Friday, April 26, 2024

ಸತ್ಯ | ನ್ಯಾಯ |ಧರ್ಮ

ಶೇ. 100 ಫಲಿತಾಂಶ ಪಡೆಯುವ ವಿದ್ಯಾರ್ಥಿಗಳ ದತ್ತು ಪಡೆದು ಉನ್ನತ ಶಿಕ್ಷಣ ವೆಚ್ಚ ಭರಿಸುವ ಚಿಂತನೆ – ಜಮೀರ್ ಅಹಮದ್ ಖಾನ್

ಬೆಂಗಳೂರು : ರಾಜ್ಯದಲ್ಲಿ ಮೌಲಾನಾ ಅಜಾದ್ ಹಾಗೂ ವಸತಿ ಶಾಲೆಗಳಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆಯುವ ವಿದ್ಯಾರ್ಥಿಗಳ ದತ್ತು ಪಡೆದು ಉನ್ನತ ಶಿಕ್ಷಣದ ವೆಚ್ಚ ಭರಿಸುವ ಚಿಂತನೆ ನಡೆಸಲಾಗಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಹಾಸನ ಜಿಲ್ಲೆಯ, ಅರಸೀಕೆರೆ ಪಟ್ಟಣದಲ್ಲಿ 1.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮೌಲಾನಾ ಅಜಾದ್ ಮಾದರಿ ಶಾಲೆ ಆಂಗ್ಲ ಮಾಧ್ಯಮ ) ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಬಡವರ ಮಕ್ಕಳು ಬಡತನ ಹಾಗೂ ಆರ್ಥಿಕ ಸಂಕಷ್ಟ ಕಾರಣ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಯೋಚನೆ ಮಾಡಲಾಗಿದೆ ಎಂದು ಹೇಳಿದರು.


ನಾನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹೊಣೆಗಾರಿಕೆ ತೆಗೆದುಕೊಂಡ ನಂತರ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದೇನೆ. ಮುಸ್ಲಿಂ ಸಮುದಾಯದ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡಬೇಕು ಎಂದು ತಿಳಿಸಿದರು.
ಮುಸ್ಲಿಂ ಸಮುದಾಯದ ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಗಮನ ಕೊಡಿ. ಶಿಕ್ಷಣವೇ ದೊಡ್ಡ ಶಕ್ತಿ, ಅದಕ್ಕಿರುವ ಬೆಲೆ ಯಾವುದಕ್ಕೂ ಇಲ್ಲ ಎಂದು ಮನವಿ ಮಾಡಿದ ಅವರು, ಬಿಜೆಪಿ ಸರ್ಕಾರ ಸ್ಥಗಿತ ಗೊಳಿಸಿದ್ದ ವಿದ್ಯಾರ್ಥಿ ವೇತನ ನಮ್ಮ ಸರ್ಕಾರ ಬಂದ ನಂತರ ದೇಶದಲ್ಲಿ ಮೊದಲು ಪುನರ್ ಆರಂಭಿಸಿದೆ ಎಂದು ಹೇಳಿದರು.
ವೈದ್ಯಕೀಯ, ಇಂಜಿನಿಯರ್ ಸೇರಿ ಉನ್ನತ ಶಿಕ್ಷಣ ಪಡೆಯುವ, ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಹಾಗೂ ಸಾಲದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಮುಸ್ಲಿಂ ಸಮುದಾಯಕ್ಕೆ ಜಮೀರ್ ನಾಯಕ
ಶಾಸಕ ಶಿವಲಿಂಗೇಗೌಡ ಮಾತನಾಡಿ, ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಬಂದ ನಂತರ ಜಾರಿಗೆ ತಂದಿರುವ ಐದು ಭಾಗ್ಯ ಗಳಿಂದ ಕೆಲವರಿಗೆ ಹೊಟ್ಟೆ ಉರಿ ಪ್ರಾರಂಭ ಆಗಿದೆ. ವರ್ಷಕ್ಕೆ 62 ಸಾವಿರ ಕೋಟಿ ರೂ. ಮೊತ್ತದ ಯೋಜನೆ ಆರಂಬಿಸಲು ಗುಂಡಿಗೆ ಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ನಾಯಕ ಎಂದರೆ ಅದು ಜಮೀರ್ ಅಹಮದ್ ಖಾನ್. ನನ್ನನ್ನು ಮಂತ್ರಿ ಮಾಡಲು ದೆಹಲಿಯಲ್ಲಿ ಹಗಲು ರಾತ್ರಿ ಕಷ್ಟ ಪಟ್ಟರು ಎಂದು ಸ್ಮರಿಸಿದರು.


ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಜಿಲಾನಿ ಮೊಕಾಶಿ,
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪೂರ್ಣಿಮಾ, ನಗರಸಭೆ ಅಧ್ಯಕ್ಷ ಗಿರೀಶ್, ಮಾಜಿ ಅಧ್ಯಕ್ಷ ಸಮೀವುಲ್ಲಾ ಉಪಸ್ಥಿತರಿದ್ದರು.

ಶಕ್ತಿ ತೋರಿಸಿ

ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಒಟ್ಟಾಗಿ ನಿಮ್ಮ ಶಕ್ತಿ ತೋರಿಸಿ. ನಿಮ್ಮ ಮತ ಬೇಕಿಲ್ಲ ಎಂದು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಹೀಗಾಗಿ ನಿಮ್ಮ ಹಿತರಕ್ಷಣೆ ಮಾಡುವ ಪಕ್ಷ ಕಾಂಗ್ರೆಸ್ ಒಂದೇ. ಮುಂದಿನ ಲೋಕಸಭಾ ಚುನಾವಣೆ ದೇಶದ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದು ಎಂದು ಹೇಳಿದರು.

ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಜಮೀರ್ ಅಹಮದ್ ಖಾನ್, ಮಾಜಿ ಪ್ರಧಾನಿ ದೇವೇಗೌಡರಿಗೆ ಬಿಜೆಪಿ ಜತೆ ಮೈತ್ರಿ ಇಷ್ಟವಿಲ್ಲ, ಬಲವಂತ ಮಾಡಿ ಒಪ್ಪಿಸಲಾಗಿದೆ. ದೇವೇಗೌಡರು ಈಗಲೂ ಸೆಕ್ಯುಲರ್, ಕುಮಾರಸ್ವಾಮಿ ಸ್ವಾರ್ಥಕ್ಕೆ ಪಕ್ಷ ಬಲಿ ಕೊಟ್ಟಿದ್ದಾರೆ, ಮೈತ್ರಿ ಮಾತುಕತೆಗೆ ರಾಜ್ಯಾಧ್ಯಕ್ಷ ಇಬ್ರಾಹಿಂ ಕರೆದು ಕೊಂಡು ಹೋಗಿಲ್ಲ, ಇರುವ ಒಬ್ಬ ಸಂಸದ ಪ್ರಜ್ವಲ್ ಅವರೂ ಇರಲಿಲ್ಲ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು