Friday, April 26, 2024

ಸತ್ಯ | ನ್ಯಾಯ |ಧರ್ಮ

ಸಾಮಾಜಿಕ ಸ್ವಾಸ್ಥ್ಯವನ್ನು ಕದಡಿದಷ್ಟೂ ಯುವ ಸಮೂಹವು ಹಾದಿ ತಪ್ಪುತ್ತಲೇ ಹೋಗುತ್ತದೆ

ಚೈತ್ರಾ ಇಂದು ತನ್ನ ಕರ್ಮಭೂಮಿಯಲ್ಲೇ ಅಪರಾಧಿಯಾಗಿ ಅನಾಥ ಸ್ಥಿತಿಯಲ್ಲಿದ್ದಾರೆ. ಆಕೆಯ ಮೇಲಿನ ಆರೋಪಗಳನ್ನು ವ್ಯಕ್ತಿಗತ ನೆಲೆಯಲ್ಲಿ ನೋಡದೆ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಭ್ರಷ್ಟಾಚಾರ ಮತ್ತು ಚುನಾವಣಾ ಬಂಡವಾಳದ ಕೂಪದಲ್ಲಿ ಇಣುಕಿ ನೋಡಿದರೆ ಚೈತ್ರಾ ಏಕಾಂಗಿಯಾಗೇನೂ ಕಾಣುವುದಿಲ್ಲ. ಚೈತ್ರಾ ಮುಂತಾದವರು ಮತೀಯ ರಾಜಕಾರಣದ ಕ್ರೂರ ವ್ಯವಸ್ಥೆಗೆ ಬಲಿಯಾದ ಯುವ ಸಮೂಹದ ಒಂದು ಭಾಗವಾಗಿ ಕಾಣುತ್ತಾರೆ – ನಾ ದಿವಾಕರ.

ಇತ್ತೀಚೆಗಷ್ಟೇ ಕರಾವಳಿ ಕರ್ನಾಟಕದ ಕುಂದಾಪುರ “ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ “ಯ ಮೂಲಕ ಜಗತ್ತಿನಾದ್ಯಂತ ಸುದ್ದಿ ಮಾಡಿತ್ತು. ಕರಾವಳಿ ಭಾಗದಲ್ಲಿ ಬ್ರಹ್ಮಾವರದಿಂದ ಶಿರೂರಿನವರೆಗೆ ವ್ಯಾಪಿಸುವ ಕುಂದಾಪ್ರ ಭಾಷಿಕರು ಆಚರಿಸಿದ ಈ ಹಬ್ಬಕ್ಕೆ ಇರುವ ಚಾರಿತ್ರಿಕ-ಜನಪದೀಯ ಹಿನ್ನೆಲೆಯೊಂದಿಗೇ ಈ ಭೂ ಪ್ರದೇಶದಲ್ಲಿರುವ ಚೆಂದದ ನೈಸರ್ಗಿಕ ತಾಣಗಳು, ಮಹಾಪ್ರಾಣಗಳೇ ಬಹುಮಟ್ಟಿಗೆ ಬಳಕೆಯಲ್ಲಿಲ್ಲದ ಕುಂದಾಪ್ರ ಭಾಷೆ, ಈ ಪ್ರಸ್ಥಭೂಮಿಯಲ್ಲೇ ಉದಿಸಿದ ಅನೇಕ ಸಾಹಿತ್ಯಕ, ಸಾಂಸ್ಕೃತಿಕ, ಕಲಾ ಪ್ರತಿಭೆಗಳು ಇವೆಲ್ಲವೂ ಕುಂದಾಪುರವನ್ನು ಕರ್ನಾಟಕದ ಹೆಮ್ಮೆಯ ನಗರವನ್ನಾಗಿಸಿದೆ. ಭೌಗೋಳಿಕ ಭಿನ್ನತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯೊಂದಿಗೆ ಬೆಳೆದುಬಂದಿರುವ ಈ ಪ್ರದೇಶದ ಹೆಸರು ಅಪಮಾನಕ್ಕೀಡಾಗುತ್ತಿದೆ ಎಂದು ಸ್ಥಳೀಯರೊಬ್ಬರು ನ್ಯಾಯಾಲಯದ ಮೊರೆ ಹೊಕ್ಕಿರುವುದು ವಿಪರ್ಯಾಸವಾದರೂ ವಾಸ್ತವ.

ಈ ವಿಪರ್ಯಾಸಕ್ಕೆ ಕಾರಣ ಕರ್ನಾಟಕದ ಕರಾವಳಿಯ ಒಡಲಲ್ಲಿ ಉಗಮಿಸಿ ಉಕ್ಕಿ ಹರಿಯುತ್ತಿರುವ ಮತೀಯ ದ್ವೇಷದ ತರಂಗಗಳು ಮತ್ತು ದ್ವೇಷ ಭಾವನೆಯನ್ನೂ ಬಂಡವಾಳವನ್ನಾಗಿ ಮಾಡಿಕೊಂಡ ಮತೀಯ ರಾಜಕಾರಣ, ಮತಾಂಧತೆಯ ಧ್ವನಿ ಹಾಗೂ ಜನಸಾಮಾನ್ಯರ ಸಮನ್ವಯದ ಬದುಕಿನ ತಳಪಾಯವನ್ನು ಶಾಶ್ವತವಾಗಿ ಶಿಥಿಲಗೊಳಿಸುವ ಸಾಂಸ್ಕೃತಿಕ ರಾಜಕಾರಣದ ಪ್ರಯತ್ನಗಳು. ಈ ನಡುವೆಯೇ ಕುಂದಾಪುರ ನಗರಿ ಚುನಾವಣಾ ರಾಜಕಾರಣದ ಬ್ರಹ್ಮಾಂಡ ಭ್ರಷ್ಟಾಚಾರವೂ ತನ್ನ ಒಡಲಲ್ಲೇ ಉದಯಿಸಿರುವುದನ್ನು ವಿಷಾದದಿಂದಲೇ ಗಮನಿಸುತ್ತಿದೆ. ತಮ್ಮ ಸ್ಥಳೀಯ ಚರಿತ್ರೆ-ಸಂಸ್ಕೃತಿ-ಪರಂಪರೆಯ ಬಗ್ಗೆ ಹೆಮ್ಮೆ ಇರುವ ಯಾವುದೇ ವ್ಯಕ್ತಿ-ಸಂಘಟನೆಗೂ ಈ ಅಪಮಾನದ ಭಾವ ಮೂಡುವುದು ಸಹಜ. ಚೈತ್ರಾ ಹೆಸರಿನ ಓರ್ವ ಯುವತಿಯ ಸುತ್ತ ಹೆಣೆದುಕೊಳ್ಳುತ್ತಿರುವ ಅಪರಾಧದ ಬಲೆಯಲ್ಲಿ ʼಕುಂದಾಪುರʼ ತನ್ನ ಸುಂದರ ಚರಿತ್ರೆಯೇ ವಿರೂಪಗೊಳ್ಳುವ ಆತಂಕವನ್ನು ಎದುರಿಸುವುದೂ ಸಹಜ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಗಳ ವಂಚನೆ ಮಾಡಿರುವ ಪ್ರಕರಣವೊಂದರಲ್ಲಿ ಚೈತ್ರಾ ಎಂಬ ಯುವತಿ ಸಿಲುಕಿದ್ದಾರೆ. ಅಧಿಕಾರ ರಾಜಕಾರಣದಲ್ಲಿ ಬಂಡವಾಳ ಮತ್ತು ಮಾರುಕಟ್ಟೆ ವಹಿಸುವ ಪ್ರಧಾನ ಪಾತ್ರವನ್ನು ಮತ್ತೊಂದು ಆಯಾಮದಲ್ಲಿ ಈ ಪ್ರಕರಣ ಹೊರಗೆಡಹಿದ್ದು ಗೋವಿಂದ ಬಾಬು ಪೂಜಾರಿ ಎಂಬ  ಉದ್ಯಮಿ, ಅಭಿನವ ಹಾಲಶ್ರೀ ಎಂಬ ಖಾವಿಧಾರಿ ಮಠೋದ್ಯಮಿಯೂ ಸೇರಿದಂತೆ ಹಲವರು ಈ ಹಗರಣದಲ್ಲಿ ಭಾಗಿಯಾಗಿರುವುದಾಗಿ ವರದಿಯಾಗಿದೆ. ಈಗಾಗಲೇ ಕೋಟ್ಯಂತರ ರೂಗಳ ನಗದು ತನಿಖಾ ಸಂಸ್ಥೆಗಳ ವಶವಾಗಿದ್ದು, ಟಿಕೆಟ್‌ ಹಂಚಿಕೆಯ ರಾಜಕಾರಣವು ರಾಜ್ಯದ ಗಡಿರೇಖೆಗಳನ್ನೂ ದಾಟಿ ಹೋಗಿರುವ ಸುದ್ದಿಯೂ ಕೇಳಿಬರುತ್ತಿದೆ. ಬಂಧನಕ್ಕೊಳಗಾಗಿರುವ ಚೈತ್ರಾ ಒದಗಿಸುತ್ತಿರುವ ಮಾಹಿತಿಯ ಅನುಸಾರವೇ ಈ ಬ್ರಹ್ಮಾಂಡ ಭ್ರಷ್ಟಾಚಾರದ ಕರಾಳ ಬಾಹುಗಳು ವಿಸ್ತರಿಸುತ್ತಲೇ ಇರುವುದು. ಅಧಿಕಾರ ರಾಜಕಾರಣ ಮತ್ತು ಮತೀಯ ರಾಜಕಾರಣದ ನಡುವಿನ ಅವಿನಾಭಾವ ಸಂಬಂಧಗಳನ್ನು ಇದು ಸ್ಪಷ್ಟವಾಗಿ ಹೊರಗೆಡಹಿದೆ.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿ, ಪತ್ರಿಕೋದ್ಯಮದ ಉಪನ್ಯಾಸಕಿಯಾಗಿ ಬೋಧನೆ ಮಾಡುತ್ತಲೇ ತಮ್ಮ ಸಾಮಾಜಿಕ-ಸಾಂಸ್ಕೃತಿಕ ಬದುಕನ್ನು ರೂಪಿಸಿಕೊಂಡ ಓರ್ವ ಮಹಿಳೆ ಇಂದು ಮತೀಯ ರಾಜಕಾರಣದ ಕರಾಳ ಕೂಪದಲ್ಲಿ ಸಿಲುಕಿದ ಅಪರಾಧಿಯಾಗಿ ಕಾಣುತ್ತಿರುವುದು ವರ್ತಮಾನದ ದುರಂತ. ಕುಂದಾಪುರ ಮತ್ತು ಬೈಂದೂರು ಭಾಗದಲ್ಲಿ ಈ ಯುವತಿಯನ್ನು ಕಾಳಿಮಾತೆಯಂತೆ ಬಿಂಬಿಸಿದ ಸ್ಟಿಕ್ಕರ್‌ಗಳು ಹಲವು ವರ್ಷಗಳ ಕಾಲ ಮತೀಯ ಕಾವಲುಪಡೆಗಳ ವಾಹನಗಳ ಮೇಲೆ ರಾರಾಜಿಸಿದ್ದವು. ಉತ್ತರ ಕರ್ನಾಟಕದ ರಾಯಚೂರು-ಗಂಗಾವತಿಯಿಂದ ದಕ್ಷಿಣ ಕನ್ನಡದ ಬಂಟ್ವಾಳ- ಸುಳ್ಯದವರೆಗೆ ಈಕೆಯ ದ್ವೇಷ ಭಾಷಣಗಳು, ಮತಾಂಧತೆಯ ಕಿಡಿನುಡಿಗಳು, ಸುಳ್ಳು ಇತಿಹಾಸದ ವ್ಯಾಖ್ಯಾನಗಳು ಹರಿದಾಡಿದ್ದವು. ಈಗ  ಈ ದ್ವೇಷ ಭಾಷಣಗಳ ಫಲಾನುಭವಿಗಳೆಲ್ಲರೂ ತಮಗೂ ಆಕೆಗೂ ಸಂಬಂಧವೇ ಇಲ್ಲ ಎಂದು ಹೇಳುತ್ತಿದ್ದಾರೆ. ಮುಸ್ಲಿಂ ದ್ವೇಷದ ಮೂಲಕವೇ ಹಿಂದೂ ಸಮಾಜವನ್ನು ಒಗ್ಗೂಡಿಸಲು ಶ್ರಮಿಸುತ್ತಿರುವ ಹಿಂದುತ್ವ ಸಂಘಟನೆಗಳೂ ಸಹ ಅಂತರ ಕಾಪಾಡಿಕೊಳ್ಳುತ್ತಿವೆ.

ಹಾಗಾದರೆ ಈ ಮಹಿಳೆ ತನ್ನ ಪತ್ರಿಕೋದ್ಯಮದ ಹಾದಿಯನ್ನು ತೊರೆದು, ಆ ಹಾದಿಯ ವೃತ್ತಿ ಪಾವಿತ್ರ್ಯತೆಯನ್ನೂ ಬದಿಗಿಟ್ಟು, ಸಮಾಜದಲ್ಲಿ ಒಡಕು ಉಂಟುಮಾಡುವ ಹಾದಿಯಲ್ಲಿ ಸಾಗಿದ್ದು ಯಾರಿಗಾಗಿ? ತನ್ನ ಬಿರುಸು ಭಾಷಣಗಳ ಮೂಲಕ, ಮತದ್ವೇಷವನ್ನು ಹರಡುವ ಬಿರುನುಡಿಗಳ ಮೂಲಕ ಸಾಮಾನ್ಯ ಜನರ ನಡುವೆ ಕೋಮು ಭಾವನೆಗಳನ್ನು ಬಿತ್ತುವುದೇ ಅಲ್ಲದೆ ಪರಸ್ಪರ ಸ್ನೇಹ-ಪ್ರೀತಿ-ಬಾಂಧವ್ಯಗಳನ್ನೂ ಕಡಿದುಕೊಳ್ಳುವಂತೆ ಮಾತನಾಡುತ್ತಿದ್ದ ಚೈತ್ರಾ ಕರಾವಳಿ ಕರ್ನಾಟಕದ ಕೋಮು ರಾಜಕಾರಣದಲ್ಲಿ ಸ್ಟಾರ್‌ ವ್ಯಾಲ್ಯೂ ಇರುವಂತಹ ವಾಗ್ಮಿಯಾಗಿದ್ದುದಂತೂ ಸತ್ಯ. ಈಗ ಹಿಂದುತ್ವ ಸಂಘಟನೆಗಳನ್ನೂ ಒಳಗೊಂಡಂತೆ, ಇಡೀ ರಾಜಕೀಯ ವ್ಯವಸ್ಥೆಯೇ ಈಕೆಯ ಸಾಂಗತ್ಯ, ಸಾಮೀಪ್ಯ ಮತ್ತು ಸದಸ್ಯತ್ವವನ್ನು ನಿರಾಕರಿಸುತ್ತಿದೆ ಎಂದರೆ ಈ ಮಹಿಳೆ ಹೋರಾಟ ನಡೆಸಿದ್ದು ಏತಕ್ಕಾಗಿ? ಯಾರಿಗಾಗಿ? ಯಾವ ಗುರಿ ಸಾಧನೆಗಾಗಿ?,

ಯಾವುದೇ ಒಂದು ಸಾಮಾಜಿಕ ಪರಿಸರದಲ್ಲಿ ಯೌವ್ವನದ ಹೊಸ್ತಿಲಲ್ಲಿರುವ ಯುವ ಪೀಳಿಗೆ ಒಂದು ನಿರ್ದಿಷ್ಟ ಸೈದ್ಧಾಂತಿಕ ಮಾರ್ಗವನ್ನು ಅನುಸರಿಸುವುದೇ ಆದರೆ ಆ ಅನುಸರಣೆಯ ಹಿಂದೆ ಒಂದು ಪಕ್ಷದ ಅಥವಾ  ಸಂಘಟನೆಯ ಸೈದ್ದಾಂತಿಕ ನೆಲೆಗಳು ಇದ್ದೇ ಇರುತ್ತವೆ. ಹಾಗೆಯೇ ದಕ್ಷಿಣ ಕನ್ನಡದಲ್ಲಿ, ಕರ್ನಾಟಕದ ಕರಾವಳಿಯಲ್ಲಿ ಒಂದು ಕಾಲದಲ್ಲಿ ಎಡಪಂಥೀಯ ವಿಚಾರಧಾರೆಯಿಂದ ಪ್ರಭಾವಿತರಾದ ಸಾವಿರಾರು ಯುವಜನರು ನಮ್ಮ ನಡುವೆ ಕಾಣುತ್ತಾರೆ, ಇಂದಿಗೂ ಕಾಣುತ್ತಿದ್ದಾರೆ. ಆದರೆ ಕಳೆದ ಮೂರು ದಶಕಗಳಲ್ಲಿ ಈ ಪ್ರದೇಶಗಳು ಕೋಮು ರಾಜಕಾರಣದ ಪ್ರಯೋಗಶಾಲೆಯಾಗಿದ್ದು, ಎರಡೂ ಬದಿಯ ಮತೀಯವಾದಿಗಳ ಮತಾಂಧ ಸಂಘಟನೆಗಳ ಶಕ್ತಿ ಪ್ರದರ್ಶನದ ತಾಣವಾಗಿ ಪರಿಣಮಿಸಿದೆ.  ಕಳೆದ ಐದಾರು ವರ್ಷಗಳಲ್ಲಿ ನಡೆದಿರುವ ಹಿಂದೂ-ಮುಸ್ಲಿಂ ಯುವಕರ ಕಗ್ಗೊಲೆಗಳು ಇದಕ್ಕೆ ಸಾಕ್ಷಿಯಾಗಿದೆ.

ಇಂತಹ ಒಂದು ದ್ವೇಷದ ಕುಲುಮೆಯಲ್ಲಿ ಬೆಂದವರಾಗಿ ಚೈತ್ರಾ ಎಂಬ ಮಹಿಳೆ ಬೆಂಕಿಯುಂಡೆ ಉಗುಳುವ ವಾಗ್ಮಿಯಾಗಿ, ಹಿಂದುತ್ವ ರಾಜಕಾರಣದ ಪ್ರಚಾರಕಿಯಾಗಿ, ದ್ವೇಷ ರಾಜಕಾರಣದ ಪರಿಚಾರಕಿಯಾಗಿ ಹೊರಹೊಮ್ಮಿದ್ದಾರೆ. ಮತೀಯ ರಾಜಕಾರಣ ಮತ್ತು ಅನ್ಯರನ್ನು ಸೃಷ್ಟಿಸುವಂತಹ ಮತಾಂಧತೆಯ ಸಾಂಸ್ಥಿಕ ಚಟುವಟಿಕೆಗಳು ಅಸಂತೃಪ್ತ, ಅವಕಾಶವಂಚಿತ ಅಥವಾ ಯಾವುದೋ ಕಾರಣದಿಂದ ನೊಂದ ಯುವಸಮೂಹವನ್ನು ಸುಲಭವಾಗಿ ತನ್ನೆಡೆಗೆ ಸೆಳೆಯುತ್ತವೆ. ಸಮನ್ವಯತೆ, ಸೌಹಾರ್ದತೆ ಮತ್ತು ಭ್ರಾತೃತ್ವವನ್ನು ಬೆಸೆಯುವ ಚಿಂತನಾ ವಾಹಿನಿಗಳಿಗಿಂತಲೂ ಸಮಾಜದ ಉದ್ದಗಲಕ್ಕೂ ವ್ಯಾಪಿಸುವ, ತಳಮಟ್ಟದ ಸಾಮಾನ್ಯ ಜನತೆಯನ್ನೂ ಆಕರ್ಷಿಸುವ ಹಾಗೂ ಸಮಾಜದಲ್ಲಿ ಒಂದು ತಾರಾಮೌಲ್ಯವನ್ನು ತಂದುಕೊಡುವ ಮತೀಯವಾದ, ಜಾತಿವಾದದಂತಹ ತಾತ್ವಿಕತೆಗಳು ಯುವ ಸಂಕುಲಕ್ಕೆ ಹೆಚ್ಚು ಅಪ್ಯಾಯಮಾನವಾಗಿಯೂ ಕಾಣುತ್ತವೆ.

ಹಾಗಾಗಿಯೇ ದಕ್ಷಿಣ ಕನ್ನಡ-ಕರಾವಳಿ ಪ್ರದೇಶದಲ್ಲಿ ಶತಮಾನದ ಇತಿಹಾಸ ಹೊಂದಿರುವ ಮಾನವೀಯ ಮೌಲ್ಯಗಳ ಚಿಂತನಾ ವಾಹಿನಿಗಳಿಗಿಂತಲೂ ಕೋಮುವಾದ-ಮತದ್ವೇಷ ಮತ್ತು ಮತೀಯ ರಾಜಕೀಯ ಆಲೋಚನೆಗಳು ಹೆಚ್ಚು ಆಕರ್ಷಣೀಯವಾಗುತ್ತವೆ. ಕರ್ನಾಟಕದ ಪ್ರಮುಖ ಮಾರ್ಕ್ಸ್‌ವಾದಿ ಚಿಂತಕರು, ಸಮಾಜ ಸುಧಾರಕ ನಾರಾಯಣಗುರು, ಕುದ್ಮಲ್‌ ರಂಗರಾವ್‌, ಶಿವರಾಮ ಕಾರಂತ ಮುಂತಾದವರ ನೆಲೆವೀಡು ಎಂದೇ ಖ್ಯಾತಿ ಹೊಂದಿರುವ ದಕ್ಷಿಣ ಕನ್ನಡ-ಕರಾವಳಿ ಕರ್ನಾಟಕದ ಪ್ರದೇಶ ಇಂದು ಚೈತ್ರಾ ಅವರಂತಹ ದ್ವೇಷ ರಾಜಕಾರಣದ ಪರಿಚಾರಕರನ್ನು ಸೃಷ್ಟಿಸುತ್ತಿರುವುದು ಚರಿತ್ರೆಯ ವಿಡಂಬನೆಯಷ್ಟೇ ಅಲ್ಲದೆ, ವೈಚಾರಿಕ ರಾಜಕಾರಣದ ವೈಫಲ್ಯವನ್ನೂ ಸೂಚಿಸುತ್ತದೆ. ಈ ದ್ವೇಷ ರಾಜಕಾರಣವೇ ಅಧಿಕಾರ ರಾಜಕಾರಣವನ್ನು ಮುನ್ನಡೆಸುವ ಅಗ್ರ ರಥವಾದರೆ ಇಂತಹ ಕಾರ್ಯಕರ್ತರು ಚುನಾವಣಾ ಭ್ರಷ್ಟಾಚಾರದ ಪರಿಚಾರಕರೂ ಆಗುತ್ತಾರೆ.

ಸಮಾಜಮುಖಿಯಾಗಿ, ಮಾನವತೆಯ ಸರಕುಗಳೊಂದಿಗೆ ಕೂಡುಬಾಳ್ವೆಯ ವಾಹಕವಾಗಬೇಕಾದ ಯುವ ಸಮೂಹ ಮತೀಯ ರಾಜಕಾರಣದ ಕುಲುಮೆಯಲ್ಲಿ ಬೆಂದು ದ್ವೇಷಾಸೂಯೆಗಳ ರಥಸಾರಥಿಗಳಾಗಿ ಪರಿಣಮಿಸುವುದು ಜಾಗತಿಕ ವಿದ್ಯಮಾನವಾಗಿದ್ದು, ಕರಾವಳಿಯೂ ಇದಕ್ಕೆ ಹೊರತಲ್ಲ, ಕುಂದಾಪುರವೂ ಹೊರತಾಗಲಾರದು. ಚೈತ್ರಾ ಈ ರೀತಿ ತಯಾರಾದ ಕಾರ್ಯಕರ್ತೆಯಾಗಿದ್ದು ಇಂದು ತನ್ನ ಕರ್ಮಭೂಮಿಯಲ್ಲೇ ಅಪರಾಧಿಯಾಗಿ ಅನಾಥ ಸ್ಥಿತಿಯಲ್ಲಿದ್ದಾರೆ. ಆಕೆಯ ಮೇಲಿನ ಆರೋಪಗಳನ್ನು ವ್ಯಕ್ತಿಗತ ನೆಲೆಯಲ್ಲಿ ನೋಡದೆ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಭ್ರಷ್ಟಾಚಾರ ಮತ್ತು ಚುನಾವಣಾ ಬಂಡವಾಳದ ಕೂಪದಲ್ಲಿ ಇಣುಕಿ ನೋಡಿದರೆ ಚೈತ್ರಾ ಏಕಾಂಗಿಯಾಗೇನೂ ಕಾಣುವುದಿಲ್ಲ. ಅಪರಾಧಿಗಳಾಗಿ ಯಾರೂ ಜನಿಸುವುದಿಲ್ಲ. ಸಮಾಜವೇ ಅಂಥವರನ್ನು ಸೃಷ್ಟಿಸುತ್ತದೆ ಎನ್ನುವ ಪಾರಂಪರಿಕ ಮಾತುಗಳ ಹಿನ್ನೆಲೆಯಲ್ಲಿ ನೋಡಿದಾಗ, ಚೈತ್ರಾ ಮುಂತಾದವರು ಮತೀಯ ರಾಜಕಾರಣದ ಕ್ರೂರ ವ್ಯವಸ್ಥೆಗೆ ಬಲಿಯಾದ ಯುವ ಸಮೂಹದ ಒಂದು ಭಾಗವಾಗಿ ಕಾಣುತ್ತಾರೆ.

ಚೈತ್ರಾ ಅಪರಾಧಿಯೋ ಅಲ್ಲವೋ ತೀರ್ಮಾನವಾಗುವುದಕ್ಕೂ ಮುನ್ನ, ಕಲುಷಿತ ಸಾಮಾಜಿಕ ಪರಿಸರ, ದ್ವೇಷಾಸೂಯೆಗಳ ರಾಜಕೀಯ ವ್ಯವಸ್ಥೆ, ಸಂಕುಚಿತವಾಗಿರುವ ಸಾಂಸ್ಕೃತಿಕ ವಾತಾವರಣ ಮತ್ತು ಇವೆಲ್ಲದರ ವಾರಸುದಾರ ಶಕ್ತಿಗಳು ಅಪರಾಧಿಗಳಾಗಿ ನಮ್ಮ ನಡುವೆ ನಿಂತೇ ಇದ್ದಾರೆ. ಚೈತ್ರಾ ಮತ್ತಿತರರಿಗೆ ಶಿಕ್ಷೆಯಾಗಬಹುದು ಆದರೆ ಈ ಬಾಹ್ಯ ಶಕ್ತಿಗಳನ್ನು ಶಿಕ್ಷಿಸುವವರಾರು ?

ನಾ ದಿವಾಕರ

ಚಿಂತಕರು

Related Articles

ಇತ್ತೀಚಿನ ಸುದ್ದಿಗಳು