Sunday, June 23, 2024

ಸತ್ಯ | ನ್ಯಾಯ |ಧರ್ಮ

ಲಾಠಿಯ ರುಚಿ ಸವಿದ ಬೋಗನೂರಿನ ಗಂಡಸರು

(ಈ ವರೆಗೆ…)  ಗಿರಿಗೌಡನಿಗೆ ಮಣೆ ಹಾಕದ ಮೋಹನನ ಮನೆಯವರ ಮೇಲೆ ಅಧಿಕಾರ ಚಲಾಯಿಸಲು ಸಮಯ ಕಾಯುತ್ತಿದ್ದ ಗಿರಿಗೌಡ ಪಂಚಾಯತಿ ಸೇರಿಸಿ ಮೋಹನನಿಗೆ ಮದುವೆಯ ಊಟ ಹಾಕಿಸಲು ತಾಕೀತು ಮಾಡುತ್ತಾನೆ. ಅದಕ್ಕೊಪ್ಪದ ಮೋಹನನ ಮೇಲೆ ಅವನ ಗುಂಪು ಹಲ್ಲೆ ಮಾಡಿ, ಮನೆ ಮುಂದೆ ಗುಂಪು ರಾತ್ರಿಯಿಡೀ ಕಾಯುತ್ತಾ ಮೋಹನ ಹೊರಬರುವುದನ್ನೇ ಕಾಯುತ್ತಿರುತ್ತದೆ. ಗಂಗೆ ಉಪಾಯದಿಂದ ಮೋಹನನ ಜತೆ ಪೊಲೀಸ್‌ ಸ್ಟೇಷನ್‌ ಗೆ ಓಡುತ್ತಾಳೆ..ಮುಂದಿನ ಕತೆಗಾಗಿ ಓದಿ ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ನಲುವತ್ತ ಏಳನೆಯ ಕಂತು.


ತಮ್ಮ ಹತಾರಗಳೊಂದಿಗೆ ಮೋಹನನ ಮನೆಯ ಅಂಗಳವನ್ನೆಲ್ಲ ಅತಿಕ್ರಮಿಸಿ ನಿದ್ರೆಗೆ ಜಾರಿದ್ದ ಭೋಗನೂರಿನ ಗಂಡಸರೆಲ್ಲ, ಕೊರೆಯುತ್ತಿದ್ದ ಜಾವ ನಾಲ್ಕರ ಚಳಿಗೆ ತತ್ತರಿಸುತ್ತಾ ಎದ್ದು ಕುಳಿತರು. ಸೂಜಿಯಂತೆ ಮೈಚುಚ್ಚಿ ಹೈರಾಣಗೊಳಿಸುತ್ತಿದ್ದ  ಇಡೀ ವಾತಾವರಣ ರೊಚ್ಚಿಗೆದ್ದವರ ಒಳಗಿನ ಅಸಹನೆಯನ್ನು ಇನ್ನಷ್ಟು ಇಮ್ಮಡಿಗೊಳಿಸಿತ್ತು.

ಮನೆಯಿಂದ ಕುರಿ ತುಪ್ಪಳದ ದಪ್ಪನೆಯ ಕಂಬಳಿ ತರಿಸಿ, ಮೈ ಪೂರ ಸುತ್ತಿಕೊಂಡು ಬಿದ್ದುಕೊಂಡಿದ್ದರೂ, ಬಿಡದೆ ಬಡಿದೆಬ್ಬಿಸಿದ  ಆ ಕೊರಕಲು ಚಳಿಯ ವಿರುದ್ಧ ತೊಡೆತಟ್ಟಿದವನಂತೆ  ಮೇಲೆದ್ದ  ಉಪಾಧ್ಯಕ್ಷ ಗಿರಿಗೌಡ, ಹೊದ್ದ ಕಂಬಳಿಯನ್ನು  ಪಕ್ಕಕ್ಕೆ ಸರಿಸಿ,  ಸಡಿಲವಾಗಿದ್ದ ತನ್ನ ಬಿಳಿ ಪಂಚೆಯನ್ನು ಬಿಚ್ಚಿ ಸೊಂಟಕ್ಕೆ ಬಿಗಿಯಾಗಿ ಕಟ್ಟಿಕೊಂಡ. ಕಂಬಳಿ ಪದರಿನೊಳಗೆ ಸುತ್ತಿಕೊಂಡಿದ್ದ ಶಾಲನ್ನು ಎಳೆದು ಎಲ್ಲರ ಗಮನವನ್ನು ತನ್ನತ್ತ ಸೆಳೆಯುವಂತೆ ರಪ್ ಎಂದು ಜಾಡಿಸಿ ಹೆಗಲ ಮೇಲೆ ಎಸೆದು ಕೊಂಡು ಬಾಗಿಲ ಬಳಿ ದಾಪುಗಾಲಿಡುತ್ತಾ ಬಂದ. 

“ಬೋಳಿಮಗ್ನೆ ನಾವೆಲ್ಲ ಚಳಿಲಿ ಸಾಯ್ತ ಈಚೆ ಬಿದ್ಕೊಂಡಿದ್ರೆ  ನೀನು ಒಳಗೆ ಹೆಂಡ್ತಿ ಒತ್ತಿ ಮಲಿಕೊಂಡು ಬೆಚ್ಚುಗೆ ಶಾಖ ತಗೋತಿದ್ಯೆನ್ಲಾ. ನೀನಾಗೆ ಈಚೆಗ್ ಬಂದ್ರೆ ಸರಿ, ಇಲ್ದಿದ್ರೆ  ನಾವೇ ಬಾಗ್ಲು ಮುರ್ದು ನಿನ್ ಹೆಂಡ್ತಿನ ಎಳ್ಕೊಂಡು ಬಂದು  ನಮ್ ಗಂಡುಸ್ತನ  ತೋರುಸ್ಬೇಕಾಯ್ತದೆ”. ಎಂದು ಕೂಗು ಹಾಕಿದ. ಗಿರಿಗೌಡನ ಪೌರುಷ ಕಂಡು ಮೈ ಬೆಚ್ಚಗಾದವರಂತೆ ಹುರುಪುಗೊಂಡ ಆ ಗಂಡಸರು ಅವನ ದನಿಗೆ ತಾವು ದನಿಗೂಡಿಸಿ ದಬದಬನೆ ಬಾಗಿಲು ಬಡಿಯ ತೊಡಗಿದರು.

ಇತ್ತ ಓಡುತ್ತಾ ಬಂದು ಭೋಗನೂರಿನ ಕಡೆಮನೆಯ ಗೆಳೆಯ ಶಿವರಾಮೇಗೌಡನಲ್ಲಿ ಸೈಕಲ್ ಪಡೆದು ಸಂಪಿಗೆ ಕಟ್ಟೆಯ ಎಸ್ಐ ಮನೆ ತಲುಪಿದ್ದ ಮೋಹನ ಗಂಗೆಯರು, ಊರಿನಲ್ಲಿ ತಮ್ಮ ವಿರುದ್ಧ ದಂಗೆ ಎದ್ದಿರುವ ಜನರಿಂದ  ಕೂದಲೆಳೆಯಷ್ಟು ಅಂತರದಲ್ಲಿ ಪ್ರಾಣಾಪಾಯದಿಂದ ಹೇಗೆ ಪಾರಾಗಿ ಬಂದೆವು ಎಂಬ ಘಟನೆಯನ್ನೆಲ್ಲ ಮತ್ತಷ್ಟು ರೋಚಕವಾಗಿ ತೋಡಿಕೊಂಡರು.

 ಭೋಗನೂರಿನ ಜನ ಪೊಲೀಸ್ ಸ್ಟೇಷನ್ ಮೆಟ್ಟಿಲೇರದಂತೆ, ಇಂದಿನವರೆಗೂ ಸರ್ಪಗಾವಲಾಕಿ ಕಾದು ಕುಳಿತಿದ್ದ ಗಿರಿಗೌಡನ ಅಟ್ಟಹಾಸವನ್ನು ಹೇಗಾದರು ಮುರಿಯ ಬೇಕೆಂದು ಹೊಂಚುತ್ತಿದ್ದ ಎಸ್ ಐ ಶರಣಬಸಪ್ಪನಿಗೆ ಇದೊಂದು ಸುವರ್ಣಾವಕಾಶವೆ ಆಗಿತ್ತು. ಕೂಡಲೆ ರಾತ್ರಿ ಪಾಳಿಯಲ್ಲಿದ್ದ ಐದಾರು ಜನ ಪೊಲೀಸಿನವರನ್ನು ಕರೆಸಿ “ಕೈಗೆ ಸಿಕ್ದೋರನ್ನೆಲ್ಲ ಎಳ್ಕೊಂಡು ಬನ್ನಿ” ಎಂದು ತಾಕೀತು ಮಾಡಿ ಎರಡು ಜೀಪ್ ಕೊಟ್ಟು ಭೋಗನೂರಿನತ್ತ ಕಳುಹಿಸಿದ.

ಜನರಿಗೆ ತಿಳಿಯದಂತೆ ದೂರದಲ್ಲಿಯೇ ಜೀಪ್ ನಿಲ್ಲಿಸಿ ಮರೆಯಲ್ಲಿ ನಿಂತು ಜನರ ಹಾರಾಟ ಚೀರಾಟಗಳನ್ನು ಕೇಳಿಸಿಕೊಂಡ  ಪೊಲೀಸಿನವರು ಹತ್ತಿರ ಬಂದು ” ನಿಮ್ ಜನ್ಮುಕ್ಕಿಷ್ಟು ಬೆಂಕಿಹಾಕ, ಏನ್ರೋ ಮಾತಾಡ್ತಿರೊದ್ ನೀವು ; ಗಂಡಸ್ತನ ತೋರುಸ್ತಿರಾ  ಶಂಡ್ ನನ್ನ್ ಮಕ್ಳ‌. ಅವರಿಬ್ರು ಸ್ಟೇಷನ್ನಲ್ಲಾವ್ರೆ . ತಾಕತ್ತಿದ್ರೆ ಬಂದು ಅದೇನ್ ತೋರುಸ್ಬೇಕು ಅಂತಿದಿರೊ ಅದ್ನ ಅಲ್ಲ್ ಬಂದು ತೋರ್ಸಿ” ಎಂದು ಬೈದು  ಜೀಪಿನತ್ತ ಕೈ ಬೀಸಿದರು.

 ಕೊರೆಯುತ್ತಿದ್ದ ತಣ್ಣನೆಯ ಗಾಳಿಯನ್ನು ಸೀಳಿಕೊಂಡು ಬರ್ರ್ ಎಂದು ಸದ್ದು ಮಾಡುತ್ತಾ ಬಂದು ನಿಂತ  ಜೀಪನ್ನು ಕಂಡು ಅಲ್ಲಿದ್ದ ಗಂಡಸರೆಲ್ಲ ದಿಕ್ಕಾಪಾಲಾಗಿ ಓಡಲಾರಂಭಿಸಿದರು. “ನಿಂತ್ಕೊಳ್ಲಾ ಪುಕುಲ್ ನನ್ನ್ ಮಗ್ನೆ” ಎಂದು ಚೀರಿದ ಪೊಲೀಸಿನವನೊಬ್ಬ

ತಪ್ಪಿಸಿಕೊಂಡು ಓಡುತ್ತಿದ್ದ ಗಿರಿಗೌಡನನ್ನು ಹಿಡಿದು  “ಏನ್ಲಾ ರುಸ್ತೂಮ ಊರ್ನಲ್ಲಿ ದಾದಾಗಿರಿ ಮಾಡ್ಕೊಂಡು ಮೆರಿತಿದ್ದೀಯ ಅಲ್ವ. ಬಾ ಈಗ ತಾಕತ್ತಿದ್ರೆ ನಮ್ ಸಾಹೇಬ್ರು ಮುಂದೆ ಬಂದು ನಿನ್ ದಾದಗಿರಿ ತೋರ್ಸು” ಎಂದು ಅವನ ಅಂಡಿನ ಮೇಲೆ ನಾಲ್ಕು ಬಿಗಿದು, ಜೀಪಿನೊಳಕ್ಕೆ ನೂಕಿ, ಅವನು ತಪ್ಪಿಸಿಕೊಳ್ಳದಂತೆ  ಬಿಗಿಯಾಗಿ ಹಿಡಿದು ಕೂತ. ಮಿಕ್ಕ  ಪೊಲೀಸಿನವರು ಕೈಗೆ ಸಿಕ್ಕವರನ್ನೆಲ್ಲ ಬಡಿದು ಎಳೆದೆಳೆದು ತಂದು ಜೀಪಿಗೆ ತುಂಬಿಸಿಕೊಂಡು ಸಂಪಿಗೆ ಕಟ್ಟೆಯ ಪೊಲೀಸ್ ಸ್ಟೇಷನ್ ತಲುಪಿದರು. 

 ರಾತ್ರಿಯಿಂದ ದಣಿದಿದ್ದ ತಮ್ಮ ದೇಹಕ್ಕೊಂದಿಷ್ಟು ಕಾಫಿ ಇಳಿಸಿ, ಮನಸ್ಸನ್ನು  ಹಗುರಗೊಳಿಸಿಕೊಂಡು ಬಂದು ಕುಳಿತಿದ್ದ ಮೋಹನ ಗಂಗೆಯರೆದುರು,  ಮುಖ ಮೂತಿಗಳನ್ನೆಲ್ಲ ಊದಿಸಿಕೊಂಡು ಸಾಲುಮುನ್ನಾಗಿ ಕುಂಟುತ್ತಾ ಬಂದು ನಿಂತ ಭೋಗನೂರಿನ ಗಂಡಸರ ಗುಂಪು, ತಮ್ಮನ್ನು  ಈ ಪರಿಸ್ಥಿತಿಗೆ ತಂದ ಅವರಿಬ್ಬರನ್ನು  ಹುರಿದು ಮುಕ್ಕುವಂತೆ ಕೆಕ್ಕರಿಸಿ ನೋಡಿತು.

ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ ಎಸ್ ಐ ಶರಣಬಸಪ್ಪ “ಖತರ್ನಾಕ್ ನನ್ ಮಕ್ಕಳ.. ನನ್ನೆದ್ರುಗೆ ಅವ್ರುನ್ನ ಗುರಾಯಿಸ್ತಿರೇನ್ರೋ” ಎಂದು ಕೂಗುಹಾಕಿ ನಿಂತಿದ್ದ ಗಂಡಸರ ಅಂಡು ಬಗ್ಗಿಸಿ  ಮತ್ತೊಮ್ಮೆ ಲಾಠಿಯ ರುಚಿ ತೋರಿಸಿದ.  ಅಂಡಿನ ಮೇಲೆ ಕೈಯಿಟ್ಟು ಮುಲುಕಾಡಿದ ಗಂಡಸರೆಲ್ಲ “ನಿಮ್ಮ ದಮ್ಮಯ್ಯ ತಪ್ಪಾಯ್ತು ಬುಟ್ಟುಬುಡಿ ಸಾ” ಎಂದು ಗೋಗರೆದರು. 

ಅಷ್ಟು ಜನರೊಳಗೂ ಎದ್ದು ಕಾಣುವಂತೆ ಎತ್ತರವಾಗಿ ದಷ್ಟಪುಷ್ಟ ದೇಹ ಹೊತ್ತು ನಿಂತಿದ್ದ ಗಿರಿಗೌಡ ಮಾತ್ರ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ, ಕೆದರಿದ್ದ ತನ್ನ ತಲೆ ಕೂದಲ ಕ್ರಾಪನ್ನು  ಸರಿಪಡಿಸಿಕೊಂಡು ಮೀಸೆಯನ್ನು ಮತ್ತಷ್ಟು ತೀಡಿ ಚೂಪು ಮಾಡಿಕೊಂಡ. ಹೆಗಲ ಮೇಲೆ ಅಸ್ತವ್ಯಸ್ತವಾಗಿ ಹರಡಿಕೊಂಡಿದ್ದ ತನ್ನ ಶಾಲನ್ನು ತೆಗೆದು ಒಮ್ಮೆ  ಬಿರುಸಾಗಿ ಜಾಡಿಸಿ ಮತ್ತೆ ಹೆಗಲಿಗೇರಿಕೊಂಡು ಸವಾಲಾಕುವವನಂತೆ ನಿಂತ. 

ಗಿರಿ ಗೌಡನ ದರ್ಪ ಕಂಡು ಮುಗುಳು ನಕ್ಕ ಎಸ್ ಐ ” ಓಹೋ ಪರ್ವಾಗಿಲ್ವೆ ಪೊಗ್ರು ಜೋರಾಗೆ ಐತೆ” ಎಂದು ಹೇಳುತ್ತಾ ತನ್ನ ಲಾಠಿಯ ತುದಿಯಿಂದ ಗಿರಿಗೌಡನ ಹೆಗಲ ಮೇಲಿದ್ದ ಶಾಲನ್ನು ತೆಗೆದು ಮೇಲಕ್ಕೆ ಚಿಮ್ಮಿದ. “ನೀನೇನು ಸಿನಿಮಾ ಹೀರೋ ಅಂದ್ಕೊಂಡಿದ್ದೀಯೇನ್ಲಾ ಹಲ್ಕಟ್” ಎಂದು ಬಯ್ಯುತ್ತಾ ಒಪ್ಪವಾಗಿ ತೀಡಿಕೊಂಡಿದ್ದ ಅವನ  ತಲೆಕೂದಲನ್ನು  ಲಾಠಿಯ ತುದಿಯಿಂದಲೇ ಕೆದರಿದ. ಅವನ ಮೀಸೆಯ ಎರಡೂ ತುದಿ ಹಿಡಿದು ಮತ್ತಷ್ಟು ಹುರಿಗೊಳಿಸಿ ಕಿತ್ತು  ಕೈಗೆ ಬರುವಂತೆ ರಪ್ಪನೆ ಎಳೆದ. ನೋವಿನಿಂದ ಸ್ಟೇಷನ್ನಿನ ಚಾವಣಿ ಕಿತ್ತು ಬರುವಂತೆ ಚೀರಿದ  ಗಿರಿಗೌಡ, ಮೀಸೆ ಎಳೆದ ಎಸ್ ಐ ಕೈಯನ್ನು ಬಲವಾಗಿ ತಿರುಪಿ “ಬೋಳಿಮಕ್ಳ ನೀವೆಲ್ಲ ಮೂರು ದಿನ ಬಂದಿದ್ದು ಹೋಗೋರು. ಪರ್ಮನೆಂಟಾಗಿರೋ ನಮ್ಮ್ ಹತ್ರುವೆ ಆಟ ಆಡೋಕ್ ನೋಡ್ತಿರ” ಎಂದು ಗುಡುಗಿದ. 

ಗಾಯಗೊಂಡು ಕೆರಳಿದ ಹುಲಿಯಂತೆ ತಿರುಗಿ ನಿಂತ ಎಸ್ ಐ ಶರಣಬಸಪ್ಪ, ಗಿರಿಗೌಡನ ಕೆಳಭಾಗಕ್ಕೆ ಮೊಣಕಾಲಿನಿಂದ ಜಾಡಿಸಿ ಒದ್ದು ಕೈ ಬಿಡಿಸಿ ಕೊಂಡ. ಹೊರಗಿನಿಂದ ಓಡಿಬಂದ  ಕಾನ್ಸ್ಟೇಬಲ್ಗಳಿಬ್ಬರು,  ಗಿರಿಗೌಡನ ಕೈ ಕಾಲನ್ನು ಹಗ್ಗದಿಂದ ಬಿಗಿದು ಬಂದಿಖಾನೆಗೆ ನೂಕಿಸಿದರು. ಅವನನ್ನು ಅಂಗಾತ ಕೆಡವಿಕೊಂಡ ಎಸ್ ಐ ತನ್ನ ಕೈ ಸೋಲುವವರೆಗೂ ಅಂಗಾಲು ಮತ್ತು ತೋಳುಗಳ ಮೇಲೆ  ಹೊಡೆದು ದಣಿದ. ಸಾಲದೆಂಬಂತೆ ಪಕ್ಕದಲ್ಲಿಯೇ ಇದ್ದ ಕ್ಷೌರಿಕನನ್ನು ಕರೆಸಿ, ನುಣ್ಣಗೆ ಗಿರಿಗೌಡನ ತಲೆ ಮತ್ತು ಮೀಸೆಯನ್ನು ಬೋಳಿಸಿ, ಅವನ ಮೈ ಬಟ್ಟೆಯನ್ನೆಲ್ಲ ತೆಗಿಸಿ ಬೆತ್ತಲುಗೊಳಿಸಿ ಹೊರಗೆಳೆದು ತಂದು ನಿಲ್ಲಿಸಿದ. ಇದನ್ನೆಲ್ಲಾ ಪತರುಗುಟ್ಟುತ್ತಾ ನೋಡಿದ ಭೋಗನೂರಿನ ಗಂಡಸರಿಗೆ ನಿಂತ ಜಾಗದಲ್ಲಿಯೆ ಒಂದು ಎರಡು ಎಲ್ಲವು ಕಿತ್ತು ಬರುವಂತಾಯಿತು. ಇನ್ನು ಕುದಿಯುತ್ತಲೆ ಇದ್ದ  ಎಸ್ ಐ,  ಪಕ್ಕದಲ್ಲಿದ್ದ ಪೊಲೀಸರಿಗೆ ”  ಇವ್ರೆಲ್ಲರ ಮೇಲು ಎಫ್ ಐ ಆರ್ ಫೈಲ್ ಮಾಡಿ” ಎಂದು ಆಜ್ಞೆ ಹೊರಡಿಸಿದ. 

ಶರಣಬಸಪ್ಪನ ಮಾತು ಕೇಳಿ ಅವನ  ಕಾಲಿಗೆ ಉದ್ದಂಡ ಬಿದ್ದ  ಆ ಗಂಡಸರು ” ಯಾರ್ಯಾರ್ದೋ ಮಾತ್ಕಟ್ಕೊಂಡು ಇಲ್ಲಿಗಂಟ ಕುಣ್ದೊ ಬುದ್ದಿ. ಇನ್ ಮೇಲೆ ಇಂತ ಹೇಲ್ ತಿನ್ನ ಕೆಲ್ಸ ಮಾಡಕ್ಕಿಲ್ಲ. ನಮ್ಮುನ್ನೆ ನಂಬ್ಕೊಂಡಿರೊ ಹೆಂಡ್ರು ಮಕ್ಳು ಮನೆಯಾಗೆ ಕಾಯ್ತಿರ್ತವೆ. ನಮ್ಮನ್ನು ಬುಟ್ಟುಬುಡಿ ಬುದ್ದಿ “ಎಂದು ಅಂಗಲಾಚಿದರು. ಗಿರಿಗೌಡನಿಗೆ ತಮ್ಮನ್ನು ಅಡವಿಟ್ಟುಕೊಂಡು ಜೀವನವನ್ನೇ ನರಕಮಾಡಿಕೊಂಡಿದ್ದ  ಆ ಗಂಡಸರನ್ನು ಕಂಡು ಎಸ್ ಐ ಕರುಳು ಚುರ್ ಎಂದಿತು. “ಬಡ್ಡಿ ಮಕ್ಳ ಈ ಹೆಣ್ ಮಗ್ಳು ಮನೆಗೆ ಮುತ್ತಿಗೆ ಹಾಕಿ ನಿನ್ ಅಮ್ಮುನ್, ಅಕ್ಕುನ್, ಹೆಂಡ್ತಿನ್, ಅನ್ಬೇಕಾದ್ರೆ ನಿಮ್ಮ್ ಹೆಂಡ್ತಿ ಮಕ್ಳು ನೆನಪಾಗ್ಲಿಲ್ವೇನ್ರಪ್ಪ.  ನನ್ನ್ ಕಾಲಿಗೇನು ಬೀಳ್ತಿರೋ ಲಫಂಗ್ರ. ನೀವು ಮಾಡಿರೊ ತಪ್ಪಿಗೆ ಹೋಗಿ ಆ ಹೆಣ್ಮಗ್ಳು ಕಾಲಿಡಿರಿ. ಆಕೆ ಏನಾದ್ರು ಒಪ್ಪಿದ್ರೆ ನೀವು ಬೆಳಕ್ ಕಾಣ್ತಿರಿ.  ಇಲ್ದಿದ್ರೆ  ಈ ಕತ್ಲೆ ಕೋಣೆಯೊಳಗೇ ಕೊಳಿರಿ” ಎಂದು ಹೆದರಿಸಿದ. 

ಓಡಿ ಬಂದು ಗಂಗೆಯ ಕಾಲಿನ ಮೇಲೆ ಬಿದ್ದು ಕ್ಷಮೆ ಯಾಚಿಸಿದ ಭೋಗನೂರಿನ ಗಂಡಸರು “ಇನ್ಮೇಲೆ ನಿನ್ನುನ್ನ ನಮ್ಮನೆ ಮಗ್ಳಂಗ್ ನೋಡ್ಕೋತಿವಿ ಕನವ್ವ.  ನಮ್ಮುರ್ನಲ್ಲಾಗ್ಲಿ, ಮನೆಲಾಗ್ಲಿ ಯಾವ ಕಾರ್ಯ ನಡುದ್ರು ನಿನ್ನ ಬುಟ್ ಮಾಡಕಿಲ್ಲ ಎಂದು ಪ್ರಮಾಣ ಮಾಡಿದರು. ಎಸ್ ಐ ಹೇಳಿದಂತೆ “ಇನ್ನು ಮುಂದೆ ಊರಿನಲ್ಲಿ ಯಾವ ರೀತಿಯ ಹೊಡೆದಾಟಗಳಿಗು ಅವಕಾಶ ಮಾಡಿಕೊಡುವುದಿಲ್ಲವೆಂದು ಮುಚ್ಚಳಿಕೆ ಬರೆದು ಕೊಟ್ಟು ಸತ್ತೆವೊ ಕೆಟ್ಟೆವೊ ಎಂಬಂತೆ ಬಂದು ಊರು ಸೇರಿದರು.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌‌

ಹಿಂದಿನ ಕಂತು ಓದಿದ್ದೀರಾ? ಪೊಲೀಸ್‌ ಸ್ಟೇಶನ್‌ಗೆ ನಡೆದ ಗಂಗೆ

Related Articles

ಇತ್ತೀಚಿನ ಸುದ್ದಿಗಳು