ಬೆಂಗಳೂರು: ಕರ್ನಾಟಕದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತೊಮ್ಮೆ ಪ್ರತಿಭಟನೆ ಎದುರಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಬ್ಯಾಂಕ್ ಹಗರಣದ ಸಂತ್ರಸ್ತರಿಂದ ಮುತ್ತಿಗೆಗೆ ಒಳಗಾದರು.
ಈ ಹಿನ್ನೆಲೆಯಲ್ಲಿ ಬಲವಂತವಾಗಿ ಅಲ್ಲಿಂದ ತೆರಳಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಹಕಾರಿ ಬ್ಯಾಂಕ್ ಹಗರಣದಲ್ಲಿ ಸಂತ್ರಸ್ತರಾಗಿರುವ ಠೇವಣಿದಾರರ ಸಂಘದ ಸದಸ್ಯರು ಶನಿವಾರ ರಾಜಕೀಯ ಮುಖಂಡರೊಂದಿಗೆ ಸಭೆ ಆಯೋಜಿಸಿದ್ದರು. ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಸ್ಥಳೀಯ ಶಾಸಕ ರವಿ ಸುಬ್ರಮಣಿಯನ್ ಮತ್ತು ಅವರ ಬೆಂಬಲಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಸಂತ್ರಸ್ತರಿಗೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ಬಗ್ಗೆ ಠೇವಣಿದಾರರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ನೀಡಿದ ಉತ್ತರಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಸೂರ್ಯ ಬೆಂಬಲಿಗರು ಅತಿಯಾಗಿ ವರ್ತಿಸಿದ್ದರಿಂದ ಸಭೆಯಲ್ಲಿ ಗೊಂದಲ ಉಂಟಾಯಿತು. ನಂತರ ಸಂಸದ ಅಲ್ಲಿಂದ ಕಾಲ್ಕಿತ್ತರು.
ಮತ್ತೊಂದೆಡೆ, ಕರ್ನಾಟಕ ಕಾಂಗ್ರೆಸ್ ಘಟನೆಯ ವಿಡಿಯೋ ತುಣುಕನ್ನು ಪೋಸ್ಟ್ ಮಾಡಿದೆ. ” ಬಿಜೆಪಿಯ ತೇಜಸ್ವಿ ಸೂರ್ಯ ಮತ್ತೊಮ್ಮೆ “ಎಮರ್ಜೆನ್ಸಿ ಎಕ್ಸಿಟ್ ಡೋರ್” ಮೂಲಕ ಜನರಿಂದ ಎಸ್ಕೇಪ್ ಆಗಿದ್ದಾರೆ!
ಬೆಂಗಳೂರು ದಕ್ಷಿಣದ ಸಂಸದ 5 ವರ್ಷದುದ್ದಕ್ಕೂ ದೋಸೆ ತಿಂದುಕೊಂಡು, ಫುಟ್ ಬಾಲ್ ಆಡಿಕೊಂಡು, ಮೋಜು ಮಾಡಿಕೊಂಡು ಕಾಲ ಕಳೆದಿದ್ದರು, ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ಹಣ ಕಳೆದುಕೊಂಡ ಸಂತ್ರಸ್ತರ ಸಮಸ್ಯೆಯನ್ನು ಒಂದು ದಿನವೂ ಆಲಿಸದ ತೇಜಸ್ವಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆಯ ಸಮಯದಲ್ಲಿ ಮತದಾರರ ಮೇಲೆಯೇ ಹಲ್ಲೆ, ನಿಂದನೆ ಮಾಡಲು ಮುಂದಾಗುವ ತೇಜಸ್ವಿ ಸೂರ್ಯನ ಪಟಾಲಂನ ದುರಹಂಕಾರ ಮಿತಿ ಮೀರಿದೆ, ಮತದಾರರು ಈ ಅಹಂಗೆ ಪಾಠ ಕಲಿಸುವ ಸಮಯ ಬಂದಿದೆ.
ಎಲ್ಲಾ ಕಡೆಯೂ ಮತದಾರರಿಂದ ಕರ್ನಾಟಕ ಬಿಜೆಪಿ ಅಭ್ಯರ್ಥಿಗಳು ಗೋಬ್ಯಾಕ್ ಎದುರಿಸುತ್ತಿದ್ದಾರೆ, ಈ ಜನಾಕ್ರೋಶಕ್ಕೆ ಬಿಜೆಪಿ ದೂಳಿಪಟ ಮಾಡುವುದು ನಿಶ್ಚಿತ.” ಕಾಂಗ್ರೆಸ್ ಟ್ವೀಟ್ ಮಾಡಿದೆ