Home ಬ್ರೇಕಿಂಗ್ ಸುದ್ದಿ ಮೀಡಿಯಾ ಸ್ವಾತಂತ್ರ್ಯ ಹೋರಾಟದ ಮಹತ್ವ ಗೊತ್ತಿಲ್ಲದವರು ನೆಹರೂ ಅವರನ್ನು ಟೀಕಿಸುತ್ತಾರೆ: ಸಿ.ಎಂ.ಸಿದ್ದರಾಮಯ್ಯ

ಸ್ವಾತಂತ್ರ್ಯ ಹೋರಾಟದ ಮಹತ್ವ ಗೊತ್ತಿಲ್ಲದವರು ನೆಹರೂ ಅವರನ್ನು ಟೀಕಿಸುತ್ತಾರೆ: ಸಿ.ಎಂ.ಸಿದ್ದರಾಮಯ್ಯ

0

ನಾನೂ ಸರ್ಕಾರಿ ಶಾಲೆಯಲ್ಲಿ ಓದಿಯೇ ಸಿಎಂ ಆಗಿದ್ದೀನಿ
ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿ.ಎಂ.ಸಿದ್ದರಾಮಯ್ಯ

ದೇಶದ ಭವಿಷ್ಯ ರೂಪಿತ ಆಗುವುದು ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳಿಂದ. ಆದ್ದರಿಂದ ಮಕ್ಕಳು ಪ್ರಾಥಮಿಕ‌ ಶಿಕ್ಷಣದಿಂದಲೇ ಮೌಡ್ಯ, ಕಂದಾಚಾರದಿಂದ ದೂರ ಉಳಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ  ಪಂಡಿತ್ ಜವಾಹರಲಾಲ್ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ “ರಾಜ್ಯ ಮಟ್ಟದ ಮಕ್ಕಳ ದಿನಾಚರಣೆ ಮತ್ತು ಪೋಷಕರ-ಶಿಕ್ಷಕರ ಮಹಾಸಭೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳೇ ಭಾರತದ ಭವಿಷ್ಯ ಎನ್ನುವ ದೂರದೃಷ್ಟಿ ನೆಹರೂ ಅವರಿಗೆ ಇತ್ತು. ಹೀಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋಧರ್ಮ ರೂಪಿಸುವ ಶಿಕ್ಷಣಕ್ಕೆ ಒತ್ತು ನೀಡಿದ್ದರು. ನಮ್ಮ ಸರ್ಕಾರ ಕೂಡ ಶಿಕ್ಷಣಕ್ಕೆ ಪ್ರಥಮ ಆಧ್ಯತೆ ನೀಡಿದ್ದು, 65000 ಕೋಟಿ ರೂಪಾಯಿಗಳನ್ನು ಶಿಕ್ಷಣಕ್ಕೆ ನಮ್ಮ ಸರ್ಕಾರ ನೀಡುತ್ತಿದೆ ಎಂದರು.

ನೆಹರೂ ತಮ್ಮ ಯೌವ್ವನದ 3200 ಕ್ಕೂ ಹೆಚ್ಚು ದಿನಗಳನ್ನು ಜೈಲಿನಲ್ಲಿ ಕಳೆದ ಹೋರಾಟಗಾರ. ಅತೀ ಶ್ರೀಮಂತ ಕುಟುಂಬದಿಂದ ಬಂದಿದ್ದರೂ ದೇಶದ ಸ್ವಾತಂತ್ರ್ಯಕ್ಕಾಗಿ ಸೆರೆಮನೆ ಸೇರಿದರು. ದೇಶದ ಪ್ರಧಾನಿಯಾಗಿ ಕೃಷಿ, ವಿಜ್ಞಾನ, ನೀರಾವರಿ, ತಂತ್ರಜ್ಞಾನ ಸೇರಿ ದೇಶದ ಸಮಗ್ರ ಅಭಿವೃದ್ಧಿಗೆ ಅಡಿಪಾಯ ಹಾಕಿದರು. IIT, ಏಮ್ಸ್ ಸೇರಿ ಅಣೆಕಟ್ಟು, ಕೈಗಾರಿಕೆಗಳನ್ನೆಲ್ಲಾ ಮಾಡಿದ್ದು ನೆಹರೂ.‌ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ ಬ್ರಿಟಿಷರ ಜೊತೆ ಕೈಜೋಡಿಸಿದ್ದವರು ನೆಹರೂ ಮತ್ತು ಗಾಂಧಿಯನ್ನು ಟೀಕಿಸುತ್ತಾರೆ. ಇದನ್ನು ಮಕ್ಕಳು ಮತ್ತು ಶಿಕ್ಷಕರು ಹಾಗೂ ಪೋಷಕರು ಅರ್ಥ ಮಾಡಿಕೊಳ್ಳಬೇಕು ಎಂದರು.

ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಇರುವ ಮಕ್ಕಳ ಮೇಲೆ ದೇಶದ ಅಭಿವೃದ್ಧಿ ಮತ್ತು ಭವಿಷ್ಯದ ಕನಸನ್ನು ನೆಹರೂ ಕಟ್ಟಿಕೊಂಡಿದ್ದರು. ಪ್ರತಿಭೆ ಯಾರ ಸ್ವತ್ತೂ ಅಲ್ಲ. ಈಗ ಈ ವೇದಿಕೆಯಲ್ಲಿ ಸನ್ಮಾನಿತರಾದ ವಿದ್ಯಾರ್ಥಿಗಳೆಲ್ಲರೂ ಬಡ ಕುಟುಂಬದಿಂದ ಬಂದು ಸರ್ಕಾರಿ ಶಾಲೆಗಳಲ್ಲಿ ಓದಿದವರು. ಆದ್ದರಿಂದ ಈ ವರ್ಷ ಒಟ್ಟು 900 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯುತ್ತಿದೆ. ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರ ಶ್ರಮಿಸುತ್ತಿದೆ. ನಾನೂ ಸರ್ಕಾರಿ ಶಾಲೆಯಲ್ಲಿ ಓದಿಯೇ ಮುಖ್ಯಮಂತ್ರಿ ಆಗಿದ್ದೀನಿ ಎಂದರು.

ಮನುಷ್ಯ ಮನುಷ್ಯನನ್ನು ಜಾತಿ, ಧರ್ಮ, ಭಾಷೆಯ ಮಿತಿ ಇಲ್ಲದೆ ಪ್ರೀತಿಸಬೇಕು. ಜಾತಿ ವ್ಯವಸ್ಥೆಯ ಆಧಾರದ ಮೇಲೆ ತಾರತಮ್ಯ ಮಾಡುವವರನ್ನು ಹತ್ತಿರಕ್ಕೆ ಸೇರಿಸದೆ, ಪ್ರತಿಯೊಬ್ಬರೂ ಸಂವಿಧಾನದ ಆಶಯದಂತೆ ಸಹಿಷ್ಣತೆ ಮತ್ತು ಸಹಭಾಳ್ವೆಯನ್ನು ಪಾಲಿಸುವ ಮೂಲಕ ವೈವಿದ್ಯತೆಯಲ್ಲಿ ಏಕತೆಯನ್ನು ಉಳಿಸಿ ಬೆಳೆಸುವಂತಾಗಬೇಕು ಎಂದು ಕರೆ ನೀಡಿದರು.

ಇಂದಿರಾ ಕಿಟ್- ಶೂ- ಸಮವಸ್ತ್ರ- ಮೊಟ್ಟೆ- ಬಾಳೆಹಣ್ಣು- ಪಠ್ಯ ಪುಸ್ತಕ- ಸ್ಕಾಲರ್ಶಿಪ್ ಸೇರಿ ಬಡವರ ಮಕ್ಕಳಿಗಾಗಿ ಸಕಲ ಸವಲತ್ತು
ಸರ್ಕಾರಿ ಶಾಲೆಗಳ ಮಕ್ಕಳು ಸ್ವಾಭಿಮಾನದಿಂದ ಸಮಾಜಮುಖಿಯಾಗಿ ಬೆಳೆಯಲು ಉತ್ತಮ ಶಿಕ್ಷಣ ಪಡೆಯಲು ನಮ್ಮ ಸರ್ಕಾರ ಸಕಲ ಸವಲತ್ತುಗಳನ್ನೂ ನೀಡುತ್ತಿದೆ. ಇಂದಿರಾ ಕಿಟ್- ಶೂ- ಸಮವಸ್ತ್ರ- ಮೊಟ್ಟೆ- ಬಾಳೆಹಣ್ಣು- ಪಠ್ಯ ಪುಸ್ತಕ-ಸ್ಕಾಲರ್ಶಿಪ್ ಸೇರಿ ಬಡವರ ಮಕ್ಕಳಿಗಾಗಿ ಸರ್ಕಾರ ಒದಗಿಸುತ್ತಿದೆ. ಇದರ ಅನುಕೂಲ ಪಡೆದು ವೈಜ್ಞಾನಿಕ ಮನಸ್ಥಿತಿ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.

You cannot copy content of this page

Exit mobile version