ಕವಿ, ವಿಮರ್ಶಕ ಜಿ.ಎಸ್.ಸಿದ್ದಲಿಂಗಯ್ಯ(94) ಅವರು ವಯೋಸಹಜ ಅನಾರೋಗ್ಯದಿಂದಾಗಿ ಮಂಗಳವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಚಾಮರಾಜಪೇಟೆಯ ಲಿಂಗಾಯತ ರುದ್ರಭೂಮಿಯಲ್ಲಿ ಇಂದು(ಬುಧವಾರ) ಮಧ್ಯಾಹ್ನ 3 ನಂತರ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ತಮ್ಮ ಜೀವಿತಾವಧಿಯಲ್ಲಿ ಸಾಹಿತಿ, ಪ್ರಾಂಶುಪಾಲ, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರೂ ಆಗಿದ್ದ ನೇರ ನಿಷ್ಠುರ ವ್ಯಕ್ತಿತ್ವದ ಪ್ರೊ. ಜಿ.ಎಸ್. ಸಿದ್ದಲಿಂಗಯ್ಯ ತುಮಕೂರು ಜಿಲ್ಲೆಯವರು. ಅವರು ಜನಿಸಿದ್ದು 1931ರಲ್ಲಿ. ಕಾಲೇಜು ಶಿಕ್ಷಣದವರೆಗಿನ ವಿದ್ಯಭ್ಯಾಸವನ್ನೆಲ್ಲ ಊರಿನಲ್ಲಿ ಪೂರೈಸಿದರು. ನಂತರ ಬಿಎ(ಆನರ್ಸ್), ಎಂ.ಎ ಕನ್ನಡದಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದರು.
ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಉದ್ಯೋಗ ಆರಂಭಿಸಿದರು. ಮುಂದೆ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಸಾಹಿತಿ, ಕವಿ ಹಾಗೂ ವಿಮರ್ಶಕರಾಗಿದ್ದ ಸಿದ್ದಲಿಂಗಯ್ಯನವರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಸಾಹಿತ್ಯ ಅಕಾಡೆಮಿಯ ವಿಶೇಷ ಗೌರವ, ರಾಜ್ಯೋತ್ಸವ ಪ್ರಶಸ್ತಿ, ಬಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.
