ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಗಳಿಗೆ ಮಾತ್ರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ವಾಣಿಜ್ಯ ವಾಹನ ಸಬ್ಸಿಡಿ ಯೋಜನೆಯ ನೀಡಿದೆ, ಹಿಂದೂಗಳಿಗೆ ಇಲ್ಲ ಎಂಬ ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ಕರ್ನಾಟಕ ಪೊಲೀಸರು ಆಜ್ ತಕ್‌ನ ಕನ್ಸಲ್ಟಿಂಗ್ ಎಡಿಟರ್ ಸುಧೀರ್ ಚೌಧರಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸೋಮವಾರ ತನ್ನ ಹಿಂದಿ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸ್ವಾವಲಂಬಿ ಸಾರಥಿ ಯೋಜನೆಯ ಸೌಲಭ್ಯ ಹಿಂದೂಗಳಿಗೆ ನೀಡಿಲ್ಲ ಎಂದು ಹೇಳಿದ್ದರು. ಈ ಯೋಜನೆಯಲ್ಲಿ ಕಮರ್ಷಿಯಲ್ ವಾಹನಗಳನ್ನು ಖರೀದಿಸಲು 4.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಅಲ್ಪಸಂಖ್ಯಾತರಿಗೆ 50% ಅಥವಾ 3 ಲಕ್ಷದವರೆಗೆ ಸಬ್ಸಿಡಿ ನೀಡುತ್ತದೆ. ಅಲ್ಲದೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಈ ಯೋಜನೆ ಲಭ್ಯವಾಗಲಿದೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿದ್ದರೂ ಇದುವರೆಗೆ ಅಂತಹ ಯಾವುದೇ ಅಧಿಸೂಚನೆಯನ್ನು ಬಿಡುಗಡೆ ಮಾಡಿಲ್ಲ ಎಂದು ಚೌಧರಿ ಹೇಳಿದ್ದರು.
ಆದರೆ, ಕರ್ನಾಟಕದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಈ ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಸಹಾಯಧನವನ್ನು ಪಡೆಯಲು ಅವಕಾಶ ಇದೆ. ಇವರು ಐರಾವತ ಯೋಜನೆಯ ಮೂಲಕ ಇದೇ ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಈ ಯೋಜನೆಯ ಅದರ ಅಡಿಯಲ್ಲಿ ಕ್ಯಾಬ್ ಅಗ್ರಿಗೇಟರ್‌ಗಳೊಂದಿಗೆ ಕೆಲಸ ಮಾಡಲು ಸರ್ಕಾರ ಅವರಿಗೆ ನೆರವು ನೀಡುತ್ತದೆ. ಅಲ್ಲದೇ, ಈ ಇದರಲ್ಲಿ ಸಣ್ಣ ಮೋಟಾರು ವಾಹನವನ್ನು ಖರೀದಿಸಲು 5 ಲಕ್ಷ ರೂ.ಗಳ ಸಹಾಯಧನ ಕೂಡ ನೀಡಲಾಗುತ್ತದೆ.
ಚೌದರಿ ತನ್ನ ಕೋಮುವಾದಿ ವಿಚಾರಗಳ, ದ್ವೇಷಪೂರಿತ ಹಾಗೂ ಬಿಜೆಪಿ ಪರ ಕಾರ್ಯಕ್ರಮಗಳಿಂದ ಪ್ರಖ್ಯಾತರಾದವರು. ತಮ್ಮ ಕಾರ್ಯಕ್ರಮಗಳಲ್ಲಿ ಸತತ ಸುಳ್ಳು ಸುದ್ದಿಯನ್ನು ಹರಡುವ ಖ್ಯಾತಿಯೂ ಇವರಿಗೆ ಇದೆ.
ಆದರೆ, ಕರ್ನಾಟಕ ಸರ್ಕಾರದ ಯೋಜನೆಯ ಬಗ್ಗೆ ತಮ್ಮ ಕಾರ್ಯಕ್ರಮದಲ್ಲಿ ಇವರು ಹರಡಿರುವ ತಪ್ಪು ಮಾಹಿತಿಗೆ ಪ್ರತಿಕ್ರಯಿಸಿ ಕರ್ನಾಟಕ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆ ಅವರು “ಚೌದರಿ ತಪ್ಪು ಮಾಹಿತಿ ಹರಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಆಜ್ ತಕ್‌ನ ಆಂಕರ್ ಉದ್ದೇಶಪೂರ್ವಕವಾಗಿ ಬಿಜೆಪಿ ಸಂಸದರು ಹರಡಲು ಶುರು ಮಾಡಿದ ಸರ್ಕಾರದ ಯೋಜನೆಗಳ ಬಗೆಗಿನ ತಪ್ಪು ಮಾಹಿತಿಯನ್ನು ಹರಡಿದ್ದಾರೆ. ದುರುದ್ದೇಶಪೂರಿತ ನಡೆಯಾಗಿದ್ದು, ಸರ್ಕಾರ ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತದೆ,” ಎಂದು ಪ್ರಿಯಾಂಕ್ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಮತ್ತು 153A (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಆಜ್ ತಕ್ ನ ಈ ಸುದ್ದಿ ನಿರೂಪಕರನ ಮೇಲೆ ದಾಖಲಿಸಲಾಗಿದೆ.
“ಪ್ರಶ್ನೆ ಕೇಳಿದ್ದಕ್ಕಾಗಿ” ನನ್ನ ವಿರುದ್ಧ ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೋರ್ಟಿನಲ್ಲಿ ನೋಡಿಕೊಳ್ಳುತ್ತೇನೆ,” ಎಂದು ಚೌದರಿ ಟ್ವೀಟ್ ಮಾಡಿದ್ದಾರೆ.
https://x.com/sudhirchaudhary/status/1701673863225160017?s=20
ಈ ಯೋಜನೆಗೆ ಸಂಬಂಧಿಸಿದಂತೆ ಅನೇಕ ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ್ದರು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಇದನ್ನು ಮುಸ್ಲಿಂ ಮತದಾರರನ್ನು ಓಲೈಸಲು ಮಾಡಿದ ಯೋಜನೆ ಎಂದು ಆರೋಪಿಸಿದ್ದರು.
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಈ ಯೋಜನೆಯನ್ನು “ಎಲ್ಲಾ ಕನ್ನಡಿಗರಿಗೆ ಮೀಸಲಾದ ಸಾರ್ವಜನಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಒಂದು ಸಮುದಾಯಕ್ಕೆ ಸರ್ಕಾರ ನಾಚಿಕೆಯಿಲ್ಲದೆ ನೀಡಿದ ಲಂಚ” ಎಂದು ಟ್ವೇಟ್ ಮಾಡಿದ್ದರು.
https://x.com/Rajeev_GoI/status/1700013089721385442?s=20
ಈ ಕಾರ್ಯಕ್ರಮವು ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲೇ ಜಾರಿಯಲ್ಲಿತ್ತು, ಮೊದಲು ಇದ್ದ ರೂ. 2.5 ಲಕ್ಷ ರುಪಾಯಿಯನ್ನು ಸ್ವಾವಲಂಬಿ ಸಾರಥಿ ಯೋಜನೆಯಡಿ 3 ಲಕ್ಷ ಏರಿಸಲಾಗಿದೆ,” ಎಂದು ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್ ಹೇಳಿಕೆಯನ್ನು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಸುಳ್ಳು ಸುದ್ದಿ ಹರಡಿ ಜನರ ಹಾದಿ ತಪ್ಪಿಸುತ್ತಿರುವ ಪತ್ರಕರ್ತರನ್ನು ಮಟ್ಟ ಹಾಕಲು ಫ್ಯಾಕ್ಟ್ ಚೆಕ್ಕಿಂಗ್ ಘಟಕಕ್ಕೆ ಸಹಕಾರ ನೀಡುವಂತೆ ಪ್ರಿಯಾಂಕ್ ಖರ್ಗೆ ದಿ ಎಡಿಟರ್ ಗಿಲ್ಡ್ ಆಫ್ ಇಂಡಿಯಾವನ್ನು ಒತ್ತಾಯಿಸಿದ್ದಾರೆ.
https://x.com/PriyankKharge/status/1701789961673130297?s=20
ದಿ ಎಡಿಟರ್ ಗಿಲ್ಡ್ ಆಫ್ ಇಂಡಿಯಾ ಕರ್ನಾಟಕ ಸರ್ಕಾರ ಸುಳ್ಳು ಸುದ್ದಿ ನಿಯಂತ್ರಿಸಲು ಸ್ಥಾಪನೆ ಮಾಡಲು ಹೊರಟಿರುವ ಫ್ಯಾಕ್ಟ್ ಚೆಕ್ ಯೂನಿಟ್ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿತ್ತು.