Home ಅಂಕಣ ಕನ್ನಡ ಸಾಹಿತ್ಯದ ಅಪೂರ್ವ ‘ತೇಜಸ್ವಿ’ ಇಂದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಜನ್ಮದಿನ

ಕನ್ನಡ ಸಾಹಿತ್ಯದ ಅಪೂರ್ವ ‘ತೇಜಸ್ವಿ’ ಇಂದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಜನ್ಮದಿನ

0

“..ಕನ್ನಡ ನವ್ಯ ಸಾಹಿತ್ಯದಲ್ಲಿ ಅಚ್ಚಳಿಯದೆ ಉಳಿಯುವಂತಹ ಅದ್ಭುತ ಕೃತಿಗಳನ್ನು ನೀಡಿದ ತೇಜಸ್ವಿ, ರಾಷ್ಟ್ರಕವಿ ಕುವೆಂಪು ಅವರ ಪುತ್ರರಾಗಿದ್ದರೂ ತಂದೆಯ ಹೆಸರಿನ ನೆರಳಿನಲ್ಲಿ ಬದುಕದೆ, ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ ಮತ್ತು ಬರವಣಿಗೆಯ ಮೂಲಕ ಕನ್ನಡ ಸಾಹಿತ್ಯದಲ್ಲಿ ಅಪೂರ್ವ ಸ್ಥಾನ ಗಳಿಸಿದರು..” ಯುವ ಬರಹಗಾರ ಜೈನುಲ್ ಅಕ್ಬರ್ ಅವರ ಬರಹದಲ್ಲಿ

“ನಾನು ವಿಜ್ಞಾನಿ ಅಲ್ಲ, ವಿಜ್ಞಾನಿಯೂ ಅಲ್ಲ. ನಾನು ಉನ್ನತ ಶಿಕ್ಷಣವನ್ನು ಪಡೆದದ್ದು ಸಾಹಿತ್ಯದಲ್ಲಿ. ಆದರೆ ಹಳ್ಳಿಗೆ ಬಂದ ಮೇಲೆ ಸುತ್ತಮುತ್ತಲ ವಿದ್ಯಮಾನಗಳನ್ನು ನೋಡುತ್ತಾ, ಅವುಗಳ ಬಗ್ಗೆ ತಿಳಿದುಕೊಳ್ಳುತ್ತಾ ಬಂದೆ. ನಾನು ಕಂಡ ಪಶು, ಪಕ್ಷಿ, ಕ್ರಿಮಿ-ಕೀಟಗಳ ವ್ಯಕ್ತಿತ್ವವನ್ನು ತಿಳಿದುಕೊಳ್ಳಲಷ್ಟೇ ಅವುಗಳ ಬಗ್ಗೆ ಅಧ್ಯಯನ ಮಾಡಿದೆ. ನಾನು ಜ್ಞಾನೋಪಾಸಕನಾಗಲೀ, ವಿದ್ವಾಂಸನಾಗಲೀ ಅಲ್ಲ. ಸಾಹಿತ್ಯವೇ ನನ್ನ ಸ್ವಧರ್ಮ. ಹಾಗಾಗಿ ಏನೇ ಬರೆದರೂ ಅದಕ್ಕೆ ಸಾಹಿತ್ಯದ ಪರಿವೇಷ, ಕಥೆ-ಕಾದಂಬರಿಗಳ ಛಾಯೆ ಇರುತ್ತದೆ.”

ಹೀಗೆ ತಮ್ಮ ಸಾಹಿತ್ಯದ ಧೋರಣೆಯನ್ನು ಸರಳವಾಗಿ ಹೇಳಿಕೊಳ್ಳುತ್ತಿದ್ದವರು ಕೆ.ಪಿ. ಪೂರ್ಣಚಂದ್ರ ತೇಜಸ್ವಿ. ಕನ್ನಡ ನವ್ಯ ಸಾಹಿತ್ಯದಲ್ಲಿ ಅಚ್ಚಳಿಯದೆ ಉಳಿಯುವಂತಹ ಅದ್ಭುತ ಕೃತಿಗಳನ್ನು ನೀಡಿದ ತೇಜಸ್ವಿ, ರಾಷ್ಟ್ರಕವಿ ಕುವೆಂಪು ಅವರ ಪುತ್ರರಾಗಿದ್ದರೂ ತಂದೆಯ ಹೆಸರಿನ ನೆರಳಿನಲ್ಲಿ ಬದುಕದೆ, ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ ಮತ್ತು ಬರವಣಿಗೆಯ ಮೂಲಕ ಕನ್ನಡ ಸಾಹಿತ್ಯದಲ್ಲಿ ಅಪೂರ್ವ ಸ್ಥಾನ ಗಳಿಸಿದರು.

ಲೇಖಕರಾಗಿ, ಕಾದಂಬರಿಕಾರರಾಗಿ ಮಾತ್ರವಲ್ಲದೆ ಛಾಯಾಗ್ರಾಹಕ, ಪಕ್ಷಿಶಾಸ್ತ್ರಜ್ಞ, ಚಿತ್ರಕಾರ ಹಾಗೂ ಪರಿಸರವಾದಿಯಾಗಿ ತೇಜಸ್ವಿ ಬಹುಮುಖ ಪ್ರತಿಭೆಯನ್ನು ಮೆರೆದವರು. ಲೋಹಿಯಾ ಅವರ ಚಿಂತನೆ ಹಾಗೂ ಶಿವರಾಮ ಕಾರಂತರ ಶೋಧನಾ ಮನೋಭಾವದಿಂದ ಪ್ರಭಾವಿತರಾಗಿದ್ದ ಅವರು, ಮೂಡಿಗೆರೆಯ ಕಾಡಿನ ನಡುವೆ ಯಾವುದೇ ಪಂಗಡದ ಚೌಕಟ್ಟಿಗೆ ಸಿಲುಕದೆ ಸ್ವತಂತ್ರವಾಗಿ ಬದುಕಿದರು.

ತೇಜಸ್ವಿ ಸಾಹಿತ್ಯವನ್ನು ಯಾರನ್ನಾದರೂ ಮೆಚ್ಚಿಸಲು ಅಥವಾ ಟೀಕಿಸಲು ಬಳಸಲಿಲ್ಲ. ತಮ್ಮ ಸುತ್ತಮುತ್ತಲಿನ ಕೌತುಕಮಯ ಸಂಗತಿಗಳನ್ನು ಆಳವಾಗಿ ಗಮನಿಸಿ, ಅಧ್ಯಯನ ಮಾಡಿ, ಅವುಗಳನ್ನು ಸಾಮಾನ್ಯ ಓದುಗರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ಪರಿಚಯಿಸುವುದೇ ಅವರ ಬರವಣಿಗೆಯ ವೈಶಿಷ್ಟ್ಯವಾಗಿತ್ತು.

ಒಂದು ಸಣ್ಣ ಘಟನೆ, ಒಂದು ಪಕ್ಷಿ, ಒಂದು ಕೀಟ ಅಥವಾ ಕಾಡಿನ ಯಾವುದೋ ಅಪರೂಪದ ಸಂಗತಿಯ ಹಿಂದೆ ಇರುವ ವಿಜ್ಞಾನವನ್ನು ಹುಡುಕುತ್ತಾ ಓದುಗರನ್ನು ದೂರದ ಜಗತ್ತಿನವರೆಗೂ ಕರೆದೊಯ್ಯುವ ಸಾಮರ್ಥ್ಯ ತೇಜಸ್ವಿ ಅವರ ಬರಹಕ್ಕಿತ್ತು. ಅವರ ಬರವಣಿಗೆಯಲ್ಲಿ ಕುತೂಹಲ, ವೈಜ್ಞಾನಿಕ ದೃಷ್ಟಿಕೋನ, ಹಾಸ್ಯ, ಸರಳತೆ ಮತ್ತು ಜೀವನಾನುಭವ ಒಂದಾಗಿ ಬೆರೆತಿದ್ದವು.

ತೇಜಸ್ವಿ ಚಿತ್ರಕಲೆಯನ್ನೂ ಬಹಳವಾಗಿ ಪ್ರೀತಿಸುತ್ತಿದ್ದರು. ಮೈಸೂರಿನ ಖ್ಯಾತ ಚಿತ್ರಕಾರರಾದ ಎಸ್.ಎನ್. ಸ್ವಾಮಿ, ತಿಪ್ಪೇಸ್ವಾಮಿ ಮುಂತಾದವರಿಂದ ಚಿತ್ರಕಲೆಯ ತರಬೇತಿಯನ್ನೂ ಪಡೆದಿದ್ದರು. ಆದರೆ ತಾವು ಕಂಡದ್ದು ಮತ್ತು ಅನುಭವಿಸಿದ್ದನ್ನು ಇತರರೊಂದಿಗೆ ಹಂಚಿಕೊಳ್ಳಬೇಕೆಂಬ ಉದ್ದೇಶದಿಂದ ಕ್ರಮೇಣ ಬರವಣಿಗೆಯತ್ತ ಹೆಚ್ಚು ಒಲವು ಬೆಳೆಸಿಕೊಂಡರು.

ಅವರ ವಿಶಿಷ್ಟ ಬರವಣಿಗೆ ಶೈಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಛಾಪು ಮೂಡಿಸಿತು. ‘ಕರ್ವಾಲೋ’, ‘ಚಿದಂಬರ ರಹಸ್ಯ’, ‘ಅಬಚೂರಿನ ಪೋಸ್ಟಾಫೀಸು’, ‘ಕಿರಗೂರಿನ ಗಯ್ಯಾಳಿಗಳು’ ಸೇರಿದಂತೆ ಅನೇಕ ಕೃತಿಗಳು ಇಂದಿಗೂ ಓದುಗರ ಮನಸ್ಸಿನಲ್ಲಿ ಜೀವಂತವಾಗಿವೆ.

‘ಕರ್ವಾಲೋ’ ಕಾದಂಬರಿಯಲ್ಲಿ ಹಾರುವ ಹಳ್ಳಿಯ ಜಾಡು ಹುಡುಕುವ ಪ್ರಯತ್ನದ ಮೂಲಕ ತೇಜಸ್ವಿ ಪಶ್ಚಿಮ ಘಟ್ಟದ ಪ್ರಕೃತಿ, ಅಲ್ಲಿನ ಜೀವಜಗತ್ತು ಮತ್ತು ಮನುಷ್ಯನ ಕುತೂಹಲವನ್ನು ಅದ್ಭುತವಾಗಿ ಕಟ್ಟಿಕೊಟ್ಟರು. ಈ ಕೃತಿ ಹಲವು ಭಾಷೆಗಳಿಗೆ ಅನುವಾದಗೊಂಡು ಅಪಾರ ಜನಪ್ರಿಯತೆ ಗಳಿಸಿತು.

ಅವರ ‘ಅಲೆಮಾರಿ ಅಂಡಮಾನ್’ ಪ್ರವಾಸಕಥನವೂ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ತಮ್ಮ ಪ್ರವಾಸಾನುಭವವನ್ನು ಕೇವಲ ಸ್ಥಳವರ್ಣನೆಯಾಗಿ ಉಳಿಸದೆ, ಅಲ್ಲಿನ ಪರಿಸರ, ಜನಜೀವನ ಮತ್ತು ಪ್ರಕೃತಿಯೊಂದಿಗೆ ಜೋಡಿಸಿ ಕಟ್ಟಿಕೊಟ್ಟರು.

ಅದೇ ರೀತಿ ‘ಮಿಲೇನಿಯಂ ಸರಣಿ’ಯಂತಹ ಕೃತಿಗಳ ಮೂಲಕ ವಿಶ್ವದ ಅನೇಕ ಕೌತುಕಮಯ ಸಂಗತಿಗಳನ್ನು ಕನ್ನಡಿಗರಿಗೆ ಸರಳವಾಗಿ ಪರಿಚಯಿಸಿದರು. ವಿಜ್ಞಾನ ಮತ್ತು ಪ್ರಕೃತಿಯಂತಹ ವಿಷಯಗಳು ಸಾಮಾನ್ಯ ಓದುಗರಿಗೆ ಕಠಿಣವೆನಿಸದಂತೆ ಸರಳ ಭಾಷೆಯಲ್ಲಿ ವಿವರಿಸುವುದು ಅವರ ದೊಡ್ಡ ಶಕ್ತಿ.

ತೇಜಸ್ವಿಯವರ ಬರಹದಲ್ಲಿ ಉತ್ಪ್ರೇಕ್ಷೆಯಿಲ್ಲದ ಪ್ರಶಂಸೆ, ದ್ವೇಷವಿಲ್ಲದ ವಿಮರ್ಶೆ ಮತ್ತು ದರ್ಪವಿಲ್ಲದ ನಿಷ್ಠುರತೆ ಕಾಣಿಸುತ್ತದೆ. ಮನುಷ್ಯ ಸಂಬಂಧಗಳು, ಜಾತಿ ವ್ಯವಸ್ಥೆ, ಮತೀಯವಾದ, ಸಾಮಾಜಿಕ ಅಸಮಾನತೆ ಸೇರಿದಂತೆ ತಮ್ಮ ಸುತ್ತಮುತ್ತಲಿನ ಅನೇಕ ಸಂಗತಿಗಳನ್ನು ಅವರು ಸೂಕ್ಷ್ಮವಾಗಿ ಗಮನಿಸಿ ತಮ್ಮ ಕೃತಿಗಳಲ್ಲಿ ಪ್ರತಿಬಿಂಬಿಸಿದರು.

ನಗರಗಳತ್ತ ಮುಖ ಮಾಡಿದ ಅನೇಕ ಸಾಹಿತಿಗಳ ನಡುವೆ ತೇಜಸ್ವಿ ಮಾತ್ರ ಮೂಡಿಗೆರೆಯ ಕಾಡಿನ ನಡುವೆ ಬದುಕುವುದನ್ನೇ ಆಯ್ಕೆ ಮಾಡಿಕೊಂಡರು. ಕ್ಯಾಮೆರಾ ಹಿಡಿದು ಪಶ್ಚಿಮ ಘಟ್ಟದ ದಟ್ಟ ಕಾನನದೊಳಗೆ ಹೊರಟಾಗಲೋ, ಪ್ರಕೃತಿಯ ಜಾಡು ಹುಡುಕುತ್ತಾ ಕಾಡಿನೊಳಗೆ ಅಲೆದಾಗಲೋ ಅವರು ಒಬ್ಬ ಗಾಢ ತಪಸ್ವಿಯಂತೆ ಕಾಣುತ್ತಿದ್ದರು. ಅವರು ತೆಗೆದ ಜೀವಜಂತುಗಳ ಛಾಯಾಚಿತ್ರಗಳು ಅವರ ಏಕಾಗ್ರತೆ ಮತ್ತು ಪ್ರಕೃತಿಯ ಮೇಲಿನ ಪ್ರೀತಿಗೆ ಸಾಕ್ಷಿಯಾಗಿವೆ.

ಪರಿಸರ ಸಂರಕ್ಷಣೆ, ರೈತರ ಸಮಸ್ಯೆ ಹಾಗೂ ಸಾಮಾಜಿಕ ಅನ್ಯಾಯದಂತಹ ವಿಚಾರಗಳಲ್ಲಿ ತೇಜಸ್ವಿ ಕೇವಲ ಬರಹಗಾರನಾಗಿ ಉಳಿಯಲಿಲ್ಲ. ಅಗತ್ಯವಿದ್ದಾಗ ಜನರ ಪರವಾಗಿ ಧ್ವನಿ ಎತ್ತಿ, ಹೋರಾಟದ ಮುಂಚೂಣಿಯಲ್ಲೂ ನಿಂತರು.

“ಸಾಹಿತ್ಯವೆಂದರೆ ಕಬ್ಬಿಣದ ಕಡಲೆಯಾಗಬಾರದು; ಅದು ಸಾಮಾನ್ಯ ಜನರಿಗೂ ಸರಳವಾಗಿ ಅರ್ಥವಾಗುವಂತಿರಬೇಕು” ಎಂಬುದು ಅವರ ಸಾಹಿತ್ಯದ ಮೂಲ ಆಶಯವಾಗಿತ್ತು. ಅದಕ್ಕಾಗಿಯೇ ಅವರ ಬರಹಗಳು ಪಂಡಿತರಿಗಷ್ಟೇ ಸೀಮಿತವಾಗದೆ ಸಾಮಾನ್ಯ ಓದುಗರನ್ನೂ ತನ್ನತ್ತ ಸೆಳೆದವು.

ಅವರ ಬರಹದ ಶಕ್ತಿಗೆ ಒಂದು ಉದಾಹರಣೆಯಾಗಿ, ಜ್ಞಾನಪೀಠ ಪುರಸ್ಕೃತ ಶಿವರಾಮ ಕಾರಂತರು ತೇಜಸ್ವಿಯವರ ‘ಪರಿಸರದ ಕಥೆ’ ಪುಸ್ತಕವನ್ನು ಬಯಸಿ ಹಣ ಕಳುಹಿಸಿ ಪತ್ರ ಬರೆದ ಘಟನೆ ಉಲ್ಲೇಖಿಸಲಾಗುತ್ತದೆ. ಇದು ತೇಜಸ್ವಿಯವರ ಬರಹದ ಪ್ರಭಾವ ಮತ್ತು ಸಾಮರ್ಥ್ಯವನ್ನು ತೋರಿಸುತ್ತದೆ.

ಹೆಸರು, ಖ್ಯಾತಿ, ಪ್ರಶಸ್ತಿಗಳು ಬಂದರೂ ತೇಜಸ್ವಿ ಮಾತ್ರ ತಮ್ಮ ಸರಳತೆಯನ್ನು ಕಳೆದುಕೊಳ್ಳಲಿಲ್ಲ. ಪ್ರಕೃತಿ, ಮನುಷ್ಯ ಮತ್ತು ಸಮಾಜವನ್ನು ಒಂದೇ ಕುತೂಹಲದ ದೃಷ್ಟಿಯಿಂದ ನೋಡುವ ಅವರ ವಿಶಿಷ್ಟ ಮನೋಭಾವವೇ ಅವರನ್ನು ಕನ್ನಡದ ಇತರ ಸಾಹಿತಿಗಳಿಗಿಂತ ಭಿನ್ನರನ್ನಾಗಿಸಿತು.

ತೇಜಸ್ವಿ ಇಂದು ನಮ್ಮೊಂದಿಗಿಲ್ಲ. ಆದರೆ ಅವರು ಬರೆದಿರುವ ಅಸಂಖ್ಯಾತ ಅದ್ಭುತ ಕೃತಿಗಳು, ಅವರು ದಾಖಲಿಸಿದ ಪ್ರಕೃತಿ, ಅವರು ಮೂಡಿಸಿದ ಪ್ರಶ್ನೆಗಳು ಮತ್ತು ಅವರು ತೋರಿಸಿದ ವೈಜ್ಞಾನಿಕ ಮನೋಭಾವದ ಮೂಲಕ ಅವರು ಸದಾ ನಮ್ಮ ನಡುವೆ ಜೀವಂತವಾಗಿದ್ದಾರೆ.

ಅವರ ಸಾಹಿತ್ಯವನ್ನು ಓದುವುದು ಎಂದರೆ ಕೇವಲ ಕಥೆ ಅಥವಾ ಕಾದಂಬರಿಯನ್ನು ಓದುವುದಲ್ಲ; ಪ್ರಕೃತಿಯನ್ನು ಹೊಸ ಕಣ್ಣಿನಿಂದ ನೋಡುವುದು, ಪ್ರಶ್ನಿಸುವುದನ್ನು ಕಲಿಯುವುದು ಮತ್ತು ಸುತ್ತಮುತ್ತಲಿನ ಜಗತ್ತಿನ ಬಗ್ಗೆ ಕುತೂಹಲ ಬೆಳೆಸಿಕೊಳ್ಳುವುದು.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕನ್ನಡ ಸಾಹಿತ್ಯದ ‘ಪೂರ್ಣಚಂದ್ರ’ನಾಗಿ ಸದಾ ಬೆಳಗುವ ಅಪೂರ್ವ ಪ್ರತಿಭೆ.

You cannot copy content of this page

Exit mobile version