ಬೆಂಗಳೂರು: ಪೊಲೀಸ್ ಪೇದೆಗಳ ವಯೋಮಿತಿ ಏರಿಕೆ ವಿಚಾರ ಸದ್ಯಕ್ಕೆ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಏಳನೇ ದಿನದ ವಿಧಾನಸಭಾ ಅಧಿವೇಶನದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪೊಲೀಸ್ ಪೇದೆ ಹುದ್ದೆಗಳ ಕೊರೆತೆ ವಿಚಾರ ಪ್ರಸ್ತಾಪ ಮಾಡಿದ್ದು, ʼಎರಡು ವರ್ಷ ಕೋವಿಡ್ ಕಾರಣದಿಂದಾಗಿ ಪೊಲೀಸ್ ಪೇದೆಗಳ ನೇಮಕಾತಿ ವಿಳಂಬವಾಗಿದೆ. ಈ ಹಿನ್ನಲೆ ವಯೋಮಿತಿ ಏರಿಕೆಗೆ ಅಭ್ಯರ್ಥಿಗಳು ಸಾಕಷ್ಟು ಮನವಿ ಮಾಡಿದ್ದಾರೆ. ಈ ಬಗ್ಗೆ ಗೃಹ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಆರಗ ಜ್ಞಾನೇಂದ್ರ ಅವರು, ಕೋವಿಡ್ ಅವಧಿಯಲ್ಲಿ ಪೊಲೀಸ್ ನೇಮಕಾತಿಯಲ್ಲಿ ಆಗಿಲ್ಲ ಎನ್ನುವ ಮಾಹಿತಿ ತಪ್ಪು. ವಯೋಮಿತಿ ನಿಗದಿಗೆ ಸಂಬಂಧಿಸಿದಂತೆ ಸಾಮಾನ್ಯ ವರ್ಗಕ್ಕೆ 18 ರಿಂದ 25 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ವಯೋಮಿತಿ ಹೆಚ್ಚಳ ಮಾಡಬೇಕೆಂಬುವುದು ನನಗೂ ಆಸೆ ಇದೆ. ಆದರೆ ಪೊಲೀಸ್ ಇಲಾಖೆಗೆ ದೈಹಿಕವಾಗಿ ಸಶಕ್ತ ಇರುವವರನ್ನು ನೇಮಕ ಮಾಡಿಕೊಳ್ಳಬೇಕು. ಹೀಗಾಗಿ ಸದ್ಯಕ್ಕೆ ವಯೋಮಿತಿ ಹೆಚ್ಚಿಸುವ ಯೋಚನೆ ಸರ್ಕಾರಕ್ಕೆ ಇಲ್ಲಾ ಎಂದು ಹೇಳಿದರು.