Saturday, April 27, 2024

ಸತ್ಯ | ನ್ಯಾಯ |ಧರ್ಮ

ವಿಚಾರಣಾ ಸಾಹಿತ್ಯದ ಆರಂಭ ಮತ್ತು ದುರಭಿಮಾನ ಕೊ*ಲೆಗಳ ಮುಂದುವರಿಕೆ ; ಹಿಂದುತ್ವ ರಾಜಕಾರಣದ ಕಥೆ – 13

ಗಾಂಧಿ ಅಲ್ಲಿಗೆ ನಿಲ್ಲಿಸುವುದಿಲ್ಲ. ʼಇಂತಹ ಕೊಲೆಗಳು ಭಾರತಕ್ಕೆ ಒಳ್ಳೆಯದು ಮಾಡುತ್ತದೆ ಎಂದು ನಂಬುವ ಮತ್ತು ವಾದಿಸುವ ಮನುಷ್ಯರು ನಿಜದಲ್ಲಿ ಏನೊಂದೂ ತಿಳಿಯದವರಾಗಿರುತ್ತಾರೆ. ಇಂತಹ ಕೊಲೆಗಳ ಕಾರಣದಿಂದ ಬ್ರಿಟಿಷರು ಭಾರತ ಬಿಟ್ಟು ಹೋದರೆಂದೇ ಇಟ್ಟುಕೊಳ್ಳಿ. ನಂತರ ಯಾರು ಅವರ ಸ್ಥಾನದಲ್ಲಿ ಕೂತು ಅಧಿಕಾರ ನಡೆಸುತ್ತಾರೆ? ಅದಕ್ಕೆ ಸಿಗುವ ಒಂದೇ ಉತ್ತರ ಈ ಕೊಲೆಗಾರರು ಎಂದಾಗಿರುತ್ತದೆ. ಅಂತಹದೊಂದು ಆಡಳಿತದಲ್ಲಿ ಭಾರತ ಪೂರ್ತಿಯಾಗಿ ನಾಶ ಹೊಂದುತ್ತದೆ. ಆ ಯುವಕರೊಳಗೆ ಇಂತಹ ಕೊಲೆಗಳಿಗೆ ಪ್ರೇರಣೆ ತುಂಬಿದ ಮನುಷ್ಯರು ದೇವರ ನ್ಯಾಯಾಲಯದಲ್ಲಿ ನಿಲ್ಲಬೇಕಾಗುತ್ತದೆ. ಅಷ್ಟೇ ಅಲ್ಲ, ಅವರು ಲೋಕದ ಕಣ್ಣುಗಳ ಮುಂದೆ ತಪ್ಪಿತಸ್ಥರೇ ಆಗಿರುತ್ತಾರೆ.ʼ

೧೯೦೯ ಜುಲೈ ೧೦ರಂದು ಮದನ್‌ ಲಾಲ್‌ ಡಿಂಗ್ರನ ವಿಚಾರಣೆ ಶುರುವಾಗುತ್ತದೆ. ಆರಂಭದಲ್ಲಿಯೇ ಆತ ಬ್ರಿಟಿಷ್‌ ಕೋರ್ಟ್‌ ತನಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಕೇಳಿಕೊಳ್ಳುತ್ತಾನೆ. ಹಾಗೆ ಕೇಳಿಕೊಳ್ಳಲು ಕಾರಣ, ತನ್ನ ಗಲ್ಲುಶಿಕ್ಷೆ ತನ್ನ ನಾಡಿನ ಸ್ವಾತಂತ್ರ್ಯ ಸಮರವನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯುತ್ತದೆ ಎಂಬುದಾಗಿತ್ತು. ʼಜರ್ಮಿನಿಗೆ ಇಂಗ್ಲೆಂಡನ್ನು ಆಕ್ರಮಿಸಲು ಹೇಗೆ ಅವಕಾಶವಿಲ್ಲವೋ, ಹಾಗೆಯೇ ಇಂಗ್ಲೆಂಡಿಗೆ ಇಂಡಿಯಾವನ್ನು ಆಕ್ರಮಿಸಲು ಅವಕಾಶವಿಲ್ಲ. ಆದ್ದರಿಂದಲೇ ನಮ್ಮ ಪುಣ್ಯಭೂಮಿಯನ್ನು ಅಶುದ್ಧಗೊಳಿಸುತ್ತಿರುವ ಆಂಗ್ಲರನ್ನು ಕೊಲ್ಲುವುದು ನಮ್ಮ ಜಾಗದಲ್ಲಿ ನಿಂತು ನೋಡುವಾಗ ನ್ಯಾಯೀಕರಿಸಬಹುದಾದ ಸಂಗತಿಯೇ ಆಗಿದೆ. ಆಂಗ್ಲರ ಕಪಟತನ, ನಾಟಕ, ಪರಿಹಾಸ್ಯ ಕಂಡು ನನಗೆ ಆಶ್ಚರ್ಯವಾಗುತ್ತಿದೆ.ʼ

ಡಿಂಗ್ರನ ಈ ಹೇಳಿಕೆ ಪೂರ್ತಿಯಾಗಿ ಸಾಮ್ರಾಜ್ಯವಾದದ ವಿರೋಧಿಯಾಗಿದ್ದರೂ, ಆ ವಿರೋಧದ ಅಡಿಪಾಯ ಸುಮಾರಾಗಿ ಜನಾಂಗೀಯತೆಯಲ್ಲಿ ಮುಳುಗಿಕೊಂಡಿದೆ. ಜರ್ಮನ್‌ ಜನಾಂಗ ಆಂಗ್ಲ ಜನಾಂಗವನ್ನು ಸೋಲಿಸುವುದರಲ್ಲಿರುವ ಅನೀತಿ ಭಾರತೀಯ ಹಿಂದೂಗಳನ್ನು ಆಂಗ್ಲರು ಸೋಲಿಸುವುದರಲ್ಲಿಯೂ ಡಿಂಗ್ರ ಕಾಣುತ್ತಾನೆ. ಸಾಮ್ರಾಜ್ಯವಾದದ ಶೋಷಣೆಯಾಗಲೀ, ಆಕ್ರಮಣಕಾರಿ ನೀತಿಗಳಾಗಲೀ ಯಾವುದನ್ನೂ ಡಿಂಗ್ರ ಬೊಟ್ಟು ಮಾಡುವುದಿಲ್ಲ. ಪುಣ್ಯಭೂಮಿಯನ್ನು ಮ್ಲೇಚ್ಛಗೊಳಿಸುತ್ತಿರುವುದು ಮಾತ್ರ ಅವನ ಕಾರಣ. ಈ ಪುಣ್ಯಭೂಮಿ ಎಂಬ ಸಂಗತಿ ನಂತರದ ಕಾಲದಲ್ಲಿ ಹಿಂದುತ್ವ ರಾಜಕಾರಣದ ಪ್ರಧಾನ ಅಂಶವಾಗಿ ಬದಲಾಗುತ್ತದೆ.

ಡಿಂಗ್ರನ ಈ ಹೇಳಿಕೆ ಆತ ಅರೆಸ್ಟ್‌ ಆದಾಗ ಪೊಲೀಸರಿಗೆ ಬರಹದ ಮೂಲಕ ನೀಡಿದ್ದಾಗಿತ್ತು. ಆದರೆ, ಪೊಲೀಸರು ಇದನ್ನು ಹೊರಗೆ ಬಿಡುಗಡೆ ಮಾಡಲಿಲ್ಲ. ಡಿಂಗ್ರನ ಹೇಳಿಕೆಯಿಂದ ಆಕರ್ಷಿತರಾಗಿ ಭಾರತದಲ್ಲಿ ಹೊಸ ಹೊಸ ಡಿಂಗ್ರಗಳು ಹುಟ್ಟುವುದು ಬ್ರಿಟಿಷರಿಗೆ ಬೇಕಿರಲಿಲ್ಲ. ಹೇಳಿಕೆಯಲ್ಲಿ ಡಿಂಗ್ರ ಮುಂದುವರಿದು ಹೇಳುತ್ತಾನೆ,

ʼನಾನು ಒಪ್ಪಿಕೊಳ್ಳುತ್ತಿದ್ದೇನೆ. ಕಳೆದ ದಿನ ನಾನು ಹರಿಸಿದ ಆಂಗ್ಲ ರಕ್ತ ದೇಶಪ್ರೇಮಿಗಳಾದ ಭಾರತದ ಯುವಕರನ್ನು ಮನುಷ್ಯತ್ವವಿಲ್ಲದೆ ಗಲ್ಲಿಗೇರಿಸಿದ್ದಕ್ಕೂ ಗಡಿಪಾರು ಮಾಡಿದ್ದಕ್ಕೂ ವಿನೀತ ಪ್ರತೀಕಾರ… ಒಂದು ದೇಶ ವಿದೇಶಿ ಬಯನೆಟ್ಟುಗಳ ಸಹಾಯದಿಂದ ಬಂಧಿಸಲ್ಪಟ್ಟಿದ್ದರೆ, ಆ ದೇಶ ಎಂದೆಂದಿಗೂ ಯುದ್ಧ ಪೀಡಿತವಾಗಿರುತ್ತದೆ ಎಂಬುದು ನನ್ನ ನಂಬಿಕೆ. ಆಯುಧ ರಹಿತರಾದ ಜನರಿಗೆ ಯುದ್ಧ ಸಾಧ್ಯವಿಲ್ಲದ ಕಾರಣ, ನನಗೆ ಆಯುಧ ನಿಶೇಧಿಸಲ್ಪಟ್ಟಿರುವ ಕಾರಣ, ನಾನು ಹೀಗೆ ಅನಿರೀಕ್ಷಿತ ದಾಳಿ ಮಾಡಿದೆ. ನಾನು ನನ್ನ ಪಿಸ್ತೂಲ್‌ ಎತ್ತಿ ಗುಂಡಿನ ದಾಳಿ ಮಾಡಿದೆ.ʼ ಡಿಂಗ್ರ ಮುಂದುವರಿಸುತ್ತಾನೆ, ʼನಾನೊಬ್ಬ ಹಿಂದೂ ಎಂಬ ನೆಲೆಯಲ್ಲಿ ನನ್ನ ದೇಶದೊಂದಿಗೆ ಮಾಡುವ ಅನ್ಯಾಯವನ್ನು, ದೇವರ ಮೇಲಿನ ಅನ್ಯಾಯವಾಗಿಯೇ ಕಾಣುತ್ತೇನೆ.ʼ ಅದು ಕೊನೆಗೊಳ್ಳುವುದು ಹೀಗೆ, ‌ʼಇಂಗ್ಲೆಂಡ್ ಮತ್ತು ಇಂಡಿಯಾ ನಡುವಿನ ಈ ಸ್ವಾತಂತ್ರ್ಯ ಯುದ್ಧ ಆಂಗ್ಲ ಜನಾಂಗ ಮತ್ತು ಹಿಂದೂ ಜನಾಂಗ ಇರುವವರೆಗೆ ಮುಂದುವರಿಯಲಿದೆ.ʼ

ಡಿಂಗ್ರನ ಮನಸ್ಸಿನಲ್ಲಿ ಸಾವರ್ಕರ್‌ ತುಂಬಿಸಿದ್ದು ಆಧುನಿಕ ಕ್ರಾಂತಿಯ ಸಿದ್ಧಾಂತಗಳನ್ನಾಗಲೀ ಸ್ವಾತಂತ್ರ್ಯದ ಕುರಿತ ಉದಾತ್ತ ಚಿಂತನೆಗಳನ್ನಾಗಲೀ ಆಗಿರಲಿಲ್ಲವೆಂದು ಈ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಅದೊಂದು ಯುದ್ಧ ಸಂಕಲ್ಪ. ಹಿಂದೂಗಳು ಮತ್ತು ಆಂಗ್ಲರ ನಡುವಿನ ಯುದ್ಧದಲ್ಲಿ ಆಂಗ್ಲರು ಸೋತರೆ ಹಿಂದೂ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ಡಿಂಗ್ರ ಪರೋಕ್ಷವಾಗಿ ಹೇಳುತ್ತಿದ್ದಾನೆ; ಯುದ್ಧ ಮಾಡಲು ಬೇಕಾದಷ್ಟು ಆಯುಧ ಸಿಗದಿದ್ದರೆ ಭಯೋತ್ಪಾದನೆ ಮುಂದುವರಿಯಲಿದೆಯೆಂದೂ.

ಡಿಂಗ್ರನ ಹೆಸರಿನಲ್ಲಿ ಬಂದ ಈ ಹೇಳಿಕೆಯನ್ನು ಸ್ವತಹ ಸಾವರ್ಕರ್‌ ಬರೆದಿದ್ದರೆಂದು ಸುಮಾರಾಗಿ ಸ್ಪಷ್ಟವಾಗುತ್ತದೆ. ತಿಲಕ್‌ ಎತ್ತಿ ಹಿಡಿದಿದ್ದ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಂ ಸಾವರ್ಕರಲ್ಲಿ ಹೇಗೆ ಹಿಂದುತ್ವವಾಗಿ ಬದಲಾಯಿತು ಎಂದು ನಾವು ನೋಡಿದೆವು. ಡಿಂಗ್ರನ ಹೇಳಿಕೆಯನ್ನು ಹಾಗೆ ಅನುಮಾನಿಸಲು ಕಾರಣ ಆ ಆಶಯವನ್ನು ಹೊತ್ತುಕೊಂಡಿರುವುದರಿಂದಲೋ ಅಥವಾ ಸ್ಪೋಟಕ ಶೈಲಿಯನ್ನು ಹೊಂದಿರುವುದರಿಂದಲೋ ಅಲ್ಲ. ಸಾಂದರ್ಭಿಕ ಸಾಕ್ಷಿಗಳೇ ಕಾರಣ. ಆಂಗ್ಲರು ಮುಚ್ಚಿಟ್ಟದ್ದ ಡಿಂಗ್ರನ ಹೇಳಿಕೆ, ಡಿಂಗ್ರನನ್ನು ಗಲ್ಲಿಗೇರಿಸುವ ಮೊದಲೇ ಸಾವರ್ಕರ್‌ ಇಂಗ್ಲೀಷ್‌ ಪತ್ರಿಕೆಗಳಿಗೆ ಕಳುಹಿಸಿಕೊಟ್ಟಿದ್ದರು. ಇಂಗ್ಲೀಷ್‌ ಪತ್ರಿಕೆಗಳು ಅದನ್ನು ಪ್ರಕಟಿಸದಿದ್ದಾಗ ತನ್ನ ಗೆಳೆಯನಾಗಿದ್ದ ಡೇವಿಡ್‌ ಗಾರ್ನೆಟ್‌ನ ಸಹಾಯದಿಂದ ಅಚ್ಚು ಹಾಕಿಸಿ ಡೈಲಿ ನ್ಯೂಸ್‌ ಎಂಬ ಪತ್ರಿಕೆಯ ಒಳಗೆ ಇಟ್ಟು ವಿತರಣೆ ಮಾಡುತ್ತಾರೆ. ಜೈಲಿನಲ್ಲಿರುವ ಡಿಂಗ್ರ ನೀಡಿದ ಹೇಳಿಕೆ ಹೇಗೆ ಸಾವರ್ಕರ್‌ ಕೈಗೆ ಸಿಕ್ಕಿತು ಎಂಬ ಪ್ರಶ್ನೆಗೆ ಸಮಂಜಸವಾದ ಒಂದೇ ಉತ್ತರ ಸಿಗುತ್ತದೆ. ಆ ವಿಚಾರಣಾ ಸಾಹಿತ್ಯವನ್ನು ಬರೆದ ವ್ಯಕ್ತಿ ಸ್ವತಹ ಸಾವರ್ಕರ್‌!

ಸಾವರ್ಕರ್‌ ಇಂಗ್ಲೆಂಡ್‌ ವಾಸ ಬುಡಮೇಲಾಗುತ್ತಿದ್ದ ಕಾಲವೂ ಅದಾಗಿತ್ತು. ಡಿಂಗ್ರನ ಕೃತ್ಯ ಸಾವರ್ಕರ್ ಜನಪ್ರಿಯತೆಯನ್ನು ಕುಗ್ಗಿಸಿತು. ಅದಕ್ಕಿಂತ ಮೊದಲೇ ಇಂಡಿಯಾ ಹೌಸಿನ ಜವಾಬ್ದಾರಿಯನ್ನು ಬಿಟ್ಟು ಬಂದಿದ್ದ ಸಾವರ್ಕರ್‌ ಬಿಪಿನ್‌ ಚಂದ್ರಪಾಲರ ಮನೆಯಲ್ಲಿ ವಾಸವಿದ್ದರು. ಅವರ ಮಗ ನಿರಂಜನ್‌ ಪಾಲ್‌ ಸಾವರ್ಕರ್‌ಗೆ ಗೆಳೆಯ ಮತ್ತು ಒಂದು ಹಂತದವರೆಗೆ ಅನುಯಾಯಿಯೂ ಆಗಿದ್ದ. ವಿಲ್ಲಿಯ ಕೊಲೆಯಲ್ಲಿ ಉಂಟಾದ ಜನಾಕ್ರೋಷ ಬಿಪಿನ್‌ ಚಂದ್ರಪಾಲರ ಮನೆಯನ್ನು ಒಡೆಯುತ್ತದೆ ಎಂಬ ಹಂತಕ್ಕೆ ತಲುಪಿದಾಗ ಸಾವರ್ಕರನ್ನು ಅಲ್ಲಿಂದ ಸಾಗ ಹಾಕಿದರು. ಲಂಡನ್ನಿನಲ್ಲಿ ವಾಸಿಸಲು ಸಾವರ್ಕರ್‌ಗೆ ಎಲ್ಲಿಯೂ ಜಾಗ ಸಿಗುವುದಿಲ್ಲ. ಗೆಳೆಯರೆಲ್ಲ ಕೈಬಿಟ್ಟರು. ಕೊನೆಗೆ ರೆಡ್‌ ಲಯನ್‌ ಪ್ಯಾಸೇಜಿನಲ್ಲಿದ್ದ ಒಬ್ಬ ಜರ್ಮನ್‌ ಮಹಿಳೆ ಕೆಲವು ದಿನಗಳ ಕಾಲ ವಾಸಿಸಲು ಜಾಗ ಕೊಟ್ಟರು.

ಈ ಸಂದರ್ಭದಲ್ಲಿ ʼಸಾಗರತಲಮಾಲಲʼ ಎಂಬ ಗೀತೆಯನ್ನು ಸಾವರ್ಕರ್‌ ರಚಿಸುವುದು. ಇಂಗ್ಲೆಂಡಿಗೆ ಬರುವ ಮೊದಲೇ ಸ್ವರಾಜ್ಯದ ಕುರಿತು ʼಜಯೋಸ್ತುತೋʼ ಎಂಬ ಹಾಡನ್ನು ಸಾವರ್ಕರ್‌ ಬರೆದಿದ್ದರು. ನಂತರದ ಕಾಲದಲ್ಲಿ ಸಾವರ್ಕರ್‌ ಜೊತೆಗೆ ಆಪ್ತ ಸಂಬಂಧ ಬೆಳೆಸಿದ್ದ ಬ್ರಾಹ್ಮಣ ಕುಟುಂಬದ ಸಂಗೀತಕಾರನೊಬ್ಬ ಆ ಹಾಡುಗಳಿಗೆ ಸಂಗೀತ ನೀಡಿದ. ತನ್ನ ಹಾಡುಗಾರ್ತಿ ಸಹೋದರಿಯರ ಮೂಲಕ ಆ ಹಾಡುಗಳನ್ನು ಹಾಡಿಸಿ ಪ್ರಕಟಿಸಿದ. ಆ ಸಂಗೀತಕಾರನ ಹೆಸರು ಹೃದಯನಾಥ್‌ ಮಂಗೇಶ್ಕರ್.‌ ಸಹೋದರಿಯರ ಹೆಸರು ಲತಾ, ಆಶಾ, ಉಶಾ, ಮೀನಾ. ಹೌದು, ಲತಾ ಮಂಗೇಶ್ಕರ್‌ ಮತ್ತು ಸಹೋದರಿಯರು.

ಡಿಂಗ್ರನ ವಿಚಾರಣೆ ಆರಂಭಿಸಿದ ಜುಲೈ ೧೦ರಂದು ಮಹಾತ್ಮಾ ಗಾಂಧಿ ಲಂಡನ್‌ ತಲುಪಿದ್ದರು. ಇಂಡಿಯನ್‌ ಒಪೀನಿಯನ್‌ ಪತ್ರಿಕೆಗೆ ಬರೆದಿದ್ದ ಲೇಖನದಲ್ಲಿ ಇಂತಹ ಕೃತ್ಯಗಳ ಕುರಿತ ತನ್ನ ನಿಲುವನ್ನು ವ್ಯಕ್ತಪಡಿಸಿದ್ದರು. ಡಿಂಗ್ರ ಹೇಡಿಯಂತೆ ವರ್ತಿಸಿದ, ಆತನ ಮೇಲೆ ಅನುಕಂಪವಲ್ಲದೆ ಬೇರೇನೂ ಸಾಧ್ಯವಿಲ್ಲವೆಂದು ಅತ್ಯಂತ ಸ್ಪಷ್ಟವಾಗಿ ಗಾಂಧಿ ಹೇಳಿದರು. ʼಈ ಕೃತ್ಯಕ್ಕಾಗಿ ಆತನನ್ನು (ಡಿಂಗ್ರ) ಬಲಿಕೊಡಲಾಗಿದೆ. ಇದನ್ನು ಆತನೊಳಗೆ ಹೇರಿದವರು ಕೂಡ ಶಿಕ್ಷಾರ್ಹರು. ಮಿಸ್ಟರ್‌ ಡಿಂಗ್ರ ನಿಜದಲ್ಲಿ ನಿಷ್ಕಳಂಕ. ಕೊಲೆ ನಡೆದಿರುವುದು ಅಮಲಿನ ಅವಸ್ಥೆಯಲ್ಲಿ. ಒಳಗೆ ಹೋದ ಮದ್ಯ ಅಥವಾ ಭಂಗಿ ಮಾತ್ರವಲ್ಲ ಒಬ್ಬ ವ್ಯಕ್ತಿಗೆ ಅಮಲೇರಿಸುವುದು. ಒಂದು ಹುಚ್ಚು ಸಿದ್ಧಾಂತವೂ ಅಮಲೇರಿಸುತ್ತದೆ.ʼ ಗಾಂಧಿ ಅಲ್ಲಿಗೆ ನಿಲ್ಲಿಸುವುದಿಲ್ಲ. ʼಇಂತಹ ಕೊಲೆಗಳು ಭಾರತಕ್ಕೆ ಒಳ್ಳೆಯದು ಮಾಡುತ್ತದೆ ಎಂದು ನಂಬುವ ಮತ್ತು ವಾದಿಸುವ ಮನುಷ್ಯರು ನಿಜದಲ್ಲಿ ಏನೊಂದೂ ತಿಳಿಯದವರಾಗಿರುತ್ತಾರೆ. ಇಂತಹ ಕೊಲೆಗಳ ಕಾರಣದಿಂದ ಬ್ರಿಟಿಷರು ಭಾರತ ಬಿಟ್ಟು ಹೋದರೆಂದೇ ಇಟ್ಟುಕೊಳ್ಳಿ. ನಂತರ ಯಾರು ಅವರ ಸ್ಥಾನದಲ್ಲಿ ಕೂತು ಅಧಿಕಾರ ನಡೆಸುತ್ತಾರೆ? ಅದಕ್ಕೆ ಸಿಗುವ ಒಂದೇ ಉತ್ತರ ಈ ಕೊಲೆಗಾರರು ಎಂದಾಗಿರುತ್ತದೆ. ಅಂತಹದೊಂದು ಆಡಳಿತದಲ್ಲಿ ಭಾರತ ಪೂರ್ತಿಯಾಗಿ ನಾಶ ಹೊಂದುತ್ತದೆ. ಆ ಯುವಕರೊಳಗೆ ಇಂತಹ ಕೊಲೆಗಳಿಗೆ ಪ್ರೇರಣೆ ತುಂಬಿದ ಮನುಷ್ಯರು ದೇವರ ನ್ಯಾಯಾಲಯದಲ್ಲಿ ನಿಲ್ಲಬೇಕಾಗುತ್ತದೆ. ಅಷ್ಟೇ ಅಲ್ಲ, ಅವರು ಲೋಕದ ಕಣ್ಣುಗಳ ಮುಂದೆ ತಪ್ಪಿತಸ್ಥರೇ ಆಗಿರುತ್ತಾರೆ.ʼ

ಡಿಂಗ್ರನ ಕೃತ್ಯದಿಂದ ಕಲುಷಿತಗೊಂಡಿದ್ದ ಲಂಡನ್ನಿನ ಭಾರತೀಯ ಸಮೂಹದಿಂದ ತನ್ನ ಕರ್ಮಭೂಮಿಯಾಗಿದ್ದ ದಕ್ಷಿಣ ಆಫ್ರಿಕಾಗೆ ಮರಳುವಾಗ ಗಾಂಧಿ ಆಳವಾಗಿ ಕದಡಿದ್ದರು. ಒಂದು ದೊಡ್ಡ ನೈತಿಕ ಪ್ರಶ್ನೆಯಾಗಿ ಗಾಂಧಿ ಅದನ್ನು ಕಂಡರು. ಕೇಪ್‌ಟೌನಿಗೆ ಹೊರಟಿದ್ದ ಹಡಗಿನಲ್ಲಿ ಕೂತು, ಆ ನೈತಿಕ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು, ಗಾಂಧಿ ಬರೆದ ಕೃತಿ ಹಿಂದ್‌ ಸ್ವರಾಜ್.‌  ಎಡಿಟರ್‌, ಗಾಂಧಿ ಮತ್ತು ಓದುಗನ ನಡುವೆ ನಡೆಯುವ ಇಪ್ಪತ್ತು ಸಂಕಲ್ಪಿತ ಸಂಭಾಷಣೆಗಳು ಹಿಂದ್‌ ಸ್ವರಾಜ್‌ನ ಸಾರ. ಇದು ಪಾಶ್ಚಾತ್ಯ ನಾಗರಿಕತೆಯ ವಿರುದ್ಧ ದೊಡ್ಡ ವಿಮರ್ಶೆ ಎಂಬುದರ ಜೊತೆಗೇ ಹಿಂಸೆಗೆದುರಾದ ದೊಡ್ಡ ವಿಮರ್ಶೆಯೂ ಹೌದು. ಹಿಂಸೆಯನ್ನು ನ್ಯಾಯೀಕರಿಸುವ, ಸಾವರ್ಕರ್‌ ಮಾದರಿಯ, ಓದುಗ ಎಂಬ ಪಾತ್ರದ ಜೊತೆಗೆ ಎಡಿಟರ್‌ ಹೇಳುತ್ತಾನೆ, ʼನಿನ್ನಂತವರು ಭಾರತವೆಂಬ ಪುಣ್ಯ ದೇಶವನ್ನು ಅಶುದ್ಧಗೊಳಿಸುತ್ತಿದ್ದೀರಿ.ʼ ನಂತರ ಹೀಗೆ ಮುಂದುವರಿಯುತ್ತದೆ, ʼಕೊಲೆಗಳ ಮೂಲಕ ಭಾರತವನ್ನು ಸ್ವತಂತ್ರಗೊಳಿಸಬಹುದು ಎಂದು ಯೋಚಿಸುವಾಗ ನೀವೆಲ್ಲ ನಡುಗುವುದಿಲ್ಲವೇ?ʼ

ಆದರೆ, ಸ್ವಾತಂತ್ರ್ಯ ಮತ್ತು ರಾಷ್ಟ್ರೀಯತೆಯ ಬಗ್ಗೆ ದುರಭಿಮಾನ ಹೊಂದಿದ್ದ ಒಂದಷ್ಟು ಯುವಕರನ್ನು ಅದಾಗಲೇ ತಿಲಕರಿಂದ ಎರವಲಾಗಿ ಬಂದಿದ್ದ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ಆತ್ಮಾಹುತಿ ದಾಳಿಕೋರರಾಗಿ ಸಾವರ್ಕರ್‌ ಸಜ್ಜುಗೊಳಿಸಿದ್ದರು. ತನ್ನ ಸಹೋದರ ಬಾಬಾರವ್‌ನ ಗಡಿಪಾರು ವಿಲ್ಲಿಯ ಹಾಗೆ ಸಣ್ಣ ಸಣ್ಣ ಬೇಟೆಗಳ ಮೂಲಕ ಮುಗಿಸುವ ಸಂಗತಿಯಾಗಿರಲಿಲ್ಲ.

ಅದರ ಬಲಿ ಏ.ಎಂ.ಟಿ ಜಾಕ್ಸನ್‌ ಎಂಬ ನಾಸಿಕ್‌ ಜಿಲ್ಲಾ ಕಲೆಕ್ಟರ್ ಆಗಿದ್ದ. ಉಳಿದ ವಸಾಹತು ಅಧಿಕಾರಿಗಳೊಂದಿಗೆ ತುಲನೆ ಮಾಡುವಾಗ ಜಾಕ್ಸನ್‌ ಭಾರತೀಯರೊಂದಿಗೆ ಮತ್ತು ಭಾರತದೊಂದಿಗೆ ಪ್ರೀತಿ ಹೊಂದಿದ್ದ ಅಧಿಕಾರಿಯಾಗಿದ್ದ. ಭಾರತೀಯ ಸಂಸ್ಕೃತಿಯ ಕುರಿತು ಆಳವಾದ ಅಧ್ಯಯನ ನಡೆಸಿದ್ದ ಅಧಿಕಾರಿಯಾಗಿದ್ದ ಆತ. ಆತನ ಭಾರತದ ಮೇಲಿನ ಪ್ರೀತಿಯನ್ನು ಗುರುತಿಸಿ ಪಂಡಿತ್‌ ಜಾಕ್ಸನ್‌ ಎಂದು ಕರೆಯುತ್ತಿದ್ದರು. ನಾಸಿಕ್‌ ಎಂಬ ೨೫೦೦೦ದಷ್ಟು ಮಾತ್ರವೇ ಜನಸಂಖ್ಯೆಯಿದ್ದ ಪುಟ್ಟ ಪಟ್ಟಣದಲ್ಲಿ ಜನಪ್ರಿಯನಾಗಿದ್ದ ಜಾಕ್ಸನ್.‌ ಅದರಲ್ಲಿ ೯೦೦೦ದಷ್ಟು ಬ್ರಾಹ್ಮಣರಿದ್ದರು. ಆ ೯೦೦೦ದಲ್ಲಿ ಒಂದು ಸಾವಿರ ಜನರು ಮಾತ್ರವೇ ಚಿತ್ಪಾವನ ಬ್ರಾಹ್ಮಣರಾಗಿದ್ದರು. ಆದರೂ, ಆ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾಗಿದ್ದ ಒಂದು ಗುಂಪು ಸಾವರ್ಕರ್‌ ನೇತೃತ್ವದ ಅಭಿನವ್‌ ಭಾರತ್‌ ನ್ನು ಮುನ್ನಡೆಸುತ್ತಿತ್ತು.

ಜಾಕ್ಸನ್‌ಗೆ ನಾಸಿಕ್‌ನ ಹುದ್ದೆಯಿಂದ ಬಾಂಬೆಯ ಕಮಿಷನರ್‌ ಆಗಿ ಪದೋನ್ನತಿ ಸಿಕ್ಕಾಗ ನಾಸಿಕ್‌ನ ಜನರು ದುಃಖಿತರಾದರು. ತಮ್ಮ ಮೆಚ್ಚಿನ ಅಧಿಕಾರಿಗೆ ಬೀಳ್ಕೊಡುವ ಹಲವು ಕಾರ್ಯಕ್ರಮಗಳು ನಾಸಿಕಿನಾದ್ಯಂತ ನಡೆದವು. ಅದರ ಭಾಗವಾಗಿ ೧೯೦೯ ಡಿಸೆಂಬರ್‌ ೨೧ರಂದು ವಿಜಯಾನಂದ್‌ ಥಿಯೇಟರಿನಲ್ಲಿ ನಾಸಿಕಿನ ಪೌರ ಪ್ರಮುಖರು ಒಂದು ಸಮ್ಮೇಳನ ಆಯೋಜಿಸಿದ್ದರು. ಬಾಂಬೆಯ ಕಿರ್ಲೋಸ್ಕರ್‌ ನಾಟಕ ಸಂಘ ಅಲ್ಲಿ ಶಾರದಾ ಎಂಬ ನಾಟಕವನ್ನು ಆಡಲಿತ್ತು. ಬಾಲಗಂಧರ್ವ ಎಂಬ ವರನಟ ಅದರಲ್ಲಿ ಹಾಡುತ್ತಾ ಅಭಿನಯಿಸಿದ್ದ. ಸ್ತ್ರೀವೇಷ ಬಾಲಗಂಧರ್ವನ ವಿಶೇಷತೆಯಾಗಿತ್ತು. ನಾವು ಇದನ್ನು ಈ ಮೊದಲೇ ಗಮನಿಸಿದ್ದೆವು.

ನಾಟಕದ ನಡುವಿನ ವಿರಾಮ ವೇಳೆಯಲ್ಲಿ ಜಾಕ್ಸನ್‌ಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಾಕ್ಸನ್‌ ಅಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗಿದ್ದ. ವಿಲ್ಲಿಯ ವಿಷಯದಲ್ಲಿ ನಡೆದ ಹಾಗೆ, ಒಬ್ಬ ಹದಿನೆಂಟರ ತರುಣ ಒಂದು ಬ್ರೌನಿಂಗ್‌ ಪಿಸ್ತೂಲ್‌ ತೆಗೆದು ಜಾಕ್ಸನ್‌ ಮೇಲೆ ಗುಂಡು ಹಾರಿಸಿದ. ಅದು ತಾಗಲಿಲ್ಲ. ನಂತರ ನಾಲ್ಕು ಗುಂಡುಗಳನ್ನು ಹಾರಿಸಿದ. ಜಾಕ್ಸನ್‌ ಸ್ಥಳದಲ್ಲಿಯೇ ಸತ್ತು ಬಿದ್ದ.

ಅನಂತ್‌ ಲಕ್ಷ್ಮಣ್‌ ಕನ್ಹಾರೆ ಎಂಬ ಚಿತ್ಪಾವನ ಬ್ರಾಹ್ಮಣ ಯುವಕ ಜಾಕ್ಸನ್‌ ಮೇಲೆ ಗುಂಡಿನ ದಾಳಿ ಮಾಡಿದ್ದ. ಅನಂತ್‌ ಲಕ್ಷ್ಮಣ್‌ ಕನ್ಹಾರೆ ತನ್ನ ಗುರಿ ಸಾಧಿಸದಿದ್ದರೆ ಅದನ್ನು ನೆರವೇರಿಸಲು ಅಲ್ಲಿ ಇನ್ನಿಬ್ಬರು ತಯಾರಾಗಿ ಬಂದಿದ್ದರು.  ಕೃಷ್ಣಾಜಿ ಗೋಪಾಲ್‌ ಕಾರ್ವೇ ಮತ್ತು ವಿನಾಯಕ್‌ ನಾರಾಯಣ್‌ ದೇಶ್‌ಪಾಂಡೆ ಎಂಬಿಬ್ಬರು. ಇವರೆಲ್ಲರು ಅಭಿನವ್‌ ಭಾರತ್‌ ಸದಸ್ಯರಾಗಿದ್ದರು.

ಕನ್ಹಾರೆ ಔರಂಗಾಬಾದಿನಲ್ಲಿ ಜನಿಸಿದ್ದ. ಬಾಬಾರಾವ್‌ನ ವಿಚಾರಣೆ ಜಾಕ್ಸನ್‌ ಸಾನಿಧ್ಯದಲ್ಲಿ ನಡೆದಿತ್ತು ಎಂಬ ಕಾರಣಕ್ಕೆ ಅಭಿನವ್‌ ಭಾರತ್‌ ಜಾಕ್ಸನ್‌ ವಿರುದ್ಧ ತಿರುಗಿತ್ತು. ಕನ್ಹಾರೆ ಸ್ಥಳದಲ್ಲಿಯೇ ಬಂಧಿತನಾದ. ನಂತರ ಕಾರ್ವೇ, ದೇಶ್‌ಪಾಂಡೆ, ಸೋಮ, ವಾಮನ್‌ ಜೋಷಿ, ಗಣು, ದತ್ತು ಜೋಷಿ ಅರೆಸ್ಟಾದರು. ಇವರೆಲ್ಲ ಅಭಿನವ್‌ ಭಾರತ್‌ ಜೊತೆಗೆ ಸಂಬಂಧ ಹೊಂದಿದ್ದವರಾಗಿದ್ದರು. ಜೊತೆಗೆ ಸಾವರ್ಕರ್‌ ಸಹೋದರರಲ್ಲಿ ಕಿರಿಯವನಾಗಿದ್ದ ನಾರಾಯಣ್‌ ರಾವ್‌ ಸಾವರ್ಕರ್‌ ಕೂಡ ಬಂಧಿತನಾದ. ೧೯೧೦ ಮಾರ್ಚ್‌ ೨೯ರಂದು ಬಾಂಬೆ ಹೈಕೋರ್ಟ್‌ ಈ ಕೇಸಿನ ತೀರ್ಪು ಪ್ರಕಟಿಸಿತು. ಅನಂತ್‌ ಲಕ್ಷ್ಮಣ್‌ ಕನ್ಹಾರೆ, ಕಾರ್ವೇ ಮತ್ತು ದೇಶ್‌ಪಾಂಡೆಗೆ ಗಲ್ಲುಶಿಕ್ಷೆ ವಿಧಿಸಿತು. ಸೋಮ, ವಾಮನ್‌ ಜೋಷಿ ಮತ್ತು ಗಣು ಗಡೀಪಾರಾದರು. ನಾರಾಯಣ್‌ ಸಾವರ್ಕರ್‌ಗೆ ಆರು ತಿಂಗಳ ಕಠಿಣ ಸಜೆ ವಿಧಿಸಿತು. ಗಣು ಮತ್ತು ದತ್ತು ನಂತರ ಸಾಕ್ಷಿಗಳಾಗಿ ಬದಲಾದ ಕಾರಣ ಅವರ ಶಿಕ್ಷೆಯನ್ನು ರದ್ದುಗೊಳಿಸಲಾಯಿತು. ೧೯೧೦ ಏಪ್ರಿಲ್‌ ೧೯ರಂದು ಕನ್ಹಾರೆ ಸಹಿತ ಮೂವರನ್ನೂ ಗಲ್ಲಿಗೇರಿಸಲಾಯಿತು.

ವಿಲ್ಲಿಯ ಬೆನ್ನಿಗೆ ಜಾಕ್ಸನ್‌ ಕೊಲೆಯೂ ಸೇರಿದಾಗ ಲಂಡನ್‌ ನಿವಾಸಿಗಳು ಇಂಡಿಯಾ ಹೌಸ್‌ ವಿದ್ಯಾರ್ಥಿಗಳ ವಿರುದ್ಧ ತಿರುಗಿದರು. ಅಷ್ಟೇ ಅಲ್ಲದೆ ಕೊಲೆಗೆ ಬಳಸಿದ ಬ್ರೌನಿಂಗ್‌ ಪಿಸ್ತೂಲ್‌ ಇಂಡಿಯಾ ಹೌಸಿನ ಅಡುಗೆಗಾರ ಚತುರ್ಭುಜ ಅಮೀನ್‌ ಮುಖಾಂತರ ವಿನಾಯಕ್‌ ದಾಮೋದರ್‌ ಸಾವರ್ಕರ್‌ ಭಾರತಕ್ಕೆ ಸಾಗಾಟ ಮಾಡಿದ್ದ ಇಪ್ಪತ್ತು ಪಿಸತೂಲುಗಳಲ್ಲಿ ಒಂದು ಎಂಬುದು ಕೂಡ ಬೆಳಕಿಗೆ ಬಂತು. ಈ ಸಂಗತಿ ಮತ್ತು ಆಗಲೇ ಹೇಳಿದ ಲಂಡನ್‌ ನಿವಾಸಿಗಳ ವಿರೋಧ ಸಾವರ್ಕರನ್ನು ತಾತ್ಕಾಲಿಕವಾಗಿ ಲಂಡನ್‌ ತೊರೆಯುವಂತೆ ಮಾಡಿತು. ೧೯೧೦ ಜನವರಿ ೫ರಂದು ಸಾವರ್ಕರ್‌ ಪ್ಯಾರೀಸಿಗೆ ಪಲಾಯನ ಮಾಡಿದರು. ಅಲ್ಲಿ ಮೇಡಂ ಕಾಮರ ರೂ ಮೌಂಟೈನಿನ ಮನೆಯಲ್ಲಿ ತಂಗಿದರು.

ಇದರ ನಡುವೆ ಸಾವರ್ಕರ್‌ಗೆ ವಿರುದ್ಧವಾಗಿ ಹಲವು ಆರೋಪಗಳು ಅನುಯಾಯಿಗಳ ನಡುವಿನಿಂದಲೇ ಕೇಳಿ ಬರಲು ಶುರುವಾಗಿತ್ತು. ಸಾವರ್ಕರ್‌ ಉಳಿದವರ ಮೇಲೆ ಪ್ರಭಾವ ಬೀರಿ ಕೊಲೆಗಳನ್ನು ನಡೆಸುತ್ತಾರಲ್ಲದೆ ಒಮ್ಮೆಯೂ ಸ್ವತಃ ತಾನಾಗಿ ಎದುರು ನಿಂತು ಹೋರಾಡುವುದಿಲ್ಲ ಎಂಬುದು ಅವುಗಳಲ್ಲಿ ಪ್ರಧಾನ ಆರೋಪವಾಗಿತ್ತು. ಕನ್ಹಾರೆ ಮತ್ತು ಸಹಚರರನ್ನು ಗಲ್ಲಿಗೇರಿಸಿದ ನಂತರ ಅದು ಇನ್ನಷ್ಟು ಹೆಚ್ಚುತ್ತದೆಯೆಂದು ಸಾವರ್ಕರ್‌ ಹೆದರಿದರು. ಆದ್ದರಿಂದ ಲಂಡನ್ನಿಗೆ ಮರಳಲು ಸಾವರ್ಕರ್‌ ತೀರ್ಮಾನಿಸುತ್ತಾರೆ. ಇನ್ನೊಂದು ಕಾರಣ, ಲಂಡನ್ನಿನ ಕಾನೂನುಗಳ ಬಗ್ಗೆ ಇದ್ದ ನಂಬಿಕೆಯಾಗಿತ್ತು. ಮಾನವಹಕ್ಕುಗಳಿಗೆ ಲಂಡನ್‌ ನೀಡುತ್ತಿದ್ದ ಬೆಲೆಯ ಕಾರಣದಿಂದ ವಿಶ್ವದಾದ್ಯಂತದ ಹಲವು ಕ್ರಾಂತಿಕಾರಿಗಳ ಕೇಂದ್ರವಾಗಿ ಲಂಡನ್‌ ನಗರ ಬದಲಾಗಿತ್ತು. ಆದ್ದರಿಂದ ಬಂಧಿಸಲ್ಪಟ್ಟರೂ ಕೂಡ ತನಗೆ ಪ್ರೇರಣೆಗೆಂದು ಸಣ್ಣ ಶಿಕ್ಷೆಯನ್ನಷ್ಟೇ ವಿಧಿಸಬಹುದೆಂದು ಸಾವರ್ಕರ್‌ ಭಾವಿಸಿರಬಹುದು.

ಆದರೆ, ಇದೇ ಹೊತ್ತಿಗೆ ಸಾವರ್ಕರ್ ವಿರುದ್ಧ ಭಾರತದ ಕೋರ್ಟ್‌ ಕೂಡ ವಾರೆಂಟ್‌ ಹೊರಡಿಸಿತ್ತು. ಐದು ಆರೋಪಗಳನ್ನು ಸಾವರ್ಕರ್‌ ಮೇಲೆ ಹೊರಿಸಲಾಗಿತ್ತು. ಒಂದು, ಬ್ರಿಟಿಷ್‌ ರಾಜನ ವಿರುದ್ಧ ಯುದ್ಧ ಮಾಡಲು ಪ್ರೇರಣೆ ನೀಡಿರುವುದು. ಎರಡು, ಬ್ರಿಟಿಷ್‌ ಇಂಡಿಯಾದಲ್ಲಿ ರಾಜನಿಗಿರುವ ಪರಮಾಧಿಕಾರವನ್ನು ಪ್ರಶ್ನಿಸಿರುವುದು. ಮೂರು, ೧೯೦೮ರಲ್ಲಿ ಲಂಡನ್ನಿನಲ್ಲಿ ಆಯುಧಗಳನ್ನು ಸಂಗ್ರಹಿಸಿ, ಅದನ್ನು ವಿತರಣೆ ಮಾಡಿ, ಜಾಕ್ಸನ್‌ ಕೊಲೆಗೆ ಪ್ರೇರಣೆ ನೀಡಿರುವುದು. ನಾಲ್ಕು, ೧೯೦೮ರಲ್ಲಿ ಲಂಡನ್ನಿನಲ್ಲಿ ಆಯುಧ ಸಂಗ್ರಹ ಮಾಡಿ ರಾಜನ ವಿರುದ್ಧ ಯುದ್ಧ ಮಾಡಲು ಪ್ರೇರಣೆ ನೀಡಿರುವುದು. ಐದು, ೧೯೦೬ರಲ್ಲಿ ಭಾರತದಲ್ಲಿ ನಾಸಿಕ್‌ ಮತ್ತು ಪುಣೆಗಳಲ್ಲಿ ಮತ್ತು ೧೯೦೮ರಲ್ಲಿ ಲಂಡನ್ನಿನಲ್ಲಿ ದೇಶದ್ರೋಹಿ ಭಾಷಣ ಮಾಡಿರುವುದು.

ಇವುಗಳ ಜೊತೆಗೆ ಲಂಡನ್ನಿಗೆ ಮರಳಿ ಬರಲು ಸಾವರ್ಕರ್‌ಗೆ ಪ್ರೇರಣೆಯಾದ, ಆದರೆ ಅಂತಹ ಸಾಕ್ಷಿಗಳೇನೂ ಇಲ್ಲದ ಹಲವು ಕಾರಣಗಳು ಪ್ರಚಲಿತದಲ್ಲಿದ್ದವು. ಅವುಗಳಲ್ಲಿ ಕೆಲವನ್ನು ಸಾವರ್ಕರ್ ಆತ್ಮಕತೆ ಬರೆದ ವೈಭವ್‌ ಪುರಂದರೇ ಮತ್ತು ವಿಕ್ರಂ ಸಂಪತ್‌ ವಿವರಿಸುತ್ತಾರೆ. ಮೊದಲನೆಯದು, ಲಾರೆನ್ಸ್‌ ಮಾರ್ಗರೇಟ್‌ ಎಂಬ ಆಂಗ್ಲ ಪ್ರೇಯಸಿಯ ಬಗ್ಗೆ. ಬ್ರಿಟಿಷ್‌ ಏಜೆನ್ಸಿಗಳು ಸಾವರ್ಕರನ್ನು ಉರುಳಿಸಲು ಬಳಸಿದ ಹನಿ ಟ್ರಾಪ್‌ ಆ ಪ್ರೇಯಸಿ ಎಂದು ವಿಕ್ರಂ ಸಂಪತ್‌ ಹೇಳುತ್ತಾರೆ. ಆದರೆ ಆ ಕುರಿತ ಸಾಕ್ಷಿಗಳು ಇಲ್ಲವೆಂದೂ ಒಪ್ಪಿಕೊಳ್ಳುತ್ತಾರೆ. ಜೊತೆಗೆ ಸಾವರ್ಕರ್ ಅವರ ಓಪಿಯಮ್‌ ಬಳಕೆ ಮತ್ತು ಸಲಿಂಗ ಕಾಮದ ಕುರಿತು ಇಂತಹ ಕಥೆಗಳು ಹರಡಿದ್ದವು. ಶ್ಯಾಂಜಿ ಕೃಷ್ಣ ವರ್ಮ ಮೊದಲಾದವರು ನಿರಂತರವಾಗಿ ನೀಡಿದ ಮುನ್ನೆಚ್ಚರಿಕೆಗಳನ್ನು ಕಡೆಗಣಿಸಿ ಸಾವರ್ಕರ್‌ ತಾನು ಲಂಡನ್ನಿಗೆ ಮರಳುವ ನಿರ್ಧಾರ ಕೈಗೊಂಡದ್ದೇ ಇಂತಹ ಕಾರಣಗಳಿಗೆ ಪುಷ್ಠಿ ನೀಡುತ್ತದೆ ಎಂದು ಭಾವಿಸಬಹುದು.

ಗ್ರೇ ಇನ್‌ ಬ್ಯಾರಿಸ್ಟರ್‌ ಪದವಿ ನಿರಾಕರಿಸಿದ್ದರೂ ಸಾವರ್ಕರ್‌ ಬ್ರಿಟಿಷ್‌ ಕಾನೂನುಗಳನ್ನು ಓದಿ ಪರೀಕ್ಷೆ ಪಾಸಾಗಿದ್ದರು. ಈ ಕಾನೂನು ಜ್ಞಾನವೇ ಲಂಡನ್ನಿಗೆ ಮರಳಲು ಉತ್ತೇಜನವಾಗಿರಬಹುದು. ತನಗೆ ದೊಡ್ಡ ಮಟ್ಟದ ಶಿಕ್ಷೆ ಲಭಿಸಲಿದೆಯೆಂದು ಸಾವರ್ಕರ್‌ ಒಮ್ಮೆಯೂ ಯೋಚಿಸಿರಲಿಕ್ಕಿಲ್ಲ. ೧೯೧೦ ಮಾರ್ಚ್‌ ೧೩ರಂದು ನಮಗಿನ್ನೂ ಅಜ್ಞಾತವಾಗಿರುವ ಕಾರಣಗಳಿಂದ ಸಾವರ್ಕರ್‌ ಪ್ಯಾರಿಸ್‌ ತೊರೆಯುತ್ತಾರೆ. ಲಂಡನ್‌ ತಲುಪಿದ ಕೂಡಲೇ ಬಂಧಿತನಾಗುತ್ತಾರೆ.

ವಿ.ವಿ.ಎಸ್.‌ ಅಯ್ಯರ್‌ ತನ್ನನ್ನು ಜೈಲಿನಲ್ಲಿ ಕಾಣಲು ಬಂದ ಕುರಿತು ನಂತರದ ತನ್ನ ಆತ್ಮಕತೆಯಲ್ಲಿ ಕಾಣಬಹುದು. ʼಕಣ್ಣೀರು ಹರಿಯಿತು. ಅದನ್ನು ಅದುಮಿಟ್ಟುಕೊಂಡು ನಾವು ಹೇಳಿದೆವು, ಕೂಡದು, ಕೂಡದು, ನಾವು ಹಿಂದೂಗಳು, ಗೀತೆ ಓದಿದವರು. ಈ ಅನುಕಂಪ ರಹಿತ ಜನರ ನಡುವೆ ನಾವು ಅಳಬಾರದು.ʼ ಮಾನವ ಸಂಸ್ಕೃತಿಯ ಅತ್ಯಂತ ಮೂಲಭೂತ ಸಂಜ್ಞೆಗಳಲ್ಲಿ ಒಂದಾದ, ದುರ್ಬಲರ ಕೃತ್ಯವೆಂದು ಸಾವರ್ಕರ್‌ ಮತ್ತು ಅಯ್ಯರ್‌ ಗಟ್ಟಿಯಾಗಿ ನಂಬಿಕೊಂಡಿದ್ದ ಅಳುವನ್ನು ಅವರಿಬ್ಬರು ಅದುಮಿಟ್ಟುಕೊಳ್ಳುವುದು ತಾವು ಭಾರತೀಯರು ಎಂಬ ನೆಲೆಯಲ್ಲಿಯೋ, ರಾಷ್ಟ್ರವಾದಿಗಳು ಎಂಬ ನೆಲೆಯಲ್ಲಿಯೋ ಅಲ್ಲವೇ ಅಲ್ಲ. ಗೀತೆಯ ಸಹಾಯದಿಂದ ಕಟ್ಟಲ್ಪಟ್ಟಿದ್ದ ಒಂದು ಹಿಂದೂ ಕಲ್ಪನೆಯ ಕಾರಣದಿಂದ. ಅದು ಕೂಡ, ತಿಲಕ್‌ ತನ್ನ ಗೀತಾರಹಸ್ಯ ಎಂಬ ವ್ಯಾಖ್ಯಾನದ ಮೂಲಕ ಅಜರಾಮರಗೊಳಿಸಿದ್ದ ಸಾರಾಂಶವನ್ನು ಆವಾಹಿಸಿಕೊಂಡು.

Related Articles

ಇತ್ತೀಚಿನ ಸುದ್ದಿಗಳು