ವಿ.ಆರ್.ಕಾರ್ಪೆಂಟರ್
ಈ ಕಾಂಗ್ರೆಸ್ ಸರ್ಕಾರಕ್ಕಿರುವ ದಲಿತರ ಮೇಲಿನ ನಿರ್ಲಕ್ಷ್ಯವೋ, ತಾತ್ಸಾರವೋ, ಕೋಪವೋ ಏನೋ… ಒಟ್ಟಿನಲ್ಲಿ ದಾನಮ್ಮ ಹತ್ಯಾಚಾರವನ್ನು ಪ್ರಶ್ನಿಸಿ, ಪ್ರತಿಭಟಿಸಿದ ನಮ್ಮ (ಭಾಸ್ಕರ್ ಪ್ರಸಾದ್ ಮತ್ತು ನಾನು) ಮೇಲೆ ಕೇಸ್ ಜಡಿದು, ಒಂದು ದಿನ ಬಿಜಾಪುರದ ಜೈಲಿಗೆ ಕಳಿಸಿದರು.
ನಾವು ಒಳಗೆ ಹೋದ ಅರ್ಧ ಗಂಟೆಯಲ್ಲಿ ಯಾವ ಕಾರಣಕ್ಕೆ ಜೈಲಿಗೆ ಹೋದೆವು ಎಂದು ಅಲ್ಲಿನ ವಿಚಾರಣಾಧೀನ ಕೈದಿಗಳಿಗೆ ಮತ್ತು ಸಜಾ ಆದ ಕೈದಿಗಳಿಗೆ ಅಲ್ಲಿನ ಟಿವಿ ಸುದ್ದಿಗಳ ಮೂಲಕ ತಿಳಿಯಿತು. ತುಂಬಾ ಜನ ನಮ್ಮನ್ನು ನೋಡಲು ಬಂದರು. ಕೈ ಕುಲುಕಿದರು, ಅಪ್ಪಿಕೊಂಡರು, ಶಹಬಾಶ್‌ಗಿರಿ ಕೊಟ್ಟರು. ಅದೇ ಮೊದಲಬಾರಿಗೆ ಜೈಲು ನೋಡಿದ್ದ ನನಗೆ ಅಲ್ಲಿನ ಮನುಷ್ಯರ ಪ್ರೀತಿ ಕಂಡು ಭಾವುಕನಾದೆ.
ಒಂದೇ ಒಂದು ಪೈಸೆ ನಮ್ಮಲ್ಲಿ ಇರಲಿಲ್ಲ. ಆದರೂ ನಮಗೆ ಒಳ್ಳೆಯ ಸತ್ಕಾರ ಕೊಟ್ಟರು. ಅಲ್ಲಿ ಕ್ಯಾಂಟೀನ್‌ನಲ್ಲಿ ಒಬ್ಬ ಸಜಾ ಕೈದಿ ಇಡ್ಲಿ ಕೊಡಿದರು, ಮತ್ತೊಬ್ಬರು ಸಿಗರೇಟ್ ಕೊಡಿಸಿದರು.
ಪೊಲೀಸರು ನಮ್ಮನ್ನು ಅರೆಸ್ಟ್ ಮಾಡಿದ್ದು ಮಧ್ಯರಾತ್ರಿ ಹನ್ನೆರಡು ಗಂಟೆಗೆ. ಎಫ್‌ಐಆರ್ ಮಾಡಿ, ಹೆಲ್ತ್ ಚೆಕಪ್ ಅಂತ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಬೆಳಗಿನ ಜಾವ ಎರಡು ಗಂಟೆ, ಅಲ್ಲಿಂದ ತಹಶಿಲ್ದಾರರ ಆಫೀಸಿಗೆ ಹೋಗಿ ಕಾದೆವು. ಅವರು ಬಂದಿದ್ದು ಬೆಳಗಿನ ಜಾವ ಐದಕ್ಕೆ. ಅಲ್ಲಿಂದ ಜೈಲಿಗೆ ಬಿಟ್ಟದ್ದು 6ಕ್ಕೆ,
ಸೋ ನಿದ್ದೆ ಇರದಿದ್ದ ನಮ್ಮನ್ನು, 11 ಗಂಟೆಗೆ ಪ್ರತ್ಯೇಕ ಸೆಲ್‌ಗೆ ಹಾಕಿದರು. ಇಬ್ಬರೂ ಇನ್ನೇನು ಮಲಗಬೇಕು ಅನ್ನುವಷ್ಟರಲ್ಲಿ, ದೇವನಹಳ್ಳಿಯಿಂದ ಬಿಜಾಪುರಕ್ಕೆ ಟ್ರಾನ್ಫಫರ್ ಆಗಿ ಬಂದಿದ್ದ ಮೂರ್ನಾಲ್ಕು ಜನ ಸಜಾ ಕೈದಿಗಳು ಒಂದು ಬಕೆಟ್‌ನಲ್ಲಿ ಅನ್ನ, ಸಾರು, ಮೊಟ್ಟೆ ತಂದು ಕೊಟ್ಟು, ಊಟ ಮಾಡಲು ಪ್ರೀತಿಯಿಂದ ಒತ್ತಾಯಿಸಿದರು. ಜತೆಗೆ ಅರ್ಧ ಪಾಕೆಟ್ ಸಿಗರೇಟು ಕೊಟ್ಟು, ಭಾಸ್ಕರ್ ಅವರಿಗೆ ‘ಅಣ್ಣಾ, ಇವತ್ತೇ ನಿಮ್ ರೂಮಿಗೆ ಟಿವಿ ಹಾಕಿಸುತ್ತೇವೆ, ಚಿಕನ್ ಮಟನ್ ಏನು ಬೇಕು ಹೇಳಿ, ರೆಡಿ ಮಾಡಿಸುತ್ತೇವೆ.” ಎಂದು ಹೇಳಿ ಹೋದರು.
ಇದನ್ನೆಲ್ಲಾ ಯಾಕೆ ಹೇಳಿದೆನೆಂದರೆ, ಜೈಲಲ್ಲಿ ಸಿಗರೇಟು, ಮೊಟ್ಟೆ ಮಾಂಸ ಕಾಮನ್. ಈ ಟಿವಿಗಳು ಭಜನೆ ಮಾಡಿದಂತೆ ಅದೆಲ್ಲಾ ಅಲ್ಲಿ ಐಷಾರಾಮಿ ಜೀವನ ಅಲ್ಲ, ಅದು ಜೈಲಿನ ಮ್ಯಾನುಅಲ್‌ನಲ್ಲೇ ಇದನ್ನೆಲ್ಲಾ ಕೊಡಬಹುದು ಅಂತ ಇದೆ. ಹೊರಗಡೆ ಇದ್ದಂತೆ ಅಲ್ಲೂ ಕ್ಯಾಂಟೀನ್ ಇರುತ್ತದೆ. ಕ್ಯಾಂಟೀನಲ್ಲಿ ಆಲ್ಕೋಹಾಲ್, ಗಾಂಜಾ ಮುಂತಾದವುಗಳು ಬಿಟ್ಟು, ಮಿಕ್ಕೆಲ್ಲಾ ಅಗತ್ಯ ವಸ್ತುಗಳು ಸಿಗುತ್ತವೆ. ಸ್ವಲ್ಪ ದುಬಾರಿ ಅಷ್ಟೇ. ಸೋ ದರ್ಶನ್ ಇಲ್ಲಿ ಸಿಗರೇಟು ಸೇದುತ್ತಿರುವುದು ಅಪರಾಧವೇ ಅಲ್ಲ. ಟಿವಿಗಳ ಸುಳ್ಳುಗಳನ್ನು ನಂಬಬೇಡಿ.