Thursday, August 15, 2024

ಸತ್ಯ | ನ್ಯಾಯ |ಧರ್ಮ

ಹಿಂದುತ್ವ ರಾಜಕಾರಣದ ಕಥೆ – 27 : ರತ್ನಗಿರಿಯ ಹಿಂದೂಜನಾಂಗೀಯ ಪ್ರಯೋಗಗಳು

ಆದರೆ, ಸಾವರ್ಕರ್‌ ಅವರ ಹಿಂದುತ್ವ ರಾಜಕಾರಣದ ಗುರಿ ಮನುಷ್ಯರನ್ನು ಹಿಂದೂಗಳಾಗಿಸಬೇಕು ಎಂಬುದಾಗಿತ್ತು. ಸ್ವಲ್ಪ ಸಮಯದ ಹೊತ್ತಿಗೆ ದಲಿತನೊಬ್ಬ ಜನಿವಾರ ಧರಿಸುವುದರಿಂದ ಬ್ರಾಹ್ಮಣ ರಾಜಕಾರಣಕ್ಕೆ ಬೇಕಾದ ಅಂಗೀಕಾರ ದಲಿತರ ನಡುವಿನಿಂದ ಪಡೆಯಬಹುದು ಎಂಬುದು ಸಾವರ್ಕರ್‌ ಲೆಕ್ಕವಾಗಿತ್ತು. ಅದು ಒಂದು ಹಂತದವರೆಗೆ ನಿಜವೂ ಆಯಿತು.

ರಾಜಕೀಯ ಬ್ರಾಹ್ಮಣಿಸಂ ಅದರ ರಾಜಕೀಯ ಪ್ರದರ್ಶನವನ್ನು ಹಲವು ರೀತಿಯಲ್ಲಿ ತೋರ್ಪಡಿಸುತ್ತಿರುವ ಹೊತ್ತಿನಲ್ಲಿಯೇ, ಸಾವರ್ಕರ್‌ ರತ್ನಗಿರಿ ಜಿಲ್ಲೆಯಲ್ಲಿ ತನಗೆ ಸ್ವಾತಂತ್ರ್ಯವಿದ್ದ ಪ್ರದೇಶದಲ್ಲಿ ತನ್ನದೇ ಶೈಲಿಯ ವಿಶೇಷ ರಾಜಕೀಯ ಪ್ರಯೋಗದಲ್ಲಿ ತೊಡಗಿಕೊಂಡಿದ್ದರು. ಕೇಲ್ಕರ್‌ ಹೇಳಿದ ಹಾಗೆ ಕಾಲಾನುಕ್ರಮದಲ್ಲಿ ವರ್ಣವ್ಯಸ್ಥೆಯನ್ನು ತೆಳುವಾಗಿಸುವುದೋ ದಪ್ಪವಾಗಿಸುವುದೋ ಮಾಡಬೇಕು. ಹಿಂದೂಧರ್ಮವೆಂಬ ಬಹುತ್ವವನ್ನು ಒಂದು ಏಕಶಿಲಾ ಶಿಲ್ಪವಾಗಿಸಬೇಕು.
ಈ ನಿಟ್ಟಿನಲ್ಲಿ ಸಾವರ್ಕರ್‌ ಮಾಡುವ ಮೊದಲ ಕೆಲಸ ಹಿಂದೂಧರ್ಮದ ಒಳಗಿನ ಏಳು ನಿಷೇಧಗಳ ಕುರಿತು ಪುನರಾವಲೋಕನ ನಡೆಸುವುದು. ವೇದೋಕ್ತಬಂಧಿ, ವ್ಯವಸಾಯಬಂಧಿ, ಸ್ಪರ್ಶಬಂಧಿ, ಸಮುದ್ರಬಂಧಿ, ಶುದ್ಧಿಬಂಧಿ, ರೊಟ್ಟಿಬಂಧಿ ಮತ್ತು ಬೇಟಿಬಂಧಿ ಇವೇ ಆ ಏಳು ನಿಷೇಧಗಳು. ವೈದಿಕ ಸಾಹಿತ್ಯವನ್ನು ಬ್ರಾಹ್ಮಣೇತರರಿಗೆ ನಿಷೇಧಿಸುವುದು ವೇದೋಕ್ತಬಂಧಿ. ಕುಲಕಸುಬಲ್ಲದೆ ಬೇರೆ ಉದ್ಯೋಗ ಮಾಡುವುದನ್ನು ನಿಷೇಧಿಸುವುದು ವ್ಯವಸಾಯಬಂಧಿ. ಅಸ್ಪೃಶ್ಯರ ಕುರಿತ ಬ್ರಾಹ್ಮಣ ನಿಯಮಗಳನ್ನು ಸ್ಪರ್ಶಬಂಧಿ ಒಳಗೊಳ್ಳುತ್ತದೆ. ಕಡಲು ದಾಟಿದರೆ ಉಂಟಾಗುವ ಜಾತಿಭ್ರಷ್ಟತೆಯೇ ಸಮುದ್ರಬಂಧಿ. ಹಿಂದೂಧರ್ಮಕ್ಕೆ ಯಾರಿಗೂ ಮತಾಂತರಗೊಳ್ಳಲಾಗುವುದಿಲ್ಲ ಎಂಬುದು ಶುದ್ಧಿಬಂಧಿ. ಜಾತಿಬೇಧವಿಲ್ಲದೆ ಸಹಪಂಕ್ತಿ ಊಟ ಮಾಡುವುದನ್ನು ನಿಷೇಧಿಸುವುದೇ ರೊಟ್ಟಿಬಂಧಿ. ಮಿಶ್ರವಿವಾಹವನ್ನು ತಡೆಯುವುದು ಬೇಟಿಬಂಧಿ. ಈ ಏಳು ನಿಷೇಧಗಳಿಗೂ ಕಾಲಕ್ಕೆ ತಕ್ಕ ಸುಧಾರಣೆಗಳು ಬೇಕು ಎಂಬ ನಿಲುವನ್ನು ಸಾವರ್ಕರ್‌ ತೆಗೆದುಕೊಳ್ಳುತ್ತಾರೆ. ಒಂದೇಟಿಗೆ ಸಾವರ್ಕರನ್ನು ಒಬ್ಬ ಹಿಂದೂಧರ್ಮದ ಸುಧಾರಣಾವಾದಿಯಾಗಿ ಗುರುತಿಸಲು ಬೇಕಾದಷ್ಟು ಸಂಗತಿಗಳು ಇದರಲ್ಲಿ ಇವೆ ಎಂಬುದೂ ನಿಜ.
ಈ ನಿಷೇಧಗಳು ಇರುವ ತನಕ ಹಿಂದೂ ಜನಾಂಗೀಯ ರಾಜಕಾರಣ ಬೇರೂರಲಾರದು ಎಂದು ಸಾವರ್ಕರ್‌ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಎರಡು ಸಂಗತಿಗಳನ್ನು ಇಲ್ಲಿ ನಾವು ಈಗಲೇ ನಿರೂಪಿಸಬೇಕಾಗುತ್ತದೆ. ಮೊದಲನೆಯದು, ಹದಿನೆಂಟನೇ ಶತಮಾನದಿಂದ ರಾಜ್ಯಾಡಳಿತದಲ್ಲಿ ತೊಡಗಿದ್ದ ಚಿತ್ಪಾವನ ಬ್ರಾಹ್ಮಣರು ಇವುಗಳಲ್ಲಿ ಹಲವು ಬಂಧಿಗಳನ್ನು ಅದಾಗಲೇ ಲಂಘಿಸಿದ್ದರು. ಉದಾಹರಣೆಗೆ, ವ್ಯವಸಾಯಬಂಧಿ. ತಮ್ಮ ಕುಲಕಸುಬಾದ ಪೌರೋಹಿತ್ಯವನ್ನು ಅವರು ಮುಂದುವರಿಸಲಿಲ್ಲ. ರಾಜ್ಯಾಡಳಿತವನ್ನು ಕೈಗೆತ್ತಿಕೊಂಡ ಮೇಲೆ ಅವರು ಕ್ಷತ್ರಿಯ ವೃತ್ತಿಯನ್ನೂ, ವೈಶ್ಯ ವೃತ್ತಿಯನ್ನೂ, ಶೂದ್ರ ವೃತ್ತಿಯನ್ನೂ ಮಾಡಿಕೊಂಡಿದ್ದರು. ರಾಜ್ಯಾಡಳಿತದ ಎಲ್ಲ ರಂಗಗಳಲ್ಲೂ ಅವರಿದ್ದರು. ಯುದ್ಧ, ಹಣ, ಅಧಿಕಾರಗಳು ಸಹಜವಾಗಿಯೇ ಹೊಸ ಬಂಧಿಗಳಿಂದ ನಿಯಂತ್ರಿಸಲ್ಪಡುವ ಹೊಸ ಲೋಕಕ್ಕೆ ಅವರನ್ನು ತಂದು ನಿಲ್ಲಿಸಿದ್ದವು. ಸಾಮ್ರಾಜ್ಯವೆಂಬುವುದು ವಿಕಾಸಗೊಳ್ಳುವ ಮತ್ತು ಸಂಕುಚಿತಗೊಳ್ಳುವ ಒಂದು ಸಂಗತಿಯೆಂದು ಅರ್ಥಮಾಡಿಕೊಂಡ ಜನಗಳಿಗೆ ಅದೆಲ್ಲಿಯ ಸಮುದ್ರಬಂಧಿ. ಪೇಶ್ವಾ ಸಾಮ್ರಾಜ್ಯಕ್ಕೆ ತಲೆನೋವಾಗಿದ್ದ ಕೋಲಿಗರು ಎಂಬ ಹಿಂದುಳಿದ ಜಾತಿಗೆ ಪದವಿ ಪುರಸ್ಕಾರ ನೀಡಿ ಅವರನ್ನು ಸಂಪ್ರೀತಿಗೊಳಿಸಿದ ಬ್ರಾಹ್ಮಣರಿಗೆ ಅದು ಯಾವ ಸ್ಪರ್ಶಬಂಧಿ? ಎರಡನೆಯದು, ಎಂದಿನಂತೆ ಸಾವರ್ಕರ್‌ ಮಾತನಾಡುತ್ತಿರುವುದು ಬ್ರಾಹ್ಮಣರೊಂದಿಗೆ. ಬ್ರಾಹ್ಮಣರಿಗಾಗಿ ಬ್ರಾಹ್ಮಣರಿಂದ ನಿರ್ಮಿಸಲಾದ ಬ್ರಾಹ್ಮಣರು ಮಾತ್ರವೇ ಉಪಯೋಗಿಸುವ ನಿಯಮಗಳಿಗೆ ಸುಧಾರಣೆಗಳನ್ನು ತರುವ ಕುರಿತು ಇಲ್ಲಿ ಸಾವರ್ಕರ್‌ ಯೋಚಿಸುತ್ತಿರುವುದು. ಅದು ಕೂಡ ಬ್ರಾಹ್ಮಣರ ಅಧಿಕಾರವನ್ನು ನೆಲೆನಿಲ್ಲಿಸಲೆಂದು ಮಾತ್ರ. ಅಲ್ಲಿ ಸವರ್ಣೇತರರು ಉಪಕರಣಗಳು ಮಾತ್ರ. ಇದೇ ಹೊತ್ತು ದಲಿತ, ಹಿಂದುಳಿದ ಸಮುದಾಯಗಳು ನಡೆಸುತ್ತಿರುವ ಜಾತಿವಿರೋಧಿ ಚಳುವಳಿಯ ಜೊತೆಗೆ ಕೈಜೋಡಿಸುವ ಕುರಿತು ಸಾವರ್ಕರ್‌ ಬಾಯಿ ತೆರೆಯುವುದೇ ಇಲ್ಲ. ಬ್ರಾಹ್ಮಣರನ್ನು ಮನುಷ್ಯರನ್ನಾಗಿಸಲು ಇಲ್ಲಿ ಸಾವರ್ಕರ್‌ ಪ್ರಯತ್ನಿಸುತ್ತಿಲ್ಲ.
ಈ ಬಂಧಿಗಳಲ್ಲೆಲ್ಲ ಜಾತಿ ಒಂದು ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿಯುವುದು ಬೇಟಿಬಂಧಿಯಲ್ಲಿ. ಮಿಶ್ರವಿವಾಹದಲ್ಲಿ ಮಾತ್ರವೇ ಜಾತಿಯು ನಿಜವಾದ ಸಮಸ್ಯೆಯಾಗಿ ಉಳಿಯುವುದು. ಸಹಪಂಕ್ತಿ ಭೋಜನ ಮತ್ತು ವೇದವನ್ನು ಅವರ್ಣರಿಗೂ ಕಲಿಸಬಹುದು ಎಂಬುದನ್ನೆಲ್ಲ ವಿಶಾಲಾರ್ಥದಲ್ಲಿ ಸುಧಾರಣೆಗಳೆಂದು ಒಪ್ಪಬಹುದಾದರೂ ಅವು ಯಾವುವು ಕೂಡ ಜಾತಿ ಎಂಬ ಕುರುಡು ಮತ್ತು ಕ್ರೂರವಾದ ವ್ಯವಸ್ಥೆಯನ್ನು ಚುಚ್ಚಿ ಪ್ರಶ್ನಿಸುವುದಿಲ್ಲ. ರತ್ನಗಿರಿ ಜಿಲ್ಲೆಯಲ್ಲಿ ಸಾವರ್ಕರ್‌ ನಡೆಸಿದ ಚಟುವಟಿಕೆಗಳಲ್ಲಿ, ಪ್ರತಿಲೋಮ ವಿವಾಹವೆಂದು ಅವರೇ ಕರೆಯುವ ಮಿಶ್ರವಿವಾಹಗಳನ್ನು ನಡೆಸಿದ ಕುರಿತು ಯಾವ ಮಾಹಿತಿಯೂ ಸಿಗುವುದಿಲ್ಲ. ಶುದ್ಧಿಬಂಧಿ ಎಂಬುದರಲ್ಲಿ ಸಾವರ್ಕರ್‌ ಹೆಚ್ಚು ಊರಿಕೊಂಡಿದ್ದರು. ಅಂದರೆ, ಜಾತಿಯೆಂಬ ಕ್ರೌರ್ಯವನ್ನು ಸಹಿಸಲಾಗದೆ ಉದುರಿ ಹೋಗುತ್ತಿರುವ ಹಿಂದೂಧರ್ಮವನ್ನು ಹಿಡಿದು ನಿಲ್ಲಿಸುವ ಪ್ರಯತ್ನಗಳಾಗಿದ್ದವು ಅವೆಲ್ಲ. ಅಂದರೆ, ಹಿಂದೂಧರ್ಮಕ್ಕೆ ಮತಾಂತರದ ಮೂಲಕ ಜನರನ್ನು ಸೇರಿಸುವುದು. ಅದನ್ನು ಕಾರ್ಯಗತಗೊಳಿಸಬೇಕೆಂದರೆ ಈ ಬಂಧಿಗಳನ್ನೆಲ್ಲ ಕಿತ್ತೆಸೆಯಲೇ ಬೇಕಾಗಿತ್ತು. ಯಾಕೆಂದರೆ ಜಾತಿ ಬದಲಾವಣೆ ಎಂಬುದು ಅಸಾಧ್ಯ ಸಂಗತಿಯಾಗಿತ್ತು.
ಹಿಂದೂಧರ್ಮದ ಸೆಮಿಟಿಕ್‌ ರೂಪಾಂತರವನ್ನು ಸಾವರ್ಕರ್‌ ಸಹಿತದ ನವ-ಸಂಪ್ರದಾಯವಾದಿ ಬ್ರಾಹ್ಮಣರು ನಡೆಸಲು ಹೊರಟಿದ್ದರು ಎಂದು ಹಲವು ಚಿಂತಕರು ವಾದಿಸುತ್ತಾರೆ. ಸೂಕ್ಷ್ಮವಾಗಿ ಗಮನಿಸಿದರೆ ಸೆಮೆಟಿಕ್‌ ಅಲ್ಲ, ಅದು ಜನಾಂಗೀಯ ರೂಪಾಂತರ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅದರ ಜೊತೆಗೆ, ಮುನ್ಜೇ ಕುರಿತು ನಾವು ಗಮನಿಸಿದಾಗ ಧರ್ಮದ ಸೈನಿಕ ರೂಪಾಂತರವೂ ಅದಾಗಿತ್ತು. ಜನಾಂಗೀಯ ಮತ್ತು ಸೈನಿಕ ರೂಪಾಂತರಕ್ಕೆ ಬೇಕಾದ ಪ್ರಾಥಮಿಕ ಚಟುವಟಿಕೆಗಳನ್ನು ಸಾವರ್ಕರ್‌ ರತ್ನಗಿರಿಯಲ್ಲಿ ನಡೆಸಿದ್ದರು.
ಈ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡು ರತ್ನಗಿರಿಯಲ್ಲಿ ೧೯೨೪ರ ಏಪ್ರಿಲ್‌ ೧೭ರಂದು ಪರಶುರಾಮ ಗ್ರಾಮದ ವಿಠಲ ಮಂದಿರದಲ್ಲಿ ಸಾವರ್ಕರ್‌ ತನ್ನ ಮೊದಲ ಸಾರ್ವಜನಿಕ ಹಾಜರಾತಿಯನ್ನು ದಾಖಲಿಸುತ್ತಾರೆ. ಚಿತ್ಪಾವನ ಇತಿಹಾಸ ಮತ್ತು ಅವರ ಬದುಕಿನಲ್ಲಿ ಒಂದು ವಿಶೇಷ ಸ್ಥಾನ ಈ ಮಂದಿರಕ್ಕಿದೆ. ಪೇಶ್ವೆಗಳಲ್ಲಿ ಪ್ರಮುಖನಾಗಿದ್ದ ಒಂದನೇ ಬಾಜಿರಾವನ ಮುಖ್ಯ ಪ್ರಭಾವ ಕೇಂದ್ರಗಳಲ್ಲಿ ಈ ದೇವಸ್ಥಾನವೂ ಒಂದಾಗಿತ್ತು. ಆತನ ಗುರುವಾಗಿದ್ದ ಬ್ರಹ್ಮೇಂದ್ರ ಸ್ವಾಮಿಗಳು ಇದನ್ನು ಸ್ಥಾಪಿಸಿದ್ದರು. ಶುದ್ಧಿಚಳುವಳಿ ಮತ್ತು ಅಸ್ಪೃಶ್ಯರ ಏಳಿಗೆ ಆ ದಿನದ ವಿಷಯವಾಗಿತ್ತು. ಬ್ರಾಹ್ಮಣ ರಾಜಕಾರಣವನ್ನು ಇನ್ನಿಲ್ಲದಂತೆ ಕಂಗೆಡಿಸಿದ್ದ ಎರಡು ವಿಭಾಗಗಳಿದ್ದವು. ಒಂದು ಜಾತಿಯಲ್ಲಿ ಕೆಳಗಿರುವ ಸಮುದಾಯ ಮತ್ತು ಇನ್ನೊಂದು ಇತರ ಧರ್ಮೀಯರು. ಈ ಎರಡು ವಿಭಾಗಗಳನ್ನೂ ಹಿಂದೂಧರ್ಮದ ಮಡಿಕೆಯೊಳಗೆ ತೂರಿಸಿಕೊಳ್ಳಲು ಸಾವರ್ಕರ್‌ ಪ್ರಯತ್ನಿಸುವುದು. ಮೊದಲ ವಿಭಾಗವನ್ನು ಬ್ರಾಹ್ಮಣ್ಯದ ರೊಟ್ಟಿ ತುಂಡು ತೋರಿಸಿ ಪ್ರಲೋಭಿಸುವುದು. ಎರಡನೇ ವಿಭಾಗವನ್ನು ಮತಾತಂರ ಎಂಬ ಪ್ರಕ್ರಿಯೆಯನ್ನು ತೋರಿಸಿ ಎತ್ತಿಕಟ್ಟುವುದು.
ಅದರಲ್ಲಿ ಮೊದಲನೆಯದ್ದನ್ನು ಕಾರ್ಯಗತಗೊಳಿಸಲು ಅಂಬೇಡ್ಕರ್‌ ಜನಿಸಿದ ಸಮುದಾಯವಾದ ಮಹರ್‌ ಸಮುದಾಯವನ್ನು ಬಳಸಿಕೊಳ್ಳುತ್ತಾರೆ. ಸಾವರ್ಕರ್‌ ಮತ್ತು ರತ್ನಗಿರಿ ಹಿಂದೂಸಭಾದ ಕಾರ್ಯಕರ್ತರು ಮಹರ್‌ ಕಾಲನಿಗಳಿಗೆ ಭೇಟಿ ನೀಡತೊಡಗಿದರು. ಅವರ ಮೂಲಕ ಬ್ರಾಹ್ಮಣ ಕೀರ್ತನೆಗಳನ್ನು ಹಾಡಿಸುವುದು ಒಂದು ಕಾರ್ಯಕ್ರಮವಾಗಿತ್ತು. ತಿಲಕ್‌ ಆರಂಭಿಸಿದ್ದ ಗಣೇಶೋತ್ಸವವನ್ನು ರತ್ನಗಿರಿ ಜಿಲ್ಲೆಯಲ್ಲಿ ಬ್ರಾಹ್ಮಣರು ಅದ್ದೂರಿಯಿಂದ ಆಚರಿಸುತ್ತಿದ್ದರು. ೧೯೨೫ರಲ್ಲಿ ʼಅಸ್ಪೃಶ್ಯರಿಗಾಗಿʼ ಒಂದು ʼವಿಶೇಷ ಗಣಪತಿʼಯನ್ನು ಸಾವರ್ಕರ್‌ ಮತ್ತು ಸಂಗಡಿಗರು ಸಜ್ಜುಗೊಳಿಸುತ್ತಾರೆ. ಜಾಡಮಾಲಿ ಕೆಲಸ ಮಾಡುವ ಭಂಗಿ ಸಮುದಾಯದ ಶಿವು ಎಂಬಾತನನ್ನು ತಂದು ಪೂಜಾರಿಯನ್ನಾಗಿ ಮಾಡುತ್ತಾರೆ. ಹೀಗೆ, ದಲಿತರನ್ನು ಬ್ರಾಹ್ಮಣ ರಾಜಕಾರಣದ ಕಾಲಾಳುಗಳಾಗಿ ಬದಲಾಯಿಸುವ ಹಿಂದುತ್ವ ಜನಾಂಗೀಯ ರಾಜಕಾರಣವನ್ನು ದೇವರ ಪೂಜೆಯ ವಿಷಯದಲ್ಲಿ ರಂಗಕ್ಕೇರಿಸಲು ಸಾವರ್ಕರ್‌ ಮತ್ತು ಸಂಗಡಿಗರು ಸಫಲರಾಗುತ್ತಾರೆ.
ಮಹಾತ್ಮಾ ಫುಲೆಯಿಂದ ಹಿಡಿದು ಅಂಬೇಡ್ಕರ್‌ ತನಕ ವಿದ್ಯೆಯನ್ನು ಪ್ರಬುದ್ಧತೆ ಮತ್ತು ಸ್ವಾತಂತ್ರ್ಯದ ಕಡೆಗೆ ಚಲನಾತ್ಮಕತೆ ನೀಡುವ ಪ್ರಮುಖ ದಾರಿಯಾಗಿ ತೋರಿಸಿಕೊಟ್ಟಿದ್ದರು. ಅದಕ್ಕಾಗಿ ಸಮಾನಾಂತರ ವಿದ್ಯಾಭ್ಯಾಸದ ಪ್ರಯತ್ನಗಳು ಹತ್ತೊಂಬತ್ತನೇ ಶತಮಾನದ ಕೊನೆಗೆ ಮಹಾರಾಷ್ಟ್ರದಾದ್ಯಂತ ಹುಟ್ಟಿಕೊಂಡಿದ್ದವು. ಹೊಸ ಅಸ್ಮಿತೆಯನ್ನು ಕಂಡುಕೊಳ್ಳಲು ಹೊರಟಿರುವ ದಲಿತ, ಹಿಂದುಳಿದ ಸಮುದಾಯದ ಜನರನ್ನು ಹಿಂದೂ ಜನಾಂಗೀಯ ರಾಜಕಾರಣದೊಂದಿಗೆ ಜೋಡಿಸುವುದು ತಮ್ಮ ರಾಜಕಾರಣಕ್ಕೆ ಅತ್ಯಂತ ಅನಿವಾರ್ಯವೆಂದು ಸಾವರ್ಕರ್‌ಗೆ ಮನದಟ್ಟಾಗಿತ್ತು. ಸರಕಾರವು ದಲಿತ ವಿದ್ಯಾಭ್ಯಾಸವನ್ನು ಬೆಂಬಲಿಸುವ ನಿಲುವು ತೆಗೆದುಕೊಂಡಿತ್ತು. ಸಾರ್ವಜನಿಕ ವಿದ್ಯಾಕೇಂದ್ರಗಳು ಅವರಿಗಾಗಿ ತಮ್ಮ ಬಾಗಿಲು ತೆರೆದವು. ಈ ಸಂದರ್ಭದಲ್ಲಿ ಅವರನ್ನು ದೂರ ನಿಲ್ಲಿಸುವ ಮೂರ್ಖತನದಲ್ಲಿ ಬ್ರಾಹ್ಮಣ ಸಂಪ್ರದಾಯಸ್ಥರು ಮುಳುಗಿದ್ದರೆ ಬ್ರಾಹ್ಮಣ ಪ್ರಾಬಲ್ಯದ ಬುಡಕ್ಕೇ ಕುತ್ತು ಎಂದು ಅರ್ಥ ಮಾಡಿಕೊಳ್ಳುವ ಸಾವರ್ಕರ್‌ ಆ ಮೂರ್ಖತನವನ್ನು ಕೈಬಿಡುವಂತೆ ಸಾರ್ವಜನಿಕ ಸಭೆಗಳಲ್ಲಿ ಭಾಷಣ ಮಾಡಲು ಶುರು ಮಾಡುತ್ತಾರೆ.
ʼಸಾರ್ವಜನಿಕ ವಿದ್ಯಾಲಯಗಳಿಗೆ ಮಕ್ಕಳು ಬರುವುದನ್ನು ತಡೆಯಲು ನಿಮ್ಮಿಂದ ಸಾಧ್ಯವೇ? ಇಲ್ಲ. ನಿಮಗೆ ಆ ಧೈರ್ಯವಿಲ್ಲ. ಯಾಕೆಂದರೆ ಅದರ ಫಲಿತಾಂಶ ನಿಮಗೆ ತಿಳಿದಿದೆ. ಬ್ರಿಟಿಷ್‌ ಸರಕಾರ ಬಂದೂಕುಗಳ ಮೂಲಕ ನಿಮಗೆ ಉತ್ತರ ನೀಡುತ್ತದೆ. ಅವರು ಅವಿದ್ಯಾವಂತರೂ ಅಸಹಾಯಕರೂ ಆದ ಕಾರಣ ನೀವು ಅವರಿಗೆ ಕಿರುಕುಳ ನೀಡುತ್ತಿದ್ದೀರಿ. ಆದರೆ, ಮುಸ್ಲಿಮರ ಅನೀತಿಯುಕ್ತ ಬೇಡಿಕೆಗಳನ್ನು ನೀವು ಪೂರೈಸಿ ಕೊಡುತ್ತಿದ್ದೀರಿ. ಯಾಕೆಂದರೆ ಅವರು ಅಕ್ರಮ ಸ್ವಭಾವದವರು. ಒಬ್ಬ ಮಹರ್‌ ಮುಸ್ಲಿಮನೋ ಕ್ರೈಸ್ತನೋ ಆಗಿ ಮತಾಂತರಗೊಂಡರೆ ನೀವು ಆತನನ್ನು ನಿಮ್ಮ ಸಮಾನವಾಗಿ ಕಾಣಿತ್ತೀರಿ. ಆದರೆ, ಒಬ್ಬ ಮಹರ್‌ಗೆ ಅದೇ ಸಮಾನತೆ ಲಭಿಸುವುದಿಲ್ಲ.ʼ
ಇಲ್ಲಿಯೂ ಕೂಡ ಸಂಪ್ರದಾಯವಾದಿ ಬ್ರಾಹ್ಮಣರ ಮೂರ್ಖತನವನ್ನು ಬೊಟ್ಟು ಮಾಡಿ ತೋರಿಸುತ್ತಿರುವುದು ಅಕ್ರಮ ಸ್ವಭಾವದ ಮುಸ್ಲಿಮರು ಎಂಬ ಅನ್ಯರನ್ನು ಸೃಷ್ಟಿಸಿಕೊಂಡು. ಮಸ್ಲಿಮರೋ ಅಸ್ಪೃಶ್ಯರೋ ಎಂಬ ಪ್ರಶ್ನೆಗೆ ಹಲವು ರೀತಿಯ ಮಾದರಿಗಳನ್ನು ನಿರ್ಮಿಸಿಕೊಂಡು ಸಾವರ್ಕರ್‌ ಹಿಂದುತ್ವ ರಾಜಕಾರಣವನ್ನು ಕಟ್ಟುವುದು. ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಸಾವರ್ಕರ್‌ ತನ್ನ ರತ್ನಗಿರಿ ವಾಸದ ಕಾಲದಲ್ಲಿ ನಿರಂತರವಾಗಿ ಸಂಪ್ರದಾಯಸ್ಥ ಬ್ರಾಹ್ಮಣರೊಂದಿಗೆ ಮಾತನಾಡುತ್ತಾರೆ. ಅದೇ ಹೊತ್ತು ಬ್ರಿಟಿಷ್‌ ಪ್ರಭುತ್ವಕ್ಕೆ ಸುಖಕರವಾದ ರೀತಿಯಲ್ಲಿ ಗಾಂಧಿ ಮತ್ತು ಸ್ವಾತಂತ್ರ್ಯ ಹೋರಾಟದ ಚಳುವಳಿಯನ್ನು ನಿರಂತರವಾಗಿ ಹಳಿಯುವ ಕೆಲಸವನ್ನೂ ಮಾಡುತ್ತಾರೆ.
೧೯೨೭ರಿಂದ ಹಿಂದೂ ಜನಾಂಗೀಯ ಒಗ್ಗಟ್ಟಿಗೆಂದು ಸಾವರ್ಕರ್‌ ಹುಟ್ಟು ಹಾಕಿದ ಇನ್ನೊಂದು ಪದ್ಧತಿಯೆಂದರೆ ದಸರಾ, ಮಕರ ಸಂಕ್ರಾತಿ ಮೊದಲಾದ ಹಿಂದೂಗಳ ಹಬ್ಬದ ದಿನದಂದು ಮಹಾರ್‌, ಚಮಾರ್‌, ಭಂಗಿ ಸಮುದಾಯದ ದಲಿತರನ್ನು ಬ್ರಾಹ್ಮಣರ ಮನೆಗಳಿಗೆ ಕರೆಸಿಕೊಂಡು ಸೋನಾ ಎಲೆಗಳನ್ನು ನೀಡಿ ಶುಭಾಶಯಗಳನ್ನು ಕೋರುವ ಕಾರ್ಯಕ್ರಮ. ಅಂದರೆ ಕೇರಳದಂತಹ ಕಡೆಗಳಲ್ಲಿ ಬಾಳೆಗೊನೆ ಕಾಣಿಕೆಯನ್ನು ಜಮೀನ್ದಾರರಿಗೆ ಸಮರ್ಪಿಸುವ ಹಾಗೆ. ನಂತರ ಸಿಹಿತಿಂಡಿಗಳನ್ನು ವಿತಿರಿಸಿ ಎಲ್ಲರೂ ಒಟ್ಟಾಗಿ ʼಹಿಂದೂಧರ್ಮಕ್ಕೆ ಜವಯವಾಗಲಿʼ ಎಂಬ ಜೈಕಾರ ಕೂಗಬೇಕು. ಸಾಮಾಜಿಕ ಚಲನಾತ್ಮಕತೆಯಿಂದ ದಲಿತರನ್ನು ಬಹುದೂರ ತಳ್ಳುವ ಅದೇ ʼಹಿಂದೂಧರ್ಮʼಕ್ಕೆ ಜಯವಾಗಲಿ ಎಂದು ಜೈಕಾರ ಕೂಗಿಸುವ ಈ ಕಾರ್ಯಕ್ರಮವು, ದಲಿತರು ಮನುಸ್ಮೃತಿಯನ್ನು ಸುಟ್ಟು ಹಾಕಲು ಶುರು ಮಾಡಿದ ಅದೇ ಸಮಯದಲ್ಲಿ ಆರಂಭಿಸಿದ ಒಳಗುಟ್ಟು ಬಹುತೇಕ ಸಂಪ್ರದಾಯಸ್ಥ ಬ್ರಾಹ್ಮಣರಿಗೆ ಅರ್ಥವಾಗಲೇ ಇಲ್ಲ. ಆದ್ದರಿಂದ ಅವರಲ್ಲಿ ಕೆಲವರು ತಮ್ಮ ಮನೆಗಳಿಗೆ ದಲಿತರು ಕ್ಷಣಕಾಲ ಭೇಟಿ ನೀಡುವ ರತ್ನಗಿರಿ ಹಿಂದೂಸಭಾದ ಯೋಜನೆಯ ವಿರುದ್ಧ ನಿಂತರು. ಆದರೆ, ಒಂದು ಜನಾಂಗೀಯ ರಾಜಕಾರಣ ಸ್ಪರ್ಶಬಂಧಿಯಂತಹ ಎರಡಲಗಿನ ನಿಷೇಧಗಳನ್ನು ಅಪ್ಪಿಕೊಂಡು ಕೂತರೆ ಅದು ದೊಡ್ಡ ಮಟ್ಟದಲ್ಲಿ ತಿರುಗೇಟು ನೀಡುತ್ತದೆಯೆಂಬ ಎಚ್ಚರದ ಕಾರಣದಿಂದ ಸಾವರ್ಕರ್‌ ಆ ಸಣ್ಣ ವಿರೋಧಗಳನ್ನು ಕಡೆಗಣಿಸಿ ಮುಂದುವರಿಯುತ್ತಾರೆ. ಅದರಲ್ಲೂ ಮಹಾಡ್‌ ಸತ್ಯಾಗ್ರಹದ ನಂತರ ಸಾಮಾಜಿಕ ಆಸ್ತಿಪಾಸ್ತಿಗಳ ಮೇಲೆ ತಮಗೂ ಹಕ್ಕು ಮತ್ತು ಅಧಿಕಾರವಿದೆಯೆಂಬ ಪ್ರಜ್ಞೆ ಹಿಂದೂಧರ್ಮದ ಬ್ರಾಹ್ಮಣೇತರ ಬಹುಜನರಿಗೆ ಅರ್ಥವಾಗುತ್ತಿದ್ದ ಕಾಲ. ಅವರೆಲ್ಲ ಸೇರಿಕೊಂಡು ಸ್ಪರ್ಶಬಂಧಿಯನ್ನು ತಿರುಗಿ ಪ್ರಯೋಗಿಸಿದರೆ ಮೂಲೆಗುಂಪಾಗಲಿರುವುದು ಬ್ರಾಹ್ಮಣರೇ ಆಗಿರುತ್ತಾರೆ ಎಂದು ಸಾವರ್ಕರ್‌ ಅರ್ಥಮಾಡಿಕೊಂಡಿರಬೇಕು. ಬಹಳ ಬೇಗನೆ ತಮ್ಮ ವಾಸ್ತವಿಕ ಅಲ್ಪಸಂಖ್ಯಾತ ಪದವಿಯ ಕುರಿತು ಬ್ರಾಹ್ಮಣರಿಗೆ ಅರ್ಥೈಸಿಕೊಡುವಲ್ಲಿ ಸಾವರ್ಕರ್‌ ಮತ್ತು ಹಿಂದೂಸಭಾ ಯಶಸ್ವಿಯಾಗುತ್ತಾರೆ. ಆದ್ದರಿಂದ ತಮ್ಮ ಮನೆಗಳಿಗೆ ಬಂದು ಸೋನಾ ಎಲೆಗಳನ್ನು ಮೈತ್ರಿಯ ಗುರುತಾಗಿ ನೀಡಿ ತಾವು ಸಾಕಿ ಬೆಳೆಸಿದ ʼಹಿಂದೂಧರ್ಮʼಕ್ಕೆ ದಲಿತರಿಂದ ಜೈಕಾರ ಕೂಗಿಸುವ ಕಾರ್ಯಕ್ರಮವನ್ನು ಅವರು ಅದ್ದೂರಿಯಿಂದ ಆಚರಿಸತೊಡಗಿದರು.
ಇದರ ಮುಂದುವರಿಕೆಯಾಗಿಯೇ ಕಾಣಬೇಕಾದ ಇನ್ನೊಂದು ಸಂಗತಿ, ೧೯೨೯ರಲ್ಲಿ ವೇದೋಕ್ತಬಂಧಿಯನ್ನು ಮುರಿಯಲು ಸಾವರ್ಕರನ್ನು ಪ್ರೇರೇಪಿಸಿದ ಅಂಶ. ಹಿಂದೂ ಎಂದು ತನ್ನನ್ನು ತಾನು ಗುರುತಿಸಿಕೊಳ್ಳುವ ಪ್ರತಿಯೊಬ್ಬರಿಗೂ ವೇದಕರ್ಮಗಳನ್ನು ಕೈಗೊಳ್ಳುವ ಹಕ್ಕಿದೆಯೆಂದು ಸಾವರ್ಕರ್‌ ಘೋಷಿಸುತ್ತಾರೆ. ಅದರ ಜೊತೆಗೆ ಜನಿವಾರಧಾರಣೆಯೂ. ಮಹಾರ್‌ ಮತ್ತು ಚಮಾರ್‌ ಜಾತಿಗಳ ಹಲವರಿಗೆ ಸಾವರ್ಕರ್‌ ಜನಿವಾರವನ್ನು ವಿತರಿಸುತ್ತಾರೆ.
ಸುಮಾರಾಗಿ ಇದೇ ಹೊತ್ತಿಗೆ ಕೇರಳದಲ್ಲಿ ನಡೆದ ನಂಬೂದಿರಿ ನವೋತ್ಥಾನ ಚಳುವಳಿಯ ಧ್ಯೇಯೋದ್ಧೇಶ ಏನೆಂದು ಅರ್ಥಮಾಡಿಕೊಂಡರೆ ನವೋತ್ಥಾನ ಮತ್ತು ಜನಾಂಗೀಯ ರಾಜಕಾರಣದ ನಡುವಿನ ವ್ಯತ್ಯಾಸವನ್ನು ಗುರುತಿಸಬಹುದು. ವಿ.ಟಿ ಭಟ್ಟತ್ತಿರಿಪಾಡ್‌ ಮತ್ತು ಸಂಗಡಿಗರ ಘೋಷಣೆ ನಂಬೂದಿರಿಯನ್ನು ಮನುಷ್ಯನಾಗಿಸೋಣ ಎಂದಾಗಿತ್ತು. ತಮ್ಮಿಂದ ಲೋಕವನ್ನು ದೂರಗೊಳಿಸುವ ಸಂಗತಿಯಾಗಿ ಅವರು ಜನಿವಾರವನ್ನು ಕಂಡಿದ್ದರು. ಆದ್ದರಿಂದ ಅದನ್ನು ಕಿತ್ತೆಸೆಯುವುದೆಂದರೆ ಬಹುತ್ವದ, ಪ್ರಜಾಸತ್ತಾತ್ಮಕ ಸಮಾಜಕ್ಕೆ ಪ್ರವೇಶಿಸುವ ಮೊದಲ ಮೆಟ್ಟಿಲು ಎಂದು ಅವರು ಭಾವಿಸಿದ್ದರು. ಅಂತರ್ಜನಂ ಎಂದು ಕರೆಯಲ್ಪಡುತ್ತಿದ್ದ ನಂಬೂದಿರಿ ಮಹಿಳೆಯರು ಘೋಷ ಬಹಿಷ್ಕರಿಸಿ ಹೊರ ಬಂದರು.
ಆದರೆ, ಸಾವರ್ಕರ್‌ ಅವರ ಹಿಂದುತ್ವ ರಾಜಕಾರಣದ ಗುರಿ ಮನುಷ್ಯರನ್ನು ಹಿಂದೂಗಳಾಗಿಸಬೇಕು ಎಂಬುದಾಗಿತ್ತು. ಸ್ವಲ್ಪ ಸಮಯದ ಹೊತ್ತಿಗೆ ದಲಿತನೊಬ್ಬ ಜನಿವಾರ ಧರಿಸುವುದರಿಂದ ಬ್ರಾಹ್ಮಣ ರಾಜಕಾರಣಕ್ಕೆ ಬೇಕಾದ ಅಂಗೀಕಾರ ದಲಿತರ ನಡುವಿನಿಂದ ಪಡೆಯಬಹುದು ಎಂಬುದು ಸಾವರ್ಕರ್‌ ಲೆಕ್ಕವಾಗಿತ್ತು. ಅದು ಒಂದು ಹಂತದವರೆಗೆ ನಿಜವೂ ಆಯಿತು. ೧೯೨೮ರಲ್ಲಿ ಮಾನ್ವಲ್‌ ಎಂಬಲ್ಲಿ ನಡೆದ ಅಸ್ಪೃಶ್ಯರ ಸಮ್ಮೇಳನದಲ್ಲಿ ಬ್ರಾಹ್ಮಣರು ಮತ್ತು ಅಸ್ಪೃಶ್ಯರು ಒಟ್ಟಾಗಿ ಮಂತ್ರೋಚ್ಛಾರ ಮಾಡಿದರು. ಅಲ್ಲಿ ಮಾಡಿದ ಭಾಷಣದಲ್ಲೂ ಸಾವರ್ಕರ್‌ ತನ್ನ ಜನಾಂಗೀಯ ರಾಜಕಾರಣದ ನಿಲುವನ್ನು ಮುಂದಿಟ್ಟಿದ್ದರು. ದಲಿತರನ್ನು ಬ್ರಾಹ್ಮಣ ಜನಾಂಗೀಯ ರಾಜಕಾರಣದ ಭಾಗವಾಗಿಸುವುದು. ಮುಸ್ಲಿಂ, ಕ್ರೈಸ್ತರಾದಿ ಅಲ್ಪಸಂಖ್ಯಾತರನ್ನು ಅನ್ಯರಾಗಿಸುವುದು. ʼಹಿಂದೂಯೇತರರು ಮಂತ್ರಗಳನ್ನು ಕಲಿಯುತ್ತಿರುವಾಗ, ಅದನ್ನು ಯಾಕೆ ಹಿಂದೂ ಮಹಾರ್‌ಗಳು ಕಲಿಯಬಾರದು?ʼ ಎಂದಿನಂತೆ ಈ ಪ್ರಶ್ನೆಯನ್ನು ಸಾವರ್ಕರ್‌ ಮುಂದಿಟ್ಟಿದ್ದರು. ತಾನು ತಂತ್ರದಿಂದ ಕಟ್ಟಲು ಹೊರಟಿರುವ ಹಿಂದೂ ಜನಾಂಗೀಯ ಬ್ರಾಹ್ಮಣ ರಾಜಕಾರಣಕ್ಕೆ ಅಲ್ಲಿ ಒಂದು ಅನುಕೂಲಕರ ಉತ್ತರವೂ ದೊರೆಯುತ್ತದೆ. ಸರ್ಜಂಟ್‌ ಘಾಟ್ಗೇ ಎಂಬ ಮಹಾರ್‌ ಎದ್ದು ನಿಂತು ಹೀಗೆ ಘೋಷಿಸಿದ. ʼಯಾರು ಮಹಾರ್‌ಗಳು ಮತಾಂತರಗೊಳ್ಳುತ್ತಾರೆ, ಮುಸ್ಲಿಮರಾಗುತ್ತಾರೆ ಎಂದು ಆರೋಪಿಸುವವರು? ನಾವು ಮಹಾರ್‌ಗಳು ಹಿಂದೂಧರ್ಮವನ್ನು ಪ್ರೀತಿಸುತ್ತೇವೆ ಮತ್ತು ಅದನ್ನು ಯಾವ ಕಾರಣಕ್ಕೂ ವಿರೋಧಿಸುವುದಿಲ್ಲ. ಬ್ರಾಹ್ಮಣರು ಬಹುಷ ಇಸ್ಲಾಂ ಧರ್ಮಕ್ಕೆ ಹೋಗಬಹುದು. ಆದರೆ ನಾವು ಹೋಗುವುದಿಲ್ಲ.ʼ
ಅದು ತನ್ನ ಜನಾಂಗೀಯ ರಾಜಕಾರಣಕ್ಕೆ ದೊರೆತ ಅತ್ಯಂತ ದೊಡ್ಡ ಪ್ರಮಾಣಪತ್ರವಾಗಿತ್ತು. ಅದರ ನಂತರ ಭಂಗಿಗಳಂತಹ ದಲಿತರ ಮದುವೆ ನಡೆಸಿಕೊಡಲು ಬ್ರಾಹ್ಮಣ ಪೂಜಾರಿಗಳನ್ನು ಸಾವರ್ಕರ್‌ ವ್ಯವಸ್ಥೆ ಮಾಡಿಕೊಡುತ್ತಾರೆ. ಹೀಗೆ ತನ್ನ ಹಿಂದೂ ಜನಾಂಗೀಯ ರಾಜಕಾರಣದೊಟ್ಟಿಗೆ ದಲಿತರ ಒಂದು ವಿಭಾಗವನ್ನಾದರೂ ಸೇರಿಸಿಕೊಳ್ಳಲು ಸಾವರ್ಕರ್‌ ಸಫಲರಾಗುತ್ತಾರೆ.
ಜನಾಂಗೀಯ ರಾಜಕಾರಣದ ಅತ್ಯಂತ ಪ್ರಮುಖ ಮುಖ ಅಲ್ಪಸಂಖ್ಯಾತ ಸಮುದಾಯದ ಮೇಲಿನ ದ್ವೇಷ ಎಂಬುದನ್ನು ನಾವು ಕಂಡೆವು. ದ್ವೇಷದ ಪ್ರಾಯೋಗಿಕ ಜಾರಿಯೆಂದರೆ ಬಹುತೇಕ ಸಂದರ್ಭಗಳಲ್ಲಿ ಸಾಮಾಜಿಕ ಬಹಿಷ್ಕಾರವೇ ಆಗಿರುತ್ತದೆ. ತನ್ನ ಹಿಂದೂ ಬಳಗಕ್ಕೆ ಸೇರಿಸಿಕೊಂಡ ದಲಿತರನ್ನು ಬಳಸಿಕೊಂಡು ಅದನ್ನು ಜಾರಿಗೊಳಿಸುವ ಪ್ರಯತ್ನವನ್ನೂ ಸಾವರ್ಕರ್‌ ರತ್ನಗಿರಿಯಲ್ಲಿ ಮಾಡುತ್ತಾರೆ. ಸಂಪ್ರದಾಯಸ್ಥ ಬ್ರಾಹ್ಮಣರು/ಸವರ್ಣೀಯರು ಅವರ ಧಾರ್ಮಿಕ ಮತ್ತು ಖಾಸಗಿ ಕಾರ್ಯಕ್ರಮಗಳಿಗೆ ಮುಸ್ಲಿಂ ಬ್ಯಾಂಡ್‌ ಸೆಟ್‌ಗಳನ್ನು ಕರೆಸುವುದು ವಾಡಿಕೆಯಾಗಿತ್ತು. ಹೀಗೆ ಹಲವಾರು ವರ್ಷಗಳಿಂದ ನಡೆಯುತ್ತಿದ್ದ ಸಾಮಾಜಿಕ ಕೊಡುಕೊಳೆಯೊಂದನ್ನು ದಲಿತರ ಮೂಲಕ ಒಡೆಯುವ ಪ್ರಯತ್ನಕ್ಕೆ ಸಾವರ್ಕರ್‌ ಕೈ ಹಾಕುತ್ತಾರೆ. ಅದಕ್ಕಾಗಿ ದಲಿತರನ್ನು ಮಾತ್ರ ಒಳಗೊಂಡ ಒಂದು ಬ್ಯಾಂಡನ್ನು ಸಾವರ್ಕರ್ ಕಟ್ಟುತ್ತಾರೆ. ನಂತರ ಅವರನ್ನು ಬಳಿಸಿಕೊಂಡು ಮುಸ್ಲಿಂ ಬ್ಯಾಂಡ್‌ ಸೆಟ್ಟನ್ನು ಬಹಿಷ್ಕರಿಸುವುದು.
ನಾವು ಈ ಮೊದಲು ಗಮನಿಸಿದ ಅಂಬೇಡ್ಕರ್‌ ನೇತೃತ್ವದಲ್ಲಿ ದಲಿತರು ನಡೆಸಿದ ಐತಿಹಾಸಿಕ ಹೋರಾಟ, ಮಹಾಡ್‌ ಸತ್ಯಾಗ್ರಹದ ಗೆಲುವು, ಸಾವರ್ಕರನ್ನು ಜಾಗರೂಕನನ್ನಾಗಿಸುತ್ತದೆ. ಅಲ್ಲಿಯೂ ದಲಿತರು-ಮುಸ್ಲಿಮರು ಎಂಬ ಮಿಥ್ಯದ್ವಂದ್ವಗಳನ್ನು ನಿರ್ಮಿಸಿಕೊಂಡು ಆ ಹೋರಾಟದ ಸಾಮಾಜಿಕ ವಿಶ್ಲೇಷಣೆಯನ್ನು ಸಾವರ್ಕರ್‌ ನಡೆಸುತ್ತಾರೆ. ಎಂದಿನಂತೆ ತನ್ನ ಸಾರ್ವಜನಿಕ ಬರಹದಲ್ಲಿ ಬ್ರಾಹ್ಮಣರ ಜೊತೆಗೆ ಮಾತ್ರ ಮಾತನಾಡುತ್ತಾರೆ.
ʼನಾವೆಲ್ಲರೂ ಭಾಷಣ ಮಾಡುತ್ತಿರುವುದು ಶಾಲೆಗಳು, ಸಾರ್ವಜನಿಕ ಜಲಾಶಯಗಳು, ನೀರಿನ ನಳ್ಳಿಗಳು, ಮುನಿಸಿಪಾಲಿಟಿ, ಜಿಲ್ಲಾ ಕೌನ್ಸಿಲ್‌, ಇತರ ಸಮಾವೇಶಗಳು ಮೊದಲಾದ ಸಾರ್ವಜನಿಕ ಜಾಗಗಳಲ್ಲೆಲ್ಲ ಮುಸ್ಲಿಮರಿಗೆ ಸಮಾನವಾಗಿಯೋ ಅದಕ್ಕಿಂತ ಹೆಚ್ಚಿನ ಮಟ್ಟದಲ್ಲೋ ಪ್ರವೇಶವನ್ನು ಅಸ್ಪೃಶ್ಯರಿಗೆ ಕೂಡ ನೀಡಬೇಕು. ಅದು ಅವರ ಕಾನೂನಾತ್ಮಕ ಹಕ್ಕು. ಆದ್ದರಿಂದ ಕೆರೆಯಿಂದ ನೀರು ತೆಗೆದುಕೊಳ್ಳಲೆಂದು ಅಂಬೇಡ್ಕರ್‌ ನಡೆಸುತ್ತಿರುವ ಹೋರಾಟವನ್ನು ನಾವು ದೂರಬೇಕಾಗಿಲ್ಲ.
ಅದೇ ಕೆರೆಯಿಂದ ನೀರೆತ್ತಲು, ಪಾತ್ರೆಗಳನ್ನು ತೊಳೆಯಲು ಮುಸ್ಲಿಮರಿಗೆ ಅವಕಾಶವಿದೆ. ಆದರೆ ನಮ್ಮ ಅಸ್ಪೃಶ್ಯ ಸಹೋದರರಿಗೆ ಮಾತ್ರ ಬರಗಾಲದಲ್ಲೂ ನೀರೆತ್ತುವ ಹಾಗಿಲ್ಲ.ʼ
ಚೌಡಾರ್‌ ಕೆರೆಯಿಂದ ನೀರೆತ್ತಲು ಮುಸ್ಲಿಮರಿಗೆ ಅವಕಾಶವಿರುವ ಕಾರಣದಿಂದ ʼಅಸ್ಪೃಶ್ಯರಿಗೂʼ ಅವಕಾಶ ನೀಡಬೇಕೆಂದು ಸಾವರ್ಕರ್‌ ಹೇಳುತ್ತಿರುವುದು. ಅದಲ್ಲದೆ, ಸಹಮಾನವರು ಎಂಬ ನೆಲೆಯಲ್ಲಿ ದಲಿತರಿಗೂ ಸಾರ್ವಜನಿಕ ಜೀವನದಲ್ಲಿ ಸಮಾನತೆಯನ್ನು ದೊರಕಿಸಿ ಕೊಡಲು ಅಲ್ಲವೇ ಅಲ್ಲ. ನಿಜವಾಗಿ ಈ ಚೌಡಾರ್‌ ಕೆರೆ ಪ್ರವೇಶದ ಜಗಳದಲ್ಲಿ ಮುಸ್ಲಿಮರು ಇಲ್ಲವೇ ಇಲ್ಲ. ತನ್ನ ಜನಾಂಗೀಯ ರಾಜಕಾರಣದ ತಾತ್ಕಾಲಿಕ ಬಳಕೆಗೆ ಎರಡು ಪ್ರಬಲ ಸಮುದಾಯಗಳು ಅಗತ್ಯವಾಗಿ ಬೇಕಾಗಿದ್ದವು. ದಲಿತ, ಹಿಂದುಳಿದ ಜಾತಿಗಳು ಮತ್ತು ಮುಸ್ಲಿಮರು. ಒಂದು, ರಕ್ಷಕನ ಪೋಷಾಕು ಧರಿಸಿ ತನ್ನ ಮುಷ್ಟಿಯೊಳಗೆ ಎಂದೆಂದಿಗೂ ಬಂಧಿಸಿಡಲು. ಇನ್ನೊಂದು, ದ್ವೇಷದ ಕೆನ್ನಾಲಿಗೆಯನ್ನು ಸದಾ ಎರಚಲು ಅನುಕೂಲವಾಗುವಂತೆ ಕಾಲದೊಳಗೆ ನಿಶ್ಚಲಗೊಳಿಸಲು. ಸಂಪ್ರದಾಯಸ್ಥ ಬ್ರಾಹ್ಮಣ್ಯಕ್ಕೆ ಇಷ್ಟೊಂದು ಸಂಕೀರ್ಣವಾದ ರಾಜಕಾರಣ ಅಗತ್ಯವಿರಲಿಲ್ಲ.
ಅಂಬೇಡ್ಕರರ ನಾಯಕತ್ವದಲ್ಲಿ ದಲಿತರು ದೇವಸ್ಥಾನ ಪ್ರವೇಶಕ್ಕೆ ಹೋರಾಟ ನಡೆಸುತ್ತಿದ್ದ ಕಾಲವದು. ಅದರಲ್ಲಿ ಅತ್ಯಂತ ಪ್ರಮುಖ ಹೋರಾಟ ಮಿತ್ರಮೇಳ/ಅಭಿನವ್‌ ಭಾರತ್‌ ಸಮಯದಲ್ಲಿ ಸಾವರ್ಕರ್‌ ತನ್ನ ಕರ್ಮಭೂಮಿಯಾಗಿಸಿದ್ದ ನಾಸಿಕಲ್ಲಿ ನಡೆದಿತ್ತು. ಕಾಲಾರಾಮ್‌ ದೇವಸ್ಥಾನವನ್ನು ಸಾರ್ವಜನಿಕರಿಗೆ ತೆರೆದುಕೊಡುವಂತೆ ದಲಿತರು ಹೋರಾಟ ನಡೆಸುತ್ತಿದ್ದರು. ೧೯೩೧ ಮಾರ್ಚ್‌ ೧೩ರಂದು ಈ ಹೋರಾಟವನ್ನು ಮುಂದಿಟ್ಟುಕೊಂಡು ಸಾವರ್ಕರ್‌ ಹೀಗೆ ಬರೆಯುತ್ತಾರೆ.
ʼನಾವೆಲ್ಲರೂ ಗಟ್ಟಿಯಾಗಿ ಹಿಂಧೂಧರ್ಮಕ್ಕೆ ಜಯವಾಗಲಿ ಎಂದು ಕೂಗೋಣ. ಆ ಕೂಗು ನಮ್ಮ ಜನರನ್ನು, ಅತ್ಯಂತ ಅಸ್ಪೃಶ್ಯರಾಗಿರುವವರನ್ನು ತಮ್ಮ ಧರ್ಮಕ್ಕೆ ಮತಾಂತರಿಸಲು ಹೊಂಚು ಹಾಕಿ ಕುಳಿತಿರುವ ವಿದೇಶಿಗಳ ಯೋಜನೆಯನ್ನು ವಿಫಲಗೊಳಿಸುತ್ತದೆ. ನಮ್ಮ ರಾಮನು ತನ್ನ ಅರಮನೆಯನ್ನು, ರಾವಣನ ಕುಲದಲ್ಲಿ ಹುಟ್ಟಿದವನಾಗಿದ್ದರೂ ಪಶ್ಚಾತ್ತಾಪ ಹೊಂದಿ ಶರಣಾದ ವಿಭೀಷಣನಿಗೆ ತೆರೆದು ಕೊಡಲಿಲ್ಲವೇ.ʼ
ಬ್ರಾಹ್ಮಣ್ಯದ ಎದುರು ವಿಭೀಷಣನಂತೆ ʼಪಶ್ಚಾತ್ತಾಪ ಪಟ್ಟುಕೊಂಡು ಶರಣಾಗುವʼ ದಲಿತರಿಗೆ ದೇವಸ್ಥಾನ ತೆರೆದು ಕೊಡುವುದರಲ್ಲಿ ತಪ್ಪೇನೂ ಇಲ್ಲವೆಂದು ಆಲಂಕಾರಿಕವಾಗಿಯಾದರೂ ಸಾವರ್ಕರ್‌ ಇಲ್ಲಿ ಹೇಳುತ್ತಿದ್ದಾರೆ. ಆದರೆ, ಹಿಂದೂಧರ್ಮದೊಳಗಿನ ಕ್ರೂರವಾದ ಶ್ರೇಣೀಕೃತ ಅಧಿಕಾರದ ಕುರಿತು ತುಟಿ ಬಿಚ್ಚದೆ, ಮತಾಂತರದ ಕುರಿತು ಮಾತನಾಡುತ್ತಿದ್ದಾರೆ. ನಾಸಿಕಲ್ಲಿ ದಲಿತರ ಹೋರಾಟ ಸೋಲು ಕಂಡಿತು ಎಂಬುದು ಬೇರೆಯದೇ ವಿಚಾರ.
ಒಂದು ಆರಾಧನಾ ಕೇಂದ್ರದಲ್ಲಿ ಒಟ್ಟುಗೂಡಿದರೆ ಮಾತ್ರವೇ ಹಿಂದೂಜನಾಂಗೀಯ ಅಸ್ಮಿತೆಯು ಸೀಮಿತವಾಗಿಯಾದರೂ ಸಾಧ್ಯವಾಗಬಹುದು ಎಂದು ಸಾವರ್ಕರ್‌ ತಿಳಿದಿದ್ದರು. ಆದರೆ, ಸಂಪ್ರದಾಯಸ್ಥ ಬ್ರಾಹ್ಮಣರು ಅದನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಆದ್ದರಿಂದ ಆ ದಿಕ್ಕಿನಲ್ಲಿ ತನ್ನದೇ ದಾರಿ ನಿರ್ಮಿಸಿಕೊಳ್ಳಲು ಸಾವರ್ಕರ್‌ ಮುಂದಾಗುತ್ತಾರೆ. ಬಾಗೋಜಿ ಬಾಲೋಜಿ ಕೀರ್‌ ಎಂಬ ದೊಡ್ಡ ಸ್ಥಿತಿವಂತನನ್ನು ಕಂಡು ಸಕಲ ಜಾತಿಯ ಜನರಿಗೂ ಪ್ರವೇಶವಿರುವ ದೇವಸ್ಥಾನವೊಂದನ್ನು ನಿರ್ಮಿಸಿ ಕೊಡಲು ಪ್ರಚೋದಿಸುತ್ತಾರೆ. ೧೯೩೧ ಫೆಬ್ರವರಿ ೨೨ರಂದು ಪಾವನ್‌ ಮಂದಿರ್‌ ಎಂಬ ಆ ದೇವಸ್ಥಾನ ತೆರೆದು ಕಾರ್ಯಾರಂಭಿಸಿತು.
ಸಂಪ್ರದಾಯವಾದಿ ಬ್ರಾಹ್ಮಣ್ಯದೊಂದಿಗೆ ಸಾವರ್ಕರ್‌ ಅವರ ಹಿಂದೂ ಜನಾಂಗೀಯ ರಾಜಕಾರಣದ ಯೋಜನೆ ನಿರಂತರವಾಗಿ ಸಂಘರ್ಷಕ್ಕೊಳಗಾಗುತ್ತಿತ್ತು ಎಂಬುದು ನಿಜವಾದರೂ ಅವರು ಪರಸ್ಪರ ಎದುರಾಳಿಗಳಾಗಿರಲಿಲ್ಲ. ಸಂಪ್ರದಾಯವಾದಿ ಬ್ರಾಹ್ಮಣರು ತಮ್ಮ ಹಿಂದೆ ನಿಲ್ಲಬೇಕಾದವರೆಂದೂ ತಾವು ಹೋರಾಡಿ ಗಳಿಸಿಕೊಳ್ಳಲಿರುವ ಮೇಲುಗೈ ಅಧಿಕಾರ ಅವರಿಗೂ ಸಿಗಲಿದೆ ಎಂದು ಸಾವರ್ಕರ್‌ಗೆ ತಿಳಿದಿತ್ತು. ೧೯೩೬ರಲ್ಲಿ ದಲಿತರೊಂದಿಗೆ ಸಹಪಂಕ್ತಿ ಭೋಜನದ ಯೋಜನೆಯ ಕಾಲದಲ್ಲಿ ಈ ಕುರಿತು ಒಂದು ಲೇಖನ ಬರೆಯುತ್ತಾರೆ.
ʼಸಹಪಂಕ್ತಿಭೋಜನವನ್ನು ವಿರೋಧಿಸುವ ಜನರ ನಡುವೆ, ಎಲ್ಲ ಜಾತಿಯ ಜನರು ಒಟ್ಟಿಗೆ ಕುಳಿತು ಊಟ ಮಾಡುವುದು ಪಾಪವೆಂದು ಭಾವಿಸುವ ಹಲವು ಸಂಪ್ರದಾಯಸ್ಥರಿದ್ದಾರೆ. ಸಹಜವಾಗಿಯೇ ಅವರಿಗೆ ಇಂತಹ ಯೋಜನೆಗಳು ಘಾಸಿಯುಂಟುಮಾಡುತ್ತವೆ. ಅವರು ಸುಧಾರಣಾವಾದಿಗಳೊಂದಿಗೆ ಯಾವ ಸಂಬಂಧವನ್ನೂ ಹೊಂದುವುದಿಲ್ಲ. ಶತಮಾನಗಳ ಕಾಲದ ಸಾಮಾಜಿಕ ಕಂಡಿಷನಿಂಗ್‌ ಕಾರಣದಿಂದ ಅದು ಸಹಜವಲ್ಲದೆ ಬೇರೇನಲ್ಲ. ನಾವು ಅಂತಹವರೊಂದಿಗೆ ಕೋಪಗೊಳ್ಳಬಾರದು. ನಾವು ಅವರೊಂದಿಗೆ ದ್ವೇಷದಿಂದ ಬದುಕಬಾರದು. ಅವರ ಬಹಿಷ್ಕಾರ ಮತ್ತು ಆರೋಪಗಳನ್ನು ನಾವು ಸಂತೋಷದಿಂದ ಸ್ವೀಕರಿಸಬೇಕು. ತಾವಾಗಿಯೇ ಮನಃಪರಿವರ್ತನೆ ಮಾಡಿಕೊಳ್ಳುವ ತನಕ ಅವರಿಗೆ ಕಾನೂನುಬದ್ಧವಾಗಿ, ಶಾಂತಿಯುತವಾಗಿ ನಮ್ಮನ್ನು ವಿರೋಧಿಸಬಹುದು. ನಾವು ಅವರ ವಿರೋಧಗಳನ್ನು ಲೆಕ್ಕಿಸದೆ ಸುಧಾರಣೆಗಳೊಂದಿಗೆ ಮುಂದುವರಿಯಬೇಕು. ಸಮಾಜದ ಏಳಿಗೆಗಾಗಿ ನಾವು ಚಲನಾತ್ಮಕತೆಯನ್ನೂ ಪ್ರಗತಿಯನ್ನೂ ಸಾಧಿಸಲೇಬೇಕಾಗಿದೆ. ಅದೇ ಹೊತ್ತು ನಮಗೆ ಒಂದು ಹಂತದವರೆಗೆ ಸ್ಥಿರತೆಯೂ ನಿಯಂತ್ರಣವೂ ಬೇಕಾಗಿದೆ. ಒಂದು ರೈಲುಗಾಡಿ ಮುಂದಕ್ಕೆ ಚಲಿಸಲು ಅದಕ್ಕೆ ಇಂಜಿನ್‌ ಅಗತ್ಯವಿದೆ. ಜೊತೆಗೆ ಅದಕ್ಕೆ ಬ್ರೇಕುಗಳೂ ಬೇಕು. ನಮ್ಮ ಹಿಂದೂ ಸಮಾಜವು ಹೊರಗಿನಿಂದ ಲೆಕ್ಕವಿಲ್ಲದಷ್ಟು ದಾಳಿಗಳಿಗೆ ಒಳಗಾಗುವಾಗಲೂ ಹಿಡಿದು ನಿಲ್ಲುವ ಮತ್ತು ಪುನರುಜ್ಜೀವನಗೊಳ್ಳುವ ಶಕ್ತಿಯನ್ನು ಪ್ರದರ್ಶಿಸಿದೆ. ಸುಧಾರಣಾವಾದಿಗಳು ತಾವು ಆವೇಶದಿಂದ ಮುನ್ನುಗ್ಗುವುದರಲ್ಲಿ ಒಂದು ಅಪಾಯವಿದೆ. ಆದ್ದರಿಂದ ಅವರಿಗೆ ಒಂದು ನಿಯಂತ್ರಣ, ಒಂದು ಹಂತದವರೆಗೆ ಹಿಮ್ಮೆಟ್ಟುವಿಕೆ ಅಗತ್ಯವಿದೆ. ಯಾವ ಹಂತದವರೆಗೆ, ಯಾವ ಅಳತೆಯಲ್ಲಿ ಹಿಮ್ಮೆಟ್ಟಬೇಕು ಎಂಬುದು ಚರ್ಚಿಸಬೇಕಾದ ಸಂಗತಿ. ಸುಧಾರಣೆಗಳು ಮತ್ತು ಹಿಮ್ಮೆಟ್ಟುವಿಕೆ ಪರಸ್ಪರ ಪೂರಕ ಸಂಗತಿಗಳೆಂದು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ದೃಷ್ಟಿಕೋನ ಏನೆಂಬುದನ್ನು ಸಂಪ್ರದಾಯಸ್ಥರಿಗೆ ಅರ್ಥೈಸಲು ನಾವು ಕಷ್ಟಪಡಬೇಕು. ಅವರನ್ನು ಅದಕ್ಕಾಗಿ ಒತ್ತಾಯಿಸಬೇಕು. ಬದಲಾವಣೆಗೆ ಪ್ರೇರೇಪಿಸಬೇಕು. ದೇಶದ ಒಳಿತಿಗೆ ಅದು ಅತ್ಯಗತ್ಯವಾಗಿದೆ.ʼ
ಸಾವರ್ಕರ್‌ ಸಾಮಾನ್ಯವಾಗಿ ಬಳಸುವ ಭಾಷೆಯನ್ನು ಇಲ್ಲಿ ಬಳಸಿಲ್ಲ. ಹಿಂಸಾತ್ಮಕವಾದ ತನ್ನ ಶೈಲಿಯನ್ನು ಅದುಮಿಟ್ಟು ಅಹಿಂಸೆಯ ಮತ್ತು ಸ್ನೇಹದ ಭಾಷೆಗೆ ತನ್ನನ್ನು ತಾನು ಒತ್ತಾಯಪೂರ್ವಕವಾಗಿ ತಂದು ನಿಲ್ಲಿಸಲು ಪ್ರೇರಣೆಯಾಗಿರುವುದು ಆಳದಲ್ಲಿ ಬ್ರಾಹ್ಮಣ ಅಸ್ಮಿತೆಯೇ ಆಗಿದೆ. ತನ್ನ ಗೆಳೆಯರಿಗೆ, ಅವರಿಗೆ ತನ್ನನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೆ, ಸಾವಧಾನದಿಂದ ನಡೆದುಕೊಳ್ಳಬೇಕು ಎಂದು ಯಾರ ಪ್ರಚೋದನೆಯೂ ಇಲ್ಲದೆ ಸಾವರ್ಕರ್‌ ಅರ್ಥ ಮಾಡಿಕೊಳ್ಳುತ್ತಾರೆ. ಕಾರಣ, ಅವರ ಮೇಲುಗೈ ಪ್ರಾಬಲ್ಯವನ್ನು ನೆಲೆನಿಲ್ಲಿಸಲೆಂದೇ ತಾನು ಹೋರಾಡುತ್ತಿರುವುದು ಎಂಬುದು ಸಾವರ್ಕರ್‌ಗೆ ಸ್ಪಷ್ಟವಾಗಿ ಗೊತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page