Home ಬ್ರೇಕಿಂಗ್ ಸುದ್ದಿ ಮಳೆ ಹಾನಿ ಸರ್ಕಾರ ಗಾಢ ನಿದ್ರೆಯಲ್ಲಿದೆ ಯಾವುದೇ ಮಂತ್ರಿಗಳು ಇಲ್ಲಿಗೆ ಭೇಟಿ ನೀಡಿಲ್ಲ ಆರ್‌ ಆಶೋಕ್‌...

ಮಳೆ ಹಾನಿ ಸರ್ಕಾರ ಗಾಢ ನಿದ್ರೆಯಲ್ಲಿದೆ ಯಾವುದೇ ಮಂತ್ರಿಗಳು ಇಲ್ಲಿಗೆ ಭೇಟಿ ನೀಡಿಲ್ಲ ಆರ್‌ ಆಶೋಕ್‌ ಗರಂ

ಹಾಸನ:ಮಳೆ ಹಾನಿ ಹಾಗೂ ಭೂಕುಸಿತದಿಂದ ತತ್ತರಿಸಿರುವ ಸಕಲೇಶಪುರ ತಾಲೂಕಿನ ವಿವಿಧ ಪ್ರದೇಶಗಳಿಗೆ ವಿಪಕ್ಷ ನಾಯಕ ಆರ್. ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಸರ್ಕಾರದ ನಿರ್ಲಕ್ಷ್ಯ ನಡೆ ಅನುಸರಿಸುತ್ತಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.“ಸರ್ಕಾರ ಗಾಢ ನಿದ್ರೆಯಲ್ಲಿದೆ. ಯಾವುದೇ ಮಂತ್ರಿಗಳು ಇಲ್ಲಿಗೆ ಭೇಟಿ ನೀಡಿಲ್ಲ. ವಿರೋಧ ಪಕ್ಷಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಮಂತ್ರಿಯೋ, ಕಾರ್ಯದರ್ಶಿಯೋ ಬರಬೇಕಿತ್ತು. ಗಂಜಿಕೇಂದ್ರ ತೆರೆದು ಸಂತ್ರಸ್ತರಿಗೆ ವ್ಯವಸ್ಥೆ ಕಲ್ಪಿಸಬೇಕಿತ್ತು. ಆದರೆ ಸರ್ಕಾರಕ್ಕೆ ಇಲ್ಲಿನ ವ್ಯವಸ್ಥೆ ಬಗ್ಗೆ ಮಾಹಿತಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಮಳೆಗಾಲಕ್ಕೂ ಮುನ್ನವೇ ಪರಿಹಾರ ಕ್ರಮಗಳನ್ನು ಘೋಷಿಸಬೇಕಿತ್ತು. ಆದರೆ, ಸರ್ಕಾರದ ಖಜಾನೆ ಖಾಲಿಯಾಗಿದ್ದು, ಯಾವುದೇ ಕೆಲಸ ಆಗುತ್ತಿಲ್ಲ. ಮನೆ ಕಳೆದುಕೊಂಡವರಿಗೆ ತಕ್ಷಣವೇ 5 ಲಕ್ಷ ರೂ. ಪರಿಹಾರ ಘೋಷಿಸಬೇಕು. ಕಾಳಜಿ ಕೇಂದ್ರಗಳನ್ನು ತೆರೆಯಬೇಕು,” ಎಂದು ಆರ್. ಅಶೋಕ್ ಆಗ್ರಹಿಸಿದರು.ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಬಳಿ ಧನಸಹಾಯ ಕೋರದಿರುವುದನ್ನು ಖಂಡಿಸಿದ ಅವರು, “ನೀತಿ ಆಯೋಗಕ್ಕೆ ಹೋಗಿ ಕರ್ನಾಟಕಕ್ಕೆ ಸಮಪಾಲು ಕೇಳಬೇಕಿತ್ತು. ಆದರೆ, ಸರ್ಕಾರ ಕ್ರಿಕೆಟ್ ಮ್ಯಾಚ್ ನೋಡುವುದರಲ್ಲೇ ಕಾಲ ಕಳೆಯುತ್ತಿದೆ. ಇದು ಕರ್ನಾಟಕದ ಜನತೆಗೆ, ರೈತರಿಗೆ, ಬಡವರಿಗೆ ಆಗಿರುವ ದೊಡ್ಡ ದ್ರೋಹ,” ಎಂದು ಕಿಡಿಕಾರಿದರು.

ಜನರ ಆಕ್ರೋಶ ಎದುರಿಸಬೇಕಾಗುತ್ತದೆ: ಮಂಗಳೂರು, ರಾಯಚೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಿಂದ ಉಂಟಾದ ಸಮಸ್ಯೆಗಳಿಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬೆಂಗಳೂರು ಮುಳುಗಿಹೋಗುತ್ತಿದೆ, ಆದರೆ ಸರ್ಕಾರ ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ,” ಎಂದು ಆರ್. ಅಶೋಕ್ ಆರೋಪಿಸಿದರು. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಜನತೆ ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. “ಇನ್ನಾದರೂ ಸರ್ಕಾರ ಮಾನ-ಮರ್ಯಾದೆ ಇಟ್ಟುಕೊಂಡು ಕೆಲಸ ಮಾಡಲಿ,” ಎಂದು ವಾಗ್ದಾಳಿ ನಡೆಸಿದರು.

You cannot copy content of this page

Exit mobile version