ಇಂದಿನ ಇಂಟರ್ನೆಟ್ ಯುಗದಲ್ಲಿ ಮಹಿಳೆಯರು ಹೊರಗಿನ ಪ್ರಪಂಚವನ್ನು ನೋಡುತ್ತಿದ್ದಾರೆ. ತಂತ್ರಜ್ಞಾನದಲ್ಲಿ ಉತ್ತುಂಗಕ್ಕೆ ಏರುತ್ತಿದ್ದಾರೆ. ಪುರುಷರ ಕೈಯೊಳಗಿದ್ದ ಬಹುತೇಕ ಎಲ್ಲ ಕ್ಷೇತ್ರಗಳನ್ನು ಮಹಿಳೆಯರು ಪ್ರವೇಶಿಸುತ್ತಿದ್ದಾರೆ. ಹೀಗಿದ್ದೂ ಮಹಿಳೆಯರ ಪಾಡು ಇನ್ನೂ ಅಲ್ಲೇ ಇದೆ! – ಲಾವಣ್ಯ ಪುತ್ತೂರು, ಪತ್ರಿಕೋದ್ಯಮ ವಿದ್ಯಾರ್ಥಿನಿ
ಹೆಣ್ಣು ಯಾವಾಗಲೂ ಗಂಡಿನ ಅಧೀನದಲ್ಲಿರುತ್ತಾಳೆ. ಮಗುವಾಗಿದ್ದಾಗ ತಂದೆಯ ಅಧೀನ, ಬೆಳೆದು ದೊಡ್ದವಳಾದಾಗ ಗಂಡನ ಅಧೀನ, ವಯಸ್ಸಾದಾಗ ಮಕ್ಕಳ ಅಧೀನದಲ್ಲಿರಬೇಕಾಗುತ್ತದೆ. ಮನೆಯಿಂದ ಹೊರಗಡೆ ಕಾಲಿಡಬೇಕಾದರೆ ಗಂಡಿನ ಅನುಮತಿ ಪಡೆಯುವ ಅನಿವಾರ್ಯತೆ ಎದುರಾಗುತ್ತದೆ. ಹೀಗೆ ಮಹಿಳೆಯು ಒಂದಲ್ಲಾ ಒಂದು ರೀತಿಯಲ್ಲಿ ದಶಕಗಳಿಂದ ತುಳಿತಕ್ಕೆ ಒಳಪಟ್ಟವಳಾಗಿದ್ದಾಳೆ.
ಪುರುಷ ಪ್ರಧಾನ ಸಮಾಜದಲ್ಲಿ ಬದುಕುವಾಗ ಹೆಣ್ಣು ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಾಳೆ ಎಂದು ಹೇಳುವುದರಲ್ಲಿ ತಪ್ಪೇನಿದೆ? ದೂರದ ಊರಿಗೆ ಹೋಗಬೇಕಾದರೆ ಒಬ್ಬಂಟಿಯಾಗಿ ಬಿಡುವುದಿಲ್ಲ. ಒಂಟಿಯಾಗಿ ಹೋದರೆ ಸಂಶಯ ಎಂಬ ಭೂತ ಬಂದು ಬಿಡುತ್ತದೆ. ಹುಡುಗಿ ಎಂಬ ಕಾರಣಕ್ಕೆ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಾರೆ. ಗಂಡಿನ ಹಾಗೆ ಹೆಣ್ಣಿಗೂ ಸ್ವಾವಲಂಬಿಯಾಗಿ ಬದುಕಲು ಆಸೆ ಇರುವುದಿಲ್ಲವೇ? ಹೆಣ್ಣಾಗಿ ಹುಟ್ಟಿದ ಕಾರಣಕ್ಕೆ ಅವಳು ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಬೇಕಾಗುತ್ತದೆ.
ತಾನು ಹೇಳಿದ ಹಾಗೆಯೇ ಅವಳು ಕೇಳಬೇಕು ಎಂಬ ಕಲ್ಪನೆಗಳು ಸಾಮಾನ್ಯವಾಗಿ ಗಂಡಿಗೆ ಇರುತ್ತವೆ. ಹೆಣ್ಣು ಅಡುಗೆ ಮಾಡಿಕೊಂಡು, ಮಕ್ಕಳನ್ನು ನೋಡಿಕೊಂಡು ಇರಬೇಕೆಂಬ ಮಾತುಗಳು ಇಂದಿಗೂ ಬದಲಾಗಲೇ ಇಲ್ಲ. ಮಹಿಳೆಯನ್ನು ಹಿಂದಿನಿಂದಲೂ ಅಬಲೆಯೆಂದೇ ಕಡೆಗಣಿಸಿಕೊಂಡು ಬರಲಾಗಿದೆ. ಹೆಣ್ಣು ಮತ್ತು ಗಂಡು ಎಂಬ ಜೈವಿಕ ಲಕ್ಷಣಗಳು ವ್ಯಕ್ತಿಯ ಹುಟ್ಟಿನಿಂದಲೇ ನಿರ್ಧಾರವಾಗುತ್ತದೆ. ಆದರೆ ಮಹಿಳೆ ಮತ್ತು ಪುರುಷ ಎಂಬುದು ಸಾಮಾಜೀಕರಣದಿಂದ ರೂಪುಗೊಳ್ಳುತ್ತದೆ.
ಮಹಿಳೆಯರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದನ್ನು ಪುರುಷಪ್ರಧಾನ ಸಮಾಜ ಗಮನಿಸುವುದು ಕಡಿಮೆಯೇ. ಹದಿಹರೆಯದ ಪ್ರಾಯದಲ್ಲಿ ಹಲವರು ಪಿಸಿಓಡಿ ಮತ್ತು ಬೊಜ್ಜಿನ ಸಮಸ್ಯೆಯಿಂದಾಗಿ ಬಳಲುತ್ತಿರುತ್ತಾರೆ. ಆನಂತರ ಗರ್ಭಧಾರಣೆ ಸಂದರ್ಭದಲ್ಲಿ ಗರ್ಭಕೋಶ ಮತ್ತು ಜನನಾಂಗಗಳಿಗೆ ಸಂಬಂಧಿಸಿದ ಸೋಂಕುಗಳಿಂದ ನೋವುಗಳನ್ನು ಅನುಭವಿಸುತ್ತಿರುತ್ತಾರೆ. ಗರ್ಭಧಾರಣೆಯ ಸಂದರ್ಭದಲ್ಲಿ ಸರಿಯಾದ ಪೌಷ್ಟಿಕಾಂಶಗಳು ಸಿಗದೇ ಇರುವುದರಿಂದ ಕೆಲವರಿಗೆ ದೇಹ ರಚನೆಯಲ್ಲಿ ಬದಲಾವಣೆ ಉಂಟಾಗುತ್ತದೆ. ಹೆಣ್ಣಿನ ಸೌಂದರ್ಯದಿಂದಲೇ ಅವಳನ್ನು ಅಳೆಯುವ ಗಂಡಸಿನ ಯೋಚನೆಯು ಅವಳನ್ನು ಕೆಲವೊಮ್ಮೆ ಮಾನಸಿಕ ಖಿನ್ನತೆಗೆ ದೂಡುತ್ತದೆ.
ಇನ್ನು ಹಳ್ಳಿಗಳ ಸ್ಥಿತಿ ಕೇಳುವುದೇ ಬೇಡ. ಹೆಣ್ಣುಮಕ್ಕಳು ಬೇಗನೆ ಎದ್ದು, ಪೂಜೆ ಮಾಡಿ, ಅಡುಗೆ ಮಾಡಬೇಕು. ಆದರೆ ಗಂಡಾದರೆ ಅದಾವುದೇ ತಕರಾರು ಇಲ್ಲ! ಹೆಣ್ಣು- ಗಂಡು ಎಂಬ ಭೇದ- ಭಾವ ತಲಾಂತರದಿಂದ ಬಂದು ಬಿಟ್ಟಿದೆ. ಎಷ್ಟೇ ಹೋರಾಟ ಮಾಡಿದರೂ, ಪುರುಷರಷ್ಟು ಮಹಿಳೆಯರನ್ನು ಸಮಾನರನ್ನಾಗಿ ಕಾಣುವುದಿಲ್ಲ. ಕೆಲಸದ ವಿಷಯವೇ ನೋಡಿದರೂ ಗಂಡಿನಂತೆಯೇ ಹೆಣ್ಣು ಕೂಡ ಸಮಾನವಾಗಿ ಕೆಲಸ ಮಾಡುತ್ತಾಳೆ. ಆದರೆ ಅವರಿಗೆ ವೇತನ ಸಿಗುವಾಗ ಮಾತ್ರ ಸಮಾನತೆ ಇರುವುದಿಲ್ಲ.

ಹೆಣ್ಣು ಹುಟ್ಟಿದಾಗ ಖುಷಿಪಡದ ಜನರಿದ್ದಾರೆ, ಹೆಣ್ಣು ಬಲಶಾಲಿಯಾಗುವುದು ಯಾರಿಗೂ ಇಷ್ಟವಿಲ್ಲವೇನು? ಹೆಣ್ಣು ಎಲ್ಲಾ ಕ್ಷೇತ್ರದಲ್ಲಿಯೂ ಮಿಂಚಿದರೂ ಗಂಡಿನ ಸರಿಸಾಟಿಯಾಗಿ ನಿಲ್ಲಲು ಬಿಡುವುದಿಲ್ಲ. ಇನ್ನೂ ಮದುವೆಯಾದರೆ ಸಾಕು ತನ್ನ ಅಪ್ಪ- ಅಮ್ಮ ಎಲ್ಲರನ್ನೂ ಬಿಟ್ಟು ಅವನ ಜೊತೆ ಹೋಗಬೇಕು. ಅವನ ಮನೆಯವರೊಂದಿಗೆ ಹೊಂದಾಣಿಕೆಯಿಂದ ಇರಬೇಕಾಗುತ್ತದೆ. ತನ್ನ ಎಲ್ಲಾ ಅಕಾಂಕ್ಷೆಗಳನ್ನು ಬಿಟ್ಟು ಹೋದರೂ ಅಲ್ಲಿಯೂ ಅವರಿಗೆ ಸ್ವಾತಂತ್ರ್ಯ ಸಿಗುವುದಿಲ್ಲ.
ಗಂಡಿನ ತಪ್ಪಿದ್ದರೂ ಹೆಣ್ಣಿಗೇ ಶಿಕ್ಷೆ ಕೊಡುವುದನ್ನು ಕಾಣಬಹುದು. ಹೆಣ್ಣು ಎಂದ ಕೂಡಲೆ ‘ಅವಳು ಪುರುಷನಷ್ಟು ಸಮರ್ಥಳಲ್ಲ ಎಂದು ಯಾಕೆ ಹೇಳುತ್ತಾರೆ? ಹೆಣ್ಣೊಬ್ಬಳು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರೆ ಅವಳಿಗೆ ಏನೆಲ್ಲಾ ಪಟ್ಟಕಟ್ಟಿ ಅವಳ ಜೀವನವೇ ಕುಗ್ಗಿಸುವಂತೆ ಮಾಡಿಬಿಡುತ್ತಾರೆ. ಅವಳು ತಲೆ ತಗ್ಗಿಸಿದ ಕೂಡಲೇ ಒಳ್ಳೆಯವಳಾಗಿ ಬಿಡುತ್ತಾಳೆ. ಸ್ವಲ್ಪ ಜೋರು ಧ್ವನಿಯಲ್ಲಿ ಮಾತನಾಡಿದರೆ, ಅವಳು ಕೆಟ್ಟವಳು ಎಂದು ಸಮಾಜವೇ ಹೇಳಿ ಬಿಡುವುದಿಲ್ಲವೇ?
ಮೊದಲಿಗಿಂತ ಈಗ ಮಹಿಳೆಯರ ಬದುಕು ಸ್ವಲ್ಪ ಮಟ್ಟಿಗೆ ಬದಲಾದರೂ ಸಂಪೂರ್ಣವಾಗಿ ಸ್ವತಂತ್ರಳಾಗಿಲ್ಲ. ಇಂದಿನ ಇಂಟರ್ನೆಟ್ ಯುಗದಲ್ಲಿ ಮಹಿಳೆಯರು ಹೊರಗಿನ ಪ್ರಪಂಚವನ್ನು ನೋಡುತ್ತಿದ್ದಾರೆ. ತಂತ್ರಜ್ಞಾನದಲ್ಲಿ ಉತ್ತುಂಗಕ್ಕೆ ಏರುತ್ತಿದ್ದಾರೆ. ಪುರುಷರ ಕೈಯೊಳಗಿದ್ದ ಬಹುತೇಕ ಎಲ್ಲ ಕ್ಷೇತ್ರಗಳನ್ನು ಮಹಿಳೆಯರು ಪ್ರವೇಶಿಸುತ್ತಿದ್ದಾರೆ. ಹೀಗಿದ್ದೂ ಮಹಿಳೆಯರ ಪಾಡು ಇನ್ನೂ ಅಲ್ಲೇ ಇದೆ!
ಹೆಣ್ಣನ್ನು ಕೇವಲ ಕಾಮಕ್ಕೋಸ್ಕರ ಉಪಯೋಗಿಸಿ ತಮ್ಮ ದಾಹವನ್ನು ತೀರಿಸುವ ಸಮಾಜದಲ್ಲಿ ನಾವು ಇದ್ದೇವೆ ಅನ್ನುವುದು ವಿಷಾದನೀಯ. ಹಲವಾರು ಮಹಿಳಾಪರ ಕಾನೂನು, ನೀತಿಗಳಿದ್ದರೂ ಅದರಿಂದ ಮಹಿಳೆಯರ ಸ್ಥಿತಿಗತಿಗಳನ್ನು ನಿರೀಕ್ಷಿಸಿದಷ್ಟು ಉತ್ತಮಪಡಿಸಲು ಸಾಧ್ಯವಾಗಿಲ್ಲ. ಹೆಣ್ಣಿಗೂ ಒಂದು ಮನಸ್ಸಿದೆ. ಅವಳಿಗೂ ಒಂದು ಹೃದಯವಿದೆ. ಅವಳ ಕನಸಿಗೂ ಬೆಲೆ ಕೊಡಿ. ಹೆಣ್ಣನ್ನು ಪೂಜಿಸದಿದ್ದರೂ ಪರವಾಗಿಲ್ಲ, ಅವಳನ್ನು ದ್ವೇಷಿಸಬೇಡಿ.
ಲಾವಣ್ಯ, ಪುತ್ತೂರು
ಪತ್ರಿಕೋದ್ಯಮ ವಿದ್ಯಾರ್ಥಿನಿ
ಇದನ್ನೂ ಓದಿ–ಮೌಢ್ಯತೆಯನ್ನು ಹೋಗಲಾಡಿಸುವ, ಧರ್ಮದ ಅಮಲನ್ನು ಇಳಿಸುವ ಶಿಕ್ಷಣ ಅಗತ್ಯ