ಐದು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರನ ಮಗನ ಕಾರು ಹೊನ್ನಾಳಿ ಮತ್ತು ನ್ಯಾಮತಿ ಮಾರ್ಗ ಮಧ್ಯೆ ಇರುವ ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ಪತ್ತೆಯಾಗಿದೆ. ಸಹೋದರನ ಪುತ್ರ ಚಂದ್ರಶೇಖರ್ 5 ದಿನಗಳ ಹಿಂದೇಯೇ ಮೃತಪಟ್ಟಿದ್ದರಿಂದ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಾರು ಪತ್ತೆಯಾದ ವಿಚಾರ ತಿಳಿಯುತ್ತಿದ್ದಂತೆ ಶಾಸಕ ರೇಣುಕಾಚಾರ್ಯ ಸೇರಿದಂತೆ ಅವರ ಸಹೋದರ ಮತ್ತು ಕುಟುಂಬಸ್ಥರು ಅನೇಕರು ಸ್ಥಳಕ್ಕೆ ಧಾವಿಸಿದ್ದಾರೆ.
ಕಾರಿನ ಏರ್ ಬ್ಯಾಗ್ ತೆರೆದಿದ್ದು, ಕಾರಿನ ಹಿಂಭಾಗದಲ್ಲಿ ಶವ ಪತ್ತೆಯಾಗಿದೆ. ಕಾರಿನ ಹಿಂಭಾಗ ಮತ್ತು ಮುಂಭಾಗದ ಗಾಜು ಒಡೆದಿದ್ದರೆ ಹಿಂಭಾಗದಲ್ಲಿ ಕಾರು ನಜ್ಜುಗುಜ್ಜಾಗಿದೆ. ಕಾರು ಅಪಘಾತದ ಸನ್ನಿವೇಶ ಅನುಮಾನಾಸ್ಪದವಾಗಿದ್ದು, ಇದು ನಿಜಕ್ಕೂ ಅಪಘಾತವೋ ಅಥವಾ ದುರುದ್ದೇಶದಿಂದ ನಡೆದ ಕೃತ್ಯವೋ ಎಂಬುದು ತನಿಖೆಯಿಂದ ತಿಳಿಯಬೇಕಿದೆ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಕಾರನ್ನು ಕಾಲುವೆಯಿಂದ ಹೊರ ತಗೆದಿದ್ದಾರೆ. ಸ್ಥಳಕ್ಕೆ ಹೊನ್ನಾಳಿ ಮತ್ತು ಶಿವಮೊಗ್ಗ ಪೊಲೀಸರು ಭೇಟಿ ನೀಡಿ ಅಪಘಾತದ ಜಾಗವನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.