Saturday, April 27, 2024

ಸತ್ಯ | ನ್ಯಾಯ |ಧರ್ಮ

ಚುನಾವಣಾ ಆಯೋಗವೆನ್ನುವ ಮೂಕ ಪ್ರೇಕ್ಷಕ, ಮತ್ತು ಪ್ರಜಾಪ್ರಭುತ್ವ ಎನ್ನುವ ತಮಾಷೆ

18ನೇ ಲೋಕಸಭೆಗೆ ಮತದಾನ ಆರಂಭಗೊಳ್ಳುತ್ತಿರುವ ಹಾಗೆ ರಾಜಕೀಯ ಅತಿರೇಕದ ವಾತಾವರಣವೂ ಎಲ್ಲೆಡೆ ಕಾಣುತ್ತಿದೆ. ಕೇಂದ್ರ ಚುನಾವಣಾ ಆಯೋಗವು ಚುನಾವಣೆಯ ಮೇಲ್ವಿಚಾರಣೆಗೆ ಅಪಾರ ಸಂಪನ್ಮೂಲಗಳು ಮತ್ತು ಅಧಿಕಾರಗಳನ್ನು ಹೊಂದಿದೆ ಆದರೆ ಅದು ನಿಷ್ಪಕ್ಷಪಾತ ವೀಕ್ಷಕನಾಗಿ ಕಾರ್ಯನಿರ್ವಹಿಸುವ ಇಚ್ಛಾಶಕ್ತಿಯನ್ನು ಕಳೆದುಕೊಂಡಿದೆ.

ಅದು ಕಠಿಣ ಸಂದರ್ಭಗಳಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಕೇವ ವೀಕ್ಷಕನಾಗಿ ನಿಂತು ನೋಡುತ್ತಿದೆ. ಅದು ತನ್ನ ಆತ್ಮಸಾಕ್ಷಿಯ ಕರೆಗೆ ಓಗೊಡುತ್ತಿಲ್ಲ. ಚುನಾವಣಾ ಆಯೋಗವೆನ್ನುವುದು ಜಡವಾಗಿ ನಿಂತಿದೆ.

ಚುನಾವಣಾ ಆಯೋಗವು ನಿಷ್ಪಕ್ಷಪಾತಚುನಾವಣೆಯನ್ನು ನಡೆಸಬೇಕಾದ ಸಾಂವಿಧಾನಿಕ ಜವಬ್ದಾರಿಯನ್ನು ಹೊಂದಿರುವ ಸಂಸ್ಥೆ. ಮತ್ತು ಆ ನಿಟ್ಟಿನಲ್ಲಿ ಅದಕ್ಕೆ ಬೇಕಾದ ಎಲ್ಲಾ ಅಧಿಕಾರಗಳನ್ನು ಸಹ ಅದು ಹೊಂದಿದೆ. ಆದರೆ ಇಂದು ಮೂರು ಮೂವರು ಮುಖ್ಯ ಚುನಾವಣಾಧಿಕಾರಿಗಳನ್ನು ಹೊಂದಿರುವ ಚುನಾವಣಾ ಆಯೋಗ ಯಾವುದೋ ಲೋಕದ ಪ್ರತಿನಿಧಿಯಂತೆ ಕಾಣುತ್ತಿದೆ. ಅದು ಇಲ್ಲಿ ನಡೆಯುತ್ತಿರುವುದಕ್ಕೂ ತನಗೂ ಸಂಬಂಧವೇ ಇಲ್ಲವೆನ್ನುವಂತೆ ವರ್ತಿಸುತ್ತಿದೆ. ಒಮ್ಮೊಮ್ಮೆ ಅದು ಮುಖ್ಯವಾಹಿನಿ ಮಾಧ್ಯಮಗಳ ಪ್ರಚೋದನೆಯಿಂದ ಇದ್ದಕ್ಕಿದ್ದಂತೆ ನಿದ್ದೆಯಿಂದ ಬೆಚ್ಚಿ ಎದ್ದವರ ಹಾಗೆ ಆಡಿ ಮತ್ತೆ ಮಲಗುತ್ತದೆ. ಅದಕ್ಕೆ ತನ್ನ ಅಸ್ತಿತ್ವದ ಅರಿವಾಗುವುದೇ ಅಪರೂಪಕ್ಕೆ.

ಹೆಚ್ಚು ಸ್ಪಷ್ಟವಾದ ಸಂಗತಿಯೆಂದರೆ ಚುನಾವಣಾ ಆಯೋಗದ ಶಿಕ್ಷೆಯ ವಿಧಾನ. 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ, “ಬಜರಂಗ್ ಬಲಿ ವರ್ಸಸ್ ಹಜರತ್ ಅಲಿ” ಎಂಬ ಘೋಷಣೆಯನ್ನು ಕೂಗಿದ್ದಕ್ಕಾಗಿ ಚುನಾವಣಾ ಆಯೋಗವು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ದಂಡ ವಿಧಿಸಿತ್ತು. ನಂತರ, ಚುನಾವಣಾ ಆಯೋಗವು ನಿಷೇಧದ ಅವಧಿಯಲ್ಲಿ ಹನುಮಾನ್ ಚಾಲೀಸಾ ಪಠಿಸುತ್ತಿರುವ ಆದಿತ್ಯನಾಥ್ ಅವರ ಚಿತ್ರವನ್ನು ಟಿವಿ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುವುದನ್ನು ಮೂಕ ಪ್ರೇಕ್ಷಕನಂತೆ ನೋಡಿತು. ಆಗ ಸಿಎನ್ಎನ್-ನ್ಯೂಸ್ 18 ಜೊತೆ ಮಾತನಾಡಿದ ಯೋಗಿ, “ಬಜರಂಗ ಬಲಿಯ ಹೆಸರನ್ನು ಉಲ್ಲೇಖಿಸಿದ್ದಕ್ಕಾಗಿ ನನಗೆ ಶಿಕ್ಷೆ ವಿಧಿಸಲಾಯಿತು. ನನ್ನ ನಿಷೇಧದ ಅವಧಿಯನ್ನು ನಾನು ಅದನ್ನೇ ಪಠಿಸುತ್ತಾ ಕಳೆದೆ “!! ಎಂದು ಹೇಳಿಕೆ ನೀಡಿದರು.

ದೇಶದ ವಿರೋಧ ಪಕ್ಷದ ನಾಯಕರು ಚುನಾವಣಾ ಆಯೋಗ ತಮ್ಮ ವಿಷಯದಲ್ಲಿ ಆಕ್ರಮಣಕಾರಿಯಾಗಿದ್ದು, ನರೇಂದ್ರ ಮೋದಿ ಮತ್ತವರ NDA ಒಕ್ಕೂಟದ ಕುರಿತು ಮೃದು ಧೋರಣೆ ತೋರುತ್ತಿದೆ ಎಂದು ಆರೋಪಿಸುತ್ತಿದ್ದಾರೆ.

ಚುನಾವಣಾ ಆಯೋಗ ಕೇವಲ ದ್ವೇಷಕಾರಿ ಅಭಿಯಾನದ ವಿಷಯದಲ್ಲಷ್ಟೇ ಮೂಕ ಪ್ರೇಕ್ಷಕನಾಗಿ ಕುಳಿತಿಲ್ಲ. ಇಂದಿನ ಸರ್ಕಾರ ತನಗೆ ಅಪಾಯಕಾರಿ ಎನ್ನಿಸಿದ ನಾಯಕರ ಮೇಲೆಲ್ಲ ಮೇಲೆ ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ದಾಳಿಗಳನ್ನು ನಡೆಸುತ್ತಿದೆ. ಆಯೋಗ ಇದನ್ನೂ ಸುಮ್ಮನೆ ಕುಳಿತು ನೋಡುತ್ತಿದೆ.

2014ರಲ್ಲಿ ಯುಪಿಎ ಆಡಳಿತದ ಕೇಂದ್ರ ಸರ್ಕಾರವು ನೈಸರ್ಗಿಕ ಅನಿಲ ಬೆಲೆಗೆ ಸಂಬಂಧಿಸಿದ ಸರ್ಕಾರದ ಕೆಲವು ನೀತಿ ನಿರ್ಧಾರಗಳನ್ನು ಮತ್ತು ಪಶ್ಚಿಮ ಘಟ್ಟಗಳಲ್ಲಿನ ಪರಿಸರ ಸೂಕ್ಷ್ಮ ಪ್ರದೇಶಗಳಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲು ಮುಂದಾದಾಗ ಚುನಾವಣಾ ಆಯೋಗವು ಅದನ್ನು ತಡೆದಿತ್ತು. ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆಯನ್ನು (ಎಂಸಿಸಿ) ಜಾರಿಗೊಳಿಸಿತ್ತು. ಆದರೆ ಈಗ ಅದು ಸರ್ಕಾರದ ನಿರ್ಧಾರಗಳನ್ನು ಸುಮ್ಮನೆ ಕುಳಿತು ನೋಡುತ್ತಿದೆ. ಮಾದರಿ ನೀತಿ ಸಂಹಿತೆಯೆನ್ನುವುದು ಕೇವಲ ವಿರೋಧ ಪಕ್ಷಗಳನ್ನು ಮಣಿಸಲು ಅವುಗಳನ್ನು ಸುಮ್ಮನಾಗಿಸಲು ಬಳಸಲಾಗುತ್ತಿದೆ.

ಚುನಾವಣೆಯ ಹೊಸ್ತಿಲಿನಲ್ಲಿ ಹೇಮಂತ್‌ ಸೊರೇನ್‌, ಕೇಜ್ರಿವಾಲ್‌ ರೀತಿಯ ನಾಯಕರನ್ನು ಚುನಾವಣೆ ನಡೆಸುವುದಾದರೆ ಅಂತಹ ದೇಶಕ್ಕೆ ಚುನಾವಣೆ ಎನ್ನುವ ಕೋಟ್ಯಂತರ ಹಣ ವ್ಯಯ ಮಾಡುವ ನಾಟಕವಾದರೂ ಯಾಕೆ ಬೇಕು? ಆಯೋಗ ಬಿಜೆಪಿಯನ್ನೇ ಸರ್ಕಾರ ರಚಿಸುವ ಪಕ್ಷ ಎಂದು ಘೋಷಿಸಿಬಿಡಲಿ ಅಲ್ಲವೆ?

ಇಂತಹ ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುತ್ತದೆಯೇ ಎಂದು ಈಗ ವಿರೋಧ ಪಕ್ಷಗಳು ಪ್ರಶ್ನಿಸುತ್ತಿವೆ.

ಚುನಾವಣಾ ಆಯೋಗಕ್ಕೆ ಮುಖ್ಯ ಅಧಿಕಾರಿಗಳನ್ನು ಆರಿಸುವ ಸಮಿತಿಯಿಂದ ಮುಖ್ಯ ನ್ಯಾಯಾಧೀಶರನ್ನು ಹೊರಗಿಟ್ಟು ಸರ್ಕಾರ ತನ್ನ ತುತ್ತೂರಿಗಳನ್ನು ಆ ಸ್ಥಾನಗಳಲ್ಲಿ ತಂದು ಕೂರಿಸಲು ದಾರಿ ಮಾಡಿಕೊಂಡಿದೆ. ಇಂದು ಬಿಜೆಪಿ ಅಧಿಕಾರದಲ್ಲಿದೆ ಇದು ಅದಕ್ಕೆ ನಾಳೆ ಅನುಕೂಲವಾಗಬಹುದು. ಆದರೆ ನಾಳೆ ಅದು ಅಧಿಕಾರದಿಂದ ಇಳಿದು ವಿರೋಧ ಪಕ್ಷದ ಸ್ಥಾನಕ್ಕೂ ಹೋಗಬಹುದಲ್ಲವೆ? ಆಗ ಅಲ್ಲಿ ಸರ್ಕಾರ ನಡೆಸುವ ಪಕ್ಷ ತನಗೆ ಬೇಕಾದವರನ್ನು ಆಯೋಗಕ್ಕೆ ನೇಮಿಸಿಕೊಂಡರೆ ಬಿಜೆಪಿ ಏನು ಮಾಡುತ್ತದೆ?

ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯೋಗ ಇನ್ನಾದರೂ ಕಣ್ಣು ತೆರೆಯಲಿ. ನಿಷ್ಪಕ್ಷಪಾತಿ ಚುನಾವಣೆಯನ್ನು ನಡೆಸಲಿ ಎಂದು ಹಾರೈಸೋಣ.

ಹಯವದನ ರಾವ್‌, ಕಾಸರಗೋಡು

Related Articles

ಇತ್ತೀಚಿನ ಸುದ್ದಿಗಳು