಆಸ್ಪತ್ರೆಗಳ ಬಾಗಿಲುಗಳು ನನಗೆ ಮುಚ್ಚಿದ್ದವು ಎಂದು ಮೆರೆಡೋನಾ ತನ್ನ ಆತ್ಮಕತೆಯಲ್ಲಿ ನಂತರ ತಿಳಿಸಿದ್ದರು. ಮೆರೆಡೋನಾರ ಆರೋಗ್ಯ ಸ್ಥಿತಿಯ ಮಾಹಿತಿ ಪಡೆದ ಕ್ಯೂಬ ಅಧ್ಯಕ್ಷ ಕ್ಯಾಸ್ಟ್ರೋ ಕ್ಯೂಬಾದ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯಲು ಮೆರೆಡೋನಾ ಅವರನ್ನು ಕ್ಯಾಸ್ಟ್ರೋ ಕ್ಯೂಬಾಕ್ಕೆ ಆಹ್ವಾನಿಸಿದರು.
ಮೆರೆಡೋನಾ 4ವರ್ಷ ಕ್ಯೂಬದಲ್ಲಿ ನೆಲೆಸಿದ ಮೆರೆಡೋನಾ ಚಿಕಿತ್ಸೆ ಪಡೆದು ಮಾದಕ ವ್ಯಸನದಿಂದ ಸಂಪೂರ್ಣ ಮುಕ್ತಾರಾಗಿ ಆರೋಗ್ಯವಂತರಾದರು. ಹವಾನದ ಲಾ ಪೆಡ್ರೇರ ಆಸ್ಪತ್ರೆಯಲ್ಲಿ ಮೆರೆಡೋನಾ ಅವರಿಗೆ ಕ್ಯೂಬಾದ ಪ್ರಸಿದ್ದ ತಜ್ಞ ವೈದ್ಯರು ಚಿಕಿತ್ಸೆ ನೀಡಿ ಸಾವಿನ ಭೀತಿಯಲ್ಲಿದ್ದ ಮೆರೆಡೋನಾ ಸಂಪೂರ್ಣ ಚೇತರಿಸಿಕೊಂಡಿದ್ದರು ಕ್ಯೂಬಾದ ವೈದ್ಯರು ನೀಡಿದ ಚಿಕಿತ್ಸೆ ಮೆರೆಡೋನಾಗೆ ಪುನರ್ಜನ್ಮ ನೀಡಿತು. ಮೆರೆಡೋನಾ ರೋಗ ಮತ್ತು ಮಾದಕ ವ್ಯಸನದಿಂದ ಸಂಪೂರ್ಣ ಮುಕ್ತರಾಗಿದ್ದರು.
ಲಾ ಪೆಡ್ರೇರ ಆಸ್ಪತ್ರೆ ವೈದ್ಯರ ಚಿಕೆತ್ಸೆ ಜೊತೆಯಲ್ಲಿ ಫಿಡೆಲ್ ಕ್ಯಾಸ್ಟ್ರೋ ತೋರಿದ ಪಿತೃ ವಾತ್ಸಲ್ಯದ ಪ್ರೀತಿ ಮತ್ತು ಆರೈಕೆಯೇ ಮೆರೆಡೋನಾ ಚೇತರಿಕೆಗೆ ಮುಖ್ಯ ಕಾರಣವಾಗಿತ್ತು. ಮೆರೆಡೋನಾ ಆಸ್ಪತ್ರೆಯಲ್ಲಿದ್ದಾಗ ಪ್ರತಿದಿನ ಮುಂಜಾನೆಯ ವಾಯು ವಿಹಾರಕ್ಕೆ ಜೊತೆಯಾಗುತ್ತಿದ್ದರು. ವಿಹಾರದ ಸಮಯದಲ್ಲಾಗಲಿ, ಪ್ರತಿಯೊಂದು ಭೇಟಿಯಲ್ಲಾಗಲಿ ಮೆರೆಡೋನಗೆ ರಾಜಕೀಯದ ಪಾಠಗಳನ್ನು ಮಾಡುತ್ತಲೇ ಮಾದಕ ವ್ಯಸನದ ಅಪಾಯ ಹಾಗೂ ಆರೋಗ್ಯದ ಕಾಳಜಿಯ ಬಗ್ಗೆ ಭೋಧನೆಯನ್ನು ಕ್ಯಾಸ್ಟ್ರೋ ಮಾಡುತ್ತಿದ್ದರು. ಕ್ಯೂಬ ಅಧ್ಯಕ್ಷರ ನಿವಾಸ ಮತ್ತು ಕಛೇರಿಯ ಬಾಗಿಲುಗಳು ಮೆರೆಡೋನಾಗೆ ಸದಾ ತೆರೆದಿದ್ದವು. ಫಿಡೆಲ್ ಮತ್ತು ಮೆರೆಡೋನ ಅವರ ಸ್ನೇಹ ಎಷ್ಟು ಗಾಢವಾಗಿತ್ತು ಎಂದರೆ ಅಧ್ಯಕ್ಷರ ನಿವಾಸದ ಶಿಷ್ಟಚಾರಗಳು ಅನ್ವಯಿಸದ ರೀತಿಯ ಸ್ವಾತಂತ್ರ್ಯ ವನ್ನು ಫಿಡೆಲ್ ಮೆರೆಡೋನಾಗೆ ನೀಡಿದ್ದರು.
2002ರಲ್ಲಿ ಕ್ಯೂಬಾದ ರಾಜಧಾನಿ ಹವಾನದಲ್ಲಿ ಮೆರೆಡೋನ ತನ್ನ ಆತ್ಮಕಥೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ನನಗೆ ನನ್ನ ಚರಿತ್ರೆ ಬರೆಯಲು ಮತ್ತು ಜಗತ್ತಿನ ಜನತೆಯ ಜತೆಗಿನ ಸ್ನೇಹ ಸಂಭಂದಗಳಿಗೆ ದಾರಿ ಮಾಡಿಕೊಟ್ಟಿರುವುದು ಫುಟ್ಬಾಲ್ ಆದರೂ ನನಗೆ ಪುನರ್ಜನ್ಮ ನೀಡಿದ ಫಿಡೆಲ್ ಮತ್ತು ಕ್ಯೂಬ ಜನತೆಯ ಋಣವನ್ನು ತೀರಿಸಲು ನನಗೆ ಸಾಧ್ಯವಿಲ್ಲ. ಸಾಮಾನ್ಯ ಜನರು ದೇವರು ದೊಡ್ಡವರೆಂದು ಹೇಳುತ್ತಾರೆ ಆದರೆ ನನಗೆ ಫಿಡೆಲ್ ಕ್ಯಾಸ್ಟ್ರೋ ದೇವರಿಗಿಂತ ದೊಡ್ಡವರು ಎಂದು ಹೇಳುತ್ತಾ ಮೆರೆಡೋನಾ ಭಾವುಕರಾಗಿದ್ದರು.
2016 ನವೆಂಬರ್ 25 ಫಿಡೆಲ್ ಕ್ಯಾಸ್ಟ್ರೋ ನಿಧನರಾದಾಗ ಮೆರೆಡೋನ ಮಗುವಿನಂತೆ ಅತ್ತಿದ್ದರು, ಫಿಡೆಲರ ಸ್ವಂತ ಮಗನಂತೆ ಸಂಕಟ ಅನುಭವಿಸಿದ್ದರು.
ಫಿಡೆಲ್ ಮತ್ತು ಮೆರೆಡೋನಾರ ನಡುವಿನ ಅಗಾಧವಾದ ಪ್ರೀತಿ ವಾತ್ಸಲ್ಯಕ್ಕೆ ಕಾಕತಾಳೀಯ ಎಂಬಂತೆ ಫಿಡೆಲ್ ಕ್ಯಾಸ್ಟ್ರೋ ನಿಧನದ ನಾಲ್ಕು ವರ್ಷಗಳ ತರುವಾಯ ಡೀಗೋ ಮೆರೆಡೋನಾ ಅದೇ ನವೆಂಬರ್ 25 2020ರಂದು ನಿಧನರಾಗಿದ್ದರು.
ಅಮೇರಿಕನ್ ಸಾಮ್ರಾಜ್ಯಶಾಹಿತ್ವದ ವಿರೋಧಿ ಹೋರಾಟಗಾರ ಜಗತ್ತಿನ ಅಗ್ರ ಗಣ್ಯ ಕಮ್ಯುನಿಸ್ಟ್ ನಾಯಕ ಫಿಡೆಲ್ ಕ್ಯಾಸ್ಟ್ರೋ ಮತ್ತು ಜಾಗತಿಕ ಫುಟ್ಬಾಲ್ ಕ್ರೀಡೆಯ ದಂತಕತೆ ಡೀಗೋ ಮೆರೆಡೋನಾರ ಗಡಿ ಮೀರಿದ ಜೀವಪಾರವಾದ ಸ್ನೇಹ ಜಗತ್ತಿನಲ್ಲಿ ಅತ್ಯಂತ ಅಪೂರ್ವವಾದುದು.
