Home ದೇಶ ಕವಿಮನೆಯಲ್ಲಿ ಕಳ್ಳತನ: ಪಶ್ಚತ್ತಾಪ ಪಟ್ಟು ವಸ್ತುಗಳನ್ನು ಮರಳಿಸಿದ ಕಳ್ಳ!

ಕವಿಮನೆಯಲ್ಲಿ ಕಳ್ಳತನ: ಪಶ್ಚತ್ತಾಪ ಪಟ್ಟು ವಸ್ತುಗಳನ್ನು ಮರಳಿಸಿದ ಕಳ್ಳ!

0

ಕಳ್ಳನೊಬ್ಬ ತಾನು ಕದ್ದಿದ್ದು ಖ್ಯಾತ ಕವಿಯೊಬ್ಬರ ಮನೆಯಲ್ಲಿ ಎನ್ನುವುದು ಅರಿವಿಗೆ ಬಂದು ವಸ್ತುಗಳನ್ನು ಮರಳಿಸಿದ ಘಟನೆ ನೆರೆಯ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ರಾಯಗಢ ಬಳಿ ನಡೆದ ಈ ಘಟನೆಯಲ್ಲಿ ಕಳ್ಳ ಒಂದು ಕ್ಷಮೆಯಾಚನೆ ಪತ್ರವನ್ನೂ ಬರೆದಿಟ್ಟು ಹೋಗಿದ್ದಾನೆ.

ವಿವರಗಳನ್ನು ನೋಡುವುದಾದರೆ… ಕಳ್ಳನೊಬ್ಬ ನಾರಾಯಣ ಸುರ್ವೆ ಎನ್ನುವವರ ಮನೆಗೆ ನುಗ್ಗಿ ಅವರ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು, ಎಲ್‌ಇಡಿ ಇತ್ಯಾದಿ ವಸ್ತುಗಳನ್ನು ಕದ್ದು ಸಾಗಿಸಿದ್ದ.

ನಾರಾಯಣ ಸುರ್ವೆಯವರು ಮರಾಠಿಯ ಖ್ಯಾತ ಕವಿ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ವಿಖ್ಯಾತರು. ಅವರು 2010ರ ಆಗಸ್ಟ್‌ ತಿಂಗಳ 10ನೇ ತಾರೀಖಿನಂದು ತೀರಿಕೊಂಡರು. ಮುಂಬಯಿಯಲ್ಲಿ ಜನಿಸಿದ ಅವರು ಕಾರ್ಮಿಕ ಜನರ ಬವಣೆಗಳ ಕುರಿತು ಬಹಳಷ್ಟು ಕವಿತೆಗಳನ್ನು ಬರೆದಿದ್ದರು. ಅವರ ಕವಿತೆಗಳಲ್ಲಿ ನಗರ ಪ್ರದೇಶದ ಕಾರ್ಮಿಕರ ಹೋರಾಟದ ಕುರಿತು ವಿವರಗಳಿದ್ದವು ಎಂದು ಇಂಗ್ಲಿಷ್‌ ಪತ್ರಿಕೆ ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

ಈ ಸುರ್ವೆಯವರ ಮನೆಯಲ್ಲಿ ಪ್ರಸ್ತುತ ಸುರ್ವೆಯವರ ಮಗಳಾದ ಸುಜಾತಾ ಮತ್ತು ಅವರ ಪತಿ ಗಣೇಶ ಘರೆ ವಾಸವಿದ್ದರು. ದಂಪತಿಗಳು ತಮ್ಮ ಮಗನ ಮನೆಗೆಂದು ಹೋಗಿದ್ದ ಕಾರಣ ಅವರ ಮನೆಗೆ ಕಳೆದ ಹತ್ತು ದಿನಗಳಿಂದ ಬೀಗ ಹಾಕಲಾಗಿತ್ತು.

ಸನ್ನಿವೇಶದ ಲಾಭ ಪಡೆದ ಕಳ್ಳನು ಮನೆಗೆ ನುಗ್ಗಿ ಎಲ್ ಇಡಿ ಟಿವಿ ಸೆಟ್ ಸೇರಿದಂತೆ ಕೆಲ ವಸ್ತುಗಳನ್ನು ಕದ್ದೊಯ್ದಿದ್ದಾನೆ. ಮರುದಿನ ಇನ್ನಷ್ಟು ವಸ್ತುಗಳನ್ನು ಕದ್ದೊಯ್ಯಲೆಂದು ಬಂದ ಕಳ್ಳನಿಗೆ ಕೋಣೆಯಲ್ಲಿ ಸುರ್ವೆಯವರ ಫೋಟೋ ಮತ್ತು ಸ್ಮರಣಿಕೆಗಳು ಕಾಣಿಸಿವೆ.

ಬಹುಶಃ ಕಳ್ಳ ಒಳ್ಳೆಯ ಓದುಗನಾಗಿದ್ದ ಎನ್ನಿಸುತ್ತದೆ. ಅವರ ಫೋಟೋ ನೋಡಿದ ಕೂಡಲೇ ಕಳ್ಳನಲ್ಲಿ ಪಶ್ಚತ್ತಾಪ ಉಂಟಾಗಿದೆ. ನಂತರ ಕಳ್ಳ ತಾನು ಕದ್ದಿದ್ದ ಎಲ್ಲಾ ವಸ್ತುಗಳನ್ನು ತಂದಿಡುವುದರ ಜೊತೆಗೆ ಇಂತಹ ಮಹಾನ್‌ ವ್ಯಕ್ತಿಯ ಮನೆಯಲ್ಲಿ ಕಳ್ಳತನ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿ ಪತ್ರ ಬರೆದು ಅದನ್ನು ಗೋಡೆಯ ಮೇಲೆ ಅಂಟಿಸಿದ್ದ.

ಸುಜಾತಾ ದಂಪತಿಗಳು ಮನೆಗೆ ಮರಳಿದಾಗ ಈ ವಿಷಯ ಬೆಳಕಿಗೆ ಬಂದಿದೆ. ನಂತರ ಅವರು ಹತ್ತಿರದ ಠಾಣೆಗೆ ವಿಷಯವನ್ನು ತಿಳಿಸಿದ್ದಾರೆ ಎಂದು ನೇರಲ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶಿವಾಜಿ ಧಾವ್ಲೆ ತಿಳಿಸಿದ್ದಾರೆ.

ಟಿವಿ ಸೆಟ್‌ ಹಾಗೂ ಇತರ ವಸ್ತುಗಳ ಮೇಲಿನ ಬೆರಳಚ್ಚುಗಳನ್ನು ತೆಗೆದುಕೊಂಡು ಮುಂದಿನ ತನಿಖೆಯಲ್ಲಿ ತೊಡಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸುರ್ವೆ ಮರಾಠಿಯ ಖ್ಯಾತ ಕವಿಯಾಗಿದ್ದರು. ಅನಾಥರಾಗಿದ್ದ ಅವರು ಮುಂಬಯಿಯ ಬೀದಿಗಳಲ್ಲಿ ಬೆಳೆದು ದೊಡ್ಡವರಾದರು. ಹೊಟ್ಟೆಪಾಡಿಗಾಗಿ ಮನೆಗೆಲ, ಹೋಟೆಲ್ಲಿನಲ್ಲಿ ಪಾತ್ರ ತೊಳೆಯುವುದು, ಮಗು ನೋಡಿಕೊಳ್ಳುವುದು, ಸಾಕು ನಾಯಿ ನೋಡಿಕೊಳ್ಳುವುದು, ಮನೆಗಳಿಗೆ ಹಾಲು ಹಾಕುವಂತಹ ಕೆಲಸಗಳನ್ನು ಮಾಡಿದ್ದರು. ನಂತರ ಕೂಲಿ ಕೆಲಸ ಮತ್ತು ಗಿರಣಿಗಳಲ್ಲಿಯೂ ದುಡಿದ್ದರು.

ಮರಾಠಿ ಸಾಹಿತ್ಯದಲ್ಲಿ ಸ್ಥಾಪಿತವಾದ ಸಾಹಿತ್ಯಿಕ ಮಾನದಂಡಗಳನ್ನು ಪ್ರಶ್ನಿಸಿದ ಸುರ್ವೆ ತಮ್ಮ ಕಾವ್ಯದ ಮೂಲಕ ಶ್ರಮದ ಬದುಕಿಗೆ ಘನತೆಯನ್ನು ತಂದು ಕೊಟ್ಟಿದ್ದರು.

You cannot copy content of this page

Exit mobile version