ವಿಚಾರಣೆ ತಿಂಗಳುಗಳ ಕಾಲ ನಡೆಯಿತು. ಲಂಡನ್ನಿನ ಕಾನೂನುಗಳ ಪ್ರಕಾರ ತನಗೆ ಸಣ್ಣ ಪ್ರಮಾಣದ ಶಿಕ್ಷೆ ಮಾತ್ರ ಲಭಿಸಲಿದೆ ಎಂಬ ಸಾವರ್ಕರ್ ಲೆಕ್ಕಾಚಾರಗಳು ಬುಡಮೇಲಾದವು. ಗೂಢಾಲೋಚನೆಯ ಆರಂಭಿಕ ಹಂತ ಭಾರತದಲ್ಲಿ ಶುರುವಾಗಿತ್ತು ಎಂದು ನಾಸಿಕ್ ಮತ್ತು ಪುಣೆಗಳಲ್ಲಿ ಸಶಸ್ತ್ರ ಹೋರಾಟವನ್ನು ಬೆಂಬಲಿಸಿಕೊಂಡು ಸಾವರ್ಕರ್ ಮಾಡಿದ್ದ ಭಾಷಣಗಳನ್ನು ಮುಂದಿಟ್ಟು ಪ್ರಾಸಿಕ್ಯೂಷನ್ ವಾದಿಸಿತು. ಭಾರತದಲ್ಲಿ ದೇಶದ್ರೋಹಕ್ಕೆ ದೊಡ್ಡ ಬೆಲೆ ತೆರಬೇಕಾದೀತೆಂದು ಸಾವರ್ಕರ್‌ಗೆ ತಿಳಿದಿತ್ತು. ಆದ್ದರಿಂದ ಪೊಲೀಸ್ ಕಸ್ಟಡಿಯಿಂದ ಪಾರಾಗುವುದು ಸಾವರ್ಕರ್ ಯೋಜನೆಯಾಗಿತ್ತು.
ಸಾವರ್ಕರ್ ವಿಚಾರಣೆ ಲಂಡನ್ನಿನಲ್ಲಿ ಆರಂಭವಾಗುವಾಗ ಅವರ ವಿರುದ್ಧ ಸಾಕ್ಷಿ ಹೇಳಲು ಬಂದವರು ಸ್ವತಃ ಸಾವರ್ಕರ್ ಅನುಯಾಯಿಗಳೇ ಆಗಿದ್ದರು. ಹಿಂದುತ್ವದ ಇತಿಹಾಸ ಕೆದಕುವಾಗ ನಾವು ವಿಶೇಷವಾಗಿ ಗಮನಿಸಬೇಕಿರುವುದು ವಿಚಾರಣೆಗಳ ಇತಿಹಾಸವನ್ನು. ಸೈದ್ಧಾಂತಿಕ ಸಂವಾದಗಳ ಮೂಲಕ ಬೆಳೆದು ಬಂದ ಸಂಗತಿಯಲ್ಲ ಅದು. ಅದು ಸಂವಾದಗಳ ಮೂಲಕ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವ ಕೆಲಸ ಮಾಡುವುದಿಲ್ಲ. ಸಾಮಾಜಿಕ ಪ್ರಜ್ಞೆಯೆಂಬುದು ತಾವು ಹೇರಬೇಕಾದ ಸಂಗತಿಯೆಂದು ಭಾವಿಸಿಕೊಂಡು ನಡೆಸುತ್ತಿದ್ದ ಹಸ್ತಕ್ಷೇಪಗಳು ಅವರದ್ದಾಗಿದ್ದವು. ಪುರಾಣ ಮತ್ತು ಇತಿಹಾಸಗಳನ್ನು ಕಲಸುಮೇಲೋಗರ ಮಾಡುವ ಕೆಲಸಕ್ಕೆ ತಿಲಕ್ ಕೈ ಹಾಕಿದ್ದರು. ಒಂದು ಗೋತ್ರ ಭಾವನಾತ್ಮಕತೆಯಾಗಿ ಸ್ವಾತಂತ್ರ್ಯ ಹೋರಾಟವನ್ನು ವ್ಯಾಖ್ಯಾನಿಸಿದ್ದರು.
ಇದರ ಒಂದು ಪ್ರತಿಫಲವಾಗಿ ಭೂಗತ ಸಂಘಟನೆಗಳು ಹುಟ್ಟಿಕೊಂಡವು. ಭೌತಿಕವಾಗಿ ಕಬ್ಜಗೊಳಿಸಬೇಕಾದ ಸಂಗತಿಯಾಗಿ ದೇಶ ಎಂಬ ಕಲ್ಪನೆ ಬದಲಾಯಿತು. ಹೋರಾಟಗಳಿಂದ ಆಧುನಿಕ ಮನೋಭಾವವನ್ನು ಕಿತ್ತು ಹಾಕಿದರೆ ಅದು ಯುದ್ಧಗಳಾಗುತ್ತವೆ ಎಂದು ಭೂಗತ ಸಂಘಟನೆಗಳ ಹುಟ್ಟು ಸಾಬೀತು ಪಡಿಸಿದವು. ಯುದ್ಧದಲ್ಲಿ ಬೇಕಿರುವುದು ನಿಷ್ಠೆ. ಸೈದ್ಧಾಂತಿಕತೆಯಲ್ಲ. ಆಧುನಿಕ ಮೌಲ್ಯಗಳಿಗೆ ಯುದ್ಧದಲ್ಲಿ ಯಾವ ಜಾಗವೂ ಇಲ್ಲ. ಅಭಿನವ್ ಭಾರತ್ ಮೊದಲಾದ ಸಂಘಟನೆಗಳಲ್ಲಿ ಸದಸ್ಯರಾಗಿ ಸೇರುವುದು ಯಾವುದಾದರು ಕಾರ್ಯಕ್ರಮಗಳ ಮೂಲಕ ಆಗಿರಲೇ ಇಲ್ಲ. ಪ್ರತಿಜ್ಞೆ ಸ್ವೀಕರಿಸಿ ನಿಷ್ಠೆ ಸಾಬೀತು ಪಡಿಸುವ ಮೂಲಕವಾಗಿತ್ತು.
ಆದರೆ, ನ್ಯಾಯಾಲಯ ತರಹದ ಸುಮಾರಾಗಿ ಆಧುನಿಕವಾದ ಜಾಗ ತಲುಪುವಾಗ ಈ ಗೋತ್ರ ಭಾವನಾತ್ಮಕತೆ ಚಿಂದಿಯಾಗುವುದನ್ನು ಕಾಣಬಹುದು. ಈ ವಿಚಾರಣೆಗಳ ಇತಿಹಾಸ ಕೆದಕಿದರೆ ಮಾಫಿ ಸಾಕ್ಷಿಗಳ ದೊಡ್ಡ ಪಡೆಯನ್ನೇ ಕಾಣಬಹುದು. ಮಾತ್ರವಲ್ಲ, ಈ ಸಂಘಟನೆಗಳ ಭರ್ಜಿಗಳಾಗುವವರು ತಮ್ಮ ಕೃತ್ಯದ ಸಂಪೂರ್ಣ ಜಾವಾಬ್ದಾರಿಯನ್ನು ಹೊರಲು ತಯಾರಾಗುವಂತಹ ಮಾನಸಿಕತೆಯನ್ನು ಹೊಂದಿದವರಾಗಿರುತ್ತಾರೆ. ಉದಾಹರಣೆಗೆ, ಡಿಂಗ್ರ. ವಿಲ್ಲಿಯನ್ನು ಕೊಂದ ಪೂರ್ತಿ ಜವಾಬ್ದರಾರಿಯನ್ನು ತಾನೇ ಹೊತ್ತುಕೊಂಡು ನೇಣುಗಂಬ ಏರಿದ. ಒಂದು ದೊಡ್ಡ ಭೂಗತ ಸಂಘಟನೆಯ ಅನಿವಾರ್ಯ ಘಟಕ ತಾನಾಗಿದ್ದೆ ಎಂಬುದನ್ನು ಡಿಂಗ್ರ ಎಲ್ಲಿಯೂ ಬಾಯಿ ಬಿಡಲಿಲ್ಲ. ತನ್ನೊಳಗೆ ಹುಟ್ಟಿಕೊಂಡ ಸಂಘರ್ಷದ ಫಲವಾಗಿ ತಾನು ನಡೆದುಕೊಂಡ ಪರಿಣಾಮವೇ ವಿಲ್ಲಿಯ ಕೊಲೆಯೆಂದು ಡಿಂಗ್ರ ನ್ಯಾಯಾಲಯದಲ್ಲಿ ವಾದಿಸಿದ. ಅದರ ಶಿಕ್ಷೆಯನ್ನು ತಾನೇ ಸ್ವೀಕರಿಸಿದ.
ಆದರೆ, ಜಾಕ್ಸನ್ ಕೊಲೆ ಪ್ರಕರಣ ಹಾಗಾಗಿರಲಿಲ್ಲ. ಅದರ ಹಿಂದಿನ ಗೂಢಾಲೋಚನೆಯನ್ನು ಹೊರತರುವಲ್ಲಿ ಮಾಫಿಸಾಕ್ಷಿಗಳು ದೊಡ್ಡ ಪಾತ್ರ ವಹಿಸಿದರು. ಗಾಂಧಿ ಹತ್ಯೆ ಸಹಿತ, ದುರಭಿಮಾನ ಮತ್ತು ಪ್ರತಿಕಾರ ಕೊಲೆಗಳ ಕುರಿತು ಇವತ್ತು ನಮ್ಮ ಮುಂದೆ ಇರುವ ಮಾಹಿತಿಗಳ ಮೂಲ ಈ ಮಾಫಿಸಾಕ್ಷಿಗಳ ದಾಖಲೆಗಳೇ ಆಗಿದೆ. ಇದು ವಿಚಾರಣೆಗಳು ಅವರ ಒಳಗೆ ಮೂಡಿಸಿದ ಸಂಘರ್ಷಗಳ ಪರಿಣಾಮವೂ ಹೌದು. ಆಧುನಿಕ ವಿರೋಧಿಯಾದ ಅಂತಃಸತ್ವವೊಂದು ಮೊದಲ ಬಾರಿಗೆ ಆಧುನಿಕತೆಯೊಂದಿಗೆ ಮುಖಾಮುಖಿಯಾಗುವಾಗ ಉಂಟಾಗುವ ಪ್ರತಿಕ್ರಿಯೆಯ ಉಪಉತ್ಪನ್ನವಾಗಿ ಈ ಮಾಫಿಸಾಕ್ಷಿಗಳನ್ನು ಪರಿಗಣಿಸಬಹುದು.
ಸಾವರ್ಕರ್ ವಿಷಯದಲ್ಲೂ ಇಂತಹ ಮಾಫಿಸಾಕ್ಷಿಗಳ ದೊಡ್ಡ ಸರಣಿಯನ್ನೇ ನೋಡಬಹುದು. ಅದರಲ್ಲಿ ಮೊದಲ ವ್ಯಕ್ತಿ ಹರಿಶ್ಚಂದ್ರ ಕೃಷ್ಣರಾವ್ ಕೋರೆಗಾಂವ್ಕರ್ ಎಂಬ ಮರಾಠಿ ಇಂಜಿನಿಯರ್. ಗ್ವಾಲಿಯರ್ ಮೂಲದ ಆತ ೧೯೦೬ರಲ್ಲಿ ಇಂಜಿನಿಯರಿಂಗ್ ಕಲಿಯಲೆಂದು ಲಂಡನ್ ತಲುಪಿದ್ದ. ಆ ವರ್ಷವೇ ಗುರು ಗೋವಿಂದ್ ಸಿಂಗ್ ಜಯಂತಿ ಆಚರಣೆಯಲ್ಲಿ ಪಾಲ್ಗೊಳ್ಳಲು ಇಂಡಿಯಾ ಹೌಸಿಗೆ ಮೊದಲ ಬಾರಿ ಭೇಟಿ ನೀಡುತ್ತಾನೆ. ನಂತರ ಅಲ್ಲಿಯೇ ವಾಸ ಮುಂದುವರಿಸುತ್ತಾನೆ. ಸಾವರ್ಕರ್, ಇಂಡಿಯಾ ಹೌಸಿನ ವಿದ್ಯಾರ್ಥಿಗಳಿಗಾಗಿ ಮಾಡಿದ ಎರಡು ಭಾಷಣಗಳನ್ನು ಕೋರೆಗಾಂವ್ಕರ್ ನೆನೆಯುತ್ತಾನೆ. ಮೊದಲನೆಯದು, ಬ್ರಿಟಿಷ್ ಇಂಡಿಯಾದ ರಾಜಾಡಳಿತ ಸಂಸ್ಥಾನಗಳಲ್ಲಿ ಶೇಖರಿಸಿರುವ ಆಯುಧಗಳನ್ನು ಬಳಸಿಕೊಂಡು ಬ್ರಿಟಿಷರನ್ನು ಸೋಲಿಸುವ ಕುರಿತು. ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿ ದೇಶೀ ಸಂಸ್ಥಾನಗಳು ವಹಿಸಬೇಕಾದ ಜವಾಬ್ದಾರಿಯ ಕುರಿತು ಸಾವರ್ಕರ್ ಬಹಳ ಹಿಂದೆಯೇ ಯೋಚಿಸಿದ್ದರು ಎಂಬುದಕ್ಕೆ ಕೋರೆಗಾಂವ್ಕರನ ಮಾತುಗಳು ಸಾಕ್ಷಿ ಒದಗಿಸುತ್ತವೆ.
ಎರಡನೆಯದು, ಹಾಗೆ ಉಂಟಾಗುವ ಹೊಸ ರಾಷ್ಟ್ರದ ರಚನೆ ಹೇಗಿರಬೇಕು ಎಂಬುದರ ಕುರಿತು. ದೇಶೀಯ ರಾಜರುಗಳು ಸದಸ್ಯರಾಗಿರುವ ಒಂದು ಮೇಲ್ಮೈ ಸಭೆ ಮತ್ತು ಆಯ್ದ ಸದಸ್ಯರನ್ನು ಒಳಗೊಂಡ ಒಂದು ಭೂಗತ ಸಭೆ ಸಾವರ್ಕರ್ ಮುಂದಿಟ್ಟ ಯೋಜನೆಯಾಗಿತ್ತು. ಇದರ ಜೊತೆಗೆ ಬ್ರಿಟಿಷರ ವಿರುದ್ಧ ಹೋರಾಡಲು ಅತ್ಯಂತ ಹೆಚ್ಚು ಸಹಾಯ ಮಾಡಿದ ಒಬ್ಬ ರಾಜನನ್ನು ದೇಶದ ರಾಜ ಎಂದು ಪಟ್ಟಾಭಿಷೇಕ ಮಾಡುವುದು.
ಸಾವರ್ಕರ್ ಅವರ ದೇಶದ ಕಲ್ಪನೆ ಫಾಡ್ಕೇ ಮತ್ತಿತರು ಕನಸು ಕಂಡಿದ್ದ ಪೇಶ್ವಾ ಸಾಮ್ರಾಜ್ಯದ ಪುನರ್ ಸ್ಥಾಪನೆ ಎಂಬ ಆಶಯಕ್ಕಿಂತ ಹೆಚ್ಚೇನು ಭಿನ್ನವಲ್ಲ ಎಂಬುದನ್ನು ಕೋರೆಗಾಂವ್ಕರನ ಈ ಹೇಳಿಕೆಗಳು ತೋರಿಸಿಕೊಡುತ್ತವೆ. ಅಷ್ಟೇ ಅಲ್ಲ, ಹಾಗೆ ಹುಟ್ಟುವ ಹೊಸ ರಾಷ್ಟ್ರದ ಭಾಷೆಯಾಗಿ ಹಿಂದಿಯನ್ನು ಸಾವರ್ಕರ್ ಸೂಚಿಸುತ್ತಾರೆ. ನಂಬಿಕೆ ಮತ್ತು ಆಯುಧಗಳನ್ನು ಬಳಸಿಕೊಂಡು ಮಾಡಿದ ಇನ್ನೊಂದು ಭಾಷಣವನ್ನೂ ಕೋರೆಗಾಂವ್ಕರ್ ನೆನೆಯುತ್ತಾನೆ.
ಕೋರೆಗಾಂವ್ಕರ್ ಮತ್ತು ಡಿಂಗ್ರ ಲಂಡನ್ನಿಗೆ ಒಂದೇ ಹಡಗಿನಲ್ಲಿ ಯಾತ್ರೆ ಮಾಡಿದ್ದರು. ವಿಲ್ಲಿಯನ್ನು ಕೊಲ್ಲುವ ದಿನ ಡಿಂಗ್ರ ರಸೆಲ್ ಸ್ಕ್ವೇರ್‌ನಲ್ಲಿರುವ ಕೋರೆಗಾಂವ್ಕರನ ಮನೆಗೆ ಬಂದಿದ್ದ. ಘಟನೆ ನಡೆಯುವ ದಿನ ಡಿಂಗ್ರನನ್ನು ಹಿಂಬಾಲಿಸಬೇಕೆಂದೂ ಇದರಲ್ಲಿ ಡಿಂಗ್ರ ಸೋತರೆ ಆ ಗುರಿಯನ್ನು ಕೋರೆಗಾಂವ್ಕರ್ ನೆರವೇರಸಿಬೇಕೆಂದೂ ವಿನಾಯಕ್ ಮತ್ತು ವಿ.ವಿ.ಎಸ್. ಅಯ್ಯರ್ ಆತನಿಗೆ ಮನವರಿಕೆ ಮಾಡಿಕೊಟ್ಟಿದ್ದರು. ವಿಲ್ಲಿಯನ್ನು ಕೊಲ್ಲುವ ಸಭಾಂಗಣಕ್ಕೆ ವಿಲ್ಲಿ ಬರುವ ಸೂಚನೆಯನ್ನು ನೀಡಿದ್ದು ಕೂಡ ಕೋರೆಗಾಂವ್ಕರ್ ಆಗಿದ್ದ.
ಎರಡನೆಯ ಮಾಫಿಸಾಕ್ಷಿ ಚಂಚೇರಿ ರಾಮರಾವ್. ದೇಶಸ್ಥ ಬ್ರಾಹ್ಮಣನಾಗಿದ್ದ ಆತ ೧೯೦೯ರಲ್ಲಿ ಸ್ಯಾನಿಟರಿ ಇಂಜಿನಿಯರಿಂಗ್ ಕಲಿಯಲು ಲಂಡನ್ ತಲುಪಿದ್ದ. ಬಹಳ ಬೇಗನೆ ವಿನಾಯಕ್ ಜೊತೆ ಭೇಟಿ ಸಾಧ್ಯವಾಗಿ ಪ್ರತಿಜ್ಞೆ ಸ್ವೀಕರಿಸಿ ಅಭಿನವ್ ಭಾರತ್ ಸದಸ್ಯನೂ ಆದ. ಜಾಕ್ಸನ್ ಕೊಲೆಯ ನಂತರ ವಿನಾಯಕ್ ಪ್ಯಾರಿಸಿನ ಮೇಡಂ ಕಾಮಾರ ಮನೆಯಲ್ಲಿ ವಾಸವಿದ್ದಾಗ ರಾಮರಾವ್ ಅಲ್ಲಿಗೆ ಭೇಟಿ ನೀಡಿದ್ದ. ಆತನ ಮೂಲಕ ಪಿಸ್ತೂಲುಗಳನ್ನು ಪ್ಯಾರಿಸಿನಿಂದ ಭಾರತಕ್ಕೆ ಕಳುಹಿಸಲಾಯಿತು. ಜೊತೆಗೆ ಸಾವರ್ಕರ್ ಬರೆದಿದ್ದ ೧೮೫೭ರ ಸ್ವಾತಂತ್ರ್ಯ ಯುದ್ಧದ ಹತ್ತು ಪ್ರತಿಗಳನ್ನೂ. ಅದಲ್ಲದೆ ಮದನ್ ಲಾಲ್ ಡಿಂಗ್ರನ ಭಾವಚಿತ್ರವನ್ನು ಒಂದು ಶಿಲ್ಲಿಂಗ್ ಬೆಲೆಗೆ ರಾಮರಾವ್‌ಗೆ ನೀಡಿದ್ದರು.
ಬಾಂಬೆ ತಲುಪಿದ ರಾಮರಾವ್ ಬಂಧಿತನಾದ. ಆತ ಸಾಗಾಟ ಮಾಡಿದ ಆಯುಧಗಳ ಕುರಿತ ತನಿಖೆ ಆತನನ್ನು ಮಾಫಿಸಾಕ್ಷಿಯನ್ನಾಗಿಸಿತು. ಚತುರ್ಭುಜ್ ಅಮೀನನ ಹೇಳಿಕೆಯೂ ಸಾವರ್ಕರ್‌ಗೆ ವಿರುದ್ಧವಾಗಿತ್ತು.
ವಿಚಾರಣೆ ತಿಂಗಳುಗಳ ಕಾಲ ನಡೆಯಿತು. ಲಂಡನ್ನಿನ ಕಾನೂನುಗಳ ಪ್ರಕಾರ ತನಗೆ ಸಣ್ಣ ಪ್ರಮಾಣದ ಶಿಕ್ಷೆ ಮಾತ್ರ ಲಭಿಸಲಿದೆ ಎಂಬ ಸಾವರ್ಕರ್ ಲೆಕ್ಕಾಚಾರಗಳು ಬುಡಮೇಲಾದವು. ಗೂಢಾಲೋಚನೆಯ ಆರಂಭಿಕ ಹಂತ ಭಾರತದಲ್ಲಿ ಶುರುವಾಗಿತ್ತು ಎಂದು ನಾಸಿಕ್ ಮತ್ತು ಪುಣೆಗಳಲ್ಲಿ ಸಶಸ್ತ್ರ ಹೋರಾಟವನ್ನು ಬೆಂಬಲಿಸಿಕೊಂಡು ಸಾವರ್ಕರ್ ಮಾಡಿದ್ದ ಭಾಷಣಗಳನ್ನು ಮುಂದಿಟ್ಟು ಪ್ರಾಸಿಕ್ಯೂಷನ್ ವಾದಿಸಿತು. ಭಾರತದಲ್ಲಿ ದೇಶದ್ರೋಹಕ್ಕೆ ದೊಡ್ಡ ಬೆಲೆ ತೆರಬೇಕಾದೀತೆಂದು ಸಾವರ್ಕರ್‌ಗೆ ತಿಳಿದಿತ್ತು. ಆದ್ದರಿಂದ ಪೊಲೀಸ್ ಕಸ್ಟಡಿಯಿಂದ ಪಾರಾಗಲು ಸಾವರ್ಕರ್ ಯೋಚಿಸಿದರು.
ಆಗ ಸಾವರ್ಕರ್ ಸಹಾಯಕ್ಕೆ ಬರುವವನು ಡೇವಿಡ್ ಗಾರ್ನೆಟ್ ಎಂಬ ಯುವ ಲೇಖಕ. ಸಾವರ್ಕರ್‌ಗೆ ಬಚಾವಾಗಲು ಯೋಜನೆಯೊಂದನ್ನು ಆತ ರೂಪಿಸಿದ. ಪ್ರತಿವಾರ ಸಾವರ್ಕರನ್ನು ಜೈಲಿನಿಂದ ನ್ಯಾಯಾಲಯಕ್ಕೆ ಕೊಂಡು ಹೋಗುತ್ತಿದ್ದರು. ಸಾಮಾನ್ಯವಾಗಿ ಇಬ್ಬರು ಪೊಲೀಸರು ಕಾವಲಿಗೆ ಜೊತೆಗಿರುತ್ತಿದ್ದರು. ಹೀಗೆ ಕೊಂಡು ಹೋಗುವಾಗ ಜೈಲ್ ಗೇಟಿನ ಬಳಿಯೇ ಪೊಲೀಸರು ಮತ್ತು ಜೈಲು ಕಾವಲುಗಾರನ ಮೇಲೆ ದಾಳಿ ಮಾಡಿ ಸಾವರ್ಕರನ್ನು ರಕ್ಷಿಸಿ ಕಾರಿನಲ್ಲಿ ಬೋಟ್ ಜೆಟ್ಟಿಗೆ ತಲುಪಿಸುವುದು. ಅಲ್ಲಿಂದ ಬೋಟ್ ಮೂಲಕ ಫ್ರಾನ್ಸಿಗೆ ಪಲಾಯನ. ಇದು ಯೋಜನೆ. ಇದನ್ನು ಕಾರ್ಯಗತಗೊಳಿಸಲು ಲಂಡನ್ನಿನಲ್ಲಿದ್ದ ಸಾವರ್ಕರ್ ಅನುಯಾಯಿಯನ್ನು ಗಾರ್ನೆಟ್ ಭೇಟಿಯಾಗುತ್ತಾನೆ. ʼಸಿ.ಸಿ.ʼ ಎಂದು ಆ ಅನುಯಾಯಿಯನ್ನು ಗಾರ್ನೆಟ್ ಕರೆಯುತ್ತಾನೆ. ಜೊತೆಗೆ ಫ್ರಾನ್ಸಿಗೆ ಕೊಂಡು ಹೋಗಲು ಬೇಕಾದ ಬೋಟ್ ವ್ಯವಸ್ಥೆ ಮಾಡಲೆಂದು ಫ್ರಾನ್ಸಿನಲ್ಲಿದ್ದ ʼಎ.ಎʼ ಎಂಬ ಕ್ರಾಂತಿಕಾರಿಯನ್ನು ಸಂಪರ್ಕಿಸುತ್ತಾನೆ. ಆ ಪ್ರಯತ್ನ ವಿಫಲಗೊಳ್ಳಲು ಕಾರಣ ವಿಧಿಯ ಆಟವೆಂದು ವಿಕ್ರಂ ಸಂಪತ್ ತನ್ನ ಪುಸ್ತಕದಲ್ಲಿ ಹೇಳಿಕೊಳ್ಳುತ್ತಾರೆ. ಯಾಕೆಂದರೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿತ್ತು. ಜೈಲಿನಿಂದ ಹೊರಬರುವ ಸಾವರ್ಕರ್‌ನನ್ನು ಬೋಟ್ ಜೆಟ್ಟಿಗೆ ತಲುಪಿಸಲು ಐರಿಷ್ ಕ್ರಾಂತಿಕಾರಿ ಸಂಘಟನೆಯಾಗಿದ್ದ ಸಿನ್‌ಫಿನ್ ನ ಇಬ್ಬರು ಸದಸ್ಯರು ತಯಾರಾಗಿ ನಿಂತಿದ್ದರು. ಆದರೆ, ಹೊರಬಂದ ಕಾರಿನಲ್ಲಿ ಸಾವರ್ಕರ್ ಇರಲಿಲ್ಲ. ಆ ಹೊತ್ತಿಗೆ ಮುಂದಿನ ವಿಚಾರಣೆಗಾಗಿ ಸಾವರ್ಕರನ್ನು ಭಾರತಕ್ಕೆ ಕಳುಹಿಸುವ ನಿರ್ಧಾರ ತೆಗೆದುಕೊಂಡಾಗಿತ್ತು.
ಆದರೆ ವೈಭವ್ ಪುರಂದರೆ ಬೇರೆಯದೇ ಚಿತ್ರಣವೊಂದನ್ನು ಕಟ್ಟಿಕೊಡುತ್ತಾರೆ. ಪ್ಯಾರಿಸಿನ ಕ್ರಾಂತಿಕಾರಿ ʼಎ.ಎʼ ಬೋಟ್ ವ್ಯವಸ್ಥೆ ಮಾಡುವುದರಲ್ಲಿ ಸಹಾಯ ಮಾಡಲಿಲ್ಲ. ಆತನ ಕಡೆಯಿಂದ ಯಾವ ಸಹಾಯವೂ ಸಿಗುವುದಿಲ್ಲವೆಂದು ಖಚಿತವಾದ ನಂತರ ಗಾರ್ನೆಟ್ ಸ್ವತಃ ತಾನೇ ಪ್ಯಾರೀಸಿಗೆ ಹೋಗಿ ಬೋಟ್ ವ್ಯವಸ್ಥೆ ಮಾಡುತ್ತಾನೆ. ಆದರೆ, ಗಾರ್ನೆಟ್ಟನ ತಂದೆ ಅದಾಗಲೇ ಫ್ರಾನ್ಸ್ ತಲುಪಿ ಫ್ರೆಂಚ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆಂದು ʼಎ.ಎʼ ಗಾರ್ನೆಟ್‌ಗೆ ವಿವರಿಸುತ್ತಾನೆ. ಹಾಗಾಗಿ ಸಾವರ್ಕರನ್ನು ರಕ್ಷಿಸುವ ಆ ಯೋಜನೆಯನ್ನು ಅವರು ಕೈ ಬಿಡುತ್ತಾರೆ. ʼಎ.ಎʼ ಈ ಯೋಜನೆಯನ್ನು ಬುಡಮೇಲು ಮಾಡಿದನೆಂದು ಗಾರ್ನೆಟ್ ಭಾವಿಸುತ್ತಾನೆ. ʼಇಂಡಿಯನ್ ಕ್ರಾಂತಿಕಾರಿಗಳುʼ ತಮ್ಮ ಅಗತ್ಯಕ್ಕೆ ಬೇಕಾಗಿ ತನಗೆ ವಿದೂಷಕನ ವೇಷ ತೊಡಿಸಿದರೆಂದೂ ಆತ ಅಂದುಕೊಳ್ಳುತ್ತಾನೆ.
ಧನಂಜಯ್ ಕೀರ್ ಬರೆದ ಆತ್ಮಕತೆಯಲ್ಲೂ ಸುಮಾರಾಗಿ ಇಂತಹದ್ದೇ ಚಿತ್ರಣವಿದೆ. ಜೈಲಿನಿಂದ ಹೊರಬರುವ ಸಾವರ್ಕರನ್ನು ರಕ್ಷಿಸಲು ಬೇಕಾದ ಏರ್ಪಾಟುಗಳಿಗೆ ಮುಂದಾಳುತ್ವ ವಹಿಸಿದ್ದು ಮೋಡ್‌ಗಾನ್ ಎಂಬ ಯುವತಿ ಎಂದು ಧನಂಜಯ್ ಕೀರ್ ಹೇಳುತ್ತಾರೆ. ನಮಗೆಲ್ಲ ತಿಳಿದಿರುವಂತೆ ಮಹಾಕವಿ ಡಬ್ಲ್ಯೂ.ಬಿ. ಯೇಟ್ಸ್‌ನ ಪ್ರೇಯಸಿಯಾಗಿದ್ದಳು ಮೋಡ್‌ಗಾನ್. ಈಸ್ಟರ್ ೧೯೧೬ ಎಂಬ ಕವಿತೆಯಲ್ಲಿ ಮೋಡ್‌ಗಾನಳ ಪತಿಯಾಗಿದ್ದ, ನಂತರ ವಿಚ್ಛೇದನಗೊಂಡ, ಮೇಜರ್ ಜಾನ್ ಮ್ಯಾಕ್‌ಬ್ರೈಡನ ಕುರಿತು ʼನನ್ನ ಹೃದಯಕ್ಕೆ ಅತ್ಯಂತ ಹತ್ತಿರದ ವ್ಯಕ್ತಿಯ ಮೇಲೆ ಅತಿ ದೊಡ್ಡ ತಪ್ಪೆಸಗಿದ ವ್ಯಕ್ತಿʼ ಎಂದು ಯೇಟ್ಸ್ ನೆನೆಯುತ್ತಾನೆ. ಈಸ್ಟರ್ ದಿನ ದಂಗೆಯಲ್ಲಿ ಜಾನ್ ಮ್ಯಾಕ್‌ಬ್ರೈಡನನ್ನು ಕೊಲ್ಲಲಾಗಿರುತ್ತದೆ. ಆದರೆ ಈ ಮಾಹಿತಿ ಪೊಲೀಸರಿಗೆ ಅದು ಹೇಗೋ ಸೋರಿಕೆಯಾದ ಕಾರಣ ಬೇರೊಂದು ದಾರಿಯಲ್ಲಿ ಸಾವರ್ಕರನ್ನು ಕೊಂಡು ಹೋಗಲಾಗಿತ್ತು ಎಂದು ಕೀರ್ ಬರೆಯುತ್ತಾರೆ. ಆದರೆ, ಅದಕ್ಕಿಂತಲೂ ದೊಡ್ಡ ಆರೋಪವೊಂದನ್ನು ಕೀರ್ ಸಂಶಯ ರೂಪದಲ್ಲಿ ಎತ್ತುತ್ತಾರೆ. ʼಎ.ಎ.ʼ ಅಂದರೆ ಅರುಣಾ ಅಸಫ್ ಅಲಿಯ ಪತಿ ಅಸಫ್ ಅಲಿ ಎಂಬುದು ಆ ಸಂಶಯ. ಸಾವರ್ಕರ್ ಜೊತೆಗಿನ ದೀರ್ಘ ಸಂವಾದದ ನಂತರ ತಾನು ಆತ್ಮಕತೆ ಬರೆದೆ ಎಂದು ಧನಂಜಯ್ ಕೀರ್ ಹೇಳುತ್ತಾರೆ. ವಿರೋಧಿಗಳನ್ನು ವೈಯಕ್ತಿಕ ತೇಜೋವಧೆ ಮಾಡುವುದು ಸಾವರ್ಕರ್ ಶೈಲಿಯಾಗಿದ್ದರಿಂದ, ಸ್ವತಃ ಸಾವರ್ಕರೇ ಅಂತಹದ್ದೊಂದು ಸಂಶಯಾತ್ಮಕ ಸಂಗತಿಯನ್ನು ತೇಲಿಬಿಟ್ಟಿರಬಹುದು ಎಂದು ಕೂಡ ಊಹಿಸಬಹುದು.
ತನ್ನ ಪ್ರಯತ್ನ ವಿಫಲವಾದುದರ ಕುರಿತು ಗಾರ್ನೆಟ್ ಸಾವರ್ಕರ್‌ಗೆ ವಿವರಿಸಿದಾಗ, ಸಾವರ್ಕರ್ ಗಾರ್ನೆಟನ್ನು ಸಮಾಧಾನಪಡಿಸುತ್ತಾನೆ. ಪಾರಾಗಲು ಬೇರೆ ದಾರಿಗಳನ್ನು ತಾನು ಹುಡುಕುತ್ತಿರುವ ಸೂಚನೆಯನ್ನೂ ಸಾವರ್ಕರ್ ನೀಡುತ್ತಾರೆ. ನಿಜದಲ್ಲಿ ಜೈಲಿನಲ್ಲಿ ತನ್ನನ್ನು ಕಾಣಲು ಬರುತ್ತಿದ್ದ ವಿ.ವಿ.ಎಸ್. ಅಯ್ಯರ್ ಜೊತೆಗೆ ಅಂತಹದ್ದೊಂದು ಯೋಜನೆಯನ್ನು ಸಾವರ್ಕರ್ ಸಿದ್ದಪಡಿಸುತ್ತಿದ್ದರು. ಭೇಟಿಯ ಸಮಯದಲ್ಲಿ ಅವರಿಬ್ಬರು ಪರಸ್ಪರ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಕಾವಲು ನಿಲ್ಲುತ್ತಿದ್ದ ಪೊಲೀಸನಿಗೆ ಹಿಂದಿ ಬಾರದಿದ್ದ ಕಾರಣ ಎಲ್ಲ ಸಂಗತಿಗಳನ್ನು ಚರ್ಚಿಸಲು ಅವರಿಗೆ ಸುಲಭವಾಗಿತ್ತು. ಅವರ ಮಾತುಕತೆ ದೀರ್ಘವಾದರೆ ಮಾತ್ರ ಪೊಲೀಸ್ ನಡುವೆ ಬರುತ್ತಿದ್ದ.
೧೯೧೦ ಜೂನ್ ೨೯ರಂದು ಅಂದಿನ ಬ್ರಿಟನ್ನಿನ ಗೃಹ ಕಾರ್ಯದರ್ಶಿಯಾಗಿದ್ದ ವಿನ್ಸಂಟ್ ಚರ್ಚಿಲ್ ಸಾವರ್ಕರನ್ನು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಯಲ್ಲಿ ಭಾರತಕ್ಕೆ ಕಳುಹಿಸಿಕೊಡಲು ಆದೇಶಿಸಿದ.
ಅದರಂತೆ ೧ ಜುಲೈ ೧೯೧೦ರಂದು ಸಾವರ್ಕರನ್ನು ಹೊತ್ತ ಎಸ್.ಎಸ್. ಮೋರಿಯಾ ಎಂಬ ಹಡಗು ಲಂಡನ್ನಿನಿಂದ ಬಾಂಬೆಗೆ ಹೊರಟಿತು. ಲಂಡನ್ ಮೆಟ್ರೋಪಾಲಿಟನ್ ಇನ್ಸ್‌ಪೆಕ್ಟರ್ ಆಗಿದ್ದ ಎಡ್ವರ್ಡ್ ಜಾನ್ ಪಾರ್ಕರ್, ಬಾಂಬೆ ಡೆಪ್ಯೂಟಿ ಸೂಪರಿಂಟೆಂಡೆಂಟ್ ಸಿ.ಜೆ. ಪೊವಾರ್, ಭಾರತದಿಂದ ಪೊವಾರ್ ಜೊತೆಗೆ ಬಂದಿದ್ದ ಮುಹಮ್ಮದ್ ಸಿದ್ದೀಕ್ ಎಂಬ ಪುಣೆಯ ಪೊಲೀಸ್ ಹೆಡ್ ಕಾನ್ಸ್‌ಟೇಬಲ್, ಅಮರ್ ಸಿಂಗ್ ಸಖಾರಾಂ ಸಿಂಗ್ ಎಂಬ ನಾಸಿಕಿನ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಇವರುಗಳಿಗೆ ಸಾವರ್ಕರನ್ನು ಭಾರತಕ್ಕೆ ತಲುಪಿಸುವ ಜವಾಬ್ದಾರಿ ವಹಿಸಲಾಗಿತ್ತು.
ಈ ನಡುವೆ ಸಾವರ್ಕರ್ ಸಹವರ್ತಿ ಬ್ರಾಹ್ಮಣ ಎಂಬ ನೆಲೆಯಲ್ಲಿ ವಿ.ವಿ.ಎಸ್. ಅಯ್ಯರ್ ಕೂಡ ಪೊಲೀಸ್ ನಿಗಾದಲ್ಲಿದ್ದ. ವಿ.ವಿ.ಎಸ್. ಅಯ್ಯರ್ ಸಾವರ್ಕರನ್ನು ರಕ್ಷಿಸಲು ಗೂಢಾಲೋಚನೆ ಮಾಡುತ್ತಿದ್ದಾನೆ ಎಂಬ ಗಟ್ಟಿ ಗುಮಾನಿಯೂ ಪೊಲೀಸರಿಗೆ ಇತ್ತು. ಆದ್ದರಿಂದಲೇ ಅಯ್ಯರ್ ಮೇಲಿನ ಕಣ್ಗಾವಲು ತೀವ್ರವಾಗಿತ್ತು. ಅದರಲ್ಲೂ ಇಂಗ್ಲೆಂಡಿಗೆ ಯಾವ ರೀತಿಯ ಪ್ರಾಬಲ್ಯವೂ ಇಲ್ಲದ ಫ್ರಾನ್ಸಿನಲ್ಲಿ ಶ್ಯಾಂಜಿ ಕೃಷ್ಣವರ್ಮ, ಮೇಡಂ ಬಿಕ್ಕಾಜಿ ಕಾಮ, ಸರ್ದಾರ್ ಸಿಂಗ್ ರಾಣ, ಚಟ್ಟೋ ಎಂಬ ವೀರೇಂದ್ರನಾಥ್ ಚಟ್ಟೋಪಾಧ್ಯಾಯ ಮೊದಲಾದವರು ಸಕ್ರಿಯರಾಗಿದ್ದ ಕಾರಣ ಅವರ ಜೊತೆಗೆ ಸೇರಿಕೊಂಡು ಅಯ್ಯರ್ ಗೂಢಾಲೋಚನೆ ಮಾಡುತ್ತಿದ್ದಾನೆ ಎಂಬ ಗುಮಾನಿಯೂ ಪೊಲೀಸರಿಗೆ ಇತ್ತು. ಆದ್ದರಿಂದ ಅಯ್ಯರ್ ಲಂಡನ್ ಬಿಟ್ಟು ಫ್ರಾನ್ಸಿಗೆ ಪಲಾಯನ ಮಾಡುವುದನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಲಂಡನ್ ಫ್ರಾನ್ಸ್ ಸಂಚಾರಿ ಪಥಗಳು ಪೊಲೀಸರ ತೀವ್ರ ನಿಗಾದಲ್ಲಿದ್ದವು. ಇದೆಲ್ಲವನ್ನು ನಿರೀಕ್ಷಿಸಿದ್ದ ಅಯ್ಯರ್ ಯಾರು ಕೂಡ ಅಷ್ಟಾಗಿ ಗಮನಿಸಿದ್ದ ಹಾಲೆಂಡಿಗೆ ಹೊರಡುವ ಹಡಗನ್ನು ಆಯ್ದುಕೊಂಡು ಲಂಡನ್ ತೊರೆಯುತ್ತಾನೆ. ಸಾಮಾನ್ಯವಾಗಿ ಸನ್ಯಾಸಿಗಳ ಹಾಗೆ ಉದ್ದ ಗಡ್ಡ ಬೆಳೆಸಿಕೊಂಡಿದ್ದ ಅಯ್ಯರ್‌ಗೆ ಸಿಕ್ ವೇಷ ಹಾಕಿಕೊಳ್ಳುವುದು ಕಷ್ಟದ ಕೆಲಸವಾಗಿರಲಿಲ್ಲ.
ಹಡಗಿನ ಡೆಕ್ಕಿನಲ್ಲಿ ಅಯ್ಯರ್‌ನನ್ನು ಕಂಡು ಸಂಶಯಗೊಂಡ ಪೊಲೀಸ್ ಒಬ್ಬ ವಿ.ವಿ.ಎಸ್. ಎಂಬ ಹೆಸರಿನಲ್ಲಿ ಟೆಲಿಗ್ರಾಮನ್ನು ತಂದು ಕೊಡುತ್ತಾನೆಂದೂ ಅಯ್ಯರ್ ಅದನ್ನು ನೋಡಿ ʼಇದು ತನಗಲ್ಲ, ಯಾವುದೋ ಅಯ್ಯರ್ ಹೆಸರಿನಲ್ಲಿದೆಯೆಂದುʼ ಹೇಳಿ ಮರಳಿಸದನೆಂದೂ ಕಥೆಯೊಂದು ʼಹಿಂದುತ್ವ ಕಥಾಮಾಲಿಕೆʼಯ ಭಾಗವಾಗಿ ಪ್ರಚಲಿತದಲ್ಲಿದೆ. ಟೆಲಿಗ್ರಾಂ ಸ್ವೀಕರಿಸಿದ್ದರೆ ಅದು ಅಯ್ಯರ್ ಎಂದು ಗುರುತಿಸಿ ಅರೆಸ್ಟ್ ಮಾಡುವವನಿದ್ದ. ಆದರೆ, ಚೂರೇ ಚೂರು ಭಾವ ವ್ಯತ್ಯಾಸವಿಲ್ಲದೆ ಆ ಟೆಲಿಗ್ರಾಮನ್ನು ಮರಳಿಸುವ ಮೂಲಕ ಆ ಖೆಡ್ಡಾದಿಂದ ಪಾರಾಗುತ್ತಾನೆ. ಅದರ ಜೊತೆಗೆ ತನ್ನ ಪೆಟ್ಟಿಗೆಯ ಮೇಲೆ ವಿ.ವಿ.ಎಸ್. ಎಂಬ ಇಂಗ್ಲೀಷ್ ಅಕ್ಷರಗಳನ್ನು ಕಂಡ ಪೊಲೀಸ್ ಸಂಶಯದಿಂದ ಮತ್ತೆ ನೋಡುತ್ತಾನೆ. ಆಗ ಅಯ್ಯರ್ ತನ್ನ ಹೆಸರು ʼವೀರ್ ವಿಕ್ರಂ ಸಿಂಗ್ʼ ಎಂದು ಹೇಳುತ್ತಾನೆ. ಅದರೊಂದಿಗೆ ವಿ.ವಿ.ಎಸ್. ಅಕ್ಷರಗಳ ಪೂರ್ಣರೂಪ ತಿಳಿದ ಪೊಲೀಸ್ ಸಂತೃಪ್ತಿಯಿಂದ ಮರಳಿದ ಎಂಬುದು ಕಥೆ.
ಏನೇ ಆಗಿದ್ದರೂ ಅಯ್ಯರ್ ಹಾಲೆಂಡ್ ತಲುಪುತ್ತಾನೆ. ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಪ್ಯಾರಿಸ್‌ಗೆ. ಅಲ್ಲಿದ್ದ ಆಗಲೇ ಹೇಳಿದ ಇತರರೊಂದಿಗೆ ಚರ್ಚಿಸುತ್ತಾನೆ. ಲಂಡನ್ನಿನಿಂದ ಬಾಂಬೆಗೆ ಹೋಗುವ ಮಾರ್ಗ ಮಧ್ಯೆ ಎಸ್.ಎಸ್. ಮೋರಿಯಾ ಫ್ರಾನ್ಸಿನ ಮಾರ್ಸೆಲ್ಸ್‌ನಲ್ಲಿ ಲಂಗರು ಹಾಕುತ್ತದೆ. ಆಗ ಸಾವರ್ಕರನ್ನು ಹಡಗಿನಿಂದ ರಕ್ಷಿಸುವುದು ಅವರ ಯೋಜನೆಯಾಗಿತ್ತು. ಫ್ರಾನ್ಸ್ ಮತ್ತು ಇಂಗ್ಲೆಂಡ್ ನಡುವೆ ಖೈದಿಗಳನ್ನು ಹಸ್ತಾಂತರಿಸುವ ಒಪ್ಪಂದ ಇರಲಿಲ್ಲವಾದ್ದರಿಂದ ಸಾವರ್ಕರ್‌ಗೆ ಫ್ರಾನ್ಸ್‌ನಲ್ಲಿ ರಾಜಕೀಯ ರಕ್ಷಣೆ ದೊರೆಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಇಂತಹದ್ದೊಂದು ಯೋಜನೆ ರೂಪಿಸಲಾಗಿತ್ತು.
ಜುಲೈ ೭ರಂದು ಹಡಗು ಫ್ರಾನ್ಸಿನ ಮಾರ್ಸೆಸ್ಸಿನಲ್ಲಿ ಲಂಗರು ಹಾಕಿತು. ಅಂದು ವಿಶೇಷವಾಗಿ ಏನೂ ನಡೆಯಲಿಲ್ಲ. ಆದರೆ ಮರುದಿನ ಮುಂಜಾನೆ ೬:೧೫ಕ್ಕೆ ಶೌಚಾಲಯಕ್ಕೆ ಹೋಗಬೇಕೆಂದು ಸಾವರ್ಕರ್ ಹೇಳುತ್ತಾರೆ. ಸಾಮಾನ್ಯವಾಗಿ ಬೆಳಿಗ್ಗೆ ಎಂಟು ಗಂಟೆಗೆ ಸಾವರ್ಕರನ್ನು ಶೌಚಾಲಯಕ್ಕೆ ಕೊಂಡು ಹೋಗುತ್ತಿದ್ದರು. ಪೊವಾರ್ ಇನ್ನೂ ನಿದ್ದೆ ಬಿಟ್ಟಿರದಿದ್ದ ಕಾರಣ, ಅಂದು ಪಾರ್ಕರ್ ಸಾವರ್ಕರನ್ನು ಕರೆದುಕೊಂಡು ಹೋಗುತ್ತಾನೆ. ಇಬ್ಬರು ಹೆಡ್ ಕಾನ್ಸ್‌ಟೇಬಲ್‌ಗಳು ಬಾಗಿಲ ಬಳಿ ಕಾವಲಿಗೆ ನಿಲ್ಲುತ್ತಾರೆ. ಅಲ್ಲಿ ನಿಂತುಕೊಂಡು ಅವರು ತಮ್ಮ ಸಮವಸ್ತ್ರ ಧರಿಸುವ ಕೆಲಸದಲ್ಲಿ ನಿರತರಾಗುತ್ತಾರೆ. ಪಾರ್ಕರ್ ತೆರೆದಿದ್ದ ಹಡಗಿನ ಕಿಟಕಿಯನ್ನು (Porthole) ಗಮನಿಸಲೂ ಇಲ್ಲ. ಸಾಮಾನ್ಯವಾಗಿ ಸಾವರ್ಕರ್ ಶೌಚಾಲಯ ಬಳಸುವಾಗ ಆ ಕಿಟಕಿಯನ್ನು ಸುಲಭದಲ್ಲಿ ತೆರೆಯಲಾಗದಂತೆ ಮುಚ್ಚಲಾಗುತ್ತದೆ.
ಶೌಚಾಲಯದ ಒಳಗಿನಿಂದ ಚಿಲಕ ಹಾಕಿಕೊಂಡ ಸಾವರ್ಕರ್ ಹನ್ನೆರಡು ಇಂಚು ವ್ಯಾಸದ ಕಿಟಿಕಿಯ ಮೂಲಕ ಸಮುದ್ರಕ್ಕೆ ಹಾರುತ್ತಾರೆ. ಬಂದರಿನ ದಡ ತಲುಪಲು ಸುಮಾರು ಹತ್ತು ಹನ್ನೆರಡು ಅಡಿ ದೂರ ಈಜಬೇಕಿತ್ತು.
ಶೌಚಾಲಯದ ಮೇಲೆ ಮತ್ತು ಕೆಳಗೆ ಕಿಂಡಿಗಳಿದ್ದವು. ಖೈದಿಯನ್ನು ಗಮನಿಸುವುದರ ಭಾಗವಾಗಿ ಹೆಡ್ ಕಾನ್ಸ್‌ಟೇಬಲ್ ಅಮರ್ ಸಿಂಗ್ ಕೆಳಗಿನ ಕಿಂಡಿಯ ಮೂಲಕ ಇಣುಕಿ ನೋಡುತ್ತಾನೆ. ಅಲ್ಲಿ ಸಾವರ್ಕರ್ ಬಳಸುತ್ತಿದ್ದ ಚಪ್ಪಲಿ ಮಾತ್ರ ಕಾಣಿಸುತ್ತದೆ. ಪುನಃ ನೋಡಿದಾಗ ಕಿಟಕಿಯ ಮೂಲಕ ತೂರಿಕೊಳ್ಳುತ್ತಿರುವ ಸಾವರ್ಕರ್ ದೇಹದ ಅರ್ಧಭಾಗ ಕಾಣಿಸುತ್ತದೆ. ಅಮರ್ ಸಿಂಗ್ ಕಿರುಚಿಕೊಂಡು ಬಾಗಿಲು ತೆರೆಯಲು ಪ್ರಯತ್ನಿಸುತ್ತಾನೆ. ಆದರೆ ಒಳಗಿನಿಂದ ಚಿಲಕ ಹಾಕಿದ್ದರಿಂದ ಅದು ಸಾಧ್ಯವಾಗಲಿಲ್ಲ. ಬಾಗಿಲಿನ ಗಾಜುಗಳನ್ನು ಒಡೆದು ಒಳಹೋಗುವಷ್ಟರಲ್ಲಿ ಸಾವರ್ಕರ್ ಕಡಲಿಗೆ ಧುಮುಕಿ ಆಗಿರುತ್ತದೆ.
ಸಮುದ್ರದಿಂದ ದಡ ತಲುಪಿದ ಸಾವರ್ಕರ್ ಓಡಲು ಶುರು ಮಾಡುತ್ತಾರೆ. ಹಡಗಿನಿಂದ ಇಳಿದು ಬಂದ ಹೆಡ್ ಕಾನ್ಸ್‌ಟೇಬಲ್‌ಗಳು ಕಿರುಚುತ್ತಾ ಬೆನ್ನಟ್ಟಲು ಶುರು ಮಾಡುತ್ತಾರೆ. ಇನ್ನೂರು ಗಜ ಓಡಿದ ಸಾವರ್ಕರ್ ಒಂದು ಬಾಡಿಗೆ ವಾಹನ ಹಿಡಿಯಲು ಪ್ರಯತ್ನಿಸುತ್ತಾರೆ. ಆದರೆ, ಕೂಲಿ ಕೊಡಲು ಕೈಯಲ್ಲಿ ಹಣ ಇರಲಿಲ್ಲ.
ಸಾವರ್ಕರನ್ನು ರಕ್ಷಿಸಲು ಯೋಜನೆ ಸಿದ್ಧಪಡಿಸಿದ್ದ ವಿ.ವಿ.ಎಸ್. ಅಯ್ಯರ್‌ಗೆ ವೀರೇಂದ್ರನಾಥ್ ಚಟ್ಟೋಪಾಧ್ಯಾಯ ಮತ್ತು ಮೇಡಂ ಕಾಮಾರನ್ನು ಕರೆದುಕೊಂಡು ವಾಹನದಲ್ಲಿ ಅಲ್ಲಿಗೆ ಬರುವುದು ತಡವಾಗುತ್ತದೆ. ರೈಲ್ವೇ ಕ್ರಾಸಿಂಗಿನಲ್ಲಿ ಸಿಲುಕಿದ್ದರಿಂದ ಅವರು ತಲುಪುವುದು ತಡವಾಯಿತು ಎಂದು ಹೇಳಲಾಗುತ್ತದೆ. ಹಾಗಲ್ಲ, ದಾರಿ ಮಧ್ಯೆ ಚಾ ಕುಡಿಯಲು ನಿಲ್ಲಿಸಿದ್ದರಿಂದಲೇ ಅವರು ತಡವಾಗಿ ತಲುಪಿದರು ಎಂದೂ ವಾದವಿದೆ. ಏನೇ ಆದರೂ ತನ್ನ ಸಹಚರರು ಕಾಣಿಸದಿದ್ದ ಕಾರಣ ಸಾವರ್ಕರ್ ಅಲ್ಲಿದ್ದ ಬಂದರು ಪೊಲೀಸಿನ ಎದುರು ಓಡಿ ಬಂದು ನಿಲ್ಲುತ್ತಾರೆ. ಬ್ರಿಗೇಡಿಯರ್ ಪೆಸ್ಕ್ಯೂ ಎಂಬ ಆ ಅಧಿಕಾರಿಯ ಮುಂದೆ ನಿಂತು ತನ್ನನ್ನು ಅರೆಸ್ಟ್ ಮಾಡಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸುವಂತೆ ಸಾವರ್ಕರ್ ಕೇಳಿಕೊಳ್ಳುತ್ತಾರೆ. ಫ್ರಾನ್ಸ್ ಮತ್ತು ಇಂಗ್ಲೆಂಡ್ ನಡುವೆ ಖೈದಿಗಳನ್ನು ಹಸ್ತಾಂತರಿಸುವ ಒಪ್ಪಂದ ಇಲ್ಲದಿದ್ದ ಕಾರಣ ಫ್ರಾನ್ಸಿನ ಕಸ್ಟಡಿಯಲ್ಲಿ ತಾನಿದ್ದರೆ ಜಾಕ್ಸನ್ ಕೊಲೆ ಪ್ರಕರಣದಿಂದ ಪಾರಾಗಬಹುದು ಎಂಬುದು ಸಾವರ್ಕರ್ ಯೋಚನೆಯಾಗಿತ್ತು. ಆದರೆ ಪೆಸ್ಕ್ಯೂಗೆ ಇಂಗ್ಲೀಷ್ ಭಾಷೆಯ ಒಂದಕ್ಷರವೂ ಅರ್ಥವಾಗದ ಕಾರಣ ಸಾವರ್ಕರ್ ಹೇಳುತ್ತಿರುವುದು ಅರ್ಥವೇ ಆಗಲಿಲ್ಲ. ಹಿಂದೆಯೇ ಓಡಿ ಬಂದ ಹೆಡ್‌ಕಾನ್ಸ್‌ಟೇಬಲ್‌ಗಳ ಕೈಗೆ ಪೆಸ್ಕ್ಯೂ ಸಾವರ್ಕರನ್ನು ಒಪ್ಪಿಸುತ್ತಾನೆ. ಹೀಗೆ, ಬಚಾವಾಗುವ ಪ್ರಯತ್ನದಲ್ಲಿ ಸೋತು ಸಾವರ್ಕರ್ ಪುನಹ ಎಸ್.ಎಸ್. ಮೋರಿಯಾಗೆ ಮರಳುತ್ತಾರೆ.