ರಾಮನ ಹುಂಡಿ ಮಾತ್ರವಲ್ಲ, ಕಾಶಿ-ಮಥುರಾದಲ್ಲಿಯೂ ಲೂಟಿ ಮಾಡ್ತಾರೆ – ಉದ್ಧವ್ ಠಾಕ್ರೆ

ಉತ್ತರ ಪ್ರದೇಶ : ಅಯೋಧ್ಯೆ ರಾಮಮಂದಿರದ (Ram mandir) ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ವಿರುದ್ಧ ಶಿವಸೇನಾ (Shiva sena) ಯುಬಿಟಿ ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಬೈನ ದಾದರ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಮರಕ್ಷಾ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ನಡೆದಿರುವುದು ಕೇವಲ ಆರಂಭವಷ್ಟೇ ಆಗಿದ್ದು, ಮುಂದಿನ ದಿನಗಳಲ್ಲಿ ಕಾಶಿ ಮತ್ತು ಮಥುರಾದಲ್ಲಿಯೂ ಇಂತಹದ್ದೇ ಲೂಟಿ ನಡೆಯಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಹಿಂದೂಗಳ ಭಾವನೆಗಳೊಂದಿಗೆ ಆಟವಾಡುತ್ತಿರುವವರ ವಿರುದ್ಧ ಇಡೀ ಹಿಂದೂ ಸಮಾಜ ಒಗ್ಗಟ್ಟಾಗಿ ಹೋರಾಡಬೇಕಾದ ಸಮಯ ಬಂದಿದೆ ಎಂದು ಅವರು ಕರೆ ನೀಡಿದ್ದಾರೆ.

ತಮ್ಮ ತಂದೆ ಬಾಳಾಸಾಹೇಬ್ ಠಾಕ್ರೆ ಅವರು ಹಿಂದೂಗಳ ರಕ್ಷಣೆಗೆ ಸದಾ ಬೆಂಬಲವಾಗಿ ನಿಂತಿದ್ದರು ಎಂಬುದನ್ನು ಸ್ಮರಿಸಿದ ಉದ್ಧವ್, ಇಂದು ಅದೇ ಹಿಂದೂಗಳನ್ನು ಲೂಟಿ ಮಾಡುವವರು ಅಧಿಕಾರ ನಡೆಸುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಛತ್ರಪತಿ ಶಿವಾಜಿ ಮಹಾರಾಜರಿಗೆ ಹೋಲಿಸುವವರನ್ನು ತರಾಟೆಗೆ ತೆಗೆದುಕೊಂಡ ಅವರು, ತಮಗೆ ಬಿಜೆಪಿಯಿಂದ ಮುಕ್ತವಾದ ನೈಜ ಹಿಂದುತ್ವದ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ರಾಮಮಂದಿರದ ಹೆಸರಿನಲ್ಲಿ ಕಳ್ಳತನ ಮಾಡಿದವರಿಗೆ ಭಗವಾನ್ ರಾಮನ ಹೆಸರನ್ನು ಬಳಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಅವರು ಇದೇ ವೇಳೆ ಗುಡುಗಿದ್ದಾರೆ. ರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣ ಸದ್ಯ ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಉತ್ತರ ಪ್ರದೇಶ ಸರ್ಕಾರವು ರಚಿಸಿರುವ ವಿಶೇಷ ತನಿಖಾ ದಳವು ಈ ಹಗರಣದ ತನಿಖೆ ನಡೆಸುತ್ತಿದೆ. ತನಿಖಾ ಸಂಸ್ಥೆಯು ಈಗಾಗಲೇ ಎಂಟು ಮಂದಿ ಆರೋಪಿಗಳನ್ನು ಬಂಧಿಸಿ, ಅವರಿಂದ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ. ಈ ಘಟನೆಯನ್ನು ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಉದ್ಧವ್ ಠಾಕ್ರೆ ಮತ್ತು ಅವರ ಬೆಂಬಲಿಗರು ಹನುಮಾನ್ ಚಾಲೀಸಾ ಹಾಗೂ ಹನುಮಾನ್ ಸ್ತೋತ್ರಗಳನ್ನು ಪಠಿಸುವ ಮೂಲಕ ಆಡಳಿತಾರೂಢ ಪಕ್ಷದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು