ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮತ್ತೊಂದು ರಿಲೀಫ್ ಸಿಕ್ಕಿದೆ. ದೆಹಲಿ ಹೈಕೋರ್ಟ್ ಬಳಿಕ ಇದೀಗ ಸುಪ್ರೀಂ ಕೋರ್ಟ್ ಕೂಡ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಕೇಜ್ರಿವಾಲ್ ಅವರನ್ನು ಕೇಳುವ ಯಾವುದೇ ಕಾನೂನು ಹಕ್ಕು ನಮಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದಕ್ಕೂ ಮುನ್ನ ದೆಹಲಿ ಹೈಕೋರ್ಟ್ ಅರ್ಜಿದಾರ, ಆಪ್ ಮಾಜಿ ಶಾಸಕ ಸಂದೀಪ್ ಕುಮಾರ್ ಅವರಿಗೆ ಛೀಮಾರಿ ಹಾಕಿ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಅಲ್ಲದೆ, ನ್ಯಾಯಾಲಯವು ಅರ್ಜಿದಾರರಿಗೆ 50 ಸಾವಿರ ರೂಪಾಯಿ ದಂಡವನ್ನೂ ವಿಧಿಸಿತ್ತು. ನ್ಯಾಯಾಂಗ ವ್ಯವಸ್ಥೆಯನ್ನು ಗೇಲಿ ಮಾಡಬೇಡಿ ಎಂದು ಕಟ್ಟುನಿಟ್ಟಿನ ಧ್ವನಿಯಲ್ಲಿ ನ್ಯಾಯಾಲಯ ಎಚ್ಚರಿಕೆ ನೀಡಿತ್ತು.
ಯಾವುದೇ ಮುಖ್ಯಮಂತ್ರಿಯನ್ನು ಪದಚ್ಯುತಗೊಳಿಸಿದ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟಿನ ಯಾವುದೇ ಆದೇಶವಿದೆಯೇ ಎಂದು ದೆಹಲಿ ಹೈಕೋರ್ಟ್ ಅರ್ಜಿದಾರರನ್ನು ಕೇಳಿದೆ. ಅರ್ಜಿ ಸಲ್ಲಿಸುವ ಮೂಲಕ ನ್ಯಾಯಾಲಯದ ಸಮಯವನ್ನು ಹಾಳು ಮಾಡುತ್ತಿದ್ದೀರಿ ಎಂದು ಪೀಠ ಹೇಳಿತ್ತು. ನಾವು ನಿಮಗೆ ಭಾರೀ ದಂಡವನ್ನು ವಿಧಿಸುತ್ತಿದ್ದೇವೆ. ನ್ಯಾಯಾಲಯದ ಒಳಗೆ ರಾಜಕೀಯ ಭಾಷಣ ಮಾಡಬೇಡಿ, ಭಾಷಣ ಮಾಡಲು ಬೀದಿಗೆ ಹೋಗಿ ಎಂದು ಖಾರವಾಗಿ ಹೇಳಿತ್ತು.
ನಿಮ್ಮ ಅರ್ಜಿದಾರರು ರಾಜಕೀಯ ವ್ಯಕ್ತಿಗಳಾಗಿರುತ್ತಾರೆ, ಆದರೆ ನ್ಯಾಯಾಲಯವು ರಾಜಕೀಯ ಮಹತ್ವಾಕಾಂಕ್ಷೆಗಳ ಆಧಾರದ ಮೇಲೆ ಕಾರ್ಯನಿರ್ವಹಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.