ಬೆಂಗಳೂರು, ಜನವರಿ 26: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಬದುಕು ಸ್ಫೂರ್ತಿದಾಯಕವಾಗಿದ್ದು, ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 194 ನೇ ಸ್ಮರಣೋತ್ಸವ ಅಂಗವಾಗಿ ರಾಯಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಿತ್ತೂರು ರಾಣಿಚೆನ್ನಮ್ಮನವರ ಬಲಗೈಬಂಟನಾಗಿ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರು ಅಪ್ರತಿಮ ದೇಶಭಕ್ತರಾಗಿದ್ದರು. ಬ್ರಿಟೀಷರ ವಿರುದ್ಧ ಸೆಣೆಸಲು ಗೆರಿಲ್ಲಾ ಯುದ್ಧತಂತ್ರಗಾರಿಕೆಯನ್ನು ಬಳಸಿದ್ದರು. ಭಾರತದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಸಂಗೊಳ್ಳಿ ರಾಯಣ್ಣನವರು ಕನ್ನಡ ನಾಡು ನುಡಿ ನೆಲ ಜಲಗಳಿಗೆ ಅತೀವ ಗೌರವ ನೀಡುವ ಅವರ ಬದುಕು ನಮಗೆಲ್ಲ ಸ್ಫೂರ್ತಿ ಎಂದರು.
ದೂರು ನೀಡಿದ್ದಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಯ ವಿರುದ್ಧ ಕಾನೂನು ಕ್ರಮ-ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಜನವರಿ 26: ಜನರಿಗೆ ಖಾಸಗಿ ಹಣಕಾಸು ಸಂಸ್ಥೆಗಳ ಕಿರುಕುಳ ಹೆಚ್ಚುತ್ತಿದ್ದು, ಜನರು ಅಂತಹವರ ವಿರುದ್ಧ ದೂರು ನೀಡಿದ್ದಲ್ಲಿ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು.
ಜನರಿಗೆ ಖಾಸಗಿ ಹಣಕಾಸು ಸಂಸ್ಥೆಗಳ ಕಿರುಕುಳ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಮೈಕ್ರೋಫೈನಾನ್ಸ್ ಸಂಸ್ಥೆ ಅಥವಾ ಲೇವಾದೇವಿಗಾರರ ನೀಡು ತೊಂದರೆಗಳ ವಿರುದ್ಧ ದೂರು ನೀಡಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿವನ್ನು ತೆರೆಯಲಾಗಿದೆ ಎಂದರು.