ಕತ್ತಿ

0

ಯುದ್ಧ ಮಾಡುವುದು ಸರಿ ಅಲ್ಲ. ಯುದ್ಧ ಕೆಟ್ಟದ್ದು. ಕೊಲ್ಲುವುದು ಸರಿ ಅಲ್ಲ. ಹಾಗಾಗಿ ನನ್ನ ಕತ್ತಿ ಯಾರನ್ನೂ ಕೊಲ್ಲುವುದಿಲ್ಲ. ಆದರೆ ಮಕ್ಕಳು ನನ್ನ ಕತ್ತಿಯನ್ನು ಹಿಡಿದು ಆಟವಾಡುತ್ತಾರೆ. ನಗುತ್ತಾರೆ, ಕುಣಿಯುತ್ತಾರೆ. ಹಾಗಾಗಿ ನನ್ನ ಕತ್ತಿಯ ಮುಂದೆ ನಿನ್ನ ಕತ್ತಿ ಏನೇನೂ ಅಲ್ಲ.. ಮಕ್ಕಳ ರಂಗ ಚಟುವಟಿಕೆಯ ಸನ್ನಿವೇಶವೊಂದನ್ನು ರಂಗಕರ್ಮಿ ಸ್ಕಂದಘಾಟೆ ಹಂಚಿಕೊಂಡಿದ್ದಾರೆ.

ಮೊನ್ನೆ 9ನೇ ನವೆಂಬರ್, 2023ರ ಗುರುವಾರದ ದಿನ ನಾನು ಸ್ಕೂಲ್ನಲ್ಲಿ 7ನೇ ಕ್ಲಾಸ್ ಮಕ್ಕಳಿಗೆ ಪಾಠ ಮಾಡಬೇಕಿತ್ತು. ನನ್ನ ಗಂಟಲು ನೋಯ್ತಿತ್ತು. ನೆಗಡಿ ಆಗಿತ್ತು. ಅದಕ್ಕೆ ನಂಗೆ ಕ್ಲಾಸ್ ತೊಗೊಳಕ್ಕೆ ಸಹಾಯ ಮಾಡ್ಲಿಕ್ಕೆ ನನ್ನ ಕಲೀಗ್ ಆದಿತ್ಯ ಅಂತ ಒಬ್ಬ ನನ್ನ ಜೊತೆ ಇದ್ದ. ಅವನು ಕ್ಲಾಸ್ ಮಾಡಲು ಮುಂದಾಳತ್ವ ತಗೊಂಡ. ನಾನು ಅವ್ನಿಗೆ ಸಹಾಯ ಮಾಡ್ತಿದ್ದೆ. ಯಥಾಪ್ರಕಾರ ಗಂಟೆ ಹೊಡೆದ ನಂತರ ಮಕ್ಕಳು ಒಬ್ಬೊಬ್ಬರಾಗಿ ಬಂದು ಸೇರಿದ್ರು. ಒಂದಷ್ಟು ಬಾಡಿ ವಾರ್ಮ್ ಅಪ್ ಮಾಡ್ಸಿದೆ. ಅದಾದ್ಮೇಲೆ ಆದಿತ್ಯನಿಗೆ ಕ್ಲಾಸ್ ಮಾಡಲು ಬಿಟ್ಕೊಟ್ಟೆ. ಅವನು ಎಲ್ಲರ ಜೊತೆ ಸೇರಿ ಸರ್ಕಲ್ ಮಾಡಿ, exercise ನ instructions ಕೊಡಕ್ಕೆ ಶುರು ಮಾಡಿದ. 

Exercise ಸಿಂಪಲ್ ಆಗಿತ್ತು. ಎಲ್ಲರೂ ಕಣ್ಣು ಮುಚ್ಚಿ ಅವರವರ imagination ಗೆ ತಕ್ಕಂತೆ ಒಂದು ಪಾತ್ರವನ್ನು ಚಿತ್ರಿಸಿಕೊಂಡು, ಆ ಪಾತ್ರದ ದೇಹವನ್ನು ಅನುಕರಿಸಬೇಕಿತ್ತು. ಮೊದಲಿಗೆ ಎಲ್ಲರಿಗೂ ಒಬ್ಬ ಅಜ್ಜ ಅಥವಾ ಅಜ್ಜಿಯನ್ನು imagine ಮಾಡಿಕೊಂಡು ಅವರ ದೇಹವನ್ನು ಅನುಕರಿಸಲು ಹೇಳಿದ. ಮಕ್ಕಳು ಮಾಡಿದರು. ಆ ನಂತರ, ಆ ಪಾತ್ರದ ಕೈಲಿ ಏನಾದರೂ ಒಂದು ವಸ್ತುವನ್ನು ಹಿಡಿದು  ಕೊಂಡಿರಬೇಕು ಎಂದು ಸೂಚನೆ ಕೊಟ್ಟ. ಒಂದಿಬ್ಬರು ಮಾತ್ರ ಕೋಲನ್ನು ಹಿಡಿದು ಕೊಂಡಂತೆ ಮಾಡಿದರು. ಆ ಕ್ಲೀಶೆ ವಸ್ತುವನ್ನು ಬಹಳ ಕಡಿಮೆ ಮಕ್ಕಳು ಬಳಸಿದ್ದನ್ನು ಕಂಡು ನನಗೆ ಸ್ವಲ್ಪ ಖುಷಿಯಾಯಿತು. ಅದಾದನಂತರ ಅವರಿಗೆ ನಡೆದಾಡಲು ಹೇಳಿದ. ನಡೆದಾಡಿದರು. ಯಾವುದೇ ಒಬ್ಬ ವೃದ್ಧರ caricature ನನಗೆ ಕಾಣಲಿಲ್ಲ. ಖುಷಿ ಸ್ವಲ್ಪ ಹೆಚ್ಚಾಯಿತು. 

ನಂತರ ಎಲ್ಲರಿಗೂ relax ಮಾಡಲು ಹೇಳಿ, ಒಬ್ಬ ರಾಣಿಯನ್ನು imagine ಮಾಡಿಕೊಳ್ಳಲು ಹೇಳಿದ. ಗಂಡು ಮಕ್ಕಳು ಕೂಡ ರಾಣಿಯರಾಗಬೇಕಿತ್ತು. ನೋಡಕ್ಕೆ ಚಂದ ಇತ್ತು. ನೇರ ನಿಂತು, ಎದೆ ಉಬ್ಬಿಸಿ, ಒಂದು ಇಂಚು ಕುತ್ತಿಗೆ ಎತ್ತಿ, ಕಾಲುಗಳನ್ನು ಜೋಡಿಸಿ, ಸೊಂಟದ ಭಾರವನ್ನು ಒಂದು ಕಾಲಿನ ಮೇಲೆ ಊರಿ, ಕೈಗಳನ್ನು ವೃತ್ತಾಕಾರದಲ್ಲಿ ಜೋಡಿಸಿ ತಮ್ಮ ತಮ್ಮ ಹೊಕ್ಕಳು ಮುಂದೆ ತೂಗಾಡುವಂತೆ ಬಿಟ್ಟು ನಿಂತಿದ್ದರು. ಪುನಃ ಅವರಿಗೆ ಏನಾದರೂ ವಸ್ತು ಹಿಡಿದುಕೊಳ್ಳಲು ಸೂಚಿಸಲಾಗಿತ್ತು. ಕೆಲವೊಬ್ಬರು ಕನ್ನಡಿ, ಕೆಲವೊಬ್ಬರು ರಾಣಿದಂಡ, ಕೆಲವೊಬ್ಬರು ಹೂವಿನ ಮಾಲೆ ಇತ್ಯಾದಿಗಳನ್ನು ಹಿಡಿದು ಕೊಂಡರು. ರಾಣಿ ನಡೆದಾಡುವಂತೆ ನಡೆಯಲು ಸೂಚನೆ ಬಂತು. ನಡೆದಾಡಿದರು. ಹಗುರವಾಯಿತು ದೇಹ. ಪ್ರತಿ ಹೆಜ್ಜೆಯೂ ಯೋಚಿಸಿ ಇಡುವಂತೆ ಇಡುತ್ತಿದ್ದರು. ಆದರೆ ರಾಣಿಯ ದರ್ಪ ಕಡಿಮೆಯಾಗಿರಲಿಲ್ಲ. ಎಲ್ಲರೂ ಇದು ನನ್ನ ಜಾಗ, ನಾನು ಹೇಳಿದಂತೆ ನಡೆಯುವ ಜಾಗ ಎಂಬ ಭಾವನೆಯಲ್ಲಿ ನಡೆಯುತ್ತಿದ್ದರು. 

ಇದನ್ನು ಗಮನಿಸಿದ ಆದಿತ್ಯ, power dynamics exercise ಪ್ರಯೋಗ ಮಾಡಲು ಯೋಚಿಸಿದ. ಇಬ್ಬರಿರುವ ಒಂದೊಂದು ಗುಂಪು ಮಾಡಲು ಹೇಳಿದ. ರಾಣಿಯ ನಡೆಯನ್ನಿಟ್ಟುಕೊಂಡೇ ಗುಂಪುಗಳನ್ನು ಮಾಡಿದರು. ಈಗ ಅವನ ಸೂಚನೆಗಳು ಹೀಗಿತ್ತು – ಗುಂಪಿನಲ್ಲಿರುವ ಇಬ್ಬರು ಪರಸ್ಪರ ಮಾತನಾಡಬೇಕು. ಆದರೆ ಅವರಿಬ್ಬರಲ್ಲಿ ಒಬ್ಬರ status ಮೇಲಿರುತ್ತದೆ. ಮತ್ತೊಬ್ಬರದ್ದು ಕೆಳಗಿರುತ್ತದೆ. ಆದರೆ ಇಬ್ಬರೂ ರಾಣಿಗಳೇ. ಆತ ಚಪ್ಪಾಳೆ ಹೊಡೆದ ನಂತರ ಅವರ conversation ಅಲ್ಲಿ ಬದಲಾವಣೆ ಮೂಡಿ status change ಆಗಬೇಕು. 

ಮಕ್ಕಳು ಮಾತನಾಡಲು ಶುರು ಮಾಡಿದರು. ಅವರ ರಾಣಿಯ ಜಗತ್ತು ಬಟ್ಟೆ, ಆಭರಣ, ಸೌಂದರ್ಯಕ್ಕೆ ಮಾತ್ರ ಸೀಮಿತವಾಗಿತ್ತು. ಆದರೂ power shifting ಚೆನ್ನಾಗಿ ಮಾಡುತ್ತಿದ್ದರು. ಆದಿತ್ಯ ಸ್ವಲ್ಪ ಹೊತ್ತಿನ ನಂತರ ರಾಣಿಯ ಪಾತ್ರವನ್ನು ಬಿಟ್ಟು ರಾಜನ ಪಾತ್ರವನ್ನು imagine ಮಾಡಿಕೊಳ್ಳಲು ಹೇಳಿದ. ಎಲ್ಲರ ಕೈಯ್ಯಲ್ಲಿ ಒಂದು ಕತ್ತಿ ಬಂತು. ಈ ಕ್ಲೀಶೆಯನ್ನು ನೋಡಿ ನನಗೆ ಮುಂಚೆ ಆಗಿದ್ದ ಖುಷಿ ತುಂಡಾಯಿತು. ಇರಲಿ ಏನಾಗತ್ತೆ ನೋಡಣ ಅಂತ ಗಮನಿಸುತ್ತಲೇ ಇದ್ದೆ. ಆಗ ಇಬ್ಬರು ಹುಡುಗರು ಮಾತನಾಡುತ್ತಿದ್ದ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿದೆ. ಅವರ ಮಾತುಗಳನ್ನು ಯಥಾವತ್ತಾಗಿ ಬರೆಯಲು ಪ್ರಯತ್ನಿಸುತ್ತೇನೆ – 

ಹುಡುಗ 1 – ನನ್ನ ಕೈಯ್ಯಲ್ಲಿರುವ ಈ ಕತ್ತಿ ಜಗತ್ತಿನ ಅತ್ಯುತ್ತಮ ಕುಲುಮೆಗಾರರಿಂದ ತಯಾರಿಸಲ್ಪಟ್ಟದ್ದು. ಈ ಕತ್ತಿ ತುಂಡಾಗುವುದೇ ಇಲ್ಲ. ಜಗತ್ತಿನಲ್ಲಿ ನನ್ನೊಡನೆ ಮಾತ್ರ ಇಂತಹ ಕತ್ತಿ ಇರುವುದು. ನಿನ್ನ ಕತ್ತಿ ಇದರ ಮುಂದೆ ಏನೇನೂ ಅಲ್ಲ. 

ಆದಿತ್ಯ ಚಪ್ಪಾಳೆ ತಟ್ಟಿದ. ಪವರ್ shift ಆಯಿತು

ಹುಡುಗ 2- ಹೌದು. ನನ್ನ ಕತ್ತಿ ಸಾಮಾನ್ಯ. ಆದರೆ ಈ ಕತ್ತಿ ನನಗೆ ಬಹಳ ಪ್ರಿಯವಾದದ್ದು. ನನ್ನನ್ನೇ ಹುಡುಕಿಕೊಂಡು ಬಂದ ಕತ್ತಿಯಿದು. ನಿನ್ನ ಹತ್ತಿರ ಕತ್ತಿ ಇದ್ದರೂ, ಅದನ್ನು ಹೇಗೆ ಬಳಸಬೇಕು ಎಂದು ನಿನಗೆ ಗೊತ್ತಿಲ್ಲ. ಹಾಗಾಗಿ ಆ ಕತ್ತಿ ನಿನ್ನೊಡನೆ ಇದ್ದರೆಷ್ಟು ಬಿಟ್ಟರೆಷ್ಟು? 

ಚಪ್ಪಾಳೆ. Power shift.

ಹುಡುಗ 1 – ನಾನು ಈ ಕತ್ತಿಯನ್ನು ಬಳಸಲು ಕಲಿತು ಕೊಳ್ಳಬೇಕಾಗಿಯೇ ಇಲ್ಲ. ಇದನ್ನು ಒಮ್ಮೆ ಬೀಸಿದರೆ ಸಾಕು, ಸಾವಿರಾರು ಜನ ಸಾಯುತ್ತಾರೆ. ಅಂತಹ ಶಕ್ತಿಯುಳ್ಳ ಕತ್ತಿ ನನ್ನದು. ಇದರ ಮುಂದೆ ಯಾರೂ ನಿಲ್ಲಲು ಸಾಧ್ಯ ಇಲ್ಲ. 

ಚಪ್ಪಾಳೆ

ಹುಡುಗ 2 – ನನ್ನ ಕತ್ತಿ ಯಾರನ್ನೂ ಕೊಲ್ಲುವುದಿಲ್ಲ. 

ಹುಡುಗ 1 ತಬ್ಬಿಬ್ಬಾಗಿ ಹೋದ. ಹುಡುಗ 2 ನನ್ನು ಗೇಲಿ ಮಾಡಲು ಶುರು ಮಾಡಿದ. 

ಹುಡುಗ 1 – ಯಾರನ್ನೂ ಕೊಲ್ಲುವುದಿಲ್ಲ ಎಂದರೆ ಆ ಕತ್ತಿಯಿದ್ದೇನು ಪ್ರಯೋಜನ? ಯಾಕೆ ಬೇಕು ನಿನಗೆ ಕತ್ತಿ? 

ಹುಡುಗ 2 – ಯುದ್ಧ ಮಾಡುವುದು ಸರಿ ಅಲ್ಲ. ಯುದ್ಧ ಕೆಟ್ಟದ್ದು. ಕೊಲ್ಲುವುದು ಸರಿ ಅಲ್ಲ. ಹಾಗಾಗಿ ನನ್ನ ಕತ್ತಿ ಯಾರನ್ನೂ ಕೊಲ್ಲುವುದಿಲ್ಲ. ಆದರೆ ಮಕ್ಕಳು ನನ್ನ ಕತ್ತಿಯನ್ನು ಹಿಡಿದು ಆಟವಾಡುತ್ತಾರೆ. ನಗುತ್ತಾರೆ, ಕುಣಿಯುತ್ತಾರೆ. ಹಾಗಾಗಿ ನನ್ನ ಕತ್ತಿಯ ಮುಂದೆ ನಿನ್ನ ಕತ್ತಿ ಏನೇನೂ ಅಲ್ಲ. 

ಸ್ಕಂದಘಾಟೆ, ರಂಗಕರ್ಮಿ

ಇದನ್ನೂ ಓದಿ-ವಿಶ್ವಕಪ್‌ ಫೈನಲ್‌ ನಲ್ಲಿ ಭಾರತ ತಂಡ: ರಾಹುಲ್‌ ದ್ರಾವಿಡ್‌ ಪಾತ್ರ ಎಷ್ಟು ಗೊತ್ತೇ?

You cannot copy content of this page

Exit mobile version