ಪುಲ್ವಾಮಾ ದುರ್ಘಟನೆ ಹಿಂದೆ ಬಿಜೆಪಿ ಪಕ್ಷದ ನೇರ ಕೈವಾಡದ ಬಗ್ಗೆ ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲರಾದ ಸತ್ಯಪಾಲ್ ಮಲಿಕ್ ಹೇಳಿಕೆ, ನಂತರ 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಂತದ್ದೇ ಒಂದು ದುರಂತ ಅಥವಾ ಗಲಭೆ ಸೃಷ್ಟಿಸಿ ಚುನಾವಣೆಯಲ್ಲಿ ಮತ ಪಡೆಯಲು ಮುಂದಾಗಲಿದೆಯೇ ಎಂಬ ಅನುಮಾನ ಎಲ್ಲೆಡೆ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಸತ್ಯಪಾಲ್ ಮಲಿಕ್ “ಬಿಜೆಪಿ ಪಕ್ಷದವರು 2024 ಕ್ಕೆ ರಾಮಮಂದಿರ ಸ್ಪೋಟ ಅಥವಾ ಬಿಜೆಪಿ ಪಕ್ಷದ್ದೇ ಪ್ರಭಾವಿ ನಾಯಕರೊಬ್ಬರ ಹತ್ಯೆ ಮಾಡಿಯಾದರೂ ಅಧಿಕಾರ ಪಡೆಯಲು ಹಿಂದೇಟು ಹಾಕುವುದಿಲ್ಲ” ಎಂಬ ಹೇಳಿಕೆ ನೀಡಿ ಗಮನ ಸೆಳೆದಿದ್ದರು. ಈಗ ಶಿವಸೇನೆ ನಾಯಕ ಉದ್ದವ್ ಠಾಕ್ರೆ ಕೂಡಾ ಇದೇ ರೀತಿಯ ಅನುಮಾನ ವ್ಯಕ್ತಪಡಿಸಿದ್ದು, “ಗೋದ್ರಾ ಮಾದರಿಯ ಗಲಭೆ ಎಬ್ಬಿಸಿ ಬಿಜೆಪಿ ಮತ ಪಡೆಯುವ ಹುನ್ನಾರದ ಸಾಧ್ಯತೆ ಇದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪುಲ್ವಾಮಾ ದುರ್ಘಟನೆ ಬಗ್ಗೆ ಬಿಜೆಪಿಗೆ ಮೊದಲೇ ಇದ್ದ ಮಾಹಿತಿ, ದುರ್ಘಟನೆ ನಡೆದ ಬಗ್ಗೆ ಮಾಹಿತಿ ಸಿಕ್ಕರೂ ಪ್ರಧಾನಿ ನರೇಂದ್ರ ಮೋದಿ ಫೋಟೋಶೂಟ್ ನಲ್ಲಿ ಬ್ಯುಸಿ ಆಗಿದ್ದು, ಆ ನಂತರ ಸತ್ಯಪಾಲ್ ಮಲಿಕ್ ಅವರ ಹೇಳಿಕೆ ಇಲ್ಲಿ ಮಹತ್ವ ಪಡೆದುಕೊಳ್ಳುತ್ತಿದೆ.
ಅಷ್ಟೆ ಅಲ್ಲದೇ ಪುಲ್ವಾಮಾ ದಾಳಿಗೂ ಒಂದಷ್ಟು ದಿನಗಳ ಹಿಂದೆ ‘ರಿಪಬ್ಲಿಕ್ ಟಿವಿ’ ಮಾಲಿಕ ಅರ್ನಬ್ ಗೋಸ್ವಾಮಿ, BARC ಮುಖ್ಯಸ್ಥರ ಜೊತೆಗೆ ಮಾತನಾಡಿದ ವಾಟ್ಸಾಪ್ ಚಾಟ್ ಹಿಸ್ಟರಿ ಲೀಕ್ ಆಗುತ್ತದೆ. ಇದು ದೇಶದ ಬಹುತೇಕ ಮಾಧ್ಯಮಗಳ ಮೂಲಕವೂ ಜಗಜ್ಜಾಹೀರಾಗಿತ್ತು. ಅದರಲ್ಲಿ ಪುಲ್ವಾಮಾ ದಾಳಿಯ ಬಗ್ಗೆ ದೇಶದ ಪ್ರಮುಖ ವ್ಯಕ್ತಿಗಳಿಗೆ ಮಾಹಿತಿ ಇದ್ದ ಬಗ್ಗೆ ದಾಖಲೆ ಸಿಗುತ್ತದೆ. ಇಂತಹ ಸಂದರ್ಭಕ್ಕೂ ಸಹ ಬಿಜೆಪಿ ಪಕ್ಷ ಇದರ ತನಿಖೆಯನ್ನು ಬೇಕಂತಲೇ ಹಳ್ಳ ಹಿಡಿಸುವ ಕೆಲಸಕ್ಕೆ ಮುಂದಾಗಿದೆ ಎಂದು ಹಲವರು ಆರೋಪಿಸಿದ್ದಾರೆ. ಜೊತೆಗೆ ಸರ್ಕಾರ ಕೂಡಾ ಇದರ ತನಿಖೆಯ ಪ್ರಗತಿಯ ಬಗ್ಗೆ ಈ ವರೆಗೆ ವಿಚಾರ ಸ್ಪಷ್ಟಪಡಿಸಿಲ್ಲ.
ದೇಶದಲ್ಲಿ ಏನೇ ದೊಡ್ಡ ದುರಂತ ನಡೆದರೂ, ಸಾವು ನೋವುಗಳಾದರೂ ಅದರ ಹೊಣೆ ಸರ್ಕಾರವೇ ಹೊರಬೇಕು. ಭದ್ರತೆಯ ಲೋಪಗಳಿಂದ ಹಿಡಿದು, ಗಲಭೆ ನಿಯಂತ್ರಣದ ವರೆಗೂ ಸರ್ಕಾರದ್ದೇ ಮುಖ್ಯ ಜವಾಬ್ದಾರಿಯಾಗಿರುತ್ತದೆ. ಆದರೆ ಪುಲ್ವಾಮಾ ದುರ್ಘಟನೆ ನಂತರ ಆಡಳಿತಾರೂಢ ಬಿಜೆಪಿ ಪಕ್ಷ ಆಡಳಿತ ವಿರೋಧಿಯಾಗಿದ್ದ ಅಲೆಯನ್ನು ತನ್ನ ಪರವಾದ ಅಲೆಯನ್ನಾಗಿ ತಿರುಗಿಸಿಕೊಳ್ಳಲು ಯಶಸ್ವಿಯಾಗಿತ್ತು.
ಪಾಕಿಸ್ತಾನದ ಬಾಲಾಕೋಟ್ ಬಳಿ ಖಾಲಿ ಜಾಗಕ್ಕೆ ಬಾಂಬ್ ಎಸೆದು ಅಲ್ಲಿ ಉಗ್ರರ ತಾಣವನ್ನೇ ಧ್ವಂಸ ಮಾಡಿದ್ದೇವೆ, ಅಲ್ಲಿ ನೂರಾರು ಉಗ್ರರು ಹತರಾಗಿದ್ದಾರೆ, ಇದು ಪಾಕಿಸ್ತಾನ ಮತ್ತು ಉಗ್ರರ ಮೇಲೆ ಮೋದಿ ಸರ್ಕಾರದ ಪ್ರತಿಕಾರ ಎಂದೆಲ್ಲಾ ಮಾಧ್ಯಮಗಳು ಮೇಲಿಂದ ಮೇಲೆ ವರದಿ ಬಿತ್ತಿಸಿದ್ದವು. ಬಿಜೆಪಿ ಕೂಡಾ ಇದೇ ರೀತಿಯಾಗಿ ವಾದಿಸಿಕೊಂಡು ಬಂದಿತ್ತು.
ಆದರೆ ಅಸಲಿ ವಿಚಾರ ಏನೆಂದರೆ ಬಾಲಾಕೋಟ್ ದಾಳಿಯೇ ಒಂದು ಫೇಕ್ ಎಂದು ಪ್ರತ್ಯಕ್ಷದರ್ಶಿ ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಅಷ್ಟು ಹೊತ್ತಿಗಾಗಲೇ ಪುಲ್ವಾಮಾ ದಾಳಿಯ ನಂತರ ಆಡಳಿತದ ವಿರೋಧಿಯಾಗಿದ್ದ ಅಲೆಯನ್ನು ಬಿಜೆಪಿ ಪಕ್ಷ ಸಂಪೂರ್ಣವಾಗಿ ತನ್ನ ಪರವಾಗಿ ತಿರುಗಿಸಿಕೊಂಡಿತ್ತು. ಅಂದ್ರೆ ಎಂತಹ ದುರ್ಘಟನೆಯನ್ನೂ ಬಿಜೆಪಿ ತನ್ನ ಪರವಾದ ಅಲೆಯಾಗಿ ತಿರುಗಿಸಿಕೊಳ್ಳುವ ಛಾಥಿ ಹೊಂದಿದೆ ಎಂಬುದು ಸ್ಪಷ್ಟವಾಗಿತ್ತು.
ಸಧ್ಯ ಇಷ್ಟೆಲ್ಲಾ ಪೀಠಿಕೆಯ ಉದ್ದೇಶ ಏನೆಂದರೆ, 2024 ರ ಚುನಾವಣೆಗೂ ಕೇಂದ್ರದಲ್ಲಿರುವ ಬಿಜೆಪಿ ಇಂತದ್ದೇ ಒಂದು ದೊಡ್ಡ ಸ್ಪೋಟ ಅಥವಾ ರಾಮಮಂದಿರ ಉದ್ಘಾಟನೆಯ ನಂತರ ರಾಮಭಕ್ತರ ಮೇಲೆ ಏನಾದರೂ ದಾಳಿ ನಡೆಸಿ ಮತ ಪಡೆಯುವ ಹುನ್ನಾರ ಹೊಂದಿರಬಹುದಾ ಎಂಬುದಾಗಿ ಶಿವಸೇನೆ ನಾಯಕ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡುವುದಕ್ಕೆ 2024ರ ಜನವರಿಯಲ್ಲಿ ಪ್ರಧಾನಿ ಮೋದಿ ನೆರವೇರಿಸಲಿದ್ದಾರೆ ಎನ್ನಲಾಗಿದೆ. ಈ ಕಾರ್ಯಕ್ರಮದಲ್ಲಿ ದೇಶಾದ್ಯಂತ ಸಾವಿರ ಸಾವಿರ ಸಂಖ್ಯೆಯಲ್ಲಿ ರಾಮಭಕ್ತರು ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಈಗಾಗಲೇ ಸಿಕ್ಕಿದೆ. ಆದರೆ ಈ ಕಾರ್ಯಕ್ರಮಕ್ಕೆ ಜನರನ್ನು ಬಸ್ ಹಾಗು ಟ್ರಕ್‌ಗಳಲ್ಲಿ ಕರೆ ತರುವುದಕ್ಕೂ ಚಿಂತನೆ ನಡೆಯುತ್ತಿದೆ. ಆದರೆ ಉದ್ಘಾಟನೆ ಬಳಿಕ ತಮ್ಮ ಊರುಗಳಿಗೆ ಹಿಂತಿರುಗುವಾಗ ಗೋಧ್ರಾ ರೀತಿಯ ದುರ್ಘಟನೆ ನಡೆಸುವ ಸಾಧ್ಯತೆಯಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭವಿಷ್ಯ ನುಡಿದಿರುವುದು ಆತಂಕಕ್ಕೆ ಕಾರಣವಾಗಿದೆ.
ಕೇವಲ ಉದ್ದವ್ ಠಾಕ್ರೆ ಮಾತ್ರವಲ್ಲದೆ, ಪುಲ್ವಾಮಾ ದುರ್ಘಟನೆಯ ಬಗ್ಗೆ ಇಂಚಿಂಚೂ ಮಾಹಿತಿ ಹೊರಹಾಕುವ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಕೂಡಾ ಇದೇ ವಿಚಾರದಲ್ಲಿ ಈ ಹಿಂದೆ ನೀಡಿದ ಹೇಳಿಕೆ ಕೂಡ ಹೆಚ್ಚು ಸದ್ದು ಮಾಡಿತ್ತು. ಒಟ್ಟಾರೆ 2024 ರ ಚುನಾವಣೆ ವೇಳೆಗೆ ಬಿಜೆಪಿ ಪಕ್ಷದ ಅಧಿಕಾರಾವಧಿಯಲ್ಲಿ ದೇಶದಲ್ಲಿ ಎಂತಹ ದುರ್ಘಟನೆ ನಡೆದರೂ ಆಶ್ಚರ್ಯವಿಲ್ಲ ಎಂಬುದಾಗಿ ಈ ಇಬ್ಬರು ನಾಯಕರ ಹೇಳಿಕೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ.