Friday, June 14, 2024

ಸತ್ಯ | ನ್ಯಾಯ |ಧರ್ಮ

ರಾಜ್ಯೋತ್ಸವ ಪ್ರಶಸ್ತಿ ನಿಜವಾದ ಸಾಧಕರ ಆಸ್ತಿ

ಸರಕಾರ ಈ ಅರ್ಜಿ ಪಡೆಯುವಿಕೆ, ನಾಮನಿರ್ದೇಶನದಂತಹ ಪ್ರಕ್ರಿಯೆಗಳಿಗೆ ಅವಕಾಶ ಕೊಡಲೇಬಾರದಿತ್ತು. ಯಾರಿಗೂ ಗೊತ್ತಾಗದಂತೆ ಸಲಹಾ ಸಮಿತಿಯನ್ನೋ, ಆಯ್ಕೆ ಕಮಿಟಿಯನ್ನೋ ಮಾಡಿ ನಿಜವಾದ ಸಾಧಕರನ್ನು ಹುಡುಕಿ ಗುರುತಿಸಿ ಆಯ್ಕೆ ಮಾಡುವ ಜವಾಬ್ದಾರಿಯನ್ನು ವಹಿಸಬೇಕಾಗಿತ್ತು. ಅರ್ಜಿ ಮರ್ಜಿಗಳನ್ನೆಲ್ಲಾ ಮುತುವರ್ಜಿ ವಹಿಸಿ ದೂರವಿಡಬೇಕಿತ್ತು. ಸಾಧಕರೇ ಬಂದು ಪ್ರಶಸ್ತಿಗಾಗಿ ಬೇಡಿಕೆ ಇಡುವ ಪರಿಪಾಠಕ್ಕೆ ತಿಲಾಂಜಲಿ ಇಡಬೇಕಾಗಿತ್ತು ಶಶಿಕಾಂತ ಯಡಹಳ್ಳಿ

ಯಾವುದೇ ಸರಕಾರಕ್ಕೆ ಈ ರಾಜ್ಯೋತ್ಸವ ಪ್ರಶಸ್ತಿ ಎನ್ನುವುದು ವಾರ್ಷಿಕ ಹೆರಿಗೆ ನೋವಿನ ಸಂಗತಿಯಂತಾಗಿದೆ. ಪ್ರಶಸ್ತಿಗಾಗಿ ನಡೆಯುವ ಪ್ರಯತ್ನಗಳು, ಲಾಬಿಗಳು, ಶಿಫಾರಸ್ಸುಗಳು, ಹೇರಲಾಗುವ ಒತ್ತಡಗಳಿಗಂತೂ ಕೊನೆಮೊದಲಿಲ್ಲ. ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯಲು ಇರುವ ಪೈಪೋಟಿಯ ತೀವ್ರತೆ ಸರಕಾರವೇ ಬೆಚ್ಚಿ ಬೀಳುವಷ್ಟಿದೆ.

ಮೊದಲಾದರೆ ರಾಜ್ಯೋತ್ಸವ ಪ್ರಶಸ್ತಿಯನ್ನು ಎಲ್ಲಾ ಇತಿ ಮಿತಿಗಳ ಮೀರಿ ಬಿಬಿಎಂಪಿಯ ಕೆಂಪೇಗೌಡ ಪ್ರಶಸ್ತಿಯ ಹಾಗೆ ಹಂಚಿಕೆ ಮಾಡಲಾಗುತ್ತಿತ್ತು. ನೂರು, ನೂರೈವತ್ತು ಜನರಿಗೂ ಪ್ರಶಸ್ತಿ ಹಂಚಲಾಗುತ್ತಿತ್ತು. ಪ್ರಭಾವಶಾಲಿಗಳ ಶಿಫಾರಸ್ಸು ತಂದವರಿಗೆ ಕೊನೆ ಕ್ಷಣದಲ್ಲಿ ಅವಾರ್ಡ್ ಕೊಡಲಾಗಿತ್ತು. ಇದರಿಂದಾಗಿ ರಾಜ್ಯೋತ್ಸವ ಪ್ರಶಸ್ತಿಯ ಪ್ರತಿಷ್ಠೆಯೇ ಕಳೆಗುಂದಿತ್ತು. ಕಳೆದ ಸಲ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಇದ್ದಾಗ ಪ್ರಶಸ್ತಿ ಪುರಸ್ಕೃತರ ಸಂಖ್ಯೆಗಳಿಗೆ ಕಡಿವಾಣ ಹಾಕಲಾಯಿತು. ಕರ್ನಾಟಕ ರಾಜ್ಯ ಉದಯವಾಗಿ ಎಷ್ಟು ವರ್ಷಗಳಾಗಿವೆಯೋ ಅಷ್ಟು ಸಂಖ್ಯೆಯ ಪ್ರಶಸ್ತಿಗಳನ್ನು ಮಾತ್ರ ಕೊಡಬೇಕು ಎಂದು ಆದೇಶ ಮಾಡಲಾಯಿತು. ಈ ವರ್ಷ ಕೇವಲ 68 ಜನರಿಗೆ ಮಾತ್ರ ಪ್ರಶಸ್ತಿ ಕೊಡಬಹುದಾಗಿದೆ. ಪ್ರಶಸ್ತಿಗಳ ಸಂಖ್ಯೆ ಕಡಿಮೆಯಾದಷ್ಟೂ ಅದನ್ನು ಪಡೆಯಲು ಪ್ರಯತ್ನಿಸುವ ಅಗಣಿತ ಆಕಾಂಕ್ಷಿಗಳಲ್ಲಿ ಪೈಪೋಟಿ ತೀವ್ರಗೊಂಡಿತು. ಪ್ರಶಸ್ತಿ ಪುರಸ್ಕೃತರ ಆಯ್ಕೆಗಾಗಿ ಸರಕಾರ ಶೋಧನಾ ಸಮಿತಿಯನ್ನು ರಚಿಸಿ ಆಯ್ಕೆಯ ಹೊಣೆಗಾರಿಕೆಯನ್ನು ಕಮಿಟಿಯ ಸದಸ್ಯರಿಗೆ ವರ್ಗಾಯಿಸಲಾಯ್ತು.

ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ ಒಂದು ಲಕ್ಷ ಹಣವನ್ನೂ ಕೊಡಲಾಗುತ್ತಿತ್ತು. ಆದರೆ ಈ ಹಿಂದಿನ ಕಾಲಾವಧಿಯಲ್ಲಿ ಬಿಜೆಪಿ ಸರಕಾರ ಇದ್ದಾಗ ಕೇಶವಕೃಪಾದ ಕೃಪೆಗೆ ಒಳಗಾದವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಜೊತೆಗೆ ಅವರನ್ನು ಮೆಚ್ಚಿಸಲು ಪ್ರತಿ ಪ್ರಶಸ್ತಿಯ ಜೊತೆಗೆ ಐದು ಲಕ್ಷ ರೂಪಾಯಿ ನಗದು ಹಾಗೂ 25 ಗ್ರಾಂ ಚಿನ್ನದ ಪದಕ ಕೊಡುವುದಾಗಿ ಆದೇಶಿಸಲಾಯ್ತು. ಯಾವಾಗ ನಗ ಹಾಗೂ ನಗದಿನ ಮೌಲ್ಯ ಹೆಚ್ಚಿಸಲಾಯ್ತೋ ಆಗ ಹೇಗಾದರೂ ಮಾಡಿ ಪ್ರಶಸ್ತಿ ಪಡೆಯಲು ಸ್ಪರ್ಧೆ ಅತೀವವಾಯ್ತು. ಅದರ ಪರಿಣಾಮವಾಗಿ ಲಾಬಿ ಶಿಫಾರಸ್ಸುಗಳ ಹಾವಳಿಗೆ ಆಯ್ಕೆ ಸಮಿತಿಯೇ ಒತ್ತಡಕ್ಕೊಳಗಾಗಬೇಕಾಯ್ತು. ಶಿಫಾರಸ್ಸು ಪತ್ರಗಳಿಗೆ ಶಾಸಕರು ಮಂತ್ರಿಗಳು ಸಹಿ ಮಾಡಿ ಸುಸ್ತಾದರು.
ಪ್ರಶಸ್ತಿಗಾಗಿ ಅರ್ಹರನ್ನು ಆಯ್ಕೆ ಮಾಡುವ ಸಮಿತಿಯ ಮಾಹಿತಿಯನ್ನೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೊದಲೇ ಪತ್ರಿಕೆಗಳಲ್ಲಿ ಪ್ರಕಟಿಸಿದ್ದರಿಂದ ಆ ಸದಸ್ಯರುಗಳ ಪೋನುಗಳು ಒತ್ತಡ ಹೇರುವ ಮಾಧ್ಯಮಗಳಾದವು.

ಆಯ್ಕೆ ಸಮಿತಿಯನ್ನೂ ಮಾಡಿ ಜೊತೆಗೆ ಸೇವಾ ಸಿಂಧು ಪೋರ್ಟಲ್ ಮೂಲಕ ನಾಮ ನಿರ್ದೇಶನ ಸಲ್ಲಿಸಲೂ ಅವಕಾಶ ಕೊಡಲಾಗಿತ್ತು. ಈ ಸಲ ಈ ಪೋರ್ಟಲ್ ನಲ್ಲಿ 25 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಅವುಗಳನ್ನೆಲ್ಲಾ ವಿಲೇ ಮಾಡುವುದೇ ಸಮಿತಿಗೆ ದೊಡ್ಡ ಕೆಲಸವಾಯ್ತು. ಇರುವ 68 ಪ್ರಶಸ್ತಿಗಳಿಗೆ ಎರಡು ಸಾವಿರಕ್ಕೂ ಹೆಚ್ಚು ಜನರ ಹೆಸರು ಪರಿಗಣಿಸಲು ಅರ್ಜಿ ಸಲ್ಲಿಕೆಯಾಗಿವೆ ಎಂದರೆ ಪೈಪೋಟಿಯ ತೀವ್ರತೆ ಅರ್ಥವಾಗದೇ ಇರದು.

ಹೆಚ್ಚು ಜನರು ನಾಮನಿರ್ದೇಶನ ಮಾಡಿದಷ್ಟೂ ಪ್ರಶಸ್ತಿ ಪಡೆಯಬಹುದಾದ ಸಂಭವನೀಯತೆ ಹೆಚ್ಚು ಎಂದು ತಮಗೆ ತಾವೇ ತಿಳಿದುಕೊಂಡ ಅನೇಕ ಆಕಾಂಕ್ಷಿಗಳು ತಮ್ಮ ಕುಟುಂಬ ವರ್ಗ, ಸಂಬಂಧಿಕರು, ಸ್ನೇಹಿತರಿಗೆಲ್ಲಾ ಸೇವಾ ಸಿಂಧುವಿನಲ್ಲಿ ತಮ್ಮ ಹೆಸರನ್ನು ನಾಮನಿರ್ದೇಶನ ಮಾಡಿಸಲು ಮುಂದಾದರು. ಗ್ರಾಮೀಣ ಪ್ರದೇಶದಲ್ಲಿರುವವರಿಗೆ ಹೇಗೆ ನಾಮನಿರ್ದೇಶನ ಮಾಡಬೇಕೆಂಬುದು ಗೊತ್ತಾಗದೇ ಹತ್ತಿರದ ಪಟ್ಟಣದಲ್ಲಿರುವ ಸೈಬರ್ ಕೇಂದ್ರಗಳಿಗೆ ತಮ್ಮ ಕುಟುಂಬ ಪರಿವಾರದೊಂದಿಗೆ ಹೋಗಿ ಹಣ ತೆತ್ತು ನಾಮನಿರ್ದೇಶನ ಮಾಡಿಸಿಕೊಂಡು ಪ್ರಶಸ್ತಿಯ ಕನಸು ಕಾಣತೊಡಗಿದರು. ಈ ನಾಮನಿರ್ದೇಶನ ಎನ್ನುವುದು ಕಣ್ಣೊರೆಸುವ ತಂತ್ರಗಾರಿಕೆ ಅಷ್ಟೇ ಎಂದು ಈ ಆಕಾಂಕ್ಷಿಗಳಿಗೆ ತಿಳಿಸುವವರಾದರೂ ಯಾರು?

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ಮೂವತ್ತು ಸದಸ್ಯರನ್ನು ಒಳಗೊಂಡ ಸಲಹಾ ಸಮಿತಿಯನ್ನು ರಾಜ್ಯ ಸರಕಾರ ಸೆಪ್ಟೆಂಬರ್ 30 ರಂದು ರಚಿಸಿದೆ. ಎಲ್ಲಾ ಕ್ಷೇತ್ರಗಳಲ್ಲಿರುವ ಸಾಧಕರನ್ನು ಗುರುತಿಸುವ ಗುರುತರ ಹೊಣೆಗಾರಿಕೆ ಈ ಸದಸ್ಯರುಗಳದ್ದಾಗಿದೆ. 1:2 ಅನುಪಾತದಲ್ಲಿ ಪ್ರತಿ ಕ್ಷೇತ್ರದಿಂದ ಸಾಧಕರ ಹೆಸರನ್ನು ಸೂಚಿಸುವುದಷ್ಟೇ ಈ ಸಮಿತಿಯ ಸದಸ್ಯರುಗಳ ಕೆಲಸ. ಆ ಸಂಭಾವ್ಯರ ಪಟ್ಟಿಯನ್ನು ಪರಿಶೀಲಿಸಿ 68 ಸಾಧಕರ ಅಂತಿಮ ಪಟ್ಟಿಯನ್ನು ಅಖೈರುಗೊಳಿಸುವುದು ಮುಖ್ಯ ಮಂತ್ರಿಗಳ ಅಧ್ಯಕ್ಷತೆಯ ಉನ್ನತ ಕಮಿಟಿಯ ಕೆಲಸ.

ಈ ಪ್ರಶಸ್ತಿಗಾಗಿ ಆಯ್ಕೆ ಮಾನದಂಡಗಳನ್ನು ಸರಕಾರ ಪ್ರಕಟಣೆಯ ಮೂಲಕ ಸ್ಪಷ್ಟಪಡಿಸಿದ್ದರೆ ಮಾನದಂಡಗಳ ಚೌಕಟ್ಟಿಗೆ ಒಳಪಡದವರು ಪ್ರಯತ್ನವನ್ನು ಬಿಡಬಹುದಾಗಿತ್ತು. ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಕನಿಷ್ಟ ವಯೋಮಿತಿ 60 ವರ್ಷವಾಗಿರಬೇಕು. ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರಬಾರದು, ಈ ಹಿಂದೆ ಯಾವತ್ತೂ ಈ ಪ್ರಶಸ್ತಿ ಪಡೆದಿರಬಾರದು, ಸಂಬಂಧಿಸಿದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರಬೇಕು.. ಹೀಗೆ ಹತ್ತು ಹಲವು ಷರತ್ತುಗಳಿವೆ. ಇದರ ಜೊತೆಗೆ ಪ್ರಾದೇಶಿಕತೆ, ಜಾತಿ ವರ್ಗಾದಿ ಸಾಮಾಜಿಕ ಸಮತೋಲನ, ಸಮುದಾಯಗಳ ಪರಿಗಣನೆ.. ಹೀಗೆ ಇತರೆ ಮಾನದಂಡಗಳೂ ಇವೆ. ಈ ಚೌಕಟ್ಟಿನ ಒಳಗೆ 68 ಸಾಧಕರನ್ನು ಆಯ್ಕೆ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಇದರ ನಡುವೆ ರಾಜಕೀಯ ಒತ್ತಡಗಳಿಗೂ ಮನ್ನಣೆ ಕೊಡಬೇಕಾಗಿದೆ. ಇಷ್ಟೆಲ್ಲಾ ಮಾಡಿದರೂ ಅಂತಿಮ ಪಟ್ಟಿಯಲ್ಲಿ ಸಲಹಾ ಸಮಿತಿ ಶಿಪಾರಸ್ಸು ಮಾಡಿದ ಹೆಸರುಗಳೇ ಬದಲಾಗುವ ಸಾಧ್ಯತೆಗಳೂ ಇವೆ.

ಈಗಾಗಲೇ ಸಂಭಾವ್ಯರ ಪಟ್ಟಿ ಸಿದ್ದವಾಗಿದೆ. ಅಕ್ಟೋಬರ್ 26 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ಅಂತಿಮ ಪಟ್ಟಿ ನಿರ್ಧಾರವಾಗುತ್ತದೆ. ಒಂದೆರಡು ದಿನಗಳಲ್ಲಿ ಘೋಷಣೆಯೂ ಆಗುತ್ತದೆ. ನವೆಂಬರ್ 1 ರಂದು ಪ್ರಶಸ್ತಿಗಳ ಪ್ರದಾನವೂ ನೆರವೇರುತ್ತದೆ. ಕೆಲವರಿಗೆ ಹರ್ಷ ಇನ್ನು ಕೆಲವರಿಗೆ ಹತಾಷೆ ಸ್ವಾಭಾವಿಕ.

ಇಷ್ಟಕ್ಕೂ ನನಗೊಂದು ಪ್ರಶಸ್ತಿ ಕೊಡಿ ಎಂದು ಸ್ವಯಂ ಬೇಡಿಕೆ ಇಟ್ಟು ಸರಕಾರವನ್ನು ಅಂಗಲಾಚುವುದು ನಿಜವಾದ ಸಾಧಕರ ಜಾಯಮಾನವೇ ಅಲ್ಲ. ಹಾಗೇನಾದರೂ ಮಾಡಿದರೆ ಅದು ಮಾಡಿದ ಸಾಧನೆಗೆ ಶೋಭೆ ತರುವಂತಹುದಲ್ಲ. ಆದರೂ ಪ್ರತಿಷ್ಠೆಗಾಗಿಯೋ, ಪ್ರಶಸ್ತಿಯ ಜೊತೆ ದೊರೆಯುವ ನಗ ನಗದಿಗಾಗಿಯೋ ಪ್ರಶಸ್ತಿಗಾಗಿ ಹಾತೊರೆಯುವವರು ಬೇಕಾದಷ್ಟಿದ್ದಾರೆ. ಅಲ್ಪ ಸ್ವಲ್ಪ ಸಾಧನೆಯನ್ನೇ ವೈಭವೀಕರಿಸಿ ಪ್ರಶಸ್ತಿಗಾಗಿ ಪ್ರಯತ್ನಿಸುವವರೂ ಹೆಚ್ಚಾಗಿದ್ದಾರೆ. ರಾಜಕೀಯ ಪ್ರಭಾವ ಬಳಸುವವರು, ವಶೀಲಿಬಾಜಿ ನಡೆಸುವವರು ಕಡಿಮೆ ಏನಿಲ್ಲ. ಪ್ರಶಸ್ತಿಯ ಅಪೇಕ್ಷೆಯ ಗೋಜಿಗೆ ಹೋಗದೇ ತಮ್ಮ ಪಾಡಿಗೆ ತಾವು ತಮ್ಮ ಕ್ಷೇತ್ರದಲ್ಲಿ ಕಾಯಕ ನಿರತರಾದವರೂ ಬೆರಳೆಣಿಕೆಯಷ್ಟಿದ್ದಾರೆ. ಇದೆಲ್ಲವನ್ನೂ ಮನಗಂಡ ಸರಕಾರ ಈ ಅರ್ಜಿ ಪಡೆಯುವಿಕೆ, ನಾಮನಿರ್ದೇಶನದಂತಹ ಪ್ರಕ್ರಿಯೆಗಳಿಗೆ ಅವಕಾಶ ಕೊಡಲೇಬಾರದಿತ್ತು. ಯಾರಿಗೂ ಗೊತ್ತಾಗದಂತೆ ಸಲಹಾ ಸಮಿತಿಯನ್ನೋ, ಆಯ್ಕೆ ಕಮಿಟಿಯನ್ನೋ ಮಾಡಿ ನಿಜವಾದ ಸಾಧಕರನ್ನು ಹುಡುಕಿ ಗುರುತಿಸಿ ಆಯ್ಕೆ ಮಾಡುವ ಜವಾಬ್ದಾರಿಯನ್ನು ವಹಿಸಬೇಕಾಗಿತ್ತು. ಅರ್ಜಿ ಮರ್ಜಿಗಳನ್ನೆಲ್ಲಾ ಮುತುವರ್ಜಿ ವಹಿಸಿ ದೂರವಿಡಬೇಕಿತ್ತು. ಸಾಧಕರೇ ಬಂದು ಪ್ರಶಸ್ತಿಗಾಗಿ ಬೇಡಿಕೆ ಇಡುವ ಪರಿಪಾಠಕ್ಕೆ ತಿಲಾಂಜಲಿ ಇಡಬೇಕಾಗಿತ್ತು. ಪ್ರಶಸ್ತಿ ಪುರಸ್ಕೃತರ ಆಯ್ಕೆಯನ್ನು ರಾಜಕೀಯ ಹಾಗೂ ರಾಜಕಾರಣಿಗಳಿಂದ ದೂರ ಇಟ್ಟು, ಈ ಶಿಫಾರಸ್ಸುಗಳನ್ನೇ ನೇಪಥ್ಯದಲ್ಲಿಟ್ಟು ನಿಜವಾದ ಸಾಧಕರನ್ನು ಹುಡುಕಿ ಪ್ರಶಸ್ತಿ ಕೊಟ್ಟರೆ ಪುರಸ್ಕಾರಕ್ಕೂ ಒಂದು ಘನತೆ ಪ್ರಾಪ್ತವಾಗುತ್ತಿತ್ತು. ಆದರೆ ಅದೆಲ್ಲಾ ಪ್ರಸಕ್ತ ರಾಜಕೀಯ ವ್ಯವಸ್ಥೆಯಲ್ಲಿ ಅಸಾಧ್ಯದ ಮಾತು. ಈಗಿರುವ ವ್ಯವಸ್ಥೆಯಲ್ಲೇ ನಿಜವಾದ ಸಾಧಕರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಸನ್ಮಾನಿಸಿದರೆ ಸನ್ಮಾನಕ್ಕೂ ಸನ್ಮಾನಿತರಿಗೂ ಗೌರವ ಸಿಕ್ಕಂತಾಗುತ್ತದೆ. ರಾಜ್ಯೋತ್ಸವ ಪ್ರಶಸ್ತಿಯ ಗೌರವವೂ ಹೆಚ್ಚಾಗುತ್ತದೆ.

ಶಶಿಕಾಂತ ಯಡಹಳ್ಳಿ

ಇದನ್ನೂ ಓದಿ-ಸಾಂಸ್ಕೃತಿಕ ನೀತಿಯ ನಿರ್ಲಕ್ಷ್ಯ ಏಕೆ ?

Related Articles

ಇತ್ತೀಚಿನ ಸುದ್ದಿಗಳು