ಸಂಪ್ರದಾಯವಾದಿ ಬ್ರಾಹ್ಮಣರೊಂದಿಗಿನ ಈ ತಿಕ್ಕಾಟವನ್ನೇ ಬಹುತೇಕ ಸಂದರ್ಭಗಳಲ್ಲಿ ವೈಚಾರಿಕತೆ ಎಂದು ಕರೆಯುತ್ತಿರುವುದು. ಅಂದರೆ, ಸಂಪ್ರದಾಯವಾದಿ ಬ್ರಾಹ್ಮಣರ ಆಚಾರಗಳನ್ನು ನಿರಾಕರಿಸುವುದೇ ಇಲ್ಲಿ ವೈಚಾರಿಕತೆ ಎಂದು ಗುರುತಿಸುತ್ತಿರುವುದು. ಸಾವರ್ಕರ್ ಎಲ್ಲೂ ಶೃತಿ-ಸ್ಮೃತಿ-ಪುರಾಣಗಳನ್ನು ವಿರೋಧಿಸಲಿಲ್ಲ ಎಂದು ಮಾತ್ರವಲ್ಲ, ತನ್ನ ಬದುಕಿನುದ್ದಕ್ಕೂ ಅವನ್ನು ಬಳಸಿಕೊಂಡಿದ್ದರು.
ನಾವು ಈಗಾಗಲೇ ಗಮನಿಸಿದಂತೆ ಪುನರಾವರ್ತಿತ ವಾದ ಸರಣಿಗಳ ಮೂಲಕ ನಿರ್ಮಿಸಿದ ಕೃತಿ ಹಿಂದುತ್ವ. ಈ ಪುನರಾವರ್ತನೆಗೆ ಒಂದು ಕಾರಣ, ತನ್ನ ವಿಚಾರವನ್ನು ಹೇರಲು ತೋರಿಸುವ ಆತುರ. ಪುನರಾವರ್ತಿಸುವುದೆಂದರೆ ಸತ್ಯವನ್ನು ತಯಾರಿಸುವುದು ಎಂಬ ಫ್ಯಾಸಿಸ್ಟ್/ನಾಜಿ ಶೈಲಿ. ಇದರ ಜೊತೆಗೆ ಗಮನಿಸಬೇಕಿರುವುದು, ಹಿಂದುತ್ವದ ವಿಚಾರಗಳನ್ನು ಮಂಡಿಸುತ್ತಿರುವುದು ಟ್ರಯಲ್ ಆಂಡ್ ಎರರ್ ಎಂಬ ರೀತಿಯಲ್ಲಿ. ಪ್ರತಿಬಿಂಬ ನಿರ್ಮಿತಿ ಇದರ ಅತಿಮುಖ್ಯ ಸಂಗತಿ. ಹೇರಲ್ಪಡುವ ಒಂದು ಪ್ರತಿಬಿಂಬ ನಿರ್ಮಿತಿ. ಎರಡು ಕೈಗಳಿರುವ ಒಂದು ದೇವರ ಚಿತ್ರವನ್ನು ಬಿಡಿಸಿ ಬಹಳ ಸಮಯದ ನಂತರ ಅದಕ್ಕೆ ಇನ್ನೆರಡು ಕೈಗಳನ್ನು ಸೇರಿಸಲು ಕಲಾವಿದ/ಕಲಾವಿದೆ ತೀರ್ಮಾನಿಸುವ ಹಾಗೆ ಹಿಂದುತ್ವಕ್ಕೆ ವಾರ್ಷಿಕ ಉಂಗುರಗಳನ್ನು ಸೇರಿಸುತ್ತಾ ಹೋಗುತ್ತಾರೆ ಸಾವರ್ಕರ್. ಇದರ ಜೊತೆಗೆ ನಲ್ವತ್ತು ಸಾವಿರ ವರ್ಷಗಳ ಇತಿಹಾಸವು ಹಿಂದೂ ಜನಾಂಗಕ್ಕೆ ಇದೆಯೆಂಬಂತಹ ಅತಿರಂಜಿತ ಮತ್ತು ಅತಿಸಾಹಸದ ಸುಳ್ಳೇ ಇತಿಹಾಸವನ್ನು ಕಟ್ಟಲು ಪ್ರಯತ್ನಿಸುತ್ತಾರೆ. ಒಬ್ಬ ಸತ್ಯಾನ್ವೇಷಕ ಇತಿಹಾಸಕಾರನ ದನಿ ಇಲ್ಲಿ ಕಾಣಸಿಗುವುದಿಲ್ಲ. ರಾಜಗುರುವಿನ ಪ್ರಶ್ನಿಸಲಾಗದಂತಹ ಸ್ಥಾನದಲ್ಲಿ ಕುಳಿತುಕೊಂಡು ಇತಿಹಾಸದ ಬಗೆಗಿನ ತನ್ನ ಆಜ್ಞೆಗಳನ್ನು ಹೊರಡಿಸುತ್ತಿದ್ದಾರೆ ಸಾವರ್ಕರ್.
ಹಿಂದುತ್ವದ ಆರಂಭದಲ್ಲಿ ಹೇಳಿದ ಹಿಂದೂಯಿಸಂನಿಂದ ತನ್ನ ಗುರಿಯಾದ ಹಿಂದುತ್ವ ಜನಾಂಗೀಯವಾದಕ್ಕೆ ಇರುವ ದೂರವನ್ನು ಸಾವರ್ಕರ್ ಪುನಹ ಇಲ್ಲಿ ಗುರುತು ಮಾಡುತ್ತಾರೆ. ಹಿಂದೂಯಿಸಂ ಎಂದರೆ ಅದೊಂದು ಬರಿಯ ಧಾರ್ಮಿಕ ಗುರುತು ಮಾತ್ರವಲ್ಲವೆಂದು ಸಾವರ್ಕರ್ ವಾದಿಸುತ್ತಾರೆ. ಹಲವಾರು ವೈರುಧ್ಯಗಳು ಮತ್ತು ಪರಸ್ಪರ ವಾಗ್ವಾದವೇರ್ಪಡುವ ವಿಚಾರಗಳ ಒಟ್ಟು ಮೊತ್ತವಾದ ವ್ಯವಸ್ಥೆ ಅದು. ಅಥವಾ ಅಂತಹ ಹಲವು ವ್ಯವಸ್ಥೆಗಳ ಒಟ್ಟು ಗಣ. ಆದರೆ, ಆ ವೈರುಧ್ಯಗಳನ್ನು ಮತ್ತು ಪರಸ್ಪರ ನಡೆಯುವ ವಾಗ್ವಾದಗಳನ್ನು ಮುಂದಿಟ್ಟುಕೊಂಡು ಹಿಂದೂರಾಷ್ಟ್ರವೇ ಇರಲಿಲ್ಲವೆಂದು ವಾದಿಸುವುದು ಮಾತ್ರ ತಪ್ಪು. ಅದಕ್ಕಿಂತಲೂ ದೊಡ್ಡ ತಪ್ಪು ವೈದಿಕವೂ ಅವೈದಿಕವೂ ಆದ ʼಸಹೋದರಿ ಕುಲʼಗಳಲ್ಲಿ ಯಾವುದಾದರೂ ಒಂದಕ್ಕೆ ಅಹಿಂದು ಎಂಬ ಮುದ್ರೆಯೊತ್ತುವುದು. ಈ ವಾದದ ಪ್ರಕಾರವೇ ಜೈನ, ಬೌದ್ಧ, ಸಿಕ್ಖ್ ಧರ್ಮದ ಜನರನ್ನು ಇತರ ಜಾತಿಗಳ ಜೊತೆಗೆ ಹಿಂದೂರಾಷ್ಟ್ರದ ಛತ್ರಿಯಡಿಯಲ್ಲಿ ಅತ್ಯಗತ್ಯವಾಗಿ ತುರುಕುತ್ತಿರುವುದು.
ತಿಲಕ್ ಹಿಂದೂಧರ್ಮಕ್ಕೆ, ಹಿಂದೂಯಿಸಮ್ಮಿಗೆ ನೀಡಿದ ವ್ಯಾಖ್ಯಾನವನ್ನು ಸಾವರ್ಕರ್ ಒಪ್ಪುತ್ತಾರೆ. ʼವೇದಗಳನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಆರಾಧನೆಗೆ ಒಂದು ಸಾಮಾನ್ಯ ನಿಯಮ ಇಲ್ಲ. ಇದುವೇ ಹಿಂದೂ ಧರ್ಮದ ವಿಶೇಷತೆ.ʼ ತಿಲಕ್ ಚಿತ್ರಮಯಜಗತ್ತು ಎಂಬ ಪತ್ರಿಕೆಯಲ್ಲಿ ಬರೆದ ಲೇಖನವೊಂದನ್ನು ಸಾವರ್ಕರ್ ಎತ್ತಿಕೊಳ್ಳುತ್ತಾರೆ. ಆ ಲೇಖನ ಹಿಂದುತ್ವದಲ್ಲಿ ಊರುವುದಿಲ್ಲದಿದ್ದರೂ ಹಿಂದೂಧರ್ಮದ ಬಗ್ಗೆ ಚರ್ಚಿಸುತ್ತದೆ. ಅದರಲ್ಲಿ ಒಂದು ವ್ಯಾಖ್ಯಾನವಿದೆ. ನಿಜ ಹೇಳಬೇಕೆಂದರೆ ಅದು ಹಿಂದೂಧರ್ಮದ ಪರಿಪೂರ್ಣ ವ್ಯಾಖ್ಯಾನವಲ್ಲ. ಹಿಂದುತ್ವಕ್ಕಿಂತಲೂ ಕೀಳಾದ ವ್ಯಾಖ್ಯಾನವದು. ಆದರೆ, ಅದು ಹಿಂದೂಧರ್ಮದ ಅತ್ಯಂತ ಜನಪ್ರಿಯವಾದ ಸನಾತನ ಧರ್ಮದ ವ್ಯಾಖ್ಯಾನ. ʼಶೃತಿ-ಸ್ಮೃತಿ-ಪುರಾಣೋಕ್ತ.ʼ ಶೃತಿ, ಸ್ಮೃತಿ ಮತ್ತು ಪುರಾಣಗಳು ಕಲಿಸಿಕೊಡುವಂತೆ.
ಇಲ್ಲಿಂದ ಸಾವರ್ಕರ್ ಹಿಂದೂ ಅಂದರೆ ಯಾರು ಎಂಬ ತನ್ನ ವ್ಯಾಖ್ಯಾನಕ್ಕೆ ಬರುತ್ತಾರೆ. ನಿಜದಲ್ಲಿ ಹಿಂದುತ್ವ ಎಂಬ ಈ ಪುಸ್ತಕದ ಮೂಲ ಇರುವುದು ಈ ವ್ಯಾಖ್ಯಾನದಲ್ಲಿ. ಹಿಂದೂ ಎಂದೆನಿಸಿಕೊಳ್ಳಲು ಬೇಕಾದ ಪ್ರಾಥಮಿಕ ಯೋಗ್ಯತೆಯೆಂದರೆ ʼಆತನಿಗೆ ಸಿಂಧೂ(ನದಿ)ಯಿಂದ ಸಿಂಧೂ(ಕಡಲು) ತನಕ ಹಬ್ಬಿಕೊಂಡಿರುವ ಭೂಮಿಯು ತನ್ನ ಪಿತೃಭೂಮಿ, ಮಾತೃಭೂಮಿಯಾಗಿರಬೇಕು.ʼ ಎರಡನೇ ಯೋಗ್ಯತೆ ʼಆತನಿಗೆ ಈ ಭೂಮಿ ಪಿತೃಭೂಮಿ ಮಾತ್ರವಲ್ಲ, ಪುಣ್ಯಭೂಮಿಯೂ ಆಗಿರಬೇಕು.ʼ
ಹಿಂದೂವೆಂದರೆ ಸಿಂಧೂನದಿಯಿಂದ ಹಿಡಿದು ಸಮುದ್ರದವರೆಗಿನ ಭೂಮಿಯು ಪಿತೃಭೂಮಿ ಮತ್ತು ಪುಣ್ಯಭೂಮಿಯಾಗಿರುವವನು ಎಂದು ಹೇಳುವ ಸಾವರ್ಕರ್ ಅವರ ಈ ವ್ಯಾಖ್ಯಾನವು ಬರೀ ಹಿಂದೂ ಜನಾಂಗೀಯ ವಾದವನ್ನು ಗಟ್ಟಿಗೊಳಿಸಲು ಮಾತ್ರವಲ್ಲ ಬಳಸುತ್ತಿರುವುದು. ಇದು ಹಿಂದೂರಾಷ್ಟ್ರದ ಪೌರತ್ವ ನಿಯಮವೂ ಆಗಿರುತ್ತದೆ ಎಂಬರ್ಥದಲ್ಲಿ ಇದನ್ನು ಮಂಡಿಸುತ್ತಿದ್ದಾರೆ. ಇದರಂತೆ ಹಿಂದೂವಾಗಿ ಜನಿಸಿ ಇಸ್ಲಾಂ ಧರ್ಮ ಸ್ವೀಕರಿಸಿದ ವ್ಯಕ್ತಿಯೂ ಪರದೇಸಿಯಾಗುತ್ತಾನೆ. ಹೀಗಿರುವಾಗ ತಲೆತಲಾಂತರದಿಂದ ಇಲ್ಲಿ ಬದುಕುತ್ತಿರುವ ಮುಸ್ಲಿಮರು ಮತ್ತು ಕ್ರೈಸ್ತರ ಬಗ್ಗೆ ಹೇಳಬೇಕಾಗಿಲ್ಲವಲ್ಲ. ಅವರ ಪುಣ್ಯಭೂಮಿಯು ಮಕ್ಕಾ, ಮದೀನಾ ಅಥವಾ ವ್ಯಾಟಿಕನ್, ಜೆರುಸಲೇಮ್ ಆಗಿರುವ ತನಕವೂ ಅವರು ಈ ಪೌರತ್ವದ ಕಲ್ಪನೆಯ ಭಾಗವಾಗುವುದೇ ಇಲ್ಲ. ಅವರ ದೇಶಪ್ರೇಮ ಹುಸಿಯಾದದ್ದೆಂದು ಸಾವರ್ಕರ್ ಗಟ್ಟಿದನಿಯಲ್ಲಿ ಹೇಳುತ್ತಾರೆ.
ಧರ್ಮಾಧಾರಿತ ದೇಶಗಳಲ್ಲಿ ಹೊರತು ಪಡಿಸಿದರೆ, ಆಧುನಿಕ ಪ್ರಜಾಪ್ರಭುತ್ವ ಹೊಂದಿರುವ ಯಾವ ದೇಶದಲ್ಲೂ ಈ ರೀತಿಯ ಪೌರತ್ವ ನಿಯಮಗಳಿಲ್ಲ. ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಕ್ರೂರ ದಾಳಿಯಿದು. ರಾಷ್ಟ್ರೀಯತೆಯೊಂದಿಗೆ ಯಾವ ಸಂಬಂಧವೂ ಇಲ್ಲದ ಪುಣ್ಯಭೂಮಿ ಎಂಬ ಕಲ್ಪನೆಯನ್ನು ರಾಷ್ಟ್ರೀಯತೆಯೊಂದಿಗೆ ಗಂಟು ಹಾಕಲು ಇಲ್ಲಿ ಸಾವರ್ಕರ್ ಶ್ರಮಿಸುತ್ತಿದ್ದಾರೆ. ಏಕದೇವ ವಿಶ್ವಾಸಿಗಳಿಗೂ ಬಹುದೈವಾರಾಧಕರಿಗೂ ನಾಸ್ತಿಕರಿಗೂ ಇಲ್ಲಿ ಜಾಗವಿದೆಯೆಂದು ಹೇಳುವ ಸಾವರ್ಕರ್ ಮುಸ್ಲಿಮರನ್ನು ಮತ್ತು ಕ್ರೈಸ್ತರನ್ನು ಹೊರದಬ್ಬುತ್ತಾರೆ. ಸಿಕ್ಖರು ಮತ್ತು ಬೌದ್ಧರನ್ನು ಒಳಗೊಳ್ಳುತ್ತಾರೆ. ಸಾವರ್ಕರ್ ಬರೆಯುತ್ತಾರೆ. ʼಇದುವೇ ಹಿಂದುತ್ವದ ಮೂಲಭೂತ ತತ್ವಗಳು. ಒಂದು ಸಮಾನ ರಾಷ್ಟ್ರ, ಒಂದು ಸಮಾನ ಜಾತಿ, ಒಂದು ಸಮಾನ ಸಂಸ್ಕೃತಿ.ʼ ಇಲ್ಲಿ ರಾಷ್ಟ್ರ ಮತ್ತು ಜಾತಿ ಪಿತೃಭೂಮಿ ಎಂಬ ಕಲ್ಪನೆಯೊಂದಿಗೆ ಹೊಂದಿಕೊಳ್ಳುತ್ತದೆ. ಅದೇ ಹೊತ್ತು ಸಂಸ್ಕೃತಿ ಎಂಬುದು ಪುಣ್ಯಭೂಮಿ ಎಂಬ ಕಲ್ಪನೆಯೊಂದಿಗೆ. ಪೌರತ್ವ ಎಂಬ ಪ್ರಜಾಪ್ರಭುತ್ವ ಕಲ್ಪನೆಯನ್ನು ಬುಡಮೇಲು ಮಾಡಿಕೊಂಡು, ಸಾವರ್ಕರ್ ಅವರ ಈ ತತ್ವವನ್ನು ಆಧಾರವಾಗಿಟ್ಟುಕೊಂಡು ಇಂಡಿಯನ್ ಪಾರ್ಲಿಮೆಂಟಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮಂಡಿಸಲಾಯಿತು ಎಂದು ಅರ್ಥ ಮಾಡಿಕೊಳ್ಳಲು ಬಹಳ ಶ್ರಮವೇನು ಬೇಕಾಗುವುದಿಲ್ಲ.
ಹೀಗೆ, ಸಿಂಧೂ ನದಿಯಿಂದ ಹಿಡಿದು ಹಿಂದೂ ಮಹಾಸಾಗರದವರೆಗಿನ ಭೂಮಿಯು ಪಿತೃಭೂಮಿ ಮತ್ತು ಪುಣ್ಯಭೂಮಿಗಳಾಗಿರುವ ಜನರ ಒಂದು ಜನಾಂಗೀಯ ರಾಜಕಾರಣ ಮತ್ತು ಜನಾಂಗೀಯ ರಾಷ್ಟ್ರದ ಕಲ್ಪನೆಯನ್ನು ಸಾವರ್ಕರ್ ಮುಂದಿಡುತ್ತಿರುವುದು. ಹಿಂದುತ್ವ ರಾಜಕಾರಣದ ಕುರಿತು ಅಧ್ಯಯನ ನಡೆಸುವಾಗ ಈ ಅರಿವು ಅತಿ ಮುಖ್ಯವಾಗಿ ಇರಬೇಕಾಗುತ್ತದೆ. ಪಾಕಿಸ್ತಾನದಂತಹ ಧರ್ಮಾಧಾರಿತ ದೇಶದಲ್ಲೂ ಇಂತಹದ್ದೊಂದು ಪೌರತ್ವ ಕಲ್ಪನೆಗೆ ನೆಲೆ ಕಂಡುಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ, ಪಾಕಿಸ್ತಾನದ ಮುಸ್ಲಿಮರ ಪುಣ್ಯಭೂಮಿಯಾದ ಮಕ್ಕಾ ಮದೀನಾಗಳು ಅವರ ಭೌಗೋಳಿಕ ವ್ಯಾಪ್ತಿಯೊಳಗಡೆ ಬರುವುದೇ ಇಲ್ಲ. ಅಂದರೆ, ಸಾವರ್ಕರ್ ತನ್ನ ಪ್ರಬಂಧದ ಮೂಲಕ ಹೇಳುತ್ತಿರುವುದು ಎರಡು ರೀತಿಯ ವಸಾಹತೀಕರಣಗಳ ಬಗ್ಗೆ. ಒಂದು ಭೂ ವಸಾಹತು. ಅಂದರೆ, ಸಿಂಧೂವಿನಿಂದ ಹಿಡಿದು ಸಮುದ್ರದ ತನಕದ ಭೂಪ್ರದೇಶದ ಅಧಿಕಾರವನ್ನು ಹಿಂದೂ ಜನಾಂಗಕ್ಕೆ ನೀಡಬೇಕು. ಎರಡು, ಹೊಸತೊಂದು ಪೌರತ್ವ ನಿಯಮವನ್ನು ತಂದು ಆ ಭೂಪ್ರದೇಶದಲ್ಲಿ ವಾಸಿಸುವ ಸೆಮೆಟಿಕ್ ಧರ್ಮಾನುಯಾಯಿಗಳನ್ನು ಹೊರದಬ್ಬಬೇಕು. ಅದೇ ಹೊತ್ತು, ಹಿಂದೂ ರಾಜಕಾರಣದ ಛತ್ರಿಯಡಿಗೆ ಸನಾತನ ಹಿಂದೂಗಳ ಜೊತೆಗೆ ಅವೈದಿಕ ಪರಂಪರೆಯಲ್ಲಿ ಬರುವವರನ್ನೂ, ಸಿಕ್ಖ್, ಜೈನ, ಸ್ಥಳೀಯ ವಿಭಾಗಗಳಲ್ಲಿ ಬರುವವರನ್ನೂ, ಸನಾತನ ಹಿಂದೂಧರ್ಮದ ವಿರುದ್ಧವಿರುವವರನ್ನೂ ತಂದು ಸೇರಿಸಬೇಕು. ಅಂದರೆ ಹಿಂದೂ ಜನಾಂಗೀಯತೆಯ ಅಡಿಗೆ. ಪುರಾತನ ಚಾತುರ್ವರ್ಣ ಪದ್ಧತಿಯಲ್ಲಿ ನಂಬಿಕೊಂಡ ಸಂಪ್ರದಾಯಸ್ಥ ಸನಾತನ ಹಿಂದೂಗಳಿಗಿಂತ ಚೂರು ಆಧುನಿಕವಾದ ಪ್ರಜಾಸತ್ತಾತ್ಮಕ ಕಲ್ಪನೆಯನ್ನು ಮುಂದಿಡುತ್ತಿದ್ದಾರೆ. ಅದರ ಹೊರಗಿರುವವರೊಂದಿಗೆ ಫ್ಯಾಸಿಸ್ಟ್ ಧೋರಣೆ ಹೊಂದುವುದು. ಸಾವರ್ಕರ್ ಬರೆಯುವುದನ್ನು ನೋಡಿ.
ʼಒಂದೇ ರಕ್ತ ಮತ್ತು ಒಂದೇ ಸಂಸ್ಕೃತಿಯಿಂದ ಕಟ್ಟಿಕೊಂಡ ಚರಿತ್ರೆಯ ಮೂಲಕ ತಮ್ಮ ಪಿತೃಭೂಮಿಯೂ ಪುಣ್ಯಭೂಮಿಯೂ ಆಗಿ ಬದಲಾದ ಇಂಡಿಯಾವನ್ನು ತಮ್ಮ ಕರ್ಮಭೂಮಿಯಾಗಿಯೂ ಕಂಡಿರುವ ಮೂವತ್ತು ಕೋಟಿ ಜನಗಳಿಗೆ ಪೂರ್ತಿ ಲೋಕದೊಂದಿಗೆ ತಮ್ಮ ನಿಬಂಧನೆಗಳನ್ನು ಆಜ್ಞಾಪಿಸಲು ಸಾಧ್ಯವಾಗುತ್ತದೆ. ಮನುಷ್ಯಕುಲವೇ ಇಡಿಯಾಗಿ ಆ ಶಕ್ತಿಯನ್ನು ಎದುರಿಸಲಿರುವ ದಿನವೊಂದು ಬರಲಿದೆ.ʼ
ಇದುವೇ ಬ್ರಾಹ್ಮಣಿಸಮ್ಮಿನ ಜನಾಂಗೀಯ ರಾಷ್ಟ್ರ. ಹಿಂದುತ್ವದ ಪರಮೋನ್ನತ ತತ್ವ. ಇದನ್ನು ಸಂಪ್ರದಾಯವಾದಿ ಬ್ರಾಹ್ಮಣ ರಾಜಕಾರಣದ ಮೇಲುಗೈ ರಾಜಕಾರಣದೊಂದಿಗೆ ತುಲನೆ ಮಾಡಿಕೊಂಡರೆ, ವ್ಯತ್ಯಾಸ ಗುರುತಿಸಬಹುದು. ಅದು ತನ್ನ ಮೂಲದಲ್ಲಿ ಸಂಪ್ರದಾಯವಾದಿ ಬ್ರಾಹ್ಮಣ ರಾಜಕಾರಣವನ್ನು ಆವಾಹಿಸಕೊಂಡಿದ್ದರೂ ಹಿಂದುತ್ವವೆಂದರೆ ಅದು ಮಾತ್ರವಲ್ಲ. ಹಿಂದುತ್ವವನ್ನು ಸಂಪ್ರದಾಯವಾದಿ ಬ್ರಾಹ್ಮಣ ರಾಜಕಾರಣವಾಗಿ ಓದುವವರಿಗೆ ಅದನ್ನು ಸರಿಯಾಗಿ ಎದುರಿಸಲು ಸಾಧ್ಯವಾಗದೇ ಹೋಗುವುದು ಕೂಡ ಈ ಕಾರಣದಿಂದಲೇ. ಹಿಂದುಳಿದ ಜಾತಿಗಳು ಮತ್ತು ದಲಿತರ ಕಡೆಗೆ ಅದಕ್ಕೊಂದು ಕಾಲುದಾರಿ ಇದೆ. ಹಿಂದುಳಿದ ಜಾತಿಯ ನರೇಂದ್ರ ಮೋದಿ ಮತ್ತು ಜೈನನಾದ ಅಮಿತ್ ಷಾ ಸೇರಿಕೊಂಡು ಬ್ರಾಹ್ಮಣ ರಾಜಕಾರಣವನ್ನು ಜಾರಿಗೊಳಿಸುವಂತೆ ನೋಡಿಕೊಳ್ಳುವಂತಹ ರಾಜಕೀಯ ದರ್ಶನವೊಂದು ಅದರಲ್ಲಿದೆ. ಅದು ಧರ್ಮ, ಜಾತಿ ಮೊದಲಾದ ಸ್ತರಗಳನ್ನು ರಾಜಕೀಯ ಯೂನಿಟ್‌ಗಳಾಗಿ ಪರಿಗಣಿಸುತ್ತದೆ. ಆದ್ದರಿಂದ, ದಲಿತರನ್ನೂ ಆದಿವಾಸಿಗಳನ್ನೂ ಹಿಂದುಳಿದ ಜಾತಿಗಳನ್ನೂ ಸಿಕ್ಖರನ್ನೂ ಜೈನರನ್ನೂ ಬೌದ್ಧರನ್ನೂ ಬೋಹ್ರಾ, ಖೋಜಾ ತರಹದ ಇಸ್ಲಾಮಿಕ್ ಗಂಧವಿರುವವರನ್ನೂ ಮೈತ್ರಿಯಲ್ಲಿ ಸೇರಿಸಿಕೊಂಡು ತಮ್ಮ ಜನಾಂಗೀಯ ರಾಜಕಾರಣಕ್ಕೆ ಸೇರಿಸಲು ಅನುಮತಿ ನೀಡುವ ದರ್ಶನವೇ ಹಿಂದುತ್ವವೆಂದು ಅರಿತುಕೊಳ್ಳಬೇಕಾಗಿರುವುದು ಅದರ ಟೀಕಾಕಾರಿಗೆ ಅನಿವಾರ್ಯವಾಗಿದೆ. ಅದೇ ಹೊತ್ತು ಜನಾಂಗೀಯ ರಾಜಕಾರಣದ ಭಾಗವಾಗುವ ಮೂಲಕ ಆ ಮಿತ್ರಪಕ್ಷಗಳಿಗೆ ತಮ್ಮ ಚರಿತ್ರೆಯೂ ನಷ್ಟ ಹೊಂದುತ್ತದೆ. ಈ ಮೇಲೆ ಹೇಳಿದ ಹಿಂದುತ್ವ ರಾಜಕಾರಣದ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಅದು ಅದರೊಳಗಿನ ವೈರುಧ್ಯಗಳ ಮೂಲಕ ಟೀಕಾಕಾರರನ್ನು ದಿಕ್ಕೆಡಿಸುತ್ತದೆ.
ಉದಾಹರಣೆಗೆ, ಹಿಂದುತ್ವ ರಾಜಕಾರಣದ ವಿಷಯದಲ್ಲಿ ಬಹಳಷ್ಟು ಚರ್ಚೆಯಾಗುವ ʼಗೋ ರಾಜಕಾರಣʼವನ್ನು ಒಮ್ಮೆ ನೋಡೋಣ. ಹಾಗೆ ನೋಡಿದರೆ, ತಿಲಕ್ ಮತ್ತು ಸಾವರ್ಕರ್ ಅವರುಗಳ ಮರಾಠ ಅಥವಾ ಚಿತ್ಪಾವನ ಭೂಮಿಕೆಯಾಚೆಗಿನ ಹಿನ್ನೆಲೆಯಲ್ಲಿ ರೂಪುಗೊಂಡ ದಯಾನಂದ ಸರಸ್ವತಿ ಅವರ ಆರ್ಯಸಮಾಜ ಗೋ ರಾಜಕಾರಣವನ್ನು ಮುನ್ನೆಲೆಗೆ ತಂದು ವ್ಯಾಪಿಸಿರುವುದು. ಗೋ ಸಂರಕ್ಷಣಾ ಸಭಾಗಳನ್ನು ಉತ್ತರ ಭಾರತದ ಬಹುತೇಕ ಕಡೆಗಳಲ್ಲಿ ಸ್ಥಾಪಿಸಲಾಗಿತ್ತು. ಈ ಸಂಗತಿಗಳನ್ನೆಲ್ಲ ನಾವು ಈಗಾಗಲೇ ಗಮನಿಸಿದ್ದೇವೆ. ಭಾರತದಲ್ಲಿ ಕೃಷಿ ಸಂಸ್ಕೃತಿ ಮತ್ತು ಕೃಷಿ ಉತ್ಪಾದನೆಯೊಂದಿಗೆ ಹೊಂದಿಕೊಂಡ ಚರಿತ್ರೆಯಲ್ಲಿ ಗೋವು ಪ್ರತ್ಯಕ್ಷವಾಗುವುದು. ನಂತರ ಅದು ಸಾಂಸ್ಕೃತಿಕ ಚರಿತ್ರೆಯ ಭಾಗವಾಗಿ ಬದಲಾಗುತ್ತದೆ. ಸನಾತನ ಹಿಂದೂ ಧರ್ಮವೆಂದು ಕರೆಯಲ್ಪಡುವ ಬ್ರಾಹ್ಮಣ ಧರ್ಮ ಕೇಂದ್ರೀಕೃತ ಹಿಂದೂ ಧರ್ಮದ ಪುನರುಜ್ಜೀವನದ ಭಾಗವಾಗಿ ಗೋವಿಗೆ ಜಾತಿ, ಧರ್ಮಗಳನ್ನು ದಯಪಾಲಿಸಲಾಗಿತ್ತು. ಆರ್ಯಸಮಾಜ ಕೂಡ ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ಮುಷ್ಠಿಗೆ ಸಿಗುವ ಸಂಗತಿಯಾಗಿರಲಿಲ್ಲ. ಬ್ರಾಹ್ಮಣ್ಯದ ಕೇಂದ್ರ ಮತ್ತು ಅದನ್ನು ಸುತ್ತುವರಿದಿರುವ ಸವರ್ಣ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಸಂಪ್ರದಾಯವಾದಿ ಬ್ರಾಹ್ಮಣ್ಯದ ಸುತ್ತಲೇ ತಿರುಗುತ್ತಿದ್ದರೆ ಸಾಲದು ಎಂದು ಆರ್ಯಸಮಾಜದ ಪ್ರವರ್ತಕರು ಕಂಡುಕೊಂಡಿದ್ದರು. ವೇದಗಳಿಗೆ ಮರಳಿರಿ ಎಂಬ ಘೋಷಣೆಯನ್ನು ಅವರು ಎತ್ತಿಕೊಂಡಿದ್ದರು. ಆದರೂ, ಅವರ ಸುಧಾರಣಾ ಚಟುವಟಿಕೆಗಳೆಲ್ಲವೂ ಸನಾತನ ಹಿಂದೂ ಧರ್ಮದ ಪುನರುಜ್ಜೀವನ ಎಂಬಲ್ಲಿಯೇ ನಿಂತುಕೊಂಡಿತ್ತು. ಅದರೊಳಗಡೆ ಗೋವು ಮೇಯುತ್ತಿತ್ತು.
ಆದರೆ ಸಾವರ್ಕರ್ ಅವರ ಹಿಂದುತ್ವ ಎಂಬ ಜನಾಂಗೀಯ ರಾಜಕಾರಣಕ್ಕೆ ಬರುವಾಗ ವೈದಿಕರು ಮತ್ತು ಅವೈದಿಕರೆಲ್ಲರೂ ಹಿಂದೂ ಧರ್ಮದೊಳಗಡೆ ಬಂದು ಬಿಡುತ್ತಾರೆ. ಹಿಂದುತ್ವ ಎಂಬುದು ಧರ್ಮವಲ್ಲ, ಅದೊಂದು ಚರಿತ್ರೆಯೆಂದು ಸಾವರ್ಕರ್ ಮತ್ತೆ ಮತ್ತೆ ಪುನರಾವರ್ತಿಸಿಕೊಂಡು ಹೇಳುವುದಕ್ಕೆ ಕಾರಣ, ಈ ಜನಾಂಗೀಯ ರಾಜಕಾರಣವನ್ನು ಸಾಧಿಸಲೆಂದೇ ಆಗಿದೆ. ಚರಿತ್ರೆಯನ್ನು ರೂಪಕವಾಗಿಸಿಕೊಂಡು ಬರೆದ ಕಲ್ಪನಾತ್ಮಕ ಕೃತಿಯೇ ಹಿಂದುತ್ವ. ಆದ್ದರಿಂದಲೇ ಹಿಂದುತ್ವ ರಾಜಕಾರಣದ ಜನಾಂಗೀಯ ವಿಭಾಗದ ಒಂದು ಮುಖ್ಯ ಘಟಕವಾದ ಸನಾತನ ಬ್ರಾಹ್ಮಣ್ಯದ ರಾಜಕೀಯ ಪ್ರಯೋಗವೇ ಗೋ ರಾಜಕಾರಣ. ಸಾವರ್ಕರ್ ಮಾತಿನಲ್ಲೇ ಹೇಳುವುದಾದರೆ, ʼಅವೈದಿಕ ಸಮುದಾಯಗಳʼ ಭೌಗೋಳಿಕ ಪ್ರದೇಶದಲ್ಲಿ ಗೋ ರಾಜಕಾರಣವನ್ನು ಎತ್ತುವುದು ಹಿಂದುತ್ವದ ಮೂಲಭೂತ ತತ್ವಗಳಲ್ಲಿ ಇಲ್ಲವೇ ಇಲ್ಲ. ಸಾವರ್ಕರ್ ಗೋ ರಾಜಕಾರಣದ ಕುರಿತು ಬರೆದ ಲೇಖನವನ್ನು ಗಮನಿಸಿದರೆ ಅದು ಮನದಟ್ಟಾಗುತ್ತದೆ. ಮರಾಠಿ ಪತ್ರಿಕೆ ಭಾಲದಲ್ಲಿ ಅದರ ಸಂಪಾದಕರು ಬರೆದ ಟಿಪ್ಪಣಿಗೆ ಉತ್ತರವಾಗಿ ಸಾವರ್ಕರ್ ತನ್ನ ಗೋ ರಾಜಕಾರಣದ ಕುರಿತಾದ ಅಭಿಪ್ರಾಯವನ್ನು ಬರೆಯುತ್ತಾರೆ. ಸಂಪಾದಕರು ತನ್ನ ಟಿಪ್ಪಣಿಯಲ್ಲಿ ಹಿಂದು ಎಂದರೆ ಯಾರು ಎಂಬ ಪ್ರಶ್ನೆಗೆ ಉತ್ತರವಾಗಿ ʼಗೋವನ್ನು ತನ್ನ ಮಾತೆಯಾಗಿ ಪರಿಗಣಿಸುವ ವ್ಯಕ್ತಿʼ ಎಂದು ಬರೆಯುತ್ತಾರೆ. ಅದಕ್ಕೆ ಸಾವರ್ಕರ್ ಉತ್ತರ ಬರೆಯುವುದು ಇನ್ನೊಂದು ಮರಾಠಿ ಪತ್ರಿಕೆ ಕಿರ್ಲೋಸ್ಕರ್ ಪತ್ರಿಕೆಯಲ್ಲಿ. ʼಗೋವು ಯಾರಿಗಾದರು ಮಾತೆಯಾಗುವುದೇ ಆಗಿದ್ದರೆ ಅದು ಹೋರಿಗೆ ಮಾತ್ರ. ಹಿಂದೂಗಳಿಗೆ ಅಲ್ಲವೇ ಅಲ್ಲ. ಗೋವಿನ ಕಾಲಿನಡಿಯಲ್ಲಿ ಹಿಂದುತ್ವವನ್ನು ತಂದು ನಿಲ್ಲಿಸುವುದಾದರೆ ಒಂದು ಸಣ್ಣ ಕಂಪನದ ಸೂಚನೆ ಸಿಕ್ಕರೂ ಅದು ನುಚ್ಚು ನೂರಾಗಿ ಹೋಗುತ್ತದೆ.ʼ ಎಂದು ಸಾವರ್ಕರ್ ಬರೆಯುತ್ತಾರೆ. ಇಲ್ಲಿ ಧಾರ್ಮಿಕತೆಯ ಭಾವನಾತ್ಮಕತೆಯ ಮೇಲೆ ಬೆಳೆಯುವ ರಾಜಕಾರಣದ ದುರ್ಬಲತೆಯ ಬಗ್ಗೆ ಸಾವರ್ಕರ್ ಮುನ್ನೆಚ್ಚರಿಕೆ ನೀಡುತ್ತಿದ್ದಾರೆ. ʼಗೋವು ಒಂದು ಉಪಕಾರಿ ಪ್ರಾಣಿ ಹೌದು. ಆದರೆ ಅದನ್ನು ಪೂಜಿಸುವುದರಲ್ಲಿ ಅರ್ಥವಿಲ್ಲ. ಅತಿಮಾನುಷ ಶಕ್ತಿಯಿರುವ ದೈವಿಕ ಶಕ್ತಿಯನ್ನು ಆರಾಧಿಸುವುದರಲ್ಲಿ ಮಾತ್ರವೇ ತಿರುಳಿರುವುದು. ಎಲ್ಲ ಅರ್ಥದಲ್ಲೂ ಬರಿಯ ಮೃಗವಾದ ಒಂದನ್ನು ಆರಾಧಿಸುವುದರಿಂದ ಮನುಷ್ಯನ ಘನತೆ ಕುಗ್ಗುತ್ತದೆ. ಗೋಪೂಜೆ ಎಂಬ ಮೂರ್ಖತನವನ್ನು ಈ ಕ್ಷಣವೇ ತೊರೆಯಬೇಕು. ಯಾಕೆಂದರೆ ಅದು ಮತಿಹೀನತೆಯಾಗಿದೆ.ʼ ಹಸು ಸಾಕಾಣಿಕೆಯಲ್ಲಿ ಸಾವರ್ಕರ್ ತಪ್ಪೇನೂ ಕಾಣುವುದಿಲ್ಲ. ಅದನ್ನು ರಾಷ್ಟ್ರೀಯ ಮಟ್ಟದಲ್ಲಿ ಕೈಗೆತ್ತಿಕೊಳ್ಳಬೇಕಾಗಿರುವುದೂ ಹೌದು. ಅಂದರೆ ಪಶುಸಂರಕ್ಷಣೆ ತಪ್ಪಲ್ಲ. ಆದರೆ, ಗೋಪೂಜೆಯನ್ನು ವಿರೋಧಿಲೇಬೇಕು. ಪಶುವಿನ ಮೂತ್ರವನ್ನೂ ಕೆಲವೊಮ್ಮೆ ಸೆಗಣಿನ್ನೂ ಸೇವಿಸುವುದರ ವಿರುದ್ಧ ತನ್ನ ಪ್ರಬಂಧದಲ್ಲಿ ತಕರಾರು ಎತ್ತುತ್ತಾರೆ. ಇಂತಹ ಪದ್ಧತಿಗಳು ಭಾರತದಲ್ಲಿ ಹುಟ್ಟಿಕೊಂಡಿರುವುದು ಶಿಕ್ಷೆಗಳ ಭಾಗವಾಗಿ ಎಂದೂ ಬೊಟ್ಟು ಮಾಡುತ್ತಾರೆ. ಇದನ್ನು ಓದಿ ತನ್ನ ಮೇಲೆ ಧರ್ಮದ್ರೋಹದ ಆರೋಪ ಹೊರಿಸಿ ತಿರುಗಿ ಬೀಳಬಹುದಾದ ಸಂಪ್ರದಾಯವಾದಿ ಹಿಂದೂಗಳ ವಿರುದ್ಧ ಬರೆಯುವುದು ಹೀಗೆ. ʼನಿಮ್ಮ ಧರ್ಮದ್ರೋಹ ಅದಕ್ಕಿಂತ ಎಷ್ಟೋ ಪಾಲು ದೊಡ್ಡದಿದೆ. ನೋಡಿರಿಲ್ಲಿ, ಒಂದು ಹಸುವಿನ ಹೊಟ್ಟೆಯೊಳಗೆ ಮೂವತ್ತಮೂರು ಕೋಟಿ ದೇವರುಗಳನ್ನು ತುರುಕಿಟ್ಟಿರುವುದು.ʼ
ಸಾವರ್ಕರ್ ಹಿಂದುತ್ವವೆಂದರೆ ಅದು ಬರಿಯ ಧರ್ಮಾಧಾರಿತ ರಾಜಕಾರಣವಲ್ಲವೆಂದು ಅರ್ಥ ಮಾಡಿಕೊಳ್ಳಲು ಇದು ಸಹಕಾರಿಯಾಗುತ್ತದೆ. ಅದೊಂದು ಜನಾಂಗೀಯ ರಾಜಕಾರಣ. ಅದಕ್ಕೆ ಎದುರಿಸಬೇಕಿರುವ ಅತ್ಯಂತ ದೊಡ್ಡ ಸವಾಲು ಭಾರತದ ಬಹುತ್ವ ಸಂರಚನೆ. ಆ ಸಂರಚನೆಯನ್ನು ಧಾರ್ಮಿಕ ಭಾವನಾತ್ಮಕ ಬಿಂಬಗಳ ಮೂಲಕ ಎದುರಿಸಲು ಹೋದರೆ, ಮುಂದೊಂದು ದಿನ ವಿದ್ಯೆ ಮತ್ತು ಅರಿವು ಪಡೆಯುವ ಸಮೂಹ ಅದನ್ನು ನುಚ್ಚುನೂರು ಮಾಡುತ್ತದೆ ಎಂದು ಸಾವರ್ಕರ್ ಹೆದರಿದ್ದರು. ಆದ್ದರಿಂದ ಸತ್ಯೋತ್ತರ ಇತಿಹಾಸದಲ್ಲಿ ಹಸ್ತಕ್ಷೇಪ ಮಾಡಿಕೊಳ್ಳುವ ಫ್ಯಾಸಿಸ್ಟ್ ಶೈಲಿ ಮಾತ್ರವೇ ಉಳಿಯುತ್ತದೆ ಎಂದು ಸಾವರ್ಕರ್ ಬಲವಾಗಿ ನಂಬಿದ್ದರು.
ಇಂತಹದ್ದೊಂದು ಐತಿಹಾಸಿಕ ದೃಷ್ಟಿಕೋನದ ಮೂಲಕ ಭಾವನಾತ್ಮಕತೆಯು ಬ್ರಾಹ್ಮಣ ರಾಜಕಾರಣವನ್ನು ಹಿಮ್ಮೆಟ್ಟಿಸಿತು ಎಂದೂ ಸಾವರ್ಕರ್ ಹೇಳುತ್ತಾರೆ. ಮುಸ್ಲಿಂ ಸೈನಿಕರು ಹಲವರು ಸಂದರ್ಭಗಳಲ್ಲಿ ಹಿಂದೂ ದಾಳಿಗಳನ್ನು ಹಿಮ್ಮೆಟ್ಟಿಸಲು ಈ ʼಗೋ ಕವಚʼಗಳನ್ನು ಬಳಸಿಕೊಂಡಿದ್ದರು. ಹದಿನೆಂಟನೇ ಶತಮಾನದಲ್ಲಿ ಕಾಶಿಯ ವಿಮೋಚನೆಗೆ ಹೊರಟ ಮರಾಠಾ ನಾಯಕ ಮಲ್ಹಾರಾವ್ ಹೋಲ್ಕರ ಸೋಲಲು ಇದುವೇ ಕಾರಣವಾಗಿತ್ತು. ಗೋಹತ್ಯೆಗೆ ಹೆದರಿ ಹಿಂದೂಗಳು ಹಿಮ್ಮೆಟ್ಟಿದರು. ಒಂದು ಹಿಂದೂ ರಾಷ್ಟ್ರವನ್ನು ಹಿಂದುಯೇತರರು ಆಕ್ರಮಿಸಿಕೊಂಡಾಗ ಅವರನ್ನು ಸೋಲಿಸುವ ಯುದ್ಧದಲ್ಲಿ ಆಹಾರಕ್ಕೆ ತಾತ್ವಾರ ಉಂಟಾದರೆ ಪಶುವನ್ನು ಕೊಂದು ತಿನ್ನಬಹುದು ಎಂದು ಕೂಡ ಸಾವರ್ಕರ್ ಹೇಳುತ್ತಾರೆ. ಯಾಕೆಂದರೆ, ಅದರಲ್ಲಿ ಹಿಂದೂಗಳು ಸೋತರೆ ಇನ್ನಷ್ಟು ಮಂದಿರಗಳು ಧ್ವಂಸಗೊಳ್ಳುತ್ತವೆ. ಗೋಪೂಜೆ ಮಾಡುವ ಹಿಂದೂಗಳು ಮೂರ್ಖರಾದರೂ ಕೂಡ ಅವರು ಕ್ರೂರಿಗಳಲ್ಲ ಎಂದು ಸಾವರ್ಕರ್ ಅಭಿಪ್ರಾಯ ಪಡುತ್ತಾರೆ. ಯಾಕೆಂದರೆ ಉದ್ಧೇಶಪೂರ್ವಕ ಕೊಲೆಯಲ್ಲಿ ಒಂದು ಪ್ರಾಕೃತತನವಿದೆ. ಕೃತಘ್ನತೆಯೂ ಅಸುರತೆಯೂ ಇದೆ. ಆದ್ದರಿಂದ ಪಶುಸಂರಕ್ಷಣೆ ಮಾಡಬಹುದಾಗಿದೆ.
ಸಾವರ್ಕರ್ ಅವರ ಹಿಂದುತ್ವ ರಾಜಕಾರಣದ ಈ ವ್ಯತಿರಿಕ್ತತೆಯನ್ನು ಅರ್ಥ ಮಾಡಿಕೊಳ್ಳದ ಕಾರಣದಿಂದಲೇ ಇಂದಿನ ಹಲವು ಜಾತ್ಯಾತೀತ ಚಿಂತಕರು ಕೂಡ ಸಾವರ್ಕರ್ ಒಬ್ಬ ವೈಚಾರಿಕ ವ್ಯಕ್ತಿಯಾಗಿದ್ದರು ಎಂದು ಹೇಳುತ್ತಿರುವುದು. ಹಂದಿ ಮಾಂಸ ತಿನ್ನುತ್ತಿದ್ದ ಜಿನ್ನಾ ರೀತಿಯಲ್ಲಿ ಸಾವರ್ಕರ್ ಗೋಮಾಂಸ ತಿನ್ನುತ್ತಿದ್ದರು ಎಂದು ಕೂಡ ಹೇಳಲಾಗುತ್ತದೆ. ಸಾವರ್ಕರ್ ಅವರ ವೈಚಾರಿಕತೆ ಮತ್ತು ವೈಜ್ಞಾನಿಕ ಮನಸ್ಥಿತಿಗೆ ಉದಾಹರಣೆಯಾಗಿ ಬಲಪಂಥೀಯ ಚಿಂತಕರಲ್ಲಿ ಹಲವರು ಈ ಕೆಳಗಿನ ವಾದಗಳನ್ನು ಮಂಡಿಸುತ್ತಾರೆ. ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಇಂಡಿಯಾ ಟುಡೆ ಮುಂತಾದ ಕಡೆಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದ ಉದಯ್ ಮಹೂರ್ಕರ್ ಮತ್ತು ಚಿರಾಯು ಪಂಡಿತ್ ಜಂಟಿಯಾಗಿ ಬರೆದ ವೀರ್ ಸಾವರ್ಕರ್: ವಿಭಜನೆ ತಡೆಯಬಹುದಾಗಿದ್ದ ಮನುಷ್ಯ ಎಂಬ ಪುಸ್ತಕದ ಕುರಿತು ಈ ಮೊದಲು ನಾವು ಚರ್ಚಿಸಿದ್ದೆವು. ಅದರಲ್ಲಿ ರಾಷ್ಟ್ರೀಯವಾದ ಮತ್ತು ವೈಚಾರಿಕತೆ: ವಕ್ತಾರ ಮತ್ತು ಪ್ರವರ್ಕತ ಎಂಬ ಅಧ್ಯಾಯದಲ್ಲಿ ಸಾವರ್ಕರ್ ಅವರ ವೈಚಾರಿಕ ನಿಲುವುಗಳ ಕುರಿತು ಉದಯ್ ಮಹೂರ್ಕರ್ ಮತ್ತು ಚಿರಾಯು ಪಂಡಿತ್ ಅವರು ಹೇಳುವುದು ಈ ಕೆಳಗಿನಂತಿವೆ.
- ಸಾವರ್ಕರ್ ಸಂಸ್ಕೃತಿ ಸಂರಕ್ಷಣೆಗೆ ಅಲ್ಲ, ಬದಲಾಗಿ ಸಂಸ್ಕೃತಿ ಸಂವರ್ಧನೆಗಾಗಿ ಪ್ರಯತ್ನಿಸಿದರು. ಅಂದರೆ ಸಂಪ್ರದಾಯವಾದಿ ಬ್ರಾಹ್ಮಣರ ಹಾಗೆ ʼಶೃತಿ-ಸ್ಮೃತಿ-ಪುರಾಣೋಕ್ತʼಗಳನ್ನು ಸಂರಕ್ಷಿಸಲಲ್ಲ, ಅವನ್ನು ಸಮಕಾಲೀನವಾಗಿಸಲು ಶ್ರಮಿಸಿದರು.
- ಆದ್ದರಿಂದ ಆಚಾರ ವಿಚಾರಗಳನ್ನು ಆಧುನಿಕ ವೈಜ್ಞಾನಿಕತೆಯ ಒರೆಗಲ್ಲಿಗೆ ಹಚ್ಚಿನೋಡಬೇಕು ಮತ್ತು ರಾಷ್ಟ್ರಕ್ಕೆ ಒಳಿತಾಗುವ ಸಂಗತಿಗಳನ್ನು ಮಾತ್ರವೇ ಬೆಂಬಲಿಸಬೇಕು ಎಂಬುದು ಸಾವರ್ಕರ್ ನಿಲುವಾಗಿತ್ತು.
- ತಾನು ಮರಣ ಹೊಂದಿದರೆ ತನ್ನನ್ನು ವಿದ್ಯುತ್ ಚಿತಾಗಾರದಲ್ಲಿ ಸಂಸ್ಕಾರ ಮಾಡಬೇಕೆಂದು ಹೇಳಿದ್ದ ಆ ಕಾಲದ ಕೆಲವೇ ಕೆಲವು ರಾಜಕೀಯ ನಾಯಕರಲ್ಲಿ ಸಾವರ್ಕರ್ ಒಬ್ಬರಾಗಿದ್ದರು. ಅಷ್ಟೇ ಅಲ್ಲ, ತನ್ನ ಮೃತದೇಹವನ್ನು ಅಲ್ಲಿಗೆ ಹೊತ್ತುಕೊಂಡು ಹೋಗುವಾಗ ನಾಲ್ಕು ವರ್ಣಗಳ ಜನರೂ ಹೆಗಲು ನೀಡಬೇಕೆಂದೂ ಅದರಲ್ಲಿ ಒಬ್ಬ ದಲಿತನೂ ಇರಬೇಕೆಂದು ಆಜ್ಞಾಪಿಸಿದ್ದರು.
- ಹಿಂದೂ ಸಮುದಾಯದ ಬೆಳವಣಿಗೆಗೆ ಅಡ್ಡಲಾಗಿರುವ ಏಳು ನಿಷೇಧಗಳನ್ನು (ಸ್ಪರ್ಶ ಬಂಧಿ, ವೇದೋಕ್ತ ಬಂಧಿ, ರೊಟ್ಟಿ ಬಂಧಿ, ಬೇಟಿ ಬಂಧಿ, ವ್ಯವಸಾಯ ಬಂಧಿ, ಸಿಂಧೂ ಬಂಧಿ, ಶುದ್ಧಿ ಬಂಧಿ) ಸಾವರ್ಕರ್ ನಿರಾಕರಿಸಿದರು.
ಸಾವರ್ಕರ್ ವೈಚಾರಿಕ ವ್ಯಕ್ತಿಯಾಗಿದ್ದರೋ ಎಂಬುದನ್ನು ಆಳವಾಗಿ ಪರಿಶೋಧಿಸಬೇಕಾಗುತ್ತದೆ. ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಂ ತಿಲಕರ ಕಾಲದಿಂದಲೇ ಹೇಗೆ ಸಂಪ್ರದಾಯವಾದಿ ಬ್ರಾಹ್ಮಣರಿಗಿಂತ ಭಿನ್ನವಾಗಿತ್ತು ಎಂದು ನಾವು ಈಗಾಗಲೇ ನೋಡಿದೆವು. ಅದಕ್ಕೂ ಮೊದಲು ಚಿತ್ಪಾವನ ಬ್ರಾಹ್ಮಣರು, ಸಂಪ್ರದಾಯಸ್ಥ ಬ್ರಾಹ್ಮಣರಾಗಿದ್ದ ದೇಶಸ್ತ ಬ್ರಾಹ್ಮಣರನ್ನು ಹಿಂದಿಕ್ಕಿಕೊಂಡು ಹೇಗೆ ಸಾಮಾಜಿಕ ಚಲನಾತ್ಮಕತೆಯನ್ನು ಸಾಧಿಸಿದರು ಎಂಬುದನ್ನೂ ನೋಡಿದೆವು. ದೇಶಸ್ತ ಬ್ರಾಹ್ಮಣರು ಅವರ ʼಕುಲಧರ್ಮʼಗಳಲ್ಲಿ ಗಟ್ಟಿಯಾಗಿ ಆತುನಿಂತುಕೊಂಡಾಗ, ಒಂದು ರೀತಿಯಲ್ಲಿ ಅವರ ಸೇವಕರಾಗಿದ್ದ ಚಿತ್ಪಾವನ ಬ್ರಾಹ್ಮಣರು ಆಗ ಹೊಸದಾಗಿ ರೂಪುಗೊಳ್ಳುತ್ತಿದ್ದ ಮರಾಠಾ ಸಾಮ್ರಾಜ್ಯದ ಭಾಗವಾದರು. ಸಂಪ್ರದಾಯವಾದಿ ಬ್ರಾಹ್ಮಣ್ಯದ ಗಂಟು ಹರಿದುಕೊಂಡು ಬಡ್ಡಿ ವ್ಯಾಪಾರಿಗಳೂ, ವ್ಯಾಪಾರಿಗಳೂ, ಅಧಿಕಾರಿಗಳೂ ಆದರು. ಕೊನೆಗೆ ಮರಾಠಾ ಸಾಮ್ರಾಜ್ಯದ ಒಡೆಯರೂ ಆದರು. ಸಾಮಾಜಿಕ ಅಧಿಕಾರ ಸ್ತರದಿಂದ ರಾಜಕೀಯ ಅಧಿಕಾರ ಸ್ತರಕ್ಕೆ ಬೆಳೆದರು. ಈಗ ಅವರ ಸಾಮಾಜಿಕ ಯೂನಿಟ್‌ಗಳು ಗ್ರಾಮಗಳಾಗಿರಲಿಲ್ಲ. ದೇಶವಾಗಿತ್ತು. ಸ್ವತಃ ಪೇಶ್ವೆಗಳು ಸ್ಪರ್ಶಬಂಧಿ, ಅಸ್ಪೃಶ್ಯತೆಯಂತಹ ಸಂಪ್ರದಾಯವಾದಿ ಬ್ರಾಹ್ಮಣ್ಯದ ಮೌಲ್ಯಗಳನ್ನು ನಿಷೇಧಿಸಿದ್ದರು. ಯದ್ಧಭೂಮಿಯಲ್ಲಿ ಅಂತಹ ಮೌಲ್ಯಗಳು ಪ್ರಾಯೋಗಿಕವಾಗಿರಲಿಲ್ಲ. ಸಿಂಧೂ ಬಂಧಿ, ಸಮುದ್ರಾಯಾನ ಸಂಪ್ರದಾಯವಾದಿ ಬ್ರಾಹ್ಮಣರಿಗೆ ನಿಷಿಧ್ಧವಾಗಿತ್ತು. ಆದರೆ, ಹಿಂದುತ್ವದ ತತ್ವಗಳನ್ನು ಮಂಡಿಸುವುದಕ್ಕಿಂತ ವರ್ಷಗಳ ಮೊದಲೇ ಸಾವರ್ಕರ್, ತಿಲಕ್, ಗೋಖಲೆಯವರಂತಹ ಚಿತ್ಪಾವನ ಬ್ರಾಹ್ಮಣರು ಕಡಲು ದಾಟಿ ಹೋಗಿದ್ದರು. ಹಳೆಯ ಕಾಲದ ಲೋಕವು ಬ್ರಿಟಿಷರ ಆಗಮನದೊಂದಿಗೆ ಬಹುತೇಕ ಮಾಯವಾಗಿತ್ತು. ಆದ್ದರಿಂದ ಈ ʼಬಂಧಿಗಳುʼ ಯಾವುವೂ ಹಳೆಯ ಕಾಲದಂತೆ ನೆಲೆನಿಲ್ಲಲಾರವು ಎಂದು ಚಿತ್ಪಾವನರು ಒಂದು ಸಮಾಜ ಎಂಬ ನೆಲೆಯಲ್ಲಿಯೇ ಕಂಡುಕೊಂಡಿದ್ದರು. ಇದರ ಮುಂದುವರಿಕೆಯೇ ಅವರು ಹುಟ್ಟು ಹಾಕಿದ ಸವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಂ ಮತ್ತು ಅದರ ಮುಂದುವರಿಕೆಯಾದ ಹಿಂದುತ್ವ ಎಂಬ ಜನಾಂಗೀಯ ರಾಜಕಾರಣ.
ಸಂಪ್ರದಾಯವಾದಿ ಬ್ರಾಹ್ಮಣರೊಂದಿಗಿನ ಈ ತಿಕ್ಕಾಟವನ್ನೇ ಬಹುತೇಕ ಸಂದರ್ಭಗಳಲ್ಲಿ ವೈಚಾರಿಕತೆ ಎಂದು ಕರೆಯುತ್ತಿರುವುದು. ಅಂದರೆ, ಸಂಪ್ರದಾಯವಾದಿ ಬ್ರಾಹ್ಮಣರ ಆಚಾರಗಳನ್ನು ನಿರಾಕರಿಸುವುದೇ ಇಲ್ಲಿ ವೈಚಾರಿಕತೆ ಎಂದು ಗುರುತಿಸುತ್ತಿರುವುದು. ಸಾವರ್ಕರ್ ಎಲ್ಲೂ ಶೃತಿ-ಸ್ಮೃತಿ-ಪುರಾಣಗಳನ್ನು ವಿರೋಧಿಸಲಿಲ್ಲ ಎಂದು ಮಾತ್ರವಲ್ಲ, ತನ್ನ ಬದುಕಿನುದ್ದಕ್ಕೂ ಅವನ್ನು ಬಳಸಿಕೊಂಡಿದ್ದರು. ರಾಮ, ಸೀತೆ, ಕೃಷ್ಣ ಮೊದಲಾದವರೆಲ್ಲ ಸಂಪ್ರದಾಯವಾದಿ ಬ್ರಾಹಣರಿಗಿಂತ ಮಜ್ಜೆ ಮಾಂಸವುಳ್ಳವರಾಗಿ ಸಾವರ್ಕರ್ ಜೊತೆ ಬೆಳೆದರು. ಸಾವರ್ಕರ್ ಅವರ ಹಿಂದುತ್ವ ಪ್ರಬಂಧದ ಮೂಲಭೂತ ಕಲ್ಪನೆಯಾದ ಪಿತೃಭೂಮಿ ಮತ್ತು ಪುಣ್ಯಭೂಮಿ ಎಂಬ ಕಲ್ಪನೆಯನ್ನು ಸಾಕ್ಷಾತ್ಕರಿಸಲು ಬೇಕಾದ ಭೌಗೋಳಿಕ ಅಡಿಪಾಯವನ್ನು ನಿರ್ಮಿಸಿರುವುದೇ ಐತಿಹ್ಯಗಳನ್ನು ಐತಿಹಾಸಿಕಗೊಳಿಸುವ ಮೂಲಕವಾಗಿತ್ತು. ಆರ್ಯಾವರ್ತವನ್ನು ದಕ್ಷಿಣದ ಕನ್ಯಾಕುಮಾರಿಯ ತನಕ ಎಳೆದು ತರಲು ಐತಿಹಾಸಿಕವಾದ ಯಾವ ಸಾಕ್ಷ್ಯಗಳೂ ಇಲ್ಲದಿರುವಾಗ, ಶ್ರೀರಾಮಚಂದ್ರನ ಲಂಕಾಪ್ರವೇಶವನ್ನು ಸಾವರ್ಕರ್ ಎತ್ತಿಕೊಳ್ಳುತ್ತಾರೆ. ಬೇಟಿ ಬಂಧಿ, ಸ್ವಜಾತಿಯೊಳಗಡೆಯೇ ವಿವಾಹ ನಡೆಯಬೇಕೆಂಬ ಸಂಪ್ರದಾಯವಾದಿ ಬ್ರಾಹ್ಮಣ್ಯವನ್ನು ಸಾವರ್ಕರ್ ವಿರೋಧಿಸುತ್ತಾರೆ. ಹಿಂದೂ ಜನಾಂಗೀಯ ವಾದವನ್ನು ಪೋಷಿಸಲು ಸಂಪ್ರದಾಯವಾದಿ ಬ್ರಾಹ್ಮಣರ ಚಾತುರ್ವರ್ಣ ಬಹುದೊಡ್ಡ ತಡೆಯಾಗಿತ್ತು. ಪ್ರತಿಲೋಮ ವಿವಾಹಗಳ ಮೂಲಕ ನಿಧಾನಕ್ಕೆ ಚಾತುರ್ವರ್ಣ ಕೊನೆಯಾಗುತ್ತದೆಯೆಂದು ಸಾವರ್ಕರ್ ವಾದಿಸಿದ್ದರು. ಅದು ಕೆಳಜಾತಿಗಳ ಸಾಮಾಜಿಕ ಚಲನಾತ್ಮಕತೆಯ ಮೂಲಕ ಆಗಬಾರದು ಎಂದು ಕೂಡ ಅವರ ವಾದವಾಗಿತ್ತು. ಆದ್ದರಿಂದ ಇಲ್ಲಿ ಸಾವರ್ಕರ್ ಕೆಳಜಾತಿ ಜನರ ಪರಿಕರಗಳ ಮೂಲಕ ಜಾತಿಯನ್ನು ಎದುರುಗೊಳ್ಳುವುದಿಲ್ಲ. ಬದಲಿಗೆ, ಪೌರಾಣಿಕ ಕಥಾಪಾತ್ರಗಳನ್ನು ಮಜ್ಜೆ ಮಾಂಸಗಳಿರುವವರಾಗಿ ತುಲನೆ ಮಾಡಿಕೊಂಡು ಎದುರಿಸುತ್ತಾರೆ.
ಮಿಶ್ರವಿವಾಹಗಳನ್ನು ಬೆಂಬಲಿಸುವ ತನ್ನ ವಾದಕ್ಕೆ ಬೆಂಬಲವಾಗಿ ʼಹಿಡಿಂಬೆಯೊಂದಿಗೆ ಸೇರುವ ಮೊದಲ ಅಥವಾ ಕೊನೆಯ ಆರ್ಯನಲ್ಲ ಭೀಮಸೇನʼ ಎಂದು ಹೇಳಿಕೊಳ್ಳುತ್ತಾರೆ. ʼಎಲ್ಲ ಹಿಂದೂ ಹೆಣ್ಣುಮಕ್ಕಳೂ ಮೊದಲು ಕೇಳಿಸಿಕೊಳ್ಳುವ ಜೋಗುಳ ಒಳಿತುಳ್ಳ ಸೀತೆಯ ಗೀತೆಗಳಾಗಿವೆ. ನಮ್ಮಲ್ಲಿ ಕೆಲವರು ರಾಮನನ್ನು ಅವತಾರವೆಂದು ಆರಾಧಿಸುತ್ತಾರೆ. ಕೆಲವರು ನಾಯಕನೆಂದೂ ವೀರ ಸೇನಾನಿಯೆಂದೂ. ಎಲ್ಲರೂ ನಮ್ಮ ಸಾಮ್ರಾಜ್ಯದ ವರ್ಣೋಜ್ವಲ ಪ್ರತಿನಿಧಿಯಾದ ಆತನನ್ನು ಪ್ರೀತಿಸುತ್ತಾರೆ. ಮಾರುತಿ ಮತ್ತು ಭೀಮಸೇನರು ಹಿಂದೂ ಯುವಕರಿಗೆ ಯಾವ ಕಾಲಕ್ಕೂ ಸೋಲದ ಮಾದರಿಯೂ ದೈಹಿಕವಾದ ಉದಾರತೆಯೂ ಆಗಿದ್ದಾರೆ. ಸಾವಿತ್ರಿ ಮತ್ತು ದಮಯಂತಿಯರು ಹಿಂದೂ ವಧುಗಳಿಗೆ ನಿಶ್ಚಯದಾರ್ಢ್ಯ ಮತ್ತು ಪಾವಿತ್ರ್ಯತೆಗಳ ಎಂದೂ ಸೋಲದ ಆದರ್ಶಗಳಾಗಿದ್ದಾರೆ. ಒಬ್ಬ ಹಿಂದೂ ಕುಮಾರನು ತನ್ನ ಪ್ರೇಯಸಿಗೆ ಮುತ್ತನಿಡುವಾಗ ರಾಧೆಯು ಗೋಕುಲದ ದಿವ್ಯನಾದ ಪಶುಪಾಲಕನಿಗೆ ನೀಡಿದ ಮುತ್ತಿನ ಪ್ರತಿಧ್ವನಿಯನ್ನು ಅದರಲ್ಲಿ ಕಾಣುತ್ತಾನೆ. ಕುರುಗಳ ಮಹಾಯುದ್ಧದಲ್ಲಿ, ಸಾವಿರಾರು ವರ್ಷಗಳ ಹಿಂದೆ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನ, ಕರ್ಣ, ಭೀಮ, ದುಶ್ಯಾಸನರುಗಳ ನಡುವೆ ಉಂಟಾದ ಹಗೆತನವನ್ನು, ಅದರ ಎಲ್ಲ ಉತ್ಸಾಹಗಳೊಂದಿಗೆ ಸಕಲ ಗುಡಿಸಲುಗಳಲ್ಲೂ, ಸಕಲ ಅರಮನೆಗಳಲ್ಲೂ ತರಬೇತಿ ನೀಡಲಾಗುತ್ತಿದೆ. ಅಭಿಮನ್ಯುವಿನ ಮೇಲೆ ನಮಗಿರುವಷ್ಟು ಮಮಕಾರ ಅರ್ಜುನನಿಗೆ ಆತನ ಮೇಲೆ ಇರಲಿಕ್ಕಿಲ್ಲ. ಆ ತಾವರೆಗಣ್ಣಿನ ಹುಡುಗನ ಪತನ ತಿಳಿದು ಆತನ ತಂದೆ ಸುರಿಸಿದ ಅದೇ ಮಮತೆ ಮತ್ತು ದುಃಖ ಹೊತ್ತ ಕಣ್ಣೀರನ್ನು ಸಿಲೋನ್‌ನಿಂದ ಹಿಡಿದು ಕಾಶ್ಮೀರದ ತನಕದ ಹಿಂದೂಸ್ತಾನ ದಿನಂಪ್ರತಿ ಅವನಿಗಾಗಿ ಸುರಿಸುತ್ತಿದೆ.ʼ
ಇಂತಹ ಹಲವಾರು ವಿವರಣೆಗಳನ್ನು ಸಾವರ್ಕರ್ ಸಾಹಿತ್ಯದಾದ್ಯಂತ ಗಮನಿಸಬಹುದು. ಒಂದು ವೈಚಾರಿಕ ಮನಸ್ಸಿನಿಂದ ಅದು ಹೊರ ಹೊಮ್ಮುತ್ತಿಲ್ಲ ಎಂಬುದನ್ನು ಒತ್ತಿ ಹೇಳಬೇಕಾದ ಅಗತ್ಯ ಇಲ್ಲವಲ್ಲ. ಗೀತೆ, ಮನುಸ್ಮೃತಿ, ಭವಿಷ್ಯಪುರಾಣ ಮೊದಲಾದವುಗಳನ್ನು ಅಡಿಗಡಿಗೆ ಬಳಸಿಕೊಂಡು ಸಾವರ್ಕರ್ ತನ್ನ ವಾದಗಳನ್ನು ಎತ್ತಿ ಕಟ್ಟಿದ್ದಾರೆ.
ಅಷ್ಟೇ ಅಲ್ಲ, ಸಾವರ್ಕರ್ ವೈಚಾರಿಕತೆಯಿಂದ ಎದುರಿಸಬೇಕೆಂದು ಹಿಂದೂ ಸಮಾಜದೊಂದಿಗೆ ಆಗ್ರಹಿಸುತ್ತಿರುವ ಹಿಂದೂ ಸಮುದಾಯದ ಏಳು ನಿಷೇಧಗಳು ಬ್ರಾಹ್ಮಣರಿಗೆ ಮತ್ತು ಹೆಚ್ಚೆಂದರೆ ಸವರ್ಣರಿಗೆ ಮಾತ್ರ ಬಾಧಿಸುವ ಸಂಗತಿಗಳಾಗಿವೆ. ಸಾವರ್ಕರ್ ಹಿಂದೂ ಧರ್ಮದ ಛತ್ರಿಯಡಿಗೆ ತರಲು ಪ್ರಯತ್ನಿಸುತ್ತಿರುವ ಹಿಂದುಳಿದ, ದಲಿತ, ಆದಿವಾಸಿ, ಸಿಕ್ಖರು, ಬೌದ್ಧರು, ಜೈನರು ಇವರುಗಳಿಗೆಲ್ಲ ಇರುವ ನಿಷೇಧಗಳು ಬ್ರಾಹ್ಮಣರಂಥವಲ್ಲ. ದಲಿತರಿಗೆಯೆಲ್ಲಿಯ ಸ್ಪರ್ಶಬಂಧಿ? ಎಲ್ಲಿಯ ರೋಟಿ ಬಂಧಿಯೆಂಬ ಆಹಾರದ ನಿಷೇಧ? ದಲಿತರ ಮೇಲೆ ಉಳಿದವರು ತೋರಿಸುತ್ತಿರುವುದು ನಿಜವಾಗಿ ದಲಿತರು ಹಿಂಬಾಲಿಸುವ ಪದ್ಧತಿ ಅಲ್ಲವೇ ಅಲ್ಲ. ಆದ್ದರಿಂದ ಹಿಂದುತ್ವದ ಮತ್ತು ಹಿಂದೂಯಿಸಮ್ಮಿನ ಭಾಗವಾಗಿ ಸಾವರ್ಕರ್ ಬೊಟ್ಟು ಮಾಡಿ ತೋರಿಸುತ್ತಿರುವುದೆಲ್ಲವೂ ಬ್ರಾಹ್ಮಣರ ಮಾತ್ರ ಸಿಕ್ಕುಗಳಾಗಿವೆ.
ಭಕ್ತಿಯನ್ನು ಬೆಂಬಲಿಸದಿರಲು ಸಾವರ್ಕರ್‌ಗೆ ಒಂದೇ ಕಾರಣ ಇರುವುದು. ಭಕ್ತಿ ಚಳುವಳಿ ಭಾರತದಲ್ಲಿ ಕೆಳಜಾತಿ ಚಳುವಳಿಗೆ ಶಕ್ತಿ ತುಂಬಿತ್ತು. ಲಾಲ್‌ದೇಡ್, ಚೊಕ್ಕಮೇಳ, ತುಕಾರಾಮ, ಕಬೀರ, ಮೀರಾ, ಅಕ್ಕಮಹಾದೇವಿ, ಬಸವಣ್ಣ, ಅಲ್ಲಮಪ್ರಭು, ಆಂಡಾಳ್ ಮೊದಲಾದವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಜಾತಿವ್ಯವಸ್ಥೆಯನ್ನು ವಿರೋಧಿಸಿದವರೇ ಆಗಿದ್ದರು. ಆದ್ದರಿಂದಲೇ ಕೆಳಜಾತಿ ಚಳುವಳಿಗಳ ಪರಿಕರವಾದ ಭಕ್ತಿಯನ್ನು ನಿರಾಕರಿಸಿದರೆ ಮಾತ್ರವೇ ಜನಾಂಗೀಯ ಚಳುವಳಿಯೊಂದು ನೆಲ ಕಂಡುಕೊಳ್ಳಲು ಸಾಧ್ಯವೆಂಬುದು ಸಾವರ್ಕರ್ ದೃಷ್ಟಿಕೋನವಾಗಿತ್ತು. ಆದ್ದರಿಂದ ಜನಾಂಗೀಯ ಪೌರುಷವನ್ನು ದುರ್ಬಲಗೊಳಿಸುವ ಭಕ್ತಿಯೊಂದಿಗೆ ರಾಜಿ ಮಾಡಿಕೊಳ್ಳುವುದು ಸಾವರ್ಕರ್‌ಗೆ ಸುಲಭವಾಗಿರಲಿಲ್ಲ. ಇದೆಲ್ಲವನ್ನು ಸೇರಿಸಿಕೊಂಡು ಸಾವರ್ಕರ್‌ಗೆ ವೈಚಾರಿಕತೆಯ ಪಟ್ಟವನ್ನು ನೀಡಲಾಗುತ್ತಿರುವುದು. ಅಲ್ಲದೆ, ತನ್ನಕುಲದೇವತೆಯಾದ ಅಷ್ಟಭುಜಲಕ್ಷ್ಮಿಯ ಪ್ರಾರ್ಥನೆ ಬರೆಯುವ ಮೂಲಕ ಕವಿತೆಯ ಕಡೆಗೆ ಬಂದಿದ್ದ ಸಾವರ್ಕರ್ ಯಾವ ಕಾರಣಕ್ಕೂ ಆಸ್ತಿಕ ರಾಜಕಾರಣವನ್ನು ಕೈಬಿಡಲು ಮುಂದಾಗಿರಲೇ ಇಲ್ಲ.
ಇನ್ನೊಂದು ಸಂಗತಿ, ಗಾಂಧಿ ಹಿಂದೂ ಧರ್ಮದ ಮೌಲ್ಯಗಳನ್ನು ಒಂದು ರೀತಿಯಲ್ಲಿ ಸಾವರ್ಕರೇತರ ರೀತಿಯಲ್ಲಿ ರಾಜಕೀಯವಾಗಿ ಹಬ್ಬಿಸಿದ್ದರು. ಇದುವೇ ತಿಲಕರ ರಾಜಕಾರಣದಿಂದ ಭಾರತವನ್ನು ಪಾರು ಮಾಡುವುದು ಕೂಡ. ಗಾಂಧಿಯನ್ನು ವಿರೋಧಿಸುವ ಅಜೆಂಡಾದ ಭಾಗವಾಗಿಯೂ ವೈಜ್ಞಾನಿಕ-ತಾಂತ್ರಿಕ ಪ್ರಗತಿಯ ಮಾರ್ಗವನ್ನು ಸಾವರ್ಕರ್ ಸ್ವೀಕರಿಸುವುದು. ಬ್ರಿಟಿಷರಿಗೆ ಶರಣಾಗುವುದರ ಭಾಗವಾಗಿಯೂ ಇದು ನಡೆದಿರಬಹುದು. ಜೊತೆಗೆ, ತನ್ನ ಪ್ರಮುಖ ಕೃತಿಗಳಲ್ಲಿ, ಇತಿಹಾಸವೆಂದು ಬಿಂಬಿಸುವ ಕೃತಿಗಳಲ್ಲೂ ಎಲ್ಲೂ ಕೂಡ ಯಾವ ರೀತಿಯ ವೈಜ್ಞಾನಿಕತೆಯನ್ನೂ ಸಾವರ್ಕರ್ ಪಾಲಿಸಿರುವುದು ಹುಡುಕಿದರೂ ನಮಗೆ ಸಿಗಲಿಕ್ಕಿಲ್ಲ. ಹಿಂದುತ್ವದ ವಿವರದಲ್ಲಿ ನಾವದನ್ನು ಗಮನಿಸಿದ್ದೆವು. ಚಾರಿತ್ರಿಕ ಘಟನೆಗಳನ್ನು ಕಟ್ಟುಕಥೆಗಳಾಗಿಸುವುದು. ಕಟ್ಟುಕಥೆಗಳನ್ನು ಇತಿಹಾಸವೆಂದು ಕಥೆ ಕಟ್ಟುವುದು. ಇವೆಲ್ಲ ಸಾವರ್ಕರ್ ಬರವಣಿಗೆಯಲ್ಲಿ ಸಾಮಾನ್ಯವಾಗಿ ಕಂಡು ಬರುವಂಥವು. ಹಿಂದುತ್ವದಲ್ಲಿಯೇ ಮುಂದಿಡುವ ಅತಿ ಪ್ರಮುಖ ಕಲ್ಪನೆಯಾದ ಪುಣ್ಯಭೂಮಿ ಕಲ್ಪನೆ ಅತ್ಯಂತ ಅವೈಜ್ಞಾನಿಕವೂ ಅವೈಚಾರಿಕವೂ ಆಗಿದೆ. ಭಕ್ತಿಯೆಂಬ ಭಾವನಾತ್ಮಕ ಸಂಗತಿಯನ್ನು ಲಂಗುಲಗಾಮಿಲ್ಲದೆ ಬಳಸಿಕೊಂಡರೆ ಮಾತ್ರವೇ ದೇಶವನ್ನು ಪುಣ್ಯಭೂಮಿ ಎಂಬ ರೀತಿಯಲ್ಲಿ ಮುಂದಿಡಲು ಸಾಧ್ಯ.
ಅಂದರೆ, ಸಾವರ್ಕರ್ ಕುರಿತು ಬಲಪಂಥೀಯ ಇತಿಹಾಸಕಾರರಲ್ಲಿ ಕೆಲವರು ಸೃಷ್ಟಿಸಿದ ವ್ಯಕ್ತಿತ್ವವನ್ನು ವಿರೋಧಿ ಬಣದವರೂ ಸಾಕಷ್ಟು ಅಧ್ಯಯನ ನಡೆಸದೆ ಒಪ್ಪಿಕೊಳ್ಳುವುದರ ಉದಾಹರಣೆಯನ್ನು ಸಾವರ್ಕರ್ ವಿಷಯದಲ್ಲಿ ನಾವು ಕಾಣಬಹುದು.
೧೯೨೩ರಲ್ಲಿ ಹೊರಬಂದ ಹಿಂದುತ್ವ ಎಂಬ ಕಿರು ಪಸ್ತಕವನ್ನು ನಂತರ ʼಹಿಂದುತ್ವದ ಮೂಲಭೂತ ತತ್ವಗಳುʼ ಎಂಬ ಹೆಸರಿನಲ್ಲಿ ಪ್ರಕಟಿಸಲಾಯಿತು. ಅದರ ನಂತರ ʼಹಿಂದೂ ರಾಷ್ಟ್ರದರ್ಶನ್ʼ ಎಂಬ ಹೆಸರಿನಲ್ಲಿ ವಿಸ್ತೃತಗೊಳಿಸಲಾಯಿತು.